ಅಧ್ಯಾಯ 6. ಕೃಷಿಯ ವಾಣಿಜ್ಯೀಕರಣ ಮತ್ತು ಭೂ ವಿಭಜನೆ.

ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಕೃಷಿಯ ವಾಣಿಜ್ಯೀಕರಣ

*****

I. ಪೀಠಿಕೆ: ಮಧ್ಯಯುಗದ ಗಮನಾರ್ಹ ಜಾಗತಿಕ ವಿದ್ಯಮಾನಗಳಲ್ಲಿ ಯೂರೋಪಿಯನ್ನರು ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದುದು, ಆ ಮೂಲಕ ಅವರು ಭಾರತದಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ಆರಂಭಿಸಿದುದು, ತದನಂತರ ಇಲ್ಲಿನ ಆಡಳಿತಗಾರರ ನಡುವಣ ಒಗ್ಗಟ್ಟಿಲ್ಲದ ಪರಿಸ್ತಿತಿಯನ್ನು ಉಪಯೋಗಿಸಿಕೊಂಡು ತಮ್ಮ ರಾಜಕೀಯ ಅಧಿಕಾರವನ್ನು ಗಳಿಸಿಕೊಂಡುದು, ಆ ಮೂಲಕ ವಸಾಹತುಶಾಹಿ ಆಡಳಿತವನ್ನು ವಿಸ್ತರಿಸಿದುದು ಮತ್ತು ಅನಂತರ ಇಲ್ಲಿ ಸಾಮ್ರಾಜ್ಯಶಾಹಿ ಆಡಳಿತವನ್ನು ಸ್ಥಾಪಿಸಿದುದು ಸಹಾ ಒಂದಾಗಿದೆ. ಹೀಗೆ ಭಾರತದಲ್ಲಿ ಅಂತಿಮವಾಗಿ ಸಾಮ್ರಾಜ್ಯಶಾಹಿ ಆಡಳಿತವನ್ನು ಸ್ಥಾಪಿಸಿದ ಬ್ರಿಟಿಷರು ಇಲ್ಲಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಜೀವನದ ಮೇಲೆ ತಮ್ಮದೇ ಆದ ಪ್ರಬಾವವನ್ನು ಬೀರತೊಡಗಿದರು. ಅದರಲ್ಲೂ 18-19ನೆ ಶತಮಾನಗಳಲ್ಲಿ ಯೂರೋಪಿನಲ್ಲಿ ಉಂಟಾದ ಕೈಗಾರಿಕೀಕರಣದ ಪರಿಣಾಮವಾಗಿ ಅಲ್ಲಿನ ಕಾರ್ಖಾನೆಗಳಿಗೆ ವಿವಿಧ ಕಚ್ಚಾವಸ್ತುಗಳನ್ನು ಭಾರತದಿಂದ ಪೂರೈಸುವ ಸಲುವಾಗಿ ಇಲ್ಲಿನ ಕೃಷಿಯ ಮೇಲೆ ಅವರು ಬೀರಿದ ಪ್ರಭಾವ ಮತ್ತು ಅದರ ಪರಿಣಾಮಗಳನ್ನು ಕೃಷಿಯ ವಾಣಿಜ್ಯೀಕರಣದಲ್ಲಿ ಅಧ್ಯಯನ ಮಾಡಬಹುದಾಗಿದೆ. ಜೊತೆಯಲ್ಲೇ ಆ ಕಾಲದಲ್ಲಿ ಉಂಟಾದ ಭೂವಿಭಜನೆಯು ಸಹಾ ಬ್ರಿಟಿಷರು ಕೈಗೊಂಡ ಕಂದಾಯ ಸುಧಾರಣೆಗಳ ಪರಿಣಾಮವಾಗಿದೆ.

II. ಕೃಷಿಯ ವಾಣಿಜ್ಯೀಕರಣದ ಅರ್ಥ ವಿವರಣೆ: ಕೃಷಿಯ ವಾಣಿಜ್ಯೀಕರಣ ಎಂಬುದು ಒಂದು ಪ್ರಕ್ರಿಯೆಯಾಗಿದ್ದು, ಅದರಲ್ಲಿ ಕೃಷಿಯ ಉತ್ಪನ್ನಗಳ ಮೇಲೆ ವಾಣಿಜ್ಯ ಚಟುವಟಿಕೆಗಳು ತಮ್ಮ ಪ್ರಭಾವ ಬೀರುತ್ತವೆ. ಅಂದರೆ ವಾಣಿಜ್ಯ ಹಿತಾಸಕ್ತಿಗನುಗುಣವಾಗಿ ಬೆಳೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ವಾಣಿಜ್ಯ ಬೆಳೆಗಳನ್ನು ಆಹಾರ ಧಾನ್ಯಗಳ ಬದಲು ಬೆಳೆಯಲಾಗುತ್ತದೆ.

   ಭಾರತದಲ್ಲಿ ಕೃಷಿಯ ವಾಣಿಜ್ಯೀಕರಣವು ಬ್ರಿಟಿಷರ ಕಾಲದಲ್ಲಿ ಆರಂಭವಾಯಿತು. ಅದರಲ್ಲೂ 18ನೆ ಶತಮಾನದ ಕೊನೆಯಲ್ಲಿ ವಾಣಿಜ್ಯೀಕರಣದ ಪ್ರಕ್ರಿಯೆಯು ಅಧಿಕ ವೇಗವನ್ನು ಪಡೆಯಿತು. ಏಕೆಂದರೆ ಆ ವೇಳೆಗೆ ಯೂರೋಪಿನಲ್ಲಿ ಅದರಲ್ಲೂ ಇಂಗ್ಲೆಂಡ್‌ ಮತ್ತು ಬೆಲ್ಜಿಯಂಗಳಲ್ಲಿ ಕೈಗಾರಿಕೀಕರಣವೂ ತೀವ್ರವಾಗಿ ಆಗುತ್ತಿತ್ತು. 1813 ನಂತರ ಈ ಪ್ರಕ್ರಿಯೆಯು ಮತ್ತಷ್ಟು ತೀವ್ರಗೊಂಡಿತು. 1860 ರಲ್ಲಿ ಅಮೆರಿಕಾದಲ್ಲಿ ಆರಂಭವಾದ ಆಂತರಿಕ ಅಥವಾ ನಾಗರೀಕ ಯುದ್ಧದ  ಕಾರಣದಿಂದಾಗಿ ಅಲ್ಲಿಂದ ಯೂರೋಪಿಗೆ ರಫ್ತಾಗುತ್ತಿದ್ದ ಕಚ್ಚಾ ಹತ್ತಿಯ ಪ್ರಮಾಣವು ಕಡಿಮೆಯಾಯಿತು. ಇದರಿಂದಾಗಿ ಭಾರತದ ಕೃಷಿಕರು ಹೆಚ್ಚು-ಹೆಚ್ಚು ಹತ್ತಿ ಬೆಳೆಯುವಂತೆ ಬ್ರಿಟಿಷರು ಇಲ್ಲಿನ ರೈತರ ಮೇಲೆ ಒತ್ತಡ ಹಾಕತೊಡಗಿದರು. ಪರಿಣಾಮವಾಗಿ ಮತ್ತಷ್ಟು ಕೃಷಿ ಭೂಮಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ವರ್ಗಕ್ಕೆ ಸೇರಿತು.

   ಭಾರತದಲ್ಲಿನ ಕೃಷಿಯ ವಾಣಿಜ್ಯೀಕರಣವು ಇಲ್ಲಿನ ಕೈಗಾರಿಕೆಗಳಿಗೆ ವಾಣಿಜ್ಯ ಉತ್ಪನ್ನಗಳನ್ನು ಪೂರೈಸಲೋಸುಗ ಾಗಲಿಲ್ಲ. ಏಕೆಂದರೆ ಆಗ ಭಾರತದಲ್ಲಿನ ಕೈಗಾರಿಕೀಕರಣವು ಯೂರೋಪಿನ ರಾಷ್ಟ್ರಗಳಾದ ಬ್ರಿಟನ್‌, ಫ್ರಾನ್ಸ್, ಬೆಲ್ಜಿಯಂ  ಮತ್ತು ಇನ್ನಿತರ ಯೂರೋಪಿನ ರಾಷ್ಟ್ರಗಳಲ್ಲಿ ಆದಷ್ಟು ವೇಗವಾಗಿ ಆಗಿರಲಿಲ್ಲ.

ಅದರಲ್ಲೂ ಭಾರತದಲ್ಲಿನ ಕೃಷಿಯ ವಾಣಿಜ್ಯೀಕರಣವನ್ನು ಬಹುಮುಖ್ಯವಾಗಿ ಬ್ರಿಟಿಷರ ಕೈಗಾರಿಕೆಗಳಿಗೆ ಹೇರಳವಾಗಿ ಭೇಕಾಗಿದ್ದ ವಾಣಿಜ್ಯ ಬೆಳೆಗಳನ್ನು ಪೂರೈಸಲೆಂದೇ ಮಾಡಲಾಯಿತು. ಇದರಿಂದ ಅವರಿಗೆ ಯೂರೋಪು ಇಲ್ಲವೇ ಅಮೆರಿಕಾದ ಮಾರುಕಟ್ಟೆಗಳಿಂದ ಅಧಿಕ ಲಾಭ ಸಿಗುತ್ತಿತ್ತು. ಉದಾ: ಕೈಗಾರಿಕೀಕರಣದ ನಂತರ ಬ್ರಿಟನ್ನಿನಲ್ಲಿ ವೇಗವಾಗಿ ಬೆಳೆಯುತ್ತಿದ್ದ ಬಟ್ಟೆ ಕೈಗಾರಿಕೆಗಳಿಗೆ ಬೇಕಾಗಿದ್ದ ಕಚ್ಚಾ ಮತ್ತು ಉತ್ತಮ ಗುಣಮಟ್ಟದ ಹತ್ತಿಯನ್ನು ಬೆಳೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು. ಇದರಿಂದಾಗಿ ಭಾರತದಲ್ಲಿ ಕ್ರಮೇಣ ಹತ್ತಿ ಬೆಳೆಯುವ ಕೃಷಿ ಭೂಮಿಯು ದ್ವಿಗುಣ, ತ್ರಿಗುಣಗೊಳ್ಳುತ್ತಾ ಸಾಗಿ ದ್ದರಿಂದ ಹತ್ತಿಯ ಉತ್ಪಾದನೆಯು ಗಣನೀಯವಾಗಿ ಏರಿತು. ಅಲ್ಲದೇ ನೀಲಿ ಬೆಳೆ (ಇಂಡಿಗೊ), ಕಾಫಿ ಮತ್ತು ಚಹಾ ತೋಟಗಳ ಪ್ರಮಾಣವೂ ಹೆಚ್ಚತೊಡಗಿತು. ಏಕೆಂದರೆ ಇವುಗಳಿಗೆ ಯೂರೋಪು ಮತ್ತು ಅಮೆರಿಕಾದ ಮಾರುಕಟ್ಟೆಗಳಲ್ಲಿ ಅದಿಕ ಬೇಡಿಕೆ ಇತ್ತು.

III. ಕೃಷಿಯ ವಾಣಿಜ್ಯೀಕರಣಕ್ಕೆ ಕಾರಣವಾದ ಅಂಶಗಳು:- ಬ್ರಿಟಿಷರ ಆಡಳಿತದ ಕಾಲದಲ್ಲಿ ಉಂಟಾದ ಕೃಷಿಯ ವಾಣಿಜ್ಯೀಕರಣಕ್ಕೆ ಹಲವಾರು ಕಾರಣಗಳಿವೆ. ಅವುಗಳೆಂದರೆ,

  1. ಬ್ರಿಟಿಷರು ಭಾರತದಲ್ಲಿ ಗಳಿಸಿದ ರಾಜಕೀಯ ಅಧಿಕಾರವು ಅವರಿಗೆ ಇಲ್ಲಿನ ಕೃಷಿ ಚಟುವಟಿಕೆಗಳು ಮತ್ತು ಕಂದಾಯ ಆಡಳಿತದ ಮೇಲೆ ಪ್ರಭಾವ ಬೀರಲು ಕಾರಣವಾಯಿತು. ಅಂದರೆ ಭಾರತವು ಬ್ರಿಟಿಷರ ಒಂದು ವಸಾಹತು ನಾಡಾಗಿ ಪರಿವರ್ತನೆಯಾದ್ದರಿಂದ ಅವರು ಭಾರತವನ್ನು ಉತ್ಪಾದಕ ರಾಷ್ಟ್ರದಿಂದ ಕಚ್ಚಾವಸ್ತುಗಳ ಪೂರೈಕೆಯ ರಾಷ್ಟ್ರವನ್ನಾಗಿ ಮಾಡಿದರು.
  2. ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಮತ್ತು ಕಂದಾಯದ ಆಡಳಿತದಲ್ಲಿನ ಬದಲಾವಣೆಯಿಂದಾಗಿ ಕೃಷಿಯ ವಾಣಿಜ್ಯೀಕರಣ ಸಾಧ್ಯವಾಯಿತು.
  3. ಬ್ರಿಟಿಷರು ಪರಿಚಯಿಸಿದ ಉತ್ತಮ ಸಾರಿಗೆ ಸಂಪರ್ಕಗಳಾದ ರೈಲ್ವೆ ಮತ್ತು ಸಮುದ್ರ ಸಾರಿಗೆಗಳಿಂದಾಗಿ ಕೃಷಿಯ ವಾಣಿಜ್ಯೀಕರಣ ಮತ್ತಷ್ಟು ತೀವ್ರಗೊಂಡಿತು.
  4. ಕಂದಾಯ ಪಾವತಿಯನ್ನು ಹಣದ ರೂಪದಲ್ಲಿಯೇ ಮಾಡಬೇಕೆಂಬ ಬ್ರಿಟಿಷರ ನಿಯಮದಿಂದಾಗಿ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅನಿವಾರ್ಯತೆ ಉಂಟಾದುದರಿಂದ ಕೃಷಿಯ ವಾಣಿಜ್ಯೀಕರಣ ಸಾಧ್ಯವಾಯಿತು.
  5. ಯೂರೋಪಿನ ಕೈಗಾರಿಕಾ ಕ್ರಾಂತಿಯು ಭಾರತದಲ್ಲಿ ಕೃಷಿಯ ವಾಣಿಜ್ಯೀಕರಣಕ್ಕೆ ಕಾರಣವಾದ ಬಹುಮುಖ್ಯ ಅಂಶವಾಗಿದೆ. ಏಕೆಂದರೆ, ಅಲ್ಲಿನ ಕೈಗಾರಿಕೆಗಳಿಗೆ ಭಾರತದಿಂದ ಕಚ್ಚಾವಸ್ತುಗಳನ್ನು ಪೂರೈಸಲು ಬ್ರಿಟಿಷರು ಕ್ರಮ ಕೈಗೊಂಡರು.
  6. ಕೈಗಾರಿಕೀಕರಣದಿಂದಾಗಿ ವಿಸ್ತರಿಸಿದ ಜಾಗತಿಕ ಮಾರುಕಟ್ಟೆಯ ಸವಲತ್ತುಗಳು ಮತ್ತು ಬ್ರಿಟಿಷ್‌ ಕಂಪೆನಿಗಳು ಅಲ್ಲಿ ಸಾಧಿಸಿದ ಏಕಸ್ವಾಮ್ಯದಿಂದಾಗಿ ಭಾರತದಲ್ಲಿ ಕೃಷಿಯ ವಾಣಿಜ್ಯೀಕರಣ ಅಧಿಕಗೊಂಡಿತು.
  7. ವಿದೇಶಗಳಲ್ಲಿ ಹೆಚ್ಚಿದ ವಾಣಿಜ್ಯ ಬೆಳೆಗಳ ಬೇಡಿಕೆಯು ಭಾರತದಲ್ಲಿ ಕೃಷಿಯ ವಾಣಿಜ್ಯೀಕರಣಕ್ಕೆ ಕಾರಣವಾಯಿತು.
  8. ಅಮೆರಿಕಾದಲ್ಲಿ 1860ರ ದಶಕದಲ್ಲಿ ನಡೆದ ನಾಗರೀಕ ಯುದ್ಧದಿಂದಾಗಿ ಭಾರತದ ಹತ್ತಿಗೆ ಯೂರೋಪಿನಲ್ಲಿ ಅಪಾರ ಬೇಡಿಕೆ ಉಂಟಾಯಿತು ಮತ್ತು ಅದೇ ಸಮಯದಲ್ಲಿ ಭಾರತದಲ್ಲಿ ಆರಂಭವಾದ ದೇಶೀಯ ಬಟ್ಟೆ ಕೈಗಾರಿಕೆಗಳಿಂದಾಗಿಯೂ ಸಹಾ ಹತ್ತಿ ಬೆಳೆಯುವ ಕೃಷಿ ಭೂಮಿ ಹೆಚ್ಚಾಯಿತು.
  9. ಬ್ರಿಟಿಷರು ಅನುಸರಿಸಿದ ಭಾರತ ವಿರೋಧಿ ವಾಣಿಜ್ಯ ನೀತಿಯಿಂದಾಗಿ ಇಲ್ಲಿ ಕೃಷಿಯ ವಾಣಿಜ್ಯೀಕರಣ ಅದಿಕಗೊಂಡಿತು. ಅಂದರೆ ಅವರು ತಮ್ಮ ಸಿದ್ಧವಸ್ತುಗಳನ್ನು ಭಾರತಕ್ಕೆ ಪೂರೈಸಲು ಅಗತ್ಯ ಕ್ರಮ ಕೈಗೊಂಡರು; ಆದರೆ ಭಾರತದ ಸಿದ್ಧವಸ್ತುಗಳಿಗೆ ಯೂರೋಪಿನಲ್ಲಿ ಅಧಿಕ ತೆರಿಗೆ ಹಾಕುವ ಮೂಲಕ ನಮ್ಮ ಕೈಗಾರಿಕೆಗಳನ್ನು ನಾಶಪಡಿಸಿದರು.
  10. ಕಡ್ಡಾಯ ಮತ್ತು ನಗದು ರೂಪದ ಭೂಕಂದಾಯ ಪಾವತಿಯ ಕಾರಣದಿಂದಾಗಿ ರೈತರ ಸಾಲದ ಹೊರೆ ಅಧಿಕವಾಗಿ ಅವರು ಸಾಲ ಪಡೆದ ಲೇವಾದೇವಿಗಾರರ ಬಡ್ಡಿ ಮತ್ತು ಸಾಲಗಳನ್ನು ತೀರಿಸಲು ಅಧಿಕ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅನಿವಾರ್ಯತೆಗೆ ಒಳಗಾದರು.

IV. ಕೃಷಿಯ ವಾಣಿಜ್ಯೀಕರಣ ನಡೆದ ಬಗೆ: ಭಾರತದಲ್ಲಿನ ಕೃಷಿಯ ವಾಣಿಜ್ಯೀಕರಣವು ಬ್ರಿಟಿಷರು ಜಾರಿಗೆ ತಂದ ಪ್ರತ್ಯಕ್ಷ ಮತ್ತು ಪರೋಕ್ಷ ನೀತಿಗಳು ಮತ್ತು ಕಾನೂನುಗಳ ಮೂಲಕ ಆರಂಭವಾಯಿತು. ಅಂದರೆ ಅವರು ಜಾರಿಗೆ ತಂದ ಕಂದಾಯ ಸುಧಾರಣೆಗಳ ಭಾಗವಾಗಿದ್ದ ಜಮೀನ್ದಾರಿ ಮತ್ತು ರೈತವಾರಿ ಪದ್ಧತಿಗಳಿಂದಾಗಿ ಕೃಷಿ ಭೂಮಿಯು ಕೊಳ್ಳುವ ಮತ್ತು ಮಾರಾಟ ಮಾಡುವ ವಸ್ತುವಾಗಿ ಬದಲಾಯಿತು. ಜಮೀನ್ದಾರಿ ಪದ್ಧತಿಯಲ್ಲಿ ಭೂಮಿಯ ಒಡೆತನ ಪಡೆದ ಜಮೀನ್ದಾರರು ಅದನ್ನು ಬೇಕಾದಾಗ ಮಾರುವ ಇಲ್ಲವೇ ಹೊಸ ಭೂಮಿಗಳನ್ನು ಕೊಳ್ಳುವ ಅಧಿಕಾರ ಹೊಂದಿದ್ದರು. ಇದರಿಂದಾಗಿ ಅದುವರೆಗೂ ಜೀವನೋಪಾಯದ ಮಾರ್ಗವಾಗಿದ್ದ ಕೃಷಿಯು ಅಂತರರಾಷ್ಟ್ರೀಯ ವ್ಯವಹಾರದ ಸ್ವರೂಪವನ್ನು ಪಡೆಯತೊಡಗಿತು. ಜೊತೆಗೆ ಹತ್ತಿ, ಸೆಣಬು, ಕಬ್ಬು, ಶೇಂಗಾ, ತಂಬಾಕು, ಕಾಫಿ, ಚಹಾ, ಇಂಡಿಗೊ, ರಬ್ಬರ್‌, ಅಫೀಮುಗಳಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಯುಳ್ಳ  ಕೃಷಿ ಬೆಳೆಗಳನ್ನು ಭಾರತದ ಕೃಷಿ ಭೂಮಿಯಲ್ಲಿ ಬೆಳೆಯಲು ಆರಂಭಿಸಲಾಯಿತು.  ಇದರಿಂದಾಗಿ ಬ್ರಿಟಿಷರ ರಾಜಕೀಯ ಅಧಿಕಾರ ಅಥವಾ ವಸಾಹತು ವಿಸ್ತರಣೆ ಆದಂತೆಲ್ಲಾ ಕೃಷಿಯ ವಾಣಿಜ್ಯೀಕರಣವು ಅಧಿಕಗೊಳ್ಳತೊಡಗಿತು. ಆದರೆ ಕೃಷಿಯ ವಾಣಿಜ್ಯೀಕರಣವು ಬಹುತೇಕ ಭಾರತೀಯ ರೈತರಿಗೆ ಅಸ್ವಾಭಾವಿಕ ಮತ್ತು ಬಲವಂತದ ವಿಧಾನವಾಗಿತ್ತು. ಏಕೆಂದರೆ ಕೃಷಿಕರಿಂದ ಅವರ ಇಚ್ಚೆಗೆ ವಿರುದ್ಧವಾಗಿ ಬಲವಂತದಿಂದ ವಾಣಿಜ್ಯ ಬೆಳೆಗಳನ್ನು ಬೆಳೆಸಲಾಗುತ್ತಿತ್ತು. ಅಲ್ಲದೇ ಬ್ರಿಟಿಷರ ಕಂದಾಯ ಆಡಳಿತದ ಸುಧಾರಣೆಗಳಿಂದಾಗಿ ನಿಗದಿತ ಸಮಯದೊಳಗೆ ಮತ್ತು  ಕೇವಲ ನಗದು ರೂಪದಲ್ಲಿಯೇ ಭೂಕಂದಾಯ ಪಾವತಿ ಮಾಡಬೇಕಾದುದರಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅನಿವಾರ್ಯತೆಗೆ ರೈತ ಒಳಗಾದನು. ಜೊತೆಗೆ ಅವನು ತನ್ನ ಕೃಷಿ ಭೂಮಿಯ ನಿಗದಿತ ಪ್ರದೇಶದಲ್ಲಿ ಬ್ರಿಟಿಷರು ಹೇಳಿದ ವಾಣಿಜ್ಯ ಬೆಳೆಗಳನ್ನೂ ಬೆಳೆಯಬೇಕಾಗಿತ್ತು.

V. ಕೃಷಿಯ ವಾಣಿಜ್ಯೀಕರಣದ ಪರಿಣಾಮಗಳು: ಕೃಷಿಯ ವಾಣಿಜ್ಯೀಕರಣದ ಪ್ರಕ್ರಿಯೆಯು ಮಿಶ್ರ ಪರಿಣಾಮಗಳನ್ನು ಒಳಗೊಂಡಿತ್ತು. ಅದು ಬ್ರಿಟನ್ನಿನಲ್ಲಿ ಕೈಗಾರಿಕೀಕರಣವನ್ನು ಪೋಷಿಸಿದರೆ, ಭಾರತದಲ್ಲಿನ ಗ್ರಾಮಗಳ ಆರ್ಥಿಕ ಸ್ವಾವಲಂಬನೆಯನ್ನು ನಾಶಪಡಿಸಿತು. ಏಕೆಂದರೆ ವಾಣಿಜ್ಯೀಕರಣವು ಶ್ರೀಮಂತರು ಮತ್ತು ಬ್ರಿಟಿಷ್‌ ವರ್ತಕರಿಗೆ ಲಾಭವನ್ನುಂಟು ಮಾಡುತ್ತಿತ್ತು.  ಗ್ರಾಮೀಣ ಕೃಷಿಕರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಅಲಭ್ಯತೆಯ ಕಾರಣದಿಂದಾಗಿ ಅಪಾರ ನಷ್ಟವನ್ನುಂಟು ಮಾಡಿತು. ಅಂದರೆ ಕೃಷಿಯ ವಾಣಿಜ್ಯೀಕರಣವು  ಭಾರತೀಯ ಕೃಷಿಕರಿಗೆ ನೂತನ ಸಂಗತಿಯಾಗಿದ್ದು, ಬಹುತೇಕ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಎಸ್ಟೇಟು ಅಥವಾ ತೋಟಗಳು ಬ್ರಿಟಿಷರ ನಿಯಂತ್ರಣದಲ್ಲಿದ್ದವು. ಅಲ್ಲದೇ ವಾಣಿಜ್ಯ ಬೆಳೆಗಳ ವ್ಯಾಪಾರದಲ್ಲಿ ನಗದು ವಹಿವಾಟು ಅಧಿಕಗೊಂಡಿತು ಮತ್ತು ಹಿಂದೆ ಇದ್ದ ವಸ್ತು ವಿನಿಮಯ ಪದ್ಧತಿಯು ಕಣ್ಮರೆಯಾಗತೊಡಗಿತು. ಕೃಷಿಯ ವಾಣಿಜ್ಯೀಕರಣದ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದು:

  1. ಬ್ರಿಟಿಷ್‌ ಭೂಮಾಲೀಕರು, ವ್ಯಾಪಾರಿಗಳು ಮತ್ತು ಉತ್ಪಾದಕರಿಗೆ ಲಾಭ:- ಕೃಷಿಯ ವಾಣಿಜ್ಯೀಕರಣದಿಂದಾಗಿ ಬ್ರಿಟಿಷ್ ಭೂಮಾಲೀಕರು, ವ್ಯಾಪಾರಿಗಳು ಮತ್ತು ಉತ್ಪಾದಕರಿಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಅಧಿಕ ಅವಕಾಶ ನೀಡಿದುದು, ಅವುಗಳನ್ನು ಕೃಷಿಕರಿಂದ ಖರೀದಿಸಿ ಮಾರಾಟ ಮಾಡುವುದು ಮತ್ತು ಸಿದ್ಧವಸ್ತುಗಳ ಉತ್ಪಾದಕರಿಗೆ ಅವಕಾಶ ಕಲ್ಪಿಸಿದ್ದರಿಂದ ಅಧಿಕ ಲಾಭವಾಯಿತು. ಜೊತೆಗೆ ಬ್ರಿಟಿಷರ ಮಧ್ಯವರ್ತಿಗಳಾಗಿ ಅಂದರೆ ಖರೀದಿದಾರರು, ಶ್ರೀಮಂತರು ಮತ್ತು ಲೇವಾದೇವಿಗಾರರಾಗಿ ಕಾರ್ಯ ನಿರ್ವಹಿಸಿದ ದೇಶೀಯರೂ ಸಹ ಇದರಿಂದ ಲಾಭ ಪಡೆದರು.
  2. ಲೇವಾದೇವಿಗಾರರ ಮೇಲಿನ ಅಧಿಕ ಅವಲಂಬನೆ:- ಕಂಪೆನಿ ಸರ್ಕಾರದ ಕಂದಾಯ ಪಾವತಿಗೆ ಹಣ ಬೇಕಾದುದರಿಂದ ಬಡ ಕೃಷಿಕ ಸುಗ್ಗಿಯ ನಂತರ ಬಂದಷ್ಟು ಬೆಲೆಗೆ ತನ್ನ ಬೆಳೆಗಳನ್ನು ಮಾರುವ ಅನಿವಾರ್ಯತೆಗೆ ಒಳಗಾದನು. ಇದರಿಂದ ಅವನು ಖರೀದಿದಾರ ನಿಗದಿ ಮಾಡಿದಷ್ಟು ಬೆಲೆಗೆ ತನ್ನ ಉತ್ಪನ್ನಗಳನ್ನು ಮಾರಬೇಕಾಗುತ್ತಿತ್ತು. ಇದರಿಂದಾಗಿ ರೈತರು ಶ್ರೀಮಂತರ ಮೇಲೆ ಅವಲಂಬಿತರಾಗಬೇಕಾಯಿತು. ಜೊತೆಗೆ ರೈತರು ಅವರಿಂದ ಮುಂಗಡವಾಗಿ ಸಾಲ ಪಡೆಯುತ್ತಿದ್ದರಿಂದ ಅದನ್ನು ಸಕಾಲದಲ್ಲಿ ಹಿಂತಿರುಗಿಸದಿದ್ದರೆ ಶ್ರೀಮಂತರು ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿದ್ದರು.
  3. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆ ಮತ್ತು ನಿರಂತರ ಕ್ಷಾಮಗಳು:- ಕೃಷಿಯ ವಾಣಿಜ್ಯೀಕರಣದಿಂದಾಗಿ ಕೇವಲ ಕೃಷಿಕರಷ್ಟೇ ಅಲ್ಲ ಸಾಮಾನ್ಯ ಜನ ಹಾಗೂ ಪಶುಗಳೂ ಸಹ ಸಂಕಷ್ಟಕ್ಕೆ ಒಳಗಾದವು. ಏಕೆಂದರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರದಲ್ಲಿ ರೈತರು ಆಹಾರ ಧಾನ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡಬೇಕಾಯಿತು. ಇದರಿಂದಾಗಿ ಬರಗಾಲಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಆಹಾರದ ಕೊರತೆ ಉಂಟಾಗಿ ಕ್ಷಾಮ ಪರಿಸ್ಥಿತಿ ಉಂಟಾಗಿ ಅಪಾರ ಸಾವು-ನೋವುಗಳಿಗೆ ಕಾರಣವಾಗುತ್ತಿತ್ತು. ಅಂಕಿ-ಅಂಶಗಳ ಪ್ರಕಾರ 1893-94 ರಿಂದ 1945-46ರವರೆಗೆ  ವಾಣಿಜ್ಯ ಬೆಳೆಗಳ ಉತ್ಪಾದನೆಯು ಶೇ. 85 ರಷ್ಟು ಹೆಚ್ಚಾದರೆ, ಆಹಾರ ಧಾನ್ಯಗಳ ಉತ್ಪಾದನೆಯು ಶೇ. 7 ರಷ್ಟು ಕುಸಿದಿತ್ತು.
  4. ಅಧಿಕವಾದ ಭಾರತೀಯರ ಬಡತನ:- ಅಧಿಕಗೊಳ್ಳುತ್ತಿದ್ದ ಜನಸಂಖ್ಯೆಯ ಕಾರಣದಿಂದಾಗಿ ಭೂಮಿಯ ಮೇಲಿನ ಅಧಿಕ ಅವಲಂಬನೆ ಆರಂಭವಾಯಿತು. ಏಕೆಂದರೆ ಬ್ರಿಟಿಷರು ಭಾರತದ ಕೈಗಾರಿಕೆಗಳನ್ನು ನಾಶಪಡಿಸಿದ್ದರು. ಜೊತೆಗೆ ಭೂವಿಭಜನೆಯಿಂದಾಗಿಯೂ ಸಹ ಕೃಷಿ ಉತ್ಪನ್ನ ಕುಗ್ಗಿ ಭಾರತೀಯರು ಅದಿಕ ಬಡತನಕ್ಕೆ ಒಳಗಾದರು.
  5. ಕೃಷಿ ಬೆಳೆಗಳ ಪ್ರಾದೇಶಿಕತೆ:- ಮಣ್ಣು ಮತ್ತು ಹವಮಾನದ ಕಾರಣದಿಂದಾಗಿ ಕೆಲವು ಭೂಪ್ರದೇಶಗಳಲ್ಲಿ ನಿರ್ದಿಷ್ಟ ಬೆಳೆಗಳನ್ನು ಅಧಿಕವಾಗಿ ಬೆಳೆಯಬಹುದು. ಇದರಿಂದಾಗಿ ಆಯಾ ಪ್ರದೇಶಗಳು ನಿರ್ದಿಷ್ಟ ವಾಣಿಜ್ಯ ಬೆಳೆಗಳನ್ನು ಬೆಳೆಯುವ ವಿಶೇಷ ಪ್ರದೇಶಗಳಾಗಿ ಪರಿವರ್ತನೆಗೊಂಡವು. ಉದಾ: ಮುಂಬೈ ಪ್ರಾಂತ್ಯದ ದಕ್ಷಿಣದ ಜಿಲ್ಲೆಗಳು ಹತ್ತಿಗೂ, ಬಂಗಾಳ ನೀಲಿ ಮತ್ತು ಸೆಣಬಿಗೂ, ಬಿಹಾರ ಅಫೀಮಿಗೂ ಅಸ್ಸಾಂ ಚಹಾಕ್ಕೂ, ಪಂಜಾಬ್‌ ಗೋಧಿಗೂ ಸೀಮಿತವಾದವು.
  6. ಕೃಷಿ ವಲಯದ ಜಾಗತಿಕರಣ:- ಕೈಗಾರಿಕೀಕರಣದಿಂದಾಗಿ ಕೃಷಿ ಉತ್ಪನ್ನಗಳ ಪೂರೈಕೆಯು ಜಾಗತಿಕ ಮಟ್ಟದಲ್ಲಿ ಆಗುತ್ತಿದ್ದರಿಂದ ಒಂದು ವೇಳೆ ಜಾಗತಿಕ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳ ಬೇಡಿಕೆ ಕಡಿಮೆಯಾದಲ್ಲಿ ಅದರ ಪರಿಣಾಮವು ರೈತರ ಮೇಲೆ ಉಂಟಾಗುತ್ತಿತ್ತು. ಇದರಿಂದಾಗಿ ಭಾರತೀಯ ರೈತನು ಜಾಗತಿಕ ಮಟ್ಟದ ಕಚ್ಚಾವಸ್ತುಗಳ ಬೇಡಿಕೆ ಮತ್ತು ಪೂರೈಕೆಗಳ ಏರಿಳಿತ ಉಂಟಾದಾಗ ಲಾಭ-ನಷ್ಟಗಳನ್ನು ಅನುಭವಿಸಬೇಕಾಗಿತ್ತು.
  7. ಗ್ರಾಮಗಳ ಸ್ವಾವಲಂಬನೆಯಲ್ಲಿ ಕುಸಿತ:- ಕೃಷಿಯ ವಾಣಿಜ್ಯೀಕರಣವು ಗ್ರಾಮಗಳ ಆರ್ಥಿಕ ಸ್ವಾವಲಂಬನೆಯನ್ನು ನಷ್ಟಗೊಳಿಸಿತು. ಏಕೆಂದರೆ ಬ್ರಿಟಿಷರ ಆಗಮನದ ಮುನ್ನ ಭಾರತೀಯ ಗ್ರಾಮಗಳು ಆಹಾರ ಧಾನ್ಯಗಳು, ಕೃಷಿ ಸಲಕರಣೆಗಳು ಮತ್ತು ಗ್ರಾಮೀಣ ಕರಕುಶಲ ಉದ್ಯೋಗದ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಿದ್ದವು. ಇದರಿಂದಾಗಿ ಕೃಷಿ ಮತ್ತು ಸಾಂಪ್ರದಾಯಿಕ ಗುಡಿಕೈಗಾರಿಕೆಗಳ ನಡುವಿನ ಸಾಮರಸ್ಯ ಸಹಾ ಹಾಳಾಯಿತು.
  8. ರೈತರ ದಂಗೆಗಳು:- ಕೃಷಿ ವಾಣಿಜ್ಯೀಕರಣದ ದುಷ್ಟ ಪರಿಣಾಮವೆಂದರೆ ಭಾರತೀಯ ರೈತನು ಬ್ರಿಟಿಷ್‌ ಭೂಮಾಲಿಕ, ವ್ಯಾಪಾರಿ, ಉತ್ಪಾದಕ ಮತ್ತು ಮಧ್ಯವರ್ತಿಗಳ ಶೋಷಣೆಗೆ ಒಳಗಾದನು. ಇದು ಅನೇಕ ರೈತ ಮತ್ತು ಬುಡಕಟ್ಟು ದಂಗೆಗಳಿಗೆ ಕಾರಣವಾಯಿತು. ಉದಾ: 1859ರ ಇಂಡಿಗೊ ರೈತರ ಚಳವಳಿ.

VI. ಕೃಷಿಯ ವಾಣಿಜ್ಯೀಕರಣದ ಧನಾತ್ಮಕ ಪರಿಣಾಮಗಳು: ಹಲವಾರು ನಕರಾತ್ಮಕ ಪರಿಣಾಮಗಳಿದ್ದಾಗ್ಯೂ ಕೃಷಿಯ ವಾಣಿಜ್ಯೀಕರಣವು ಕೆಲವು ಧನಾತ್ಮಕ ಪರಿಣಾಮಗಳನ್ನು ಒಳಗೊಂಡಿತ್ತು. ಅವುಗಳೆಂದರೆ,

  1. ಇದು ಸಾಮಾಜಿಕ ಸಂರಚನೆಯಲ್ಲಿ ಬದಲಾವಣೆಗೆ ಕಾರಣವಾಯಿತು.
  2. ಇದು ಭಾರತೀಯ ಆರ್ಥಿಕತೆಯನ್ನು ಬಂಡವಾಳಶಾಹಿ ವ್ಯವಸ್ಥೆಯಾಗಿ ರೂಪಿಸಿತು.
  3. ಇದು ಭಾರತದ ಆರ್ಥಿಕತೆಯನ್ನು ಜಾಗತಿಕ ಆರ್ಥಿಕತೆಯೊಂದಿಗೆ ಬೆಸೆಯಿತು.
  4. ಇದು ರಾಷ್ಟ್ರೀಯ ಆರ್ಥಿಕತೆಯ ಬೆಳವಣಿಗೆಗೂ ಕಾರಣವಾಯಿತು.
  5. ಇದು ಕೃಷಿಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳನ್ನಾಗಿ ಪರಿವರ್ತಿಸಿತು.
  6. ಇದು ಕೃಷಿ ಬೆಳೆಗಳ ಪ್ರಾದೇಶಿಕತೆಯನ್ನು ಉಂಟು ಮಾಡಲು ಸಹಕಾರಿಯಾಯಿತು.

VII. ಕೃಷಿ ಭೂಮಿಯ ವಿಭಜನೆ:-

A.  ಅರ್ಥ ವಿವರಣೆ:- ಬ್ರಿಟಿಷರು ಅನುಸರಿಸಿದ ವಿವಿಧ ಕಂದಾಯ ನೀತಿಗಳು ಮತ್ತು ಕೃಷಿಯ ವಾಣಿಜ್ಯೀಕರಣದಿಂದ  ಭಾರತದಲ್ಲಿ ಆರ್ಥಿಕ ಪರಿಣಾಮಗಳಲ್ಲದೇ ಕೃಷಿ ಭೂಮಿಯ ವಿಭಜನೆಯು ಆಯಿತು. ಇದರಿಂದ ಭೂ ಹಿಡುವಳಿಗಳು ಗಾತ್ರದಲ್ಲಿ ಕುಗ್ಗಿ ಕೃಷಿ ಭೂಮಿಗಳು ತುಂಡು-ತುಂಡಾದ ಹಿಡುವಳಿಗಳಾದವು. ಬ್ರಿಟಿಷರು ಜಾರಿಗೆ ತಂದ ಜಮೀನುದಾರಿ ಪದ್ಧತಿಯಲ್ಲಿ ಭೂಮಾಲೀಕತ್ವವನ್ನು ಜಮೀನುದಾರರಿಗೆ ನೀಡಿದ್ದರಿಂದ ಅವರು ತಮ್ಮ ಮಾಲೀಕತ್ವದ ಕೃಷಿ ಭೂಮಿಯನ್ನು ಸಣ್ಣ-ಸಣ್ಣ ಹಿಡುವಳಿಗಳಾಗಿ ವಿಭಜಿಸಿ ರೈತರಿಗೆ ಗೇಣಿ ಆಧಾರದಲ್ಲಿ ಕೃಷಿ ಮಾಡಲು ಹಂಚಿದರು. ಇದರಿಂದ ಬೃಹತ್‌ ವಿಸ್ತಾರವನ್ನು ಹೊಂದಿದ್ದ ಕೃಷಿ ಭೂಮಿಗಳು ವಿಭಜನೆಗೊಂಡು ಸಣ್ಣ ಹಿಡುವಳಿಗಳ ರೂಪ ತಾಳಿದವು. ಅಲ್ಲದೇ ರೈತವಾರಿ ಪದ್ಧತಿಯಲ್ಲಿ ಭೂ ಮಾಲೀಕತ್ವವನ್ನು ರೈತರಿಗೆ ನೀಡಲಾಗಿತ್ತು. ಅಲ್ಲಿಯು ಸಹಾ ಕೃಷಿ ಭೂಮಿಗಳನ್ನು ಹಂಚುವಾಗ ಕೃಷಿ ಭೂಮಿಯನ್ನು ಚಿಕ್ಕ-ಚಿಕ್ಕ ಹಿಡುವಳಿಗಳಾಗಿ ವಿಭಜಿಸಬೇಕಾಗುತ್ತಿತ್ತು. ಇದರಿಂದ ಮದ್ರಾಸ್ ಪ್ರಾಂತ್ಯದಲ್ಲಿಯೂ ಭೂವಿಭಜನೆ ಆದುದನ್ನು ಗಮನಿಸಬಹುದು. ಇದೇ ಪದ್ಧತಿಯನ್ನು ಮಹಲ್‌ವಾರಿ ಕಂದಾಯ ಪದ್ಧತಿಯಲ್ಲೂ ಅನುಸರಿಸಲಾಗಿತ್ತು. ಅಂದರೆ ಅಲ್ಲಿ ಇಡೀ ಮಹಲ್‌ನ ಮುಖ್ಯಸ್ಥ ಲಂಬಾದಾರನೇ ಆಗಿದ್ದರೂ ಕೃಷಿ ಭೂಮಿಯ ಒಡೆತನ ವೈಯುಕ್ತಿಕವಾಗಿತ್ತು. ಈ ಪದ್ಧತಿಗಳಿಂದ ಕೃಷಿ ಭೂಮಿಯು ಗಾತ್ರದಲ್ಲಿ ಕಿರಿದಾದುದನ್ನು ಗಮನಿಸಬಹುದು. ಹೀಗೆ ಬೃಹತ್ತಾದ ಭೂಹಿಡುವಳಿಗಳು ಗಾತ್ರದಲ್ಲಿ ಕುಗ್ಗುವುದನ್ನು ಭೂವಿಭಜನೆ ಎಂದು ಕರೆಯಲಾಗಿದೆ.

B.  ಭೂವಿಭಜನೆಯ ಕಾರಣಗಳು:- 18-19 ನೆ ಶತಮಾನದಲ್ಲಿ ಭಾರತದಲ್ಲಿ ಉಂಟಾದ ಭೂವಿಭಜನೆಗೆ ಕೆಳಕಂಡ ಕಾರಣಗಳನ್ನು ನೀಡಲಾಗಿದೆ:

1.      ಬ್ರಿಟಿಷರ ಕಾಲದಲ್ಲಿ ಉಂಟಾದ ಕೃಷಿಯ ವಾಣಿಜ್ಯೀಕರಣದಿಂದಾಗಿ ಭೂಹಿಡುವಳಿಗಳು ಬೆಳೆಯ ಆಧಾರದಲ್ಲಿ ವಿಭಜನೆಗೊಂಡು ಬೆಳೆ ಬೆಳೆಯುವ ಆಧಾರದಲ್ಲಿ ಕಿರಿದಾದ ಹಿಡುವಳಿಗಳಾದವು. ಏಕೆಂದರೆ ಬ್ರಿಟಿಷರು ಪ್ರತಿಯೊಬ್ಬ ರೈತನೂ ತನ್ನ ಜಮೀನಿನಲ್ಲಿ ನಿರ್ದಿಷ್ಟ ಅಂದರೆ ಮೂರನೆ ಒಂದು ಭಾಗದಲ್ಲಿ ಅವರು ಹೇಳಿದ ಬೆಳೆಗಳನ್ನೇ ಬೆಳೆದು ಆ ಬೆಳೆಗಳನ್ನು ಬ್ರಿಟಿಷ್‌ ವ್ಯಾಪಾರಿಗಳು ಇಲ್ಲವೇ ತೋಟಗಾರರಿಗೆ ಮಾರಾಟ ಮಾಡಬೇಕಾಗಿತ್ತು. ಇದರಿಂದ ಭೂವಿಭಜನೆ ಮತ್ತು ಕೃಷಿ ಉತ್ಪನ್ನಗಳ ಇಳುವರಿಯ ಮೇಲೆ ಪರಿಣಾಮ ಉಂಟಾದುದನ್ನು ಗಮನಿಸಬಹುದು.

2.     ರೈತವಾರಿ ಮತ್ತು ಮಹಲ್‌ವಾರಿ ಪದ್ಧತಿಗಳಲ್ಲಿ ಭೂ ಮಾಲೀಕತ್ವವು ರೈತರಿಗೆ ದೊರೆತುದರಿಂದ ಮನೆಯ ಯಜಮಾನನ ಮರಣದ ಕಾಲಕ್ಕೆ ಅವನ ಒಡೆತನದ ಭೂಮಿ ಮಕ್ಕಳಲ್ಲಿ ಹಂಚಿಕೆಯಾಗುವುದರಿಂದಲೂ ಭೂವಿಭಜನೆ   ಆಗುತ್ತಿತ್ತು. ಅಲ್ಲದೇ ರೈತನೊಬ್ಬ ತನ್ನ ಒಡೆತನದ ಒಂದಷ್ಟು ಭೂಮಿಯನ್ನು ಬೇರೊಬ್ಬರಿಗೆ ಮಾರಾಟ ಅಥವಾ ಪರಬಾರೆ ಮಾಡಿದಾಗಲೂ ಸಹ ಕೃಷಿ ಭೂಮಿಯು ಗಾತ್ರ ಮತ್ತು ಬೆಳೆ ಬೆಳೆಯುವ ವಿಸ್ತಾರ ಎಂಬ ಎರಡು ವಿಧದಲ್ಲಿ ವಿಭಜನೆ ಆಗುತ್ತಿತ್ತು.

C. ಪರಿಣಾಮಗಳು:- ಈ ರೀತಿಯ ಭೂವಿಭಜನೆಯಿಂದಾಗಿ ಉಂಟಾದ ಪರಿಣಾಮಗಳನ್ನು ಕೆಳಕಂಡಂತೆ ವಿವರಿಸಲಾಗಿದೆ:

1.      ಕೃಷಿ ಉತ್ಪನ್ನಗಳಲ್ಲಿ ಇಳಿಕೆ ಮತ್ತು ಇಳುವರಿಯಲ್ಲೂ ಇಳಿಕೆ ಉಂಟಾಗುತ್ತಿತ್ತು.

2.     ಆಧುನಿಕ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸುವುದು ಕಷ್ಟವಾಯಿತು.

3.     ಕೃಷಿ ಭೂಮಿಗಳು ಕಿರಿದಾಗುವುದರಿಂದ ರೈತರು ಬೇಸಾಯದಲ್ಲಿ ಆಸಕ್ತಿ ಕಳೆದುಕೊಂಡು ಸೋಮಾರಿಗಳಾದರು.

4.    ಭೂವಿಭಜನೆಗಳಿಂದ ಭೂರಹಿತ ಕೃಷಿ ಕಾರ್ಮಿಕರ ಸಮಸ್ಯೆಗಳೂ ಉಂಟಾಗಿ ಅವರು ನಗರಗಳಿಗೆ ವಲಸೆ ಹೋಗುವುದು ಅನಿವಾರ್ಯವಾಯಿತು.

5.     ನಗರಗಳಲ್ಲಿ ಜನಸಂಕ್ಯೆಯ ಒತ್ತಡ ಹೆಚ್ಚಿದುದಲ್ಲದೇ ವಲಸೆ ಬಂದವರಿಂದ ನಿರ್ಮಾಣವಾಗುತ್ತಿದ್ದ ಕೊಳಗೇರಿಗಳಿಂದ  ಆರೋಗ್ಯ, ನೈರ್ಮಲ್ಯಗಳಂತಹ ಸಾಮಾಜಿಕ ಸಮಸ್ಯೆಗಳೂ ಉಂಟಾದವು.

6.     ಭೂರಹಿತ ಕಾರ್ಮಿಕರು ನೊಂದಾಯಿತ ಕಾರ್ಮಿಕರಾಗಿ ಡಚ್‌, ಫ್ರೆಂಚ್, ಇಂಗ್ಲಿಷ್‌ ಮತ್ತಿತರ ಯೂರೋಪಿನ ವಸಾಹತುಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುವ ಪರಿಸ್ಥಿತಿ ಉಂಟಾಯಿತು.

7.     ಭೂವಿಭಜನೆಯು ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ಸಮಸ್ಯೆಗೂ ಕಾರಣವಾಯಿತು.

   ಒಟ್ಟಿನಲ್ಲಿ ಬ್ರಿಟಿಷರು ಜಾರಿಗೆ ತಂದ ಕಂದಾಯ ಪದ್ಧತಿಗಳು ಮತ್ತು ಕೃಷಿಯ ವಾಣಿಜ್ಯೀಕರಣದಿಂದಾಗಿ ಭಾರತದ ಕೃಷಿ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಮಿಶ್ರ ಪರಿಣಾಮಗಳಾದುದನ್ನು ವಿದ್ವಾಂಸರು ಗುರ್ತಿಸಿದ್ದಾರೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources