ಮುಂಬೈ-ಕರ್ನಾಟಕ ಇತಿಹಾಸ ಪುನರ್‌ ರಚನೆಯ ಪುರಾತತ್ವ ಮತ್ತು ಸಾಹಿತ್ಯಾಧಾರಗಳು

    ಗತಿಸಿಹೋದ ಘಟನೆಗಳ ವ್ಯವಸ್ಥಿತ ಅಧ್ಯಯನವೇ ಇತಿಹಾಸ. ಐತಿಹಾಸಿಕ ಮಹತ್ವವುಳ್ಳ ಘಟನೆಗಳನ್ನು ಕಾಲಾನುಕ್ರಮದಲ್ಲಿ ಸಂಯೋಜಿಸುವ ಕಾರ್ಯವನ್ನು ಇತಿಹಾಸದ ಪುನರ್‌ ರಚನೆ ಎನ್ನುವರು. ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಪೋಲಕಲ್ಪಿತ ಅಥವಾ ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್‌ ರಚನೆಗೆ ಬಳಸುವ ಆಧಾರಗಳನ್ನು ಮೂಲಾಧಾರಗಳು ಎಂತಲೂ ಕರೆಯುವರು.  ಇಂತಹ ಮೂಲಾಧಾರಗಳು ಐತಿಹಾಸಿಕ ಮಹತ್ವವನ್ನು ಹೊಂದಿರಬೇಕು. ಯಾವುದೇ ದೇಶದ ಇತಿಹಾಸ ಪುನರ್‌ ರಚನೆಗೆ ವಿವಿಧ ಮೂಲಾಧಾರಗಳ ಅವಶ್ಯಕತೆ ಇರುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚಿಸುವಲ್ಲಿ ಆಧಾರಗಳ ಕೊರತೆಯನ್ನು ವಿದ್ವಾಂಸರು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದ್ದು, ಅವರು ಇತಿಹಾಸದ ಕೃತಿಗಳನ್ನು ರಚಿಸಿಲ್ಲ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಪ್ರಾಚೀನ ಭಾರತದ ಲಭ್ಯ ಸಾಹಿತ್ಯವು ಅಧಿಕ ಪ್ರಮಾಣದಲ್ಲಿ ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಅರಬ್‌ ವಿದ್ವಾಂಸ ಅಲ್ಬೇರೂನಿ (12 ನೆ ಶತಮಾನದ ಆದಿಭಾಗ) “ಭಾರತೀಯರನ್ನು ತಮ್ಮ ಪೂರ್ವ ಇತಿಹಾಸದ ಬಗ್ಗೆ ಕೇಳಿದರೆ ಏಕಪ್ರಕಾರವಾಗಿ ಕತೆ ಹೇಳಲು ತೊಡಗುತ್ತಾರೆ” ಎಂದಿದ್ದಾನೆ. R.C ಮಜೂಮದಾರ್‌ ಅವರೂ ಸಹಾ “ಇತಿಹಾಸ ಕೃತಿಗಳ ರಚನೆಗೆ ಸಂಬಂಧಿಸಿದಂತೆ ಭಾರತೀಯರು ತೋರಿಸಿರುವ ಅನಾಸ್ಥೆಯು ನಮ್ಮ ಸಂಸ್ಕೃತಿಯ ದೊಡ್ಡ ದೋಷವಾಗಿದೆ” ಎಂದಿದ್ದಾರೆ. ಶಾಸನತಜ್ಞ ಜಾನ್‌ ಫ್ಲೀಟ್‌ ಅವರೂ ಸಹಾ “ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇತ್ತು” ಎಂದಿದ್ದಾರೆ. ಭಾರತದ ಇತಿಹಾಸ ರಚನೆಗೆ ಬಳಸುವ ಅನೇಕ ಮೂಲಾಧಾರಗಳಲ್ಲಿ ಕರ್ನಾಟಕದ ಇತಿಹಾಸ ಕುರಿತ ಅನೇಕ ಮಾಹಿತಿಗಳು ಲಭ್ಯವಾಗುತ್ತವೆ. ಉದಾ: ಅಶೋಕನ ಕೆಲವು ಶಾಸನಗಳು ಕರ್ನಾಟಕದಲ್ಲಿ ದೊರೆತಿವೆ. ಕರ್ನಾಟಕದ ಇತಿಹಾಸ ಪುನರ್‌ ರಚನೆಗೆ ಲಭ್ಯವಿರುವ ಮೂಲಾಧಾರಗಳಲ್ಲಿ ಭಾರತದ ಇತಿಹಾಸ ಪುನರ್‌ ರಚನೆಯ ಮೂಲಾಧಾರಗಳಲ್ಲಿರುವಂತೆಯೇ ಅನೇಕ ಸಮಸ್ಯೆಗಳಿರುವುದು ಕಂಡುಬರುತ್ತದೆ.

      ಮೂಲಾಧಾರಗಳಲ್ಲಿ ಐತಿಹಾಸಿಕ   ಮೌಲ್ಯವುಳ್ಳ ಪಳೆಯುಳಿಕೆಗಳು, ಪ್ರಾಚ್ಯ ವಸ್ತುಗಳು, ಶಾಸನಗಳು, ಕಟ್ಟಡಗಳು, ಸ್ಮಾರಕಗಳು, ಹಸ್ತಲಿಪಿಗಳು, ಓಲೆಗರಿಗಳು, ನಾಣ್ಯಗಳು, ದೇಶೀಯ ಮತ್ತು ವಿದೇಶಿಯ ಲೇಖಕರ ಕೃತಿಗಳು, ಪ್ರವಾಸ ಕಥನಗಳು, ಆತ್ಮಕಥನಗಳು, ವಂಶಾವಳಿಗಳು ಇತ್ಯಾದಿಗಳನ್ನು ಗುರ್ತಿಸಲಾಗಿದೆ. ಅಧ್ಯಯನದ ಅನುಕೂಲಕ್ಕಾಗಿ ಅವುಗಳನ್ನು ಕೆಳಕಂಡಂತೆ ವರ್ಗೀಕರಣ ಮಾಡಲಾಗಿದೆ.

ಮೂಲಾಧಾರಗಳ ವರ್ಗೀಕರಣ:- ಮೂಲಾಧಾರಗಳನ್ನು ಪ್ರಮುಖವಾಗಿ  ಎರಡು ವಿಧಗಳಾಗಿ ವರ್ಗೀಕರಣ ಮಾಡಬಹುದು. ಅವುಗಳೆಂದರೆ:-

1.       ಪುರಾತತ್ವ ಆಧಾರಗಳು(Archeological Sources): ಉತ್ಖನನಗಳು, ಶಾಸನಗಳು, ನಾಣ್ಯಗಳು & ಸ್ಮಾರಕಗಳು ಎಂಬ ಉಪವಿಭಾಗಗಳಿವೆ.

2.     ಸಾಹಿತ್ಯದ ಆಧಾರಗಳು (Literary Sources) ಅಥವಾ ಲಿಖಿತ ಆಧಾರಗಳು. ದೇಶೀಯ ಮತ್ತು ವಿದೇಶೀಯ ಬರವಣಿಗೆಗಳು ಎಂಬ ಎರಡು ಉಪವಿಭಾಗಗಳಿವೆ.

 

ಪುರಾತತ್ವ ಆಧಾರಗಳು ಮತ್ತು ಪುರಾತತ್ವ ಶಾಸ್ತ್ರ:- ಪಳೆಯುಳಿಕೆಗಳು, ಶಾಸನಗಳು, ನಾಣ್ಯಗಳು ಮತ್ತು ಸ್ಮಾರಕಗಳು ಹೀಗೆ ಇತಿಹಾಸದ ಪುನರ್‌ರಚನೆಗೆ ಲಭ್ಯವಿರುವ ಅಲಿಖಿತ ರೂಪದ ಆಧಾರಗಳ ಸಂಶೋಧನೆ, ದಾಖಲಿಸುವಿಕೆ, ಅವುಗಳ ವೈಜ್ಞಾನಿಕ ಅಧ್ಯಯನ ಮತ್ತು ಪ್ರಕಟಿಸುವ ಪ್ರಕ್ರಿಯೆಗಳನ್ನು "ಪುರಾತತ್ವ ಶಾಸ್ತ್ರ ಅಥವಾ Archaeology" ಎನ್ನುವರು. ಪುರಾತತ್ವ ಶಾಸ್ತ್ರವು ಒಳಗೊಳ್ಳುವ ಪ್ರಮುಖ ಅಧ್ಯಯನದ ಕ್ಷೇತ್ರಗಳೆಂದರೆ,

A. ಉತ್ಖನನಗಳು:- ಭೂಮಿಯೊಳಗೆ ಹೂತು ಹೋಗಿರುವ ಪ್ರಾಚೀನ ಅವಶೇಷಗಳನ್ನು ವ್ಯವಸ್ಥಿತವಾಗಿ ಅಗೆಯುವ, ದಾಖಲಿಸುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಉತ್ಖನನ ಎನ್ನುವರು. ಇದರಲ್ಲಿ ಮತ್ತೆ ಎರಡು ವಿಧಗಳಿವೆ. ಅವುಗಳೆಂದರೆ:

ಅ. ಸಮತಲ ಉತ್ಖನನ ಮತ್ತು ಆ. ಲಂಬ ಉತ್ಖನನ.

ಮುಂಬೈ-ಕರ್ನಾಟಕ ಭಾಗದಲ್ಲಿ ಧಾರವಾಡ, ಉತ್ತರ ಕನ್ನಡ, ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶಿಲಾಯುಗದ ಮಾನವನ ನೆಲೆಗಳ ಅನ್ವೇಷಣೆ ಮತ್ತು ಉತ್ಖನನಗಳು ನಡೆದಿವೆ.

B. ಶಾಸನಗಳು:- ಇವು ಕರ್ನಾಟಕದ ಇತಿಹಾಸ ಪುನರ್‌ ರಚನೆಗೆ ಬಹುಮುಖ್ಯ ಆಧಾರಗಳಾಗಿವೆ. ಶಾಸನಗಳ ವ್ಯವಸ್ಥಿತ ಅಧ್ಯಯನವನ್ನು ಶಾಸನಶಾಸ್ತ್ರ ಅಥವಾ Epigraphy ಎನ್ನುವರು. ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದಂತೆ ಇದುವರೆಗೆ ಸುಮಾರು ೨೦ ಸಾವಿರದಷ್ಟು ಶಾಸನಗಳು ಲಭ್ಯವಾಗಿವೆ. ಅವುಗಳು ವಿವಿಧ ಭಾಷೆಗಳಲ್ಲಿ ರಚಿತವಾಗಿವೆ. ಶಾಸನಗಳು ಬಂಡೆಗಳು, ಸ್ತಂಭಗಳು, ಭಿತ್ತಿಗಳು, ವಿಗ್ರಹಗಳ ತಳಭಾಗ, ಗುಹೆಗಳು, ಮುದ್ರೆಗಳು, ಲೋಹಪಟಗಳ ಮೇಲೆ ಬರೆಯಲ್ಪಟ್ಟಿವೆ. ಶಾಸನಗಳನ್ನು ಚಿರಸ್ಥಾಯಿ ವಸ್ತುಗಳ ಮೇಲೆ ಬರೆಯಲಾಗುತ್ತಿತ್ತು. ಪಾಕಿಸ್ತಾನದ ಸೊಹಗರ್‌ ನಲ್ಲಿ ಸಿಕ್ಕಿರುವ ಶಾಸನವೇ ಭಾರತದ ಅತ್ಯಂತ ಹಳೆಯ ಶಾಸನ. ಅಶೋಕನ ಶಾಸನಗಳು ಪ್ರಾಚೀನತೆಯಲ್ಲಿ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವನು ಸ್ಥಳೀಯ ಭಾಷೆಗಳಲ್ಲಿ ಶಾಸನಗಳನ್ನು ಬರೆಯಿಸಿದ್ದಾನೆ. ಆರಂಭಿಕ ಶಾಸನಗಳಲ್ಲಿ ಅವನ ಹೆಸರು ನಿಗೂಢವಾಗಿದೆ. ಕರ್ನಾಟಕದಲ್ಲಿ ಅವನ ಒಟ್ಟು ೧೧ ಶಾಸನಗಳು ದೊರೆತಿವೆ. (ಗುಲ್ಬರ್ಗ, ರಾಯಚೂರು, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ) ಸಾ.ಶ.ವ. 1915ರ ಮಸ್ಕಿ ಶಾಸನದಲ್ಲಿ ಬಿರುದುಸಹಿತ ಹೆಸರು ಉಲ್ಲೇಖ; ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು. ಕರ್ನಾಟಕದ ಪ್ರಾಂತ್ಯವು ಅವನ ಶಾಸನಗಳಲ್ಲಿ ಸುವರ್ಣಗಿರಿ ಎಂದು ಉಲ್ಲೇಖಗೊಂಡಿದೆ. ಅವನ ಶಾಸನಗಳಿಂದ ನಿಖರ ಮಾಹಿತಿ ಲಭ್ಯವಾಗಿ ಇತಿಹಾಸ ಪುನರ್‌ ರಚನೆಗೆ ಆಧಾರ ಒದಗಿಸಿವೆ. ಕಾರಣ ಆತನನ್ನು “ಶಿಲಾಶಾಸನಗಳ ಪಿತಾಮಹಾ” ಎನ್ನಲಾಗಿದೆ.

ಶಾಸನಗಳ ವರ್ಗೀಕರಣ:- ಶಾಸನಗಳ ವಿಷಯ ಆಧರಿಸಿ ವರ್ಗೀಕರಣ ಮಾಡಲಾಗಿದೆ. ೧. ಐತಿಹಾಸಿಕ. ೨. ಧಾರ್ಮಿಕ. ೩. ದಾನ ಅಥವಾ ದತ್ತಿ ಮತ್ತು ೪. ಸ್ಮರಣ ಶಾಸನಗಳು ಎಂದು ವರ್ಗೀಕರಣ ಮಾಡಲಾಗಿದೆ.

   ಶಾಸನಗಳು ರಾಜ-ಮಹಾರಾಜರು, ಮಂತ್ರಿಗಳು, ಸೇನಾಧಿಪತಿಗಳು, ಪ್ರಾಂತೀಯ ಅಧಿಕಾರಿಗಳು, ರಾಣಿಯರು, ಶ್ರೀಮಂತರು, ವ್ಯಾಪಾರಿಗಳು, ಧರ್ಮಗುರುಗಳು, ಹೀಗೆ ವಿವಿಧ ವ್ಯಕ್ತಿಗಳಿಂದ ಬರೆಸಲ್ಪಡುತ್ತಿದ್ದವು.

   ಕರ್ನಾಟಕದಲ್ಲಿ ಇದುವರೆಗು ದೊರೆತಿರುವ ಶಾಸನಗಳನ್ನು ಇಂಡಿಯನ್‌ ಆಂಟಿಕ್ವೆರಿ (Indian Antiquary), ಎಪಿಗ್ರಫಿಯ  ಇಂಡಿಕಾ, ಎಪಿಗ್ರಫಿಯ ಕರ್ನಾಟಿಕಾ, South Indian Inscriptions, Mysore archaeological reports ಮತ್ತು  Karnataka Inscriptions ಎಂಬ ಶಾಸನ ಸಂಪುಟಗಳಲ್ಲಿ ಸಂಗ್ರಹಿಸಲಾಗಿದೆ.

ಮುಂಬೈ ಕರ್ನಾಟಕದ ಿತಿಹಾಸ ಪುನರ್‌ರಚಿಸಲು ಅಶೋಕನ ಶಾಸನಗಳು, ಶಾತವಾಹನರ ಶಾಸನಗಳು, ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರ ಶಾಸನಗಳಲ್ಲದೇ ಬಹುಮನಿಗಳು ಮತ್ತು ಆದಿಲ್‌ ಶಾಹಿಗಳ ಕಾಲದ ಪರ್ಷಿಯ ಭಾಷೆಯ ಶಾಸನಗಳೂ ಸಾಕಷ್ಟು ಮಾಹಿತಿಗಳನ್ನು ಒದಗಿಸುತ್ತವೆ. ಅಲ್ಲದೇ ಕೆಳಕಂಡ ಕೆಲವು ಪ್ರಮುಖ ಶಾಸನಗಳು ಒದಗಿಸುವ  ಮಾಹಿತಿಗಳೂ ಈ ಭಾಗದ ಇತಿಹಾಸ ಪುನರ್‌ರಚಿಸಲು ಸಹಾಯಕವಾಗಿವೆ.

1. ಹಲ್ಮಿಡಿ ಶಾಸನ: ಮೊದಲ ಕನ್ನಡದ ಶಾಸನ:

2. ತಾಳಗುಂದದ ಶಾಸನ: ಕದಂಬರ ಕಾಕುಸ್ತವರ್ಮನ ಕುರಿತ ಮಾಹಿತಿ.

3. ಐಹೊಳೆ ಶಾಸನ: ಇಮ್ಮಡಿ ಪುಲಕೇಶಿಯ ಸಾಧನೆಗಳು. ಮೇಗುತಿ ದೇವಾಲಯದ ಪೂರ್ವದ ಗೋಡೆಯ ಮೇಲೆ. ಅವನ ದಂಡನಾಯಕ ರವಿಕೀರ್ತಿಯಿಂದ ರಚಿತ. ಸಂಸ್ಕೃತದಲ್ಲಿ. ನರ್ಮದಾ ನದಿ ಯುದ್ಧದ ಮಾಹಿತಿ. ಶಾಲಿವಾಹನ ಶಕ 556 ರಿಂದ 634 ಎಂಬ ಮಾಃಇತಿ ಕಾಲಗಣನೆಗೆ ಪೂರಕ. 7ನೆ ಶತಮಾನ.

4. ಬಾದಾಮಿ ಶಾಸನ: ಒಂದನೆ ಪುಲಕೇಶಿಯ ಸಾಧನೆಗಳು.

5. ಗದಗ ಶಾಸನ: ಆರನೇ ವಿಕ್ರಮಾದಿತ್ಯನ ಸಾಧನೆಗಳ ಮಾಹಿತಿ.

ಶಾಸನಗಳ ಮಹತ್ವ:- P.B. ದೇಸಾಯಿ- “ಶಾಸನಗಳಿಲ್ಲದಿದ್ದರೆ ನಮ್ಮ ಇತಿಹಾಸದ ಅಧ್ಯಯನವು ಕತ್ತಲೆ ಗವಿಯೊಳಗಿನ ಪ್ರಯಾಣದಂತಿರುತ್ತಿತ್ತು”

1.     ಶಾಸನಗಳಿಂದ ವಂಶಾವಳಿ ಮತ್ತು ಕಾಲಾನುಕ್ರಮಣಿಕೆ ತಿಳಿಯಲು ಸಾಧ್ಯವಿದೆ.

2.     ವಿವಿಧ ಶಕಗಳ ಮಾಹಿತಿಯ ಕಾರಣ ಕಾಲಗಣನಾ ಶಾಸ್ತ್ರದ ಅಧ್ಯಯನಕ್ಕೆ ಇವು ಪೂರಕವಾಗಿವೆ.

3.     ಸಮಕಾಲೀನ ಮತ್ತು ನಿರ್ದಿಷ್ಟ ಮಾಹಿತಿ ಒದಗಿಸುವ ಕಾರಣ ನಂಬಲರ್ಹ ಆಧಾರಗಳು.

4.     ದಿಗ್ವಿಜಯಗಳು, ಯಜ್ಞ-ಯಾಗಾದಿಗಳು, ಪ್ರಮುಖ ಘಟನೆಗಳ ಮಾಹಿತಿ ಇವುಗಳಿಂದ ಲಭ್ಯ.

5.     ರಾಜರುಗಳ ಅಭಿರುಚಿ ಮತ್ತು ವ್ಯಕ್ತಿತ್ವಗಳೂ ಸಹಾ ತಿಳಿದುಬರುತ್ತವೆ.

6.     ರಾಜ-ಮಹಾರಾಜರು ಮಾಡಿದ ಅಭಿವೃದ್ಧಿ ಕಾರ್ಯಗಳ ಮಾಹಿತಿ ತಿಳಿದು ಬರುತ್ತದೆ.

7.     ಸಾಮ್ರಾಜ್ಯಗಳ ಗಡಿಗಳನ್ನು ಗುರ್ತಿಸಲು ಸಾಧ್ಯವಾಗುತ್ತದೆ.

8.     ಸ್ಥಳ ಮತ್ತು ಅವುಗಳ ಮಹತ್ವದ ಬಗ್ಗೆ ತಿಳಿಸುತ್ತವೆ. ಉದಾ: ಅಶೋಕನ ರುಮಿಂಡೈ ಶಾಸನದಿಂದ ಬುದ್ಧನ ಜನ್ಮಸ್ಥಳದ ಮಾಃಇತಿ.

9.     ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಮಾಃಇತಿಗಳ ಲಭ್ಯತೆ. ಆಡಳಿತ ವ್ಯವಸ್ಥೆಗಳ ಮಾಹಿತಿಗಳೂ ಲಭ್ಯ.

10.  ನಿಖರ ಮಾಹಿತಿ ಒದಗಿಸುತ್ತವೆ ಮತ್ತು ದೀರ್ಘಕಾಲ ಉಳಿದುಬರುತ್ತವೆ. ಮಾಃಇತಿ ಬದಲಾವಣೆ ಸುಲಭವಾಗಿ ಸಾಧ್ಯವಿಲ್ಲ. V.A. ಸ್ಮಿತ್‌ “ಶಾಸನಗಳು ನಂಬಿಕಾರ್ಹ ಆಧಾರಗಳು” ಎಂದಿದ್ದಾರೆ.

11.  ಭಾಷಾ ಬೆಳವಣಿಗೆಯ ಅಧ್ಯಯನಕ್ಕೆ ಅವಕಾಶವಿದೆ.

12.  ಕಲಾನೈಪುಣ್ಯತೆ ಮತ್ತು ವೈಜ್ಞಾನಿಕ ಬೆಳವಣಿಗೆಯ ಅಧ್ಯಯನಕ್ಕೂ ಶಾಸನಗಳು ಪೂರಕವಾಗಿವೆ.

ಶಾಸನಗಳ ದೋಷಗಳು:- ಶಾಸನಗಳ ಕೆಲವು ದೋಷಗಳು ಇಂತಿವೆ:

1.     ಬಿರುದುಗಳ ಪುನರಾವರ್ತನೆ.

2.     ಅಧಿಕಾರವಧಿಯ ಗೊಂದಲಗಳು.

3.     ಅತಿಯಾದ ಪ್ರಶಂಸೆ ಮತ್ತು ಉತ್ಪ್ರೇಕ್ಷಿತ ಮಾಃಇತಿಗಳು.

4.     ಸೋಲಿನ ಮಾಹಿತಿಗಳ ನಿರಾಕರಣೆ.

5.     ನಕಲಿ ಶಾಸನಗಳ ಸೃಷ್ಠಿ.

6.     ಸ್ಥಳ ಬದಲಾವಣೆ ಗೊಂದಲಕ್ಕೆ ದಾರಿ.

7.     ಶಾಸನಗಳನ್ನು ಓದುವಾಗಿನ ತೊಡಕುಗಳು.

 

C. ನಾಣ್ಯಶಾಸ್ತ್ರ: ನಾಣ್ಯಶಾಸ್ತ್ರವು ಪುರಾತತ್ವ ಶಾಸ್ತ್ರಾಧಾರಗಳ ಅಧ್ಯಯನದ ಭಾಗವಾಗಿದೆ. “ನಾಣ್ಯಗಳ ವ್ಯವಸ್ಥಿತ ಅಧ್ಯಯನವನ್ನು ನಾಣ್ಯಶಾಸ್ತ್ರ ಅಥವಾ Numismatics ಎನ್ನುವರು.” ಇತರೆ ಮೂಲಗಳಿಂದ ಲಭ್ಯವಾಗುವ ಮಾಹಿತಿಗಳಿಗೆ ನಾಣ್ಯಗಳಿಂದ ಪೂರಕ ಅಂಶಗಳು ದೊರೆಯುತ್ತವೆ. ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ನಾಣ್ಯಗಳೇ ಏಕೈಕ ಲಭ್ಯ ಆಧಾರಗಳಾಗಿವೆ. ಉದಾ: ವಾಯುವ್ಯ ಭಾರತವನ್ನಾಳಿದ ಇಂಡೋ-ಗ್ರೀಕರ (ಸಾ.ಶ.ಪೂ. 1-2 ನೆ ಶತಮಾನಗಳಲ್ಲಿ) ಮೂವತ್ತು ಅರಸರ ಬಗ್ಗೆ ಮಾಹಿತಿ ಲಭ್ಯವಿರುವುದು ಕೇವಲ ನಾಣ್ಯಗಳಿಂದಲೇ. ಪ್ರಾಚೀನ ಕಾಲದಿಂದಲೂ ಅಂದರೆ, ವೈದಿಕ ಕಾಲದಿಂದಲೂ (ಸಾ.ಶ.ಪೂ 1300) ನಾಣ್ಯಗಳ ಬಳಕೆ ಭಾರತದಲ್ಲಿ ಕಂಡುಬರುತ್ತದೆ. ಪಣ, ಕರ್ಶಪಣ, ನಿಷ್ಕ, ಶತಮಾನ, ಕೃಷ್ಣಾಲ ಎಂಬ ನಾಣ್ಯಗಳ ಉಲ್ಲೇಖಗಳು ವೈದಿಕ ಸಾಹಿತ್ಯದಲ್ಲಿ ಕಂಡುಬರುತ್ತವೆ. ಅಲ್ಲದೇ ಮೌರ್ಯರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ದೊರೆತಿವೆ. ಅಂದಿನ ನಾಣ್ಯಗಳು ಗುರುತು ಹಾಕಿದ ಅಂದರೆ Punch marked ನಾಣ್ಯಗಳಾಗಿರುತ್ತಿದ್ದವು. ನಂತರದ ಕಾಲದಲ್ಲಿ ಎರಕ ಹಾಕುವ ನಾಣ್ಯ ಪದ್ಧತಿ ಆರಂಭವಾಯಿತು. ಪ್ರಾಚೀನ ಭಾರತದ ನಾಣ್ಯಗಳನ್ನು ಖಾಸಗಿ ನಾಣ್ಯಗಳೆಂದು ಕೆಲ ಯೂರೋಪಿನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರೂ, ಇತ್ತೀಚಿನ ಸಂಶೋಧನೆಗಳಿಂದ ಅವು ಸಾರ್ವಜನಿಕ ನಾಣ್ಯಗಳೆಂದು ಕಂಡುಬಂದಿದೆ. ಅಂತೆಯೇ ವಾಯುವ್ಯ ಭಾರತವನ್ನಾಳಿದ ಗ್ರೀಕರ ಪ್ರಭಾವದಿಂದ ಭಾರತದ ನಾಣ್ಯ ಪದ್ಧತಿಯಲ್ಲಿ ಕೆಲ ಬದಲಾವಣೆಗಳುಂಟಾದವು. ರಾಜರ ಹೆಸರುಗಳ ನಮೂದಿಸುವಿಕೆ, ಅವರ ಮುಖಮುದ್ರೆಗಳ ರಚನೆ, ತಂದೆಯ ಹೆಸರುಗಳನ್ನು ತಮ್ಮ ಹೆಸರಿನೊಂದಿಗೆ ಮುದ್ರಿಸುವುದು, ಕಲಾತ್ಮಕ ನಾಣ್ಯಗಳ ರಚನೆಯಂತಹ ಬದಲಾವಣೆಗಳು ಭಾರತೀಯ ನಾಣ್ಯ ಪದ್ಧತಿಯಲ್ಲಿ ಕಂಡುಬಂದವು. ನಂತರದ ಕಾಲದಲ್ಲಿ ಆಳಿದ ಕುಶಾಣರು, ಶಕರು ಸಹಾ ತಮ್ಮದೇ ನಾಣ್ಯಗಳನ್ನು ಟಂಕಿಸಿದರು. ಕುಶಾಣರು ದಿನಾರ ಎಂಬ ಚಿನ್ನದ ನಾಣ್ಯವನ್ನು ಮೊದಲಸಲ ಹೊರಡಿಸಿದರು. ಗುಪ್ತರಿಗಿಂತ ಮೊದಲು ಉತ್ತರ ಭಾರತವನ್ನಾಳಿದ ಯೌಧೇಯ ಗಣರಾಜ್ಯದ ಮಾಹಿತಿಯು “ಯೌಧೇಯಗಣಸ್ಯ ಜಯಃ ಎಂಬ ಬರಹವುಳ್ಳ ನಾಣ್ಯಗಳಿಂದ ತಿಳಿದು ಬರುತ್ತದೆ.

   ಅಂತೆಯೇ ಮುಂಬೈ-ಕರ್ನಾಟಕ ಭಾಗದಲ್ಲಿಯೂ ಸಹ ಪ್ರಾಚೀನ ಕಾಲದಿಂದ ಆಳ್ವಿಕೆ ಮಾಡಿದ ರಾಜಮನೆತನಗಳು ತಮ್ಮದೇ ಆದ ನಾಣ್ಯಗಳನ್ನು ಟಂಕಿಸಿರುವುದು ಕಂಡುಬರುತ್ತದೆ. ಕನ್ನಡದ ಮೊದಲ ರಾಜಮನೆತನವಾದ ಕದಂಬರು ʼಪದ್ಮಟಂಕʼ ಎಂಬ ಚಿನ್ನದ ನಾಣ್ಯವನ್ನು ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ನಂತರ ಆಳಿದ ಬಾದಾಮಿಯ ಚಾಲುಕ್ಯರ ನಾಣ್ಯಗಳ ಲಭ್ಯತೆ ಅತಿ ವಿರಳ. ಕಲ್ಯಾಣದ ಚಾಲುಕ್ಯರು, ವಿಜಯನಗರದ ಅರಸರು, ಬಹಮನಿಗಳು ಮತ್ತು ಆದಿಲ್‌ ಶಾಹಿಗಳ  ಕಾಲದ ಅನೇಕ ನಾಣ್ಯಗಳು ಅಧ್ಯಯನಕ್ಕೆ ದೊರೆತಿದ್ದರೂ ಅವುಗಳ ಪ್ರಮಾಣ ಕಡಿಮೆ ಇದೆ.

ನಾಣ್ಯಗಳ ಅಧ್ಯಯನದ ಮಹತ್ವವನ್ನು ಕೆಳಕಂಡ ಅಂಶಗಳಿಂದ ಗುರ್ತಿಸಬಹುದು:-

1.    ನಾಣ್ಯಗಳ ಅಧ್ಯಯನದಿಂದ ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ಆಧಾರಗಳು ಲಭ್ಯ.

2.    ಅಂದಿನ ಕಾಲದ ಆರ್ಥಿಕ ಸ್ಥಿತಿ-ಗತಿ ತಿಳಿಯಲು ಸಾಧ್ಯವಾಗುತ್ತದೆ. ಉದಾ: ಗುಪ್ತರ ಆರಂಭದ ಮತ್ತು ಕೊನೆಯ ಕಾಲದ ನಾಣ್ಯಗಳು.

3.    ಅವುಗಳ ಮೇಲಿನ ಭಾಷೆಗಳ ಅಧ್ಯಯನದಿಂದ ಶಾಸನಗಳ ಭಾಷೆ ಮತ್ತು ಲಿಪಿ ತಿಳಿಯಲು ಸಾಧ್ಯವಾಗುತ್ತದೆ.

4.    ರಾಜ್ಯ ಮತ್ತು ಸಾಮ್ರಾಜ್ಯಗಳ ಗಡಿಗಳನ್ನು ಗುರ್ತಿಸಬಹುದು.

5.    ರಾಜರುಗಳ ಧಾರ್ಮಿಕ ಆಸಕ್ತಿಗಳು ಮತ್ತು ಅಭಿರುಚಿಗಳು ತಿಳಿದುಬರುತ್ತವೆ. ಉದಾ: ಸಮುದ್ರಗುಪ್ತನ ನಾಣ್ಯಗಳು.

6.    ಲೋಹಶಾಸ್ತ್ರದ ಬೆಳವಣಿಗೆಯ ಅಧ್ಯಯನಕ್ಕೂ ಇವು ಅವಕಾಶ ಒದಗಿಸುತ್ತವೆ.

7.    ವಿದೇಶಗಳೊಂದಿಗಿನ ಸಂಬಂಧಗಳ ಮಾಹಿತಿ ತಿಳಿದುಬರುತ್ತವೆ.

 

D. ಸ್ಮಾರಕಗಳು:- ಪ್ರಾಚೀನ ಕಾಲದ ದೇವಾಲಯಗಳು, ಕೋಟೆಗಳು, ಬಸದಿಗಳು, ಚೈತ್ಯಗಳು, ಸ್ತೂಪಗಳು, ಸ್ತಂಭಗಳು, ವಿಗ್ರಹಗಳು, ಮಸೀದಿಗಳು, ಸಮಾಧಿಗಳು ಇವೇ ಮೊದಲಾದವು ಸ್ಮಾರಕಗಳಾಗಿವೆ. ಇವುಗಳ ಅಧ್ಯಯನದಿಂದ ಇತಿಹಾಸದ ಪುನರ್‌ ರಚನೆಗೆ ವಿವಿಧ ಮಾಃಇತಿಗಳು ಲಭ್ಯವಾಗುತ್ತವೆ. ಅವುಗಳು ದೀರ್ಘಕಾಲದಿಂದ ಉಳಿದು ಬಂದಿದ್ದು ಮೂಕಸಾಕ್ಷಿಗಳಾಗಿ ಇತಿಹಾಸದ ಮಹತ್ವವನ್ನು ಸಾರುತ್ತವೆ.

ಮುಂಬೈ ಕರ್ನಾಟಕದ ಕೆಲವು ಸ್ಮಾರಕಗಳು ಕೆಳಕಂಡಂತಿವೆ:

ಮೌರ್ಯರ ಕಾಲದ ಸನ್ನತಿ ಮತ್ತು ಕಣಗಾನಹಳ್ಳಿಯ ಸ್ಮಾರಕಗಳು, ಬನವಾಸಿ ಭಾಗದಲ್ಲಿನ ಬೌದ್ಧ ಗುಹಾಲಯಗಳು, ಶಾತವಾಹನರ ಕಾಲದ ಗುಹಾಂತರ ದೇವಾಲಯಗಳು, ಕದಂಬರ ಕಾಲದ ಬನವಾಸಿ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಹಲಸಿಗಳಲ್ಲಿನ ದೇವಾಲಯಗಳು, ಬಾದಾಮಿ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರ ಕಾಲದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗದಗ, ಲಕ್ಕುಂಡಿ, ಕಲ್ಯಾಣ ಇತ್ಯಾದಿಗಳಲ್ಲಿನ ಅವರ ಕಾಲದ ಸ್ಮಾರಕಗಳು, ಅಂತೆಯೇ ಮುಂಬೈ ಕರ್ನಾಟಕ ಭಾಗದಲ್ಲಿರುವ ರಾಷ್ಟ್ರಕೂಟರ ಕಾಲದ ದೇವಾಲಯಗಳು, ಬಹಮನಿಗಳು ಮತ್ತು ಆದಿಲ್‌ ಶಾಹಿಗಳ  ಕಾಲದ ಅರಮನೆಗಳು, ಕೋಟೆಗಳು, ಮಸೀದಿಗಳು ಇತ್ಯಾದಿಗಳು ಈ ಭಾಗದ ಸ್ಮಾರಕಗಳಾಗಿವೆ.

   ಅಲ್ಲದೇ ಈ ಭಾಗದಲ್ಲಿನ ಬೌದ್ಧ ಧರ್ಮದ ಅಸ್ಥಿತ್ವದ ಬಗ್ಗೆ ಐಹೊಳೆ, ಬಾದಾಮಿ, ಬನವಾಸಿ &:;ಕೋಳಿವಾಡಗಳಲ್ಲಿನ ಬೌದ್ಧರ ವಿಹಾರ, ಚೈತ್ಯಗಳ ಅವಶೇಷಗಳು ಹಾಗೂ ಜೈಣ ಧರ್ಮದ ಬಗ್ಗೆ  ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಳ್ಳೂರು, ತೇರದಾಳ, ಲಕ್ಕುಂಡಿ, ಬೆಳಗಾವಿ, ಹಲಸಿ, ಅಮ್ಮಣಗಿಗಳಲ್ಲಿನ ಪುರಾತತ್ವ ಸ್ಮಾರಕಗಳು ಪೂರಕ ಮಾಹಿತಿ ಒದಗಿಸುತ್ತವೆ.

ಸ್ಮಾರಕಗಳ ಮಹತ್ವ:- ಸ್ಮಾರಕಗಳ ಅಧ್ಯಯನದಿಂದ ಕೆಳಕಂಡ ಅನುಕೂಲಗಳಿದ್ದು, ಅವುಗಳ ಮಹತ್ವವನ್ನು ತಿಳಿಸುತ್ತವೆ.

1.    ವಿವಿಧ ವಾಸ್ತುಶಿಲ್ಪದ ಲಕ್ಷಣಗಳನ್ನು ತಿಳಿಯಬಹುದಾಗಿದೆ.

2.    ಶಿಲ್ಪಗಳ ಅಧ್ಯಯನವು ಶಿಲ್ಪಶೈಲಿಗಳ ಅಧ್ಯಯನಕ್ಕೆ ಮಹತ್ವದ ಆಧಾರಗಳಾಗಿವೆ.

3.    ನಿರ್ಮಾಣ ಕಲೆಯಲ್ಲಿ ಪ್ರಾಚೀನ ಕಾಲದಿಂದ ಆಗಿರುವ ಬದಲಾವಣೆಗಳನ್ನು ಅರಿಯಬಹುದು.

4.    ಅಂದಿನ ಜನರ ಹವ್ಯಾಸಗಳು, ಆಭರಣಗಳು, ಉಡುಗೆ ಮೊದಲಾದ ಸಾಮಾಜಿಕ ಸ್ಥಿತಿ-ಗತಿ ತಿಳಿಯಲು ಇವು ಪ್ರಮುಖ ಆಧಾರಗಳಾಗಿವೆ.

5.    ಶಿಲ್ಪಿಗಳ ನಿಪುಣತೆ, ಕಲಾಪ್ರಜ್ಞೆ ಮೊದಲಾದವುಗಳನ್ನು ಸ್ಮಾರಕಗಳ ಅಧ್ಯಯನದಿಂದ ತಿಳಿಯಬಹುದು.

   ಆದರೆ, ನಮ್ಮಲ್ಲಿನ ಐತಿಹಾಸಿಕ ಪ್ರಜ್ಞೆಯ ಕೊರತೆಯ ಕಾರಣ ಸ್ಮಾರಕಗಳು ಹಾಳಾಗುತ್ತಿದ್ದು ಇದು ನಮ್ಮ ಸಂಸ್ಕೃತಿಯ ನಾಶವಲ್ಲದೇ ಇತಿಹಾಸ ಪುನರ್‌ ರಚನೆಗೆ ತೊಡಕುಗಳನ್ನು ಉಂಟುಮಾಡುತ್ತದೆ.

*****

 

ಮುಂಬೈ-ಕರ್ನಾಟಕದ ಇತಿಹಾಸ ಪುನರ್‌ರಚನೆಯ ಸಾಹಿತ್ಯಾಧಾರಗಳು:-

   ಯಾವುದೇ ದೇಶ ಅಥವಾ ರಾಜಮನೆತನಗಳ ಇತಿಹಾಸ ಪುನರ್‌ರಚನೆಗೆ ವಿವಿದ ಆಧಾರಗಳು ಲಭ್ಯವಿರುವಂತೆ ಮುಂಬೈ-ಕರ್ನಾಟಕದ ಇತಿಹಾಸ ಪುನರ್‌ರಚನೆಗೂ ಪುರಾತತ್ವ ಆಧಾರಗಳ ಜೊತೆಗೆ ಲಿಖಿತ ಅಥವಾ ಸಾಹಿತ್ಯಾಧಾರಗಳು ಸಹಾ ಲಭ್ಯವಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದವು. ಮರಾಠಿ ಭಾಷೆಯು ಮಧ್ಯಯುಗದಲ್ಲಿ ಬಳಕೆಗೆ ಬಂದಿತು. ಈ ಭಾಷೆಗಳಲ್ಲಿ  ಲಿಖಿತ ಆಧಾರಗಳು ಲಭ್ಯವಿದ್ದರೂ ಇಲ್ಲಿ ವೈದಿಕ ಸಾಹಿತ್ಯ ಅಲಭ್ಯ. ಆದರೂ ಲಭ್ಯವಿರುವ ಕೃತಿಗಳನ್ನು ದೇಶೀಯ ಸಾಹಿತ್ಯಾಧಾರಗಳು (ಧಾರ್ಮಿಕ, ಐತಿಹಾಸಿಕ ಮತ್ತು ವಿದೇಶಿಯ ಸಾಹಿತ್ಯಾಧಾರಗಳೆಂದು ವಿಭಜಿಸಿಕೊಳ್ಳಬಹುದು. ಕೆಲವು ಜೈನ ಮತ್ತು ಬೌದ್ಧ ದಾಖಲೆಗಳಲ್ಲಿ ಕರ್ನಾಟಕ ಕುರಿತ ಮಾಹಿತಿಗಳು ಲಭ್ಯವಿವೆ. ಉದಾ: ಭದ್ರಬಾಹುವಿನ ಬರವಣಿಗೆಗಳಲ್ಲಿ ಶ್ರವಣಬೆಳಗೊಳದ ಮಾಹಿತಿ ಮತ್ತು ಹಾಲನ ಗಾಥಾಸಪ್ತಶತಿಯಲ್ಲಿ ಕರ್ನಾಟಕದ ವಿವರಗಳು ಲಭ್ಯ. ಅಂತೆಯೇ, ವಿದೇಶೀಯರ ಬರವಣಿಗೆಗಳೂ ಸಹಾ ಇಲ್ಲಿನ ಇತಿಹಾಸ ಪುನರ್‌ರಚನೆಗೆ ಲಭ್ಯವಿವೆ. ಅಲ್ಲದೇ ಆಧುನಿಕ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ  ಭಾಗವಹಿಸಿದ ಚಳವಳಿಕಾರರು ರಚಿಸಿದ ಕೃತಿಗಳೂ ಸಹ ಈ ಭಾಗದ ಇತಿಹಾಸ  ರಚನೆಗೆ ಆಧಾರಗಳಾಗಿವೆ. ಕೆಳಗೆ ಮುಂಬೈ ಕರ್ನಾಟಕದ ಇತಿಹಾಸ ಪುನರ್‌ರಚನೆಗೆ ಲಭ್ಯವಿರುವ ಕೆಲವು ಕೃತಿ, ಕರ್ತೃ ಮತ್ತು ಒದಗಿಸುವ ಮಾಹಿತಿಗಳ ವಿವರಗಳನ್ನು ನೀಡಲಾಗಿದೆ.

ಕನ್ನಡ ಕೃತಿಗಳು

  1. ಕವಿರಾಜಮಾರ್ಗ – ಶ್ರೀವಿಜಯ – ಪ್ರಾಚೀನ ಕರ್ನಾಟಕದ ವಿಸ್ತಾರ
  2. ವಿಕ್ರಮಾರ್ಜುನ ವಿಜಯ – ಪಂಪ - ರಾಷ್ಟ್ರಕೂಟ ಅರಸರ ಮಾಹಿತಿ
  3. ಗದಾಯುದ್ಧ – ರನ್ನ – ಕಲ್ಯಾಣದ ಚಾಲುಕ್ಯರ ಮಾಹಿತಿ
  4. ಕೆಳದಿನೃಪ ವಿಜಯಂ – ಲಿಂಗಣ್ಣ ಕವಿ – ಕೆಳದಿ ಮತ್ತು ವಿಜಯನಗರ ಕುರಿತ ವಿವರಗಳು
  5. ವಚನ ಸಾಹಿತ್ಯ – ವಚನಕಾರರು – ಅಂದಿನ ಕಾಲದ ಸಾಮಾಜಿಕ, ಆರ್ತಿಕ, ಧಾರ್ಮಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳ ವಿವರಗಳನ್ನು ಒದಗಿಸುತ್ತವೆ.

ಸಂಸ್ಕೃತ ಭಾಷೆಯ ಕೃತಿಗಳು

  1. ವಿಕ್ರಮಾಂಕದೇವ ಚರಿತಂ – ಬಿಲ್ಹಣ – ಕಲ್ಯಾಣದ ಚಾಲುಕ್ಯರ ಆರನೆ ವಿಕ್ರಮಾದಿತ್ಯನ ಸಾಧನೆಗಳು
  2. ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ತ ಚಿಂತಾಮಣಿ – ಮೂರನೇ ಸೋಮೇಶ್ವರ (ಕಲ್ಯಾಣದ ಚಾಲುಕ್ಯರ ಅರಸ) – ವಿವಿದ ವಿಷಯಗಳ ವಿಶ್ವಕೋಶದಂತಿದೆ

ಇಸ್ಲಾಂ ಬರವಣಿಗೆಗಳು:-

  1. ತಬರಿಯ ಬರವಣಿಗೆಗಳು – ಇಮ್ಮಡಿ ಪುಲಕೇಶಿ ಮತ್ತು ಇಮ್ಮಡಿ ಖುಸ್ರೋನ ರಾಯಭಾರ ಸಂಬಂಧಗಳ ವಿವರಗಳು
  2. ಸುಲೇಮಾನ್‌ ಬರವಣಿಗೆಗಳು (ಸಾ.ಶ.ವ. 851) – ರಾಷ್ಟ್ರಕೂಟರ ಅಮೋಘವರ್ಷನ ಆಳ್ವಿಕೆಯ ಮಾಹಿತಿ
  3. ತಾರೀಖ್‌ ಎ ಫೆರಿಶ್ತಾ ಅಥವಾ ಗುಲ್ಶನ್‌ ಎ ಇಬ್ರಾಹಿಮಿ – ಫೆರಿಶ್ತಾ – ಆದಿಲ್‌ ಶಾಹಿಗಳ ಮಾಹಿತಿ
  4. ಫತು-ಉಸ್-ಸಲಾತಿನ್‌ - ಇಸಾಮಿ – ಬಹಮನಿ ಸುಲ್ತಾನರ ಮಾಹಿತಿ
  5. ಬುಹ್ರಾನ್‌ ಎ ಮಾಸೀರ್‌ - ತಬಾ ತಬಾ - ಬಹಮನಿ ಸುಲ್ತಾನರ ಮಾಹಿತಿ
  6. ಪರ್ಷಿಯಾ ಭಾಷೆಯಲ್ಲಿರುವ ಸಿರಾಜಿಯ ತಜ್‌ಕಿರತ್‌ ಉಲ್‌ ಮುಲ್ಕ್‌, ಹುಸೇನ್‌ ಚೌಕಿಯ ಜಾಫರ್‌ನಾಮಾ ನಿಜಾಮ್‌ಶಾಹಿ, ಎರಡನೇ ಅಲಿ ಆದಿಲ್‌ ಶಾಹಿಯ ಬಗ್ಗೆ ತಿಳಿಸುವ ಅಲಿನಾಮಾ, ಮುಲ್ಲಾ ನುಸ್ರುದ್ದಿಯ ತಾರೀಖ್‌ ಎ ಇಸ್ಕಂದರಿ ಹಾಗೂ ಜುಬೇರಿ ಬರೆದಿರುವ ಬಸಾತಿನ್-‌ಉಸ್-ಸಲಾತಿನ್‌  ಎಂಬ ಕೃತಿಗಳು ಆದಿಲ್‌ ಶಾಹಿಗಳ ಬಗೆಗಿನ ಆಧಾರ ಕೃತಿಗಳಾಗಿವೆ.

ವಿದೇಶೀಯ ಬರವಣಿಗೆಗಳು:-

  1. ಪೆರಿಪ್ಲಸ್‌ ಆಫ್‌ ದಿ ಎರಿತ್ರಿಯನ್‌ ಸೀ – ಅನಾಮಧೇಯ (ಲ್ಯಾಟೀನ್) – ಪ್ರಾಚೀನ ಕರ್ನಾಟಕದ ಬಂದರುಗಳ ಮತ್ತು ವ್ಯಾಪಾರ ಕೇಂದ್ರಗಳ ಮಾಹಿತಿ
  2. ಭೂವಿವರಣೆ ಅಥವಾ The Geography – ಟಾಲೆಮಿ (ಗ್ರೀಕ್) – ಕರ್ನಾಟಕದ ವಿದೇಶಿ ವ್ಯಾಪಾರದ ಕುರಿತ ಮಾಹಿತಿ
  3. ಸಿ-ಯೂ-ಕಿ - ಹು-ಎನ್-ತ್ಸಾಂಗ್‌ ನರ್ಮದಾ ನದಿ ಕಾಳಗ, ಬಾದಾಮಿ ಮತ್ತು ಬನವಾಸಿಯ ವಿವರಗಳು
  4. ನಿಕೆಟಿನ್‌ - ರಷ್ಯಾ – ಬಹಮನಿಗಳ ಆಸ್ಥಾನದ ಭೇಟಿ

ಇನ್ನಿತರ ಬರವಣಿಗೆಗಳು:-

  1. ಮರಾಠರ ಪೇಶ್ವಾ ಕಛೇರಿಯಲ್ಲಿನ ದಫ್ತರಗಳು (ಕಡತಗಳು)
  2. ಬ್ರಿಟಿಷರ ಕಂಪೆನಿ ಕಛೇರಿಯ ಪತ್ರ ವ್ಯವಹಾರಗಳು.

**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources