ಬೆಳಗಾವಿ ಕಾಂಗ್ರೆಸ್‌ ಅಧಿವೇಶನ - ಡಿಸೆಂಬರ್‌ ೨೬ ರಿಂದ ೨೮; ೧೯೨೪

   ಅಖಿಲ ಭಾರತ 39ನೆ  ಕಾಂಗ್ರೆಸ್ ವಾರ್ಷಿಕ ಅಧಿವೇಶನವು ಕರ್ನಾಟಕದ ಬೆಳಗಾವಿಯಲ್ಲಿ ಜರುಗುವುದೆಂಬ ತೀರ್ಮಾನವಾದಾಗ ಕನ್ನಡ ಜನ ಹೆಮ್ಮೆಯಿಂದಲೂ ಉತ್ಸಾಹದಿಂದಲೂ ಅದಕ್ಕೆ ಸಿದ್ಧತೆ ಮಾಡಿಕೊಂಡರು.   ಸ್ವಾತಂತ್ರ್ಯ ಪೂರ್ವದಲ್ಲಿ  ಕರ್ನಾಟಕದಲ್ಲಿ ನಡೆದ ಮೊದಲ ಮತ್ತು ಕಡೆಯ ಕಾಂಗ್ರೆಸ್‌ ಅಧಿವೇಶನವಿದು. ಅಲ್ಲದೇ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ಸಿನ ಅಧಿವೇಶನ. ಇದರ ಅಂಗವಾಗಿ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಅಧಿವೇಶನ, ಬಿಜಾಪುರ ಜಿಲ್ಲಾ ಕಾಂಗ್ರೆಸ್ ಅಧಿವೇಶನ, ಕರ್ನಾಟಕ ಖಿಲಾಫತ್ ಪರಿಷತ್, ಭಗಿನೀಮಂಡಲ ಪರಿಷತ್, ಕರ್ನಾಟಕ ಸಾಹಿತ್ಯ ಸಮ್ಮೇಳನ, ಸ್ವಯಂಸೇವಕರ ಸಮ್ಮೇಳನ ಇವು ಬಿಜಾಪುರದಲ್ಲಿ ಜರುಗಿದವು. ಅಲ್ಲದೇ ಖಾದಿ ವಸ್ತು ಪ್ರದರ್ಶನ, ದನಗಳ ಜಾತ್ರೆ ಮತ್ತು ರಾಷ್ಟ್ರೀಯ ಗೀತೆಗಳ ಕಂಠಪಾಠ ಸ್ಪರ್ಧೆಗಳೂ ಸಾಂಗವಾಗಿ ನೆರವೇರಿದವು. ಆಗ ನಡೆದ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮ್ಮೇಳನಕ್ಕೆ ಸಿ. ರಾಜಗೋಪಾಲಚಾರಿ ಯವರೇ ಅಧ್ಯಕ್ಷರು. ಕಾರ್ನಾಡ್ ಸದಾಶಿವರಾವ್, ಹರ್ಡೇಕರ್ ಮಂಜಪ್ಪ, ಎನ್. ಸಿ. ಕೇಳ್ಕರ್ ಮುಂತಾದ ಅಖಿಲಭಾರತ ಖ್ಯಾತಿ ಪಡೆದ ಅನೇಕರು ಅಧಿವೇಶನದಲ್ಲಿ ಹಾಜರಿದ್ದರು. ಗಾಂಧೀಜಿಯವರು ತಮ್ಮ ಅಧ್ಯಕ್ಷಭಾಷಣದಲ್ಲಿ ನಾಡಿನ ಐಕ್ಯಮತ್ಯ, ಅಸ್ಪೃಶ್ಯತಾ ನಿವಾರಣೆ, ಖಾದಿಪ್ರಚಾರ, ಗ್ರಾಮೋದ್ಯೋಗ, ಸ್ವದೇಶಿ, ಅಹಿಂಸೆ-ಮುಂತಾದವುಗಳ ಬಗ್ಗೆ ಭಾಷಣ ಮಾಡಿ, ರಚನಾತ್ಮಕ ಕಾರ್ಯಗಳೂ ಸ್ವಾತಂತ್ರ್ಯ ಚಳವಳಿಯಷ್ಟೆ ಮುಖ್ಯವೆಂದು ಒತ್ತಿ ಹೇಳಿದರು. ಇದರಿಂದ ಕರ್ನಾಟಕ ಜನತೆಯಲ್ಲಿ ಹೊಸ ಸ್ಪೂರ್ತಿ ಮೂಡಿತು. ನಾಡಿನ ಮುಖಂಡರೆ¯್ಲ ಕರ್ನಾಟಕದ ನಾನಾ ಕಡೆ ಸಂಚರಿಸಿ ಗಾಂಧೀಜಿಯವರ ಸಂದೇಶವನ್ನು ಜನರಲ್ಲಿ ಹರಡಿದರು.

   ಅಂದಿನ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗಂಗಾಧರರಾವ್‌ ದೇಶಪಾಂಡೆಯವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು.    ಅಧಿವೇಶನದ ಸ್ಥಳಕ್ಕೆ “ವಿಜಯನಗರ” ಎಂದು ನಾಮಕರಣ ಮಾಡಲಾಗಿತ್ತು.  ೮೫ ಎಕರೆ ವಿಸ್ತಾರದಲ್ಲಿ ಅಧಿವೇಶನ ಸ್ಥಳವನ್ನು ಸಿದ್ಧಗೊಳಿಸಲಾಗಿತ್ತು.  ಸಮ್ಮೇಳನದ ಪ್ರವೇಶ ದ್ವಾರಕ್ಕೆ ಹಂಪಿಯ ವಿರುಪಾಕ್ಷ ದೇವಾಲಯದ ಗೋಪುರದ ಮಾದರಿಯನ್ನು ಮಾಡಲಾಗಿತ್ತು.   ಪಟ್ಟಣಕ್ಕೆ ನೀರಿನ ವ್ಯವಸ್ಥೆಗೆ ಪಂಪಾಸಾಗರ ಎಂಬ ಹೊಸ ಬಾವಿ ತೆಗೆಸಲಾಗಿತ್ತು.  ೧೭೦೦ ಸೇವಾದಳದ ಸ್ವಯಂ ಸೇವಕರನ್ನು ಸ್ವಚ್ಛತೆ ಕಾರ್ಯಗಳಿಗಾಗಿ ನಿಯೋಜಿಸಲಾಗಿತ್ತು.

   ಇದೇ ವೇಳೆಯಲ್ಲಿ ಪ್ರಥಮ ಕರ್ನಾಟಕ ಏಕೀಕರಣ ಅಧಿವೇಶನ ಸರ್‌ ಸಿದ್ದಪ್ಪ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಗ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹುಯಿಲಗೊಳ ನಾರಾಯಣರಾಯರು ಹಾಡಿದ್ದರು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources