ಅಧ್ಯಾಯ ೧೧. ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಮಂಡಲ್ ಆಯೋಗ, ಜ್ಯೇಷ್ಟತೆ ಮತ್ತು ಮೀಸಲಾತಿ.
ಪೀಠಿಕೆ: ಭಾರತದ
ಸಂವಿಧಾನವು ತನ್ನ 14, 15 ಮತ್ತು 16ನೆ ವಿಧಿಗಳಲ್ಲಿ
ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡಿದೆ. ಅದರ ಪ್ರಕಾರ: ವಿಧಿ “೧೬. ಸಾರ್ವಜನಿಕ ನಿಯೋಜನೆಯ ವಿಷಯದಲ್ಲಿ
ಸಮಾನಾವಕಾಶ: ಮತ್ತು ಉಪವಿಧಿ (೧) ರಾಜ್ಯದ ಅಧೀನದಲ್ಲಿರುವ ಯಾವುದೇ ಪದಕ್ಕೆ ಸಂಬಂಧಿಸಿದಂತೆ ನಿಯೋಜನೆ
ಅಥವಾ ನೇಮಕದ ವಿಷಯದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶವಿರತಕ್ಕದ್ದು” ಎಂದು ಹೇಳುತ್ತದೆ. ಅದನ್ನು
ಅನುಷ್ಠಾನಗೊಳಿಸಲು 1953 ರಲ್ಲಿ ಸಾಮಾಜಿಕ ಸುಧಾರಕರಾಗಿದ್ದ ಕಾಕಾ ಕೇಳ್ಕರ್ ಅವರ ನೇತೃತ್ವದ ಆಯೋಗವನ್ನು ರಚಿಸಿದರೂ ಅದು ನೀಡಿದ ವರದಿಯು
ಜಾರಿಗೆ ಬರಲಿಲ್ಲ. ಮುಂದೆ ಇದೇ ವಿಷಯಕ್ಕೆ ರಚನೆಗೊಂಡ ಮಂಡಲ್ ವರದಿಯು ಒಂದು ದಶಕದ ಕಾಲ ಮೂಲೆಗುಂಪಾಗಿತ್ತು. ಆದರೆ, ಮೂವತ್ತು ವರ್ಷಗಳ ಹಿಂದೆ,
ಆಗಸ್ಟ್ 7, 1990 ರಂದು, ಆಗಿನ ಪ್ರಧಾನ ಮಂತ್ರಿ
ವಿ.ಪಿ. ಸಿಂಗ್ ಒಂದು
ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡರು, ಅದು ಭಾರತೀಯ ರಾಜಕೀಯ
ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಮಾರ್ಗವನ್ನು ಬದಲಾಯಿಸಿತು. ಆಗಿನ ಸರ್ಕಾರವು ಮಂಡಲ್
ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ನಿರ್ಧರಿಸಿತು ಮತ್ತು
ಸರ್ಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ
(ಒಬಿಸಿ) ಮೀಸಲಾತಿಯನ್ನು ತೆರೆಯುತ್ತದೆ. ಕೇಂದ್ರ ಸರ್ಕಾರಿ ಸೇವೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿನ ಉದ್ಯೋಗಗಳಲ್ಲಿ
ಒಬಿಸಿಗಳು 27% ಮೀಸಲಾತಿ ಪಡೆಯುವುದಾಗಿ ಅವರು ಘೋಷಿಸಿದರು. ಇದು
ಬಹುಶಃ ವಿಶ್ವದ ಅತಿದೊಡ್ಡ ದೃವೀಕರಣ ಕ್ರಿಯಾ ಕಾರ್ಯಕ್ರಮವಾಗಿದೆ. ಈ ನಿರ್ಧಾರವು ಸಾಮಾಜಿಕ
ನ್ಯಾಯದ ಸಾಧನವಾಗಿ ಕಡಿವಾಣವಿಲ್ಲದ ಚಿತ್ರಹಿಂಸೆ ಮತ್ತು ಬಹಿಷ್ಕಾರಕ್ಕೆ ಆಧಾರವಾಗಿರುವ ಜಾತಿಯ ನಿರೂಪಣೆಯನ್ನು ಬದಲಾಯಿಸಿತು. ಆದರೆ, ಇದು ಮುಂದೆ ಹಲವಾರು ಬಗೆಹರಿಸಲಾಗದ ಸಮಸ್ಯೆಗಳಿಗೆ ಕಾರಣವಾಯಿತು. ಅಲ್ಲದೇ ಇದು ವ್ಯಾಪಕ ವಿರೋಧ
ಮತ್ತು ಮತ ಬ್ಯಾಂಕ್ ರಾಜಕೀಯಕ್ಕೆ
ಕಾರಣವಾಯಿತು.
ಒಬಿಸಿ ಮೀಸಲಾತಿಯ ಐತಿಹಾಸಿಕ ಹಿನ್ನೆಲೆ
■ ಮೊದಲ ಹಿಂದುಳಿದ ವರ್ಗಗಳ ಆಯೋಗದ ಸ್ಥಾಪನೆ: ಜನವರಿ 1953 ರಲ್ಲಿ,
ಜವಾಹರಲಾಲ್ ನೆಹರು ಸರ್ಕಾರವು ಸಾಮಾಜಿಕ ಸುಧಾರಕ ಕಾಕಾ ಕಲೆಲ್ಕರ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಿಂದುಳಿದ ವರ್ಗ ಆಯೋಗವನ್ನು ಸ್ಥಾಪಿಸಿತ್ತು. ಆಯೋಗವು ತನ್ನ ವರದಿಯನ್ನು ಮಾರ್ಚ್ 1955 ರಲ್ಲಿ
ಸಲ್ಲಿಸಿ, 2,399 ಹಿಂದುಳಿದ
ಜಾತಿಗಳು ಅಥವಾ ಸಮುದಾಯಗಳನ್ನು ಪಟ್ಟಿ ಮಾಡಿ, ಅವುಗಳಲ್ಲಿ 837 ಅನ್ನು
‘ಅತ್ಯಂತ ಹಿಂದುಳಿದವು’
ಎಂದು ವರ್ಗೀಕರಿಸಿತ್ತುತು. ಆದರೆ, ಆ
ವರದಿಯು ಜಾರಿಗೆ ಬರಲಿಲ್ಲ.
■ ಎರಡನೇ ಹಿಂದುಳಿದ ವರ್ಗಗಳ ಆಯೋಗದ ಸ್ಥಾಪನೆ: ಜನವರಿ 1, 1979 ರಂದು
ಮೊರಾರ್ಜಿ ದೇಸಾಯಿ ಸರ್ಕಾರವು ಎರಡನೇ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರನ್ನಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಬಿಂದೇಶ್ವರಿ ಪ್ರಸಾದ್ ಮಂಡಲ್ ಅವರನ್ನು ನೇಮಿಸಿತು.
ಶ್ರೀಯುತ ಮಂಡಲ್ ಅವರು
ಎರಡು ವರ್ಷಗಳ ನಂತರ ಡಿಸೆಂಬರ್ 31, 1980 ರಂದು
ತಮ್ಮ ವರದಿಯನ್ನು ಸರ್ಕಾರಕ್ಕೆ
ಸಲ್ಲಿಸಿದರು. ಆದರೆ, ಆ ವೇಳೆಗೆ, ಮೊರಾರ್ಜಿ ದೇಸಾಯಿಯವರ ಸರ್ಕಾರ ಬಿದ್ದು ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದರು ಮತ್ತು ಮಂಡಲ್
ವರದಿಯು ಸುಮಾರು ಒಂದು ದಶಕದವರೆಗೆ ನೆನೆಗುದಿಗೆ
ಬಿದ್ದಿತು.
■ ಮಂಡಲ್ ಆಯೋಗದ ಅನುಷ್ಠಾನ: 1990 ರಲ್ಲಿ,
ಆಗಿನ ಪ್ರಧಾನ ಮಂತ್ರಿ ವಿ ಪಿ ಸಿಂಗ್ ಅವರು ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ಸಂಸತ್ತಿನಲ್ಲಿ ಘೋಷಿಸಿದರು.
ಈ ಪ್ರಕಟಣೆಯು ಭಾರತದಾದ್ಯಂತ, ವಿಶೇಷವಾಗಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಯಿತು. ಆ
ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡರು
ಮತ್ತು ಅವರಲ್ಲಿ ಕೆಲವರು ಸತ್ತರು.
■ ಇಂದಿರಾ ಸಾಹ್ನಿ ಪ್ರಕರಣ: ತೀವ್ರ ವಿರೋಧದ ನಂತರ ಒಬಿಸಿ ಮೀಸಲಾತಿ
ವಿಷಯವು 1992 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಈ ಪ್ರಕರಣವನ್ನು ‘ಇಂದಿರಾ
ಸಾಹ್ನಿ ತೀರ್ಪು’ ಅಥವಾ ಮಂಡಲ್ ಪ್ರಕರಣ
ಎಂದು ಕರೆಯಲಾಗುತ್ತದೆ. ಈ
ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್
ಇತರ ಹಿಂದುಳಿದ ವರ್ಗಗಳಿಗೆ
ಶೇ. 27 ಮೀಸಲಾತಿ ನೀಡುವುದನ್ನು ಎತ್ತಿಹಿಡಿಯಿತು. ಆದರೆ ಸಾಮಾಜಿಕ ಮತ್ತು
ಶೈಕ್ಷಣಿಕ ಹಿಂದುಳಿದಿರುವಿಕೆಗೆ ಜಾತಿಯೊಂದೇ ಏಕೈಕ
ಸೂಚಕವಲ್ಲ ಎಂದು ಹೇಳಿತು. ಅಲ್ಲದೆ,
ಮಂಡಲ್ ಆಯೋಗದ ಶಿಫಾರಸುಗಳ ಪ್ರಯೋಜನಗಳು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ತಲುಪಲು ಕೆನೆ ಪದರದ ಮಾನದಂಡವನ್ನು
ಶಿಫಾರಸ್ಸು ಮಾಡಿತು.
ಮಂಡಲ್ ಆಯೋಗದ ನಂತರ:-
■ ಮಂಡಲ್ ಆಯೋಗದ ವರದಿಗೆ
ವಿರೋಧ: ಮುಖ್ಯವಾಗಿ ಎರಡು ಅಂಶಗಳನ್ನು
ಆಧರಿಸಿ ಈ ವರದಿಯನ್ನು ವಿರೋಧಿಸಲಾಯಿತು;
ಮೀಸಲಾತಿಯನ್ನು ನೀಡುವ ಮೂಲಕ
ಅರ್ಹತೆಯನ್ನು ಅಂದರೆ
ಮೆರಿಟ್ ಅನ್ನು ಕಡೆಗಣಿಸಲಾಗುತ್ತದೆ
ಮತ್ತು ಮೀಸಲಾತಿಯನ್ನು ನೀಡಲು
ಕೇವಲ ಆರ್ಥಿಕ ಮಾನದಂಡವನ್ನು ಅನುಸರಿಸಬಹುದೇ? ಎಂಬುವೆ ಆ ಎರಡು
ಅಂಶಗಳು. ಅಲ್ಲದೇ
, ಇದು ಮತ-ಬ್ಯಾಂಕ್ ರಾಜಕೀಯವನ್ನು
ಪ್ರೋತ್ಸಾಹಿಸುತ್ತದೆ
ಮತ್ತು ಮೀಸಲಾತಿ ನೀತಿಯ ಮೂಲ ಉದ್ದೇಶವನ್ನೇ ನಿರ್ನಾಮ
ಮಾಡುತ್ತದೆ.
■ ಮೀಸಲಾತಿ ನೀತಿಯ ಉದ್ದೇಶಿತ ಗುರಿಯ ಕಡೆಗಣನೆ: ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ, ರಾಜಕೀಯ ಪಕ್ಷಗಳು ಮೀಸಲಾತಿಯನ್ನು ವಿಸ್ತರಿಸುತ್ತಲೇ ಇರುವುದರಿಂದ
ಮೀಸಲಾತಿ ಸೌಲಭ್ಯವನ್ನು ಬಳಸಿಕೊಂಡು
ಈಗಾಗಲೇ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿದಿರುವ ಹಿಂದುಳಿದ ಸಮುದಾಯಗಳು
ಮೀಸಲಾತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ಏಕೆಂದರೆ
ಸುಪ್ರೀಂ ಕೋರ್ಟ್ ಹೇಳಿರುವಂತೆ ಈಗಾಗಲೇ ಮೀಸಲಾತಿಯನ್ನು ಉಪಯೋಗಿಸಿಕೊಂಡು ಮುಂದುವರಿದಿರುವವರು ಆ
ಸಮುದಾಯದಲ್ಲಿನ ಕೆನೆಪದರಕ್ಕೆ ಅಂದರೆ ಹಿಂದುಳಿದವರಲ್ಲೇ ಮುಂದುವರಿದವರಾಗಿರುತ್ತಾರೆ; ಆದ್ದರಿಂದ ಅವರು
ತಮ್ಮ ಮೀಸಲಾತಿಯ ಹಕ್ಕನ್ನು ಇತರರಿಗೆ ಅಂದರೆ ತಮ್ಮದೇ ಸಮುದಾಯದಲ್ಲಿ ಇನ್ನೂ ಹಿಂದುಳಿದವರಿಗೆ ಬಿಟ್ಟುಕೊಡಬೇಕು
ಎಂಬ ಅಂಶವನ್ನು ಕಡೆಗಣಿಸುತ್ತದೆ. ಕೆನೆಪದರದವರನ್ನು ಗುರ್ತಿಸದಿದ್ದರೆ ಮೀಸಲಾತಿಯನ್ನು ನೀಡುವ ಸದುದ್ದೇಶವೇ
ದುರುಪಯೋಗವಾಗುತ್ತದೆ ಮತ್ತು ಐತಿಹಾಸಿಕವಾಗಿ ಉಂಟಾಗಿರುವ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
■ ಅಸಮಾನ ಸೌಲಭ್ಯಗಳು
ಮತ್ತು ರಾಜಕೀಯ ವಿಭಜನೆ: ದೆಹಲಿ
ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾಗಿದ್ದ ಜಿ. ರೋಹಿಣಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್
2, 2017 ರಂದು ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಇತರ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ
ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಇದುವರೆಗೂ ನೀಡಿರುವ ಮೀಸಲಾತಿಯ ಪ್ರಮಾಣದ
ಅಧ್ಯಯನಕ್ಕೆಂದು ಒಂದು ಸಮಿತಿಯನ್ನು ರಚಿಸಲಾಯಿತು. ರೋಹಿಣಿ ಆಯೋಗದ ಪ್ರಕಾರ, ಒಬಿಸಿಗಳಲ್ಲಿನ ಸುಮಾರು 6,000 ಜಾತಿಗಳು
ಮತ್ತು ಸಮುದಾಯಗಳಲ್ಲಿ ಕೇವಲ
40 ಸಮುದಾಯಗಳು ಮಾತ್ರ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶ ಮತ್ತು
ಉದ್ಯೋಗಗಳಲ್ಲಿ ಶೇ. 50 ರಷ್ಟು ಮೀಸಲಾತಿ
ಪ್ರಯೋಜನಗಳನ್ನು ಪಡೆದಿವೆ.
ಇದು ಪ್ರಸ್ತುತ
ತಲೆ ಎತ್ತಿರುವ ರಾಜಕೀಯ ವಿಭಜನೆಗೆ ಕಾರಣವಾಗಿದೆ ಮತ್ತು ಉಪ-ವರ್ಗೀಕರಣದ ಬೇಡಿಕೆಗಳಿಗೆ ಕಾರಣವಾಗಿದೆ.
■ ಸಾಮಾಜಿಕ ಅಶಾಂತಿಗೆ ಕಾರಣ: ಮೀಸಲಾತಿಯ ನೀತಿಯು ಮೀಸಲಾತಿಯ ಸೌಲಭ್ಯ ಸಿಗದ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಮುಂದೇನು ಮಾಡಬಹುದು:- ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಯಿತು. ಆದರೆ, ಆಯೋಗದ ಅರ್ಧದಷ್ಟು ಶಿಫಾರಸುಗಳನ್ನು ಮಾತ್ರ ಜಾರಿಗೆ ತರಲಾಗಿದೆ. ಹಿಂದುಳಿದಿರುವವರ ಸಮಸ್ಯೆಯನ್ನು ಮೂಲದಲ್ಲಿ ಪರಿಹರಿಸದ
ಹೊರತು ಮೀಸಲಾತಿ ಕೇವಲ ಕೆಲವರ
ಅನುಕೂಲದ ಮಾನದಂಡವಾಗಿ ಉಳಿಯುತ್ತದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಹೀಗಾಗಿ, ಇದು ಭೂ ಪುನರ್ವಿತರಣೆ ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿ
ಬದಲಾವಣೆಯನ್ನು ಮಾಡಲು ಶಿಫಾರಸು
ಮಾಡಿದೆ.
■ ಕೃಷಿಯನ್ನು ಆರ್ಥಿಕವಾಗಿ ಲಾಭದಾಯಕವಾಗಿಸುವುದು: ಇತರ ಹಿಂದುಳಿದಿರುವ ವರ್ಗದಲ್ಲಿ ಬಹುತೇಕ ಸಣ್ಣ ಭೂಮಾಲೀಕರು, ಬಾಡಿಗೆದಾರರು, ಕೃಷಿ ಕಾರ್ಮಿಕರು, ಬಡ ಹಳ್ಳಿಯ ಕುಶಲಕರ್ಮಿಗಳು, ಕೌಶಲ್ಯರಹಿತ ಕಾರ್ಮಿಕರೇ
ಇರುವುದರಿಂದ, ಕೃಷಿಯನ್ನು (ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು) ಆರ್ಥಿಕವಾಗಿ ಲಾಭದಾಯಕ
ಕಸುಬನ್ನಾಗಿಸುವುದು ಕಡ್ಡಾಯವಾಗಿದೆ.
■ ಮೀಸಲಾತಿಯ ಬೇಡಿಕೆಯನ್ನು ಕಡಿಮೆ ಮಾಡಲು ಖಾಸಗಿ ಹೂಡಿಕೆಯನ್ನು ಪುನರುಜ್ಜೀವನಗೊಳಿಸುವುದು: ಖಾಸಗಿ ವಲಯದ ಉತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಇದು ಖಾಸಗಿ ವಲಯದಲ್ಲಿನ ಲಾಭದಾಯಕ ಉದ್ಯೋಗಗಳತ್ತ ಯುವಕರನ್ನು ಆಕರ್ಷಿಸುತ್ತದೆ. ಇದರಿಂದ
ಮೀಸಲಾತಿ ಹಾಗೂ
ಸರ್ಕಾರಿ ಉದ್ಯೋಗಗಳ ಬೇಡಿಕೆಯು
ಕಡಿಮೆ ಆಗುತ್ತದೆ.
■ ಮೀಸಲಾತಿ ನೀತಿಯ ವಿಮರ್ಶೆ: ಮೀಸಲಾತಿಯು ಸಾಮಾಜಿಕ
ಸಮಾನತೆಯನ್ನು ತರಲು ಇರುವ ಪ್ರಬಲ ಸಾಧನವಾಗಿದೆ. ಸ್ವಾತಂತ್ರ್ಯದ 75 ವರ್ಷಗಳ
ನಂತರ ಭಾರತದಲ್ಲಿ ಹಿಂದುಳಿದ
ವರ್ಗಗಳ ಅಭಿವೃದ್ಧಿ ಸಾಕಷ್ಟು ಆಗಿದ್ದರೂ ಸಾಮಾಜಿಕ,
ಆರ್ಥಿಕ ಮತ್ತು ರಾಜಕೀಯ
ಅಸಮಾನತೆ ಇನ್ನೂ ಉಳಿದಿದೆ. ಆದ್ದರಿಂದ, ಮೀಸಲಾತಿ ನೀತಿಯನ್ನು ಪರಿಶೀಲಿಸಲು ಮತ್ತು ಸಮತಾವಾದಿ ಸಮಾಜವನ್ನು ನಿರ್ಮಿಸಲು ಬಲವಾದ ರಾಜಕೀಯ ಇಚ್ಚಾಶಕ್ತಿಯ ಅಗತ್ಯವಿದೆ.
ಉಪಸಂಹಾರ:- ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನವು ಹಿಂದುಳಿದ ಸಮುದಾಯಗಳಿಗೆ ಅಧಿಕಾರ
ನೀಡಿತು. ಆದರೆ ಮೀಸಲಾತಿಯನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ
ಚಳವಳಿ ಅಥವಾ ಮುಷ್ಕರಗಳಿಗೆ ಅವಕಾಶವಿಲ್ಲದಂತೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಸಾಮಾಜಿಕ
ನ್ಯಾಯವನ್ನು ಒದಗಿಸುವುದಕ್ಕಾಗಿ ಮೀಸಲಾತಿ ನೀತಿಯ ಅನುಷ್ಠಾನಕ್ಕೆ ಸೂಕ್ತವಾದ ಮಾರ್ಪಾಡುಗಳನ್ನು ಮಾಡುವ
ಅಗತ್ಯವಿದೆ.
*****
Comments
Post a Comment