ಅಧ್ಯಾಯ-8: ಆರ್ಥಿಕತೆಯ ಮೇಲೆ ವಸಾಹತು ಆಡಳಿತದ ಪರಿಣಾಮಗಳು
I. ಪೀಠಿಕೆ: ಭಾರತದಲ್ಲಿ ಯೂರೋಪಿಯನ್ನರ ಆಗಮನದಿಂದಾಗಿ ಇಲ್ಲಿನ
ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳು ಉಂಟಾದವು. ಅವುಗಳಲ್ಲಿ
ಆರ್ಥಿಕ ಬದಲಾವಣೆಗಳು ಇಲ್ಲಿನ ಜನರ ಜೀವನದ ಮೇಲೆ ವೈವಿಧ್ಯಮಯ ಪರಿಣಾಮಗಳನ್ನುಂಟು ಮಾಡಿದ್ದಲ್ಲದೇ ಹೊಸ
ಸಾಮಾಜಿಕ ವರ್ಗಗಳ ಉದಯಕ್ಕೂ ಕಾರಣವಾದವು. ಅಂದರೆ ಈ ಕ್ಷೇತ್ರದಲ್ಲಿ ಮಧ್ಯವರ್ತಿಗಳು, ಲೇವಾದೇವಿಗಾರರು ಮತ್ತು ಮಧ್ಯವರ್ತಿ ಭೂಒಡೆಯರ
ಏಳಿಗೆ ಹೊಸದಾಗಿ ಕಂಡುಬಂದರೆ ಭೂರಹಿತ ಕಾರ್ಮಿಕರ ಸಮಸ್ಯೆ
ಸಹಾ ಉಂಟಾಯಿತು. ಈ ವರ್ಗಗಳ ಏಳಿಗೆ ಮತ್ತು ಸಮಸ್ಯೆಗಳಿಗೆ ಕಾರಣಗಳು ಮತ್ತು ಅವುಗಳ ಪರಿಣಾಮಗಳನ್ನು
ಕೆಳಕಂಡಂತೆ ವಿವರಿಸಬಹುದು.
II. ಮಧ್ಯಮ ವರ್ಗದವರ ಏಳಿಗೆ: ಬ್ರಿಟಿಷರು
ಅಧಿಕಾರ ಸ್ಥಾಪಿಸಿದ ನಂತರ ದೇಶೀಯ ವ್ಯಾಪಾರ
ಮಾಡಲು ಅವರಿಗೆ ಅನೇಕ ಸಹಾಯಕರ ಅವಶ್ಯಕತೆ
ಉಂಟಾಯಿತು. ಅಲ್ಲದೇ ಅವರು ರಾಜಕೀಯ ಅಧಿಕಾರ ಸ್ಥಾಪಿಸಿದಾಗ
ಕೆಳದರ್ಜೆಯ ನೌಕರಿಗಳಿಗೆ ಭಾರತೀಯರನ್ನೇ ನೇಮಿಸಿಕೊಳ್ಳತೊಡಗಿದರು. ಇದರಿಂದ ಅವರು ಕೆಲವು ಶಿಕ್ಷಣ
ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ತಮಗೆ ಬೇಕಾದ
ರೀತಿಯ ಕೆಲಸಗಾರರ ವರ್ಗವನ್ನು ಸೃಷ್ಟಿಸುವಲ್ಲಿ ಕ್ರಮ ಕೈಗೊಂಡರು. ಇವರನ್ನೇ
ಮಧ್ಯಮ ವರ್ಗದವರು ಎಂದು ಕರೆಯಲಾಗಿದೆ. ಅಂದರೆ,
ಶಿಕ್ಷಕರು, ಗುಮಾಸ್ತರು, ದಲ್ಲಾಲಿಗಳು ಇತ್ಯಾದಿ ಈ ವರ್ಗದಲ್ಲಿ ಬರುತ್ತಾರೆ.
ಇವರಲ್ಲಿ ಜಮೀನುದಾರಿ ಪದ್ಧತಿ ಜಾರಿಗೆ ಬಂದ ನಂತರ ಉದಯಿಸಿದ
ಜಮೀನುದಾರರೂ ಸೇರುತ್ತಾರೆ. ಇದರಿಂದ ಹೊಸ ಜಮೀನುದಾರರು ಉದಯಿಸಿದರು
ಇಲ್ಲವೇ ಹಳೆಯ ಜಮೀನುದಾರರೇ ಬ್ರಿಟಿಷರ
ಅಧೀನವರ್ತಿ ಜಮೀನುದಾರರಾದರು. ಈ ವರ್ಗವು ಅಲ್ಪಸಂಖ್ಯಾತ
ಗುಂಪಾಗಿತ್ತು. ಈ ವರ್ಗಕ್ಕೆ ಸೇರಿದವರು
ಆಂಗ್ಲ ಶಿಕ್ಷಣ ಪಡೆದು ಸಮಾಜದಲ್ಲಿ ಶಿಕ್ಷಿತ ವರ್ಗವಾಗಿ ಬೆಳೆಯಿತು. ಏಕೆಂದರೆ ಆಂಗ್ಲ ಶಿಕ್ಷಣ ಪಡೆದ ಭಾರತೀಯರನ್ನು ಬ್ರಿಟಿಷರು
ಪ್ರೋತ್ಸಾಹಿಸಿದರು. ಅಲ್ಲದೇ ಆಂಗ್ಲರು ಪರಿಚಯಿಸಿದ ನ್ಯಾಯಾಲಯಗಳು, ವ್ಯಾಪಾರ-ವಾಣಿಜ್ಯಗಳಿಂದಾಗಿ ಕಂಪೆನಿ ಮತ್ತು ಭಾರತೀಯ ಪ್ರಜೆಗಳ ನಡುವೆ ಅನೇಕ ವಿಧದ ಮಧ್ಯವರ್ತಿಗಳು
ಕಂಡುಬಂದರು.
III. ಲೇವಾದೇವಿಗಾರರ ಏಳಿಗೆ: ಬ್ರಿಟಿಷರು ಅದಿಕಾರ ಸ್ಥಾಪಿಸಿದ ನಂತರ ರೈತರಿಂದ ಭೂಕಂದಾಯವನ್ನು
ಕಾಲಮಿತಿಯೊಳಗೆ ಮತ್ತು ಧನ ರೂಪದಲ್ಲೇ ಸಂಗ್ರಹಿಸುತ್ತಿದ್ದರು.
ಇದರಿಂದ ಬರಗಾಲಗಳು ಉಂಟಾಗಿ
ಕೃಷಿ ಆದಾಯ ನಷ್ಟವಾದಾಗ ಧನರೂಪದಲ್ಲಿ ಕಂದಾಯ ಪಾವತಿಸಲು ರೈತರಿಗೆ ಸಾಲ ಮಾಡುವುದು ಅನಿವಾರ್ಯವಾಯಿತು.
ಪರಿಣಾಮವಾಗಿ ಲೇವಾ-ದೇವಿಗಾರರ ಉದಯವು
ಆರಂಭವಾಯಿತು. ಈ ಲೇವಾ-ದೇವಿಗಾರರು
ರೈತರನ್ನು ಅಧಿಕ ಬಡ್ಡಿ ವಿಧಿಸುವ
ಮೂಲಕ ಶೋಷಣೆಗೆ ಗುರಿ ಮಾಡುತ್ತಿದ್ದರು. ಅಲ್ಲದೇ
ಅವರು ತಪ್ಪು ಲೆಕ್ಕಗಳನ್ನು ದಾಖಲಿಸುವ ಮೂಲಕ ಮತ್ತು ನಕಲಿ
ಸಹಿಗಳನ್ನು ಬಳಸಿ ಸುಳ್ಳು ದಾಖಲೆಗಳನ್ನು
ಸೃಷ್ಟಿಸುವ ಮೂಲಕ ರೈತರನ್ನು ಮೋಸಗೊಳಿಸುತ್ತಿದ್ದರು.
ಏಕೆಂದರೆ ಅಂದಿನ ರೈತರು ಬಹುತೇಕ ಅನಕ್ಷರಸ್ಥರಾದ್ದರಿಂದ ಹೆಬ್ಬೆರಳುಗಳ ಗುರುತುಗಳನ್ನು ಬಳಸುವುದು ಸುಲಭವಾಗಿತ್ತು. ಅಲ್ಲದೇ ಬ್ರಿಟಿಷರು ಪರಿಚಯಿಸಿದ ನೂತನ ಕಾನೂನುಗಳು ಮತ್ತು
ನೀತಿಗಳು ಸ್ಥಳೀಯ ಲೇವಾದೇವಿಗಾರರು ಮತ್ತು ವ್ಯಾಪಾರಿಗಳಿಗೆ ಮಾತ್ರವೇ ಅನುಕೂಲ ಕಲ್ಪಿಸುವಂತಿದ್ದವು. ಆದ್ದರಿಂದ ಬಹುತೇಕ ನ್ಯಾಯಾಲಯದ ಪ್ರಕರಣಗಳಲ್ಲಿ ರೈತರು ತಮ್ಮ ಸಾಲ ಮರುಪಾವತಿ
ಮಾಡಲಾಗದೇ ಅವರ ಜಮೀನುಗಳು ಶ್ರೀಮಂತರು
ಮತ್ತು ಲೇವಾದೇವಿಗಾರರ ಕೈಸೇರುತ್ತಿದ್ದವು.
IV. ಮಧ್ಯವರ್ತಿ ಭೂ ಒಡೆಯರು:- ಜಮೀನುದಾರರ ಏಳಿಗೆಯಿಂದ ಈ ವರ್ಗದ ಉದಯವಾಯಿತು.
ಅಂದರೆ ಜಮೀನುದಾರರು ತಮ್ಮ
ಬದಲು ಜಮೀನುಗಳ ಮೇಲ್ವಿಚಾರಣೆಗೆಂದು ಕೆಲವರನ್ನು ನೇಮಿಸಿದರು. ಅವರೇ ಮಧ್ಯವರ್ತಿ ಭೂ
ಒಡೆಯರು. ಇವರು ಜಮೀನುದಾರರ ಬದಲು
ರೈತರಿಂದ ಕಂದಾಯ ವಸೂಲಿ ಮಾಡುತ್ತಿದ್ದರು ಮತ್ತು ಪಟ್ಟಣಗಳಲ್ಲಿದ್ದ ಜಮೀನುದಾರರ ಪ್ರತಿನಿಧಿಗಂತೆ ಹಳ್ಳಿಗಳಲ್ಲಿ ವರ್ತಿಸುತ್ತಿದ್ದರು. ಇವರು ಸಹಾ ರೈತರ
ಶೋಷಣೆಗೆ ಕಾರಣರಾದರು.
V. ಭೂ-ರಹಿತ ಕಾರ್ಮಿಕರು:- ಬ್ರಿಟಿಷರು
ಅನುಸರಿಸಿದ ಆರ್ತಿಕ ನೀತಿಗಳಿಂದಾಗಿ ಈ ವರ್ಗದ ಉದಯವಾಯಿತು.
ಅಂದರೆ ಕೈಗಾರಿಕೆಗಳ ನಾಶ ಮತ್ತು ಭೂ
ಕಂದಾಯ ನೀತಿಗಳಿಂದಾಗಿ ಉದ್ಯೋಗ ಮತ್ತು ಜಮೀನು ಕಳೆದುಕೊಂಡವರು ಈ ಸಮಸ್ಯೆಗೆ ಒಳಗಾದರು.
ಹಿಂದೆ ಭೂ ಮಾಲೀಕರಾಗಿದ್ದವರು ನಂತರ
ಭೂ ರಹಿತರಾಗಿ ಪರಿವರ್ತನೆಗೊಂಡರು. ನಿರುದ್ಯೋಗಿಗಳು ಮತ್ತು ಜಮೀನು ಕಳೆದುಕೊಂಡವರು ಜೀವನ ನಡೆಸಲು ನೂತನವಾಗಿ
ಸೃಷ್ಟಿಯಾದ ಜಮೀನುದಾರರ ಬಳಿ ಗೇಣಿದಾರರಾಗಿ ದುಡಿಮೆ
ಮಾಡಬೇಕಾಯಿತು. ಅಲ್ಲದೇ ಕೈಗಾರಿಕೆಗಳ ನಾಶದಿಂದಾಗಿ ಕುಶಲಕರ್ಮಿಗಳು ಪಟ್ಟಣ ತೊರೆದು ಹಳ್ಳಿಗಳಿಗೆ ವಲಸೆ ಬರಬೇಕಾಯಿತು. ಜೊತೆಗೆ
ಹಳ್ಳಿಗಳಲ್ಲಿನ ಕುಶಲಕರ್ಮಿಗಳೂ ಸಹ ಕೈಗಾರಿಕೆಗಳ ನಾಶದಿಂದಾಗಿ
ಭೂಮಿಯ ಮೇಲೆ ಅವಲಂಬಿತರಾದರು.
*****
Comments
Post a Comment