ಮೂರನೆ ಆಂಗ್ಲೊ-ಮೈಸೂರು ಯುದ್ಧ: 1790-1792.

ಯುದ್ಧದ ಹಿನ್ನೆಲೆ:- ಲಾರ್ಡ್ ಕಾರ್ನ್ ವಾಲಿಸನು 1786 ರಲ್ಲಿ ಗವರ್ನರ್‌ ಜನರಲ್‌ ಆಗಿ ಭಾರತಕ್ಕೆ ಬಂದನು. ಆತನು ಬ್ರಿಟಿಷರು ಮತ್ತು ಟಿಪ್ಪು ನಡುವೆ ಸಮರ ಅನಿವಾರ್ಯವೆಂದು ಆರಂಭದಲ್ಲಿಯೇ ಅರಿತುಕೊಂಡನು. ಅದಕ್ಕಾಗಿ ಅವನು ಹೈದರಾಬಾದಿನ ನಿಜಾಮ ಮತ್ತು ಮರಾಠರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ಟಿಪ್ಪುವನ್ನು ಏಕಾಂಗಿಯನ್ನಾಗಿಸುವ ಪ್ರಯತ್ನದಲ್ಲಿ ತೊಡಗಿದನು. ಮತ್ತೊಂದೆಡೆ ಟಿಪ್ಪುವು ಸಹಾ ಬ್ರಿಟಿಷರ ವಿರುದ್ಧ ವಿದೇಶಗಳ ನೆರವನ್ನು ಪಡೆಯಲು ಫ್ರೆಂಚರು, ಟರ್ಕಿ ಮತ್ತು ಅಫ್ಘಾನಿಸ್ಥಾನಗಳ ಸುಲ್ತಾನರೊಂದಿಗೆ ರಾಯಭಾರಗಳನ್ನು ಆರಂಭಿಸಿದ್ದನು. ಆದರೆ ರಾಜತಾಂತ್ರಿಕ ಪ್ರಯತ್ನಗಳಿಂದ ಹೆಚ್ಚಿನ ಲಾಭವೇನೂ ಆಗಲಿಲ್ಲ. 1790 ಜೂನ್ 1 ರಂದು ಕಾರ್ನವಾಲಿಸನು ಮರಾಠರೊಂದಿಗೂ, 1790 ಜುಲೈ 4 ರಂದು ನಿಜಾಮನೊಂದಿಗೂ ಒಪ್ಪಂದ ಮಾಡಿಕೊಂಡನು. ಹೀಗೆ ಬ್ರಿಟಿಷರು, ಮರಾಠರು ಮತ್ತು ನಿಜಾಮ ಹತ್ತಿರ ಬಂದಂತೆ ಟಿಪ್ಪು ರಾಜಕೀಯವಾಗಿ ಏಕಾಂಗಿಯಾದನು.

ಯುದ್ಧದ ಕಾರಣಗಳು:- ಸಮರಕ್ಕೆ ತಕ್ಷಣದ ಕಾರಣವು 1789 ಡಿಸೆಂಬರ್ 29 ರಂದು ತಿರುವಾಂಕೂರು ರಾಜ್ಯದ ಮೇಲೆ ಟಿಪ್ಪು ನಡೆಸಿದ ದಾಳಿಯಾಗಿತ್ತು. ಇದರಿಂದ ಬ್ರಿಟಿಷರು ಟಿಪ್ಪುವಿನ ವಿರುದ್ಧ ಯುದ್ಧ ಘೋಷಿಸಿದರು. ಏಕೆಂದರೆ, 1784 ಒಪ್ಪಂದದಲ್ಲಿ ತಿರುವಾಂಕೂರು ರಾಜನನ್ನು ಇಂಗ್ಲಿಷರ ಸ್ನೇಹಿತರೊಂದಿಗೆ ಸೇರಿಸಿಕೊಳ್ಳಲಾಗಿತ್ತು. ತಿರುವಾಂಕೂರು ರಾಜ್ಯದ ಮೇಲಿನ ಟಿಪ್ಪುವಿನ ಮೊದಲ ದಾಳಿ ವಿಫಲವಾಯಿತು. ಆತನ ಮುಂದಿನ ದಾಳಿ 1790 ಏಪ್ರಿಲ್ನಲ್ಲಿ ನಡೆಯಿತು. ಇದರಿಂದ ತಿರುವಾಂಕೂರಿನವರು ದಕ್ಷಿಣದಲ್ಲಿನ ತಮ್ಮ ಕೋಟೆಗೆ ಹಿನ್ನಡೆದರು.

ಯುದ್ಧದ ಘಟನೆಗಳು:- ಸಮರವು 1790ರ ಮೇ ನಲ್ಲಿ ಆರಂಭವಾಗಿ ಮಾರ್ಚ್‌ 1792 ರವರೆಗೆ ಎರಡು ವರ್ಷ ನಡೆಯಿತು. ಆರಂಭದಲ್ಲಿ ಮೆಡೋಸ್ ಟಿಪ್ಪುವಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡನು. ಅಲ್ಲದೇ ಟಿಪ್ಪು ಸತ್ಯಮಂಗಲವನ್ನು ಸಹ ಕಳೆದುಕೊಂಡನು. ಆದರೆ ನಂತರ ಟಿಪ್ಪು ಬ್ರಿಟಿಷ್‌ ದಳಗಳ ಮೇಲೆ ತ್ವರಿತವಾಗಿ ಪ್ರಹಾರ ಮಾಡಿದನು. ಇದರಿಂದ ಬ್ರಿಟಿಷ್‌ ಸೇನೆ ಸಾಕಷ್ಟು ನಷ್ಟ ಅನುಭವಿಸಿತು. ಆನಂತರ ಟಿಪ್ಪು ತಿರುಚಿನಾಪಳ್ಳಿಯ ಮೇಲೆ ದಾಳಿ ಮಾಡಿದನು. ಮೆಡೋಸ್ ಸೈನ್ಯವು ಹಿಮ್ಮೆಟ್ಟಿತು. ಇದರಿಂದ  ಬ್ರಿಟಿಷ್‌ ಸೇನೆಯ ಮಹಾದಂಡನಾಯಕನೂ ಆಗಿದ್ದ ಗವರ್ನರ್ ಜನರಲ್‌  ಕಾರ್ನವಾಲೀಸ್‌ ತಾನೇ ಸೇನಾನಾಯಕತ್ವ ವಹಿಸಲು ನಿರ್ಧರಿಸಿದನು. ಅವನು ಮಾರ್ಚ್‌ 21, 1791 ರಲ್ಲಿ ಬೆಂಗಳೂರನ್ನು ವಶಪಡಿಸಿಕೊಂಡನು.  ಆದರೆ ಕಾರ್ನ್ ವಾಲಿಸನು ಶ್ರೀರಂಗಪಟ್ಟಣದತ್ತ ಮುನ್ನಡೆದಂತೆ ಟಿಪ್ಪುವಿನ ದಾಳಿಯೋಜನೆ ಬಹಿರಂಗವಾಯಿತು. ಮೇ 13 ರಂದು ಕಾರ್ನವಾಲಿಸನು ಶ್ರೀರಂಗಪಟ್ಟಣಕ್ಕೆ ಒಂಬತ್ತು ಮೈಲಿ ದೂರದ ಅರಕೆರೆಗೆ ತಲುಪಿದ್ದನು. ಆತನಿಗೆ ಯಾವುದೇ ಪೂರೈಕೆಯಿಲ್ಲದಂತೆ ಟಿಪ್ಪು ಪ್ರತಿಬಂಧಿಸಿದನು. ಆದರೆ ಅರಕೆರೆಯಲ್ಲಿನ ದಾಳಿಯಲ್ಲಿ ಟಿಪ್ಪು ಹತೋಟಿ ಕಳೆದುಕೊಂಡನು. ಆತ ಶ್ರೀರಂಗಪಟ್ಟಣಕ್ಕೆ ಹಿಂದಿರುಗಲೇಬೇಕಾಯಿತು. ಮಳೆ ಆರಂಭವಾದ ಕಾರಣ ಕಾರ್ನವಾಲೀಸ್‌ ಬೆಂಗಳೂರಿಗೆ ಹಿಂತಿರುಗಿದನು. ಇತ್ತ ಮರಾಠರ ನೆರವು ಸಹಾ ಅವನಿಗೆ ಸಕಾಲದಲ್ಲಿ ದೊರೆಯದಂತೆ ಮಾಡಿದ್ದನು ಟಿಪ್ಪು. ಟಿಪ್ಪು ಕೊಯಮತ್ತೂರನ್ನು ಮತ್ತೆ ಸ್ವಾಧೀನಪಡಿಸಿಕೊಂಡನು. ಮಳೆಗಾಲದ ಅನಂತರ ಕಾರ್ನ್ ವಾಲಿಸನು ಪುನಃ ತನ್ನ ಆಕ್ರಮಣಗಳನ್ನು ಆರಂಭಿಸಿದನು. 2,200 ) ಯೋಧರು ಹಾಗೂ ನಿಜಾಮನು ಒದಗಿಸಿದ 18,000 ಕುದುರೆಗಳು ಮತ್ತು ಮರಾಠರ ಒಂದು ಪಡೆಯೊಂದಿಗೆ ಆತನು ಶ್ರೀರಂಗಪಟ್ಟಣದತ್ತ ಮುನ್ನುಗ್ಗಿದನು. ಕೋಟೆಯ ಮೇಲಿನ ಆಕ್ರಮಣವನ್ನು ತಡೆಯಲು ಟಿಪ್ಪು ಶ್ರೀರಂಗಪಟ್ಟಣದ ರಕ್ಷಣೆಗೆ ಕ್ರಮಕೈಗೊಂಡರೂ ಬ್ರಿಟಿಷರ ಮುತ್ತಿಗೆ ಬಲವಾಗಿತ್ತು. ಅಂತಿಮವಾಗಿ ಟಿಪ್ಪು ಶಾಂತಿ ಒಪ್ಪಂದಕ್ಕೆ ಮುಂದಾಗಬೇಕಾಯಿತು. ಯುದ್ಧವು ಶ್ರೀರಂಗಪಟ್ಟಣದ ಒಪ್ಪಂದದಂತೆ ನಿಲುಗಡೆಗೊಂಡಿತು.

ಶ್ರೀರಂಗಪಟ್ಟಣ ಒಪ್ಪಂದ ಮಾರ್ಚ್‌ 22, 1792:- ಒಪ್ಪಂದದ ಕರಾರುಗಳೆಂದರೆ,

1. ಟಿಪ್ಪು ತನ್ನ ರಾಜ್ಯದ ಅರ್ಧಭಾಗವನ್ನು ಮೈತ್ರಿಕೂಟಕ್ಕೆ ಬಿಟ್ಟುಕೊಟ್ಟನು.

2. ಮರಾಠಾ ಚಕ್ರಾಧಿಪತ್ಯವು ತುಂಗಭದ್ರಾವರೆಗೆ ವಿಸ್ತರಿಸಿತು.

3. ನಿಜಾಮನು ತನ್ನ ಸರಹದ್ದನ್ನು ಕೃಷ್ಣಾದಿಂದ ಗಂಜಿಕೊಟ್ಟ ಮತ್ತು ಕಡಪ ಕೋಟೆಗಳು ಸೇರಿದಂತೆ ಪೆನ್ನಾಆಚೆಗೆ ಗುರುತಿಸಿಕೊಂಡನು.

4. ಬ್ರಿಟಿಷರು ಬಾರಾಮಹಲ್, ದಿಂಡಿಗಲ್ ಹಾಗೂ ಮಲಬಾರನ್ನು ಪಡೆದರು.

5. ಟಿಪ್ಪು ಕೊಡಗಿನ ರಾಜನಿಗೂ ಸ್ವಾತಂತ್ರ್ಯ ನೀಡಬೇಕಾಯಿತಲ್ಲದೆ ಮೂರು ಕೋಟಿ ಮೂವತ್ತು ಲಕ್ಷ ರೂಪಾಯಿ ಪರಿಹಾರ ಕೊಡಬೇಕಾಯಿತು.

6. ಯುದ್ಧವೆಚ್ಚ ಕೊಡುವವರೆಗೂ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆಯಾಳುಗಳಾಗಿ ಕಳುಹಿಸಿದನು.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ