ದ್ವಿತೀಯ ಆಂಗ್ಲೊ-ಮೈಸೂರು ಯುದ್ಧ: 1780-1784.

ಆರಂಭಿಕ  ನೇತೃತ್ವ – ಹೈದರಾಲಿ. ನಂತರ ಟಿಪ್ಪು. ಮುಕ್ತಾಯ: ಮಂಗಳೂರು ಒಪ್ಪಂದ: ಮಾರ್ಚ್‌ 11, 1784.

ಭಾಗಿಗಳು: ಟಿಪ್ಪು ಸುಲ್ತಾನ್‌ ಮತ್ತು ಸ್ಯಾಂತೋನಿ ಸ್ಯಾಡ್ಲೀರ್, ಜಾರ್ಜ್‌ ಲಿಯೊನಾರ್ಡ್‌ ಸ್ಟಾಂಟನ್‌ ಮತ್ತು ಜಾನ್‌ ಹಡಲ್ಸ್ಟನ್.

ಹಿನ್ನೆಲೆ:- 1770 ಜನವರಿಯಲ್ಲಿ ಮರಾಠರು ಹೈದರನ ಮೇಲೆ ದಾಳಿ ಮಾಡಿದಾಗ ವನು ಇಂಗ್ಲಿಷ್ ಪಡೆಗಳನ್ನು ಕಳುಹಿಸುವಂತೆ ಅವರನ್ನು ಕೇಳಿದ. ಇಂಗ್ಲಿಷರು ದನ್ನು ನಿರಾಕರಿಸಿ ಮದ್ರಾಸ್‌ ಒಪ್ಪಂದದ ಷರತ್ತನ್ನು ಉಲ್ಲಂಘಿಸಿದರು. ಆಗ ಮೈಸೂರಿನ ಮೇಲೆ ಮಾಧವರಾವ್ ನಡೆಸಿದ ದಾಳಿ  ತೀವ್ರ ಸ್ವರೂಪದ್ದಾಗಿದ್ದು. ಇದರಿಂದ ಒಪ್ಪಂದದಂತೆ ಸಕಾಲದಲ್ಲಿ ಸಹಾಯಕ್ಕೆ ಬಾರದ ಇಂಗ್ಲಿಷರ ಬಗ್ಗೆ ಹೈದರ್ ಕೋಪೋದ್ರಿಕ್ತನಾದ. 1776ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳ ನಡುವೆ ಯುದ್ಧ ಘೋಷಣೆಯಾಯಿತು. ಇದು ಹೈದರನಿಗೆ ಮದ್ರಾಸ್‌ ಒಪ್ಪಂದ ಮುರಿದಿದ್ದಕ್ಕಾಗಿ ಇಂಗ್ಲಿಷರ ಮೇಲೆ ಸೇಡು ತೀರಿಸಿಕೊಳ್ಳಲು ಸದವಕಾಶ ಕಲ್ಪಿಸಿಕೊಟ್ಟಿತು. ಜೊತೆಗೆ ಎಲ್ಲ ಭಾರತೀಯ ರಾಜರು ಇಂಗ್ಲಿಷರನ್ನು ದ್ವೇಷಿಸುತ್ತಿದ್ದರು. ಮರಾಠರು ತಮ್ಮ ಆಂತರಿಕ ವಿಷಯಗಳಲ್ಲಿ ಇಂಗ್ಲಿಷರು ಕೈಹಾಕುವುದ ರಿಂದ ಅಸಮಾಧಾನ ಗೊಂಡಿದ್ದರೆ, ನಿಜಾಮನು ಗುಂಟೂರನ್ನು ಮದರಾಸು ಸರ್ಕಾರ ಕೇಳುತ್ತಿದ್ದುದರಿಂದ ಕ್ರುದ್ಧನಾಗಿದ್ದ.

ಯುದ್ಧದ ಕಾರಣಗಳು:-  

೧. ಹೈದರ್‌ ಸೈನಿಕ ವಸ್ತುಗಳನ್ನು ಪಡೆಯುತ್ತಿದ್ದ ಫ್ರೆಂಚರ ಮಾಹೆ ಕೋಟೆಯನ್ನು ಇಂಗ್ಲಿಷರು ಮಾರ್ಚ್‌ 19, 1779 ರಲ್ಲಿ ವಶಪಡಿಸಿಕೊಂಡಿದ್ದರು.

2. ಹೈದರನಿಗೆ ಸೇರಿದ್ದ ಗುಂಟೂರಿನ ಪ್ರದೇಶದ ಮೂಲಕ ಅವನ ಅಪ್ಪಣೆ ಇಲ್ಲದೆ ಬ್ರಿಟಿಷರು ತಮ್ಮ ಸೇನೆಯನ್ನು ಸಾಗಿಸಿದ್ದರು.

3. ಅಲ್ಲದೇ ಮಲಬಾರಿನಲ್ಲಿ ಹೈದರನ ವಿರುದ್ಧ ನಾಯರುಗಳನ್ನು ಬ್ರಿಟಿಷರು ಬೆಂಬಲಿಸುತ್ತಿದ್ದರು.

  ಘಟನೆಗಳು 1780ರಲ್ಲಿ ಇಂಗ್ಲಿಷರ ವಿರುದ್ಧ ಭಾರತೀಯ ಮೈತ್ರಿಕೂಟವನ್ನು ರಚಿಸುವಂಥ ವಿಶಿಷ್ಟ ಪರಿಸ್ಥಿತಿ ನಿರ್ಮಿತವಾಗಲು ಕಾರಣವಾದವು. ಮೈತ್ರಿಕೂಟ ರಚನೆಯಲ್ಲಿ ಹೈದರ್ ಮಹತ್ತ್ವದ ಪಾತ್ರವಹಿಸಿದ. ಮಿತ್ರಕೂಟದವರ ಒಪ್ಪಂದದ ಪ್ರಕಾರ ಹೈದರ್ ಮದರಾಸು ಪ್ರೆಸಿಡೆನ್ಸಿಯ ಮೇಲೆ ಬೃಹತ್ ದಾಳಿ ನಡೆಸಿ, ಅಲ್ಲಿಂದ ಇಂಗ್ಲಿಷರನ್ನು ಮೂಲೋತ್ಪಾಟನ ಮಾಡಬೇಕಾಗಿತ್ತು. ನಾನಾ ಫಡ್ನವಿಸ್, ಸಿಂಧ್ಯ, ಗಾಯಕ್ವಾಡ್ ಮತ್ತು ಹೋಳ್ಕರರನ್ನೊಳಗೊಂಡ ಮರಾಠ ಕೂಟದವರು ಮುಂಬಯಿಯನ್ನು ಮುತ್ತಬೇಕಾಗಿತ್ತು; ಮುದಾಜಿ ಭೋಂಸ್ಲೆ ಬಂಗಾಳಕ್ಕೆ ದಾಳಿ ಇಡಬೇಕಾಗಿತ್ತು; ನಿಜಾಮ ಉತ್ತರದ ಸರ್ಕಾರಗಳಿಂದ ಇಂಗ್ಲಿಷರನ್ನು ತೊಡೆದುಹಾಕಬೇಕಿತ್ತು. ಒಂದು ಸಮಾನ ಉದ್ದೇಶಕ್ಕಾಗಿ ಇಷ್ಟೊಂದು ಭಾರತೀಯ ರಾಜರುಗಳು ಒಗ್ಗೂಡಿದ್ದು ಮತ್ತು ಅಷ್ಟು ದೀರ್ಘಕಾಲ ಒಂದಾಗಿ ನಿಂತದ್ದು ಇತಿಹಾಸದಲ್ಲಿ ಅದೇ ಪ್ರಥಮ.

ಯುದ್ಧದ ಘಟನಾವಳಿಗಳು:- ಹೈದರ್‌ ಸು. 80,000 ಸೈನಿಕರೊಂದಿಗೆ ಆರ್ಕಾಟ್‌ ಮೇಲೆ ಮುತ್ತಿಗೆ ಹಾಕಿದನು. ಅಲ್ಲದೇ ಬ್ರಿಟಿಷರ ಪ್ರಮುಖ ನೆಲೆಗಳಾಗಿದ್ದ ವೆಲ್ಲೂರು ಮತ್ತು ಮದ್ರಾಸ್‌ಗಳ ಸುತ್ತಲಿನ ಸ್ಥಳಗಳಲ್ಲಿ ಸಾಕಷ್ಟು ಹಾನಿಯುಂಟು ಮಾಡಿದನು. ಕರ್ನಲ್‌ ಬೈಲಿಯು ಹೈದರನಿಂದ ಸೋತು ಸೆರೆಸಿಕ್ಕನು. ಬ್ರಿಟಿಷರು ಆರ್ಕಾಟ್‌ ಮೇಲಿನ ಮುತ್ತಿಗೆ ಹಿಮ್ಮೆಟ್ಟಿಸಲು ಸು. 5,000 ದಷ್ಟು ಸೇನೆಯನ್ನು ರವಾನಿಸಿದರು. ಪೊಲ್ಲಿಲೂರು ಬಳಿ ಟಿಪ್ಪು ತನ್ನ 10,000 ದಷ್ಟು ಸೇನೆಯೊಂದಿಗೆ ಅದನ್ನು ಎದುರಿಸಿದನು. ಆಂಗ್ಲರು ಇಲ್ಲಿ ಹೀನಾಯವಾಗಿ ಸೋತರು. ಅಲ್ಲದೇ ಅವರ ಸು. 4000 ದಷ್ಟು ಸೈನಿಕರ ಸಾವು ಸಂಭವಿಸಿತು. ದಾಖಲೆಗಳ ಪ್ರಕಾರ ಇಷ್ಟು ದೊಡ್ಡ ಸೇನಾನಷ್ಟವೊಂದು ಬ್ರಿಟಿಷರಿಗೆ ದೇಶೀಯ ಅರಸನೊಬ್ಬನಿಂದ ಸಂಭವಿಸಿದುದು ಇಲ್ಲಿ ಮಾತ್ರ. ಬಕ್ಸಾರ್ ಯುದ್ಧವೀರ ಜನರಲ್ ಹೆಕ್ಟರ್ ಮನ್ರೋ ಪೆರಂಬಕಂ ಬಳಿ ನಡೆದ ಯುದ್ಧದಲ್ಲಿ ಹೈದರನನ್ನು ಎದುರಿಸಲಾರದೆ ಫಿರಂಗಿಗಳನ್ನು ಮತ್ತು ಕೋವಿಗಳನ್ನು ಕಾಂಜೀವರಂ ಕೆರೆಗೆ ಎಸೆದು ಪ್ರಾಣರಕ್ಷಣೆಗಾಗಿ ಪಲಾಯನ ಮಾಡಿದ. ಆಗ ಮದರಾಸು ಕೌನ್ಸಿಲ್ ಸದಸ್ಯರು ದೋಣಿಗಳಲ್ಲಿ ಆಶ್ರಯ ಪಡೆಯುವಷ್ಟರ ಮಟ್ಟಿಗೆ ಭಯಭೀತರಾಗಿದ್ದರು. ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸನು ವೈಟ್ಹಿಲ್ ನೇತೃತ್ವದ ಮದರಾಸು ಸರ್ಕಾರವನ್ನು ರದ್ದುಪಡಿಸಿ ಮದರಾಸಿನಲ್ಲಿ ಅಳಿದುಳಿದಿದ್ದ ಇಂಗ್ಲಿಷರ ಅಸ್ತಿತ್ವವನ್ನು ಉಳಿಸಲು ಯುದ್ಧವೀರ ಸರ್ ಐರ್ಕೂಟನನ್ನು ಕಳುಹಿಸಬೇಕಾಯಿತು

   ಈ ನಡುವೆ ವಾರನ್‌ ಹೇಸ್ಟಿಂಗ್ಸ್‌ ತಂತ್ರದ ಕಾರಣ ನಿಜಾಮ ಮತ್ತು ಮರಾಠರು ಮಿತ್ರ ಪಕ್ಷ ತೊರೆದು ಬ್ರಿಟಿಷರ ಕಡೆ ಸೇರಿದರು.    ನಿಜಾಮ ಉದ್ದುದ್ದ ಮಾತನಾಡಿದರೂ ಹೈದರಾಬಾದಿನಿಂದ ಒಬ್ಬ ಸೈನಿಕನನ್ನೂ ಕಳುಹಿಸಲಿಲ್ಲ. ಇತ್ತ ಹೇಸ್ಟಿಂಗ್ಸ್ ಗುಂಟೂರನ್ನು ತೆಗೆದುಕೊಳ್ಳುವುದಿಲ್ಲವೆಂದು ಒಂದು ಪತ್ರವನ್ನು ತನಗೆ ಬರೆದದ್ದೇ ನಿಜಾಮನಿಗೆ ಸಂತೃಪ್ತಿ ತಂದಿತ್ತು. ಇದೇ ರೀತಿ ಗವರ್ನರ್ ಜನರಲ್ ನಾಗಪುರದ ಮುದಾಜಿಗೆ ಅವನ ಮಗ ಚಿಮನ್ಜಿಯನ್ನು ಮರಾಠ ಪಡೆಗಳ ಸೇನಾಪತಿಯಾಗಿ ಮಾಡಲು ನೆರವಾಗುವುದಾಗಿ ನೀಡಿದ ಭರವಸೆಯಿಂದ ಅವನು ಬಂಗಾಲದ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಈ ನಡುವೆ ಮರಾಠರು ಇಂಗ್ಲಿಷರೊಂದಿಗೆ 1782 ರಲ್ಲಿ ಸಾಲ್ಬಾಯಿ ಒಪ್ಪಂದ ಮಾಡಿಕೊಂಡು ಬ್ರಿಟಿಷರೊಂದಿಗಿನ ಹೋರಾಟಗಳನ್ನು ನಿಲ್ಲಿಸಿದರು.

ಮುಂದೆ ಆಂಗ್ಲ ಸೇನೆಯ ನೇತೃತ್ವ ವಹಿಸಿದ ಸರ್‌ ಐರ್‌ಕೂಟ್‌ ನೇತೃತ್ವದ ಸೇನೆಗೆ ಹೈದರ್‌ ಪೋರ್ಟೋನೋವಾ, ಸೋಲಿಂಗೂರುಗಳಲ್ಲಿ ಸೋತನು. ನಾಗಪಟ್ಣಂ ಮತ್ತು ಟ್ರಿಂಕಾಮಲೈಗಳು ಹೈದರನ ಕೈ ಬಿಟ್ಟವು. ಇತ್ತ ಟಿಪ್ಪು ತಂಜಾವೂರಿನಲ್ಲಿ ಆಂಗ್ಲ ಸೇನಾನಿ ಬ್ರೈತ್‌ವೈಟ್‌ನನ್ನು ಸೋಲಿಸಿ ಸೆರೆ ಹಿಡಿದನು. ಆರ್ನಿ, ಕಾವೇರಿಪಟ್ಣಂ ಬಳಿ ಹೈದರನಿಗೆ ಸೋಲುಂಟಾಯಿತು. ಯುದ್ದದ ನಡುವೆಯೇ ಡಿಸೆಂಬರ್ 7, ‌1782 ರಲ್ಲಿ ಹೈದರ್‌ ಬೆನ್ನುಫಣಿ ರೋಗದಿಂದ ಚಿತ್ತೂರು ಬಳಿಯ ನರಸಿಂಗಪೇಟೆಯಲ್ಲಿ ಮರಣ ಹೊಂದಿದನು. ಮುಂದೆ ಟಿಪ್ಪು ಯುದ್ಧದ ನೇತೃತ್ವ ವಹಿಸಿಕೊಂಡನು. ಪಶ್ಚಿಮದಲ್ಲಿ ನಡೆದ ಯುದ್ಧಗಳಲ್ಲಿ ಬ್ರಿಗೇಡಿಯರ್‌ ಮ್ಯಾಥ್ಯೂಸ್‌ ಸೋತು ಬಿದನೂರು ಮತ್ತು ಮಂಗಳೂರುಗಳನ್ನು ಟಿಪ್ಪುವಿಗೆ ಬಿಟ್ಟುಕೊಟ್ಟನು. ಆದರೆ ಯುದ್ದ ಯಾವುದೇ ನಿರ್ಣಾಯಕ ಹಂತಕ್ಕೆ ತಲುಪದ ಕಾರಣ ಯುದ್ಧ ನಿಲುಗಡೆಗೆ ಎರಡೂ ಪಕ್ಷದವರು ಸಮ್ಮತಿಸಿದರು.

ಮಂಗಳೂರು ಒಪ್ಪಂದ:- ಮಾರ್ಚ್‌ 11, 1784. ಒಪ್ಪಂದದ ಕರಾರುಗಳೆಂದರೆ,

1. ಒಪ್ಪಂದದ ಪ್ರಕಾರ ಯುದ್ಧವು ಕೊನೆಗೊಂಡಿತು.

2. ಯುದ್ಧ ಖೈದಿಗಳ ಬಿಡುಗಡೆಗೆ ಸಮ್ಮತಿಸಲಾಯಿತು.

3. ಪರಸ್ಪರ ಗೆದ್ದ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

4. ಪರಸ್ಪರರ ವಿರುದ್ಧ ನಡೆಯುವ ಯುದ್ಧಗಳಲ್ಲಿ ಯಾರೊಬ್ಬರೂ ಶತೃಗಳ ಕಡೆ ಸೇರದಿರುವುದು.

5. ಪರಸ್ಪರರ ಮಿತ್ರರ ಮೇಲೆ ಯಾರೊಬ್ಬರೂ ಯುದ್ಧ ಅಥವಾ ದಾಳಿ ಮಾಡದಿರುವುದು.

ಹೈದರ್‌ ಅಲಿಯ ಮಹತ್ವ:-    ಹೈದರ್ ಅಲಿ ಇತಿಹಾಸದ ಗಮನಾರ್ಹ ವ್ಯಕ್ತಿಗಳಲ್ಲೊಬ್ಬ. ಇವನ ದೂರದೃಷ್ಟಿ, ಚಾಣಾಕ್ಷತನ, ಧೈರ್ಯ ಮತ್ತು ಸೈನ್ಯಸಂಘಟನಾ ಸಾಮರ್ಥ್ಯಗಳು ದಕ್ಷಿಣ ಭಾರತದಲ್ಲಿ ವಿದೇಶೀಯರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳದಂತೆ ಮಾಡಿದ್ದವು. ಇವನು ಆಡಳಿತದಲ್ಲಿ ನ್ಯಾಯಪರನೂ ಉದಾರಿಯೂ ಸಹನಾಮಯಿಯೂ ಆಗಿದ್ದ. ಇವನ ಸಮರ್ಥ ಆಳಿಕೆಯಲ್ಲಿ ಇಡೀ ಕರ್ನಾಟಕ ಒಗ್ಗೂಡಿ ದಕ್ಷ ಮತ್ತು ದೃಢಸರ್ಕಾರ ಪಡೆದಿತ್ತು.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources