ಅಧ್ಯಾಯ 12. ನೊಂದಾಯಿತ ಕಾರ್ಮಿಕರ ಆರಂಭ. ಅರ್ಥ, ಸ್ವರೂಪ, ಕಾರಣಗಳು, ಜೀವನ ವಿಧಾನ.

I. ಪೀಠಿಕೆ:- ನೊಂದಾಯಿತ ಕಾರ್ಮಿಕರ ವ್ಯವಸ್ಥೆಯು ಬ್ರಿಟಿಷ್ಸಾಮ್ರಾಜ್ಯಶಾಹಿ ಆರ್ಥಿಕ ನೀತಿಯ ಒಂದು ಭಾಗವಾಗಿತ್ತು. ಬ್ರಿಟಿಷರು ಸಾಮ್ರಾಜ್ಯ ವಿಸ್ತರಣೆಯ ಜೊತೆಗೆ ಜಗತ್ತಿನ ವಿವಿಧೆಡೆಗಳಲ್ಲಿ ಕೃಷಿ ಭೂಮಿಗಳ ಅಭಿವೃದ್ಧಿ ಮತ್ತು ಕೃಷಿಯ ವಾಣೀಜ್ಯೀಕರಣದಲ್ಲಿ ತೊಡಗಿದರು. ಅಂದರೆ ಅಮೆರಿಕಾ, ವೆಸ್ಟ್‌ ಇಂಡೀಸ್‌ ದ್ವೀಪಗಳು, ದಕ್ಷಿಣ ಅಮೆರಿಕಾದ ರಾಜ್ಯಗಳು ಮತ್ತು ಆಸ್ಟ್ರೇಲಿಯ ಬಳಿಯ ದ್ವೀಪಗಳು ಅವುಗಳಲ್ಲಿ ಸೇರಿದ್ದವು.  ಹೀಗೆ ಅವರು ಅಭಿವೃದ್ಧಿಪಡಿಸಿದ ತಮ್ಮ ಕೃಷಿ ಭೂಮಿಗಳಲ್ಲಿ ದುಡಿಯಲು ಕಾರ್ಮಿಕರ ಅವಶ್ಯಕತೆ ಉಂಟಾಯಿತು. ಅದಕ್ಕಾಗಿ ವಾಣಿಜ್ಯ ಬೆಳೆಗಳ ಕೃಷಿಗೆ ಆರಂಭದಲ್ಲಿ ಆಫ್ರಿಕಾದ ಗುಲಾಮರ ಪೂರೈಕೆಗೆ ಬ್ರಿಟಿಷರು ತೊಡಗಿದರು. ಆಫ್ರಿಕಾದ ಕಪ್ಪು ಜನರನ್ನು (ನಿಗ್ರೊಗಳು) ಅದಕ್ಕಾಗಿ ಪ್ರಾಣಿಗಳ ರೀತಿಯಲ್ಲಿ ಹಡಗುಗಳಲ್ಲಿ ಅಮೆರಿಕಾ ಖಂಡಗಳಿಗೆ ಸಾಗಿಸಲಾಯಿತು. ಆದರೆ 19ನೆ ಶತಮಾನದ ಆದಿಯ ಲ್ಲಿ ಗುಲಾಮಗಿರಿಯ ವಿರುದ್ಧ ಇಂಗ್ಲೆಂಡಿನಲ್ಲಿ ವ್ಯಕ್ತವಾದ ಪ್ರತಿಭಟನೆಗಳು ಮತ್ತು ಅದರಿಂದಾಗಿ ಗುಲಾಮಗಿರಿಯನ್ನು ರದ್ದತಿಗೆ ಜಾರಿಗೆ ಬಂದ ಕಾಯ್ದೆಗಳ ಕಾರಣ ಆಫ್ರಿಕಾದ ಗುಲಾಮರ ಪೂರೈಕೆನಿಂತುಹೋಯಿತು.  ಇದರಿಂದಾಗಿ ಗುಲಾಮರ ಪೂರೈಕೆಗಾಗಿ ಬ್ರಿಟಿಷರು ಬದಲಿ ವ್ಯವಸ್ಥೆಗಾಗಿ ಚಿಂತಿಸತೊಡಗಿದರು. ಅದಕ್ಕಾಗಿ ಗುಲಾಮಗಿರಿಯಿಂದ ಬಿಡುಗಡೆಗೊಂಡ ನೀಗ್ರೊಗಳನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು.. ಆದರೆ 1838 ವೇಳೆಗೆ ಪದ್ಧತಿಯನ್ನೂ ಮಾರಿಷಸ್ಮತ್ತು ವೆಸ್ಟ್ಇಂಡೀಸ್ಗಳಲ್ಲಿ ನಿಷೇಧಿಸಲಾಯಿತು. ಏಕೆಂದರೆ ಆಗಲೂ ಸಹ ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಲಾಗುತ್ತಿತ್ತು. ಇದರಿಂದಾಗಿ ಬ್ರಿಟಿಷ್ಸರ್ಕಾರ ತನ್ನ ಭೂಮಾಲೀಕರಿಗೆ ಜಮೀನುಗಳಲ್ಲಿ ದುಡಿಯುವ ಕಾರ್ಮಿಕರಿಗಾಗಿ ಬದಲಿ ವ್ಯವಸ್ಥೆ ಮಾಡಬೇಕಾಯಿತು.

A. ಬದಲಿ ವ್ಯವಸ್ಥೆ?:- ಮಾರಿಷಸ್‌, ಫಿಜಿ, ಸುರಿನಾಮ್‌, ಟ್ರಿನಿಡಾಡ್‌, ವೆಸ್ಟ್ಇಂಡೀಸ್ಮೊದಲಾದ ನೆಲೆಗಳಿಗೆ ಪೂರ್ವ ಏಷ್ಯಾದ ಕಾರ್ಮಿಕರ ರವಾನೆ ಮಾಡಲಾಯಿತು. ಆರಂಭದಲ್ಲಿ ಚೀನಿಯರನ್ನು ಇದಕ್ಕಾಗಿ  ರವಾನೆ ಮಾಡಲಾಯಿತು. ಆದರೆ ಚೀನಿಯರು ಬಹುಬೇಗನೆ ಅಲ್ಲಿನ ಕೆಲಸಗಳನ್ನು ತೊರೆದು ತಮ್ಮದೇ ಆದ ವ್ಯಾಪಾರ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಗುಲಾಮಗಿರಿಯಿಂದ ಹೊರಬಂದರು. ನಂತರ ಬ್ರಿಟಿಷರು ಭಾರತದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿನ ಬಡ ಭೂರಹಿತ ಮತ್ತು ಕೃಷಿ ಕಾರ್ಮಿಕರನ್ನು ತಮ್ಮ ವಸಾಹತುಗಳಿಗೆ ಪೂರೈಕೆ ಮಾಡತೊಡಗಿದರು. ಅದಕ್ಕಾಗಿ ಉತ್ತರ ಪ್ರದೇಶ, ಬಿಹಾರ, ಬಂಗಾಳ, ಮದ್ರಾಸು ಮತ್ತು ಆಂಧ್ರ ಪ್ರದೇಶಗಳಿಂದ ಜನರನ್ನು ಆಕರ್ಷಿಸಲಾಯಿತು.

II. ನೊಂದಾಯಿತ ಕಾರ್ಮಿಕರ ಅರ್ಥ?:- ಬ್ರಿಟಿಷರ ಕೃಷಿ ಭೂಮಿಗಳಲ್ಲಿ ಕನಿಷ್ಠ ಐದು ವರ್ಷಗಳ ಕಾಲ ದುಡಿಯಲು ಒಪ್ಪಿ ಷರತ್ತಿಗೊಳಪಟ್ಟು ಅವರ ವಸಾಹತುಗಳಿಗೆ ತೆರಳಿದ ಕಾರ್ಮಿಕರನ್ನೇ ನೊಂದಾಯಿತ ಕಾರ್ಮಿಕರು ಎಂದು ಕರೆಯಲಾಗಿದೆ. ಪೂರ್ವ ಏಷ್ಯಾದಿಂದ ಮೊದಲ ನೊಂದಾಯಿತ ಕಾರ್ಮಿಕರ ತಂಡವು 1834ರಲ್ಲಿ ಮಾರಿಷಸ್ಗೆ  ರವಾನೆಗೊಂಡಿತು. ಅದಕ್ಕಾಗಿ ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ಉಪಯೋಗಿಸಲಾಯಿತು. ಪರಿಣಾಮವಾಗಿ 1838 ನಂತರ ಪೂರ್ವ ಏಷ್ಯಾದಿಂದ ತಮ್ಮ ವಸಾಹತುಗಳಿಗೆ ನೊಂದಾಯಿತ ಕಾರ್ಮಿಕರನ್ನು ರವಾನಿಸಲು ಬ್ರಿಟಿಷ್ಸರ್ಕಾರದಿಂದ ಅನುಮತಿ ದೊರೆಯಿತು. ಕಾಲಕ್ರಮದಲ್ಲಿ ಮೇಲೆ ತಿಳಿಸಿದಂತೆ ಭಾರತದಿಂದಲೂ ಈ ಪದ್ಧತಿಯಲ್ಲಿ ದುಡಿಯಲು  ಜನರನ್ನು ಕಳುಹಿಸಲಾಯಿತು.

III. ನೊಂದಾಯಿತ ಕಾರ್ಮಿಕರ ವ್ಯವಸ್ಥೆಯ ಆರಂಭಿಕ ಸ್ವರೂಪ:- ಭಾರತದ ನೊಂದಾಯಿತ ಕಾರ್ಮಿಕರ ವ್ಯವಸ್ಥೆಯು ಖಾಸಗಿಯಾಗಿರದೇ ಸರ್ಕಾರದಿಂದಲೇ ವ್ಯವಸ್ಥೆಗೊಳಿಸಿದ್ದಾಗಿತ್ತು. ಆದರೆ ಅದಕ್ಕಾಗಿ 1870ರವರೆಗೆ ಯಾವುದೇ ರೀತಿಯ ನಿರ್ದಿಷ್ಟ ನೀತಿ-ನಿಯಮಗಳು ಇರಲಿಲ್ಲ. ನಂತರ ಕಾರ್ಮಿಕರ ನೊಂದಣಿಗೆ ಕೆಲವು ನಿಯಮಗಳ ರಚನೆ ಮಾಡಲಾಯಿತು. ಅವುಗಳಲ್ಲಿ ದುಡಿಮೆಯ ಸ್ವರೂಪ, ಕೂಲಿಯ ಪ್ರಮಾಣ, ವೈದ್ಯಕೀಯ ಸೌಲಭ್ಯ, ವಸತಿ ಸೌಲಭ್ಯ ಮತ್ತು ಕರಾರು ಅವಧಿ ಮುಗಿದ ನಂತರ ಸ್ವದೇಶಕ್ಕೆ ಮರಳಲು ಅವಕಾಶಗಳಂತಹ ವಿವಿಧ ನಿಯಮಗಳ ಸೇರ್ಪಡೆ ಮಾಡಲಾಯಿತು. ಹೀಗೆ ನೊಂದಾಯಿತ ಕಾರ್ಮಿಕರ ಪೂರೈಕೆಗಾಗಿ ನಿಯಮಗಳು ರಚನೆಗೊಂಡ ನಂತರ ಅಂತಹ ಕಾರ್ಮಿಕರ ಪೂರೈಕೆಗಾಗಿ ಭಾರತದಲ್ಲಿ ಮಧ್ಯವರ್ತಿಗಳು ಮತ್ತು ಏಜೆಂಟರು ಹುಟ್ಟಿಕೊಂಡರು. ಹೀಗೆ ಮಧ್ಯವರ್ತಿಗಳಿಂದ ನೊಂದಣಿಗೆ ಒಳಗಾದ ಕಾರ್ಮಿಕರನ್ನು ದೂರದ ದೇಶಗಳಿಗೆ ಹಡಗುಗಳಲ್ಲಿ ಸಾಗಿಸಲಾಗುತ್ತಿತ್ತು. ಇಂತಹ ಸಾಗರ ಪ್ರಯಾಣಗಳಲ್ಲಿ ಹಡಗುಗಳಲ್ಲಿ ಅವರಿಗೆ ನೀಡುತ್ತಿದ್ದ ಕಡಿಮೆ ಸೌಲಭ್ಯಗಳಿಂದಾಗಿ ಅನೇಕ ಮಂದಿ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾಗುತ್ತಿದ್ದರು.

   ಎಲ್ಲಾ ವರ್ಗಗಳ ಜನರೂ ನೊಂದಾಯಿತ ಕಾರ್ಮಿಕರಾಗಿ ವಿದೇಶಗಳಿಗೆ ಹೋಗುತ್ತಿದ್ದರು. ಉದಾ: ಫಿಜಿ ದೇಶಕ್ಕೆ ಹೋಗಿದ್ದ 45,000 ಉತ್ತರ ಭಾರತೀಯರಲ್ಲಿ ಬ್ರಾಹ್ಮಣ ಮತ್ತು ಅವರ ಗುಂಪಿಗೆ ಸೇರಿದವರು -  1,686; ಕ್ಷತ್ರೀಯ ಮತ್ತು ಅವರ ಗುಂಪಿಗೆ ಸೇರಿದವರು - 4,565; ಬನಿಯಾಗಳು -  1,592; ಕೃಷಿಕರು (ಕುರ್ಮಿ, ಅಹಿರ್, ಜಾಟ್, ಲೊಧಾ) - 15,800; ಕೆಳಜಾತಿಯವರು -  (ಚಮ್ಮಾರ, ಪಾಸಿ, ದುಸಾಧ್) - 11,907; ಮುಸ್ಲಿಂರು - 6,787 ಇದ್ದರು.

IV. ನೊಂದಾಯಿತ ಕಾರ್ಮಿಕರ ಪದ್ಧತಿಗೆ ಕಾರಣಗಳು:- ಭಾರತದಲ್ಲಿ ಈ ಪದ್ಧತಿಯ ಉಗಮಕ್ಕೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,

  1. ಬ್ರಿಟಿಷರು ಭಾರತದಲ್ಲಿ ಕಂದಾಯ ವಸೂಲಿ ಹಕ್ಕು ಪಡೆದ ನಂತರ ಯಾವುದೇ ತಾರ್ಕಿಕತೆಯಿಲ್ಲದೇ ಕೇವಲ ಲಾಭದ ಉದ್ದೇಶದಿಂದ ದ್ಭೂ ಕಂದಾಯದಲ್ಲಿ ಹೆಚ್ಚಳ ಮಾಡಿದರು. ಇದನ್ನು ಭರಿಸಲಾಗದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ಭೂರಹಿತರಾದರು.
  2. ಕಂದಾಯವನ್ನು ಧನ ರೂಪದಲ್ಲಿಯೇ ಭರಿಸಬೇಕಾದ ಕಾರಣದಿಂದಾಗಿ ಕೃಷಿಕರು ಬರ ಮತ್ತು ಕಡಿಮೆ ಬೆಳೆ ಬಂದಾಗ ಲೇವಾದೇವಿಗಾರರಿಂದ ಸಾಲ ಮಾಡುವುದು ಮತ್ತು ಅದನ್ನು ತೀರಿಸಲಾಗದೇ ತಮ್ಮ ಜಮೀನುಗಳನ್ನು ಅವರಿಗೇ ಬಿಟ್ಟುಕೊಡುತ್ತಿದ್ದರು. ಇದಕ್ಕೆ ಲೇವಾದೇವಿಗಾರರ ಶೋಷಣೆಯು ಕಾರಣವಾಗಿತ್ತು.
  3. ಭೂ ವಿಭಜನೆಯ ಕಾರಣದಿಂದ  ಕೃಷಿಯಲ್ಲಿ ಉಂಟಾದ ಬದಲಾವಣೆಗಳಿಂದಾಗಿ ರೈತರು ಕಡಿಮೆ ಭೂಮಿಯಲ್ಲಿ ಬೆಳೆ ಬೆಳೆಯುವುದು ಮತ್ತು ಕೃಷಿಯ ವಾಣಿಜ್ಯೀಕರಣದಿಂದಾಗಿ ತಾವು ಬೆಳೆದ ವಾಣಿಜ್ಯ ಬೆಳೆಗಳನ್ನು ಆಂಗ್ಲ ವ್ಯಾಪಾರಿಗಳು ನಿಗದಿ ಮಾಡಿದ ಬೆಲೆಗಳಿಗೆ ಮಾರಾಟ ಮಾಡಬೇಕಾದ್ದರಿಂದ ಇನ್ನಷ್ಟು ಬಡತನಕ್ಕೆ ದೂಡಲ್ಪಟ್ಟರು.
  4. ಇಂಗ್ಲೆಂಡಿನ ಕೈಗಾರಿಕೀಕರಣದಿಂದಾಗಿ ಭಾರತದಲ್ಲಿನ ಗ್ರಾಮೀನ ಗುಡಿ ಕೈಗಾರಿಕೆಗಳ ನಾಶ ಉಂಟಾಯಿತು. ಇದರಿಂದಾಗಿ ನಿರುದ್ಯೋಗ ಸಮಸ್ಯೆಯು ಹೆಚ್ಚಿತು. ಅಂತಹ ನಿರುದ್ಯೋಗಿಗಳು ಕೆಲಸದ ಹುಡುಕಾಟದಲ್ಲಿ ನೊಂದಾಯಿತ ಕಾರ್ಮಿಕರ ವ್ಯವಸ್ಥೆಗೆ ಒಳಗಾದರು.
  5. ಇತ್ತೀಚಿನ ಸಂಶೋಧನೆಗಳ ಪ್ರಕಾರ ಅಧಿಕ ಸಂಖ್ಯೆಯ ಏಕಾಂಗಿ ಮಹಿಳೆಯರೂ ಸಹ ನೊಂದಾಯಿತ ಕಾರ್ಮಿಕರಾಗಿ ಹೋಗುತ್ತಿದ್ದರು. ಮಹಿಳಾವಾದಿಗಳ ಪ್ರಕಾರ ನೊಂದಾಯಿತ ಕಾರ್ಮಿಕರ ವ್ಯವಸ್ಥೆಯು ದುರ್ಬಲ ಆರ್ಥಿಕತೆ ಮತ್ತು ಪುರುಷರ ಶೋಷಣೆಯಿಂದ ಬಿಡುಗಡೆ ಪಡೆಯುವ ಮಾರ್ಗವಾಗಿ ಕಾಲದ ಮಹಿಳೆಯರಿಗೆ ಕಂಡುಬಂದಿತು. ಅದಕ್ಕಾಗಿ ಒಂಟಿ ಮಹಿಳೆಯರು ತಾತ್ಕಾಲಿಕ ವಿವಾಹಕ್ಕೆ ಒಳಪಟ್ಟು ತಾವು ಹೋಗಬೇಕಾದ ಸ್ಥಳ ತಲುಪಿದ ನಂತರ ಬಂಧನದಿಂದ ಬಿಡುಗಡೆ ಪಡೆಯುತ್ತಿದ್ದರು.

V. ರವಾನೆಗೊಂಡ ಕಾರ್ಮಿಕರ ಅಂಕಿ-ಅಂಶಗಳು:- 1870ರಲ್ಲಿ ಬ್ರಿಟಿಷ್ವಸಾಹತುಗಳಲ್ಲಿದ್ದ ನೊಂದಾಯಿತ ಭಾರತೀಯ ಕಾರ್ಮಿಕರ ಸಂಖ್ಯೆ ಕೆಳಕಂಡಂತಿದೆ:

ಮಾರಿಷಸ್‌ - 351,401

ಬ್ರಿಟಿಷ್ಗಯಾನಾ  - 79,691

ಟ್ರಿನಿಡಾಡ್  - 42,519

ಜಮೈಕಾ  - 15,169

ವೆಸ್ಟ್ಇಂಡೀಸ್ದ್ವೀಪಗಳು  - 7,021

ನೆಟಾಲ್‌ (ದಕ್ಷಿಣಾ ಆಫ್ರಿಕಾ) - 6,448

VI. ಕೆಲಸದ ಸ್ವರೂಪ ಮತ್ತು ಜೀವನ:- ನೊಂದಾಯಿತ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಇಲ್ಲವೇ ಗುಂಪು-ಗುಂಪಾಗಿ ಪ್ರತ್ಯೇಕ ಎಸ್ಟೇಟುಗಳಲ್ಲಿ ದುಡಿಯಲು ನೇಮಿಸಲಾಗುತ್ತಿತ್ತು. ಅಲ್ಲಿ ಅವರು ಅತಿ ಕಠಿಣ ದುಡಿಮೆಯಲ್ಲಿ ತೊಡಗಬೇಕಾಗುತ್ತಿತ್ತು. ಅಲ್ಲದೇ ಕೆಲಸದ ಸಮಯವು ಅಧಿಕವಾಗಿರುತ್ತಿತ್ತು. ಅಂದರೆ  ಬೆಳಿಗ್ಗೆ 5.00 ಗಂಟೆಗೆ ಎದ್ದು, ಅವಸರದ ಉಪಹಾರದ ನಂತರ ಕೃಷಿಭೂಮಿಗೆ ಸಂಜೆ 4.00 ವರೆಗೆ ದುಡಿಯಲು ತೆರಳಬೇಕಾಗುತ್ತಿತ್ತು. ಅವರ ಕೆಲಸವು ಕಬ್ಬು ಬೆಳೆಯ ವಿವಿಧ ಹಂತಗಳನ್ನು ಅವಲಂಬಿಸಿರುತ್ತಿತ್ತು. ಅವುಗಳಲ್ಲಿ ಕಬ್ಬು ನಾಟಿ ಮಾಡುವುದು, ನೀರುಣಿಸುವುದು, ನಂತರ ಕಟಾವು ಮಾಡುವುದರ ಜೊತೆಗೆ ಉಳುವುದು, ಕಳೆ ತೆಗೆಯುವುದು, ಕ್ರಿಮಿನಾಶಕಗಳ ಬಳಕೆ ಇತ್ಯಾದಿ ಕೆಲಸಗಳು ಸೇರಿದ್ದವು. ಅವರಿಗೆ ಸಮಯಾಧಾರಿತ ಇಲ್ಲವೇ ಗುರಿ ಆಧಾರಿತ ಕೆಲಸ ವಹಿಸಲಾಗುತ್ತಿತ್ತು. ಗುರಿ ಆಧಾರಿತ ಕೆಲಸವನ್ನು ಒಂದು ವೇಳೆ ಸಮಯಕ್ಕೆ ಮುನ್ನ ಮಾಡಿ ಮುಗಿಸಿದರೆ ಮರುದಿನ ಹಿಂದಿನ ದಿನದ ಕೆಲಸಕ್ಕಿಂತ ಹೆಚ್ಚಿನ ಕೆಲಸದ ಗುರಿ ನಿಗದಿ ಮಾಡಲಾಗುತ್ತಿತ್ತು. ಅಲ್ಲದೇ ಅವರು ತಮ್ಮ ಮಾಲೀಕರ ಮನೆಗಳಲ್ಲೂ ಸಹ ಉಚಿತ ಕೆಲಸಗಳನ್ನು ಮಾಡಬೇಕಾಗುತ್ತಿತ್ತು.

A. ಶಿಕ್ಷೆಗಳು:- ಕೆಲಸದ ಜಾಗದಲ್ಲಿ ಕಾರ್ಮಿಕರಿಗೆ ಕಠಿಣ ನಿಯಮಗಳನ್ನು ವಿಧಿಸಲಾಗಿತ್ತು. ಅಂದರೆ ವಿವಿಧ ತಪ್ಪುಗಳಿಗೆ ವಿಭಿನ್ನ ಬಗೆಯ ಶಿಕ್ಷೆಗಳಿದ್ದವು. ಏಕೆಂದರೆ ನೊಂದಾಯಿತ ಕಾರ್ಮಿಕರ ಕಾನೂನು ಮಾಲೀಕರಿಗೆ ತಮ್ಮ ನೊಂದಾಯಿತ ಕಾರ್ಮಿಕರು ತಪ್ಪು ಮಾಡಿದಾಗ ಶಿಕ್ಷೆ ನೀಡುವ ಕಠಿಣ ನಿಯಮಗಳನ್ನು ವಿಧಿಸಿತ್ತು. ಇವರು ವಿವಾಹವಾದಾಗ ಕಾನೂನಿನ ಅರಿವಿಲ್ಲದೇ ನೊಂದಣಿ ಮಾಡಿಸದಿದ್ದರೆ ಅದಕ್ಕೂ ಶಿಕ್ಷೆ ವಿಧಿಸಲಾಗುತ್ತಿತ್ತು. ಎಸ್ಟೇಟುಗಳ ಸುತ್ತಲಿನ 60 ಗಜಗಳಷ್ಟು ವ್ಯಾಪ್ತಿಯಲ್ಲಿ ಕಸ ಹರಡಿದರೆ ಒಂದು ವಾರದ ವೇತನ ಕಡಿತ ಇಲ್ಲವೇ ಒಂದು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುತ್ತಿತ್ತು.  ನೊಂದಾಯಿತ ಕಾರ್ಮಿಕರ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಅಥವಾ ಸೆರೆವಾಸದ ಶಿಕ್ಷೆ ನೀಡಲಾಗುತ್ತಿತ್ತು.  ಒಂದು ವೇಳೆ ಕಾರ್ಮಿಕರು ಕೆಲಸಕ್ಕೆ ಗೈರುಹಾಜರಾದರೆ ಕಾನೂನಿನ ಮೂಲಕವೇ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸಿ ಗೈರುಹಾಜರಾದ ಸಮಯದಷ್ಟೇ ಹೆಚ್ಚಿನ ಕೆಲಸ ಮಾಡಿಸಿಕೊಳ್ಳಬಹುದಾಗಿತ್ತು.

   1910-1912 ನಡುವೆ ಟ್ರಿನಿಡಾಡ್ನಲ್ಲಿ ಕಾರ್ಮಿಕರ ವಿರುದ್ಧ ದಾಖಲಾದ ಪ್ರಮುಖ ಅಪರಾಧದ ಪ್ರಕರಣಗಳೆಂದರೆ, ಕೆಲಸದ ಸ್ಥಳಗಳಿಂದ ಕದ್ದು ಹೋಗುವುದು (1,668); ಕಾರಣವಿಲ್ಲದೆ ಕೆಲಸಕ್ಕೆ ಗೈರುಹಾಜರಾಗುವುದು (1,466); ಕೆಲಸ ಮಾಡಲು ನಿರಾಕರಿಸುವುದು ಇಲ್ಲವೆ ನಿಗದಿತ ಕೆಲಸ ಮಾಡದಿರುವುದು (1,125); ಮತ್ತು ವಾಸರಹಿತರಾಗಿರುವುದು ಇಲ್ಲವೇ ಭಿಕ್ಷೆ ಬೇಡುವುದು (983).

   ಮೇಲಿನ ವಿವರಗಳು ನೊಂದಾಯಿತ ಕಾರ್ಮಿಕರ ದಯನೀಯ ಸ್ಥಿತಿಯನ್ನು ವಿವರಿಸುತ್ತವೆ ಅಲ್ಲದೇ ವೈಯುಕ್ತಿಕ ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ನೊಂದಾಯಿತ ಕಾರ್ಮಿಕರ ಕಾಯ್ದೆಯು ತಡೆಹಿಡಿದಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ.

VII. ಸಾಮಾಜಿಕ ಸುಧಾರಣೆಗೆ ಕಾರಣ:- ನೊಂದಾಯಿತ ಕಾರ್ಮಿಕರ ಪದ್ಧತಿಯು ಶೋಷಣೆ ಮತ್ತು ದೋಷಗಳಿಂದ ಕೂಡಿದ್ದರೂ ಈ ವ್ಯವಸ್ಥೆಯಿಂದಾಗಿ ಅವರ ಜೀವನದಲ್ಲಿ ಅನೇಕ ಸಾಮಾಜಿಕ ಬದಲಾವಣೆಗಳು ಉಂಟಾದವು.  ಏಕೆಂದರೆ, ಕೆಲವು ವಿದ್ವಾಂಸರು ವ್ಯವಸ್ಥೆಗೆ ಒಳಪಟ್ಟವರು ಕೆಲವು ಸಾಂಪ್ರದಾಯಿಕ ಆಚರಣೆಗಳಿಂದ ದೂರವಾದುದನ್ನು ಗುರ್ತಿಸಿದ್ದಾರೆ. ಅಂತಹ ಬದಲಾವಣೆಗಳೆಂದರೆ, ಅಸ್ಥಿತ್ವದಲ್ಲಿದ್ದ ಜಾತಿ ಮತ್ತು ಧಾರ್ಮಿಕ ಶ್ರೇಷ್ಠತೆಗಳು ದೂರವಾಗಿ ಹೊಸ ರೀತಿಯ ಜೀವನ ಶೈಲಿ ಅವರಲ್ಲಿ ರೂಪುಗೊಳ್ಳತೊಡಗಿತು. ಬ್ರಿಜ್ಲಾಲ್ಎಂಬುವರು ತಿಳಿಸುವಂತೆ ವ್ಯವಸ್ಥೆಯು ಒಂದೆಡೆ ಗುಲಾಮಗಿರಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಬಿಡುಗಡೆಗೂ ಕಾರಣವಾಗಿತ್ತು. ವ್ಯವಸ್ಥೆಯು ಅವರಿಗೆ ಮಾನವೀಯತೆಯ ಮುಖವನ್ನು ಪರಿಚಯಿಸಿತು. ಅಲ್ಲದೇ ನವಸಮಾಜದ ಉದಯಕ್ಕೂ ಕಾರಣವಾಯಿತು. ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು, ಆಹಾರ-ವಿಹಾರಗಳಲ್ಲಿನ ನಿರ್ಬಂಧಗಳು, ಆರಾಧನೆಗಳಲ್ಲಿನ ಮಡಿ-ಮೈಲಿಗೆಗಳು ಕಾಲಕಳೆದಂತೆ ಮರೆಯಾದವು. ಜಾತಿ ಎಂಬುದು ನಗಣ್ಯವಾಯಿತು. ಏಕೆಂದರೆ ಇವರಿಗೆ ದೊರೆಯುತ್ತಿದ್ದ ಕೂಲಿಯು ಅವರ ಶ್ರಮ ಆಧಾರಿತವಾಗಿತ್ತೇ ಹೊರತು ಸಾಮಾಜಿಕ ಅಂತಸ್ತನ್ನು ಅವಲಂಬಿಸಿರಲಿಲ್ಲ. ವಸಾಹತುಗಳಲ್ಲಿನ ಮಹಿಳೆಯರ ಕೊರತೆಯು ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳಿಗೆ ಅವಕಾಶ ಕಲ್ಪಿಸಿತು.

VIII. ಉಪಸಂಹಾರ: ನೊಂದಾಯಿತ ಕಾರ್ಮಿಕರ ಪದ್ಧತಿಗೆ ಒಳಗಾದವರ ಜೀವನದಲ್ಲೂ ಸಹ ಬದಲಾವಣೆಗಳು ಉಂಟಾದವು. ಅಂದರೆ ಅವರು ತಮ್ಮ ಗುತ್ತಿಗೆಯ ಕಾಲ ಮುಗಿದ ನಂತರ ಎಸ್ಟೇಟುಗಳಿಂದ ಹೊರಬಂದು ಹತ್ತಿರದ ಹಳ್ಳಿಗಳಲ್ಲಿ ನೆಲೆಸತೊಡಗಿದರು. ಹೀಗೆ ನೆಲೆಸಿದವರ ಸಂಖ್ಯೆಯು ವೃದ್ಧಿಗೊಂಡಂತೆ ಅವರದೇ ಆದ ವಾಸದ ನೆಲೆಗಳು ರಚನೆಗೊಂಡವು. ಹಾಗೆ ಒಂದೆಡೆ ನೆಲೆಸಿದ ನೊಂದಾಯಿತ ಕಾರ್ಮಿಕರು ತಾವು ಹಿಂದೆ ಗಳಿಸಿದ ಕೆಲಸದ ಅನುಭವಗಳನ್ನು ಉಪಯೋಗಿಸಿಕೊಂಡು ಸ್ವತಂತ್ರ ಜೀವನ ನಡೆಸಲು ತೊಡಗಿದರು. ಅದೇ ಸಮಯದಲ್ಲಿ 19ನೆಯ ಶತಮಾನದ ಕೊನೆಯ ವೇಳೆಗೆ ಸಕ್ಕರೆ ಉದ್ಯಮದಲ್ಲಿ ಕುಸಿತ ಉಂಟಾದ್ದರಿಂದ ಎಸ್ಟೇಟುಗಳ ಮಾಲೀಕರು ತಮ್ಮ ಭೂಮಿಯ ಕೆಲವು ಭಾಗಗಳನ್ನು ಮಾರಾಟಕ್ಕೆ ಕೊಡಬೇಕಾಯಿತು. ಆಗ ಮುಕ್ತ ನೊಂದಾಯಿತ ಕಾರ್ಮಿಕರು ಅವರಿಂದ ಕೃಷಿ ಭೂಮಿಗಳನ್ನು ಖರೀದಿಸಿ ಸ್ವತಂತ್ರ ಕೃಷಿಕರಾದರು. ಈ ಪ್ರಕ್ರಿಯೆಯು ಆರಂಭದಲ್ಲಿ ಸಣ್ಣ ಪ್ರಮಾಣದ ಭೂ ಹಿಡುವಳಿಗಳಿಗೆ ಸೀಮಿತವಾಗಿದ್ದರು ತದನಂತರ ಬೃಹತ್‌ ಪ್ರಮಾಣದ ಎಸ್ಟೇಟುಗಳೂ ಸಹ ಮಾರಟಕ್ಕೆ ಇಡಲ್ಪಟ್ಟವು. ಪರಿಣಾಮವಾಗಿ ಭೂಮಾಲೀಕರಾದ ಕಾರ್ಮಿಕರು ಸಕ್ಕರೆ ಉದ್ಯಮಗಳಿಗೆ ಕಬ್ಬಿನ ಪೂರೈಕೆದಾರರಾದರು. ಇದರಿಂದಾಗಿ ಒಮ್ಮೆ ಕಾರ್ಮಿಕರಾಗಿದ್ದವರು ಈಗ ಸಕ್ಕರೆ ಉದ್ಯಮದ ಕಚ್ಚಾವಸ್ತುಗಳ ಪೂರೈಕೆದಾರರಾದರು. ಈ ಬದಲಾವಣೆಯು ಮುಂದೆ ನೊಂದಾಯಿತ ಕಾರ್ಮಿಕರು ತಾವು ನೆಲೆಸಿದ ದೇಶಗಳಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರವಹಿಸಲು ಕಾರಣವಾಯಿತು. ಇದರಿಂದಾಗಿಯೇ ಇಂದು ಮಾರಿಷಸ್‌, ಸುರಿನಾಮ್‌, ಫಿಜಿ, ವೆಸ್ಟ್‌ ಇಂಡೀಸ್‌ಗಳಂತಹ ದೇಶಗಳಲ್ಲಿ ಭಾರತೀಯರು ರಾಜಕೀಯವಾಗಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದನ್ನು ನೋಡಬಹುದಾಗಿದೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources