ಅಧ್ಯಾಯ 3. ಸಾಮ್ರಾಜ್ಯಶಾಹಿ ಸಿದ್ಧಾಂತಗಳು ಮತ್ತು ಪೌರ್ವಾತ್ಯರು; ಭಾರತದ ಸಂಘಟನೆ ಮತ್ತು ಉಪಯುಕ್ತತಾವಾದಿಗಳು.

ಪೀಠಿಕೆ:-   ಮಧ್ಯಯುಗದಲ್ಲಿ ಭೌಗೋಳಿಕ ಅನ್ವೇಷಣೆಗಳ ನಂತರ ಜಗತ್ತಿನಾದ್ಯಂತ ವಿಸ್ತರಿಸಿದ ಬ್ರಿಟಿಷರು ಜಗತ್ತಿನಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಳ್ಳತೊಡಗಿದರು. ಇಂತಹ ವಸಾಹತು ವಿಸ್ತರಣೆಯ ಕಾಲದಲ್ಲಿ ಆಂಗ್ಲರು ತಮ್ಮನ್ನು ತಾವು  ನಾಗರೀಕರೆಂದು ಭಾವಿಸಿಕೊಂಡದ್ದಲ್ಲದೇ, ತಮ್ಮ ವಸಾಹತುಗಳಲ್ಲಿನ ಜನರನ್ನು ಅನಾಗರೀಕರೆಂದು ಭಾವಿಸಿ ಅವರ ಸುಧಾರಣೆಗಾಗಿಯೇ ದೇವರು ನಮಗೆ ಈ ದೇಶಗಳನ್ನು ದಯಪಾಲಿಸಿದ್ದಾನೆ ಎಂದು ಭಾವಿಸತೊಡಗಿದರು. ಅದಕ್ಕಾಗಿ ಅವರು ವಸಾಹತು ವಿಸ್ತರಣೆಯನ್ನು ಎಲ್ಲೆಡೆ ವಿಸ್ತರಿಸಿದರು. ಅವರ ಇಂತಹ ವಿಸ್ತರಣೆಯ ಕಾಲಘಟ್ಟವನ್ನು ಎರಡು ಹಂತಗಳಲ್ಲಿ ವಿಭಜಿಸಬಹುದು. ಮೊದಲನೆಯದಾಗಿ ಪಶ್ಚಿಮದಲ್ಲಿ ಅಮೆರಿಕಾ ಮತ್ತು ವೆಸ್ಟ್‌ ಇಂಡೀಸ್‌ ದ್ವೀಪಗಳವರೆಗಿನ ವಿಸ್ತರಣೆ ಮತ್ತು ಪೂರ್ವದಲ್ಲಿ ಏಷ್ಯಾದ ರಾಷ್ಟ್ರಗಳವರೆಗಿನ ವಿಸ್ತರಣೆ. ಹೀಗೆ 18ನೆ ಶತಮಾನದ ಅಂತ್ಯ ಮತ್ತು 19ನೆ ಶತಮಾನದ  ಆರಂಭದ ವೇಳೆಗೆ ವಸಾಹತು ವಿಸ್ತರಣೆಯ ಪ್ರಕ್ರಿಯೆಯಲ್ಲಿ ಭಾರತದಲ್ಲಿ ಅಷ್ಟೇ ಅಲ್ಲದೇ ಜಗತ್ತಿನ ಇತರ ಭಾಗಗಳಲ್ಲಿಯೂ ಸಾಕಷ್ಟು ಭೂಪ್ರದೇಶಗಳ ಮೇಲಿನ ಒಡೆತನವನ್ನು ಗಳಿಸಿದರು. ಅವರ ಇಂತಹ ವಸಾಹತು ವಿಸ್ತರಣೆಯೇ ಮುಂದೆ ಸಾಮ್ರಾಜ್ಯಶಾಹಿ ನೀತಿಯ ಬೆಳವಣಿಗೆಗೆ ಕಾರಣವಾಯಿತು.

ಸಾಮ್ರಾಜ್ಯಶಾಹಿ ಸಿದ್ಧಾಂತಗಳ ಬೆಳವಣಿಗೆಯ ಕಾರಣಗಳು :-  ಆಂಗ್ಲರ ಸಾಮ್ರಾಜ್ಯಶಾಹಿ ವಾದವು ಇಂಗ್ಲೆಂಡಿನಲ್ಲಿ ಉಂಟಾದ ಬೌದ್ಧಿಕ ಮತ್ತು ರಾಜಕೀಯ ಸಿದ್ಧಾಂತಗಳ ಬೆಳವಣಿಗೆಯ ಫಲವಾಗಿದೆ. ಪರಿಣಾಮವಾಗಿ ತಮ್ಮ ವಸಾಹತುಗಳನ್ನು ಆಳ್ವಿಕೆ ಮಾಡುವಾಗ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೆಲವೊಂದು ಆಡಳಿತಾತ್ಮಕ ಮಾರ್ಪಾಡುಗಳನ್ನು ಅವರು ಮಾಡಿಕೊಳ್ಳಬೇಕಾಯಿತು; ಆದರೆ ತಮ್ಮ ಮೂಲಭೂತವಾದ ಸಾಮ್ರಾಜ್ಯಶಾಹಿ ಸಿದ್ಧಾಂತದಲ್ಲಿ ಹೆಚ್ಚಿನ ಬದಲಾವಣೆಗಳೇನು ಉಂಟಾಗದಂತೆ ಅವರು ಎಚ್ಚರಿಕೆ ವಹಿಸಿದರು. ಉದಾ: ಭಾರತದಲ್ಲಿ ಬ್ರಿಟಿಷರು ಬಹುಕಾಲದವರೆಗೆ ಮೊಗಲ್‌ ಬಾದಶಹಾನ ಹೆಸರಿನಲ್ಲಿ ಆಡಳಿತ ನಡೆಸುತ್ತಿದ್ದು, ಅವನ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸುತ್ತಿದ್ದರು  ಮತ್ತು ಮೊಗಲ್‌ ಆಸ್ಥಾನ ಭಾಷೆಯಾಗಿದ್ದ ಪರ್ಷಿಯಾವನ್ನು ತಮ್ಮ ಆಡಳಿತ ಭಾಷೆಯಾಗಿ ಬಳಸುತ್ತಿದ್ದರು. ಅಲ್ಲದೇ ಬಂಗಾಳದಲ್ಲಿದ್ದ ದ್ವಿಸರ್ಕಾರ ಪದ್ಧತಿಯು ಸಹಾ ಇಂತಹುದೇ ಭಾವನೆಯನ್ನು ಉಂಟು ಮಾಡುತ್ತಿತ್ತು. ಏಕೆಂದರೆ ಕ್ರಿಮಿನಲ್‌ ಮತ್ತು ಸಿವಿಲ್‌ ಆಡಳಿತವು ನವಾಬನ ಕೈಯಲ್ಲಿದ್ದರೆ ಕಂದಾಯ ಆಡಳಿತವು ಆಂಗ್ಲರ ಕೈಯಲ್ಲಿತ್ತು.  ಆರಂಭದಲ್ಲಿ ಕನಿಷ್ಠವಾಗಿದ್ದ ಆಡಳಿತದಲ್ಲಿನ ಇಂತಹ ಹಸ್ತಕ್ಷೇಪವು ಕ್ರಮೇಣ ಅಧಿಕವಾಗಿ ಸಂಪೂರ್ಣ ಆಡಳಿತವು ಅವರ ಕೈಸೇರಿತು. ಭಾರತದಲ್ಲಿನ ಈ ಬಗೆಯ ಆಂಗ್ಲರ ಆಡಳಿತಾತ್ಮಕ ಹಸ್ತಕ್ಷೇಪಕ್ಕೆ ಅವರು ಕೊಡುವ ಸಮರ್ಥನೆಯೆಂದರೆ ಅವ್ಯವಸ್ಥಿತವಾಗಿದ್ದ ಹಳೆಯ ಪದ್ಧತಿಯನ್ನು ಸುಧಾರಣೆಗೊಳಿಸುವುದೇ ಆಗಿದೆ. ಈ ರೀತಿಯ ಪ್ರಕ್ರಿಯೆಯ ಜೊತೆಗೆ ವಿಶಾಲವಾದ ಭಾರತದ ಭೂಪ್ರದೇಶಗಳು ಅವರಿಗೆ ಲಭಿಸಲು ಆರಂಬವಾದ ನಂತರ ಭಾರತ ಮತ್ತು ಇಂಗ್ಲೆಂಡಿನಲ್ಲಿದ್ದ ಬ್ರಿಟಿಷರಲ್ಲಿ ಭಿನ್ನ ಸಿದ್ಧಾಂತಗಳು ಬೆಳೆದು ಬಂದವು. ಅವುಗಳೇ ಪೌರ್ವಾತ್ಯವಾದ ಮತ್ತು ಉಪಯುಕ್ತತಾ ವಾದ.

ಪೌರ್ವಾತ್ಯವಾದ:- ಪೌರ್ವಾತ್ಯವಾದವು ಭಾರತದಲ್ಲಿ ಅಧಿಕಾರಿಗಳಾಗಿ ಮತ್ತು ವಿದ್ವಾಂಸರಾಗಿ ಕೆಲಸ ಮಾಡುತ್ತಿದ್ದ ಆಂಗ್ಲರಲ್ಲಿ ಬೆಳೆದರೆ, ಉಪಯುಕ್ತತಾ ವಾದವು ಬ್ರಿಟನ್ನಿನಲ್ಲಿದ್ದ ರಾಜಕೀಯ ಮತ್ತು ಆರ್ಥಿಕ ತಜ್ಞರಲ್ಲಿ ಬೆಳೆಯಿತು.

ಪೌರ್ವಾತ್ಯವಾದ:- ಪೌರ್ವಾತ್ಯವಾದವೆಂದರೆ, ಭಾರತದ ಬಗೆಗಿನ ಸಂಸ್ಕೃತಿ, ಭಾಷೆ, ವಿಜ್ಞಾನ ಮತ್ತು ತಂತ್ರಜ್ಞಾನ, ತತ್ವಜ್ಞಾನ ಇತ್ಯಾದಿಗಳನ್ನು ಅಭ್ಯಸಿಸುವ ಮೂಲಕ ಭಾರತೀಯತೆಗೆ ಅನುಗುಣವಾಗಿ ಒಂದು ಆಡಳಿತ ಪದ್ಧತಿಯನ್ನು ರೂಪಿಸುವುದು. ಇಂತಹ ಅಭಿಪ್ರಾಯ ಬೆಳೆಯಲು ಕಾರಣವೆಂದರೆ, ಆರಂಭದಲ್ಲಿ ಭಾರತವನ್ನು ಕುರಿತಂತೆ ಪಾಶ್ಚಿಮಾತ್ಯರಲ್ಲಿದ್ದ ಪ್ರಾಚೀನ ಭಾರತದ ಭವ್ಯತೆಯು ಕ್ರಮೇಣ ಕುಸಿದಿದೆ ಎಂಬ ಭಾವನೆ ಮತ್ತು ಅದು ಬೆಳೆದು ಬಂದುದು ಅವರೇ ಪುನರ್‌ರಚಿಸಿದ ಭಾರತದ ಇತಿಹಾಸದಿಂದ. ಏಕೆಂದರೆ ಸಂಸ್ಕೃತ ಮತ್ತು ಇತರ ಯೂರೋಪಿನ ಭಾಷೆಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ ನ್ಯಾಯಾಧೀಶ ಮತ್ತು ಭಾಷಾ ತಜ್ಞ ವಿಲಿಯಂ ಜೋನ್ಸ್‌ ಪೂರ್ವ ಮತ್ತು ಪಶ್ಚಿಮದ ನಡುವೆ ಸಾಂಸ್ಕೃತಿಕ ಸಂಪರ್ಕದ ಹುಡುಕಾಟದಲ್ಲಿ ತೊಡಗಿದನು. ಪರಿಣಾಮವಾಗಿ ಭಾರತೀಯ ಭಾಷೆಗಳು, ಸಂಸ್ಕೃತಿ ಮತ್ತು ಪ್ರಾಚೀನ ಸಾಹಿತ್ಯ ಕೃತಿಗಳ ಅಧ್ಯಯನಕ್ಕಾಗಿ ಕಲ್ಕತ್ತಾದಲ್ಲಿ ಮದರಸಾ  (1781 ), ಬೆಂಗಾಲ್‌ ಎಷ್ಯಾಟಿಕ್‌ ಸೊಸೈಟಿ (1784) ಮತ್ತು ಬನಾರಸ್‌ದಲ್ಲಿ (ಕಾಶಿ) ಸಂಸ್ಕೃತ ಕಾಲೇಜು (1794 ) ಗಳು ಸ್ಥಾಪನೆಗೊಂಡವು. ಇದರಿಂದಾಗಿ ಭಾರತದ ಭವ್ಯ ಪ್ರಾಚೀನತೆ ಮತ್ತು ಶ್ರೀಮಂತ ಸಂಸ್ಕೃತಿ  ಹಾಗೂ ಭಾರತೀಯ ಸಾಹಿತ್ಯದ ಮಹತ್ವವನ್ನು ಅರಿತು ತಮ್ಮನ್ನು ತಾವು ಪೌರ್ವಾತ್ಯವಾದಿಗಳೆಂದು (Orientalists) ಕರೆದುಕೊಳ್ಳತೊಡಗಿದರು.  ಆ ಕಾಲಘಟ್ಟವನ್ನು ಪೌರ್ವಾತ್ಯವಾದದ ಬೆಳವಣಿಗೆಯ ಕಾಲವೆಂದು ಕರೆಯಬಹುದು. ಏಕೆಂದರೆ ಪಾಶ್ಚಾತ್ಯ ವಿದ್ವಾಂಸರು ಪ್ರಾಚೀನ ಭಾರತೀಯ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಅದರಲ್ಲಿನ ಜ್ಞಾನವು ಸತ್ಯವಾದುದು ಮತ್ತು ಅದನ್ನು ಅರಿಯಲು ಅವರು ಸ್ಥಳೀಯರೊಂದಿಗೆ ಚರ್ಚೆ-ವಿಮರ್ಶೆಗಳಲ್ಲಿ ತೊಡಗಬೇಕಾಯಿತು. ಇದರಿಂದಾಗಿ ಪೌರ್ವಾತ್ಯವಾದವು ಮತ್ತಷ್ಟು ಅಭಿವೃದ್ಧಿ ಹೊಂದಿದರೂ ಅದರಲ್ಲಿ ಭಾರತೀಯರ  ಪ್ರಭಾವ ಕುಂಠಿತವಾಗಿರುವುದನ್ನು ಕಾಣಬಹುದು. ಆರಂಭದ ಪೌರ್ವಾತ್ಯ ವಾದದ ಕುರುಹುಗಳನ್ನು 1772-84ರ ನಡುವೆ ಬಂಗಾಳದ ಗವರ್ನರ್‌ ಜನರಲ್‌ ಆಗಿದ್ದ ವಾರನ್‌ ಹೇಸ್ಟಿಂಗ್ಸ್‌ನ ಆಡಳಿತಾತ್ಮಕ ಸುಧಾರಣೆಗಳಲ್ಲಿಯೂ ಕಾಣಬಹುದು. ಏಕೆಂದರೆ ಅವರು ಅನುಸರಿಸಿದ ಆಡಳಿತಾತ್ಮಕ ಕ್ರಮಗಳು ಹೊರನೋಟಕ್ಕೆ ಭಾರತೀಯವಾಗಿಯೇ ಕಂಡರೂ ಹಿನ್ನೆಲೆಯಲ್ಲಿ ಸಾಮ್ರಾಜ್ಯಶಾಹಿತ್ವದ ಲಕ್ಷಣಗಳನ್ನು ಒಳಗೊಂಡಿದ್ದವು. ಅಂದರೆ ವಸಾಹತು ಜನರನ್ನು ಅವರ ಕಾನೂನುಗಳ ಮೂಲಕವೇ ಆಳ್ವಿಕೆ ಮಾಡಿದರೂ ಅದು ಆಂಗ್ಲ ನೀತಿಗಳಿಂದ ಪ್ರಭಾವಿತವಾಗಿರುತ್ತಿತ್ತು. ಏಕೆಂದರೆ ಸ್ಥಳೀಯ ಸಂಸ್ಕೃತಿ ಮತ್ತು ಪದ್ಧತಿಗಳು ಬ್ರಿಟಿಷ್‌ ಆಡಳಿತಗಾರರಿಗೆ ಮನವರಿಕೆಯಾಗಬೇಕಾಗಿತ್ತು ಮತ್ತು ಅದಕ್ಕಾಗಿ 1800 ರಲ್ಲಿ ಕಲ್ಕತ್ತಾದ ಫೋರ್ಟ್‌ ವಿಲಿಯಂ ಕಾಲೇಜು ಆರಂಭವಾಯಿತು. ಅಂದರೆ ಆಂಗ್ಲರ ಇಂತಹ ಪೌರ್ವಾತ್ಯವಾದದ ಬೆಳವಣಿಗೆಯಿಂದ ದೂರದ ಯೂರೋಪಿಯನ್ನರಿಗೂ ಮತ್ತು ಪಾಶ್ಚಾತ್ಯ ಭಾರತೀಯರಿಗೂ ಸಂಬಂಧವಿದೆ ಎಂಬ ಅಂಶವನ್ನು ಆರ್ಯರ ಆಗಮನದ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ಭಾರತೀಯರು ಅವರ ಆಡಳಿತವನ್ನು ಒಪ್ಪಿಕೊಳ್ಳುವಂತೆ ಮಾಡಲು ಪ್ರಯತ್ನಿಸಲಾಯಿತು ಎಂದು ಥಾಮಸ್‌  ಟ್ರಾಟ್‌ಮನ್‌ ಅವರು ಅಭಿಪ್ರಾಯಪಡುತ್ತಾರೆ. ಏಕೆಂದರೆ 1785ರಲ್ಲಿ ವಾರನ್‌ ಹೇಸ್ಟಿಂಗ್ಸ್‌ ಬರೆದಂತೆ “ಭಾರತದ ಬಗೆಗಿನ ಪ್ರತಿಯೊಂದು ತಿಳುವಳಿಕೆಯು ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಉಪಯುಕ್ತವಾಗುತ್ತದೆ. ಅಂದರೆ ಅದು ಭಾರತ ಮತ್ತು ದೂರದ ಯೂರೋಪಿನ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ; ಅಲ್ಲದೇ ನಾವು ಅವರ ಮೇಲೆ ಹೇರಿರುವ ವಿದೇಶಿ ಆಡಳಿತದ ಹೊರೆಯನ್ನು ತಗ್ಗಿಸುತ್ತದೆ ಮತ್ತು ನಮ್ಮವರಲ್ಲಿ ಅವರ (ಭಾರತೀಯರ) ಬಗ್ಗೆ ಪ್ರೀತಿಮಿಶ್ರಿತ ಮತ್ತು ಜವಾಬ್ದಾರಿಯುತ ಆಡಳಿತ ನಡೆಸಲು ಅನುಕೂಲ ಕಲ್ಪಿಸುತ್ತದೆ” ಎಂಬ ಮಾತುಗಳಲ್ಲಿ ಅವರ ಪೌರ್ವಾತ್ಯ ವಾದದಲ್ಲಿ ಸಾಮ್ರಾಜ್ಯಶಾಹಿ ದೃಷ್ಟಿಕೋನವನ್ನು ಕಾಣಬಹುದಾಗಿದೆ. ಅಲ್ಲದೇ ಆರ್ಯನ್ನರ ಆಗಮನದ ಸಿದ್ಧಾಂತದ ಮೂಲಕ ಭಾರತೀಯರ ಪ್ರಾಚೀನ ಶ್ರೀಮಂತಿಕೆ ಮತ್ತು ಈಗ ನಷ್ಟವಾಗಿರುವ ಅದರ ಶ್ರೀಮಂತಿಕೆಯನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದ್ದು, ಅದನ್ನು ಬ್ರಿಟಿಷ್‌ ಆಡಳಿತವು ಮಾಡುತ್ತದೆ ಎಂಬುದು ಪೌರ್ವಾತ್ಯವಾದದ ಮತ್ತೊಂದು ಅಂಶವಾಗಿತ್ತು. ಅಲ್ಲದೇ ವ್ಹಿಗ್‌ ಪಕ್ಷದ ತತ್ವಗಳನ್ನು (Whig principles) ಅನುಷ್ಠಾನಗೊಳಿಸುವ ದೃಷ್ಟಿಯಿಂದ ಹೇಸ್ಟಿಂಗ್ಸ್‌ ಆರಂಭಿಸಿದ ಸುಧಾರಣೆಗಳನ್ನು ಅವನ ನಂತರ ಭಾರತಕ್ಕೆ ಬಂದ ಕಾರ್ನವಾಲೀಸ್‌ ಮತ್ತು ವೆಲ್ಲೆಸ್ಲಿ ಸಹಾ ಮುಂದುವರಿಸಿದರು. ಅವರ ಪ್ರಕಾರ ಹಿಂದೆ ಭಾರತೀಯರು ಅನುಭವಿಸಿದ ದಬ್ಬಾಳಿಕೆಯ ಆಡಳಿತದ ಬದಲು ಅವರಿಗೆ ಉದಾರ ಆಡಳಿತ ನೀಡುವುದಾಗಿತ್ತು. ಅದಕ್ಕಾಗಿ ಅವರು ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯಗಳನ್ನು ಪ್ರತ್ಯೇಕಿಸಿದರು. ಜೊತೆಗೆ ಜನರ ಆಸ್ತಿ ಮತ್ತು ವೈಯುಕ್ತಿಕ ಹಕ್ಕುಗಳನ್ನು ರಕ್ಷಿಸುವುದು ಮಾತ್ರವೇ ಆಡಳಿತದ ಜವಾಬ್ದಾರಿ ಎಂಬುದು ಅವರ ನಿಲುವಾಗಿತ್ತು. ಅವರ ಪ್ರಕಾರ ದಬ್ಬಾಳಿಕೆ ಎಂಬುದು ಯೂರೋಪಿನಲ್ಲಿಲ್ಲದ ಆದರೆ ಭಾರತದಲ್ಲಿ ಕಂಡುಬರುವ ಅಂಶವಾಗಿದೆ. ಆದ್ದರಿಂದ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಸಾಂಪ್ರದಾಯಿಕ ಕಂದಾಯ ವಸೂಲಿಗಾರರಾದ ರಾಜರು ಮತ್ತು ಜಮೀನುದಾರರ ಪ್ರಭಾವವನ್ನು ತಗ್ಗಿಸಲು ಪ್ರಯತ್ನಿಸಿದರು. ಆದರೆ ಅದು ಭಾರತೀಯರ ಮೇಲಿನ ಅವರ ಹಿಡಿತವೇ ಆಗಿತ್ತೇ ಹೊರತು ಉದಾರವಾದದ ಅನುಷ್ಠಾನವಾಗಿರಲಿಲ್ಲ. ಇದಕ್ಕಾಗಿ ಅವರು ಜಾರಿಗೆ ತಂದ ಧ್ವಜ, ಸಮವಸ್ತ್ರ, ರಾಜಮುದ್ರೆಗಳು ಮತ್ತು ಬ್ಯಾಡ್ಜ್‌ಗಳು ಅಧಿಕಾರಶಾಹಿಯ ಸಂಕೇತಗಳೇ ಆಗಿದ್ದವು. ವಿಲಿಯಂ ಜೋನ್ಸ್‌ರಂತಹ ಪೌರ್ವಾತ್ಯವಾದಿಗಳು ಆಂಗ್ಲರ ಈ ಯಾಜಮಾನ್ಯ ಪ್ರವೃತ್ತಿಯನ್ನು ಆಗಲೇ ಗುರ್ತಿಸಿದ್ದರು. ಏಕೆಂದರೆ ಸ್ವದೇಶದಲ್ಲಿ ಅವರು ಉದಾರವಾಗಿದ್ದರೂ ಭಾರತದಲ್ಲಿ ದಬ್ಬಾಳಿಕೆಯ ಅಧಿಕಾರವನ್ನೇ ನಡೆಸಿದುದು. ಅಲ್ಲದೇ ಫೋರ್ಟ್‌ ವಿಲಿಯಂ ಕಾಲೇಜಿನ ಉದ್ದೇಶಗಳಲ್ಲಿ ಪ್ರಾನ್ಸಿನ ಮಹಾಕ್ರಾಂತಿಯ ಸಿದ್ಧಾಂತಗಳಲ್ಲಿ ಒಂದಾಗಿದ್ದ ಸ್ವಾತಂತ್ರ್ಯದ ಕಲ್ಪನೆಯು ಭಾರತದಲ್ಲಿ ಹರಡುವುದನ್ನು  ತಡೆಗಟ್ಟುವುದೇ ಆಗಿತ್ತು. ಉದಾ: ಕಾರ್ನವಾಲೀಸ್‌ ಮತ್ತು ಥಾಮಸ್‌ ಮನ್ರೊ ಜಾರಿಗೆ ತಂದ ಜಮೀನುದಾರಿ ಮತ್ತು ರೈತವಾರಿ ಪದ್ಧತಿಗಳು ಅಂತಿಮವಾಗಿ ಕೇಂದ್ರೀಕೃತ ರಾಜಪ್ರಭುತ್ವದ ಲಕ್ಷಣಗಳನ್ನೇ ಒಳಗೊಂಡಿದ್ದವು.

*****


Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ