ಅಧ್ಯಾಯ ೬. ಪ್ರಾದೇಶಿಕತೆ ಮತ್ತು ಪ್ರಾದೇಶಿಕ ಅಸಮಾನತೆ.

I. ಪೀಠಿಕೆ: ಭಾರತೀಯ ಪ್ರಜಾಪ್ರಭುತ್ವವು ಕಾಲಾಂತರದಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಈ ಸವಾಲುಗಳನ್ನು ಕಠಿಣ ಪ್ರಯತ್ನದ ಮೂಲಕ ನಿರ್ಮೂಲನೆಗೊಳಿಸಲು ಅಥವಾ ನಿಯಂತ್ರಿಸಲು ಭಾರತವು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ  ಅನಕ್ಷರತೆ, ಬಡತನ, ಕೋಮುವಾದ, ಜಾತಿಯತೆ, ಭಯೋತ್ಪಾದನೆ, ಭ್ರಷ್ಟಾಚಾರ ಪ್ರಧಾನವಾಗಿದ್ದು ಅವುಗಳ ಸಾಲಿಗೆ ಪ್ರಾದೇಶಿಕವಾದವೂ ಒಂದು ಸವಾಲಾಗಿ ಪರಿಣಮಿಸಿದೆ. ಸಹಜವಾಗಿ ಭಾರತ ಒಕ್ಕೂಟದ ರಾಜ್ಯಗಳಲ್ಲಿಯೂ ಪ್ರಾದೇಶಿಕವಾದದ ಪ್ರತಿಬಿಂಬವನ್ನು ಗುರುತಿಸಬಹುದಾಗಿದೆ. ಇಂತಹ ಪ್ರಾದೇಶಿಕವಾದಗಳು ಬೆಳೆಯಲು ಭಾರತದಲ್ಲಿನ ವೈವಿಧ್ಯಮಯ ಜನಾಂಗಗಳು, ಭಾಷೆಗಳು, ಸಂಸ್ಕೃತಿಗಳು, ಆಚರಣೆಗಳು, ನಂಬಿಕೆಗಳು, ಧರ್ಮಗಳು, ಮಾತ್ರವಲ್ಲ, ಅಭಿವೃದ್ಧಿಯಲ್ಲಿನ ಅಸಮಾನತೆಯೂ ಕಾರಣವಾಗಿದೆ.

II. ಪ್ರಾದೇಶಿಕವಾದದ ಅರ್ಥ - Meaning of Regionalism:

ಸಾಮಾನ್ಯ ಅರ್ಥದಲ್ಲಿ ವ್ಯಕ್ತಿಯೊಬ್ಬ ತಾನು ನೆಲೆಸಿರುವ ಪ್ರದೇಶವನ್ನು ಕುರಿತಂತೆ ಹೊಂದಿರುವ ಅತಿಯಾದ ಪ್ರೇಮವು ಪ್ರಾದೇಶಿಕವಾದವೆನಿಸುತ್ತದೆ. ರಾಜ್ಯಶಾಸ್ತ್ರೀಯ ಭಾಷೆಯಲ್ಲಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಿತಾಸಕ್ತಿಗಳಿಗೆ ಒತ್ತು ನೀಡುವ ಸಿದ್ಧಾಂತವೇ ಪ್ರಾದೇಶಿಕವಾದ ಎನಿಸುತ್ತದೆ.

   ಡಬ್ಲ್ಯು. ಸಿ. ಸ್ಕಾಟ್‌ ಪ್ರಕಾರ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದೊಳಗಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಂಸ್ಥೆಗಳ ಸಂಬಂಧ ಮತ್ತು ಕಾರ್ಯಗಳನ್ನು ಪ್ರತಿಪಾದಿಸುವುದೇ ಪ್ರಾದೇಶಿಕವಾದವಾಗಿದೆ.

   ಪ್ರಾದೇಶಿಕವಾದವು ಕೇಂದ್ರಿಕರಣಕ್ಕೆ ವಿರುದ್ಧವಾದ ಸಿದ್ಧಾಂತವಾಗಿದೆ. ರಾಜಕೀಯವಾಗಿ ಉನ್ನತವಾದ ಘಟಕವನ್ನು ಪ್ರಶ್ನಿಸುವ ಉದ್ದೇಶವನ್ನು ಪ್ರಾದೇಶಿಕವಾದ ಹೊಂದಿಲ್ಲವಾದರೂ ನಿರ್ದಿಷ್ಟ ಪ್ರದೇಶದ ಸ್ಥಳೀಯ ಅಗತ್ಯಗಳನ್ನು ಪೂರೈಸುವ ಬೇಡಿಕೆಗಳನ್ನು ಹೊಂದಿರುತ್ತದೆ. ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಘಟಕವನ್ನಾಗಿಸಿಕೊಂಡು ಅದರ ವರ್ತನೆಯನ್ನು ಪ್ರಾದೇಶಿಕವಾದ ಅಭ್ಯಸಿಸುತ್ತದೆ. ನಿರ್ದಿಷ್ಟ ಪ್ರದೇಶದ ಹಿತಾಸಕ್ತಿಯನ್ನು ರಕ್ಷಿಸುವ ಮೂಲಕ ಅದರ ಜನರ ಕಲ್ಯಾಣವನ್ನು ಉತ್ತೇಜಿಸುತ್ತದೆ. ಅತಿಯಾದ ಪ್ರಾದೇಶಿಕತೆಯು ದೇಶದ ಏಕತೆ ಮತ್ತು ಅಕಂಡತೆಗೆ ಬೆದರಿಕೆಯನ್ನು ಒಡ್ಡುತ್ತದೆ.

ಪ್ರದೇಶ ಅಥವಾ ವಲಯದ ಅರ್ಥ: ಪ್ರದೇಶ ಎಂಬ ಪದದಿಂದ ಪ್ರಾದೇಶಿಕ ಪದದ ಉತ್ಪತ್ತಿಗೊಂಡಿದೆ.  ಪ್ರಾದೇಶಿಕ ಎಂದರೆ ಒಂದು ಪ್ರದೇಶಕ್ಕೆ ಸಂಬಂಧಿಸಿದುದು ಎಂದರ್ಥ.  ಪ್ರದೇಶ ಎಂಬುದು ಭೌಗೋಳಿಕವಾಗಿ ಗಡಿಗಳಿಂದ ಗುರ್ತಿಸಲ್ಪಡುವ ಒಂದು ಭೂಪ್ರದೇಶವಾಗಿದೆ.   ಅಂತೆಯೇ ಪ್ರಾದೇಶಿಕ ಅಥವಾ ಪ್ರದೇಶ ಎಂಬುದು ಸಾಮಾಜಿಕವಾಗಿ ಮಾನವರು ಮತ್ತು ಸಮುದಾಯಗಳ ನಡುವಿನ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.  ಪ್ರದೇಶಗಳು ಅಥವಾ ವಲಯಗಳು ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮತ್ತು  ಸೈನಿಕವಾಗಿ ವ್ಯವಸ್ಥಿತವಾದ ಸಹಕಾರದಿಂದ ಕೂಡಿರುತ್ತವೆ.  ಅಲ್ಲದೇ ಭಾಷೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿಗಳಿಂದಲೂ ಪ್ರದೇಶ/ವಲಯಗಳು ಗುರ್ತಿಸಲ್ಪಡುತ್ತವೆ.

III. ಭಾರತದಲ್ಲಿ ಪ್ರಾದೇಶಿಕತೆಗೆ ಕಾರಣವಾದ ಅಂಶಗಳು

1. ಭೌಗೋಳಿಕ ಅಂಶಗಳು: ಜನರು ತಾವು ವಾಸಿಸುವ ಪ್ರದೇಶದ ಪರಿಚಿತತೆಯ ಕಾರಣದಿಂದಾಗಿ ಪ್ರಾದೇಶಿಕ ಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ. ಇದಕ್ಕೆ ಅವರು ಮಾತನಾಡುವ ಭಾಷೆಯು ಕಾರಣವಾಗಿರುತ್ತದೆ. ಅಲ್ಲದೇ ಹವಾಮಾನ ಮತ್ತು ವಾತಾವರಣದಲ್ಲಿನ ವ್ಯತ್ಯಾಸಗಳೂ ಸಹ ಪ್ರಾದೇಶಿಕತೆಯ ಬೆಳವಣಿಗೆಗೆ ಕಾರಣವಾಗಿವೆ.

2. ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳು: ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳು ಪರಂಪರೆ, ಜನಪದ, ಪುರಾಣಗಳು ಮತ್ತು ಐತಿಹಾಸಿಕ ಹಿರಿಮೆಯನ್ನು ಜನರಲ್ಲಿ ಮೂಡಿಸುವ ಮೂಲಕ ಪ್ರಾದೇಶಿಕತೆಗೆ ಕಾರಣವಾಗುತ್ತವೆ.  ಅಲ್ಲದೇ ನಿರ್ದಿಷ್ಟ ಸಾಂಸ್ಕೃತಿಕ ಗುಂಪಿನ ಜನರೂ ಸಹ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳ ಸಾಧನೆಗಳು ಮತ್ತು ವೈಭವಗಳಿಂದ ಪ್ರಾದೇಶಿಕತೆಯ ಬೆಳವಣಿಗೆಗೆ ಪ್ರೇರಣೆ ಪಡೆದುಕೊಳ್ಳುತ್ತಾರೆ.

3. ಜಾತಿಯ ಅಂಶ: ಈ ಅಂಶವು ಭಾಷೆ ಮತ್ತು ಧರ್ಮದೊಂದಿಗೆ ಬೆರೆತಾಗ ಅದು ಪ್ರಾದೇಶಿಕತೆಯನ್ನು ಬೆಳೆಸುತ್ತದೆ. ಇದು ಧರ್ಮಾಂಧತೆ, ಸಾಂಪ್ರದಾಯಿಕತೆ ಮತ್ತು ಅಸ್ಪಷ್ಟತೆಗೆ ಕಾರಣವಾಗುತ್ತದೆ.

4. ಆರ್ಥಿಕ ಅಂಶಗಳು: ದೇಶದ ಅನೇಕ ಭಾಗಗಳಲ್ಲಿನ ಅಸಮ ಅಭಿವೃದ್ಧಿಯು ಪ್ರಾದೇಶಿಕವಾದದ ಪ್ರಮುಖ ಕಾರಣವಾಗಿದೆ.  ದೇಶದಲ್ಲಿ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಕೇಂದ್ರೀಕೃತವಾಗಿರುವ ಕೆಲವು ಪ್ರದೇಶಗಳಿದ್ದು, ಅಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ, ಸಂವಹನ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ತ್ವರಿತ ಕೃಷಿ ಅಭಿವೃದ್ಧಿ ಸಾಧ್ಯವಾಗಿದೆ. ಆದರೆ ಭಾರತದಲ್ಲಿ ಸಂವಿಧಾನದ ಮೌಲ್ಯಗಳು ಇನ್ನೂ ಅನುಷ್ಠಾನಗೊಳ್ಳದ ಕೆಲವು ಪ್ರದೇಶಗಳಿವೆ.  ವಾಸ್ತವವಾಗಿ, ಇಂತಹ ವ್ಯಾಪಕ ಪ್ರಾದೇಶಿಕ ಅಸಮಾನತೆಗೆ ಬ್ರಿಟಿಷ್ ಆಡಳಿತವನ್ನು ಹೊಣೆಗಾರರನ್ನಾಗಿ ಮಾಡಬಹುದು.  ಆದರೆ ಸ್ವಾತಂತ್ರ್ಯಾನಂತರದಲ್ಲಿ ಆರ್ಥಿಕ ಅಭಿವೃದ್ಧಿ ವಿಷಯಗಳಲ್ಲಿ ಪ್ರಾದೇಶಿಕ ಸಮತೋಲನಕ್ಕಾಗಿ ಪ್ರಯತ್ನಗಳು ನಡೆಯಬೇಕಿತ್ತು.  ಈ ಅಸಮಾನತೆಯು ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟ ಪ್ರದೇಶಗಳ ಜನರಲ್ಲಿ ಅಭಿವೃದ್ಧಿ ಕೊರತೆಯ ಭಾವನೆಯನ್ನು ಉಂಟುಮಾಡಿದೆ.  ಉದಾ: ಬೋಡೋಲ್ಯಾಂಡ್, ಜಾರ್ಖಂಡ್, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ತೆಲಂಗಾಣಗಳ ಪ್ರತ್ಯೇಕತಾ ವಾದಗಳು.

5. ರಾಜಕೀಯ ಮತ್ತು ಆಡಳಿತಾತ್ಮಕ ಅಂಶಗಳು:: ರಾಜಕೀಯ ಪಕ್ಷಗಳು, ವಿಶೇಷವಾಗಿ ಪ್ರಾದೇಶಿಕ ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ನಾಯಕರು, ಪ್ರಾದೇಶಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅವರು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಪ್ರಾದೇಶಿಕ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಭರವಸೆ ನೀಡುತ್ತಾರೆ.

IV. ಭಾರತದಲ್ಲಿನ ಪ್ರಾದೇಶಿಕತೆಯ ವಿಧಗಳು: ಮುಖ್ಯವಾಗಿ ಮೂರು ವಿಧಗಳನ್ನು ಗುರ್ತಿಸಲಾಗಿದೆ. ಅವುಗಳೆಂದರೆ,

1. ಸಾಮೂಹಿಕ ಪ್ರಾದೇಶಿಕತೆ: ಇದು ಹಲವಾರು ರಾಜ್ಯಗಳ ಗುಂಪಿನ ಅಭಿವ್ಯಕ್ತಿಯಾಗಿದೆ. ಈ ರೀತಿಯ ಪ್ರಾದೇಶಿಕತೆಯಲ್ಲಿ, ರಾಜ್ಯಗಳ ಗುಂಪು ಪರಸ್ಪರ ಹಿತಾಸಕ್ತಿಯ ವಿಷಯದ ಬಗ್ಗೆ ಮತ್ತೊಂದು ರಾಜ್ಯಗಳ ಗುಂಪಿನ ವಿರುದ್ಧ ಅಥವಾ ಕೆಲವೊಮ್ಮೆ ಒಕ್ಕೂಟದ ವಿರುದ್ಧ ಸಾಮಾನ್ಯ ನಿಲುವನ್ನು ತೆಗೆದುಕೊಳ್ಳುತ್ತವೆ. ಹೀಗೆ ಒಗ್ಗೂಡುವುದು ನಿರ್ದಿಷ್ಟ ಸಮಸ್ಯೆ ಅಥವಾ ಸಮಸ್ಯೆಗಳನ್ನು ಆಧರಿಸಿರುತ್ತದೆ. ಇಂತಹ ಸಾಮೂಹಿಕ ಪ್ರಾದೇಶಿಕತೆಯು ರಾಜ್ಯಗಳ ಶಾಶ್ವತ ವಿಲೀನತೆಯಲ್ಲ.

2. ಅಂತರ-ರಾಜ್ಯ ಪ್ರಾದೇಶಿಕತೆ: ಇದು ಸಾಮಾನ್ಯವಾಗಿ ಎರಡು ನೆರೆ ರಾಜ್ಯಗಳಿಗೆ ಸಂಬಂಧಿಸಿರುತ್ತದೆ. ಅಂದರೆ ಗಡಿಗಳನ್ನು ಹಂಚಿಕೊಳ್ಳುವ ರಾಜ್ಯಗಳ ನಡುವಿನ ಪ್ರಾದೇಶಿಕತೆ ಎನ್ನಬಹುದು. ಇಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳ ಹಿತಾಸಕ್ತಿಗಳು ಮತ್ತೊಂದರ ವಿರುದ್ಧ ಅಂತರ-ರಾಜ್ಯ ಪ್ರಾದೇಶಿಕತೆಗೆ ಕಾರಣವಾಗಿರುತ್ತವೆ. ಇಲ್ಲಿ ಸಮಸ್ಯೆ ನಿರ್ದಿಷ್ಟವಾಗಿರುತ್ತದೆ. ುದಾ: ನದಿ ನೀರು ಹಂಚಿಕೆ ಮತ್ತು ಗಡಿ ವಿವಾದಗಳು.

3. ಆಂತರಿಕ ಅಥವಾ ರಾಜ್ಯದೊಳಗಿನ ಪ್ರಾದೇಶಿಕತೆ: ರಾಜ್ಯವೊಂದರ ಒಂದು ಭಾಗದಲ್ಲಿನ  ಹಿಂದುಳಿಯುವಿಕೆ ಅಥವಾ ವೈಶಿಷ್ಟ್ಯತೆಯ ಕಾರಣದಿಂದಾಗಿ ಈ ತೆರನಾದ ಪ್ರಾದೇಶಿಕತೆ ಬೆಳೆಯುತ್ತದೆ. ಸಕಾರಾತ್ಮಕವಾಗಿ ಇದು ಸ್ಥಳೀಯತೆಯ ಉಳಿವಿಗೆ ಕಾರಣವಾದರೂ ನಕಾರಾತ್ಮಕವಾಗಿ ಇದು ರಾಜ್ಯದ ಮತ್ತು ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುತ್ತದೆ.

ಉದಾ: ಒಡಿಶಾದಲ್ಲಿ ಕರಾವಳಿ ಪ್ರದೇಶ ಮತ್ತು ಪಶ್ಚಿಮ ಪ್ರದೇಶ, ಆಂಧ್ರಪ್ರದೇಶದ ಕರಾವಳಿ ಪ್ರದೇಶ ಮತ್ತು ತೆಲಂಗಾಣ ಪ್ರದೇಶ, ಕರ್ನಾಟಕದಲ್ಲಿ ಉತ್ತರ & ದಕ್ಷಿಣ, ಕೊಡಗು, ಮಲೆನಾಡು ಇತ್ಯಾದಿ.

V. ಪ್ರಾದೇಶಿಕ ಅಸಮತೋಲನ ಎಂದರೇನು?

ಪ್ರಾದೇಶಿಕ ಅಸಮತೋಲನವೆಂದರೆ, ತಲಾ ಆದಾಯ, ಆರೋಗ್ಯ ಸೌಲಭ್ಯಗಳು, ಶಿಕ್ಷಣ, ನೈರ್ಮಲ್ಯ, ವಸ್ತುಗಳ ಬಳಕೆಯ ಮಟ್ಟ, ಆಹಾರ ಲಭ್ಯತೆ, ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿಯಂತಹ ವಿಭಿನ್ನ ಸೂಚಕಗಳಲ್ಲಿನ ಪ್ರದೇಶವಾರು ವ್ಯತ್ಯಾಸ ಅಥವಾ ಅಸಮಾನತೆಯ ಪರಿಸ್ಥಿತಿಯಾಗಿದೆ. ಇಂತಹ ಅಸಮಾನತೆಯ ಪ್ರಮಾಣವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಭಿನ್ನವಾಗಿರುತ್ತದೆ. ಆದರೆ ಬಹುತೇಕ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಎದುರಿಸುತ್ತವೆ.

VI. ಭಾರತದಲ್ಲಿನ ಪ್ರಾದೇಶಿಕ ಅಸಮತೋಲನಕ್ಕೆ ಕಾರಣಗಳು:- ಭಾರತದಲ್ಲಿನ ಪ್ರಾದೇಶಿಕ ಅಸಮತೋಲನಕ್ಕೆ ಮುಖ್ಯವಾಗಿ ಕೆಳಕಂಡ ಕಾರಣಗಳನ್ನು ನೀಡಲಾಗಿದೆ.

1. ಕಡಿಮೆ ಆರ್ಥಿಕ ಬೆಳವಣಿಗೆಯ ದರ: ಸ್ವಾತಂತ್ರ್ಯಾನಂತರದ ಭಾರತದ ಆರ್ಥಿಕ ಬೆಳವಣಿಗೆಯ ದರವು ಏರುಪೇರಿನಿಂದ ಕೂಡಿದೆ. ಆದರೆ ಆರ್ಥಿಕ ಬೆಳವಣಿಗೆಯ ದರವು ಹೆಚ್ಚಿನ ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಅಭಿವೃದ್ಧಿಯನ್ನು ಸಾಧಿಸುವಲ್ಲಿ ವಿಫಲವಾಗಿದೆ.  ಕಳೆದ ದಶಕದಲ್ಲಿ ಆರ್ಥಿಕ ಬೆಳವಣಿಗೆಯು ಪ್ರಗತಿಪರವಾಗಿದ್ದರೂ, ವಿಶ್ವ ಆರ್ಥಿಕ ಬಿಕ್ಕಟ್ಟು ಮತ್ತು ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ಅಭಿವೃದ್ಧಿ ಅಸಾಧ್ಯವಾಗಿದೆ.

2. ರಾಜ್ಯಗಳ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಂಘಟನೆ: ರಾಜ್ಯಗಳು ಸಾಕಷ್ಟು ಭೂ ಸುಧಾರಣೆಗಳನ್ನು ಮಾಡಲು ಅಸಮರ್ಥವಾಗಿವೆ ಮತ್ತು ಊಳಿಗಮಾನ್ಯ ಮನಸ್ಥಿತಿ ಇನ್ನೂ ಮುಂದುವರಿದಿದೆ. ಸ್ವಾತಂತ್ರ್ಯದ ನಂತರ ಭೂದಾನ ಮತ್ತು ಗ್ರಾಮದಾನ ಚಳುವಳಿಗಳು ಉತ್ತಮವಾಗಿ ನಡೆದಿಲ್ಲ ಮತ್ತು ಭೂಮಿಯನ್ನು ಸಹ ಪರಿಣಾಮಕಾರಿಯಾಗಿ ವಿತರಿಸಲಾಗಿಲ್ಲ. ಅಲ್ಲದೇ ಹಿಂದುಳಿದ ರಾಜ್ಯಗಳ ರಾಜಕೀಯ ಚಟುವಟಿಕೆಗಳು ಕೇವಲ ವೋಟ್ ಬ್ಯಾಂಕ್ ರಾಜಕೀಯ ಮತ್ತು ಹಗರಣಗಳಿಗೆ ಸೀಮಿತವಾಗಿವೆ.

3. ಹಿಂದುಳಿದ ರಾಜ್ಯಗಳಲ್ಲಿನ ಮೂಲಸೌಕರ್ಯಗಳ ಕೊರತೆ: ವಿದ್ಯುತ್ ವಿತರಣೆ, ನೀರಾವರಿ ಸೌಲಭ್ಯಗಳು, ರಸ್ತೆಗಳು, ಕೃಷಿ ಉತ್ಪನ್ನಗಳಿಗೆ ಆಧುನಿಕ ಮಾರುಕಟ್ಟೆಗಳಂತಹ ಮೂಲಸೌಕರ್ಯ ಅಭಿವೃದ್ಧಿಯ ಮಟ್ಟವು ಮುಂದುವರಿದ ರಾಜ್ಯಗಳಿಗೆ ಹೋಲಿಸಿದಲ್ಲಿ ಕಡಿಮೆಯಿದೆ. ಇವೆಲ್ಲವೂ ರಾಜ್ಯ ಪಟ್ಟಿಯ ವಿಷಯಗಳು.

4. ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳ ಮೇಲಿನ ಕಡಿಮೆ ಹೂಡಿಕೆ: ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯಗಳಂತಹ ಸಾಮಾಜಿಕ ಅಭಿವೃದ್ಧಿ ವಿಷಯಗಳ ಮೇಲೆ ಕೆಲವು ರಾಜ್ಯಗಳು ಕಡಿಮೆ ವೆಚ್ಚ ಮಾಡುತ್ತಿವೆ.   ವಿಷಯಗಳು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕಾರಣವೆನಿಸಿವೆ. ಆದರೆ ಈ ವಿಷಯಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದ ರಾಜ್ಯಗಳು ಅಭಿವೃದ್ಧಿ ಹೊಂದಿದ ರಾಜ್ಯಗಳ ಅಡಿಯಲ್ಲಿ ಬರುತ್ತವೆ. ಉದಾ: ತಮಿಳುನಾಡು ಪ್ರಾಥಮಿಕ ಆರೋಗ್ಯ ಸೇವೆಗಳು ಮತ್ತು ರಸ್ತೆ ಸೌಲಭ್ಯಗಳು..

5. ರಾಜಕೀಯ ಮತ್ತು ಆಡಳಿತಾತ್ಮಕ ವೈಫಲ್ಯ: ಇದು ಪ್ರಾದೇಶಿಕತೆಗೆ ಮೂಲ ಕಾರಣವಾಗುತ್ತದೆ ಮತ್ತು ಪ್ರತ್ಯೇಕ ರಾಜ್ಯಗಳಿಗಾಗಿ ಆಂತರಿಕ ಪ್ರಾದೇಶಿಕ ಚಳುವಳಿಗಳಿಗೆ ಬಲವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಜಾರ್ಖಂಡ್, ಛತ್ತೀಸ್ಗಢ, ಉತ್ತರಾಖಂಡ ಮತ್ತು ಇತ್ತೀಚೆಗೆ ತೆಲಂಗಾಣಗಳ ರಚನೆಯು  ಇಂತಹ ವೈಫಲ್ಯದ ಪರಿಣಾಮವಾಗಿದೆ. ವಿದರ್ಭ, ಸೌರಾಷ್ಟ್ರ, ಡಾರ್ಜಿಲಿಂಗ್ ಮತ್ತು ಬೋಡೋಲ್ಯಾಂಡ್ ಮುಂತಾದ ಬೇಡಿಕೆಗಳು ಸರದಿಯಲ್ಲಿವೆ. ಈ ಕ್ಷೇತ್ರದಲ್ಲಿನ ವೈಫಲ್ಯಗಳು ಖಾಸಗಿ ಕಂಪನಿಗಳ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಕಷ್ಟವಾಗುತ್ತದೆ.

6. ಭಾಷಾವಾರು ಅಂಶಗಳು: ಭಾರತದಲ್ಲಿರುವ ಭಾಷಾ ವೈವಿಧ್ಯತೆಯು  ಸ್ವಾತಂತ್ರ್ಯಾನಂತರ ರಾಜ್ಯಗಳ ಭಾಷಾವಾರು ಮರುವಿಂಗಡಣೆಗೆ ಕಾರಣವಾದ ಅಂಶಗಳಲ್ಲಿ ಒಂದಾಗಿದೆ. ಭಾಷಾವಾರು ರಾಜ್ಯಗಳ ರಚನೆಗೆ ನಡೆದ ಉಗ್ರ ಹೋರಾಟದಲ್ಲಿ ಪೊಟ್ಟಿ ಶ್ರೀರಾಮುಲು ಅವರ ಸಾವಿನಿಂದ ಜವಾಹರ್ ಲಾಲ್ ನೆಹರು ಅವರು ಇದೇ ರೀತಿಯ ವಿವಿಧ ಬೇಡಿಕೆಗಳನ್ನು  ಈಡೇರಿಸಲು 1954 ರಲ್ಲಿ ರಾಜ್ಯಗಳ ಮರುವಿಂಗಡಣಾ ಸಮಿತಿಯನ್ನು ರಚಿಸಿದರು. ಈ ಸಮಿತಿಯು ಭಾಷೆಯ ಆಧಾರದ ಮೇಲೆ 16 ಹೊಸ ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ರಚನೆಗೆ ಶಿಫಾರಸು ಮಾಡಿತು.

VII. ಭಾರತದಲ್ಲಿ ಪ್ರಾದೇಶಿಕತೆಯ ಪರಿಣಾಮಗಳು: ಎರಡು ವಿಧಗಳಲ್ಲಿ ಇದರ ಪರಿಣಾಮಗಳನ್ನು ಗುರ್ತಿಸಲಾಗಿದೆ. ಅವುಗಳೆಂದರೆ,

ಧನಾತ್ಮಕ ಪರಿಣಾಮ: ದೇಶದ ರಾಜಕೀಯ ವ್ಯವಸ್ಥೆಯು ಪ್ರಾದೇಶಿಕ ಬೇಡಿಕೆಗಳನ್ನು ಸೂಕ್ತ ರೀತಿಯಲ್ಲಿ ಮತ್ತು ಸಕಾಲಿಕವಾಗಿ ಈಡೇರಿಸಿದರೆ ರಾಷ್ಟ್ರದ ನಿರ್ಮಾಣದಲ್ಲಿ ಪ್ರಾದೇಶಿಕತೆಯ ಭಾವನೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಏಕೆಂದರೆ, ಪ್ರಾದೇಶಿಕ ಬೇಡಿಕೆಗಳನ್ನು ಈಡೇರಿಸಲು ಪ್ರದೇಶವೊಂದಕ್ಕೆ ರಾಜ್ಯದ ಸ್ಥಾನ-ಮಾನ ಅಥವಾ ಸ್ವಾಯತ್ತತೆಯನ್ನು ನೀಡಿದಲ್ಲಿ ಆ ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲು ಜನರಿಗೆ ಸ್ವಯಂ-ನಿರ್ಣಯಾಧಿಕಾರ  ದೊರೆಯುತ್ತದೆ ಮತ್ತು ಆ ಮೂಲಕ ಅವರು ಸಂತೋಷ ಮತ್ತು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ.

ನಕಾರಾತ್ಮಕ (ಋಣಾತ್ಮಕ ) ಪರಿಣಾಮ: ಪ್ರಾದೇಶಿಕತೆಯು ರಾಷ್ಟ್ರದ ಅಭಿವೃದ್ಧಿ, ಪ್ರಗತಿ ಮತ್ತು ಐಕ್ಯತೆಗೆ ಗಂಭೀರ ಬೆದರಿಕೆಯಾಗಿದೆ. ಏಕೆಂದರೆ, ಪ್ರಾದೇಶಿಕತೆಯ ಭಾವನೆಗಳನ್ನು ಕೆರಳಿಸುವಂತಹ ಗುಂಪುಗಳು ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ವಿರುದ್ಧ ಜನರ ಭಾವನೆಗಳನ್ನು ಕೆರಳಿಸುವುದಲ್ಲದೇ ದೇಶದ ಆಂತರಿಕ ಭದ್ರತೆಗೂ ಸವಾಲನ್ನು ಉಂಟುಮಾಡುತ್ತವೆ.

VIII. ಭಾರತದಲ್ಲಿನ ಕೆಲವು ಪ್ರಾದೇಶಿಕವಾದದ ಪ್ರತಿಭಟನೆಗಳು

  1. ದ್ರಾವಿಡಸ್ತಾನದ ಬೇಡಿಕೆ: 1925 ರಲ್ಲಿ ಆರಂಬವಾದ ಸ್ವಾಭಿಮಾನ ಅಥವಾ ಸ್ವಗೌರವದ ಚಳವಳಿಯು ಆರಂಭದಲ್ಲಿ ಬ್ರಾಹ್ಮಣ ವಿರೋಧಿಯಾಗಿದ್ದರೂ, ಮುಂದೆ 1960ರ ವೇಳೆಗೆ ಅದು ಆಂಧ್ರ, ತಮಿಳುನಾಡು ಮತ್ತು ಕೇರಳಗಳನ್ನು ಒಗ್ಗೂಡಿಸಿದ ಪ್ರತ್ಯೇಕ ದ್ರಾವಿಡನಾಡು ಅಥವಾ ತಮಿಳ್ಯಾಂಡ್‌ ಎಂಬ ಪ್ರತ್ಯೇಕ ರಾಷ್ಟ್ರದ ನಿರ್ಮಾಣದತ್ತ ತಿರುಗಿತು.
  2. ತೆಲಂಗಾಣದ ಬೇಡಿಕೆ: 1956 ರಲ್ಲಿ ಏರ್ಪಟ್ಟ Gentleman's agreement ನಲ್ಲಿನ ಕರಾರುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ 1969ರಲ್ಲಿಯೇ ಪ್ರತಿಭಟನೆಗಳು ಆರಂಭವಾಗಿದ್ದವು. ಏಕೆಂದರೆ ಆಂಧ್ರದ ಭಾಗವಾಗಿದ್ದ ತೆಲಂಗಾಣವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಈ ಸಮಸ್ಯೆಯು ಬ್ರಿಟಿಷರ ಕಾಲದಲ್ಲಿಯೇ ಉಂಟಾಗಿತ್ತು. ಏಕೆಂದರೆ ತೆಲಂಗಾಣವು ನಿಜಾಮನ ಆಡಳಿತದಲ್ಲಿದ್ದು, ಪ್ರಗತಿಯಿಂದ ವಂಚಿತವಾಗಿತ್ತು. ಪರಿಣಾಮವಾಗಿ 2013ರಲ್ಲಿ ವಿದ್ಯಾರ್ಥಿಗಳು ಆರಂಭಿಸಿದ ಹೋರಾಟಕ್ಕೆ ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾದ ಕಾರಣ ಅಂದಿನ ಕೇಂದ್ರ ಸರ್ಕಾರ ನೂತನ ತೆಲಂಗಾಣ ರಾಜ್ಯವನ್ನು ರಚಿಸಿತು.
  3. ಕನ್ನಡಿಗರ ವಿರುದ್ಧ ಶಿವಸೇನೆಯ ಪ್ರತಿಭಟನೆಗಳು: 1966ರಲ್ಲಿ ಮರಾಠಿಗರು ತಮ್ಮ ಹೆಮ್ಮೆಯ ಪ್ರತೀಕವಾಗಿ ಮುಂಬೈನಲ್ಲಿದ್ದ ಕನ್ನಡಿಗ ಹೋಟೆಲ್‌ ಉದ್ದಯಮಿಗಳು ಮತ್ತು ಕೆಲಸಗಾರರ ವಿರುದ್ಧ ಪ್ರತಿಭಟನೆಗಳನ್ನು ಆರಂಭಿಸಿದರು.
  4. ಬೋಡೋಲ್ಯಾಂಡ್‌ ಚಳವಳಿ: ಅಸ್ಸಾಂನಲ್ಲಿನ ಬೋಡೊ ಜನಾಂಗದ ಯುವಕರು ಶಿಕ್ಷಣ, ಉದ್ಯೋಗ, ಕೈಗಾರಿಕೆಗಳಂತಹ ಕ್ಷೇತ್ರಗಳಲ್ಲಿನ ಅಸಮರ್ಪಕ ಅಭಿವೃದ್ಧಿಯ ಕಾರಣದಿಂದಾಗಿ ಪ್ರತ್ಯೇಕ ಬೋಡೋಲ್ಯಾಂಡ್‌ ಚಳವಳಿಯನ್ನು ಆರಂಭಿಸಿದರು. ಚಳವಳಿಯು ಹಿಂಸಾತ್ಮಕ ಸ್ವರೂಪದಿಂದ ಕೂಡಿತ್ತು. ಮುಂದೆ ಈ ಚಳವಳಿಗೆ ಹೊರಗಿನವರ ವಲಸೆ, ಜಾತಿ ಮೊದಲಾದ ವಿಷಯಗಳೂ ಕಾರಣವಾದವು.
  5. ಖಲಿಸ್ತಾನ ಚಳವಳಿ: 1980ರಲ್ಲಿ ಪಂಜಾಬಿನಲ್ಲಿ ಆರಂಭವಾದ ಪ್ರತ್ಯೇಕ ಖಲಿಸ್ತಾನದ ಚಳವಳಿಯು ಭಯೋತ್ಪಾದಕತೆಯ ಸ್ವರೂಪವನ್ನು ಪಡೆಯಿತು. ಇದನ್ನು ಹತ್ತಿಕ್ಕಲು ಕೇಂದ್ರಸರ್ಕಾರವು ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು. ಅಂತಿಮವಾಗಿ ಇದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯಲ್ಲಿ ಕೊನೆಗೊಂಡಿತು. ಆದರೂ ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರರು ಇಂದಿಗೂ ಅದರ ಬೇಡಿಕೆಯನ್ನಿಟ್ಟುಕೊಂಡು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
  6. ULFA ದಿಂದ ಬಿಹಾರಿಗಳ ಮೇಲಿನ ದಾಳಿಗಳು: 2003ರಲ್ಲಿ ಅಸ್ಸಾಂ ಬಾಲಕಿಯರ ಮೇಲೆ ಬಿಹಾರದಲ್ಲಿ ನಡೆದ ಅತ್ಯಾಚಾರಗಳಿಂದಾಗಿ ULFA ಸಂಘಟನೆಯವರು ಅಸ್ಸಾಂನಲ್ಲಿದ್ದ ಬಿಹಾರಿ ಕೂಲಿಕಾರ್ಮಿಕರನ್ನು ಕೊಂದರು. ಅಲ್ಲದೇ 2004ರ ಸ್ವಾತಂತ್ರ್ಯ ದಿನದಂದು ULFA ವತಿಯಿಂದ ನಡೆದ ಸ್ಪೋಟದಲ್ಲಿ 10-12 ಜನ ಸತ್ತರು. ಮುಂದೆ 2007ರ ಜನವರಿ ಮತ್ತು ಮಾರ್ಚ್‌ ತಿಂಗಳಲ್ಲಿನ ಸ್ಪೋಟಗಳಲ್ಲಿಯೂ 62 ಜನ ಹಿಂದಿ ಭಾಷಿಕ ಕೂಲಿಯವರು ಮತ್ತು 6 ಜನ ನಾಗರೀಕರು ಸತ್ತರು. ಜೊತೆಗೆ ರಕ್ಷಣಾ ಪಡೆಗಳ ವಿರುದ್ಧವೂ ULFA ಪ್ರತಿಭಟನೆಗಳು ನಡೆದವು.
  7. ಉತ್ತರ ಭಾರತೀಯರ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯ  (MNS) ಪ್ರತಿಭಟನೆಗಳು: ಉತ್ತರ ಭಾರತೀಯರ ಅಧಿಕ ವಲಸೆ ಮತ್ತು ಉದ್ಯೋಗವಕಾಶಗಳ ಕೊರತೆಯಿಂದಾಗಿ 2008ರಲ್ಲಿ ಉತ್ತರ ಭಾರತೀಯರ ವಿರುದ್ಧ ನಡೆಸಿದ ಪ್ರತಿಭಟನೆಗಳಲ್ಲಿ ಹಿಂದಿ ಭಾಷಾ ಸಿನಿಮಾಗಳ ಬಹಿಷ್ಕಾರ ಮತ್ತು ಮಹಾರಾಷ್ಟ್ರದಾದ್ಯಂತ ಉತ್ತರ ಭಾರತೀಯ ವ್ಯಾಪಾರಿಗಳ ವಿರುದ್ಧ ಪ್ರತಿಭಟನೆಗಳು ನಡೆದವು.
  8. ಬಿಹಾರಿಗಳ ವಿರುದ್ಧ ತಮಿಳರ ಪ್ರತಿಭಟನೆಗಳು: ಇತ್ತೀಚಿಗೆ 2023ರಲ್ಲಿ ತಮಿಳುನಾಡಿನಲ್ಲಿನ ಬಿಹಾರದ ಕಟ್ಟಡ ಕಾರ್ಮಿಕರ ವಿರುದ್ಧ ಅಲ್ಲಿನ ಜನರು ಪ್ರತಿಭಟನೆಗಳನ್ನು ನಡೆಸಿದರು. ಆಗ ಕೇಂದ್ರ ಸರ್ಕಾರವು ಬಿಹಾರಿಗರಿಗೆ ಸುರಕ್ಷತೆ ಒದಗಿಸಬೇಕಾಯಿತು.
  9. ಕನ್ನಡಿಗರ ಚಳವಳಿಗಳು: ಅನ್ಯಭಾಷಿಕರ ಅಧಿಕ ವಲಸೆಯ ಕಾರಣದಿಂದಾಗಿ (ತಮಿಳು ಮತ್ತು ಹಿಂದಿ) ಕನ್ನಡಿಗರು ಉದ್ಯೋಗವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಮತ್ತು ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ ಎಂಬ ಕಾರಣಗಳಿಂದಾಗಿ ಅನೇಕ ಕನ್ನಡಪರ ಚಳವಳಿಗಳು ನಡೆದಿವೆ.

IX. ಪ್ರಾದೇಶಿಕತೆ ಮತ್ತು ಅದರ ಅಸಮತೋಲನವನ್ನು ತಡೆಗಟ್ಟಲು ಕ್ರಮಗಳು

1) ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವುದು.

2) ಪ್ರಾದೇಶಿಕ ಪಕ್ಷಗಳಿಗೆ ನಿರ್ಬಂಧ ಹೇರುವುದು.

3) ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಗೆ ಅಭಿವೃದ್ದಿಯಲ್ಲಿ ಪ್ರಥಮ ಆದ್ಯತೆ ನೀಡುವುದು.

4) ಸಾಮಾಜಿಕ ಪುನರ್‌ರಚನೆ.

5) ಸಾಂಸ್ಕೃತಿಕ ಸಮ್ಮಿಲನ.

6) ಸಾರಿಗೆ ಮತ್ತು ಸಂಪರ್ಕಗಳ ಅಭಿವೃದ್ಧಿ.

7) ಸೂಕ್ತ ಶಿಕ್ಷಣ.

8) ಸಮೂಹಮಾಧ್ಯಮಗಳ ಸದ್ಬಳಕೆ.

9) ವಿಫುಲ ಉದ್ಯೋಗವಕಾಶಗಳ ನಿರ್ಮಾಣ.

10) ಹಿಂದುಳಿದ ರಾಜ್ಯಗಳಿಗೆ ವಿಶೇಷ ಆರ್ಥಿಕ ನೆರವು.

11) ವಿಭಜಿತ ರಾಜ್ಯಗಳಿಗೆ ವಿಶೇಷ ಸ್ಥಾನ-ಮಾನ ನೀಡುವುದು.

12) ರಾಷ್ಟ್ರೀಯ ಭಾವೈಕ್ಯತೆಯನ್ನು ವೃದ್ಧಿಸುವುದು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧