ಅಧ್ಯಾಯ 7. ಕೈಗಾರಿಕೆಗಳ ನಾಶ –ಬ್ರಿಟಿಷರ ಕೈಗಾರಿಕಾ ನೀತಿ – ಗುಡಿಕೈಗಾರಿಕೆಗಳ ನಾಶ.

ದಿವಾನಿ ಹಕ್ಕನ್ನು ವಹಿಸಿಕೊಂಡ ನಾಲ್ಕು ವರ್ಷಗಳ ಅನಂತರ ಈಸ್ಟ್ ಇಂಡಿಯಾ ಕಂಪೆನಿಯ ನಿರ್ದೇಶಕರ ಆಜ್ಞೆ:

'ಬಂಗಾಳದಲ್ಲಿ ಕಚ್ಚಾ ರೇಷ್ಮೆಯ ಉತ್ಪಾದನೆಯನ್ನು ಪ್ರೋತ್ಸಾಹಿಸತಕ್ಕದ್ದು ಮತ್ತು ರೇಷ್ಮೆ ಬಟ್ಟೆಗಳ ಉತ್ಪಾದನೆಗೆ ಅಡ್ಡಿ ಮಾಡತಕ್ಕದ್ದು ಹಾಗೂ ರೇಷ್ಮೆ ನೂಲನ್ನು ಸುತ್ತುವ ಕೆಲಸಗಾರರನ್ನು ಕಂಪೆನಿಯ ಕಾರ್ಖಾನೆಗಳಲ್ಲಿ ದುಡಿಯಲು ಕಡ್ಡಾಯ ಮಾಡತಕ್ಕದ್ದು ಮತ್ತು ಸರ್ಕಾರದ ಆಜ್ಞೆ ಮೀರೆ ಅವರು ತಮ್ಮ ಮನೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿ, ಅವರು ಹಾಗೇನಾದರೂ ಕೆಲಸ ಮಾಡಿದರೆ ತೀವ್ರವಾದ ದಂಡಗಳನ್ನು ವಿಧಿಸತಕ್ಕದ್ದು".

ಬೋಲ್ಟ್ (1772) ಏಕಸ್ವಾಮ್ಯದ ಕೆಟ್ಟ ಪರಿಣಾಮಗಳನ್ನು ಈ ರೀತಿ ವರ್ಣಿಸುತ್ತಾನೆ :

"ಒಂದೊಂದು ರೀತಿಯ ಏಕಸ್ವಾಮ್ಯ ಉಂಟಾದಾಗಲೂ, ಭಾರತದಾದ್ಯಂತ ಎಲ್ಲ ವರ್ಗದ ತಯಾರಕರಿಗೂ ಎಲ್ಲ ರೀತಿಯ ಉಪದ್ರವ ದಿನೇ ದಿನೇ ಹೆಚ್ಚುತ್ತಿದೆ. ನೇಕಾರರು ತಮ್ಮ ಉತ್ಪನ್ನಗಳನ್ನು ಮಾರಲು ಧೈರ್ಯ ಮಾಡಿದ್ದಕ್ಕಾಗಿ, ದಲಾಲರು ಈ ರೀತಿ ಮಾರಾಟಕ್ಕೆ ಸಹಾಯ ಮಾಡಿದರೆಂಬ ಅಥವಾ ಶಾಮೀಲಾದರೆಂಬ ಕಾರಣಕ್ಕಾಗಿ, ಕಂಪೆನಿಯ ಪ್ರತಿನಿಧಿಗಳು ಅವರನ್ನು ಹಿಡಿದು ಸೆರೆವಾಸಕ್ಕೆ ಕಳುಹಿಸಿ, ಕೋಳದಲ್ಲಿ ಬಂಧಿಸಿ, ಸಾಕಷ್ಟು ಮೊತ್ತದ ದಂಡ ವಿಧಿಸಿ, ಚಾಟಿಯಿಂದ ಹೊಡೆದು, ಮತ್ತು ಅವರು ಅಮೂಲ್ಯವೆಂದು ಗೌರವಿಸುವ ಅವರ ಕಸುಬಿನಿಂದಲೇ ಅವರನ್ನು ವಂಚಿತರನ್ನಾಗಿ ಮಾಡುತ್ತಿದ್ದರು. ನೇಕಾರರಿಂದ ಮುಚ್ಚಳಿಕೆಗಳನ್ನು ಬರೆಸಿಕೊಳ್ಳುವುದರ ಮೂಲಕ ಅವರು ನೆರವೇರಿಸಲಸಾಧ್ಯವಾದ ಒಪ್ಪಂದಗಳನ್ನು ಅವರ ಮೇಲೆ ಹೇರಿ, ಕೊರತೆಯನ್ನು ತುಂಬಿಕೊಡುವಂತೆ ಒತ್ತಾಯಿಸುತ್ತಿದ್ದರು. ರೇಷ್ಮೆ ನೂಲು ಸುತ್ತುವ 'ನಗದ'ರನ್ನು ಎಷ್ಟು ಅನ್ಯಾಯದ ರೀತಿಯಿಂದ ನಡೆಸಿಕೊಳ್ಳುತ್ತಿದ್ದರೆಂದರೆ, ಅವರ ಹೆಬ್ಬೆರಳುಗಳನ್ನು ಕತ್ತರಿಸಿ, ಇನ್ನು ಮುಂದೆ ರೇಷ್ಮೆದಾರವನ್ನು ಸುತ್ತಲು ಅವರನ್ನು ಒತ್ತಾಯಿಸುವುದು ಸಾಧ್ಯವೇ ಇಲ್ಲದಂತೆ ಮಾಡುತ್ತಿದ್ದ ನಿದರ್ಶನಗಳು ಬೆಳಕಿಗೆ ಬಂದಿವೆ.

 

I. ಪೀಠಿಕೆ: ಪ್ರಾಚೀನ ಕಾಲದಿಂದಲೂ ಭಾರತದ ಬದುಕು ಗ್ರಾಮೀಣ ಸ್ವರೂಪದ್ದಾಗಿತ್ತು. ಅದರಂತೆ ಯೂರೋಪಿಯನ್ನರು ಭಾರತಕ್ಕೆ ಬರುವ ಮುನ್ನವೂ ಬಹುತೇಕ ಭಾರತೀಯರು ಗ್ರಾಮಗಳಲ್ಲೇ ವಾಸಿಸುತ್ತಿದ್ದರು. ಕೃಷಿ ಅವರ ಆರ್ಥಿಕ ಜೀವನದ ಬೆನ್ನೆಲುಬಾಗಿತ್ತು. ಭಾರತದ ಪ್ರತಿಹಳ್ಳಿಯೂ ಸ್ವಯಂಪೂರ್ಣ ಘಟಕವಾಗಿದ್ದಿತು. ಮಳೆ ಸಾಕಷ್ಟು ಬಂದ ವರ್ಷಗಳಲ್ಲಿ ಹಳ್ಳಿಯ ಉಪಜೀವನಕ್ಕೆ ಸಾಕಾಗುವಷ್ಟು ಆಹಾರ ಧಾನ್ಯಗಳು ಉತ್ಪಾದನೆಯಾಗುತ್ತಿದ್ದವು. ಜನರ ಉಳಿದ ಅಗತ್ಯಗಳು ಮಿತವಾಗಿಯೇ ಇದ್ದು, ಅವು ಊರಿನ ಕುಶಲ ಕರ್ಮಿಗಳಿಂದ ಪೂರೈಸಲ್ಪಡುತ್ತಿದ್ದವು. ಬಳಕೆಯ ನಂತರದ ಕೃಷಿ ಉತ್ಪನ್ನದ ಉಳಿತಾಯವು ಭೂಕಂದಾಯಕ್ಕಾಗಿ ರಾಜನಿಗೆ ಸಂದಾಯವಾಗುತ್ತಿತ್ತು. ಹೀಗೆ ಸರ್ಕಾರಕ್ಕೆ ಕೊಡಬೇಕಾದ ತೆರಿಗೆಯ ನಂತರ ರೈತನಲ್ಲಿ ಲಭ್ಯವಿದ್ದ ಉಳಿತಾಯವು ಅವನಿಗೆ ಅಗತ್ಯವಿರುವ ನಗರದ ಕೈಗಾರಿಕೋತ್ಪನ್ನಗಳನ್ನು ಕೊಳ್ಳಲು ಏನೇನೂ ಸಾಲದಾಗುತ್ತಿತ್ತು. ಉಪ್ಪು, ಸಂಬಾರ ವಸ್ತುಗಳು ಹಾಗೂ ಬಟ್ಟೆ ಬರೆಗಳನ್ನು ಕೊಳ್ಳಲು ಮಾತ್ರ ಈ ಉಳಿತಾಯವು ಸಾಕಾಗುತ್ತಿತ್ತು. ಹೀಗಾಗಿ ಹಳ್ಳಿ ಮತ್ತು ನಗರದ ಮಧ್ಯೆ ವಸ್ತುಗಳ ವಿನಿಮಯ ಬಹಳ ಕಡಿಮೆಯೇ ಇರುತ್ತಿತ್ತು.

18ನೆ ಶತಮಾನದ ಭಾರತದಲ್ಲಿ ಗ್ರಾಮೀಣ ಜನತೆಯ ಅಗತ್ಯಗಳನ್ನು ಪೂರೈಸಲು ಬೇಕಾದ ಕೈಗಾರಿಕೆಗಳು ಇದ್ದವು. ಆದರೆ ಅವುಗಳ ಕಾರ್ಯ ನಿರ್ವಹಣೆಯು ಅವ್ಯವಸ್ಥಿತವಾಗಿತ್ತು. ಅಂದರೆ ಕರಕುಶಲಗಾರರು ಹಳ್ಳಿಯ ಸಮುದಾಯದ ಅಂಗವಾಗಿದ್ದು, ಅವರು ಹಳ್ಳಿಗರಿಗಾಗಿ ಕೆಲಸಮಯ ದುಡಿಯುತ್ತಿದ್ದರು. ಈ ಸೇವೆಗಾಗಿ ಹಳ್ಳಿಗರಿಂದ ವ್ಯವಸಾಯೋತ್ಪನ್ನದ ಒಂದು ಪಾಲನ್ನು ಪಡೆಯುತ್ತಿದ್ದರು. ಅಲ್ಲದೇ ಅವರು ತಮ್ಮದೇ ಆದ ಜಮೀನುಗಳಲ್ಲಿಯೂ ದುಡಿಯುತ್ತಿದ್ದರು. ಆ ಕಾಲದಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಶ್ರೇಷ್ಟ ಗುಣಮಟ್ಟದ ವಿಲಾಸಿ ವಸ್ತುಗಳ ಉತ್ಪಾದಕರು ತಮ್ಮ ಮನೆಗಳಲ್ಲಿಯೇ ಕಾರ್ಯನಿರತರಾಗಿರುತ್ತಿದ್ದರು, ಇಲ್ಲವೇ ನಗರಗಳಲ್ಲಿನ ಸರಕಾರಿ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು. ಸಾಧಾರಣವಾಗಿ ಹಿರಿಯ ಕರಕುಶಲಗಾರರು ತಮ್ಮ ಮಕ್ಕಳಿಗೆ ಈ ಆನುವಂಶಿಕ ವೃತ್ತಿ ಅಥವಾ ವಿದ್ಯೆಗಳನ್ನು ಕಲಿಸುತ್ತಿದ್ದರು. ಇಂತಹ ಕೆಲಸಗಾರರಲ್ಲಿ ಬಹಳಷ್ಟು ಜನ ಬಡವರಾಗಿದ್ದುದರಿಂದ, ಅವರು ಕಚ್ಚಾ ವಸ್ತುಗಳನ್ನು ಕೊಳ್ಳಲು ಮುಂಗಡವಾಗಿ ಹಣಕೊಡುತ್ತಿದ್ದ ಮತ್ತು ಅವರಿಗೆ ಕೂಲಿ ಹಣವನ್ನು ಕೊಡುತ್ತಿದ್ದ ವರ್ತಕರಿಗಾಗಿ ದುಡಿಯುತ್ತಿದ್ದರು. ನಿರ್ದಿಷ್ಟಪಡಿಸಿದ ಪ್ರಮಾಣದ ವಸ್ತುಗಳನ್ನು ತಯಾರಿಸಿಕೊಡುವ ತನಕವೂ ಈ ಕರಕುಶಲಕರ್ಮಿಯು ಈ ವರ್ತಕರಿಗಾಗಿ ದುಡಿಯಬೇಕಾಗುತ್ತಿತ್ತು. ಹೀಗೆ ಸಿದ್ಧಪಡಿಸಿದ ವಸ್ತುಗಳನ್ನು ಸ್ವಯಂವರ್ತಕ ಅಥವ ವಿದೇಶೀ ಸಂಸ್ಥೆಯ ದಲ್ಲಾಳಿಗಳು ಮಾರಾಟಕ್ಕಿಡುತ್ತಿದ್ದರು.

  ಆದರೆ ಮಧ್ಯಯುಗದಿಂದ 18ನೆಯ ಶತಮಾನದ ಅಂತ್ಯದವರೆಗೆ ಕೈಗಾರಿಕೆ ಮತ್ತು ವಾಣಿಜ್ಯವು ಕುಂಠಿತಗೊಳ್ಳಲು ಅಡ್ಡಿಯೊಂದಿತ್ತು. ಅದೆಂದರೆ, ಉತ್ಪಾದನಾ ಕ್ಷೇತ್ರದಿಂದ ಬಳಕೆಯ ಸ್ಥಳಗಳಿಗೆ ಉತ್ಪನ್ನಗಳನ್ನು ಸಾಗಿಸುವಾಗ ವಿಧಿಸುತ್ತಿದ್ದ 'ಜಕತ್' ಎಂದು ಕರೆಯಲಾಗುತ್ತಿದ್ದ ವಾಣಿಜ್ಯ ಸುಂಕ ಹಾಗೂ ರಸ್ತೆ ಸುಂಕ. ಮಾರಾಟಕ್ಕೆ ತಂದ ಅಥವಾ ಸಾಗಣೆಯಲ್ಲಿದ್ದ ವಸ್ತುಗಳ ಮೇಲೆ ಸರ್ಕಾರದ ಅಧಿಕಾರಿಗಳು ಇಲ್ಲವೇ ಜಮೀನುದಾರರು ವಿಧಿಸುತ್ತಿದ್ದ ಕೊನೆ ಮೊದಲಿಲ್ಲದ ಸುಂಕಗಳು ಉತ್ಪಾದಕರಿಗೆ ಮತ್ತು ಸಾಗಣೆದಾರರಿಗೆ ಸತತವಾದ ಕಿರುಕುಳಕ್ಕೆ ಆಸ್ಪದವಿತ್ತಿದ್ದವು. ಉದಾ: ಪೇಶ್ವೆಗಳ ದಿನಚರಿಗಳಲ್ಲಿ ಕೊಳ್ಳಲ್ಪಟ್ಟ ಇಲ್ಲವೇ ಸಾಗಣೆಯಲ್ಲಿದ್ದ ಮಾಲುಗಳ ಮೇಲೆ ವಿಧಿಸಲ್ಪಡುತ್ತಿದ್ದ ಐವತ್ತಕ್ಕೂ ಹೆಚ್ಚು 'ಪಟ್ಟಿ' ಅಥವಾ ಸುಂಕಗಳ ಉಲ್ಲೇಖವಿದೆ.

 

II. 18ನೆ ಶತಮಾನಕ್ಕೂ ಮುನ್ನ ಭಾರತದ ಕೈಗಾರಿಕೆಯ ಸ್ಥಾನ-ಮಾನಗಳು:- ಅಂದು ಭಾರತದಲ್ಲಿ ಹೇರಳವಾಗಿ ವಿಲಾಸಿ ಅಥವಾ ಐಷಾರಾಮಿ ವಸ್ತುಗಳು ಅಧಿಕವಾಗಿ ತಯಾರಾಗುತ್ತಿದ್ದರೂ ಅವುಗಳಿಗೆ ಸ್ವದೇಶೀ ಬೇಡಿಕೆಯಿರಲಿಲ್ಲ. ಆದರೆ ವಿದೇಶೀ ಕಂಪೆನಿಗಳು ಈ ವಸ್ತುಗಳನ್ನು ಕೊಂಡು, ಪ್ರತಿಯಾಗಿ ಉಣ್ಣೆ ಬಟ್ಟೆಗಳು, ಸೀಸ ಮತ್ತು ತವರವನ್ನು ಕೊಡಬಲ್ಲವರಾಗಿದ್ದರು; ಹಾಗೂ ಭಾರತದಲ್ಲಿ ಅವರ ಈ ವಸ್ತುಗಳಿಗೆ ಸ್ವಲ್ಪಮಟ್ಟಿಗೆ ಬೇಡಿಕೆಯಿತ್ತು. ಆದ್ದರಿಂದ ವಿದೇಶೀ ಕಂಪೆನಿಗಳು ಭಾರತದ ವ್ಯಾಪಾರಿಗಳಿಂದ ಖರೀದಿಸಿದ ಬಹುಮಟ್ಟಿನ ವಸ್ತುಗಳಿಗೆ ಬೆಲೆಯನ್ನು ನಗದಾಗಿ ಕೊಡಬೇಕಾಗಿತ್ತು. ಹೀಗಾಗಿ 16 ಮತ್ತು 17ನೆಯ ಶತಮಾನಗಳುದ್ದಕ್ಕೂ ಭಾರತವು ಅಮೂಲ್ಯ ಲೋಹಗಳಿಂದ ತುಂಬಿಹೋಯಿತು. ಈ ಶತಮಾನಗಳಲ್ಲಿ ಭಾರತವು ಪ್ರಪಂಚದ ಅತ್ಯಮೂಲ್ಯ ಲೋಹಗಳನ್ನು ಆಕರ್ಷಿಸುವ ಅಯಸ್ಕಾಂತ ದೇಶವೇ ಆಯಿತು ಹಾಗೂ ಅದರ ವಾಣಿಜ್ಯ ವ್ಯವಹಾರವು ಯೂರೋಪಿನ ದೇಶಗಳಿಗಿಂತ ಅತಿ ಹೆಚ್ಚಾಗಿತ್ತು. ಲೆವಂಟೈನ್ ಅಥವಾ ಈಜಿಪ್ಟ್ ದೇಶಗಳ ಬಂದರುಗಳ ಮೂಲಕ ಇಲ್ಲವೇ ಗುಡ್ ಹೋಪ್ ಭೂಶಿರದ ಮೂಲಕದ ಸಮುದ್ರ ಮಾರ್ಗದಲ್ಲಿ ಬೆಲೆ ಬಾಳುವ ಐಷಾರಾಮ ವಸ್ತುಗಳನ್ನು ಯೂರೋಪಿಗೆ ಸಾಗಿಸುವಲ್ಲಿ ವೆನಿಸ್, ಜಿನೀವ ಮತ್ತು ಲಿಸ್ಟನ್‌ ಯೂರೋಪಿಯನ್ ವರ್ತಕರು ಮಧ್ಯವರ್ತಿಗಳಾಗಿ ವ್ಯವಹರಿಸುತ್ತಿದ್ದರು. 1600 ರಲ್ಲಿ, ಯೂರೋಪಿನ ರಾಷ್ಟ್ರಗಳು ಭಾರತ ಮತ್ತಿತರ ಪೌರ್ವಾತ್ಯ ರಾಷ್ಟ್ರಗಳಿಂದ ತಾವು ಖರೀದಿಸುವ ಹಾಗೂ ಪ್ರಪಂಚಾದ್ಯಂತ ಬೇಡಿಕೆಯುಳ್ಳ ಸಂಬಾರ ವಸ್ತುಗಳು ಹಾಗೂ ಭಾರತದ ಹತ್ತಿ, ರೇಷ್ಮೆ ವಸ್ತುಗಳು, ಮೆಣಸು, ನೀಲಿ ಮತ್ತು ಪೆಟ್ಲುಪ್ಪುಗಳಿಗೆ ಪ್ರತಿಯಾಗಿ ಭಾರತ ಮತ್ತು ಈಸ್ಟ್ ಇಂಡೀಸ್ ದೇಶಗಳಿಗೆ ರಫ್ತು ಮಾಡಬಹುದಾದ ವಸ್ತುಗಳನ್ನೇನೂ ಬಹಳಷ್ಟು ಉತ್ಪಾದಿಸುತ್ತಿರಲಿಲ್ಲ. ಅಗಲವಾದ ಅರಿವೆ, ಚಿನ್ನ ಮತ್ತು ಬೆಳ್ಳಿಯ ಕಸೂತಿ ಮಾಡಿದ ವಸ್ತುಗಳು ಮತ್ತು ಶ್ರೀಮಂತರು ಉಪಯೋಗಿಸುವ ಕೆಲವು ವಿಲಾಸೀ ವಸ್ತುಗಳು, ಹವಳ, ತವರ ಮತ್ತು ಸೀಸ - ಇವು ಯೂರೋಪಿನಿಂದ ಭಾರತಕ್ಕೆ ಆಮದಾಗುತ್ತಿದ್ದವು. ಇದರಿಂದ ಭಾರತದಿಂದ ತರಿಸಿಕೊಳ್ಳುವ ವಸ್ತುಗಳಿಗೆ ಯೂರೋಪಿನ ದೇಶಗಳು ಬೆಳ್ಳಿ ಬಂಗಾರ ಅಥವಾ ನಗದಿನ ರೂಪದಲ್ಲಿ ಬೆಲೆ ಕೊಡಬೇಕಾಗಿತ್ತು. ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿ ಭಾರತವು ಈ ಜಾಗತಿಕ ವಾಣಿಜ್ಯದ ಕೇಂದ್ರವಾಗಿತ್ತು.

III. ಭಾರತದಲ್ಲಿದ್ದ ಕೈಗಾರಿಕೆಗಳು: ಹತ್ತಿ ಮತ್ತು ರೇಷ್ಮೆ ಬಟ್ಟೆ, ಸಕ್ಕರೆ, ಪೆಟ್ಲುಪ್ಪು, ಉಪ್ಪು, ಕರಕುಶಲ ವಸ್ತುಗಳು ಇವೆ ಮೊದಲಾದವು ಪ್ರಮುಖ ಉತ್ಪನ್ನಗಳಾಗಿದ್ದವು. ಇವುಗಳ ಮಾರಾಟವು ಭಾರತದ ಒಳ ಮಾರುಕಟ್ಟೆಗಳಲ್ಲದೇ ಯೂರೋಪಿನ ರಾಷ್ಟ್ರಗಳು, ಮಧ್ಯ ಏಷ್ಯಾದ ರಾಷ್ಟ್ರಗಳು, ಪೂರ್ವ ಏಷ್ಯಾದ ರಾಷ್ಟ್ರಗಳಿಗೂ ರಫ್ತಾಗುತ್ತಿದ್ದವು.

ಹತ್ತಿ ಬಟ್ಟೆಗಳ ವೈವಿಧ್ಯತೆ:- 17 ಮತ್ತು 18ನೆಯ ಶತಮಾನಗಳಲ್ಲಿ ಕೈಮಗ್ಗದ ನೇಯ್ಗೆ ಕೇಂದ್ರಗಳು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಾದ್ಯಂತ ಉತ್ಪಾದನೆಯಲ್ಲಿ ತೊಡಗಿದ್ದವು. ಕ್ಯಾಲಿಕೊ (ಕ್ಯಾಲಿಕಟ್‌ನಿಂದ ಬಂದದ್ದು) ಎಂಬುದು ಈಸ್ಟ್ ಇಂಡಿಯಾ ಕಂಪೆನಿಯವರು ಇಂಗ್ಲೆಂಡಿಗೆ ರಫ್ತು ಮಾಡುತ್ತಿದ್ದ ಹತ್ತಿ ಅರಿವೆಗಳಿಗೆ ಸಾಮಾನ್ಯವಾಗಿ ಕೊಟ್ಟಿದ್ದ ಹೆಸರು. ಆದರೆ ಇಂಗ್ಲಿಷ್, ಡಚ್ ಮತ್ತು ಫ್ರೆಂಚ್ ಪ್ರತಿನಿಧಿಗಳು ಮತ್ತು ನಿರ್ದೇಶಕರುಗಳ ಪತ್ರ ವ್ಯವಹಾರದಲ್ಲಿ ಭಾರತದ ಹತ್ತಿ ಬಟ್ಟೆಗಳಿಗೆ ಇನ್ನೂರು ವಿಶೇಷ ವಾಣಿಜ್ಯನಾಮಗಳು ನಮೂದಾಗಿವೆ. ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಯೂರೋಪಿನ ವಿವಿಧ ದೇಶಗಳಲ್ಲಿ ಬೇಡಿಕೆಯಲ್ಲಿದ್ದ ಭಾರತೀಯ ಹತ್ತಿ ಬಟ್ಟೆಗಳೆಂದರೆ, ಬಂಗಾಳದಿಂದ ಗರಾ, ರುಮಾಲ್, ಜಿಂಘಾಂ, ಕ್ಯಾಸ ಮತ್ತು ಮುಲ್‌ಮುಲ್, ಕೋರಮಂಡಲ ತೀರದಿಂದ ನ್ಯಾಪ್‌ಕಿನ್ ಸಾಲೆಂಫೋರ್ ಮತ್ತು ಬೆಟೆಲ್, ಔನ್‌ನಿಂದ ದರಿಯಾಬಾದ್, ಮತ್ತು ಗುಜರಾತ್ ನಿಂದ ಬಾಫ್ರಾ ಆಗಿದ್ದವು. ಬಿಳಿ ಮತ್ತು ನೀಲಿ ಬಟ್ಟೆಗಳನ್ನು ಯೂರೋಪಿನ ವರ್ತಕರು ಆಫ್ರಿಕದ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಈ ಬಟ್ಟೆಗಳನ್ನು ಗುಲಾಮರು ಧರಿಸುತ್ತಿದ್ದರು. ಒರಟು ದಟ್ಟಿಗಳನ್ನು ಗುಜರಾತಿನಿಂದ ಪರ್ಷಿಯ, ಅರೇಬಿಯ, ಅಬಿಸೀನಿಯ ಮತ್ತು ಆಫ್ರಿಕದ ಪೂರ್ವತೀರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿತ್ತು; ಕ್ಯಾಂಬೆಯ ಚೆಂಟ್ಸ್ ಬಟ್ಟೆಗಳು ಅರೇಬಿಯ ಮತ್ತು ತುರ್ಕಿಗಳಲ್ಲಿ ಅಂಗವಸ್ತ್ರಗಳಾಗಿ ಉಪಯೋಗಿಸಲ್ಪಡುತ್ತಿದ್ದವು; ಬಾಜ್ಞಾ ಮತ್ತು ಗಾಜ್‌ಗಳು ತುರ್ಕಿ ಮತ್ತು ಪರ್ಷಿಯಗಳಲ್ಲಿ ಬೇಸಗೆ ಉಡುಪುಗಳಾಗಿ ಉಪಯೋಗಿಸಲ್ಪಡುತ್ತಿದ್ದವು; ಅಹಮದಾಬಾದಿನ ಪ್ರಿಂಟ್ ಮಾಡಿದ ಅರಿವೆಗಳು ಯೂರೋಪ್, ಪರ್ಷಿಯ, ತುರ್ಕಿ ಮತ್ತು ಭಾರತದ ದ್ವೀಪ ಸಮುದಾಯಕ್ಕೆ ಹೋಗುತ್ತಿದ್ದವು; ಕಾಶ್ಮೀರ ಮತ್ತು ಸೂರತ್‌ನಲ್ಲಿ ತಯಾರಿಸಿದ ಶಾಲುಗಳನ್ನು ಭಾರತ, ಪರ್ಷಿಯ ಮತ್ತು ತುರ್ಕಿಗಳಲ್ಲಿ ಚಳಿಗಾಲದಲ್ಲಿ ಹೊದೆಯಲು ಉಪಯೋಗಿಸುತ್ತಿದ್ದರು. ಮಾಲ್ಟಾ, ಕಾಸಿಂಬಜಾರ್ ಮತ್ತು ಡಾಕಾದಲ್ಲಿ ತಯಾರಾದ ಅನೇಕ ವಿಧದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು - ಬಂಗಾಳದಿಂದ ಯೂರೋಪ್, ಪರ್ಷಿಯ, ತುರ್ಕಿ‌, ಈಜಿಪ್ಟ್ಗಳಿಗಲ್ಲದೆ, ಸಿಂಹಳ, ಪೆಗು, ಸಯಾಂ, ಭಾರತೀಯ ದ್ವೀಪ ಸಮೂಹ ಮತ್ತು ಜಪಾನ್‌ಗಳಿಗೆ ಹೋಗುತ್ತಿದ್ದವು. ಭಾರತದ ಹತ್ತಿ ಬಟ್ಟೆಗಳಿಗೆ ಪೌರ್ವಾತ್ಯ ದೇಶಗಳ ಗಿರಾಕಿಗಳ ಪೈಕಿ ಜಪಾನ್, ಸಯಾಂ, ಇಂಡೋಚೀನ, ಮಲಕ್ಕಾ, ಸಿರಂ, ಬಾಂಡ, ಅಂಬೋಯ್ಕ, ಮಕಾಸ್ಸ‌, ಬೋರ್ನಿಯೋ, ಸುಮಾತ್ರ ಮತ್ತು ಜಾವಾ ಸೇರಿದ್ದವು.

ಭಾರತದಲ್ಲಿ ವಿವಿಧ ರೀತಿಯ ಬಟ್ಟೆಗಳು ಗುಜರಾತ್, ಸಿಂಥ್, ಆಗ್ರಾ, ಔದ್, ಬಿಹಾರ, ಬಂಗಾಳ ಮತ್ತು ಕೋರಮಂಡಲ ತೀರದ ಪ್ರದೇಶಗಳಲ್ಲಿ ತಯಾರಾಗುತ್ತಿದ್ದವು, ಇವು ಇಂಗ್ಲೆಂಡ್ ಮತ್ತು ಯೂರೋಪಿನ ಇತರ ದೇಶಗಳು, ಗಿನಿಕೋಸ್ಟ್ ಮತ್ತು ಪೂರ್ವ ಆಫ್ರಿಕ, ಬರ್ಮ, ಪೆಗು, ಸಯಾಂ, ಭಾರತದ ದ್ವೀಪ ಸಮೂಹ ಮತ್ತು ಜಪಾನ್, ಪರ್ಷಿಯ ಮತ್ತು ಪಶ್ಚಿಮ ಏಷ್ಯದಲ್ಲಿ ಮಾರಾಟವಾಗುತ್ತಿದ್ದವು. ಭಾರತದ ಕೈಮಗ್ಗದ ಉತ್ಪನ್ನಗಳ ವಾರ್ಷಿಕ ರಫ್ತಿನ ಒಟ್ಟು ಪ್ರಮಾಣವು ಮೋರ್‌ಲ್ಯಾಂಡ್‌ನ ಅಂದಾಜಿನ ಪ್ರಕಾರ ಸುಮಾರು 50 ದಶಲಕ್ಷ ಚದರ ಗಜಗಳಾಗಿತ್ತು; 15,000 ಬೇಲ್ ಹತ್ತಿ ವಸ್ತುಗಳು ಇಂಗ್ಲಿಷ್ ವರ್ತಕರಿಂದ ಹಾಗೂ 10,000 ಬೇಲ್ ಡಚ್ ವರ್ತಕರಿಂದ ಯೂರೋಪಿಗೆ ರಫ್ತಾಗುತ್ತಿದ್ದವು. ಅಂದರೆ ಒಟ್ಟು 25,0KM) ಬೇಲ್ ಅಥವಾ 32 ದಶಲಕ್ಷ ಚದರಗಜ ಬಟ್ಟೆ ರಫ್ತಾಗುತ್ತಿತ್ತು. ಇದರಲ್ಲಿ ಫ್ರೆಂಚರು, ಪೋರ್ಚುಗೀಸರು ಮತ್ತು ಡೆನ್‌ಮಾರ್ಕಿನವರು ಮಾಡುತ್ತಿದ್ದ ರಫ್ತಿನ ವಿವರಗಳು ಸೇರಿಲ್ಲ. ಯೂರೋಪ್, ಭಾರತ, ಜಾವ ಮತ್ತು ಸಯಾಂನ ವರ್ತಕರಿಂದ ಸರಬರಾಜು ಪಡೆಯುತ್ತಿದ್ದ ದೂರಪ್ರಾಚ್ಯ, ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯ ಪೇಟೆಗಳು ಇನ್ನೂ ಸುಮಾರು 18 ದಶಲಕ್ಷ ಚದರ ಗಜ ಬಟ್ಟೆಯನ್ನು ಪಡೆಯುತ್ತಿದ್ದವೆಂದು ಅಂದಾಜು ಮಾಡಲಾಗಿತ್ತು. ಹೀಗಾಗಿ ಸಮುದ್ರ ಮಾರ್ಗವಾಗಿ ರಫ್ತಾಗುತ್ತಿದ್ದ ಹತ್ತಿಯ ಬಟ್ಟೆಗಳು ಪ್ರಮಾಣದಲ್ಲಿ 50 ರಿಂದ 60 ದಶಲಕ್ಷ ಚದರ ಗಜಗಳಷ್ಟಾಗಿತ್ತು. ವಾಯವ್ಯ ದಿಕ್ಕಿನ ಭೂಮಾರ್ಗಗಳಿಂದ ನಡೆಯುತ್ತಿದ್ದ 3 ದಶಲಕ್ಷ ಚದರ ಗಜಗಳ ರಫ್ತು ವ್ಯಾಪಾರವನ್ನೂ ಈ ಅಂಕಿಗೆ ಸೇರಿಸಬೇಕು.

IV. ರೇಷ್ಮೆ ಉತ್ಪನ್ನಗಳು: ಡಚ್ಚರು ವರ್ಷಕ್ಕೆ ಬಂಗಾಳದಿಂದ ಪ್ರತಿವರ್ಷ 6000 ದಿಂದ 7000 ಬೇಲ್ ರೇಷ್ಮೆಯನ್ನು ತೆಗೆದುಕೊಳ್ಳುತ್ತಿದ್ದರೆಂದೂ ಟಾರ್ಟರಿಯ ವರ್ತಕರು ಇನ್ನೂ 6000 ದಿಂದ 7000 ಬೇಲ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆಂದೂ ಟವರ್ನಿಯ‌ ಅಂದಾಜು ಮಾಡಿದ್ದಾನೆ. ಒಂದು ಬೇಲ್ 1400 ಚದರ ಗಜ ಬಟ್ಟೆಗೆ ಸಮವೆಂದು ಲೆಕ್ಕ ಹಿಡಿಯುವುದಾದರೆ, ಬಂಗಾಳದ ರೇಷ್ಮೆ ವ್ಯಾಪಾರವೊಂದೇ ಈ ಅವಧಿಯಲ್ಲಿ 19.6 ದಶಲಕ್ಷ ಚದರ ಗಜಗಳಷ್ಟಾಗುತ್ತದೆಂದು ಅಂದಾಜು ಮಾಡಬಹುದು. ಕಾಸಿಂಬಜಾರ್‌ನಿಂದ ತರಿಸಿಕೊಂಡ 3 ರಿಂದ 4 ಲಕ್ಷ ಪೌಂಡು ಸಂಸ್ಕರಿಸಿದ ರೇಷ್ಮೆಯನ್ನು ಯೂರೋಪಿಯನ್ ಕೋಠಿಗಳು ಬಳಸುತ್ತಿದ್ದವೆಂದು ಸ್ಟಾವೊರಿನಸ್ ಅಂದಾಜು ಮಾಡಿದ್ದಾನೆ. ಆ ಕೇಂದ್ರದಿಂದ ಯೂರೋಪಿಗೆ ರಫ್ತಾಗುತ್ತಿದ್ದ ರೇಷ್ಮೆ ಬಟ್ಟೆಗಳು ಇದರಲ್ಲಿ ಸೇರಿಲ್ಲ.

 V. 18ನೆ ಶತಮಾನದ ಆದಿಯಲ್ಲಿ ಭಾರತದ ಕೈಗಾರಿಕೆಗಳು ಮತ್ತು ವಾಣಿಜ್ಯ:- 17ನೆ ಶತಮಾನದ ಉದ್ದಕ್ಕೂ ಯೂರೋಪಿಯನ್ನರ ಆಗಮನದಿಂದಾಗಿ ಭಾರತದ ನೌಕೋದ್ಯಮವು ಹಾಳಾಯಿತು. ಅಲ್ಲದೇ 18ನೆ ಶತಮಾನದಲ್ಲಿ ಮೊಗಲರ ಪ್ರಾಬಲ್ಯವು ಕುಸಿಯತೊಡಗಿದ್ದರಿಂದ ಕೈಗಾರಿಕೆಗಳಲ್ಲಿ ಮತ್ತಷ್ಟು ಕುಸಿತ ಉಂಟಾಯಿತು. ಏಕೆಂದರೆ ಔರಂಗಜೇಬನ ಕಾಲದಲ್ಲಿನ ನಿರಂತರ ಯುದ್ಧಗಳಿಂದಾಗಿ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿದ್ದವು. ಅಲ್ಲದೇ ಮರಾಠರ ಏಳಿಗೆಯು ರಾಜಕೀಯ ಶಕ್ತಿಯೊಂದರ ಏಳಿಗೆಯಾಗಿದ್ದರೂ, ಅವರು ಅನುಸರಿಸುತ್ತಿದ್ದ ಚೌತ್‌ ಮತ್ತು ಸರ್‌ದೇಶಮುಖಿ ತೆರಿಗೆಗಳ ವಸೂಲಿ ನೀತಿಯಿಂದಾಗಿ ಅವರು ಆರ್ಥಿಕ ಚಟುವಟಿಕೆಗಳಿಗೆ ಅಷ್ಟಾಗಿ ಗಮನಕೊಡಲಿಲ್ಲ. ಆದರೆ, ಮೊಗಲರ ಪತನಾನಂತರ ಅವರ ಅಧೀನದಲ್ಲಿದ್ದ ಪ್ರಾಂತೀಯ ಆಡಳಿತಗಾರರು ಮತ್ತು ಜಹಗೀರುದಾರರು ಐಷಾರಾಮಿ ಜೀವನ ನಡೆಸತೊಡಗಿದ್ದರಿಂದ ದೇಶೀಯ ಕೈಗಾರಿಕೆಗಳು ಒಂದಷ್ಟು ಅಭಿವೃದ್ಧಿಗೊಂಡವು.

18ನೆಯ ಶತಮಾನದ ಮಧ್ಯಭಾಗದಲ್ಲಿ ಬಂಗಾಳದಲ್ಲಿ ಸುಮಾರು 10 ಲಕ್ಷ ನೇಕಾರರಿದ್ದರೆಂದು ಅಂದಾಜು ಮಾಡಲಾಗಿದೆ. ಅದೇ ವೇಳೆಯಲ್ಲಿ ದಕ್ಷಿಣ ಭಾರತದಲ್ಲಿದ್ದ ನೇಯ್ಗೆಯವರ ಸಂಖ್ಯೆ ಸುಮಾರು 5 ಲಕ್ಷ. ದಕ್ಷಿಣ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು 40,000 ಮಗ್ಗಗಳಲ್ಲಿ ಸುಮಾರು 50,000 ಕೆಲಸಗಾರರನ್ನು ನೇಮಿಸಿಕೊಂಡಿತ್ತೆಂದು ಅಂದಾಜು ಮಾಡಲಾಗಿದೆ. ಆದರೆ 1770ರ ಬಂಗಾಳದ ಕ್ಷಾಮದಲ್ಲಿ ನೇಯ್ಗೆಯವರಲ್ಲಿ ಅರ್ಧದಷ್ಟು ಜನ ಸತ್ತು ಆ ಕೈಗಾರಿಕೆಗೆ ಬಲವಾದ ಪೆಟ್ಟು ಬಿದ್ದಿತು.

VI. ಬ್ರಿಟಿಷರ ಅಧಿಕಾರ ವಿಸ್ತರಣೆಯಿಂದ ಕೈಗಾರಿಕೆಗಳ ನಾಶ ಆರಂಭ: ಬಂಗಾಳದಲ್ಲಿ ಕಂಪೆನಿಯ ಆಡಳಿತ ಆರಂಭವಾದ ನಂತರ ಅಲ್ಲಿನ ಆಂತರಿಕ ವ್ಯಾಪಾರ ಹಾಗೂ ಕುಶಲಕರ್ಮಿಗಳ ಮತ್ತು ವರ್ತಕರ ಏಳಿಗೆಗೆ ದೊಡ್ಡ ತಡೆಯುಂಟಾಯಿತು. ವಾರನ್ ಹೇಸ್ಟಿಂಗ್ಸ್ ಹೇಳಿದಂತೆ ಈಸ್ಟ್ ಇಂಡಿಯಾ ಕಂಪೆನಿಯ ಮುತಾಲಿಕರು ಮತ್ತು ಗುಮಾಸ್ತರು ಪ್ರಾಮಾಣಿಕವಾದ ವ್ಯಾಪಾರ ನೀತಿಯನ್ನನುಸರಿಸದೆ, ಅನೇಕ ರೀತಿಯ ಉಗ್ರ ಮತ್ತು ಅತಿಕ್ರಮಣ ನೀತಿಯ ಅನುಸರಣೆ ಹಾಗೂ ಅವರೇ ಒಡೆಯರಂತೆ ನಡೆದುಕೊಳ್ಳುವ ಮತ್ತು ದಮನ ಮಾಡುವ ವರ್ತನೆಗಳೇ ಈ ತಡೆಗೆ ಕಾರಣವಾಯಿತು. ನವಾಬ್ ಮೀರ್ ಕಾಸಿಮನು ಇಂಗ್ಲಿಷ್ ಗವರ್ನರನಿಗೆ 1762 ರಲ್ಲಿ ಈ ರೀತಿ ದೂರು ಕೊಟ್ಟನು:

'ಕಲ್ಕತ್ತದ ಕೋಠಿಯಿಂದ ಕಾಸಿಂ ಬಜಾರ್, ಪಟ್ನಾ ಮತ್ತು ಡಾಕಾವರೆಗೆ ಸರ್ಕಾರದ ಪ್ರತಿ ಜಿಲ್ಲೆಯಲ್ಲೂ ಇಂಗ್ಲಿಷ್ ಮುಖ್ಯಸ್ಥರು, ಅವರ ಗುಮಾಸ್ತರು, ಅಧಿಕಾರಿಗಳು ಮತ್ತು ಮುತಾಲಿಕರು ತೆರಿಗೆ ವಸೂಲಿಯವರಂತೆ, ಬಾಡಿಗೆ ವಸೂಲಿಯವರಂತೆ, ಜಮೀನುದಾರರಂತೆ ಮತ್ತು ತಾಲ್ಲೂಕುದಾರರಂತೆ ನಡೆದುಕೊಳ್ಳುತ್ತಾರೆ. ಕಂಪೆನಿಯ ನಿಶಾನೆಯನ್ನು ಉಪಯೋಗಿಸಿ, ನನ್ನ ಅಧಿಕಾರಿಗಳಿಗೆ ಯಾವ ಅಧಿಕಾರವನ್ನೂ ಬಿಡುವುದಿಲ್ಲ. ಇದೂ ಅಲ್ಲದೆ ಗುಮಾಸ್ತರು ಮತ್ತು ಉಳಿದ ನೌಕರರು ಪ್ರತಿ ಜಿಲ್ಲೆ, ಪರಗಣ ಮತ್ತು ಹಳ್ಳಿಯಲ್ಲಿ ಎಣ್ಣೆ, ಮೀನು, ಹುಲ್ಲು, ಬಿದಿರು, ಅಕ್ಕಿ, ಭತ್ತ, ಅಡಿಕೆ ಮತ್ತಿತರ ವಸ್ತುಗಳ ವ್ಯಾಪಾರ ನಡೆಸುತ್ತಾರೆ; ಕಂಪೆನಿಯ 'ದಸ್ತಕ್' ಹೊಂದಿದ ಪ್ರತಿಯೊಬ್ಬನೂ ತಾನು ಕಂಪೆನಿಗಿಂತ ಯಾವ ರೀತಿಯೂ ಕಡಿಮೆ ಇಲ್ಲವೆಂಬಂತೆ ಭಾವಿಸುತ್ತಾನೆ".

ಇದು ಪ್ರತಿ ಪರಗಣ, ಪ್ರತಿ ಹಳ್ಳಿ ಮತ್ತು ಪ್ರತಿ ಕೋಠಿಯಲ್ಲೂ ಯಾವ ದಂಡನೆಯ ಭಯವೂ ಇಲ್ಲದೆ ನಡೆಯುತ್ತಿತ್ತೆಂದು ನವಾಬನು ದೃಢಪಡಿಸಿದನು. ಇದರಿಂದ ಜನರು ಅನೇಕ ಪ್ರಗತಿಪರ ನಗರಗಳು ಮತ್ತು ಪೇಟೆಗಳನ್ನು ತ್ಯಜಿಸಿ ಹೋಗುವಂತಾಯಿತು.

  ಅದೇ ರೀತಿ ದಕ್ಷಿಣ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರ ಉಪದ್ರವಕಾರಕ ವರ್ತನೆ ಮದರಾಸಿನ ವ್ಯಾಪಾರ ಮತ್ತು ಕೈಗಾರಿಕೆಗಳು ನಾಶವಾಗಲು ಕಾರಣವಾಯಿತು. ಈ ಬಗ್ಗೆ ಜೆ. ಡಾಡ್ಜ್ ಎಂಬುವವನು ಈ ರೀತಿ ಹೇಳಿದ್ದಾನೆ:

"ಕಂಪೆನಿಯ ನೌಕರರ ಉಪದ್ರವಕಾರಕ ವರ್ತನೆಯಿಂದಾಗಿ ಮದ್ರಾಸಿನ ವ್ಯಾಪಾರವು ಕೆಲಕಾಲದ ಹಿಂದೆ ಇಳಿಮುಖವಾಯಿತೆಂದು ಭಾವಿಸಲಾಗಿದ್ದು, ಇದರಿಂದ ಅನೇಕ ವರ್ತಕರು ವ್ಯಾಪಾರದಿಂದ ಹೊರಬರಲು ಕಾರಣವಾಗಿದೆ. ಅಲ್ಲದೇ ಇಂಗ್ಲಿಷರು ಹಡಗು ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ".

17ನೆಯ ಶತಮಾನದಲ್ಲಿ ಇಂಗ್ಲಿಷರು (1652) ಮತ್ತು ಡಚ್ಚರು (1665) ಸೂರತ್‌ನಿಂದ ದೇಶದ ಒಳಗಿನ ಎಲ್ಲ ವ್ಯಾಪಾರಿ ಕೇಂದ್ರಗಳಿಗೆ ವಸ್ತುಗಳನ್ನು ಸಾಗಿಸುವಾಗ ಎಲ್ಲ ಸುಂಕದಿಂದಲೂ ವಿನಾಯಿತಿ, ಜಕಾತಿಯಲ್ಲಿ ಇಳಿತವೇ ಅಲ್ಲದೇ ಭಾರತೀಯರು ಹೊಂದಿರದ ಇತರ ಸವಲತ್ತುಗಳನ್ನು ಷಹಜಹಾನನಿಂದ ಪಡೆದರು. ಹೀಗಾಗಿ ಭಾರತದ ಆಂತರಿಕ ವ್ಯಾಪಾರವು ಇಂಗ್ಲಿಷರು ಮತ್ತು ಡಚ್ಚರ ಕೈ ಸೇರಿತು. ಇದರಿಂದಾಗಿ ಭಾರತದ ಆರ್ಥಿಕ ಅವನತಿಯೂ ಪ್ರಾರಂಭವಾಯಿ ತೆನ್ನಬಹುದು. 1716ರಲ್ಲಿ ಫರುಖ್ - ಸಿಯರನ ವಿಶೇಷಾಜ್ಞೆಯ ಮೂಲಕ ಇಂಗ್ಲಿಷರಿಗೆ ಸೂರತ್ ಮತ್ತು ಬಂಗಾಳದಲ್ಲಿನ ಜಕಾತಿಯಲ್ಲಿ ಮತ್ತಷ್ಟು ರಿಯಾಯಿತಿಯು ದೊರೆಯಿತು. 1700ರಲ್ಲಿ, ಅಂದರೆ ಇಂಗ್ಲಿಷ್ ಮತ್ತು ಡಚ್ ಕಂಪೆನಿಗಳು ಸ್ಥಾಪನೆಯಾದ ಒಂದು ಶತಮಾನದ ಅನಂತರ, ಯೂರೋಪಿನಲ್ಲಿನ ಬಟ್ಟೆ ಉದ್ಯಮಗಳಿಗೆ ರಕ್ಷಣೆ ಕೊಡುವ ಸಲುವಾಗಿ ಏಷ್ಯದ ರೇಷ್ಮೆ ಬಟ್ಟೆಗಳು, ಪ್ರಿಂಟ್ ಮಾಡಿದ ಮತ್ತು ಬಣ್ಣ ಹಾಕಿದ ಅರಿವೆಗಳನ್ನು ಉಪಯೋಗಿಸುವುದನ್ನು ಪ್ರತಿಬಂಧಿಸಲಾಯಿತು. ಆದರೆ ಇವುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಮಾತ್ರ ಯೂರೋಪಿಗೆ ಆಮದು ಮಾಡಿಕೊಳ್ಳಬಹುದಾಗಿತ್ತು. ಇದರ ನಂತರ 1720 ರಲ್ಲಿ ಇಂಗ್ಲೆಂಡಿನಲ್ಲಿ ಬಣ್ಣ ಕಟ್ಟಿದ ಅಥವಾ ಪ್ರಿಂಟ್ ಮಾಡಿದ ಅರಿವೆಗಳನ್ನು ಧರಿಸುವುದನ್ನು ಮತ್ತು ಉಪಯೋಗಿಸುವುದನ್ನು - ಕೆಲವು ವಿನಾಯತಿಗಳೊಡನೆ - ನಿಷೇಧಿಸಲಾಯಿತು.

ಮುಂದಿನ ದಶಕಗಳಲ್ಲಿ ಇಂಗ್ಲೆಂಡಿನ ನೇಯ್ಗೆ ಉದ್ದಿಮೆಯನ್ನು ಕಾಪಾಡುವ ಉದ್ದೇಶದಿಂದ ಭಾರತದ ಉತ್ಪನ್ನಗಳ ಮೇಲೆ ರಕ್ಷಣಾ ಸುಂಕಗಳನ್ನು ಕ್ರಮಕ್ರಮವಾಗಿ ಶೇಕಡ 80 ರಷ್ಟಕ್ಕೆ ಏರಿಸಲಾಯಿತು. ಇದರ ಅನಂತರದ ಗಮನಾರ್ಹ ಘಟನೆಯೆಂದರೆ ಇಂಗ್ಲಿಷರಿಗೆ ಬಂಗಾಳದ 'ದಿವಾನಿ'ಯನ್ನು ಕೊಡಮಾಡಿದುದು. 1765ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ಬಂಗಾಳದ ದಿವಾನಿಯನ್ನು ವಹಿಸಿಕೊಂಡ ನಂತರ ಪೂರ್ವದ ಪ್ರಾಂತದ ತೆರಿಗೆಗಳ ಮೂಲಕ ಬರುವ ಆದಾಯವೆಲ್ಲವೂ ಕಂಪೆನಿಗೆ ದೊರೆಯಿತು. ಇದಲ್ಲದೆ ಇದರಿಂದ ದೊರೆತ ರಾಜಕೀಯ ಮತ್ತು ಆರ್ಥಿಕ ಪ್ರಭಾವವನ್ನು ಉಪಯೋಗಿಸಿಕೊಂಡು ಕರಕುಶಲ ಕೈಗಾರಿಕೆಯನ್ನು ದುರ್ಬಲಗೊಳಿಸಿದ್ದೇ ಅಲ್ಲದೆ ಭಾರತೀಯ, ಡಚ್, ಫ್ರೆಂಚ್ ಮತ್ತು ಡೇನಿಷ್ ಕೋಠಿಗಳು ಮತ್ತು ವರ್ತಕರನ್ನು ಉಪ್ಪು, ಅಡಿಕೆ, ಹೊಗೆಸೊಪ್ಪು ಮತ್ತು ಆಹಾರ ಧಾನ್ಯಗಳ ವ್ಯಾಪಾರದಿಂದ ಹೊರಗಟ್ಟುವುದೂ ಸಾಧ್ಯವಾಯಿತು.

ಕಂಪೆನಿಯ ನೌಕರರು ತಮಗೆ ದೊರಕುತ್ತಿದ್ದ ಅತಿ ಕಡಿಮೆ ವೇತನಗಳಿಂದಾಗಿ ಖಾಸಗಿ ವ್ಯಾಪಾರದ ಮೂಲಕ ಅಧಿಕ ಲಾಭ ಗಳಿಸುವ ಉದ್ದೇಶದಿಂದ ಅವಧ್‌, ಬಂಗಾಳ ಮತ್ತು ಕರ್ನಾಟಿಕ್‌ ಪ್ರಾಂತಗಳ ಆಂತರಿಕ ವ್ಯಾಪಾರಕ್ಕೆ ಕೈಹಾಕಿದ್ದರು. ಇದರಿಂದ 1765ರಲ್ಲಿ ಜಮೀನುದಾರರ ಗುಂಪೊಂದು ಕಂಪೆನಿಯ ನೌಕರರ ಏಕಸ್ವಾಮ್ಯ ಮತ್ತು ಉಪದ್ರವಕಾರಕ ವರ್ತನೆಯ ಬಗ್ಗೆ ಕೌನ್ಸಿಲ್ ಸದಸ್ಯರಿಗೆ ಹೀಗೆ ದೂರುಕೊಟ್ಟರು;

"ಇಂಗ್ಲಿಷರ ವ್ಯಾಪಾರಿ ಕೋಠಿಗಳು ಬಹಳಷ್ಟಿವೆ. ಅವರ ಗುಮಾಸ್ತರು ಬಂಗಾಳ ಪ್ರಾಂತದ ಎಲ್ಲ ಸ್ಥಳಗಳು ಮತ್ತು ಎಲ್ಲ ಹಳ್ಳಿಗಳಲ್ಲಿಯೂ ಇದ್ದಾರೆ: ತಂಬಾಕು, ಅರಿಶಿನ, ಎಣ್ಣೆ, ಅಕ್ಕಿ, ಸೆಣಬು, ಗೋಣಿಚೀಲಗಳು - ಒಟ್ಟಿನಲ್ಲಿ ಎಲ್ಲ ಬಗೆಯ ಧಾನ್ಯಗಳು, ಹತ್ತಿ ಬಟ್ಟೆ ಮತ್ತು ನಾಡಿನಲ್ಲಿ ಉತ್ಪಾದನೆಯಾಗುವ ಎಲ್ಲ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡು, ಸ್ಥಳೀಯ ಜನರು ಮತ್ತು ಅಂಗಡಿದಾರರು ಪೇಟೆಯ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಕೊಳ್ಳುವಂತೆ ಒತ್ತಾಯಿಸಿ, ಸರ್ಕಾರಕ್ಕೆ ತೆರಬೇಕಾದ ಸುಂಕಗಳನ್ನೂ ಕೊಡದೆ, ಎಲ್ಲ ರೀತಿಯ ರಾಜದ್ರೋಹದ ಮತ್ತು ಹಾನಿಕಾರಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಈಗ ಮೌಲ್ಯವುಳ್ಳ ಯಾವ ವಸ್ತುವೂ ದೇಶದಲ್ಲಿ ಉಳಿದಿಲ್ಲ."

  ದಿವಾನಿ ವರ್ಗಾಯಿಸಲ್ಪಟ್ಟ ಕೇವಲ ನಾಲ್ಕು ವರ್ಷಗಳ ಅನಂತರ ಈಸ್ಟ್ ಇಂಡಿಯಾ ಕಂಪೆನಿಯು ಆಜ್ಞೆಯೊಂದನ್ನು ಹೊರಡಿಸಿ, ರೇಷ್ಮೆ ನೇಕಾರರು ತಮ್ಮ ಮನೆಗಳಲ್ಲಿ ಕಾರ್ಯನಿರತರಾಗುವುದನ್ನು ನಿಷೇಧಿಸಿ, ಇಂಗ್ಲಿಷ್ ಕಂಪೆನಿಯ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕೆಲಸ ಮಾಡಬೇಕೆಂದು ವಿಧಿಸಿತು. ಫ್ರೆಂಚ್ ಚರಿತ್ರಕಾರನಾದ ಆಬ್ಬೆ ರೇನಲ್ ತಿಳಿಸಿರುವಂತೆ ಇಂಗ್ಲಿಷ್ ಕಂಪೆನಿಯು ಉಪ್ಪು, ಅಡಿಕೆ ಮತ್ತು ತಂಬಾಕುಗಳ ಮಾರಾಟದ ಮೇಲೆ ಏಕಸ್ವಾಮ್ಯ ಹೊಂದಿ, ಸುಂಕಗಳನ್ನು ಹೆಚ್ಚಿಸಿ, ಕೊನೆಗೆ ಒಂದು ಶಾಸನದ ಪ್ರಕಾರ ಇಂಗ್ಲಿಷರನ್ನು ಬಿಟ್ಟು ಇನ್ನು ಯಾವ ಯೂರೋಪಿಯನ್ನನೂ ಬಂಗಾಳದ ಒಳ ಪ್ರದೇಶಗಳಲ್ಲಿ ವ್ಯಾಪಾರ ಮಾಡಕೂಡದೆಂದು ವಿಧಿಸಿತು. ಇದಲ್ಲದೆ, ಇಂಗ್ಲಿಷ್ ಕಂಪೆನಿಯ ಬೇಡಿಕೆ ಮುಗಿಯುವವರೆಗೆ ನೇಕಾರರು ಬೇರೆಯವರಿಗಾಗಿ ಕೆಲಸ ಮಾಡುವುದನ್ನು ನಿಷೇಧಿಸಲಾಯಿತು. ಇದರ ಫಲವಾಗಿ, ಕಂಪೆನಿಯ ಮುತಾಲಿಕರು ನಿರ್ಧರಿಸಿದ ಬೆಲೆಗೆ ತಮ್ಮ ಮಾಲನ್ನು ನೇಕಾರರು ಮಾರಬೇಕಾಯಿತು. ಹೀಗಾಗಿ ಆಗಿನಿಂದ ವ್ಯಾಪಾರ ಮತ್ತು ಕೈಗಾರಿಕೆಯಲ್ಲಿ ಇಂಗ್ಲಿಷರಿಗೆ ಯಾವ ಯೂರೋಪಿಯನ್ ಎದುರಾಳಿಯೂ ಉಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ಇಂಗ್ಲಿಷ್ ಕಂಪೆನಿ, ಅದರ ನೌಕರರು ಮತ್ತು ಪ್ರತಿನಿಧಿಗಳು ಏಕಸ್ವಾಮ್ಯ, ಬಲಾತ್ಕಾರ ಮತ್ತು ಸುಲಿಗೆಯ ಮೂಲಕ ಬಂಗಾಳ ಪ್ರಾಂತವನ್ನು ತಮ್ಮ ಆರ್ಥಿಕ ಹಿಡಿತದಲ್ಲಿಟ್ಟುಕೊಂಡರು. ಇದರಿಂದ ಜನರು ಅತಿಯಾಗಿ ಶೋಷಣೆಗೊಂಡರು.

ಅಲ್ಲದೇ 1784ರ ನಂತರ ಜಾರಿಗೆ ತಂದ ಕಾನೂನುಗಳ ಮೂಲಕ ಬ್ರಿಟಿಷರು ಭಾರತದ ಕೈಗಾರಿಕೆಗಳು ಮತ್ತು ವ್ಯಾಪಾರಗಳಿಗೆ ಮತ್ತಷ್ಟು ಹಾನಿ ಉಂಟು ಮಾಡಿದರು. ಕಂದಾಯ ಸುಧಾರಣೆಯ ಹೆಸರಿನಲ್ಲಿ ಜಮೀನುದಾರಿ ಪದ್ಧತಿಯನ್ನು ಜಾರಿಗೊಳಿಸಿ, ರೈತರ ಭೂ ಒಡೆತನವನ್ನು ಕಿತ್ತುಕೊಂಡು ರೈತರನ್ನು ಭೂರಹಿತ ಕಾರ್ಮಿಕರನ್ನಾಗಿ ಮಾಡಿದರು.

  ಮತ್ತೊಂದೆಡೆ ರಕ್ಷಣಾತ್ಮಕ ಮುಕ್ತ ವ್ಯಾಪಾರದ ನೀತಿಗಳನ್ನು ಅನುಸರಿಸುವ ಮೂಲಕ ಭಾರತದ ಕೈಗಾರಿಕೆಗಳ ನಾಶಕ್ಕೆ ಕಾರಣರಾದರಲ್ಲದೇ ನಿರುದ್ಯೋಗ ಸಮಸ್ಯೆಗೂ ಕಾರಣರಾದರು. ಏಕೆಂದರೆ ಅವರ ನೀತಿಗಳಿಂದಾಗಿ ದೇಶದಲ್ಲಿ ಕರಕುಶಲ ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಗಣನೀಯ ಇಳಿಮುಖವಾಯಿತು. ಈ ಅವಧಿಯಲ್ಲಿ ಭಾರತದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಬ್ರಿಟನ್ನಿನಲ್ಲಿ ಆ ದೇಶದ ಬಟ್ಟೆಗಳ ಬೆಲೆಗಳಿಗಿಂತ ಶೇಕಡ 50 ರಿಂದ 60 ರಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದವು. ಭಾರತದಿಂದ ಇಂಗ್ಲೆಂಡಿಗೆ ಆಮದಾಗುತ್ತಿದ್ದ ಬಟ್ಟೆಗಳಿಂದಾಗಿ ತಮ್ಮ ವ್ಯಾಪಾರದಲ್ಲಿ ಆಗುತ್ತಿದ್ದ ನಷ್ಟವನ್ನು ತಡೆಯಲು ಲಂಡನ್ ಮತ್ತು ಬೇರೆಡೆಗಳಲ್ಲಿ ಬ್ರಿಟಿಷ್ ನೇಕಾರರು ನಡೆಸಿದ ದೊಂಬಿ ಮತ್ತು ತುಮುಲಗಳಿಂದಾಗಿ ಬ್ರಿಟನ್‌ ಪಾರ್ಲಿಮೆಂಟ್ ಶಾಸನಗಳ ಮೂಲಕ ಉಣ್ಣೆ ಮತ್ತು ರೇಷ್ಮೆಯಿಂದ ತಯಾರಿಸಿದ ವಸ್ತುಗಳ ಪರವಾಗಿ ತೀವ್ರ ರಕ್ಷಣಾಕ್ರಮಗಳನ್ನು ತೆಗೆದುಕೊಂಡಿತು. ಅಲ್ಲದೇ 1813ರಲ್ಲಿ ಬ್ರಿಟಿಷ್ ಉದ್ಯಮಿಗಳನ್ನು ರಕ್ಷಿಸುವುದಕ್ಕೋಸ್ಕರ ಭಾರತದ ಉಡುಪುಗಳ ಮೇಲೆ ಅತಿ ಹೆಚ್ಚು- ಅಂದರೆ ಬಿಳಿ ಬಟ್ಟೆಗಳ ಮೇಲೆ ಪ್ರತಿಶತ 78 ರಷ್ಟು ಮತ್ತು ಮಸ್ಲಿನ್ ಬಟ್ಟೆಗಳ ಮೇಲೆ ಪ್ರತಿಶತ 31 ರಷ್ಟು ಸುಂಕಗಳನ್ನು ಪಾರ್ಲಿಮೆಂಟ್ ವಿಧಿಸಿತು. ಈ ವರ್ಷ ಮುಗಿಯುವುದರೊಳಗಾಗಿ ಭಾರತದ ರೇಷ್ಮೆ ಬಟ್ಟೆಗಳು ಮತ್ತು ಹತ್ತಿ ಮತ್ತು ರೇಷ್ಮೆ ಮಿಶ್ರಿತ ಉಡುಪುಗಳನ್ನು ಬ್ರಿಟಿಷ್‌ ಪೇಟೆಗಳಿಂದ ಸಂಪೂರ್ಣ ಹೊರಗಿಡಲಾಯಿತು. ಅದೇ ಕಾಲಕ್ಕೆ ಯಂತ್ರಗಳ ಸಹಾಯದಿಂದ ಕಾರ್ಖಾನೆಗಳಲ್ಲಿ ಬೃಹತ್ ಪ್ರಮಾಣದ ಉತ್ಪಾದನೆಗಳು ಆರಂಭವಾದವು. ಆಂತರಿಕ ಪೇಟೆಯಲ್ಲಿ ಬ್ರಿಟಿಷ್ ಉತ್ಪನ್ನಗಳು ರಕ್ಷಣಾತ್ಮಕ ನೀತಿಯಿಂದಾಗಿ ಭಾರತದ ಉತ್ಪನ್ನಗಳ ಬೇಡಿಕೆ ಕಡಿಮೆ ಮಾಡಿದ್ದೇ ಅಲ್ಲದೆ, ಬ್ರಿಟಿಷ್ ವಸ್ತುಗಳು ಭಾರತದ ವಸ್ತುಗಳನ್ನು, ಭಾರತದ ಪೇಟೆಗಳನ್ನೂ ಒಳಗೊಂಡಂತೆ ಇಡೀ ಏಷ್ಯದ ಪೇಟೆಗಳಿಂದಲೇ ಹೊರಗಟ್ಟಿದವು. 1813ರಲ್ಲಿ ಗ್ರೇಟ್ ಬ್ರಿಟನ್ ಭಾರತಕ್ಕೆ 108,824 ಪೌಂಡ್ ಬೆಲೆಬಾಳುವ ಹತ್ತಿ ಬಟ್ಟೆಗಳನ್ನು ಕಳುಹಿಸಿತು. ಇದರಿಂದಾಗಿ ಒಂದು ಕಡೆ ಭಾರತದಲ್ಲಿ ಬಟ್ಟೆ ಮತ್ತು ಉಡುಪುಗಳ ತಯಾರಿಕೆ ಮತ್ತು ರಫ್ತು ತೀವ್ರವಾಗಿ ಕ್ಷೀಣಿಸಿದರೆ, ಇನ್ನೊಂದು ಕಡೆ 1813ರಿಂದ ಭಾರತಕ್ಕೆ ಬ್ರಿಟಿಷ್ ಬಟ್ಟೆಗಳ ಆಮದು ಚುರುಕಾಗಿ ಹೆಚ್ಚತೊಡಗಿತು.

   1813ರ ಚಾರ್ಟರ್ ಕಾಯಿದೆಯು ಜಾರಿಗೆ ಬಂದು, ಈಸ್ಟ್ ಇಂಡಿಯಾ ಕಂಪೆನಿಯ ಏಕಸ್ವಾಮ್ಯವನ್ನು ಅಂತ್ಯಗೊಳಿಸಿ, ಖಾಸಗಿ ವರ್ತಕರಿಗೆ ವಿಶೇಷ ಲೈಸೆನ್ಸ್ ಆಧಾರದ ಮೇಲೆ ಭಾರತದಲ್ಲಿ ಮುಕ್ತ ವ್ಯಾಪಾರ ನಡೆಸಲು ಪರವಾನಗಿ ಕೊಡಲಾಯಿತು. ಇದಾದ ಮೂರು ವರ್ಷಗಳ ನಂತರ (1816) ಆಬ್ಬೆ ಡುಬಾಯಿಸನು - ದಕ್ಷಿಣ ಭಾರತದಲ್ಲಿ ಧರ್ಮಪ್ರಸಾರಣಾರ್ಥವಾಗಿ ಅನೇಕ ವರ್ಷ ಇದ್ದವನು - ಹೀಗೆ ಬರೆದಿದ್ದಾನೆ:

"ಇಂಗ್ಲೆಂಡಿನಲ್ಲಿ ಆಗಿರುವ ಕೈಗಾರಿಕಾ ಕ್ರಾಂತಿಯು ಭಾರತವನ್ನು ಸಂಪೂರ್ಣವಾಗಿ ನಾಶಮಾಡುವ ಭಯವನ್ನೊಡ್ಡಿದೆ. ಯೂರೋಪಿಗೆ ಹಿಂದಿರುಗುವ ಮುನ್ನ ಕೈಗಾರಿಕೋತ್ಪಾದನೆಯಲ್ಲಿ ತೊಡಗಿರುವ ಭಾರತದ ಕೆಲವು ಜಿಲ್ಲೆಗಳಲ್ಲಿ ತಿರುಗಾಡಿದೆ. ಅಲ್ಲಿನ ಹಾಳುಬಿದ್ದ ಸ್ಥಿತಿಯನ್ನು ಇನ್ನಾವುದೂ ಸರಿಗಟ್ಟಲಾರದು. ಎಲ್ಲ ಕೆಲಸದ ಕೊಠಡಿಗಳೂ ಮುಚ್ಚಲ್ಪಟ್ಟಿದ್ದವು. ನೇಕಾರ ಜಾತಿಗೆ ಸೇರಿದ ಲಕ್ಷಾಂತರ ನಿವಾಸಿಗಳು ಹಸಿವೆಯಿಂದ ಸಾಯುತ್ತಿದ್ದರು. ಏಕೆಂದರೆ ಅವರಿಗೆ ಬೇರೊಂದು ವೃತ್ತಿಯನ್ನು ಅವಲಂಬಿಸುವುದು ಸಾಧ್ಯವಿರಲಿಲ್ಲ".

ಫ್ರಾನ್ಸಿಸ್‌ ಬುಕಾನನ್‌ನ ಪ್ರಕಾರ ಉತ್ತರ ಬಿಹಾರ ಮತ್ತು ಬಂಗಾಳದಲ್ಲಿ ಕೈಮಗ್ಗದ ಉದ್ಯಮದ ನಾಶವು ದಕ್ಷಿಣ ಭಾರತದಷ್ಟು ಒಮ್ಮಿಂದೊಮ್ಮೆಲೇ ಆದುದಲ್ಲ. ಏಕೆಂದರೆ 1808-1815ರ ನಡುವೆ 'ಬುಕಾನನ್ 6114 ಮಗ್ಗಗಳನ್ನು ಗೋರಖಪುರದಲ್ಲಿ, 7950 ಮಗ್ಗಗಳನ್ನು ಷಾಹಬಾದಿನಲ್ಲಿ, 13,500 ಮಗ್ಗಗಳನ್ನು ಪುರ್ನಿಯದಲ್ಲಿ ಮತ್ತು 4,800 ಮಗ್ಗಗಳನ್ನು ಮಾಲ್ಟಾದಲ್ಲಿ ಎಣಿಸಿದ್ದಲ್ಲದೆ, ಲಕ್ಷಾಂತರ ಸ್ತ್ರೀಯರು ಹತ್ತಿ ನೂಲುವ ಕೆಲಸದಲ್ಲಿ ನಿರತರಾಗಿರುವುದನ್ನು ನೋಡಿದ್ದನು.

19ನೆಯ ಶತಮಾನದ ಆದಿ ಭಾಗದವರೆಗೆ ಬಂಗಾಳ, ಕೋರಮಂಡಲ ತೀರ, ಗುಜರಾತ್ ಮತ್ತು ಭಾರತದ ಇತರ ಭಾಗಗಳಿಂದ, ರಫ್ತು ವ್ಯಾಪಾರದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿದ್ದರೂ ಇಂಗ್ಲಿಷ್ ಮತ್ತು ಫ್ರೆಂಚ್ ವರ್ತಕರು ಯೂರೋಪಿಗೆ ಅಪಾರ ಪ್ರಮಾಣದ ಹತ್ತಿ ಬಟ್ಟೆಗಳನ್ನು ರಫ್ತು ಮಾಡಿದ್ದರು. ಈ ರೀತಿಯಲ್ಲಿ ಭಾರತದಿಂದ ರಫ್ತಾಗುವ ಬಟ್ಟೆಗಳ ಮೌಲ್ಯ 1677-80ರ ಅವಧಿಯಲ್ಲಿ ವರ್ಷಕ್ಕೆ 2 ರಿಂದ 3 ಲಕ್ಷ ಪೌಂಡುಗಳಷ್ಟಾಗಿತ್ತು; 1697-1702 ರ ಅವಧಿಯಲ್ಲಿ ಆ ಮೌಲ್ಯ 1 ದಶಲಕ್ಷ ಪೌಂಡೂ 1786-1790ರ ಅವಧಿಯಲ್ಲಿ 1.4 ದಶಲಕ್ಷ ಪೌಂಡೂ ಆಗಿತ್ತು. 19ನೆಯ ಶತಮಾನ ಪ್ರಾರಂಭವಾದಾಗ ಭಾರತದಿಂದ ಇಂಗ್ಲೆಂಡಿಗೆ ರಫ್ತಾದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೌಲ್ಯ 2.5 ದಶಲಕ್ಷ ಪೌಂಡುಗಳಾಗಿತ್ತು. ಇದೇ ಅವಧಿಯಲ್ಲಿ ಫ್ರಾನ್ಸ್ ಸಹ ವರ್ಷ ಒಂದಕ್ಕೆ 1.2 ದಶಲಕ್ಷ ಪೌಂಡ್ ಮೌಲ್ಯದ (ಈ ಅಂಕಿ 1791ರದು) ಹತ್ತಿ ಬಟ್ಟೆಗಳನ್ನು ಆಮದು ಮಾಡಿಕೊಂಡಿತು.

19ನೆಯ ಶತಮಾನದ ಆದಿಭಾಗದಲ್ಲಿ (1812) ಈ ಕೆಳಕಂಡ ಸುಂಕಗಳು ಇಂಗ್ಲೆಂಡಿನಲ್ಲಿ ವಿಧಿಸಲ್ಪಡುತ್ತಿದ್ದವು: ಮಸ್ಲಿನ್ ಬಟ್ಟೆಗಳ ಮೇಲೆ ಇಂಗ್ಲೆಂಡಿಗೆ ಆಮದಾದ ಕೂಡಲೇ ಶೇಕಡ 10 ರಷ್ಟು ಮತ್ತು ಗೃಹಬಳಕೆಗೆ ಶೇಕಡ £ 27; ಕ್ಯಾಲಿಕೊಗಳ ಮೇಲೆ ಆಮದಾದ ಕೂಡಲೇ ಶೇಕಡ £ 3-8 ಮತ್ತು ಗೃಹ ಬಳಕೆಗೆ ಶೇಕಡ £ 68. ನಿಷೇಧಿಸಲ್ಪಟ್ಟ ಬಣ್ಣದ ಹತ್ತಿಯ ಬಟ್ಟೆಗಳ ಮೇಲೆ ಆಮದಾದ ಕೂಡಲೇ ಶೇಕಡ £ 3-6-8 ಸುಂಕ ವಿಧಿಸಲ್ಪಡುತ್ತಿತ್ತು ಮತ್ತು ಇವುಗಳನ್ನು ಇಂಗ್ಲೆಂಡಿನಲ್ಲಿ ಉಪಯೋಗಿಸಲು ಅವಕಾಶವಿರಲಿಲ್ಲ. ಎಲ್ಲ ರೇಷ್ಮೆ ವಸ್ತುಗಳು ಮತ್ತು ರೇಷ್ಮೆ ಹಾಗೂ ಹತ್ತಿಯ (ಪಟ್ಟೆ ನೂಲಿನ) ಉಡುಪುಗಳು ನಿಷೇಧಿತವಾದವು.

1833ರ ಚಾರ್ಟರ್ ಕಾಯ್ದೆಯ ಅನ್ವಯ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ನಡೆಸುವ ಪಾತ್ರವನ್ನು ಕಿತ್ತು ಹಾಕಲಾಯಿತು. ಆ ವೇಳೆಗೆ ಕಂಪೆನಿಯು ತಮ್ಮ ಬಹುಮಟ್ಟಿನ ಕಾರ್ಖಾನೆಗಳನ್ನು ಮುಚ್ಚಿ, ವ್ಯಾಪಾರ ಚಟುವಟಿಕೆಗಳನ್ನು ಬಹಳಷ್ಟು ಕಡಿಮೆಗೊಳಿಸಿತ್ತು. ಇದರಿಂದ ಬ್ರಿಟಿಷ್ ಖಾಸಗಿ ಬಂಡವಾಳ ಮತ್ತು ಉದ್ದಿಮೆಯು ಯಾವ ಅಡ್ಡಿಯೂ ಇಲ್ಲದೆ, ಲೈಸೆನ್ಸ್ ಪಡೆಯುವ ಅಗತ್ಯವೂ ಇಲ್ಲದೇ ಭಾರತದ ಸಂಪನ್ಮೂಲಗಳ ಶೋಷಣೆ ಮಾಡಲು ಅವಕಾಶ ದೊರಕಿತು. ಈ ವೇಳೆಗಾಗಲೇ "ಕೈಗಾರಿಕೋದ್ಯಮದ ಸ್ಥಾನದಿಂದ ಭಾರತವು ಕೇವಲ ಕೃಷಿ ನಿರತ ಸ್ಥಾನಕ್ಕೆ ಇಳಿದಿತ್ತು".

ಇದಲ್ಲದೆ ದೇಶದ ನೌಕಾ ಉದ್ದಿಮೆಯ ಇಳಿಮುಖದಿಂದಾಗಿ, ಭಾರತಕ್ಕೆ ಸಂಬಂಧಿಸಿದ ದ್ವೀಪ ಸಮುದಾಯದ, ಪರ್ಷಿಯದ ಹಾಗೂ ಆಫ್ರಿಕದ ಮಾರುಕಟ್ಟೆಗಳ ನಷ್ಟದಿಂದಾಗಿ ಹತ್ತಿ ಕೈಗಾರಿಕೆಗೆ ಮತ್ತಷ್ಟು ಪೆಟ್ಟು ತಗುಲಿತು. ಏಕೆಂದರೆ 17ನೆ ಶತಮಾನ ಮತ್ತು 18ನೆ ಶತಮಾನದ ಆದಿಯಲ್ಲಿ ಭಾರತೀಯ ನಾವಿಕರು ವಿಶಾಲವಾದ ಹಡಗುಗಳನ್ನು ನಿರ್ಮಿಸಿ ಪೂರ್ವ ಮತ್ತು ಪಶ್ಚಿಮದ ಸಾಗರಗಳಲ್ಲಿ ನೌಕಾ ವ್ಯಾಪಾರದಲ್ಲಿ ತೊಡಗಿರುತ್ತಿದ್ದರು. ಆದರೆ ಪೋರ್ಚುಗೀಸರು ಮತ್ತು ಅವರ ನಂತರ ಬಂದ ಯೂರೋಪಿಯನ್ನರು ಭಾರತದ ಹಡಗುಗಳನ್ನು ಸಮುದ್ರಗಳಲ್ಲಿ ದೋಚಲು ತೊಡಗಿದರು. ಭಾರತದ ಹಡಗುಗಳು ಕೇವಲ ಸರಕು ಸಾಗಣೆಯ ದೃಷ್ಟಿಯಿಂದ ನಿರ್ಮಿಸಿದ್ದವುಗಳಾಗಿದ್ದು, ರಕ್ಷಣಾತ್ಮಕ ಸೌಲಭ್ಯಗಳನ್ನು ಹೊಂದಿಲ್ಲದಿರುವುದು ಅವರ ಈ ರೀತಿಯ ಕಡಲುಗಳ್ಳತನಕ್ಕೆ ಕಾರಣವಾಯಿತು. ಈ ರೀತಿಯ ಕಡಲುಗಳ್ಳತನ ಮತ್ತು ಹಡಗುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅವ್ಯಾಹತವಾಗಿ ನಡೆದೇ ಇತ್ತು. ಇಂಥ ದುರುಪಯೋಗ ಬಂಗಾಳದಲ್ಲಿ ಎಷ್ಟು ಅಸಹ್ಯವಾಯಿತೆಂದರೆ 1748ರಲ್ಲಿ ನವಾಬ್ ಅಲೀವರ್ದಿಖಾನನು ಈಸ್ಟ್ ಇಂಡಿಯಾ ಕಂಪೆನಿಯ ಗವರ್ನರ್ ಬಾರ್‌ವೆಲ್‌ಗೆ ಒಂದು ಸಂದೇಶ (ಪರ್ವಾನಾ) ಕಳುಹಿಸಿ, ಹೀಗೆ ಛೀಮಾರಿ ಹಾಕಿದನು :

"ಸೈಯದರು (ಅರಬರು), ಮುಘಲರು, ಆರ್ಮೇನಿಯನ್ನರು ಇತ್ಯಾದಿ ಹೂಗ್ಲಿಯ ವರ್ತಕರು ತಮ್ಮ ಲಕ್ಷಾಂತರ ವಸ್ತುಗಳು ಮುಟ್ಟುಗೋಲು ಹಾಕಲ್ಪಟ್ಟಿವೆ ಮತ್ತು ಲೂಟಿಮಾಡಲ್ಪಟ್ಟಿವೆಯೆಂದು ದೂರಿದ್ದಾರೆ; ಹಾಗೂ ಹೂಗ್ಲಿಗೆ ಹೊರಟಿರುವ ಹಡಗುಗಳನ್ನು, ಅವು ಫ್ರೆಂಚರದೆಂಬ ಸೋಗಿನಲ್ಲಿ ನೀವು ಅವುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೀರೆಂದು ನನಗೆ ವಿದೇಶಗಳಿಂದ ವರ್ತಮಾನ ಬಂದಿದೆ. ಆಂಟೋನಿ (ಒಬ್ಬ ಆರ್ಮನಿಯನ್) ಗೆ ಸೇರಿದ ಹಾಗೂ ಲಕ್ಷಾಂತರ ವಸ್ತುಗಳನ್ನು ಮತ್ತು ಅಲ್ಲಿನ ನಾಡಗೌಡನು ನನಗಾಗಿ ಕಳುಹಿಸಿದ ಅಪೂರ್ವ ವಸ್ತುಗಳನ್ನು ಮೋಚಾದಿಂದ ಹೊತ್ತು ತರುತ್ತಿದ್ದ ಹಡಗುಗಳನ್ನು ನೀವು ಮುಟ್ಟುಗೋಲು ಹಾಕಿಕೊಂಡಿದ್ದೀರಿ ಮತ್ತು ಲೂಟಿಮಾಡಿದ್ದೀರಿ... ನಿಮಗೆ ಕಡಲುಗಳ್ಳತನ ಮಾಡಲು ಅನುಮತಿ ಇತ್ತಿರಲಿಲ್ಲವಾದ ಕಾರಣ, ಈ ಪತ್ರ ತಲುಪಿದ ಕೂಡಲೇ ವರ್ತಕರಿಗೆ ಸೇರಿದ ಎಲ್ಲ ವಸ್ತುಗಳು ಮತ್ತು ಆಸ್ತಿಗಳನ್ನು ತಲುಪಿಸತಕ್ಕದ್ದು".

VII. ಉಪಸಂಹಾರ: ಒಟ್ಟಿನಲ್ಲಿ ಗ್ರೇಟ್ ಬ್ರಿಟನ್ನಿನ ಔದ್ಯೋಗಿಕ ಕ್ರಾಂತಿಯು ಭಾರತದ ಕೈಗಾರಿಕೋದ್ಯಮಕ್ಕೆ ಭಾರಿ ಆಘಾತವನ್ನುಂಟುಮಾಡಿತು. ಕೈಮಗ್ಗದ ಹಾಗೂ ಇತರ ಕರಕುಶಲ ಉದ್ಯಮಗಳು ಎಷ್ಟೇ ಕಡಿಮೆ ವೆಚ್ಚದ ಶ್ರಮಿಕರನ್ನು ಹೊಂದಿದ್ದರೂ - ಶ್ರಮವುಳಿಸುವ ಯಂತ್ರಚಾಲಿತ ಕಾರ್ಖಾನೆಗಳಿಂದ ಹೊರಬರುವ ಉತ್ಪನ್ನಗಳ ಪ್ರವಾಹದ ಜೊತೆಗೆ ಸ್ಪರ್ಧಿಸಲಾರದಾದವು. ಜೊತೆಗೆ ಕಡಲುಗಳ್ಳತನಗಳಂತಹ ಚಟುವಟಿಕೆಗಳಿಂದ ನೌಕಾ ಉದ್ಯಮವು ಕ್ಷೀಣಿಸಿದರೆ, ಬ್ರಿಟಿಷರು ಅನುಸರಿಸಿದ ಮುಕ್ತ ವ್ಯಾಪಾರದ ನೀತಿಗಳು ಭಾರತದಲ್ಲಿನ ಕೈಗಾರಿಕೆಗಳು ನಾಶವಾಗಲು ಕಾರಣವಾದವು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources