ಬಹಮನೀ ರಾಜ್ಯ 1347-1538

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಿದೆ.

ಬಹಮನೀ ರಾಜ್ಯ 1347-1538 ಅವಧಿಯ ಉತ್ತರ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಮತ್ತು ದಖನ್ನಿನ ಬಹುಭಾಗದ ಮೇಲೆ ಒಡೆತನ ನಡೆಸಿದ ಮತ್ತು ಕರ್ನಾಟಕದಲ್ಲಿ ನೆಲೆಹೂಡಿದ ಪ್ರಥಮ ಇಸ್ಲಾಮ್ ರಾಜ್ಯ. ಸುಮಾರು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದ ಇತಿಹಾಸದಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಿತು. ದೆಹಲಿಯ ಸುಲ್ತಾನ ಮಹಮ್ಮದ್-ಬಿನ್-ತುಗಲಕನ ಆಳ್ವಿಕೆಯ ಕಾಲದಲ್ಲಿ ಅವನ ದುರಾಡಳಿತದ ವಿರುದ್ಧ ದಖನ್ನಿನ ಸರದಾರರು ದಂಗೆಯೆದ್ದು ದೌಲತಾಬಾದ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ತಮ್ಮಲ್ಲೇ ಒಬ್ಬನಾದ ಆಫ್ಘನ್ ಇಸ್ಮಾಯಿಲ್ ಮುಖ್ ಎಂಬುವನನ್ನು ನಾಸಿರ್ಉದ್ದೀನ್ ಷಾ ಎಂಬ ಬಿರುದನ್ನು ನೀಡಿ ದಖನ್ನಿನ ರಾಜನೆಂದು ಘೋಷಿಸಿದರು. ಇಸ್ಮಾಯಿಲ್ ಮುಖ್ ವೃದ್ಧ, ಸುಖಲೋಲುಪ, ಜವಾಬ್ದಾರಿ ಸ್ಥಾನಕ್ಕೆ ಅನರ್ಹನೆನಿಸಿದ. ಸ್ವಲ್ಪ ಕಾಲದಲ್ಲಿಯೇ ಈತ ತನಗಿಂತಲೂ ಸಮರ್ಥನಾದ ಹಸನ್ ಗಂಗುವಿಗೆ ಅಧಿಕಾರ ಬಿಟ್ಟುಕೊಟ್ಟ. ದಖನ್ನಿನ ಸರದಾರರು ಇವನನ್ನು ಅಬುಲ್ ಮುಜಫರ್ ಅಲ್ಲಾಉದ್ದೀನ್ ಹಸನ್ ಬಹವiನ್ ಷಾ ಎಂಬ ಬಿರುದಿನಿಂದ 1347 ಆಗಸ್ಟ್ 3ರಂದು ರಾಜನೆಂದು ಘೋಷಿಸಿದರು.

ಹಸನ್ ಪರ್ಷಿಯನ್ ವೀರ ಇಸ್ ಫಂದಿಯಾರ್ ಮಗ ಬಹುಮನನ ಸಂತತಿಯವನೆಂದು ಕೆಲವರ ಅಭಿಪ್ರಾಯ. ಕೆ. ಆರ್. ಕನುಂಗೋ ಅವರ ಪ್ರಕಾರ ಸಂತತಿಯ ಮೂಲಪುರುಷ ಹಸನ್ ಗಂಗು ಮತಾಂತರಗೊಂಡ ರೈನ್ ಎಂಬ ಹಿಂದು ಪಂಗಡಕ್ಕೆ ಸೇರಿದವ. ಗಂಗೂ ಎಂಬುವುದು ಪಶ್ಚಿಮ ಪಂಜಾಬಿನಲ್ಲಿದ್ದ ರೈನ ಪಂಗಡದ ಉಪಶಾಖೆ ಎಂದು ವಿಷಯದ ಮೇಲೆ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಹಸನ್ ಬಡತನದಲ್ಲಿ ಹುಟ್ಟಿ, ತನ್ನ ಸ್ವಸಾಮರ್ಥ್ಯದಿಂದ ಉಚ್ಛ ಸ್ಥಾನಕ್ಕೇರಿದ ಎಂಬುದು ನಿರ್ವಿವಾದದ ಸಂಗತಿ.

ಬಹಮನಿ ರಾಜ್ಯದ ಆಳ್ವಿಕೆಯ ಕಾಲವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಗುಲ್ಬರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದ ಕಾಲ (1347-1422) ಮತ್ತು ಬಿದರೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ್ದು (ಜೂನ್ 1424-1528). ಇದಾದನಂತರದ ಬಹುಮನಿ ರಾಜ್ಯ ಐದು ಷಾಹಿ ರಾಜ್ಯಗಳಾಗಿ ಒಡೆದು ಹೋಯಿತು. ಎರಡೂ ಕಾಲಗಳಲ್ಲಿ ಬಹುಮನೀ ರಾಜ್ಯ ವಿಸ್ತರಣೆ ಮತ್ತು ವಿಜಯನಗರದೊಡನೆ ಸತತವಾಗಿ ಯುದ್ಧ ನಡೆಯುತ್ತಿದ್ದುದು ಮುಖ್ಯಾಂಶ. ಮೊದಲನೆಯ ದೊರೆ ಅಲ್ಲಾಉದ್ದೀನ್ ಹಸನ್ ಬಹಮನ್ ಷಾ (1347-58) ದೂರದೃಷ್ಟಿಯುಳ್ಳ ಸಮರ್ಥ ದೊರೆ. ರಾಜಧಾನಿಯನ್ನು ದೌಲತಾಬಾದಿನಿಂದ ಗುಲ್ಬರ್ಗಕ್ಕೆ ಬದಲಾಯಿಸಿ ಅದಕ್ಕೆ ಅಹಸಾನಬಾದ್ ಎಂದು ಹೆಸರಿಟ್ಟ. ರಾಜಧಾನಿಯಾದ ಸ್ವಲ್ಪಕಾಲದಲ್ಲಿ ಗುಲ್ಬರ್ಗ ನಗರ ಪ್ರಸಿದ್ಧಿಗೆ ಬಂದಿತಲ್ಲದೆ, ಅಲ್ಲಿ ಅರಮನೆ, ಪೇಟೆಬೀದಿ, ಮಸೀದಿ ಮತ್ತು ಇತರ ಅನೇಕ ಸಾರ್ವಜನಿಕ ಕಟ್ಟಡಗಳು ತಲೆಯೆತ್ತಿದುವು. ಇದು ದಖನ್ನಿನ ಕೇಂದ್ರದಲ್ಲಿದ್ದುದರಿಂದ ನಗರ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಪ್ರದೇಶಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿತ್ತು. ಅಧಿಕಾರ ಸ್ಥಾಪಿಸಿದ ತತ್ಕ್ಷಣ ಬಹಮನ್ ಷಾ ಚಿಕ್ಕಪುಟ್ಟ ಪಾಳೆಯಗಾರರನ್ನು ತನ್ನ ಹತೋಟಿಗೆ ಒಳಪಡಿಸಿದ. ದಖನ್ನಿನಲ್ಲಿದ್ದ ತೊಗಲಕ್ ಸೇನೆಯನ್ನು ಹೊಡೆದೋಡಿಸಲು ನಾಸಿಕ್ ನಗರಕ್ಕೆ ಈತ ಸೇನೆಯ ತುಕಡಿಯೊಂದನ್ನು ಕಳುಹಿಸಿದ. ಬಿಜಾಪುರವನ್ನು ಆಕ್ರಮಿಸಿಕೊಂಡು ಕೊಲ್ಲಾಪುರ, ಮತ್ತು ಕೊಂಕಣ ಬಂದರುಗಳಾದ ದಾಬೋಲ್ ಮತ್ತು ಖಾರೆ ಪಟ್ಟಣಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಗುಲ್ಬರ್ಗದ ಪೂರ್ವ ಮತ್ತು ದಕ್ಷಿಣ ಭಾಗಗಳಿಗೆ ದಂಡಯಾತ್ರೆ ಕೈಗೊಂಡ. ಸೂರೆ ಮಾಡಿದ ನಿಧಿಯಿಂದ ಬಲವಾದ ಸೇನೆ ಕಟ್ಟಿದ. ಈತನ ರಾಜ್ಯ ಉತ್ತರದಲ್ಲಿ ವೈನಗಂಗಾ ನದಿಯಿಂದ ದಕ್ಷಿಣದಲ್ಲಿ ಕೃಷ್ಣ ನದಿಯವರೆಗೂ ಪಶ್ಚಿಮದಲ್ಲಿ ದೌಲತಾಬಾದ್ನಿಂದ ಪೂರ್ವದಲ್ಲಿ ಬೊಂಗೀರ್ ನಡುವೆ ವ್ಯಾಪಿಸಿತ್ತು. ಆಡಳಿತ ವ್ಯವಸ್ಥೆಗಾಗಿ ಈತ ತನ್ನ ರಾಜ್ಯವನ್ನು ಗುಲ್ಬರ್ಗ, ದೌಲತಾಬಾದ್, ಬೀರಾರ್ ಮತ್ತು ಬೀದರ್ ಎಂಬ ನಾಲ್ಕು ಪ್ರಾಂತ್ಯಗಳಾಗಿ ವಿಂಗಡಿಸಿ, ಪ್ರಾಂತ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟ. ಈತನ ಸಾಹಸ ಕಾರ್ಯಗಳು ದಕ್ಷಿಣದ ಪ್ರಬಲ ರಾಜ್ಯಗಳಾದ ವಾರಂಗಲ್ ಮತ್ತು ವಿಜಯನಗರಗಳ ಗಮನ ಸೆಳೆಯುವಂತೆ ಮಾಡಿದುವು. ಸಮಕಾಲೀನ ಬರೆಹಗಾರರು, ಈತ ನಿಷ್ಪಕ್ಷಪಾತ ದೊರೆ, ಪ್ರಜಾರಕ್ಷಕ ಹಾಗೂ ಧರ್ಮಶ್ರದ್ಧೆಯುಳ್ಳವ, ಇವನ ಆಳ್ವಿಕೆಯ ಕಾಲದಲ್ಲಿ ಇವನ ಪ್ರಜೆಗಳೂ ಸೈನಿಕರೂ ಸಂಪೂರ್ಣವಾಗಿ ತೃಪ್ತ ಜೀವನ ನಡೆಸುತ್ತಿದ್ದರೆಂದು ಪ್ರಶಂಸಿಸಿದ್ದಾರೆ.

ಹಸನ್ ಗಂಗು 1358ರಲ್ಲಿ ಮರಣ ಹೊಂದಿದ ಮೇಲೆ ಅವನ ಮಗ ಒಂದನೆಯ ಮಹಮ್ಮದ್ (1358-75) ಸಿಂಹಾಸನಕ್ಕೆ ಬಂದ. ಈತನ ಆಳ್ವಿಕೆಯ ಉದ್ದಕ್ಕೂ ವಿಜಯನಗರದೊಡನೆ ಸತತವಾಗಿ ಯುದ್ಧ ನಡೆಯಿತು. ವಾರಂಗಲ್ ಮತ್ತು ವಿಜಯನಗರಗಳು ಒಂದುಗೂಡಿ ಬಹಮನೀ ರಾಜ್ಯದ ಮೇಲೆ ದಾಳಿ ನಡೆಸಿದುವು. ಮಹಮ್ಮದ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ.

ಮತೀಯವಾದ ಅಂಶಕ್ಕಿಂತ ರಾಜಕೀಯ ಮತ್ತು ಆರ್ಥಿಕ ಅಂಶಗಳೇ ಬಹಮನೀ ವಿಜಯನಗರಗಳ ನಡುವಣ ಕಹಿ ಸಂಬಂಧಗಳಿಗೆ ಪ್ರೇರಕಶಕ್ತಿಯಾಗಿದ್ದುವು. ವಾರಂಗಲ್ ಕಾಪಯ ನಾಯಕ ಕಾಟಾಲ ಕೋಟೆಯನ್ನೂ ಬುಕ್ಕ ಕೃಷ್ಣ-ತುಂಗ ನಡುವಣ ಪ್ರದೇಶವನ್ನೂ ಬಿಟ್ಟುಕೊಡುವಂತೆ ಬಹಮನಿ ಸುಲ್ತಾನನನ್ನು ಕೇಳಿಕೊಂಡರು. ಬೇಡಿಕೆಯನ್ನು ನಿರಾಕರಿಸಿದ್ದಲ್ಲದೆ ಮಹಮ್ಮದ್ ಎರಡೂ ರಾಜ್ಯಗಳ ಮೇಲೆ ತನ್ನದೆ ಆದ ಬೇಡಿಕೆಯನ್ನು ಮುಂದಿಟ್ಟಾಗ ಅದು ಯುದ್ಧದಲ್ಲಿ ಪರ್ಯವಸಾನಗೊಂಡಿತು. 1362ರಲ್ಲಿ ಬುಕ್ಕ ರಾಯಚೂರ್ ದೋ ಆಬ್ ಮೇಲೆ ದಾಳಿಮಾಡಿದ. ವಾರಂಗಲ್ ಸೇನೆ ಕೌಲಾಸ್ ಕೋಟೆಯನ್ನು ಮುತ್ತಿತು. ಮಹಮ್ಮದ್ ಕಾಪಯನಾಯಕನ ಮೇಲೆ ಎರಗಿ ಅವನನ್ನು ಸೋಲಿಸಿ ಯುದ್ಧದ ಪರಿಹಾರ ಕೊಡುವಂತೆ ಒಪ್ಪಿಸಿದ. 1363ರಲ್ಲಿ ಮತ್ತೆ ಯುದ್ಧ ಆರಂಭವಾಗಿ ಅದರಲ್ಲೂ ವಾರಂಗಲ್ಲಿನ ದೊರೆ ಸೋತು ಹೋದನಲ್ಲದೇ ಗೋಲ್ಕೊಂಡ ಕೋಟೆಯನ್ನೊಪ್ಪಿಸಿದ. ಅದು ಬಹಮನಿ ರಾಜ್ಯದ ಖಾಯಂ ಗಡಿಯಾಯಿತು. ಮಹಮ್ಮದ್ ಹೆಚ್ಚಿನ ಐಶ್ವರ್ಯವನ್ನು ಸೂರೆ ಮಾಡಿದ್ದರ ಜೊತೆಗೆ, ವಜ್ರವೈಢೂರ್ಯ ಖಚಿತ ಸಿಂಹಾಸನವನ್ನು ಪಡೆದುಕೊಂಡ. ಸಿಂಹಾಸನವೇ ಬಹಮನಿ ಮನೆತನದ ರಾಜಸಿಂಹಾಸನವಾಗಿ ಉಳಿಯಿತು. ವಿಜಯನಗರದ ವಿರುದ್ಧವೂ ಈತ ಜಯಶೀಲನಾಗಿ ಮುದಗಲ್ಲನ್ನು ಪಡೆದ.

ಮಹಮ್ಮದ್ ಉತ್ತರಾಧಿಕಾರಿಗಳು ಅಷ್ಟು ಸಮರ್ಥರಾಗಿರಲಿಲ್ಲ. ಈತನ ಮಗ ಮುಜಾಹಿದ್ (1775-78) ಮೂರು ವರ್ಷಗಳ ಕಾಲ ಆಳಿದ. ವಿಜಯನಗರದ ಮೇಲೆ ನಡೆಸಿದ ಯುದ್ಧದಿಂದ ಹಿಂತಿರುಗಿ ಬರುತ್ತಿದ್ದಾಗ ಇವನ ದಾಯಾದಿ ದಾವೂದ್ ಎಂಬಾತ ಇವನನ್ನು ಕೊಲೆ ಮಾಡಿದ. ಮುಂದೆ ದಾವೂದನಿಗೂ ಅದೇ ಗತಿಯಾಯಿತು. ದಾವೂದನ ತಮ್ಮ ಎರಡನೆಯ ಮಹಮ್ಮದ್ (1378-97) ಸಿಂಹಾಸನ ಏರಿದ. ಹದಗೆಟ್ಟ ದುಸ್ಥಿತಿಯನ್ನು ಉಪಯೋಗಿಸಿಕೊಂಡು ವಿಜಯನಗರದ ಸೇನೆ ಗೋವಾ ಸೇರಿದಂತೆ ಪಶ್ಚಿಮ ಕರಾವಳಿಯ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಸುಸಂಸ್ಕೃತನಾಗಿದ್ದ ಎರಡನೆಯ ಮಹಮ್ಮದ್ ಆಳ್ವಿಕೆ ಶಾಂತಿಪೂರ್ಣವಾಗಿತ್ತು. ಸಾಧುಸಂತರು ಮತ್ತು ಪಂಡಿತರಿಗೆ ತನ್ನ ಆಸ್ಥಾನದಲ್ಲಿ ಆಶ್ರಯ ನೀಡಿದ. ಸ್ವತಃ ಪಂಡಿತನಾಗಿದ್ದ ಸುಲ್ತಾನನನ್ನು ಪ್ರಜೆಗಳು ಆದರದಿಂದ ಗೌರವಿಸಿದರು. ಕ್ಷಾಮ ತಲೆದೋರಿದಾಗ ಮಾಳವ ಮತ್ತು ಗುಜರಾತ್ಗಳಿಂದ ಧಾನ್ಯವನ್ನು ಆಮದು ಮಾಡಿಕೊಂಡ. ಅನಾಥಾಲಯಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದ.

ಎರಡನೆಯ ಮಹಮದ್ ಅನಂತರ ಎರಡನೆಯ ಘಿಯಾಸುದ್ದೀನ್ ಸಿಂಹಾಸನಕ್ಕೆ ಬಂದು ಸ್ವಲ್ಪಕಾಲ ಆಳಿ, ಆಸ್ಥಾನದ ಕುತಂತ್ರಗಳಿಗೆ ಬಲಿಯಾಗಿ ಸಿಂಹಾಸನ ಕಳೆದುಕೊಂಡ.

ಅನಂತರ ಅಧಿಕಾರಕ್ಕೆ ಬಂದವ ತಾಜುದ್ದೀನ್ ಫಿರೋಜ್ (1397-1422). 1397, 1406 ಮತ್ತು 1417 ರಲ್ಲಿ ಈತ ವಿಜಯನಗರದ ಮೇಲೆ ಯುದ್ಧ ನಡೆಸಿದ್ದರಿಂದ ಈತನ ಆಳ್ವಿಕೆ ಪ್ರಸಿದ್ಧಿ ಪಡೆಯಿತು. ಗುಲ್ಬರ್ಗದಲ್ಲಿ ಸಿಂಹಾಸನಕ್ಕಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭ ಉಪಯೋಗಿಸಿಕೊಂಡು ಎರಡನೆಯ ಹರಿಹರ ಬಹಮನಿ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಸಾಗರ ಕೋಟೆಯನ್ನು ಆಕ್ರಮಿಸಿದ. ಸಮರ್ಥನಾಗಿದ್ದ ಫಿರೋಜ್ ಕೋಟೆಯನ್ನು ಮುತ್ತಿ ಪುನಃ ವಶಪಡಿಸಿಕೊಂಡು, ಕೃಷ್ಣಾ ನದಿ ದಾಟಿ ವಿಜಯನಗರದ ಮೇಲೆ ಹಠಾತ್ ದಾಳಿ ನಡೆಸಿದ. ಯುದ್ಧಗಳಿಂದ ಎರಡುಪಕ್ಷಗಳಿಗೂ ಯಾವ ರೀತಿಯ ಜಯವೂ ದೊರಕಲಿಲ್ಲ. ಮಧ್ಯಪ್ರದೇಶದ ಕೇರ್ಲಾದ ರಾಜ ನರಸಿಂಗರಾಯನ ಮೇಲೆ ಯುದ್ಧ ಮಾಡಿ ಅವನನ್ನು ಫಿರೋಜ್ ಸೋಲಿಸಿದ. ತೆಲಂಗಾಣದ ಕಾತಯ ವೇಮನನ್ನು ಶರಣಾಗತನಾಗುವಂತೆ ಮಾಡಿದ. ಆದರೆ ಅವನು ಬಹಮನಿ ಸೇನೆಯ ದಂಡನಾಯಕ ಆಲಿಖಾನನ್ನು ಸೋಲಿಸಿ ತನ್ನ ಪ್ರಾಬಲ್ಯವನ್ನು ಮತ್ತೆ ಪಡೆದ. 1406ರಲ್ಲಿ ದೇವರಾಯನೊಡನೆ ನಡೆದ ಯುದ್ಧದಲ್ಲಿ ಫಿರೋಜನಿಗೆ ಜಯ ದೊರೆಯಿತೆಂದು ಫೆರಿಸ್ತಾ ಹೇಳಿದ್ದಾನೆ. 1417-20ರಲ್ಲಿ ನಡೆದ ಮೂರನೆಯ ಯುದ್ಧದಲ್ಲಿ ಪಾನಗಲ್ ಅಥವಾ ಪಂಗಳ ಕೋಟೆಯನ್ನು ಮುತ್ತಿದಾಗ ವಿಜಯನಗರದ ಸೇನೆ ಫಿರೋಜನನ್ನು ಹಿಮ್ಮೆಟ್ಟುವಂತೆ ಮಾಡಿತು.

ವಿಜಯನಗರ ಮತ್ತು ಬಹಮನಿಗಳ ನಡುವಣ ದೀರ್ಘಕಾಲದ ಯುದ್ಧದಿಂದ ಯಾವ ಪರಿಣಾಮವೂ ಆಗಲಿಲ್ಲ. ಯುದ್ಧಪೂರ್ವದಲ್ಲಿ ಇದ್ದ ಸ್ಥಿತಿಯೇ ಮುಂದುವರಿಯಿತು. ರಾಯಚೂರ್ ದೋ ಅಬ್ ವಿಜಯನಗರದ ಕೈಯಲ್ಲೇ ಉಳಿಯಿತು. ಫಿರೋಜನ ಸೋಲಿನಿಂದ ಅವನಿಗೆ ತನ್ನ ರಾಜ್ಯದಲ್ಲಿ ಅನೇಕ ತೊಂದರೆಗಳು ಉಂಟಾದವು. ಅವನ ತಮ್ಮ ಅಹಮದ್ ಮತ್ತು ಮಗ ಹಸನ್ ನಡುವೆ ಭಿನ್ನತೆ ತಲೆದೋರಿತು. ಅಹಮದ್ಗೆ ಸೇನೆ ಬೆಂಬಲ ನೀಡಿತು. ಅವನು ರಾಜಧಾನಿಯನ್ನು ಮುತ್ತಿದ. ತಮ್ಮನ ಪರವಾಗಿ ಫಿರೋಜ್ ಸಿಂಹಾಸನ ತ್ಯಾಗ ಮಾಡಿದ ನಂತರ ಕೆಲವು ದಿವಸಗಳ ತರುವಾಯ ಫಿರೋಜ್ ಮರಣಹೊಂದಿದ.

ಫಿರೋಜ್ ಒಳ್ಳೆಯ ದೊರೆ, ಪಂಡಿತ. ಅವನು ತತ್ತ್ವಶಾಸ್ತ್ರಜ್ಞರಿಗೂ ಕವಿಗಳಿಗೂ ಇತಿಹಾಸಕಾರರಿಗೂ ಆಶ್ರಯ ನೀಡಿದ. ಖಗೋಳಶಾಸ್ತ್ರದಲ್ಲಿ ಅಪಾರ ಆಸಕ್ತಿ. ಈತ ದೌಲತಬಾದಿನಲ್ಲಿ ಒಂದು ವೀಕ್ಷಣಾಲಯವನ್ನು ಸ್ಥಾಪಿಸಿದ. ಭೀಮಾನದಿಯ ದಂಡೆಯ ಮೇಲೆ ಫಿರೋಜಾಬಾದ್ ಎಂಬ ಹೊಸನಗರವನ್ನು ನಿರ್ಮಿಸಿದ. ದಾಬಲ್ ಮತ್ತು ಚೌಲ್ ಬಂದರುಗಳನ್ನು ಅಭಿವೃದ್ಧಿಪಡಿಸಿದ. ಪರ್ಷಿಯ, ಅರೇಬಿಯ, ಆಫ್ರಿಕ ಮತ್ತು ಯೂರೋಪ್ ದೇಶಗಳ ಹಡಗುಗಳು ಬಂದರುಗಳಿಗೆ ಬರುತ್ತಿದ್ದವು.

1422 ಸೆಪ್ಟೆಂಬರ್ 22ರಂದು ಶಿಹಾಬುದ್ಧೀನ ಅಹ್ಮದ್ ಸಿಂಹಾಸನಕ್ಕೆ ಬಂದ. ಜೂನಿನಲ್ಲಿ ಅಹ್ಮದ್ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರಿಗೆ ಬದಲಾಯಿಸಿದ, ವಾರಂಗಲ್ಲಿನ ಕಡೆಗೆ ರಾಜ್ಯ ವಿಸ್ತರಿಸಿದ. ಇವನ ಕಾಲದಲ್ಲಿ ಆಸ್ಥಾನದ ಸರದಾರರ ನಡುವೆ ಅಧಿಕಾರಕ್ಕಾಗಿ ಅಂತಃಕಲಹ ಉಂಟಾಗಿ ಎರಡು ಪ್ರಮುಖ ಪಕ್ಷಗಳೇರ್ಪಟ್ಟು ರಾಜ್ಯದ ಏಕತೆ ಮತ್ತು ಸಮಗ್ರತೆಗೆ ಅಪಾಯ ಒದಗಿತು. ಒಂದು ಕಡೆ ದಖನ್ನಿನ ಸರದಾರರು ಮತ್ತೊಂದು ಕಡೆ ಪರದೇಶಿ ಸರದಾರರ ನಡುವೆ ಸ್ಥಾನಮಾನಗಳಿಗಾಗಿ ಪೈಪೋಟಿ ಆರಂಭವಾಗಿ ಅನೇಕ ಕೊಲೆ ಸುಲಿಗೆಗೆ ಕಾರಣವಾದವು. ದಖನ್ನಿನ ಪಕ್ಷದಲ್ಲಿ ಸ್ಥಳೀಯ ಮುಸ್ಲಿಮ್ ಸರದಾರರು ಮತ್ತು ಆಫ್ರಿಕನ್ ಮಿತ್ರರು, ವಿದೇಶಿ ಸರದಾರರಲ್ಲಿ ತುರ್ಕರು, ಅರಬರು, ಪರ್ಷಿಯನ್ನರು ಮತ್ತು ಮೊಗಲರು ಪ್ರಮುಖರಾಗಿದ್ದರು. ಸ್ಥಳೀಯರಿಗಿಂತ ವಿದೇಶೀ ಪಕ್ಷದವರು ರಾಜ್ಯದಲ್ಲಿ ಅನೇಕ ಉನ್ನತ ಹುದ್ದೆಗಳನ್ನು ಆಕ್ರಮಿಸಿಕೊಂಡಿದ್ದುದರಿಂದ ಸ್ಥಳೀಯರಿಗೆ ಅವರ ಬಗ್ಗೆ ಅಸೂಯೆ ಮೂಡಿತು. ಧಾರ್ಮಿಕ ಭೇದಗಳಿಂದ ಇದು ಮತ್ತಷ್ಟು ತೀವ್ರಗೊಂಡಿತು. ದಖನ್ನಿಗಳು ಪ್ರಧಾನವಾಗಿ ಸುನ್ನಿ ಪಂಥಕ್ಕೆ ಸೇರಿದವರಾಗಿದ್ದರೆ ಅವರ ಎದುರಾಳಿಗಳು ಷಿಯಾ ಪಂಗಡಕ್ಕೆ ಸೇರಿದವರಾಗಿದ್ದರು. ಹೀಗಾಗಿ ಬಹಮನಿ ರಾಜ್ಯದ ಇತಿಹಾಸ ಇನ್ನು ಮುಂದೆ ಪಿತೂರಿ, ಕೊಲೆಗಳ ಕಥೆಯಾಗಿದ್ದು ಇದು ರಾಜ್ಯ ಛಿದ್ರಗೊಳ್ಳುವತನಕವೂ ಅದರ ಜೀವಸತ್ತ್ವವನ್ನು ಹೀರಿತು.

ಅಹ್ಮದ್ ಪ್ರಬಲವಾದ ವಿದೇಶಾಂಗ ನೀತಿಯನ್ನು ಅನುಸರಿಸಿ ವಿಜಯನಗರದ ಮೇಲೆ ಯುದ್ಧ ಘೋಷಿಸಿದ. ಫೆರಿಸ್ತನ ಪ್ರಕಾರ ಬಹಮನೀ ಸೇನೆಗೆ ಗೆಲುವಾಯಿತು. ಮಾಳ್ವ ಮತ್ತು ಗುಜರಾತ್ಗಳೊಡನೆ ಬಹಮನಿ ರಾಜ್ಯ ಕಾಲದಲ್ಲಿ ಸಂಪರ್ಕ ಪಡೆಯಿತು. ಮಾಳ್ವದ ಮುಸ್ಲಿಮ್ ದೊರೆಯ ಮೇಲೆ ಅಹಮ್ಮದ್ ದಂಡೆತ್ತಿ ಹೋಗಿ ಅವನನ್ನು ಸದೆಬಡಿದ. ಆದರೆ ಗುಜರಾತಿನ ಮೇಲೆ ಅವನ ದಾಳಿ ವಿಫಲವಾಯಿತು. 1430ರಲ್ಲಿ ನಡೆಸಿದ ಎರಡನೆಯ ದಂಡಯಾತ್ರೆಯೂ ವಿಫಲವಾಯಿತು. 1433ರಲ್ಲಿ ತೆಲಂಗಾಣದತ್ತ ನಡೆದು ವಾರಂಗಲ್ ಮೊದಲಾದ ಕೆಲವು ಭಾಗಗಳನ್ನು ವಶಪಡಿಸಿಕೊಂಡ. ಅಹ್ಮದ್ 1436 ಏಪ್ರಿಲ್ 17ರಂದು ನಿಧನನಾದ.

ಒಂದನೆಯ ಅಹ್ಮದ್ ಹಿರಿಯ ಮಗ ಅಲಾಉದ್ದೀನ್ II ಅಹ್ಮದ್ ಪಟ್ಟಕ್ಕೆ ಬಂದ (1436-58). ವಿಜಯನಗರದ ಎರಡನೆಯ ದೇವರಾಯನನ್ನು ಸೋಲಿಸಿ ಸಂಗಮೇಶ್ವರ ಮತ್ತು ಖಾನ್ದೇಶದ ರಾಜರುಗಳನ್ನು ಹತ್ತಿಕ್ಕಿದ. ತನ್ನ ತಂದೆಯ ಗೋರಿಯ ಮೇಲೆ ಭವ್ಯವಾದ ಗೋಳವನ್ನು ನಿರ್ಮಿಸಿದ. 1436ರಲ್ಲಿ ಮತ್ತು 1443ರಲ್ಲಿ ವಿಜಯನಗರದೊಡನೆ ದೋ ಅಬ್ನಲ್ಲಿ ಯುದ್ಧಗಳು ನಡೆದವು. ಅಲ್ಲಾವುದ್ದೀನ್ ಕೊಂಕಣದ ಪಾಳೆಯಗಾರರನ್ನು ಶರಣಾಗತರಾಗುವಂತೆ ಮಾಡಿದ. ಪ್ರಸಿದ್ಧ ಮಹಮ್ಮದ್ ಗವಾನ್ ಇವನ ಮಂತ್ರಿಯಾಗಿದ್ದ.

ಎರಡನೆಯ ಅಲಾಉದ್ದೀನ್ ಅಹ್ಮದ್ ಮರಣಾನಂತರ ಅವನ ಹಿರಿಯ ಮಗ ಹುಮಾಯೂನ್ ಪಟ್ಟಕ್ಕೆ ಬಂದು (1458-61) ಮೂರು ವರ್ಷಗಳ ಆಳ್ವಿಕೆ ನಡೆಸಿದ. ಇವನ ಮಗ ನಿಜಾಮುದ್ದೀನ್ ಅಹ್ಮದ್ (1461-63) ಸಿಂಹಾಸನಕ್ಕೆ ಬಂದಾಗ ಅವನು ಎಂಟು ವರ್ಷದ ಬಾಲಕ. ಕಾಲದಲ್ಲಿ ಮಹಮದ್ ಗವಾನ್ ಸಮರ್ಥ ಆಡಳಿತ ನಡೆಸಿದ. ಸುಲ್ತಾನ ಅಪ್ರಾಪ್ತವಯಸ್ಕನಾದ್ದರಿಂದ ಒಂದು ರಾಜಪ್ರತಿನಿಧಿ ಮಂಡಳಿಯನ್ನು ಸ್ಥಾಪಿಸಲಾಯಿತು. ಸುಲ್ತಾನನ ತಾಯಿ ಮತ್ತು ಪ್ರಧಾನಿಯೂ ಪ್ರತಿನಿಧಿ ಮಂಡಲಿಯಲ್ಲಿದ್ದರು. ಸುಲ್ತಾನನ ತಾಯಿ ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಒಬ್ಬ ಸಮರ್ಥ ಮಹಿಳೆಯಾಗಿದ್ದು, ಗವಾನನಂಥ ಶ್ರೇಷ್ಠ ಆಡಳಿತಾಧಿಕಾರಿಯನ್ನು ಆಯ್ಕೆಮಾಡಿ ರಾಜ್ಯ ಕಷ್ಟಕಾಲದಲ್ಲಿದ್ದಾಗ ಅದನ್ನು ಕಾಪಾಡುವ ಹೊಣೆ ಹೊತ್ತಳು. ಒರಿಸ್ಸಾದ ದೊರೆ ಕಪಿಲೇಂದ್ರ ಸಂದರ್ಭ ಉಪಯೋಗಿಸಿಕೊಂಡು ಬಿದರೆಯ ಮೇಲೆ ದಂಡಯಾತ್ರೆ ಕೈಗೊಂಡಾಗ ಗವಾನ್ ಅವನನ್ನು ಹಿಮ್ಮೆಟ್ಟಿಸಿದ. ಮಾಳ್ವದ ದೊರೆ ಇದನ್ನೇ ಅನುಸರಿಸಿದಾಗ ಗುಜರಾತಿನ ಸಹಾಯದಿಂದ ಗವಾನ್ ಅವನನ್ನು ಹಿಂದಕ್ಕಟ್ಟಿದ. ನಿಜಾಮುದ್ದೀನ್ ಅಹ್ಮದ್ ಮರಣಾ ನಂತರ ಅವನ ಕಿರಿಯ ತಮ್ಮ ಮೂರನೆಯ ಮಹಮ್ಮದ್ (1463-82) ಪಟ್ಟಕ್ಕೆ ಬಂದ. 1466 ತನಕ ರಾಜಪ್ರತಿನಿಧಿ ಮಂಡಲಿ ಅಸ್ತಿತ್ವದಲ್ಲಿತ್ತು. ವರ್ಷ ಗವಾನ್ ಪ್ರಧಾನಮಂತ್ರಿಯಾಗಿ ನೇಮಿಸಲ್ಪಟ್ಟ. ಗವಾನನ ಯುದ್ಧ ನಿಪುಣತೆಯಿಂದಾಗಿ, ರಾಜ್ಯ ಒರಿಸ್ಸಾದಿಂದ ಗೋವಾವರೆಗೆ ವಿಸ್ತರಿಸಿತು. ಹುಬ್ಬಳ್ಳಿ, ಬೆಳಗಾವಿ ಮತ್ತು ಬಾಗಲಕೋಟೆ ಗೆದ್ದು ಉತ್ತರ ಕರ್ನಾಟಕ ಹಾಗೂ ಕೊಂಕಣದ ಕರಾವಳಿ ಪ್ರದೇಶವನ್ನು ಸಂಪೂರ್ಣವಾಗಿ ತನ್ನ ಆಡಳಿತಕ್ಕೆ ಸೇರಿಸಿಕೊಂಡು ವಿಜಯನಗರದ ಅಧೀನದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡ. ಇದೆಲ್ಲದರ ಪರಿಣಾಮವಾಗಿ ರಾಜ್ಯದ ಐಶ್ವರ್ಯ ಹೆಚ್ಚಿತು. ಗವಾನನ ನೇತೃತ್ವದಲ್ಲಿ ಸುಲ್ತಾನ ರಣರಂಗದಲ್ಲಿ ಧೈರ್ಯ ಪ್ರದರ್ಶಿಸಿ ಲಷ್ಕರಿ ಎಂಬ ಬಿರುದಿಗೆ ಪಾತ್ರನಾದ. ಕಂಚಿಯವರೆಗೂ ಅವನು ನಡೆಸಿದ ದಾಳಿ ಖ್ಯಾತಿ ಪಡೆದಿದೆ.

ಗವಾನ್ ಪ್ರತಿಯೊಂದು ಇಲಾಖೆಯನ್ನೂ ಸುಧಾರಣೆಗೆ ಒಳಪಡಿಸಿದ. ಹಣಕಾಸು ನ್ಯಾಯಾಡಳಿತ ಮತ್ತು ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದ. ಪ್ರಾಂತ್ಯಗಳ ಸಂಖ್ಯೆ ದ್ವಿಗುಣವಾಯಿತು. ಪ್ರಾಂತ್ಯಾಧಿಕಾರಿಗಳ ಹೆಚ್ಚಿನ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರವನ್ನು ಬಲಪಡಿಸಿ ಪ್ರಾಂತೀಯ ಮನೋಭಾವನೆಯನ್ನು ಹತ್ತಿಕ್ಕಿದ. ಹೊಸ ಕಂದಾಯ ಪದ್ಧತಿ ಜಾರಿಗೆ ತಂದ. ಭೂಮಿಯನ್ನು ಅಳೆಸಿ ಕಂದಾಯವನ್ನು ಹಣದ ರೂಪದಲ್ಲಿ ಕೊಡುವ ಕ್ರಮ ಜಾರಿಗೆ ತಂದ. ಸೇನೆಯನ್ನು ಸುಧಾರಿಸಿ ಅದರ ಶಕ್ತಿಯನ್ನು ಹೆಚ್ಚಿಸಿದ. ಭ್ರಷ್ಟಾಚಾರವನ್ನು ನಿರ್ಮೂಲ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟ. ಸಾಹಿತ್ಯ ಕಲೆಗೆ ಪ್ರೋತ್ಸಾಹ ನೀಡಿದ. ರಾಜಧಾನಿ ಬಿದರೆಯಲ್ಲಿ ಮದ್ರಸಾವನ್ನು ಸ್ಥಾಪಿಸಿದ. ಸ್ವತಃ ಪಂಡಿತನಾಗಿದ್ದ ಗವಾನ ಅನೇಕ ಶಾಸ್ತ್ರಗಳನ್ನು ಅಭ್ಯಾಸ ಮಾಡಿದ. ಮದ್ರಸಾಕ್ಕೆ ಅನೇಕ ಪಂಡಿತರನ್ನು ಆಹ್ವಾನಿಸಿದ. ಮೂರು ಅಂತಸ್ತುಳ್ಳ ಕಾಲೇಜಿನಲ್ಲಿ ಪ್ರಾಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಸ್ಥಳಾವಕಾಶ ಮಾಡಿಕೊಡಲಾಗಿದ್ದಿತು. ಗವಾನನ ಬಳಿ ಇದ್ದ ಪುಸ್ತಕ ಭಂಡಾರದಲ್ಲಿ 1000 ಹಸ್ತಪ್ರತಿಗಳಿದ್ದುವು. ಗ್ರಂಥಾಲಯದಲ್ಲಿ 3000 ಹಸ್ತಪ್ರತಿಗಳಿದ್ದುವು.

ಗವಾನನ ಆಡಳಿತ ವಿಚಕ್ಷಣೆ ಹಾಗೂ ಸರ್ಕಾರದ ಮೇಲಿನ ಅವನ ಹತೋಟಿಯಿಂದ ದಖ್ಖನ್ ಸರದಾರರಿಗೆ ಅಸೂಯೆಯುಂಟಾಯಿತು. ಅವನನ್ನು ಕೊಲೆ ಮಾಡಲು ಯೋಚಿಸಿದರು. ದಖ್ಖನ್ ಮತ್ತು ವಿದೇಶೀ ಸರದಾರರ ನಡುವೆ ಮನಸ್ತಾಪ ಉಂಟಾಯಿತು. ಗವಾನ ಸ್ವಲ್ಪಕಾಲ ಬುದ್ಧಿವಂತಿಕೆಯಿಂದ ಎರಡು ಪಕ್ಷಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯತ್ನಿಸಿದ. ಆದರೂ ದಖನೀ ಸರದಾರರ ಕುತಂತ್ರಕ್ಕೆ ಬಲಿಯಾಗಬೇಕಾಗಿ ಬಂತು. ಗವಾನನ ಮರಣದಿಂದ ಬಹಮನೀರಾಜ್ಯದ ಶಕ್ತಿ ಉಡುಗಿಹೋಯಿತೆನ್ನಬಹುದು.

ಮೂರನೆಯ ಮಹಮ್ಮದ್ ಅನಂತರ ಶಿಹಾಬುದ್ದೀನ್ ಮಹ್ಮೂದ್ (1482-1518) ಪಟ್ಟಕ್ಕೆ ಬಂದ. ಇವನಿಗೆ ವೈಯಕ್ತಿಕ ಸಾಮರ್ಥ್ಯವಾಗಲಿ ಅಥವಾ ರಾಜ್ಯದ ಐಕ್ಯವನ್ನು ಉಳಿಸಿಕೊಳ್ಳಲು ನೆರವಾಗಬಲ್ಲ ಗವಾನನಂತಹ ದಕ್ಷಮಂತ್ರಿಯ ಮಾರ್ಗದರ್ಶನವಾಗಲಿ ದೊರಕಲಿಲ್ಲ. ದಖ್ಖನ್ನಿ ಮತ್ತು ಪರದೇಶೀ ಸರದಾರರ ನಡುವೆ ದ್ವೇಷಾಸೂಯೆ ನೂರ್ಮಡಿಗೊಂಡಿತು. ಪ್ರಾಂತೀಯ ಗೌರ್ನರುಗಳು ಅನಾಯಕತ್ವ ಪರಿಸ್ಥಿತಿಯ ಅವಕಾಶವನ್ನು ತಮ್ಮ ತಮ್ಮ ಸ್ವಾತಂತ್ರ್ಯ ಘೋಷಿಸಲು ಉಪಯೋಗಿಸಿಕೊಂಡರು. ಮಹಮ್ಮದ್ ನಾಮ ಮಾತ್ರದ ಅಧಿಕಾರ ರಾಜಧಾನಿಯ ಸುತ್ತ ಮುತ್ತಲ ಭಾಗಗಳಿಗೆ ಸೀಮಿತವಾಗಿತ್ತು. ಇವನು ಮತ್ತು ಇವನ ನಾಲ್ವರು ಉತ್ತರಾಧಿಕಾರಿಗಳು ತುರ್ಕಿವಂಶದ ಖಾಸಿಮ್ ಬರೀದ್ ಅನಂತರ ದಖನ್ನಿನ ನರಿ ಎಂದು ಪ್ರಸಿದ್ಧನಾದ ಅವನ ಮಗ ಆಮೀರ್ ಅಲಿ ಬರೀದ್ ಕೈಗೊಂಬೆಗಳಾಗಿದ್ದರು. ಸಂತತಿಯ ಕೊನೆಯ ದೊರೆ ಕಲೀಮುಲ್ಲಾ ಕಳೆದು ಹೋಗಿದ್ದ ತನ್ನ ರಾಜ್ಯದ ಭಾಗವನ್ನು ಮತ್ತೆ ಪಡೆದುಕೊಳ್ಳಲು ಬಾಬರನ ನೆರವನ್ನು ಪಡೆಯಲು ರಹಸ್ಯವಾಗಿ ಪ್ರಯತ್ನಿಸಿ ನಿರಾಶನಾದ. ಸುಮಾರು, 1538ರಲ್ಲಿ ಈತ ಕಾಲವಾದ ಮೇಲೆ ಸುಮಾರು ಒಂದು ನೂರ ಎಂಬತ್ತು ವರ್ಷಗಳ ಆಳ್ವಿಕೆಯ ಬಹಮನೀ ಮನೆತನ ಕೊನೆಗೊಂಡಿತು.

ಮುಂದೆ ಆಸ್ಥಾನದ ಎರಡು ಪಕ್ಷಗಳಿಗೂ ಅದರಲ್ಲೂ ದಖನ್ ಪಕ್ಷದ  ನಾಯಕ ಹಸನ್ ನಿಜಾಮ್ ಉಲ್ ಮುಲ್ಕ್ ಮತ್ತು ಪರದೇಶಿಗಳ ಪಕ್ಷದ ನಾಯಕ ಯೂಸಫ್ ಆದಿಲ್ ಖಾನರ ನಡುವೆ ಪ್ರತಿಸ್ಪರ್ಧೆ ಹೆಚ್ಚುತ್ತ ನಡೆಯಿತು. ಕೊನೆಗೆ ಪರದೇಶಿ ಪಕ್ಷ ಬಿಜಾಪುರಕ್ಕೆ ನಿರ್ಗಮಿಸಿತು. ಅದರ ನಾಯಕ ಆದಿಲ್ಖಾನ್ ಸ್ವತಂತ್ರ ರಾಜ್ಯ ಕಟ್ಟಿದ. ಬಹಮನಿರಾಜ್ಯ ಐದು ಷಾಹಿರಾಜ್ಯಗಳಾಗಿ ಒಡೆಯಿತು. ಅವುಗಳೇ ಬಿಜಾಪುರದ ಆದಿಲ್ಷಾಹಿ, ಗೊಲ್ಕೊಂಡದ ಕುತೂಬ್ ಷಾಹಿ, ಅಹಮದ್ ನಗರದ ನಿಜಾಂಷಾಹಿ, ಬಿರಾರಿನ ಇಮಾಮ್ ಷಾಹಿ ಮತ್ತು ಬಿದರೆಯ ಬರೀದ್ ಷಾಹಿ ರಾಜ್ಯಗಳು.

ಆಡಳಿತ: ದೆಹಲಿ ಸುಲ್ತಾನರ ಆಡಳಿತಕ್ಕಿಂತ ಬಹಮನಿ ಸುಲ್ತಾನರ ಆಡಳಿತ ಹೆಚ್ಚು ಭಿನ್ನವಾಗಿರಲಿಲ್ಲ. ರಾಜನೇ ರಾಜ್ಯದ ಪ್ರಮುಖ ನ್ಯಾಯಧೀಶ, ಮುಖ್ಯ ಸೇನಾಪತಿ ಮತ್ತು ಧಾರ್ಮಿಕ ಮುಖಂಡ. ರಾಜ ದೇವರ ಪ್ರತಿನಿಧಿ ಎಂಬ ನಂಬಿಕೆಯಿತ್ತು. ಅವನ ಅಧಿಕಾರ ಸೀಮಾತೀತ. ದೇಶದ ವ್ಯವಹಾರಗಳಲ್ಲಿ ಸುಲ್ತಾನ ಮಂತ್ರಿಗಳ ಸಲಹೆ ಕೇಳುತ್ತಿದ್ದ. ಗವಾನನು ಸುಮಾರು ಮುವತ್ತುವರ್ಷ ಮಂತ್ರಿಯಾಗಿದ್ದ ಕಾಲದಲ್ಲಿ ಸುಲ್ತಾನ ನೆಪಮಾತ್ರಕ್ಕಿದ್ದನೆಂದು ಹೇಳಬಹುದು. ರಾಜಾಜ್ಞೆಗಳೆಲ್ಲ ಮುಖ್ಯಮಂತ್ರಿಯ ಮೂಲಕವೇ ಹೋಗಬೇಕಾಗಿತ್ತು. ಅಮೀರಿ ಜುಮ್ಲ ಎಂದು ಅರ್ಥಮಂತ್ರಿಯನ್ನು ವಿದೇಶಾಂಗ ಮಂತ್ರಿಯನ್ನು ಆಷಾಫ್ ಎಂದೂ ನ್ಯಾಯಾಡಳಿತ ಮುಖ್ಯಸ್ಥನಿಗೆ ಸದರ್--ಜಹಾನ್ ಎಂದೂ ಕರೆಯುತ್ತಿದ್ದರು. ಸಾಮಾನ್ಯ ವ್ಯವಹಾರಗಳ ನಿರ್ವಹಣೆಯನ್ನು ಪೇಷ್ವಾ ನೋಡಿಕೊಳ್ಳುತ್ತಿದ್ದ. ವಜೀರ್, ಕೊತ್ವಾಲ್ ಮತ್ತು ದಿವಾನ್ರೆಂಬ ಉಪಮಂತ್ರಿಗಳಿದ್ದರು.

ಪ್ರಾಂತ್ಯಗಳ ಗವರ್ನರ್ಗಳಿಗೆ ತರಫ್ದಾರರೆಂದು ಕರೆಯುತ್ತಿದ್ದರು. ಬಹಮನೀ ರಾಜ್ಯದ ಸ್ಥಾಪಕ ಹಸನ್ಗಂಗು ರಾಜ್ಯವನ್ನು ನಾಲ್ಕು ತರಫ್ಗಳಾಗಿ ವಿಂಗಡಿಸಿದ್ದ. ಪ್ರಾಂತ್ಯಾಧಿಕಾರಿಗಳು ಹೆಚ್ಚಿನ ಅಧಿಕಾರ ಪಡೆದಿದ್ದರು. ಗವಾನ್ ಅವರ ಅಧಿಕಾರ ಕಡಿಮೆ ಮಾಡಿದ. ಹಸನ್ಖಾನ್ ಮತ್ತು ಮಲಿಕ್ಗಳೆಂಬ ಬಿರುದನ್ನು ಸೃಷ್ಟಿಸಿದ. ಅಧಿಕಾರ ವರ್ಗದ ವರಿಷ್ಠರಿಗೆ ಕುತುಬ್-ಉಲ್-ಮುಲ್ಕ್ ಮತ್ತು ಖ್ವಾಜಾ-ಜಹಾನ್ ಎಂಬ ಬಿರುದುಗಳನ್ನು ನೀಡುತ್ತಿದ್ದರು. ಅವರು ಅಧಿಕಾರವರ್ಗದ ಉಕ್ಕಿನ ಚೌಕಟ್ಟಿನಂತ್ತಿದ್ದರು. ಕಂದಾಯ ವಸೂಲಿ, ಸೇನೆಯ ಜಮಾವಣೆ, ಸೇವೆಯ ನಾಯಕತ್ವ ಮತ್ತು ಅಧಿಕಾರಿಗಳ ನೇಮಕ ಇವು ಪ್ರಾಂತ್ಯಾಧಿಕಾರಿಗಳ ಕರ್ತವ್ಯಗಳಾಗಿದ್ದುವು. ಒಂದೇ ಕಡೆ ತಳವೂರದಂತೆ ಮಾಡಲು ತರಫ್ದಾರರನ್ನು ಬೇರೆ ಬೇರೆ ಕಡೆಗೆ ವರ್ಗಾಯಿಸುವ ಸಂಪ್ರದಾಯವಿತ್ತು. ಮಹಮದ್ ಗವಾನ್ ರಾಜ್ಯಗಳನ್ನು ಎಂಟು ವಿಭಾಗಗಳಾಗಿ ವಿಂಗಡಿಸಿದ. ಕೆಲವು ವೇಳೆ ಒಂದಕ್ಕಿಂತ ಹೆಚ್ಚು ತರಫ್ದಾರರು ಬಹಮನಿ ಆಸ್ಥಾನದಲ್ಲಿ ಮಂತ್ರಿಗಳಾಗಿರುತ್ತಿದುದ್ದು ಉಂಟು. ಉದಾಹರಣೆಗೆ ಮಹಮದ್ ಗವಾನ್ ಕೇಂದ್ರದಲ್ಲಿ ಪ್ರಧಾನಮಂತ್ರಿಯಾಗಿದ್ದುದಲ್ಲದೆ ಬಿಜಾಪುರ ವಿಭಾಗದ ತರಫ್ದಾರನೂ ಆಗಿದ್ದ. ಇದರ ಜೊತೆಗೆ ಅವನು ಆಮೀರಿ ಜುಮ್ಲಾ ಸಹ ಆಗಿದ್ದ. ತರಫ್ದಾರನ್ನೂ ಸರ್ಕಾರಗಳಾಗಿ, ಸರ್ಕಾರಗಳನ್ನು ಪರಗಣಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪರಗಣದಲ್ಲೂ ಗೊತ್ತಾದ ಸಂಖ್ಯೆಯ ಹಳ್ಳಿಗಳಿರುತ್ತಿದ್ದವು. ಗ್ರಾಮಾಡಳಿತ ಪ್ರಾಥಮಿಕ ಘಟಕವಾಗಿತ್ತು. ಆಡಳಿತ ಬಗೆಯ ಅಡಿಗಲ್ಲಿನ ಮೇಲೆ ನಿಂತಿತ್ತು. (ಎಂ.ಜಿ.)

ಶಾಸನಗಳು : ಬಹಮನೀ ಸುಲ್ತಾನರ ಶಾಸನಗಳು ವಿಶೇಷವಾಗಿ ಕಂಡು ಬಂದಿರುವುದು ಪಾರಸೀ ಮತ್ತು ಅರಬ್ಬಿ ಭಾಷೆಗಳಲ್ಲಿ. ಅಪರೂಪವಾಗಿ ಸಂಸ್ಕೃತ, ಕನ್ನಡ, ತೆಲುಗು, ಮರಾಠಿ ಮುಂತಾದ ಸ್ಥಳೀಯ ಭಾಷೆಗಳನ್ನು ಬಳಸಿದ ದ್ವಿಭಾಷಾ ಶಾಸನಗಳು ಕಾಣಿಸಿಕೊಂಡಿವೆ. ಆರಂಭದ ಶಾಸನಗಳಿರುವುದು ಅರಬ್ಬಿ ಭಾಷೆಯ ಗದ್ಯದಲ್ಲೆ. ಅನಂತರ ಬಳಕೆಗೆ ಬಂದ ಪಾರಸಿ ಭಾಷೆಯ ಶಾಸನಗಳು ಹೆಚ್ಚು ಹೆಚ್ಚು ಪದ್ಯಶೈಲಿಯನ್ನು ಆಶ್ರಯಿಸಿವೆ. ಭಾಷೆಯ ಗದ್ಯ ಶಾಸನಗಳು ಆರಂಭದಲ್ಲೆ ಬಳಕೆಯಲ್ಲಿದ್ದುವು. ಮಹಮ್ಮದೀಯ ಶಾಸನಗಳು ಸಾಮಾನ್ಯವಾಗಿ ಭಾಷಾ ದೃಷ್ಟಿಯಿಂದ ಗಮನಾರ್ಹವಾದದ್ದು. ಆದರೆ ಬಹಮನೀ ಸುಲ್ತಾನರ ಪಾರಸೀ ಭಾಷೆಯ ಪದ್ಯ ಶಾಸನಗಳಲ್ಲಿ ಕಾಣಿಸಿಕೊಂಡಿರುವುದು ಕಲುಷಿತ ಭಾಷೆ. ವ್ಯಾಕರಣ ಹಾಗೂ ಛಂದಸ್ಸಿನ ನಿಯಮಗಳನ್ನು ಪಾಲಿಸದ ಶಾಸನಗಳಲ್ಲಿ ದೋಷಗಳೇ ಹೆಚ್ಚು. ಆದರೆ ಬಳಸಿದ ಲಿಪಿಮಾತ್ರ ಕಾಗದಗಳ ಮೇಲಿನ ಬರಹಗಳಷ್ಟೇ ಸುಂದರ ಆಲಂಕಾರಿಕ, ಕುಫಿ, ನಸ್ಖ್, ಥುಲ್ತ್, ನಸ್ತಾಲಿಕ್ ಹಾಗೂ ತುಘ್ರಾ ಇವರು ಬಳಸಿದ ಲಿಪಿಗಳು. ಇವುಗಳಲ್ಲೆ ಹೆಚ್ಚು ಆಲಂಕಾರಿತವಾದದ್ದು ನಸ್ಖ್ಲಿಪಿ. ಬಿಲ್ಲು ಮತ್ತು ಬಾಣದ ಆಕಾರದಲ್ಲಿ ಅಥವಾ ಧ್ವಜಗಳನ್ನು ಎತ್ತಿಹಿಡಿದ ಸೈನ್ಯ ಶಿಸ್ತಿನಿಂದ ಮುಂದುವರಿಯುತ್ತಿರುವ ರೀತಿಯಲ್ಲಿ ಅಕ್ಷರಗಳನ್ನು ಜೋಡಿಸಲಾಗಿದೆ. ತುಘ್ರಾ ಶೈಲಿಯಲ್ಲಿ ಅಕ್ಷರಗಳನ್ನು ಪಕ್ಷಿಗಳ ಅಥವಾ ಪ್ರಾಣಿಗಳ ಆಕಾರದಲ್ಲಿ ಜೋಡಿಸಲಾಗಿದೆ. ಇವುಗಳಲ್ಲೆ ಸಿಂಹ ಅಥವಾ ಹುಲಿಯ ಚಿತ್ರ ಹೋಲುವ ಅಕ್ಷರ ಜೋಡಣೆ ಪ್ರಮುಖವಾಗಿದ್ದು ಇದು ಸೂಚಿಸುವುದು ದೈವ ಸಿಂಹವೆನಿಸಿದ ಆಲಿಯನ್ನು. ಆದರೆ ಇವನ್ನು ದೃಷ್ಟಿದೋಷಪರಿಹಾರಕ್ಕಾಗಿ ಬಳಸಲಾಗಿದೆ ಎಂಬ ಒಂದು ಅಭಿಪ್ರಾಯವಿದೆ. ಇಂತಹ ಲಿಪಿಯನ್ನು ಸಾಧಾರಣವಾಗಿ ದಖನ್ನಿನ ಕೋಟೆಗಳ ಗೋಡೆಗಳ ಮೇಲೆ ಕಾಣಬಹುದು. ಥುಲ್ತ್ ಹಾಗೂ ಸನ್ತಾಲಿಕ್ಗಳು ನಸ್ಖ್ ಉಪಶೈಲಿಗಳು.

ಶಾಸನಗಳನ್ನು ಬಲುಮಟ್ಟಿಗೆ ಮಸೀದಿ, ಗೋರಿ ಅಥವಾ ಧಾರ್ಮಿಕ ಕಟ್ಟಡಗಳಲ್ಲಿ ಬರೆಸಲಾಗಿದೆ. ಇವುಗಳಲ್ಲಿ ಸಾಮಾನ್ಯವಾಗಿ ಸುಲ್ತಾನರ ಹೆಸರು, ಕಟ್ಟಡ ಕಟ್ಟಿಸಿದವನ ಹೆಸರು, ಶಾಸನದ (ಅಥವಾ ಕಟ್ಟಡ ಕಟ್ಟಿಸಿದ) ಕಾಲಗಳನ್ನು ಒಳಗೊಂಡ ವಿವರಗಳಿವೆ. ಕೋಟೆ, ಬಾಗಿಲುವಾಡ, ಬಾವಿ, ಮುಂತಾದವನ್ನು ಕಟ್ಟಿಸಿದ ಅಥವಾ ಜೀರ್ಣೋದ್ಧಾರ ಮಾಡಿಸಿದ ಸಂದರ್ಭಗಳಲ್ಲಿಯೂ ಶಾಸನಗಳನ್ನು ಕೆತ್ತಿಸಲಾಗಿದೆ, ಕತ್ತಿ ಬಂದೂಕು ಮುಂತಾದ ಶಸ್ತ್ರಾಸ್ತ್ರಗಳ ಮೇಲೂ ಮುದ್ರೆಗಳು, ಪತ್ರಗಳು, ಮುಂತಾದ ದೈನಂದಿನ ಬಳಕೆಯ ವಸ್ತುಗಳ ಮೇಲೂ ಶಾಸನಗಳನ್ನು ಕೆತ್ತಿಸಿರುವ ಉದಾಹರಣೆಗಳಿವೆ. ಇದು ಕಾಲದ ಪದ್ಧತಿಯಾಗಿತ್ತು ಎನ್ನಬಹುದು. ನಯಗೊಳಿಸಿದ ಶಿಲೆಗಳನ್ನು ಶಾಸನಗಳಿಗೆ ಬಳಸಲಾಗಿದೆ. ಅವಧಿಯಲ್ಲಿ ಒಂದೂ ತಾಮ್ರಶಾಸನ ಕಂಡು ಬಂದಿಲ್ಲ. ಕೆಲವೊಮ್ಮೆ ಶಾಸನ ಕಲ್ಲುಗಳನ್ನು ಅವುಗಳ ಸಂರಕ್ಷಣೆಗಾಗಿ ಸ್ಥಾನಪಲ್ಲಟಗೊಳಿಸಿರುವುದರಿಂದ, ಹಲವಾರು ಸಂದರ್ಭಗಳಲ್ಲಿ ಮಸೀದಿಗಳಲ್ಲಿ ಇರಬಹುದಾದ ಶಾಸನಗಳು ಗೋರಿಗಳ ಮೇಲೂ ಗೋರಿಯ ಶಾಸನಗಳು ಮಸೀದಿಗಳ ಮೇಲೂ ಕಾಣಿಸಿಕೊಂಡಿವೆ. ಕಲ್ಲಿನೊಳಗೆ ಅಕ್ಷರಗಳನ್ನು ಕೊರೆಯುವ ಪದ್ಧತಿಯ ಜೊತೆಗೆ ಸುತ್ತಲಿನ ಭಾಗವನ್ನು ತೆಗೆದು ಅಕ್ಷರಗಳು ಉಬ್ಬಿದಂತೆ ಕಡೆದಿರುವುದೂ ಬರೆಹದ ವೈಶಿಷ್ಟ್ಯವಾಗಿದೆ. ಬಹಮನಿಯ ರಾಜ್ಯದ ನಾಣ್ಯಗಳು: ಎಡಗಡೆಯದು ಮಹಮದ್ ಷಾ ಬಹಮನಿಯದು; ಬಲಗಡೆಯದು: ಫಿರೋಜ್ ಷಾ ಬಹುಮನಿಯದು.

ಬಹಮನಿಯ ಸುಲ್ತಾನರ ಕಾಲಕ್ಕೆ ಕಾಗದದ ಬಳಕೆ ತಿಳಿದಿತ್ತಾದ್ದರಿಂದ ಶಾಸನಗಳನ್ನು ಕೊರೆಯಿಸುವ ಪದ್ಧತಿ ಕ್ರಮೇಣ ಕಡಿಮೆಯಾಗುತ್ತ ಬಂತು. ಇದರಿಂದ ವಿಶೇಷ ಪ್ರಯೋಜನ ಕಂಡುಬರಲಿಲ್ಲ ಎಂತಲೆ ಸಮಕಾಲೀನ ಶಾಸನಗಳಲ್ಲಿ ಐತಿಹಾಸಿಕವಾಗಿ ಮಹತ್ತ್ವದ್ದೆನಿಸುವ ಯಾವ ಶಾಸನಗಳೂ ಕಾಣಿಸಿಕೊಂಡಿಲ್ಲ. ಆದರೂ ಕೆಲವು ಸಂದರ್ಭಗಳಲ್ಲಿ ಅರಸರ ವಂಶಾವಳಿ ಆಳ್ವಿಕೆಯ ಕಾಲ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಶಾಸನಗಳಲ್ಲಿ ಲಭಿಸುವ ವಿವರಗಳು ಸಮಕಾಲೀನ ಇತಿಹಾಸಕಾರರ, ಯಾತ್ರಿಕರ ಬರೆವಣಿಗೆಗಳಲ್ಲಿನ ಹೇಳಿಕೆಗಳಿಗೆ ಪುಷ್ಟಿ ನೀಡುತ್ತವೆ ಅಥವಾ ಹೇಳಿಕೆಗಳನ್ನು ಅಲ್ಲಗಳೆಯುತ್ತದೆ.

ನಾಣ್ಯಗಳು : ಬಹಮನೀ ಸುಲ್ತಾನರು ನಾಣ್ಯಗಳನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರದ ಲೋಹಗಳಲ್ಲಿ ಅಚ್ಚು ಹಾಕಿಸಿದ್ದಾರೆ. ವಿನ್ಯಾಸ, ತೂಕ ಮತ್ತಿತರ ವಿಷಯಗಳಲ್ಲೂ ಇವರ ನಾಣ್ಯಗಳು ಸಮಕಾಲೀನ ದೆಹಲಿಯ ಸುಲ್ತಾನರ ನಾಣಯಗಳನ್ನೇ ಹೋಲುತ್ತವೆ. ಇವರು ಅಚ್ಚು ಹಾಕಿಸಿದ ಟಂಕಗಳು ಮಹಮ್ಮದ್ ಬಿನ್ ತೊಘಲಕ್ ದೀನಾರ್ಗಳಷ್ಟೇ ತೂಕವನ್ನು ಹೊಂದಿದ್ದುವು. ಚಿನ್ನದ ನಾಣ್ಯಗಳ ತೂಕ ಸುಮಾರು 170ರಿಂದ 199 ಗ್ರೈನ್ಗಳು. ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳು ಸಾಮಾನ್ಯವಾಗಿ ಸುಮಾರು 170 ಗ್ರೈನ್ ತೂಕದವು. ಆದರೆ ತಾಮ್ರದ ನಾಣ್ಯಗಳಲ್ಲಿ ಅತಿ ಹೆಚ್ಚಿನ ತೂಕದ ನಾಣ್ಯ 260 ಗ್ರೈನ್ ಅತಿಕಿರಿದಾದ ನಾಣ್ಯ ಕೇವಲ 26 ಗ್ರೈನ್ ತೂಕ ಪಡೆದಿತ್ತು. ನಾಣ್ಯಗಳು ವೃತ್ತಾಕಾರದಲ್ಲಿದ್ದು ಅವುಗಳ ಎರಡೂ ಕಡೆಗಳಲ್ಲಿ ಆಲೇಖಗಳಿರುತ್ತವೆ. ಆಯಾಕಾರದ ನಾಣ್ಯಗಳು ಬಹಳ ಕಡಿಮೆ ಪ್ರಮಾಣದಲ್ಲಿವೆ. ಗುಲ್ಬರ್ಗ (ಅಹಸಾನಾಬಾದ್), ಬೀದರ್ (ಮಹಮ್ಮದಾಬಾದ್) ಮತ್ತು ದೌಲತಾಬಾದ್ಗಳಲ್ಲಿ (ಪುತಹಬಾದ್) ಇವರ ಟಂಕಸಾಲೆಗಳಿದ್ದುವು.

ಮೊದಲನೆಯ, ಎರಡನೆಯ ಹಾಗೂ ಮೂರನೆಯ ಮಹಮ್ಮದ್, ಮುಜಾಹಿದ್, ಫಿರೋಜ್ ಎರಡನೆಯ ಹಾಗೂ ಮೂರನೆಯ ಅಹಮದ್, ಹುಮಾಯೂನ್ ಮತ್ತು ಮಹ್ಮೂದರ ಆಳ್ವಿಕೆಯಕಾಲದ ಚಿನ್ನದ ನಾಣ್ಯಗಳು ದೊರೆತಿವೆ. ನಾಣ್ಯಗಳ ಮುಖಗಳಲ್ಲಿ ಸುಲ್ತಾನನ ಹಾಗೂ ಒಮ್ಮೊಮ್ಮೆ ಅವನ ತಂದೆಯ ಹೆಸರು, ಅವನ ಬಿರುದುಗಳು ಹಾಗೂ ಕುರಾನಿನಿಂದ ಉದ್ಧøತವಾದ ವಾಕ್ಯಗಳನ್ನೂ ಆಲೇಖಗಳಾಗಿ ಖಂಡರಿಸಲಾಗಿದೆ. ಅಲಾಉದ್ದೀನ್ ಬಹಮನ್ ಬೆಳ್ಳಿಯ ನಾಣ್ಯದಲ್ಲಿ ಸುದೀರ್ಘವಾದ ಅಸ್ ಸುಲ್ತಾನೂಲ್ ಅಜಮ್ ಅಲಾದ್ದು ಸ್ಯಾವದ್ದೀನ್ ಅಬುಲ್ ಮುಝಾಫರ್ ಬಹಮನ್ ಷಾ ಅಸ್ ಸುಲ್ತಾನ್ ಎಂಬ ನಾಲ್ಕು ಸಾಲುಗಳ ಅಲೇಖ್ಯವಿದೆ. ಅತಿ ಹಿರಿದಾದ 196 ಗ್ರೈನ್ ತೂಕದ ಒಂದನೆಯ ಮಹಮ್ಮದನ ಚಿನ್ನದ ನಾಣ್ಯ ಆಹಸಾನಾಬಾದಿನ ಟಂಕಸಾಲೆಯಲ್ಲಿ ಅಚ್ಚಾಗಿದ್ದು, ಇದನ್ನು ಸುಲ್ತಾನ ಚಲಾವಣೆಗೆ ತಂದನೆಂಬುದರ ಬಗೆಗೆ ಏಕಾಭಿಪ್ರಾಯವಿಲ್ಲ. ಇದರ ಹಿಮ್ಮುಖದಲ್ಲಿ ಮಹಮ್ಮದ್ ಹಸನ್ ಬಹಮನೀ ಎಂಬ ಹೆಸರು ಮಾತ್ರ ಇರುವುದು ಸಂದೇಹಕ್ಕೆಡೆ ಮಾಡಲು ಕಾರಣವಾಗಿದೆ. ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಟಂಕಿಸಿದ ಫಿರೋಜನ ಚಿನ್ನದ ನಾಣ್ಯದ ಸುತ್ತಲೂ ಬುರಿಬಾಹಜರ್ ದಿನಾರ್ ದಾರಲ್ ಮುಲ್ಕ್ ಅಹಸಾನಾಬಾದ್ ಎಂಬ ಆಲೇಖ್ಯವಿದೆ. ಇದರ ವರ್ಷವನ್ನು 800 ಎಂದು ಸೂಚಿಸಿವೆ. ಸಾಮಾನ್ಯವಾಗಿ ಟಂಕಸಾಲೆಗಳನ್ನು ಸೂಚಿಸುವ ಆಲೇಖ ಜುರಿದಾಬೇ ಹಜರತ್ ಅಥವಾ ಹಿಫಾಜರತ್ ಅಹಸಾನಾಬಾದ್ (ಮಹಮ್ಮದಾಬಾದ್) ಎಂದಿರುತ್ತದೆ. ಫಿರೋಜನ ತಾಮ್ರದ ನಾಣ್ಯಗಳಲ್ಲಿ ಕೆಲವು ಆಯಾಕಾರವುಳ್ಳವು. ಹುಮಾಯೂನ್ ಚಲಾವಣೆಗೆ ತಂದ ಎರಡು ವಿಧದ ಚಿನ್ನದ ಟಂಕಗಳಲ್ಲಿ ಒಂದರ ಮುಮ್ಮುಖದಲ್ಲಿ ಅಬ್ಮುತವಕ್ಕಿಲ್ ಅಲೈಲ್ಲಾಹಿಬ್ ಖವಿಯಿಲ್ ಘನಿ ಅಬ್ದುಲ್ ಮುಫಜಿ ಎಂದೂ ಹಿಮ್ಮುಖದಲ್ಲಿ ಅಲ್ಲಾದ್ದ್ಯುನವದ್ದೀನ್ ಹುಮಾಯೂನ್ ಷಾ ಬಿನ್ ಅಹ್ಮದ್ ಅಲ್ ವಲಿಯಲ್ ಬಹಮನೀ ಎಂದೂ ಆಲೇಖಗಳನ್ನು ಕೆತ್ತಲಾಗಿದೆ. ಮುಜಾಹಿದ್ ಬೆಳ್ಳಿ ನಾಣ್ಯದ ಮುಮ್ಮುಖದ ಚೌಕದಲ್ಲಿ ಅಲ್ ಮುವಾಯ್ಯಿದ್ ಬಿನಸ್ತಲ್ಲಾ ಯಮಿನೂಲ್ ಖಿಲಾಫತ್ ನಸಿರು ಅಮಿರಿಲ್ ಮೂಮಿನಿನ್ ಎಂದು ಕೆತ್ತಲಾದ ಆಲೇಖದ ಬರೆವಣಿಗೆ ಕಲಾತ್ಮಕವಾಗಿದ್ದು ಗಮನಾರ್ಹವಾಗಿದೆ. ಹಿಜಾರಾ ಕಾಲ ಗಣನೆಯ 779ನೆಯ ವರ್ಷದಲ್ಲಿ ಟಿಂಕಿಸಲಾದ ನಾಣ್ಯ 170 ಗ್ರೈನ್ ತೂಕ ಪಡೆದಿದೆ. ಇದನ್ನು ಅಹಸಾನಾಬಾದ್ ಟಂಕಸಾಲೆಯಲ್ಲಿ ಅಚ್ಚುಹಾಕಲಾಗಿತ್ತು. 1397ರಲ್ಲಿ ಕೇವಲ ಎರಡು ತಿಂಗಳು ಆಳಿದ ಘಿಯಾಸುದ್ದೀನ ಬೆಳ್ಳಿಯ ಹಾಗೂ ತಾಮ್ರದ ನಾಣ್ಯಗಳನ್ನು ಟಂಕಿಸಿದ್ದು ಉಲ್ಲೇಖನೀಯ. ಇವುಗಳಲ್ಲಿ ಈತನನ್ನು ತಹಂತನ್ಷಾ ಎಂಬ ಬಿರುದಿನಿಂದ ಕರೆಯಲಾಗಿದೆ. ಆದ್ದರಿಂದ ಇದು ಘಿಯಾಸುದ್ದೀನನದೆಂಬುದನ್ನು ಸಂದೇಹಿಸಲಾಗಿತ್ತು. ತಹಂತನ್ ಎಂಬುದನ್ನು ಬಹಮನ್ ಎಂದು ಕೆಲವರು ಓದಿದ್ದರಾದರೂ ಅದು ತಹಂತನ್ ಎಂಬುದೇ ಸರಿಯೆಂದು ಈಗ ಖಚಿತಗೊಳಿಸಲಾಗಿದೆ. ಇತ್ತೀಚೆಗೆ ಇಂತಹ ನಾಣ್ಯಗಳು ಇನ್ನಷ್ಟು ದೊರೆತಿವೆ.

ವಾಸ್ತುಶಿಲ್ಪ: ಬಹುಮನಿಯ ವಾಸ್ತುಶಿಲ್ಪ ಬಲುಮಟ್ಟಿಗೆ ಗುಲ್ಬರ್ಗ ಮತ್ತು ಬಿದರೆಗಳಿಗೆ ಸೀಮಿತವಾಗಿದೆ. ಆರಂಭದಲ್ಲಿ ಸುಲ್ತಾನರು ಗುಲ್ಬರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡಾಗ ಅಲ್ಲಿ ಕೋಟಿ ಮಸೀದಿ ಮುಂತಾದ ಇತರ ಕಟ್ಟಡಗಳನ್ನು ಕಟ್ಟಿಸಿದರು. ಕರ್ನಾಟಕದಲ್ಲಿ ಇಸ್ಲಾಮ್ ಸಂಪ್ರದಾಯಕ್ಕೆ ಸೇರಿದ ವಾಸ್ತುಶಿಲ್ಪ ಶೈಲಿರೂಢಿಗೆ ತಂದ ಶ್ರೇಯಸ್ಸು ಬಹಮನಿ ಸುಲ್ತಾನರದು. ಗುಲ್ಬರ್ಗದ ಕೋಟೆ ಅಲ್ಲಾಉದ್ದೀನ್ (1347-50) ಕಾಲದ ಸುಮಾರು 3 ಕಿ. ಮೀ. ಸುತ್ತಳತೆಯ ಸುಭದ್ರವಾದ ಕಟ್ಟಡ. 15.25 ಮೀ. ದಪ್ಪದ ಹೊರ ಗೋಡೆಯ ಸುತ್ತಲೂ 9.14 ಮೀ. ಅಗಲದ ಆಳವಾದ ಕಂದಕ. ಒಳಭಾಗದಲ್ಲಿರುವ ಶಿಲೆಯ ಮೇಲೆಯೇ ಕಟ್ಟಲಾದ ಗೋಡೆತಳ ಶಿಲೆಯ ಏರು ತಗ್ಗುಗಳನ್ನೇ ಅನುಸರಿಸಿದೆ. ಗೋಡೆಗಳ ಮೇಲೆ ಒಮ್ಮೊಮ್ಮೆ 3 ಮೀ. ಗಳಷ್ಟು ಎತ್ತರದ ಏಕಶಿಲೆಯ ತೆನೆಗಳು. ಕೋಟೆಯೊಳಗಿನ ಕಟ್ಟಡಗಳೆಲ್ಲ ಈಗ ನೆಲಸಮವಾಗಿವೆ. ಆದರೆ ಒಂದನೆಯ ಮಹಮ್ಮದನ ಕಾಲದಲ್ಲಿ ಕಟ್ಟಲಾದ ಜುಮ್ಮಾಮಸೀದಿ ಇನ್ನೂ ಉಳಿದಿದೆ. 65.8್ಠ453.64 .ಮೀ. ಅಳತೆಯ ದೊಡ್ಡ ಮಸೀದಿಯ ಶಿಲ್ಪಿ ಇರಾನ್ ದೇಶದ ಕ್ವಾಜಿಪ್ರಾಂತ್ಯದಿಂದ ಬಂದ ರಫಿ ಎಂಬಾತನೆಂದು ತಿಳಿದು ಬಂದಿದೆ. ಒಳಹಜಾರದಲ್ಲಿ ಉದ್ದಗಲಗಳಲ್ಲಿ ಹಬ್ಬಿರುವ ಕಮಾನುಗಂಬಗಳ ಅಂಕಣಗಳಿರುವುದು ಇದರ ವೈಶಿಷ್ಟ್ಯ. ಒಂದೊಂದು ಅಂಕಣದ ಮೇಲೆಯೂ ಒಂದೊಂದು ಗುಮ್ಮಟವಿದೆ. ಕಮಾನುಗಂಬಗಳು ಹೆಚ್ಚು ಎತ್ತರವಾಗಿಲ್ಲ. ಆದರೆ ಪ್ರಾರ್ಥನಾಮಂದಿರದ ಕಮಾನುಗಳು ಇವುಗಳಿಗಿಂತ ಎತ್ತರವಾಗಿದ್ದು ಅಂಕಣಗಳ ಮೇಲಿನ ಹಿಂಬದಿಯ ಗುಮ್ಮಟಗಳು ಸಹ ಇತರ ಗುಮ್ಮಟಗಳಿಗಿಂತ ಎತ್ತರವಾಗಿವೆ. ಮಸೀದಿಯ ಮುಂಭಾಗ ಹಾಗೂ ಎರಡೂ ಪಕ್ಕಗಳು ತೆರೆದಿದ್ದು ಹಿಂಭಾಗದಲ್ಲಿ ಮಾತ್ರ ಮಟ್ಟ ಗೋಡೆಯಿದೆ. ಪ್ರವೇಶದ್ವಾರವಿರುವ ಪೂರ್ವಭಾಗದ ಕಮಾನಿನ ಚಾವಣಿಯ ಮೇಲೆ ಮೂಲೆಗಳಲ್ಲಿ ತೆಳುವಾದ ಅಷ್ಟೇನೂ ಎತ್ತರವಿಲ್ಲದ ಸ್ತಂಭಗೋಪುರಗಳಿವೆ. ಮಸೀದಿಯ ಮೇಲೇರಿ ಹೋಗಲು ಮುಂಭಾಗದ ಎಡಮೂಲೆಯಲ್ಲಿ ಮೆಟ್ಟಲುಗಳಿದ್ದು ಅದರ ಮೇಲೆ ನಿಂತಾಗ ಸಣ್ಣ ದೊಡ್ಡ ಗುಮ್ಮಟಗಳ ರಾಶಿಯೇ ಕಣ್ಣಿಗೆ ಬೀಳುತ್ತದೆ. ಸ್ಪೇನಿನ ಕಾರ್ಡೋವದ ಮಸೀದಿಯನ್ನು ಇದು ಹೋಲುತ್ತದೆ ಎಂಬುದು ಅಭಿಪ್ರಾಯ. ಆದರೆ ಶಿಲ್ಪಿ ಸಮಕಾಲೀನ ತುರ್ಕಿ ಮಸೀದಿಗಳ ಬ್ಶೆಜಾಂಟಿನ್ ಶೈಲಿಯನ್ನು ಅನುಸರಿಸಿದ್ದಾನೆಂದು ಯಾಜ್ಡಾನಿಯವರು ಸೂಚಿಸಿದ್ದಾರೆ.

ಸಮಕಾಲೀನ ಷಾ ಬಜಾರ್ ಮಸೀದಿ ಜುಮ್ಮಾಮಸೀದಿಯ ಶೈಲಿಗಿಂತ ಭಿನ್ನವಾದುದು. ಮುಂಭಾಗದಲ್ಲಿ ಕಮಾನಿನ ಪ್ರವೇಶದ್ವಾರವುಳ್ಳ ಇದರ ಎರಡೂ ಕಡೆಗಳಲ್ಲಿ ಎತ್ತರದ ಮಿನಾರ್ಗಳಿವೆ. ಇದರ ಹಿಂದೆ ತೆರೆದ ಅಂಗಳ ಅದರ ಹಿಂದಕ್ಕೆ ಮುಚ್ಚಿದ ಹಜಾರ. ಇದು ಪ್ರಾರ್ಥನಾಮಂದಿರ. 45.7್ಠ218.29 .ಕಿ.ಮೀ. ವಿಸ್ತಾರವಾಗಿದೆ. ಹಜಾರದ ಮುಂಭಾಗದಲ್ಲ್ಲಿ 15 ಕಮಾನುಗಳಿದ್ದು ಇದೇ ನೇರದಲ್ಲಿ ಪ್ರತಿ ಸಾಲಿನಲ್ಲೂ ಕಮಾನುಗಳು. ಇದರ ಗೋಡೆಗಳು ಒಳಬಾರದಂತೆ ತೋರುತ್ತವೆ.

ಬಹಮನಿ ಅರಸರ ಮತ್ತು ಅವರ ಪರಿವಾರದವರ ಏಳು ಸಮಾಧಿಗಳ ಸಮೂಹ ಹಪ್ತ್ಗುಂಬಜ್. ನಾಲ್ಕು ಸಮಾಧಿಗಳು ಸುಲ್ತಾನರದು. ಮುಜಾಹಿದ್ ಹಾಗೂ ಫಿರೋಜರ ಸಮಾಧಿಗಳು ಇವುಗಳಲ್ಲಿ ಸೇರಿವೆ. ಫಿರೋಜನ ಸಮಾಧಿಯ (48.16 ್ಠ23.77 .ಕಿ.ಮೀ.) ಗೋಡೆಗಳು 12.8 ಮೀ. ಎತ್ತರ ಮೇಲುಗಡೆ 9.14 ಮೀ. ಎತ್ತರದ ಎರಡು ಅರ್ಧವೃತ್ತಾಕಾರದ ಗುಮ್ಮಟಗಳು. ಒಳಗಿನ ಎರಡು ಸಮಾಧಿ ಗೃಹಗಳು ಚೌಕಾಕಾರದಲ್ಲಿದ್ದು ಅವಕ್ಕೆ ಎರಡಂತಸ್ತಿನ ಅಲಂಕೃತ ಕಮಾನುಗಳಿವೆ.

ಬಿದರೆಯ ಕಟ್ಟಡಗಳಲ್ಲಿ ಅರಮನೆ ಹಾಗೂ ಗವಾನನ ಮದರಸಾ ಗಮನಾರ್ಹ ಇವುಗಳಲ್ಲಿ ಪರ್ಷಿಯನ್ ಶೈಲಿಯ ಪ್ರಭಾವ ಕಂಡುಬರುತ್ತದೆ. ಮದರಸಾವನ್ನು 1472ರಲ್ಲಿ ಕಟ್ಟಲಾಯಿತು. 68.4್ಠ854.86 .ಕಿ.ಮೀ. ವಿಸ್ತಾರದ ಕಟ್ಟಡದ ಸುತ್ತಲೂ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಕೋಣೆಗಳ ಮಧ್ಯದಲ್ಲಿ ವಿಶಾಲವಾದ ಪ್ರಾಂಗಣ. ಕೋಟೆಯೊಳಗೆ ವ್ಯಾಸಗೃಹಗಳಾಗಿದ್ದ ತಖ್ತ್ಮಹಲ್, ಜನಾನಾಮಹಲ್ ಕಾರಂಜಿಗಳು, ಹಮಾಮ್ಗಳು ಅವಶೇಷಗಳಾಗಿ ಉಳಿದಿವೆ. ಕೋಟೆ ಗುಲ್ಬರ್ಗದ ಕೋಟೆಗಿಂತಲೂ ದೊಡ್ಡದು, ಆದರೆ ವಿನ್ಯಾಸದಲ್ಲಿ ಕಟ್ಟುವಿಕೆಯಲ್ಲಿ ಹೆಚ್ಚಿನ ವಿಶೇಷಗಳೇನೂ ಇಲ್ಲ. ಇಲ್ಲಿರುವ ಬಹಮನಿಯರ ಹನ್ನೆರಡು ಸಮಾಧಿಗಳಲ್ಲಿ ಸ್ಥಳೀಯ ದಖನೀ ಶೈಲಿಯನ್ನು ಗುರುತಿಸಬಹುದು. (ಜಿ.ಬಿ.ಆರ್.)

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧