ಬಂಗಾಳದಲ್ಲಿ ನಮಶೂದ್ರ ಚಳವಳಿ

I. ಪೀಠಿಕೆ:- ಮೇಲ್ವರ್ಗದವರ ದಬ್ಬಾಳಿಕೆ ಮತ್ತು ಶೋಷಣೆಯು ಬಂಗಾಳದಲ್ಲಿನ ಚಂಡಾಲರು ಪ್ರತಿಭಟನೆ ಹೂಡುವಂತೆ ಮಾಡಿತು. ಫರೀದಪುರ ಎಂಬ ಜಿಲ್ಲೆಯು ಪ್ರತಿಭಟನೆಯ ಕೇಂದ್ರವಾಗಿತ್ತು. ನಮಶೂದ್ರ ಸಮುದಾಯಕ್ಕೆ ಸೇರಿದ್ದ ಶ್ರೀಮಂತನೊಬ್ಬ ಏರ್ಪಡಿಸಿದ್ದ ಭೋಜನಕೂಟಕ್ಕೆ ಮೇಲುವರ್ಗದವರು  ಬರಲು ನಿರಾಕರಿಸಿದ ಕಾರಣ ಆ ಸಮುದಾಯದ ಜನರು ಸಭೆ ಸೇರಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡರು. ಅದರಂತೆ ತಮ್ಮ ಮಹಿಳೆಯರನ್ನು ಮಾರುಕಟ್ಟೆಗೆ ಕಳುಹಿಸುವುದಿಲ್ಲ, ಮೇಲ್ವರ್ಗದವರ ಕೆಲಸಗಳನ್ನು ಮಾಡುವುದಿಲ್ಲ ಮತ್ತು ಬ್ರಾಹ್ಮಣರಲ್ಲದೇ ಇತರ ಜಾತಿಯವರು ತಯಾರಿಸಿದ ಆಹಾರವನ್ನು ಸ್ವೀಕರಿಸುವುದಿಲ್ಲ ಎಂದು ನಿರ್ಧರಿಸಿದರು. ಹರಿಚಂದ ಠಾಕೂರ್‌ (೧೮೧೧-೭೭) ಮತ್ತು ಅವರ ಮಗ ಗುರುಚಂದ ಠಾಕೂರ್‌ (೧೮೪೭-೧೯೩೭) ಎಂಬುವರು ಈ ಪ್ರತಿಭಟನೆಗಳ ನೇತೃತ್ವ ವಹಿಸಿಕೊಂಡರು. ಬಾರಿಸಾಲ್, ಢಾಕಾ, ಜೆಸ್ಸೂರ್, ಮೈಮನ್‌ಸಿಂಗ್ಮತ್ತು ಸಿಲ್ಹೆಟ್‌ ಜಿಲ್ಲೆಗಳ ಚಂಡಾಲರೂ ಸಹ ಫರೀದಪುರದ ಪ್ರತಿಭಟನೆಗೆ ಬೆಂಬಲವಾಗಿ ನಿಂತರು. ೧೮೭೧ರ ಜನಗಣತಿಯ ಪ್ರಕಾರ ಬಂಗಾಳ ಪ್ರಾಂತ್ಯದಲ್ಲಿ ೧೬,೨೦,೫೪೫ ಚಂಡಾಲರು ಗುರುತಿಸಲ್ಪಟ್ಟಿದ್ದರು. ಅವರಲ್ಲಿ ಒಟ್ಟು ೧೧,೯೧,೨೦೪ ರಷ್ಟು ಚಂಡಾಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂದರೆ ಮೇಲಿನ ಐದು ಜಿಲ್ಲೆಗಳ ಒಟ್ಟು ಚಂಡಾಲರಲ್ಲಿ ಶೇ. ೭೪ ರಷ್ಟು ಜನತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು. ಪ್ರಮುಖವಾಗಿ ಅಂದಿಗೆ ಬಂಗಾಳದಲ್ಲಿದ್ದ ಭದ್ರಲೋಕ ಎಂಬ ಮೇಲ್ವರ್ಗದವರ ಅನಧಿಕೃತ ಸಂಘಟನೆಯ ವಿರುದ್ಧವಾಗಿ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಚಂಡಾಲರ ಸಂಖ್ಯೆ ಗಮನಿಸಿದರೆ ಅವರ ಸಂಪರ್ಕ ವ್ಯವಸ್ಥೆಯ ಸಾಮರ್ಥ್ಯ ಆಶ್ಚರ್ಯವನ್ನುಂಟು ಮಾಡುತ್ತದೆ.

   ಪ್ರತಿಭಟನಾಕಾರರು ಶಿಕ್ಷಣದ ಮೂಲಕ ಚಂಡಾಲರ ಸಾಮಾಜಿಕ ಸುಧಾರಣೆಗೆ ಪಣತೊಟ್ಟಿದ್ದರು. ಏಕೆಂದರೆ, ಶಿಕ್ಷಣವೆನ್ನುವುದು ಕೇವಲ ಮೇಲ್ವರ್ಗದವರ ಸ್ವತ್ತು ಮತ್ತು ಅದು ಕೆಳವರ್ಗದವರಿಗೆ ನಿಷಿದ್ಧ ಎಂಬ ಪರಿಸ್ಥಿತಿ ಇದ್ದ ಆ ಕಾಲದಲ್ಲಿ  ಪ್ರತಿಭಟನೆಯ ಕೇಂದ್ರವಾಗಿದ್ದ ಫರೀದಪುರದ ಒಟ್ಟು 1,೫೬,೦೦೦ ಚಂಡಾಲರಲ್ಲಿ ಕೇವಲ ೨೦೦ ಮಕ್ಕಳಿಗೆ ಮಾತ್ರವೇ ಶಿಕ್ಷಣದ ಅವಕಾಶ ದೊರೆತಿತ್ತು. ಅಲ್ಲದೇ ಶಿಕ್ಷಿತ ಮೇಲ್ವರ್ಗದ ಜಮೀನುದಾರರು ಮತ್ತು ಲೇವಾ-ದೇವಿಗಾರರು ಕೂಲಿ, ಸಾಲ, ಬಡ್ಡಿ ಇನ್ನಿತರ ವ್ಯವಹಾರಗಳ ಮೂಲಕ ಅನಕ್ಷರಸ್ಥ ಚಂಡಾಲರನ್ನು ಶೋಷಿಸುತ್ತಿದ್ದರು. ಪರಿಣಾಮವಾಗಿ ಹರಿಚಂದ ಠಾಕೂರರು ತಮ್ಮ ಸ್ವಗ್ರಾಮವಾಗಿದ್ದ ಫರೀದಪುರದ ಒರಕಂಡಿಯಲ್ಲಿ ಚಂಡಾಲರಿಗಾಗಿಯೇ ಒಂದು ಆಂಗ್ಲ ಮಾಧ್ಯಮದ ಪ್ರೌಢಶಾಲೆಯನ್ನು ಆರಂಭಿಸಲು ಯೋಜಿಸಿದರು. ಇದಕ್ಕೆ ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿ ಡಾ. ಸಿ.ಎಸ್.‌ ಮೀಡ್‌ ರವರು ಆರ್ಥಿಕವಾಗಿ ಸಹಕರಿಸಿದರು. ಆದರೆ ಚಂಡಾಲರು ಶಿಕ್ಷಿತರಾದರೆ ಅವರು ತಮ್ಮ ಹೊಲ-ಮನೆಗಳಲ್ಲಿ ದುಡಿಯುವುದಿಲ್ಲವೆಂಬ ಕಾರಣಕ್ಕಾಗಿ ಶಾಲೆಯ ಆರಂಭಕ್ಕೆ ಮೇಲ್ವರ್ಗದವರ ವಿರೋಧವಿತ್ತು. ಆದರೆ ಠಾಕೂರರು ಶಿಕ್ಷಣವನ್ನು ಶೋಷಿತರ ಉದ್ಧಾರಕ್ಕಾಗಿ ಅಸ್ತ್ರವಾಗಿ ಬಳಸಿದರು.

II. ಮೈಲಿಗಲ್ಲಾದ ಸಮಾವೇಶ: ೧೮೮೧ರಲ್ಲಿ ಖುಲ್ನಾ ಜಿಲ್ಲೆಯ ದತ್ತದಂಗಾ ಎಂಬಲ್ಲಿ ಗುರುಚಂದ ಠಾಕೂರರ ಅಧ್ಯಕ್ಷತೆಯಲ್ಲಿ ಅಖಿಲ ಬಂಗಾಳ ನಮಶೂದ್ರರ ಸಮಾವೇಶ ನಡೆಯಿತು. ಬಂಗಾಳದ ಸಾವಿರಾರು ನಮಶೂದ್ರರು ಈ ಸಮಾವೇಶದಲ್ಲಿ ಭಾಗವಹಿಸಿ, ಶಿಕ್ಷಣದ ಕುರಿತಂತೆ ಕೈಗೊಂಡ ನಿರ್ಧಾರಗಳು ನಮಶೂದ್ರ ಚಳವಳಿಯ ಪ್ರಮುಖ ಮೈಲುಗಲ್ಲಾಗಿದೆ. ಅಲ್ಲದೇ ಪ್ರತಿವರ್ಷವು ಜಿಲ್ಲಾಮಟ್ಟದ ನಮಶೂದ್ರರ ವಾರ್ಷಿಕ ಸಮಾವೇಶ ಆಯೋಜಿಸಿ ಶಿಕ್ಷಣ ಮತ್ತು ಸಾಮಾಜಿಕ ವಿಷಯಗಳ ಚರ್ಚೆ ಮಾಡಲು ತೀರ್ಮಾನಿಸಲಾಯಿತು. ಅಂತೆಯೇ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ, ೧೫ ಗ್ರಾಮಸಮಿತಿಗಳಿಗೆ ಒಂದು ಯೂನಿಯನ್‌ ಮತ್ತು ಜಿಲ್ಲಾ ಮಟ್ಟದ ನಮಶೂದ್ರ ಸಮಿತಿಗಳ ಸ್ಥಾಪನೆಗೂ ಸಹ ನಿರ್ಧಾರ ಕೈಗೊಳ್ಳಲಾಯಿತು. ಈ ಸಮಿತಿಗಳಿಗೆ ಗ್ರಾಮದ ಪ್ರತಿ ಮನೆಯಿಂದ ಒಂದು ಹಿಡಿ ಧಾನ್ಯ, ಗ್ರಾಮ ಸದಸ್ಯರಿಂದ 1 ಆಣೆ, ಯೂನಿಯನ್‌ ಸದಸ್ಯರಿಂದ 2 ಆಣೆ ಮತ್ತು ಜಿಲ್ಲಾ ಸದಸ್ಯರಿಂದ ೪ ಆಣೆ ಮಾಸಿಕ ಸದಸ್ಯತ್ವ ಶುಲ್ಕ ಸಂಗ್ರಹಿಸಲು ತೀರ್ಮಾನಿಸಲಾಯಿತು. ಅಲ್ಲದೇ ಶ್ರಾದ್ಧ, ಮದುವೆ ಮತ್ತಿತರ ಸಮಾರಂಭಗಳಲ್ಲಿ ಖರ್ಚು ಮಾಡುವ ಹಣದ ಶೇ. ೩ ರಷ್ಟನ್ನು ಈ ನಿಧಿಗೆ ಸಲ್ಲಿಸಬೇಕಾಗುತ್ತಿತ್ತು. ಜೊತೆಗೆ ಬಾಲ್ಯವಿವಾಹ ತಡೆಗೂ ಸಹ ಕ್ರಮ ವಹಿಸಲಾಯಿತು. ಅಂದರೆ ೨೦ ವರ್ಷ ತುಂಬದ ಗಂಡುಮಕ್ಕಳು ಮತ್ತು ೧೦ ವರ್ಷ ತುಂಬದ ಹೆಣ್ಣುಮಕ್ಕಳನ್ನು ವಿವಾಹ ಮಾಡಿದ ಪೋಷಕರನ್ನು ಸಂಘಟನೆಯಿಂದ ಬಹಿಷ್ಕರಿಸುವ ತೀರ್ಮಾನ ಮಾಡಲಾಯಿತು.

   ಹೀಗೆ ಒರಕಂಡಿಯು ನಮಶೂದ್ರ ಚಳವಳಿಯ ಕೇಂದ್ರವಾಯಿತು. ಗುರುಚಂದ ಠಾಕೂರರು ನೂರಾರು ಪ್ರಾಥಮಿಕ ಶಾಲೆಗಳನ್ನು ತೆರೆದರು. ಅಲ್ಲದೇ ತಮ್ಮ ತಂದೆ ಶೂದ್ರರಿಗಾಗಿಯೇ ಆರಂಬಿಸಿದ ಮತುವಾ ಪಂಥಕ್ಕೆ ಸೇರಬಯಸುವ ಪ್ರತಿ ನಮಶೂದ್ರನಿಗೂ ತನ್ನ ಊರಿನಲ್ಲಿ ಒಂದು ಶಾಲೆಯನ್ನು ಆರಂಬಿಸುವಂತೆ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮತ್ತು ಶೌಚಾಲಯಗಳನ್ನು ಕಟ್ಟಿಕೊಳ್ಳುವಂತೆ ಉಪದೇಶಿಸುತ್ತಿದ್ದರು.

   ೧೮೮೫ರಲ್ಲಿ ಪಂಚಾನನ ಬಿಸ್ವಾಸ್ ಎಂಬ ನಮಶೂದ್ರನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿ, ಅಲ್ಲಿನ ಬ್ಯಾಪ್ಟಿಸ್ಟ್ ಕ್ರೈಸ್ತ ಮಿಷನರಿಯವರಿಗೆ ಪೂರ್ವ ಬಂಗಾಳಕ್ಕೆ ಐದು ಮಹಿಳಾ ಮಿಷನರಿಗಳನ್ನು ಕಳುಹಿಸಿ ಗ್ರಾಮೀಣ ನಮಶೂದ್ರ ಮಹಿಳೆಯರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಲು ಮನವಿ ಸಲ್ಲಿಸಲಾಯಿತು. ಅದರಂತೆ ಅದಾಗಲೇ ಡಾ. ಮೀಡ್‌ ಅವರ ಪತ್ನಿ ಮತ್ತು ಮಗಳ ಜೊತೆಯಲ್ಲಿ ಐವರು ಮಹಿಳಾ ಮಿಷನರಿಗಳು ನಮಶೂದ್ರರ ಸೇವೆಗೆ ಬಂದರು.

III. ಚಂಡಾಲರು ನಮಶೂದ್ರರಾದುದು ಹೇಗೆ?

ನಮಶೂದ್ರ ಹೆಸರಿನ ಉಗಮದ ಕುರಿತಂತೆ ನಿಖರವಾದ ಆಧಾರಗಳು ಲಭ್ಯವಿಲ್ಲ. ಏಕೆಂದರೆ ೧೯ನೆಯ ಶತಮಾನದ ಹಿಂದಿನ ಯಾವ ಕೃತಿ ಮತ್ತು ಸಾಹಿತ್ಯದಲ್ಲೂ ಅದರ ಉಲ್ಲೇಖವಿಲ್ಲ. ಬ್ರಿಟಿಷ್‌ ಮಾನವಶಾಸ್ತ್ರಜ್ಞರಾಗಿದ್ದ ಹೆಚ್.‌ ಹೆಚ್‌ ರೀಸ್ಲೆ ಅವರು ಹೇಳುವಂತೆ “ನಮಸ್‌” ಎಂಬ ಪದದಿಂದ ನಮಶೂದ್ರ ಪದ ಬಂದಿರಬಹುದು ಅಥವಾ ಬಂಗಾಳಿ ಪದ “ನಮತೆ” ಎಂಬ ಪದದಿಂದ ಬಂದಿರಬಹುದು. ನಮಸ್‌ ಎಂದರೆ ಶೂದ್ರರಿಗೆ ನಮಿಸುವವರು ಎಂದಾದರೆ ನಮತೆ ಎಂದರೆ ಕೆಳ ಹಂತದ ಎಂಬ ಅರ್ಥವಿದೆ ಅಂದರೆ ಎರಡೂ ಸಂದರ್ಭಗಳಲ್ಲಿ ಶೂದ್ರರಿಗಿಂತ ಕೆಳವರ್ಗದವರು ನಮಶೂದ್ರರು ಎಂಬುದು ತಿಳಿದು ಬರುತ್ತದೆ. ಅಲ್ಲದೇ ಚಂಡಾಲ, ಚರಾಲ, ನಮಶುದ್‌ ಮತ್ತು ನಮಃ ಎಂಬ ಪರ್ಯಾಯ ಪದಗಳ ಬಳಕೆಯು ಇದ್ದಿತು. ಶ್ಯಾಮಚರಣ ಸರ್ಕಾರ್‌ರವರು ತಮ್ಮ ವ್ಯಾಸನಸ್ತ ದರ್ಪಣ ಎಂಬ ಕೃತಿಯಲ್ಲಿ ಶೂದ್ರರಲ್ಲಿಯೇ ಗೌರವಕ್ಕೆ ಪಾತ್ರರಾದ ಒಂದು ಗುಂಪು ಎಂದು ಹೇಳಿದ್ದಾರೆ. ಆದರೆ ನಮಶೂದ್ರ ಎಂಬ ಹೆಸರಿನ ಬದಲಾವಣೆಯ ಇತಿಹಾಸವು ೧೮೮೧ರಷ್ಟು ಹಿಂದಕ್ಕೆ ಹೋಗುತ್ತದೆ. ಏಕೆಂದರೆ ೧೮೮೧, ಜುಲೈ ೧೮ರ ತಮ್ಮ ಒಂದು ಅಧಿಕೃತ ಪತ್ರದಲ್ಲಿ ಬಂಗಾಳ ಪ್ರಾಂತ್ಯದ ಕಮಿಷನರ್‌ ಆಗಿದ್ದ ಎಫ್.‌ ಬಿ. ಪಿಕಾಕ್‌ ಅವರು ಜೆಸ್ಸೂರ್‌ ಜಿಲ್ಲೆಯ ಚಂಡಾಲರು ಸಾಕಷ್ಟು ಸುಧಾರಣೆಗೊಂಡಿದ್ದು, ಅವರು ತಮ್ಮನ್ನು ತಾವು ನಮಶೂದ್ರರೆಂದು ಕರೆದುಕೊಳ್ಳುತ್ತಾರೆ ಮತ್ತು ವೈಷ್ಣವ ಆರಾಧಕರಾಗಿದ್ದಾರೆ ಎಂದು ದಾಖಲಿಸಿದ್ದಾನೆ.  ಅಲ್ಲದೇ ೧೯೦೧ರಲ್ಲಿ ಬಂಗಾಳದ ವಿವಿಧ ಜಾತಿಗಳವರು ತಮ್ಮ ಜಾತಿಯ ಹೆಸರನ್ನು ಬದಲಾಯಿಸಲು ಬಂಗಾಳ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು. ೧೯೧೧ರ ವೇಳೆಗೆ ಹಾಗೆ ಸ್ವೀಕರಿಸಿದ ಮನವಿಗಳ ಒಟ್ಟು ತೂಕವೇ ಸು. ೫೭ ಕೆ.ಜಿ.ಗಳಷ್ಟಿತ್ತು. ಆದರೆ ಸ್ವೀಕರಿಸಿದ ಮನವಿಗಳಲ್ಲಿ ಕೇವಲ ಚಂಡಾಲರು ಮತ್ತು ಕೈಬರ್ತರ ಮನವಿಗಳನ್ನು ಮಾತ್ರವೇ ಪುರಸ್ಕರಿಸಿ ಅನುಕ್ರಮವಾಗಿ ನಮಶೂದ್ರರು ಮತ್ತು ಮಹಿಷ್ಯರು ಎಂಬ ನೂತನ ಹೆಸರುಗಳನ್ನು ಆ ವರ್ಗದವರಿಗೆ ನೀಡಲಾಯಿತು.

IV. ಸಾಮಾಜಿಕ ಸ್ಥಾನ-ಮಾನಗಳಲ್ಲಿ ಪ್ರಗತಿ:    ೧೯೦೮ ರಲ್ಲಿ ಒರಕಂಡಿಯಲ್ಲಿ ನಮಶೂದ್ರರಿಗಾಗಿ  ಮೊದಲ ಆಂಗ್ಲಭಾಷಾ ಪ್ರೌಢಶಾಲೆ ಆರಂಬವಾಯಿತು. ಅದೇ ವರ್ಷ ಜಾರಿಗೆ ಬಂದ ಉದ್ಯೋಗ ಮೀಸಲಾತಿ ನಿಯಮದಡಿ ಪೂರ್ವ ಬಂಗಾಳ ಮತ್ತು ಅಸ್ಸಾಂಗಳ ಗವರ್ನರ್‌ ಮುಸ್ಲಿಮರು ಮತ್ತು ಹಿಂದುಳಿದ ವರ್ಗದವರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲಾಯಿತು. ಪರಿಣಾಮವಾಗಿ ಕುಮುದ್‌ ಬಿಹಾರಿ ಮಲಿಕ್‌ ಎಂಬುವರು ಮೊಟ್ಟಮೊದಲ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ ನೇಮಕಗೊಂಡರು. ೧೯೧೭ ರಲ್ಲಿ ಕಲ್ಕತ್ತಾ ವಿ.ವಿ.ಯ ವಸತಿನಿಲಯದಲ್ಲಿ ನಮಶೂದ್ರರು ಅವಕಾಶ ಕೋರಿದಾಗ ಅವರ ಅಸ್ಪೃಶ್ಯತೆಯ ಪ್ರಶ್ನೆ ಎದುರಾಯಿತು. ಆದರೆ ವಿ.ವಿ.ಯ ಕುಲಪತಿಗಳು ಅವರಿಗಾಗಿಯೇ ಪ್ರತ್ಯೇಕ ವಸತಿನಿಲಯದ ವ್ಯವಸ್ಥೆ ಮಾಡಿಸಿದರು. ಅಲ್ಲದೇ ಶಿಕ್ಷಣದ ಆಂದೋಲನದ ಪರಿಣಾಮವಾಗಿ ೧೯೨೭ರ ವೇಳೆಗೆ ಸು. ೪೯೦೦ ನಮಶೂದ್ರ ಮಕ್ಕಳು ಮೆಟ್ರಿಕುಲೇಶನ್‌ ಶಿಕ್ಷಣ ಪಡೆಯುತ್ತಿದ್ದರೆ, ಸು. ೨೦೦ ರಷ್ಟು ಪದವಿಧರರಿದ್ದರು.

V. ಸೈಮನ್‌ ಕಮಿಷನ್‌ಗೆ ಸಲ್ಲಿಸಿದ ಮನವಿಗಳು: ಸಂವಿಧಾನ ಸುಧಾರಣೆಗೆಂದು ಭಾರತಕ್ಕೆ ಬಂದ ಸೈಮನ್‌ ಕಮಿಷನ್‌ಗೆ ನಮಶೂದ್ರ ಸಮುದಾಯದವರು 2 ಮನವಿಗಳನ್ನು ಸಲ್ಲಿಸಿದರು. ಫೆಬ್ರವರಿ ೧೯೨೮ರಲ್ಲಿ ಇದಕ್ಕೆ ಬೆಂಬಲವಾಗಿ ಬಂಗಾಳದ ಅಖಿಲ ಬಂಗಾಳ ಶೋಷಿತರ ಒಕ್ಕೂಟವು ತನ್ನ ಮನವಿಯನ್ನು ಸಲ್ಲಿಸಿತು. ಅಲ್ಲದೇ ಎರಡೂ ಸಂಘಗಳ ಜಂಟಿ ಸಮಿತಿಯು ಜನವರಿ ೧೯೨೯ ರಲ್ಲಿ ಕಮಿಷನ್‌ನ್ನು ಕಲ್ಕತ್ತಾದಲ್ಲಿ ಭೇಟಿ ಮಾಡಿತು. ಪ್ರತಿನಿಧಿಗಳು ಅಂದಿಗೆ ಬಂಗಾಳದಲ್ಲಿದ್ದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮಂಡಿಸಿತು. ಅವರ ಪ್ರಮುಖ ಬೇಡಿಕೆಗಳಲ್ಲಿ ವಿವಿಧ ಸಮುದಾಯಗಳ ಸಂಖ್ಯೆಗೆ ಅನುಗುಣವಾಗಿ ಮತ್ತು ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬುದಾಗಿತ್ತು. ಅದಕ್ಕಾಗಿ ಇದುವರೆಗೆ ಸೇವೆಯಲ್ಲಿರುವ ವರ್ಗಗಳ ಸಮಾನತೆಯನ್ನು ತಲುಪುವವರೆಗೆ ಹಿಂದುಳಿದವರ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಆಂಗ್ಲ ಅದಿಕಾರಿಗಳ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳನ್ನು ರಚಿಸಲು ಮನವಿ ಮಾಡಿದರು. ಜೊತೆಗೆ ದೇಶದಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವಂತೆ ಕೋರಿದರು.

VI. ಜಮೀನುದಾರರ ವಿರುದ್ಧದ ಹೋರಾಟ: ಗುರುಚಂದ ಠಾಕೂರ್‌ರವರು ಜಮೀನುದಾರರ ಶೋಷಣೆಯ ವಿರುದ್ಧವೂ ಹೋರಾಟ ಆರಂಭಿಸಿದರು. ೧೯೨೧ ರಲ್ಲಿ ಬಂಗಾಳ ಶಾಸನ ಸಭೆಯ ಸದಸ್ಯರಾಗಿದ್ದ ಮುಕುಂದ ಬಿಹಾರಿ ಮಲಿಕ್‌ ಮತ್ತು ಭೀಷ್ಮದೇವ ದಾಸ್‌ ಅವರು ಜಮೀನುದಾರರ ಭೂಮಿಯಲ್ಲಿ ಕೃಷಿ ಮಾಡುವ ಕೆಳವರ್ಗದವರಿಗೆ ಉತ್ಪನ್ನದ 2/೩ ರಷ್ಟು ಪಾಲನ್ನು ನೀಡಬೇಕೆಂಬ ಕಾನೂನಿನ ಜಾರಿಗೆ ಒತ್ತಾಯಿಸಿದರು. ಅದು ಮುಂದೆ ತೇಭಾಗ ಚಳವಳಿಗೆ ಕಾರಣವಾಯಿತು.

VII. ರಾಜಕೀಯ ಪ್ರಾತಿನಿಧ್ಯ: ೧೯೩೫ರ ಭಾರತ ಸರ್ಕಾರದ ಕಾಯ್ದೆ ಜಾರಿಯಾದ ನಂತರ ನಡೆದ ರಾಜ್ಯ ಶಾಸನಸಭೆಯ ಚುನಾವಣೆಯಲ್ಲಿ ಬಂಗಾಳದಲ್ಲಿ ೩೦ ಸ್ಥಾನಗಳನ್ನು ಶೋಷಿತರಿಗೆ ಮೀಸಲಿಡಲಾಗಿತ್ತು. ಅವುಗಳಲ್ಲಿ ೧೨ ಸ್ಥಾನಗಳನ್ನು ನಮಶೂದ್ರರು ಜಯಿಸಿದರು. ಅವರಲ್ಲಿ ೧೦ ಸದಸ್ಯರು ಗುರುಚಂದ ಅವರ ಬೆಂಬಲಿಗರಾಗಿದ್ದರು. ಗುರುಚಂದ ಅವರ ಹೋರಾಟದ ಕುರಿತು ಡಾ. ಮೀಡ್‌ರವರು “ಉದಾರ ಚಿಂತನೆ ಮತ್ತು ದೂರದೃಷ್ಟಿಯಿಂದ ಸಂಪ್ರದಾಯವಾದಿ ಸಮಾಜದ ಶೋಷಿತ ನಮಶೂದ್ರರನ್ನು  ಗುರುಚಂದ್‌ರವರು ಉದ್ಧರಿಸಿದರು. ಅವರು ಠಾಕೂರರಿಗೆ ಋಣಿಗಳಾಗಿದ್ದಾರೆ; ನಾನೂ ಸಹ” ಎಂದಿದ್ದಾರೆ. ಅಲ್ಲದೇ ಡಾ. ಬಿ. ಆರ್.‌ ಅಂಬೇಡ್ಕರರು ೧೯೪೬ರಲ್ಲಿ ಸಂವಿಧಾನ ರಚನಾ ಸಮಿತಿಗೆ ಸದಸ್ಯರಾಗಿ ಬಂಗಾಳದಿಂದ ಆಯ್ಕೆಯಾದಾಗ ಅವರ ಗೆಲುವಿನಲ್ಲಿ ಜೋಗೆಂದ್ರನಾಥ ಮಂಡಲ್, ಮುಕುಂದ ಬಿಹಾರಿ ಮಲಿಕ್, ದ್ವಾರಕನಾಥ ಬರುಯಿ, ನಾಗೇಂದ್ರನಾಥ ರಾಯ್ಮತ್ತು ಕ್ಷೇತ್ರನಾಥ ಸಿಂಗ್‌ ಅವರುಗಳು ಫರೀದಪುರ, ಜೆಸ್ಸೂರ್, ಖುಲ್ನಾ ಮತ್ತು ಬಾರಿಸಾಲ್‌ ಜಿಲ್ಲೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources