ಸೂಫಿ ಪಂಥ ಮತ್ತು ಗುಲ್ಬರ್ಗಾದ ಖ್ವಾಜಾ ಬಂದೇನವಾಜ್.
I. ಪೀಠಿಕೆ: ಸೂಫಿ-ಸಂತರು ಸರಳಜೀವಿಗಳಾಗಿ ತಾತ್ವಿಕ ನೆಲೆಯಲ್ಲಿ ಭಾವೈಕ್ಯತೆಗಾಗಿ ಶ್ರಮಿಸಿದವರು. ಮಧ್ಯಯುಗದಲ್ಲಿ ನಡೆದ ಹಿಂದೂ ಸಮಾಜದ ಧಾರ್ಮಿಕ ಸುಧಾರಣಾ ಚಳವಳಿಯ ಪ್ರಭಾವ ಇಸ್ಲಾಂ ಧರ್ಮದ ಮೇಲೆ ಉಂಟಾಗಿ ಅದರಲ್ಲಿ ಶುದ್ದೀಕರಣ ಚಳವಳಿ ಪ್ರಾರಂಭವಾಯಿತು. ಈ ರೀತಿಯ ಚಳವಳಿಯೆ ಸೂಫಿ ಚಳವಳಿ. “ಸೂಫಿ” ಎಂಬುದು ಅರೇಬಿಯನ್ ಪದ, “ಸೂಫ್ ಮತ್ತು ಸಾಫ್” ಎಂಬೆರಡು ಪದಗಳಿಂದ ನಿಷ್ಪನ್ನವಾಗಿದೆ. ಸೂಫ್ ಎಂದರೆ ಉಣ್ಣೆ ಬಟ್ಟೆಯ ಉದ್ದವಾದ ನಿಲುವಂಗಿ ಧರಿಸಿದ ಮುಸ್ಲಿಂ ಸಂತ ಎಂದರ್ಥ. ಸಾಫ್ ಎಂದರೆ ಪರಿಶುದ್ದ ನಡತೆಯುಳ್ಳವನು ಎಂದರ್ಥ.
ಸೂಫಿ ಪಂಥ ಮೊದಲು
ಅರೇಬಿಯಾದಲ್ಲಿ ಉಗಮವಾಯಿತು. ಈ ಪಂಥದ
ಸಂತರು ಮೂಲಭೂತವಾದಕ್ಕೆ ವಿರುದ್ದವಾದ ಆಲೋಚನೆಯನ್ನು ಹೊಂದಿದ್ದು, ಉದಾರವಾದ ಮತ್ತು
ಸಮಾನತೆಯ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು. ಅರೇಬಿಯಾದಲ್ಲಿ
ಆರಂಭವಾದ ಈ ಚಳವಳಿಯು ಪರ್ಷಿಯಾ, ಇರಾಕ್ ಮೂಲಕ ೧೨ನೇ ಶತಮಾನದ ವೇಳೆಗೆ ಭಾರತಕ್ಕೆ ಪರಿಚಯವಾಯಿತು. ಅನಂತರ ಈ ಪಂಥದ
ಸಂತರು ಇಡೀ ಭಾರತದಾದ್ಯಂತ ಮಹತ್ವ
ಪೂರ್ಣ ತತ್ವಗಳೊಂದಿಗೆ ಸಂಚಲನವನ್ನುಂಟುಮಾಡಿದರು. ಆ ತತ್ವಗಳೆಂದರೆ:
ಏಕೀಶ್ವರವಾದ,
ಕಾಯಕಕ್ಕೆ ಮಹತ್ವ, ಸಮಾನತೆ, ಜಾತಿ ಪದ್ದತಿಯ ಖಂಡನೆ, ಹಿಂದೂ-ಮುಸ್ಲಿಂ ಭ್ರಾತೃತ್ವ,
ಮುಕ್ತಿಗೆ ಭಕ್ತಿಯೇ ಪ್ರಧಾನ, ಧರ್ಮಗಳ ಮೂಲ ಉದ್ದೇಶ, ಸತ್ವ ಅರಿಯುವುದು,
ಮೂರ್ತಿಪೂಜೆಯ ಖಂಡನೆ ಮತ್ತು ಸರಳ ಜೀವನಕ್ಕೆ ಮಹತ್ವ.
ಈ ಮೇಲಿನ ತತ್ವಗಳು ಸೂಫಿಪಂಥವು ದೇಶದುದ್ದಗಲಕ್ಕು ಪ್ರಸರಿಸಿ, ಸಾಮಾನ್ಯ ಜನರ ಕಣ್ಣು ತೆರೆಯಲು ಪ್ರಮುಖ ಪ್ರೇರಕಾಂಶಗಳಾದವು. ಆದ್ದರಿಂದಲೇ ಸೂಫಿಗಳು ಅತಿಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದ್ದು. ಅಬುಲ್ ಫಜಲ್ನ ಪ್ರಕಾರ ಸೂಫಿಗಳಲ್ಲಿ ೧೪ಪಂಥಗಳಿದ್ದವು ಅವುಗಳಲ್ಲಿ ಚಿಸ್ತಿ ಮತ್ತು ಸೂರ್ಹಾವರ್ದಿ ಪಂಗಡಗಳು ಮಧ್ಯಕಾಲಿನ ಭಾರತದಲ್ಲಿ ಪ್ರಮುಖವಾಗಿ ಕಂಡುಬಂದವು. ಈ ಪಂಗಡಗಳ ಸಂತರಲ್ಲಿ ಪ್ರಮುಖರಾದವರು ಖ್ವಾಜಾ ಮುಯಿನುದ್ದೀನ್ ಚಿಸ್ತಿ ಮತ್ತು ಷೇಖ್ ನಿಜಾಮುದ್ದೀನ್ ಔಲಿಯ.
II. ಸೂಫಿ ಚಳವಳಿಯ ಪರಿಣಾಮಗಳು:
- ಹಿಂದೂ-ಮುಸ್ಲಿಂರಲ್ಲಿ ಐಕ್ಯತೆ
ಮೂಡಲು ಸಾಧ್ಯವಾಯಿತು.
- ಮುಸ್ಲಿಂರಲ್ಲಿ ಅನ್ಯ ಮತ ಸಹಿಷ್ಣುತೆಯ ಭಾವನೆಯನ್ನು ಬೆಳೆಸಿತು.
- ಮಧ್ಯಕಾಲಿನ ಭಾರತದ ಮುಸ್ಲಿಂ ದೊರೆಗಳ ಆಡಳಿತದ ಮೇಲೆ ಪ್ರಭಾವ ಬೀರಿ
ಅವರಲ್ಲಿ ಧಾರ್ಮಿಕ ಉದಾರತೆ ಬೆಳೆಸಿತು.
- ಹಿಂದೂ ಧರ್ಮದ ಶುದ್ದೀಕರಣಕ್ಕೆ ಕಾರಣವಾಯಿತು.
- ಭಕ್ತಿಪಂಥದ ಜನಪ್ರಿಯತೆಗೆ ಕಾರಣವಾಯಿತು
ಸೂಫಿ ಪಂಥ, ಭಕ್ತಿ ಪಂಥ, ವಚನ ಪರಂಪರೆಗಳು ಭೌಗೋಳಿಕವಾಗಿ ವಿಭಿನ್ನವಾಗಿದ್ದರು ಕೂಡ ಸಾಮಾಜಿಕವಾಗಿ ಒಂದೇ ಮಾರ್ಗವಾಗಿದ್ದವು.
III. ಖ್ವಾಜಾ ಬಂದೇ ನವಾಜ್ (ಸಾ.ಶ.ವ. 1321-1422).
ಇವರು
ಮಹಾನ್ ಸೂಫಿಸಂತ, ಕವಿ ಮತ್ತು ತತ್ವಜ್ಞಾನಿ. ಮಧ್ಯಕಾಲೀನ ಅವಧಿಯಲ್ಲಿ ಸಾಂಸ್ಕೃತಿಕ- ಧಾರ್ಮಿಕ- ತತ್ವಜ್ಞಾನದ ಚಳವಳಿಯ
ಮೂಲಕ ಗುಲ್ಬರ್ಗಾ ನಗರದ ಹೆಸರನ್ನು ಪ್ರಖ್ಯಾತಿಗೆ ತಂದವರು ಬಂದೇ ನವಾಜ್. ಬಂದೇ ನವಾಜ್ ಎಂಬ ಪದದ ಅರ್ಥ ‘ಸಾಮಾನ್ಯರ ದೊರೆ’. ಇವರ
ಮೂಲ ಹೆಸರು ಸಯ್ಯದ್ ಮಹ್ಮದ್ ಹುಸೇನಿ ಗೇಸುದರಾಜ್. ದೆಹಲಿಯಲ್ಲಿ ಜನಿಸಿದ ಅವರು ತುಘಲಕ್ ನ ರಾಜಧಾನಿ ಸ್ಥಳಾಂತರದ ಕಾರಣಕ್ಕೆ ಕುಟುಂಬದೊಂದಿಗೆ ದೆಹಲಿ ತೊರೆಯಬೇಕಾಯಿತು. ದಖನ್ನಿನ ದೌಲತಾಬಾದ್ ಸಮೀಪದ ಖುಲ್ದಾಬಾದ್ ನಲ್ಲಿ ತಮ್ಮ
ಬಾಲ್ಯದ ದಿನಗಳನ್ನು ಕಳೆದರು. ಖುಲ್ದಾಬಾದ್ ನಲ್ಲಿ ಇದ್ದಾಗಲೇ ಅವರ ತಂದೆ ಸಯ್ಯದ್ ಯುಸೂಫ್ ಹುಸೇನಿ ಅಸು ನೀಗಿದರು. ರಾಜಧಾನಿಯ ಮರುಸ್ಥಳಾಂತರದ ಕಾರಣದಿಂದಾಗಿ
ಮತ್ತೆ ಇವರ
ಕುಟುಂಬ ದೆಹಲಿಯತ್ತ ಪಯಣ ಬೆಳೆಸಬೇಕಾಯಿತು. ಬಾಲ್ಯದಲ್ಲಿದ್ದಾಗ ದೆಹಲಿಯಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಖ್ವಾಜಾ ನಿಜಾಮುದ್ದೀನ್ ಔಲಿಯಾ ಅವರ ಭಕ್ತರಾಗಿದ್ದ ಸಯ್ಯದ್ ಮಹ್ಮದ್ ಹುಸೇನಿ ಅವರು ದೆಹಲಿಗೆ ಮರಳಿದ ನಂತರ ಹಜರತ್ ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರ ಬಯಾತ್ (ದೀಕ್ಷೆ) ಪಡೆದರು ಮತ್ತು ಗೇಸು ದರಾಜ್ (ಉದ್ದ ಕೂದಲಿನವನು) ಆದರು. ನಂತರ ಚಿಸ್ತಿಯಾ ಸೂಫಿ ಪರಂಪರೆಯನ್ನು ಮುಂದುವರೆಸಿದರು.
ಹಜರತ್ ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರು ಅರಬಿಯ ಸಿದ್ಧಾಂತದ ಪರವಾದ ನಿಲುವನ್ನು ಹೊಂದಿದ್ದರು. ಆದರೆ
ಗೇಸು ದರಾಜ್ ಅವರಿಗೆ ಅರಬಿಯ ಸಿದ್ಧಾಂತದ ಬಗ್ಗೆ ತಕರಾರು. ಕಾರಣ
ಅವರು ತಮ್ಮ ಅಪಾರವಾದ ಸಾಹಿತ್ಯದಲ್ಲಿ ತಮ್ಮ ‘ವಹದತ್
ಉಲ್ ಶುಹುದ್’ ವಾದದ ಬಗ್ಗೆ ಗುರು ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರು ಬದುಕಿರುವವರೆಗೆ ಬರೆಯಲಿಲ್ಲ. ಗೇಸು ದರಾಜ್ ಅವರು ಪ್ರತಿಪಾದಿಸಿದ ‘ವಹದತ್ ಉಲ್ ಶುಹುದ್’ (ಬಹುತೇಕ ದ್ವೈತಕ್ಕೆ ಸಮೀಪ) ಹೊಸ ತತ್ವಜ್ಞಾನದ ಬೆಳಕಿಗೆ ಕಾರಣವಾಯಿತು.
ಈ ತತ್ವಜ್ಞಾನವನ್ನು ಲೋಕಕ್ಕೆ ಪರಿಚಯಿಸಲು
ಕಾರಣವಾದ ನೆಲ ಗುಲ್ಬರ್ಗ. ದೆಹಲಿಯಲ್ಲಿದ್ದ ಗೇಸು ದರಾಜ್ ಅವರು
ಗುರುವಿನ ನಿಧನದ ನಂತರ ಖುಲ್ದಾಬಾದ್‌ನಲ್ಲಿದ್ದ ತಮ್ಮ ತಂದೆಯವರ ಸಮಾಧಿಗೆ ಗೌರವ ನಮನ ಸಲ್ಲಿಸಲು
ಅಲ್ಲಿಗೆ ಬಂದಿದ್ದರು. ಆಗ ಗೇಸು ದರಾಜ್
ಅವರನ್ನು ದಖನ್ ನಲ್ಲಿಯೇ ನೆಲೆಸುವಂತೆ ದಖನ್ ನಲ್ಲಿ ದೊರೆಯಾಗಿದ್ದ ಫಿರೋಜ್ ಶಹಾ ಬಹಮನಿ ಮನವಿ ಮಾಡಿದ. ಅವರು
ಫಿರೋಜ್ ನ ಮನವಿಯ ಮೇರೆಗೆ ಗುಲ್ಬರ್ಗಕ್ಕೆ ಬಂದು ನೆಲೆಸಿದರು. ಬಂದೇ ನವಾಜ್‌ರ ಜನಪ್ರಿಯತೆ, ಕೀರ್ತಿ ಹಾಗೂ ಅವರ ನಿಲುವು ದೊರೆಯ ಅಸಹನೆ ಮತ್ತು ಭೀತಿಗೂ ಕಾರಣವಾಯಿತು. ಜನಾನುರಾಗಿಯಾಗಿದ್ದ ಬಂದೇ ನವಾಜ್‌ರು ತಮ್ಮ
ಬರವಣಿಗೆ ಕಾವ್ಯ ಮತ್ತು ಗದ್ಯ ಕೃತಿಗಳ ಮೂಲಕ ಸಾಹಿತ್ಯದ ಸೀಮೆಯನ್ನು ವಿಸ್ತರಿಸಿದರು. ಅವರ
ಸಾಹಿತ್ಯದಲ್ಲಿ ತಾತ್ವಿಕತೆ ಮತ್ತು ಕಾವ್ಯಗಳೆರಡೂ ಹದವಾಗಿ ಬೆಸೆದ ಅದ್ಭುತಲೋಕ ಸೃಜನೆಗೊಂಡಿತು. ಅದಕ್ಕಾಗಿ ಅವರು ಬಳಸಿದ ಸೋದಾಹರಣ ಕತೆಗಳು ಜನರ ಗಮನ ಸೆಳೆದವು. ಧಾರ್ಮಿಕ ಭಾಷೆಯಾಗಿದ್ದ ಅರಬ್ಬಿ ಹಾಗೂ ಸಾಹಿತ್ಯದ ಭಾಷೆಯಾಗಿದ್ದ ಫಾರಸಿಯಲ್ಲಿ ಪರಿಣಿತಿ ಹೊಂದಿದ್ದ ಬಂದೇ ನವಾಜ್ ಅವರ ಬಹುತೇಕ ಕೃತಿಗಳು ಫಾರಸಿಯಲ್ಲಿವೆ. ಆದರೆ
ನೆಲದ ಭಾಷೆಯಾಗಿ ಹುಟ್ಟಿದ ‘ದಖನಿ’ (ಉರ್ದುವಿನ ಮೂಲ ರೂಪ)ಯಲ್ಲಿ ಬರವಣಿಗೆ ಆರಂಭಿಸಿದ ಹಿರಿಮೆ ಅವರದು. ಆದ್ದರಿಂದಲೇ
ಅವರನ್ನು ಉರ್ದುವಿನ ಮೊದಲ ಗದ್ಯಲೇಖಕ ಎಂದೇ ಗುರುತಿಸಲಾಗುತ್ತದೆ. ಬಂದೇ ನವಾಜ್ ಅವರು ತಮ್ಮ
ಜೀವಿತಾವದಿಯಲ್ಲಿ ರಚಿಸಿದ ಒಟ್ಟು ಕೃತಿಗಳ ಸಂಖ್ಯೆ 105.
ಹೀಗೆ ಜನಪರ ನಿಲುವು, ನೋವಿಗೆ ಮಿಡಿಯುವ ಸಂತ, ತಾತ್ವಿಕ ನೆಲೆಗಟ್ಟು ಒದಗಿಸಿದ ತತ್ವಜ್ಞಾನಿ ಹಾಗೂ ಕಾವ್ಯ-ಗದ್ಯದ ಬರವಣಿಗೆಯ ಮೂಲಕ ತಮ್ಮದೇ ಛಾಪು- ಹೆಜ್ಜೆಗುರುತು ಮೂಡಿಸಿದ ಮಹಾನ್ ಚೇತನ ಬಂದೇ ನವಾಜ್. ಸಾಹಿತ್ಯ-ತಾತ್ವಿಕ ಜಗತ್ತಿನಲ್ಲಿ ಚಿರಪರಿಚಿತರಾಗಿರುವ ‘ಜನಸಾಮಾನ್ಯರ ದೊರೆ’ಯು ಕನ್ನಡ ಸಾಹಿತ್ಯಕ್ಕೆ ಅಪರಿಚಿತರು. ಅದಕ್ಕೆ ಹಲವು ರಾಜಕೀಯ-ಸಾಂಸ್ಕೃತಿಕ- ಧಾರ್ಮಿಕ ಕಾರಣಗಳಿವೆ. ಗೋಡೆ-ಕಂದಕ ನಿರ್ಮಿಸುವ ಕಾಲದಲ್ಲಿ ಹಿಂದೊಮ್ಮೆ ಸಹಬಾಳ್ವೆಯ ಸೇತುವೆ ಕಟ್ಟಿದವರು ಬಂದೇ ನವಾಜ್.
ಸೂಫಿಸಂನ ಗುರಿ ಅಲ್ಲಾಹನಿಗೆ ಸಂಪೂರ್ಣವಾಗಿ ಶರಣಾಗುವುದು ಮತ್ತು ತಾನು ಮಾಡುವ ಪ್ರತಿಯೊಂದರ ಗುರಿಯೂ ಅಲ್ಲಾಹನ ಸ್ನೇಹಪ್ರಾಪ್ತಿ. ಅಲ್ಲಾಹನ ಸ್ನೇಹ ಪ್ರಾಪ್ತಿಗೆ ಕೇವಲ ಆರಾಧನೆಗಳಷ್ಟೇ ಸಾಕೇ..? ಖಂಡಿತಾ ಸಾಕಾಗದು. ಪ್ರವಾದಿವರ್ಯರ ಒಂದು ಹದೀಸ್ ಇಂತಿದೆ “ನೀವು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿರಿ..ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು..”. ಆದುದರಿಂದ ಜನಸೇವೆಯ ಮೂಲಕ, ಜನರ ನೋವಿಗೆ ಸಾಂತ್ವನ ಮತ್ತು ಪರಿಹಾರ ಮಾರ್ಗ ತೋರಿಸುವುದನ್ನು ಸೂಫಿಗಳು ತಮ್ಮ ಕರ್ತವ್ಯವೆಂಬಂತೆ ಮಾಡುತ್ತಾ ಬರುವುದನ್ನು ನಾವು ಯಾವುದೇ ಸೂಫಿಗಳ ಚರಿತ್ರೆಯಲ್ಲೂ ಕಾಣಲು ಸಾಧ್ಯ. ಬಂದೇ ನವಾಝರೂ ತಮ್ಮ ಬದುಕಿನ ಪಾರಮಾರ್ಥಿಕ ಗುರಿಯೆಂಬ ನೆಲೆಯಲ್ಲಿ ಇವೆಲ್ಲವುಗಳನ್ನೂ ಮಾಡುತ್ತಾ ಬಂದಿದ್ದರು.
ಸೂಫಿಗಳ ಕುರಿತಂತೆ ಬರೆಯುವಾಗ ಅನೇಕ ಬರಹಗಾರರು ಮಾಡುವ ಅತೀ ದೊಡ್ಡ ತಪ್ಪು ಅವರ ಜನಸೇವೆಗೆ ಪ್ರಾಮುಖ್ಯತೆ ಕಡಿಮೆ ಮಾಡಿ ಪವಾಡಗಳನ್ನೇ ವೈಭವೀಕರಿಸುವುದು. ನಾವೆಲ್ಲಾ ತಿಳಿದುಕೊಳ್ಳಬೇಕಾದಂತಹ ಒಂದು ಸತ್ಯವೇನೆಂದರೆ ಸೂಫಿಗಳೆಂದರೆ ಖಂಡಿತವಾಗಿಯೂ ದೇವ ಮಾನವರೋ, ಪವಾಡ ಪುರುಷರೋ ಅಲ್ಲ. ಪವಾಡಗಳನ್ನು ತೋರಿಸುವುದು ಸೂಫಿಗಳ ಗುರಿಯೂ ಆಗಿರುವುದಿಲ್ಲ. ಅಂತಹ ಅಸಾಮಾನ್ಯವಾದ ಕಾರ್ಯಗಳನ್ನು ಸೂಫಿಗಳು ಮಾಡಿದ್ದರೆ ಅದರ ಹಿಂದಿನ ಉದ್ದೇಶ ಯಾವತ್ತೂ ಸ್ವಾರ್ಥವಾಗಿರುವುದಿಲ್ಲ. ಅದರಲ್ಲಿ ಸಮಷ್ಟಿ ಹಿತ ಅಡಗಿರುತ್ತದೆ.
*****
Comments
Post a Comment