ಮೌರ್ಯರ ಪತನದ ಕಾರಣಗಳು
ಸೂಚನೆ:- ಇಲ್ಲಿನ ಮಾಹಿತಿಗಳನ್ನು
ಕಣಜ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
ಮೌರ್ಯರ ಶೀಘ್ರ
ಅವನತಿಗೆ ವಿವಿಧ ಕಾರಣಗಳನ್ನು ನೀಡಲಾಗಿದೆ. ಅಶೋಕನ ಕಾಲದಿಂದಲೇ ಮೌರ್ಯರ ಅವನತಿಯ ಪ್ರಕ್ರಿಯೆ ಆರಂಭವಾಹಿತೆಂದು ಕೆಲವರು ಅಭಿಪ್ರಾಯಿಸಿದ್ದಾರೆ. ಮೌರ್ಯರ ಅವನತಿ ಕುರಿತ ವಿವಿಧ ಕಾರಣಗಳನ್ನು ಅಥವಾ ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಲಾಗಿದೆ:-
1. ಬೌದ್ಧ ಧರ್ಮದ ಅನುಸರಣೆ:- ಒಂದು ಪಂಥದ ಇತಿಹಾಸಕಾರರ ಪ್ರಕಾರ ಅಶೋಕನ ಧಾರ್ಮಿಕ ನೀತಿಯು ಮೌರ್ಯರ ಅವನತಿಗೆ ಮೂಲ ಕಾರಣವಾಗಿದೆ. ಈ ಪಂಥಕ್ಕೆ ಸೇರಿದ ಡಾ. ಹರಪ್ರಸಾದ ಶಾಸ್ತ್ರೀಯವರು ಹೇಳುವಂತೆ, ಅಶೋಕನು ಬೌದ್ಧ ಮತಕ್ಕೆ ರಾಜಾಶ್ರಯ ನೀಡಿದ್ದು, ಹಿಂದೂ ಧರ್ಮದ ಆಚರಣೆಗಳು ಮತ್ತು ಯಜ್ಞ ಯಾಗಗಳನ್ನು ಕೈಬಿಟ್ಟಿದ್ದು, ಧರ್ಮ ಮಹಾಮಾತ್ರರ ನೇಮಕಾತಿ ಹಾಗೂ ಬ್ರಾಹ್ಮಣರ ನಿರ್ಲಕ್ಷ್ಯ, ಶೂದ್ರ ವರ್ಗಕ್ಕೆ ಸೇರಿದ ಮೌರ್ಯ ಅರಸರು ಹಲವು ಕಾಯ್ದೆಗಳನ್ನು ರೂಪಿಸಿದುದು ಮೊದಲಾದವುಗಳು ಬ್ರಾಹ್ಮಣ ವರ್ಗದ ಪ್ರತಿಭಟನೆಗೆ ಕಾರಣವಾದವು. ಬ್ರಾಹ್ಮಣ
ವರ್ಗಕ್ಕೆ ಸೇರಿದ ಪುಷ್ಯಮಿತ್ರ ಶೃಂಗನು ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದನು.” ಈ ದೃಷ್ಟಿಕೋನವನ್ನು ಸಮರ್ಥಿಸುವ ಅಂಶಗಳೆಂದರೆ, ಮೌರ್ಯರ ಅವನತಿಯ ನಂತರ ಅಸ್ತಿತ್ವಕ್ಕೆ ಬಂದ ರಾಜವಂಶಗಳು ಬ್ರಾಹ್ಮಣ ವರ್ಗಕ್ಕೆ ಸೇರಿದವುಗಳಾಗಿದ್ದುದು. ಉದಾಹರಣೆಗೆ ಶುಂಗರು, ಕಣ್ವರು ಮತ್ತು ಶಾತವಾಹನರು ಹಾಗೂ ಈ ರಾಜವಂಶಗಳು ಅಶೊಕನು ತ್ಯಜಿಸದ್ದ ವೈದಿಕ ಆಚರಣೆಗಳು ಮತ್ತು ಯಾಗ-ಯಜ್ಞಗಳನ್ನು ಆಚರಿಸತೊಡಗಿದ್ದು. ಆದರೆ ಈ ವಾದಕ್ಕೆ ಬಹುತೇಕ ಇತಿಹಾಸಕಾರರ ವಿರೋಧವಿದೆ. ಅಶೋಕನು ಬ್ರಾಹ್ಮಣ ವಿರೋಧಿಯಾಗಿದ್ದ ಎನ್ನಲು ಆಧಾರಗಳಿಲ್ಲ ಮತ್ತು ಮೌರ್ಯರ ವಿರುದ್ಧದ ದಂಗೆಯಲ್ಲಿ ಬ್ರಾಹ್ಮಣ ವರ್ಗವೆಲ್ಲ ಸೇರಿಕೊಂಡಿತ್ತು ಎನ್ನುವುದಕ್ಕೂ ಆಧಾರಗಳಿಲ್ಲ. ಅಶೋಕನು ತನ್ನ ಆಳ್ವಿಕೆಯಲ್ಲಿ ಬ್ರಾಹ್ಮಣರನ್ನು ನಿರ್ಲಕ್ಷಿಸಿರಲಿಲ್ಲ. ಬ್ರಾಹ್ಮಣರಿಗೆ ಗೌರವ ನೀಡಬೇಕೆಂದು ತನ್ನ ಶಾಸನದಲ್ಲಿ ಹೇಳಿದ್ದಾನೆ. ಆತನ ಆಡಳಿತದಲ್ಲಿ ಬ್ರಾಹ್ಮಣ ಅಧಿಕಾರಿಗಳಿದ್ದರು. ಆತನ ಉತ್ತರಾಧಿಕಾರಿಗಳು ಕೂಡ ಬ್ರಾಹ್ಮಣ ವಿರೋಧಿಗಳಾಗಿರಲಿಲ್ಲ. ಇದಕ್ಕೆ ಪುಷ್ಯಮಿತ್ರ ಶುಂಗನು ಮೌರ್ಯರ ಸೇನಾನಿಯಾಗಿದ್ದುದೇ ಸಾಕ್ಷಿಯಾಗಿದೆ. ಪುಷ್ಯಮಿತ್ರ ಬ್ರಾಹ್ಮಣರ ನಾಯಕನಾಗಿ ದಂಗೆಯ ನೇತೃತ್ವವಹಿಸಲಿಲ್ಲ. ಕೇವಲ
ಓರ್ವ ಅವಕಾಶವಾದಿಯಾಗಿ, ಅಸಮರ್ಥ ದೊರೆಯನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿದ್ದಾನೆ ಎಂದು ಈ ಇತಿಹಾಸಕಾರರು ಬ್ರಾಹ್ಮಣೀಯ ಪ್ರತಿಕ್ರಿಯೆ” ಎಂಬ ವಾದವನ್ನು ತಳ್ಳಿಹಾಕಿದ್ದಾರೆ.
2. ಅಶೋಕನ ಅಹಿಂಸಾ ನೀತಿ:- ಇನ್ನೊಂದು ಪಂಥದ ಇತಿಹಾಸಕಾರರ ಅಭಿಪ್ರಾಯದಂತೆ, ಅಶೋಕನು ಅನುಸರಿಸಿದ ಅಹಿಂಸಾ ನೀತಿಯೇ ಸಾಮ್ರಾಜ್ಯದ ಅವನತಿಗೆ ಮೂಲ ಕಾರಣವಾಗಿದೆ. ಅಶೋಕನು ಅನುಸರಿಸಿದ ಅಹಿಂಸಾ ನೀತಿಯಿಂದ ಸೈನಿಕರು ಕ್ಷಾತ್ರ ತೇಜಸ್ಸು ಮತ್ತು ಉತ್ಸಾಹವನ್ನು ಕಳೆದುಕೊಂಡರು. ಸೈನ್ಯವು ವಿದೇಶಿ ದಾಳಿಗಳನ್ನು ಮತ್ತು ಪ್ರಾಂತೀಯ ದಂಗೆಗಳನ್ನು ಅಡಗಿಸಲು ವಿಫಲವಾಯಿತು. ಡಾ. ಹೆಚ್.ಸಿ. ರಾಯ ಚೌಧರಿಯವರು ಈ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಅವರ ಪ್ರಕಾರ ಮಿಲಿಟರಿ ಅಸಮರ್ಥತೆಯೇ ಮೌರ್ಯರ ಅವನತಿಗೆ ಕಾರಣವಾಗಿದೆ. ಈ ಅಭಿಪ್ರಾಯವು ಕೂಡ ಬಹುತೇಕ ವಿದ್ವಾಂಸರಿಂದ ತಿರಸ್ಕರಿಸಲ್ಪಟ್ಟಿದೆ. ಅಶೋಕನ ‘ಅಹಿಂಸಾ’ ನೀತಿ ಕೆಲಮಟ್ಟಿಗೆ ಸೈನ್ಯದ ಸ್ಥೈರ್ಯವನ್ನು ಕುಗ್ಗಿಸಿರಬಹುದು. ಆದರೆ ಅದರಿಂದಲೇ ಮೌರ್ಯರ ಅವನತಿಯಾಯಿತೆನ್ನಲಾಗದು. ಅಶೋಕನು ಯುದ್ಧ ನೀತಿ ತ್ಯಜಿಸಿದ ನಂತರ ಸೈನ್ಯವನ್ನು ವಿಸರ್ಜಿಸಿದನೆನ್ನಲು ಅಥವಾ ಅದರ ಗಾತ್ರವನ್ನು ಕಡಿಮೆಮಾಡಿದನೆನ್ನಲು ಆಧಾರಗಳಿಲ್ಲ. ಅಶೋಕನ ‘ಅಹಿಂಸಾ’ ನೀತಿಯನ್ನು ವೈಭವೀಕರಿಸಿ ಅದನ್ನು ‘ಶಾಂತಿ ಸಂದೇಶ’ದಂತೆ ವರ್ಣಿಸಿದ ಹಿನ್ನೆಲೆಯಲ್ಲಿ ಶಾಂತಿ ನೀತಿಯೇ ಮೌರ್ಯರ ಅವನತಿಗೆ ಕಾರಣವೆಂಬ ವಾದವು ಹುಟ್ಟಿಕೊಂಡಿತು.
3. ಕೇಂದ್ರೀಕೃತ ಆಡಳಿತದ ಕುಸಿತ. ರೋಮಿಲ್ಲಾ
ಥಾಪರ್:- ರೊಮಿಲಾ ಥಾಪರ್ರವರು ಮೌರ್ಯರ ಅವನತಿಗೆ ಒಂದು ತಾರ್ಕಿಕ ಅಭಿಪ್ರಯವನ್ನು ಮುಂದಿಡುತ್ತಾರೆ. ಅವರ ಪ್ರಕಾರ “ಕೆಂದ್ರೀಕೃತ ಆಡಳಿತ ವ್ಯವಸ್ಥೆ ಹಾಗೂ ಒಂದು ಐಕ್ಯ ರಾಜ್ಯ ಅಥವಾ ರಾಷ್ಟ್ರದ ಕಲ್ಪನೆ ಅಂದು ಇರದೆಯಿದ್ದುದೇ ಮೌರ್ಯರ ಪತನಕ್ಕೆ ಮುಖ್ಯ ಕಾರಣವಾಗಿದೆ.” ಮಿಲಿಟರಿ ಅಸಮರ್ಥತೆ, ಬ್ರಾಹ್ಮಣೀಯ ಪ್ರತಿಭಟನೆ, ದಂಗೆಗಳು ಮತ್ತು ಆರ್ಥಿಕ ಕಾರಣಗಳನ್ನು ಮಾತ್ರ ಉಲ್ಲೆಖಿಸುವುದರಿಂದ ಮೌರ್ಯರ ಅವನತಿಯನ್ನು ಸೂಕ್ತವಾಗಿ ವಿವರಿಸಲಾಗದು. ಅವುಗಳಿಗಿಂತ ಭಿನ್ನವಾದ
ಮೂಲಭೂತ ಕಾರಣಗಳಿವೆ ಎಂದು ಥಾಪರ್ ಅಭಿಪ್ರಾಯ
ವ್ಯಕ್ತಪಡಿಸುತ್ತಾರೆ. ಮೌರ್ಯರ ಆಡಳಿತ
ವ್ಯವಸ್ಥೆಯು ನಿರಂಕುಶವಾದುದು. ಅದರ ಯಶಸ್ವಿಗೆ ಸಮರ್ಥ ಅರಸರು ಮತ್ತು ನಿಷ್ಠಾವಂತ ಹಾಗೂ ಸಮರ್ಥ ಅಧಿಕಾರಿವರ್ಗ ಅವಶ್ಯವಾಗಿತ್ತು. ಮೌರ್ಯರ ಕಾಲದಲ್ಲಿ ಸಮರ್ಥ ಅಧಿಕಾರಿವರ್ಗದ ನೇಮಕಾತಿಗೆ ಸೂಕ್ತ ವ್ಯವಸ್ಥೆಯಿರಲಿಲ್ಲ. ಯಾವುದೇ ಜನಪ್ರತಿನಿಧಿ ಸಭೆಗಳಿರಲಿಲ್ಲ. ಅಲ್ಲದೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪ್ರತ್ಯೇಕಿಸಲು ಪ್ರಯತ್ನವು ನಡೆಯಲಿಲ್ಲ. ಅಲ್ಲದೆ ಪ್ರಜೆಗಳ ನಡುವೆ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಿನ್ನತೆಗಳಿದ್ದವು. ಇದರಿಂದ ಪ್ರಜೇಗಳು ಒಂದೇ ಆಡಳಿತಕ್ಕೆ ಒಳಪಟ್ಟರೂ, ಒಂದೇ ರಾಷ್ಟ್ರವೆಂಬ ಕಲ್ಪನೆ ಮೂಡಲಿಲ್ಲ. ಇಂತಹ
ರಾಷ್ಟ್ರೀಯ ಭಾವನೆಯ ಕೊರತೆಯಿಂದ ಮೌರ್ಯರ ಅವನತಿಯಾಯಿತೆಂದು ಥಾಪರ್ರವರ ಅಭಿಪ್ರಾಯವಾಗಿದೆ. ಇದು ತರ್ಕಬದ್ಧವಾದ ಅಭಿಪ್ರಾಯವಾದರೆ ಅಧಿಕಾರ ವಿಭಜನೆಯ ಕಲ್ಪನೆ ಮತ್ತು ರಾಷ್ಟ್ರ ಪ್ರಜ್ಞೆಯ ಕಲ್ಪನೆಗಳು ಆಧುನಿಕವಾದವುಗಳು. ಇವುಗಳನ್ನು ಮೌರ್ಯರ ಯುಗದಲ್ಲಿ ನಿರೀಕ್ಷಿಸುವುದು ಸೂಕ್ತವಲ್ಲ. ಅಲ್ಲದೆ ಆ ಯುಗದಲ್ಲಿ ಜನಪ್ರತಿನಿಧಿ ಸಭೆ ರಚನೆಕೂಡಾ ಅಸಾಧ್ಯವಾಗಿತ್ತು. ಹೀಗಾಗಿ ರಾಜಕೇಂದ್ರಿತ ಮತ್ತು ಕೇಂದ್ರೀಕೃತ ಅಧಿಕಾರಿಶಾಹಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯೊಂದು ರೂಪುಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಥಾಪರ್ರವರು ನೀಡಿರುವ ಕಾರಣಗಳನ್ನೆ ಮೌರ್ಯರ ಅವನತಿಯ ಮೂಲ ಕಾರಣವೆನ್ನಲು ಕೆಲವರು ನಿರಾಕರಿಸಿದ್ದಾರೆ. ಮುಖರ್ಜಿಯವರು ಮೌರ್ಯ ಅವನತಿಯ ಕಾರಣಗಳು ಅವರ ರಾಜಕೀಯ ಸಂಘಟನೆಯಲ್ಲಿಯೇ ಇದೆ. ಅವರು
ನಿರಂಕುಶ ಪ್ರಭುತ್ವ ಮಾದರಿಯ ಸರ್ಕಾರ ಸಾಮ್ರಾಜ್ಯದ ಅವನತಿಗೆ ಕಾರಣವೆಂದಿದ್ದಾರೆ. ಈ ವಾದವು ಥಾಪರ್ರವರ ವಾದಕ್ಕೆ ಹತ್ತಿರವಾಗಿದೆ.
4. ಅಸಮರ್ಥ ಉತ್ತರಾಧಿಕಾರಿಗಳು:- ಅಶೋಕನ ನಂತರದ
ಅಸಮರ್ಥ ಮೌರ್ಯ ಅರಸರೇ ಅವನತಿಗೆ ಹೆಚ್ಚಿನ ಜವಾಬ್ದಾರರೆಂಬ ಅಭಿಪ್ರಾಯವೂ ಇದೆ. ವಿಶಾಲವಾದ ಸಾಮ್ರಾಜ್ಯದ ಭಾರವನ್ನು ಹೊರಲು ಇವರ ಭುಜಗಳು ಸಮರ್ಥವಾಗಿರಲಿಲ್ಲ ಎಂಬ ಮಾತಿದೆ. ಅಶೋಕನ ಉತ್ತರಾಧಿಕಾರಿಗಳು ಸಾಮ್ರಾಜ್ಯವನ್ನು ತಮ್ಮಲ್ಲಿ ಹಂಚಿಕೊಂಡು ಆಳಿದರೆಂದು ಕಲ್ಹಣ ಮತ್ತು ತಾರನಾಥರ ಕೃತಿಗಳು ತಿಳಿಸುತ್ತವೆ. ಜಾದುನಾಥ ಸರ್ಕಾರರು ಅಭಿಪ್ರಾಯಿಸುವಂತೆ ಭಾರತದ ಇತಿಹಾಸದ ಪುಟಗಳನ್ನು ನೋಡಿದರೆ, ಯಾವುದೇ ರಾಜ ವಂಶಗಳಲ್ಲಿ ಐದಕ್ಕಿಂತ ಹೆಚ್ಚು ಸಮರ್ಥ ರಾಜರು ಬಂದಿಲ್ಲ. ಎಲ್ಲ ರಾಜವಂಶಗಳಲ್ಲಿಯೂ ಒಂದಲ್ಲ ಒಂದು ದಿನ ಅಸಮರ್ಥ ಅರಸರು ಅಧಿಕರಕ್ಕೆ ಬರುವುದು ಮತ್ತು ಸಾಮ್ರಾಜ್ಯವು ಪತನಗೊಳ್ಳುವುದು ಖಚಿತವಾಗಿತ್ತು. ಇದೇ ಮೌರ್ಯ ಸಾಮ್ರಾಜ್ಯದ ಪತನದ ಸಂದರ್ಭದಲ್ಲಿ ಆಗಿದೆ.
5. ಸಾಮ್ರಾಜ್ಯದ ವಿಭಜನೆ:- ಅಶೋಕನ ನಂತರ ಮೌರ್ಯ
ಸಾಮ್ರಾಜ್ಯವನ್ನು ಆತನ ಉತ್ತರಾಧಿಕಾರಿಗಳು ಹಂಚಿಕೊಂಡರು. ಕಾಶ್ಮೀರಕ್ಕೆ ಚೋಕನು, ಗಾಂಧಾರಕ್ಕೆ ವೀರಸೇನನು ಹಾಗೂ ಉಳಿದ ಪ್ರಾಂತ್ಯಗಳಿಗೆ ಸಂಪ್ರತಿ ಮತ್ತು ದಶರಥರು ಅಧಿಕಾರಕ್ಕೆ ಬಂದರು. ಇಂತಹ ವಿಭಜನೆಯು ರಾಜ್ಯದ ರಾಜಕೀಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರಿತು.
6. ಉತ್ತರಾಧಿಕಾರದ ಒಳಜಗಳಗಳು:- ಉತ್ತರಾಧಿಕಾರ ಕುರಿತ
ಸ್ಪಷ್ಟವಾದ ಕಾಯ್ದೆ ಇಲ್ಲದಿರುವುದು ಕೂಡಾ ಮೌರ್ಯರ ಅವನತಿಯ ಕಾರಣಗಳಲ್ಲಿ ಒಂದಾಗಿದೆ. ಇದರಿಂದಾಗಿ ಉತ್ತರಾಧಿಕಾರಕ್ಕೆ ಘರ್ಷಣೆಗಳು ನಡೆಯುತ್ತಿದ್ದವು. ಇದು ಅನವಶ್ಯಕ ಗೊಂದಲ ಉಂಟುಮಾಡುತ್ತಿದ್ದುದಲ್ಲದೆ, ಅವಕಾಶವಾದಿ ಮತ್ತು ಮಹತ್ವಾಕಾಂಕ್ಷಿ ಪ್ರಾಂತ್ಯಾಧಿಕಾರಿಗಳನ್ನು ದಂಗೆಯೇಳಲು ಪ್ರೇರೇಪಿಸುತ್ತಿದ್ದಿತು. ಅಶೋಕನು ಅಧಿಕಾರಕ್ಕೆ ಬರುವ ಸಂದರ್ಭ ಮತ್ತು ಆತನ ನಂತರದ ಸಂದರ್ಭದಲ್ಲಿ ಇಂತಹ ಸನ್ನಿವೇಶ ಉಂಟಾಗಿದ್ದುದನ್ನು ಗಮನಿಸಬಹುದು. ಅಶೋಕನು ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದನು. ಆದರೆ ಆತನ ನಂತರದ ದೊರೆಗಳು ವಿಫಲರಾದರು.
7. ಸಾಮಂತರ ದಂಗೆಗಳು. ವಿದರ್ಭ, ಕಳಿಂಗ ಮತ್ತು ಆಂಧ್ರಗಳಲ್ಲಿ.:- ಮೌರ್ಯರ ಪತನಕ್ಕೆ ಇನ್ನೂ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ ಪ್ರಾಂತ್ಯಾಧಿಕಾರಿಗಳ ದುರಾಡಳಿತ. ಬಿಂದುಸಾರನ ಕಾಲದಲ್ಲಿ ತಕ್ಷಶಿಲೆಯ ಪ್ರಾಂತ್ಯಾಧಿಕಾರಿಗಳ ದುರಾಡಳಿತ ತಾಳದೇ ಜನರು ದಂಗೆಯೆದ್ದ ಉಲ್ಲೇಖವಿದೆ. ಅಲ್ಲಿನ ದಂಗೆಯನ್ನು ಅಶೋಕನು ಅಡಗಿಸಿದಾಗ, ಜನರು ತಮ್ಮ ಪ್ರತಿಭಟನೆಯು ರಾಜರ ಅಥವಾ ರಾಜಕುಮಾರನ ವಿರುದ್ಧವಲ್ಲ. ತಮ್ಮನ್ನು ಅವಮಾನಿಸಿದ ಅಧಿಕಾರಿಗಳ ವಿರುದ್ಧವೆಂದು ಅಶೋಕನಲ್ಲಿ ಹೇಳಿದರೆನ್ನಲಾಗಿದೆ. ಅಶೋಕನ ಕಾಲದಲ್ಲಿಯೂ ತಕ್ಷಶಿಲೆಯಿಂದ ಅಂತಹ ದೂರೂ ಕೇಳಿಬಂದಿತು. ಆಗ ಅಶೋಕನು ಅಧಿಕಾರಿಗಳಿಗೆ ಪ್ರಜೆಗಳನ್ನು ಹಿಂಸಿಸದಂತೆ ಸೂಚನೆ ನೀಡಿದನೆಂದು ಕಳಿಂಗದ ಶಾಸನಗಳು ತಿಳಿಸುತ್ತವೆ. ಅಧಿಕಾರಿಗಳ ದಬ್ಬಾಳಿಕೆಯನ್ನು ತಡೆಯಲು ವರ್ಗಾವಣೆ ಪದ್ಧತಿಜಾರಿಗೆ ತಂದರೂ ಹಾಗೂ ಧರ್ಮಯಾತ್ರೆಯ ನೆಪದಲ್ಲಿ ಸ್ವತಃ ಅಶೋಕನು ಪ್ರಾಂತ್ಯಗಳಿಗೆ ಭೇಟಿ ನೀಡುತ್ತಿದ್ದರೂ ದೂರದ ಪ್ರಾಂತ್ಯಗಳಲ್ಲಿ ಅಧಿಕಾರಿಗಳ ದಬ್ಬಾಳಿಕೆಯನ್ನು ತಡೆಯಲಾಗಲಿಲ್ಲ.
8. ಗಡಿಗಳ ನಿರ್ಲಕ್ಷ್ಯ ಮತ್ತು ವಿದೇಶಿ ದಾಳಿಗಳು:- ಮೌರ್ಯರ ಪತನಕ್ಕೆ ವಿದೇಶಿ ದಾಳಿಗಳೂ ಕೂಡಾ ಪ್ರಮುಖ ಕಾರಣವೆನ್ನಲಾಗಿದೆ. ಪಾಲಿಬಿಯಸ್ ಬರಹಗಳು ಮತ್ತು ಗಾರ್ಗಿ ಸಂಹಿತೆಗಳು ಗ್ರೀಕ್ದಾಳಿಯನ್ನು ಉಲ್ಲೇಖಿಸುತ್ತವೆ. ಅಶೋಕನ ನಂತರದ ಮೌರ್ಯ ಅರಸರು ಇಂತಹ ದಾಳಿಗಳನ್ನು ತಡೆಯುವಲ್ಲಿ ವಿಫಲವಾದುದು ಮೌರ್ಯರ ಅವನತಿಗೆ ನಿರ್ಣಯಾತ್ಮಕ ಅಂಶವಾಯಿತು. ಅಶೋಕನು ಧರ್ಮ ಪ್ರಸಾರ ಕಾರ್ಯದಲ್ಲಿ ಮಗ್ನನಾಗಿ ವಾಯುವ್ಯ ಗಡಿಯನ್ನು ನಿರ್ಲಕ್ಷಿಸಿದ್ದನು. ಚೀನಾದ ಚಕ್ರವರ್ತಿಯು ಸಿಥಿಯನ್ನರ ದಾಳಿ ತಡೆಯಲು ಮಹಾ ಗೋಡೆಯನ್ನು ನಿರ್ಮಿಸಿದುದರಿಂದ ಸಿಥಿಯನ್ನರು ಭಾರತದ ಕಡೆಗೆ ನುಗ್ಗಿದರು. ಅದರ ಪರಿಣಾಮವಾಗಿ ಗ್ರೀಕರು ಮೌರ್ಯ ಸಾಮ್ರಾಜ್ಯಕ್ಕೆ ದಾಳಿಯಿಡುವಂತಾಯಿತೆಂದು ಆರ್.ಎಸ್.ಶರ್ಮರವರು ಅಭಿಪ್ರಾಯಪಟ್ಟಿದ್ದಾರೆ.
9. ಇತರ ರಾಜ್ಯಗಳ ಏಳಿಗೆ:- ಮೌರ್ಯರ ಅವನತಿಗೆ ನೀಡಲಾದ ಮತ್ತೊಂದು ಕಾರಣವೆಂದರೆ ಭೌತಿಕ ಅಂಶಗಳ ಅರಿವಿನ ವಿಸ್ತರಣೆಯಾದುದು. ಅಂದರೆ,
ಕ್ರಿ.ಪೂ. ೬ನೆಯ ಶತಮಾನದ ವೇಳೆಗೆ ಮಗಧವು ಮಾತ್ರ ಐಹಿಕ ಸಂಸ್ಕೃತಿಯಿಂದಾಗಿ (ಕಬ್ಬಿಣದ ಬಳಕೆ, ಸಾರಿಗೆ ಸೌಲಭ್ಯ ಬೆಳವಣಿಗೆ ಮೊದಲಾದವು) ಬೆಳವಣಿಗೆ ಹೊಂದಿ ವಿಸ್ತಾರವಾಗಿ ಬೆಳೆದಿತ್ತು. ಮಗಧವು ವಿಸ್ತೃತಗೊಂಡಂತೆ ಅದುವರೆಗೆ ಅದು ಹೊಂದಿದ್ದ ವಿಶಿಷ್ಟ ಸೌಲಭ್ಯಗಳು ಇತರ ಪ್ರದೇಶಗಳಿಗೂ ಹರಡಿದವು. ಇದರಿಂದ ಈ ಪ್ರದೇಶಗಳಲ್ಲಿ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಹೊಸ ರಾಜ್ಯಗಳು ರೂಪುಗೊಂಡಂತೆ ಮಗಧದ ಪ್ರಾಮುಖ್ಯತೆ ಕುಂದಿತು.
10. ವಿಶಾಲ ಸಾಮ್ರಾಜ್ಯ:- ಅಂದಿನ ಸಾರಿಗೆ-ಸಂಪರ್ಕ ಮಾಧ್ಯಮಗಳನ್ನು ಬಳಸಿಕೊಂಡು ಆಡಳಿತ ನಿರ್ವಹಿಸಲು ಸಾಧ್ಯವಾಗದಿರುವಷ್ಟು ವಿಶಾಲ ಸಾಮ್ರಾಜ್ಯವನ್ನು ಮೌರ್ಯರು ಹೊಂದಿದ್ದುದು ಅವರ ಅವನತಿಗೆ ಇನ್ನೊಂದು ಕಾರಣವೆನ್ನಬಹುದು. ಒಂದೇ ಆಡಳಿತ ಕೇಂದ್ರದಿಂದ ದೂರದ ಪ್ರದೇಶದ ಅಧಿಕಾರಿಗಳು ಮತ್ತು ಪ್ರಜೆಗಳನ್ನು ಹತೋಟಿಯಲ್ಲಿಡುವುದು ಸುಲಭ ಸಾಧ್ಯವಲ್ಲ. ಇದರಲ್ಲಿ ಚಂದ್ರಗುಪ್ತ, ಅಶೋಕರಂತಹ ಅರಸರು ಯಶಸ್ವಿಯಾದರೇ ಹೊರತು, ಉಳಿದವರಲ್ಲಿ ಅಂತಹ ಸಾಮರ್ಥ್ಯವಿರಲಿಲ್ಲ. ವಿಶಾಲ ಸಾಮ್ರಾಜ್ಯವನ್ನು ನಿರ್ವಹಿಸಲು ಸೂಕ್ತವಾದ ವ್ಯವಸ್ಥೆಯನ್ನು ಮೌರ್ಯರ ಆಡಳಿತವು ಹೊಂದಲಿಲ್ಲ. ಅಸಮರ್ಥ ಅಧಿಕಾರಿಗಳು ಮತ್ತು ಗೊಢಚರ್ಯೆ ಇಲಾಖೆಯ ವಿಫಲತೆ ಕೂಡಾ ಅವನತಿಯ ಮೇಲೆ ಪ್ರಭಾವ ಬೀರಿತು.
11. ಹಣಕಾಸಿನ ದೌರ್ಬಲ್ಯ ಮತ್ತು ಹೆಚ್ಚಿದ ತೆರಿಗೆಗಳ
ಭಾರ:- ಮೌರ್ಯ ಸಾಮ್ರಾಜ್ಯ ವಿಶಾಲವಾಗಿದ್ದು, ಅದರ ನಿರ್ವಹಣೆಗೆ ಬೃಹತ್ ಸೈನ್ಯ ಮತ್ತು ಅಧಿಕಾರಿ ವರ್ಗ ಅವಶ್ಯವಾಗಿತ್ತು. ಇದರ ವೆಚ್ಚ ರಾಜ್ಯದ ಖಜಾನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ವೆಚ್ಚ ಸರಿದೂಗಿಸಲು ಜನರ ಮೇಲೆ ವಿವಿಧ ತೆರಿಗೆಗಳನ್ನು ವಿಧಿಸಲಾಯಿತು. ಕಡಿಮೆ ದರ್ಜೆಯ ಲೋಹದ ನಾಣ್ಯಗಳನ್ನು ಜಾರಿಗೆ ತರಲಾಯಿತು. ಆದರೂ ಅಗತ್ಯ ಹಣವನ್ನು ಪೂರೈಸುವಲ್ಲಿ ರಾಜ್ಯವು ಯಶಸ್ವಿಯಾಗಲಿಲ್ಲ. ಕೃಷಿ, ವ್ಯಾಪರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಧಕ್ಕೆಯಾಯಿತು. ಇಂತಹ ಆರ್ಥಿಕ ಬಿಕ್ಕಟ್ಟು ಮೌರ್ಯರ ಅವನತಿಗೆ ಮೂಲ ಕಾರಣವೆಂದು ಕೋಸಾಂಬಿಯವರ ಅಭಿಪ್ರಾಯವಾಗಿದೆ. ಅಶೋಕನು ಯುದ್ಧಗಳನ್ನು ತ್ಯಜಿಸಿದ್ದು, ವಿವಿಧ ಅಧಿಕಾರಿವರ್ಗವನ್ನು ನೇಮಿಸಿ ನೌಕರಶಾಹಿಯ ಗಾತ್ರ ಹೆಚ್ಚಿಸಿದ್ದು ಆತನ ವಿವಿಧ ಸಾರ್ವಜನಿಕ ಕಾರ್ಯಗಳು, ಬೌದ್ಧ ಸನ್ಯಾಸಿಗಳಿಗೆ ಹಾಗೂ ವಿಹಾರಗಳಿಗೆ ನೀಡಿದ ಕೊಡುಗೆಗಳು ಮೊದಲಾದವು ರಾಜ್ಯದ ಖಜಾನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದವು. ಆದರೆ ಅದರಿಂದಲೇ ಸಾಮ್ರಾಜ್ಯ ಅವನತಿ ಹೊಂದಿತೆನ್ನಲಾಗದು.
ಅಶೋಕನ ನಂತರ ಅವನತಿಯತ್ತ ಸಾಗಿದ್ದ ಮೌರ್ಯ ವಂಶವು ಅಂತಿಮವಾಗಿ ಅದರ ಸೇನಾನಿ ಪುಷ್ಯಮಿತ್ರ ಶೃಂಗನ ಅವಕಾಶವಾದಿ ರಾಜಕೀಯಕ್ಕೆ ಬಲಿಯಾಯಿತು. ಪುಷ್ಯಮಿತ್ರನು ಕೊನೆಯ ಮೌರ್ಯ ಅರಸು ಬೃಹದ್ರಥನನ್ನು ಕೊಂದು ಶೃಂಗ ಸಂತತಿಯ ಆಳ್ವಿಕೆಯನ್ನು ಸ್ಥಾಪಿಸಿದನು. ಆದರೆ ಶೃಂಗರ ಆಳ್ವಿಕೆಯು ಪಾಟಲಿಪುತ್ರ ಮತ್ತು ಮಧ್ಯಭಾರತದ ಪ್ರದೇಶಗಳಿಗೆ ಸೀಮಿತವಾಗಿದ್ದು ಅಲ್ಪಕಾಲದ್ದಾಗಿದ್ದಿತು. ನಂತರ ಕಣ್ವರು ಅಧಿಕಾರಕ್ಕೆ ಬಂದರು. ಈ ನಡುವೆ ಮಧ್ಯ ಏಷ್ಯಾದಿಂದ ಬಂದ ಹಲವು ರಾಜವಂಶಗಳು ಮೌರ್ಯರ ಸ್ಥಾನವನ್ನಾಕ್ರಮಿಸಿದವು.
ಹೀಗೆ ವಿವಿಧಾಂಶಗಳು ಮೌರ್ಯರ ಅವನತಿಗೆ ಕಾರಣವಾಗಿವೆ. ಯಾವುದೇ ಒಂದು ಕಾರಣವನ್ನು ಅವನತಿಗೆ ಜವಾಬ್ದಾರಿಯೆನ್ನಲಾಗದು. ಅವನತಿಯ ನಂತರವೂ ಮೌರ್ಯ ಸಾಮ್ರಾಜ್ಯ ರೂಪಿಸಿದ ಆಡಳಿತ ನೀತಿಗಳು ಮುಂದುವರೆದಿವೆ. ಅಶೋಕನಿಂದಾಗಿ ಮೌರ್ಯರ ಕೀರ್ತಿ ಇತಿಹಾಸದಲ್ಲಿ ಹಾಗೆಯೇ ಉಳಿದು ಬಂದಿದೆ.
*****
Comments
Post a Comment