ಪ್ರಾಮಾಣಿಕತೆ
ಅದೊಂದು ದಿನ ಸಂಜೆ ಎಂದಿನಂತೆ ನಾನು ಮತ್ತು
ಹಿತೇಶ್ ಬೈಕನ್ನೇರಿ ಹೊರಟೆವು. ಡಬಲ್ ರಸ್ತೆಯ ದೀಪಕ್ ಸ್ಟೋರ್‌ನಲ್ಲಿ ಒಂದೆರಡು ದಿನನಿತ್ಯದ ಬಳಕೆಗೆಂದು
ಕೆಲ ವಸ್ತುಗಳನ್ನು ಕೊಳ್ಳಬೇಕಾಗಿದ್ದುದರಿಂದ ಗಾಡಿ ಅತ್ತ ತಿರುಗಿತ್ತು. ಸಂಜೆಯಾದ್ದರಿಂದ ಅಂಗಡಿಯಲ್ಲಿ
ಐದಾರು ಜನರಿದ್ದರು; ಜೊತೆಗೆ ಒಂದೆರಡು ಚಿಕ್ಕಮಕ್ಕಳು. ತೀರಾ ದೊಡ್ಡದಲ್ಲದ ಅಂಗಡಿಯಲ್ಲಿ ಅಷ್ಟು ಜನರೇ
ಅಧಿಕವಾಗಿ ಕಾಣಿಸುತ್ತಿದ್ದರು. ದಿನಸಿಯ ವಸ್ತುಗಳನ್ನುಳಿದು ಕರ್ಚೀಫಿನಿಂದ ಕತ್ತರಿಯವರೆಗೆ, ಗುಂಡುಪಿನ್ನಿನಿಂದ
ಪೆನ್ನಿನವರೆಗೆ, ಬೆಳ್ಟಿನಿಂದ ಬೀಗದವರೆಗೆ ಹೀಗೆ ಅವರವರಿಗೆ ಬೇಕಾದ ವಸ್ತುಗಳು ಅಲ್ಲಿ ಲಭ್ಯ. ಹಾಗಾಗಿ
ಅಂಗಡಿ ಚಿಕ್ಕದಾಗಿದ್ದರೂ ಒಂದಿಷ್ಟೂ ಜಾಗವನ್ನು ಖಾಲಿ ಬಿಡದೇ ಮಾರಾಟದ ವಸ್ತುಗಳು ಕೊಳ್ಳುವವರ ಕಣ್ಣಿಗೆ
ಕಾಣುವಂತೆ ಇಲ್ಲವೇ ಅಂಗಡಿಯವರ ಕೈಗೆ ಸಿಗುವಂತೆ ಪೇರಿಸಿರುವುದರಿಂದ ಯಾವ ವಸ್ತುಗಳು ಎಲ್ಲಿರುತ್ತವೆ
ಎಂಬುದನ್ನು ಕೆಲಕ್ಷಣಗಳವರೆಗಾದರೂ ಹುಡುಕದೇ ಯಾವ ವಸ್ತುಗಳೂ ಸಿಗುತ್ತಿರಲಿಲ್ಲ. ಗ್ರಾಹಕರಿಗಲ್ಲ; ಸ್ವತಃ
ಅಂಗಡಿಯವರಿಗೂ. ಇವರದೇ ದೊಡ್ಡದಾದ ಅಂಗಡಿಯೊಂದು ಊರಾಚೆಯ ರಸ್ತೆಯ ಪಕ್ಕದಲ್ಲಿ ಡೊಡ್ಡನಗರಿಗಳಂತಹ ಮಾಲ್
ಗಾತ್ರದಲ್ಲದಿದ್ದರೂ ಗಜೇಂದ್ರಗಡದ ಮಟ್ಟಿಗೆ ಸಾಕಾಗುವಷ್ಟು ಅಂಗಡಿಯೊಂದು ವ್ಯಾಪಾರದ ವಿಸ್ತರಣೆಯ ಭಾಗವಾಗಿ
ತಲೆಯೆತ್ತಿದ್ದರೂ ಅಲ್ಲಿಗೆ ಹೋಗುವ ಸೋಮಾರಿತನದಿಂದಾಗಿ ನಾವು ಊರೊಳಗಿನ ಕಿಷ್ಕಿಂಧೆಯಂತಹ ಅಂಗಡಿಯೊಳಗೆ
ನುಗ್ಗಿದ್ದೆವು.
ನಮಗೆ ಬೇಕಾದುದು ಒಂದಷ್ಟು ಶೇವಿಂಗ್ ಬ್ಲೇಡುಗಳು, ಸೋಪು
ಮತ್ತು ಶಾಂಪು ಇತ್ಯಾದಿ. ನಾವು ಕೇಳಿದ್ದನ್ನೆಲ್ಲಾ ಅಂಗಡಿಯವನು ಚಕಚಕನೇ ತೆಗೆದು ಟೇಬಲ್ಲಿನ ಮೇಲಿಟ್ಟನು.
ಆದರೆ ಶೇವಿಂಗ್ ಬ್ಲೇಡ್ ಮಾತ್ರ ಅವನ ಎದುರಿಗಿದ್ದ ಭಾಗದಲ್ಲಿದ್ದುದರಿಂದ ಚಕ್ರವ್ಯೂಹಗೊಳಗೆ ಸುತ್ತಿ
ಬಂದಂತೆ ಅತ್ತಕಡೆಗೆ ಬರಲೊಲ್ಲದೆಯೋ ಅಥವಾ ಇನ್ನಿತರ ಗ್ರಾಹಕರ ಕಡೆ ಗಮನಕೊಡಲೋಸುಗವೋ ಅವನು ಹಿತೇಶ್‌ಗೆ
ಎದುರಿಗಿದ್ದ ಖಾನೆಗಳತ್ತ ಕೈತೋರಿಸಿ “ಅಲ್ಲಿ ಅದಾವ್ರಿ” ಎಂದು ಸಣ್ಣದೊಂದು ನಗೆ ಬೀರಿದ. ಹಿತೇಶ್
ತಮ್ಮ ಬೆನ್ನಿನ ಹಿಂದಕ್ಕೆ ತಿರುಗಿ ಬ್ಲೇಡ್ ಇರುವ ಜಾಗವನ್ನು ಚುರುಕಾದ ಕಣ್ಣುಗಳಿಂದ ಹುಡುಕುತ್ತಾ
ನಮಗೆ ಬೇಕಾದ ಬ್ರ್ಯಾಂಡ್ ಸಿಕ್ಕಿದೊಡನೆ ಎತ್ತರಕ್ಕೆ ಸವಾಲಿನಂತಿದ್ದ ಆ ಬ್ಲೇಡುಗಳನ್ನು ಆರಡಿ ಎತ್ತರದ
ಅವರು ಸುಲಭವಾಗಿ ತೆಗೆದುಕೊಂಡು ಗೆಲುವಿನ ನಗೆಯೊಂದಿಗೆ ಅಂಗಡಿಯವನಿಗೆ ಬಿಲ್ ಮಾಡಲು ಹೇಳಿದರು.
ಅಷ್ಟರಲ್ಲಿ
ನಾನು ಖರೀದಿಸಿದ್ದ ವಸ್ತುಗಳಿಗೆ ಬೆಲೆ ತೆರಲೆಂದು ಕೈಯಲ್ಲಿ ಹಿಡಿದಿದ್ದ ಐನೂರರ ನೋಟನ್ನು ಹಿತೇಶ್
ಕೈಗೆ ವರ್ಗಾಯಿಸಿದ್ದೆ. ಏಕೆಂದರೆ ಅವರ ಪಕ್ಕದ ಮನೆಗೆ ನಾನು ವಾಸಕ್ಕೆ ಬಂದಾಗಿನಿಂದ ನಾಷ್ಟಾ, ಊಟ,
ಹಣ್ಣು, ದಿನಸಿ, ಔಷಧಿ ಹೀಗೆ ನನಗೆ ಬೇಕಾದ ಯಾವ ವಸ್ತುಗಳಿಗೂ ಅವರು ನನ್ನಿಂದ ಹಣ ಖರ್ಚು ಮಾಡಿಸುತ್ತಿರಲಿಲ್ಲ.
ಬಹುತೇಕ ಎಲ್ಲಾ ಸಮಯದಲ್ಲೂ ಅವರೇ ಅವುಗಳ ಬೆಲೆ ತೆರುತ್ತಿದ್ದರು. ಹಾಗಾಗಿ ನಾನು ಮುಂಚಿತವಾಗಿ ಹಣವನ್ನು
ಕೈಯಲ್ಲಿಡಿದು ಅವರ ಬೆಲೆ ತೆರುವ ಚಟವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೆ. ಹೆಚ್ಚಿನ ಸಮಯಗಳಲ್ಲಿ
ಅವರ ಚಟವೇ ಗೆಲ್ಲುತ್ತಿದ್ದಾದರೂ ಕೆಲವೊಮ್ಮೆ ನನ್ನ ಹಠವೂ ಗೆಲ್ಲುತ್ತಿತ್ತು. ಅಂದು ಹಾಗೆಯೇ ಆಗಿತ್ತು.
ಹಿತೇಶ್ ಕೈಗೆ ನಾನು ಕೊಟ್ಟಿದ್ದ ನೋಟು ಅವರ ಕೈಯಲ್ಲೇ ಇತ್ತು. ಅದೇ ವೇಳೆಯಲ್ಲಿ ಅವರು ಬ್ಲೇಡ್ ಹುಡುಕುವ
ಯತ್ನದಲ್ಲಿ ತೊಡಗಿದ್ದರು.
ಖರೀದಿ ಮುಗಿದ ನಂತರ ಬಿಲ್ಲಿನ ಹಣ ಪಾವತಿಸಲು ಹೇಳಿದ ನನಗೆ
ಹಿತೇಶ್ “ಐನೂರು ರೂಪಾಯಿ ನಿಮ್ಮ ಕೈಗೆ ಕೊಟ್ನಲ್ಲ ಸರ್, ಎಲ್ಲಿಟ್ರಿ” ಎಂದರು. ಕೈಯಲ್ಲಿ ಕೇನ್
ಹಿಡಿದು ನಿಂತಿದ್ದ ನಾನು ನನ್ನ ಬರಿಗೈಗಳನ್ನು ಅವರತ್ತ ತೋರಿಸಿ “ಇಲ್ಲ, ನಿಮ್ಮ ಹತ್ತಿರವೇ ಇರಬೇಕು
ನೋಡಿ” ಎಂದೆ. ಈಗ ಹುಡುಕಾಟದ ಸರದಿ ಅವರದಾಗಿತ್ತು. ತಮ್ಮ ಪ್ಯಾಂಟು-ಶರ್ಟಿನ ಜೇಬುಗಳನ್ನೆಲ್ಲಾ ಸಂಶೋಧಿಸಿದ
ಅವರು ಅದರಲ್ಲಿ ವಿಫಲರಾಗಿ ಕಡೆಗೆ ನೋಟನ್ನು ಎಲ್ಲಿಟ್ಟೆ ಎಂದು ನೆನಪು ಮಾಡಿಕೊಳ್ಳಲು ಯತ್ನಿಸಿ ಸೋತರು.
ಅಂತಿಮವಾಗಿ ತಮ್ಮ ನೆನಪನ್ನೊಮ್ಮೆ ಕೆದರಾಡಿ ಸಂಪೂರ್ಣ ವಿಶ್ವಾಸದಿಂದಲ್ಲದಿದ್ದರೂ ಅನುಮಾನಾಸ್ಪದವಾಗಿ
“ಟೇಬಲ್ ಮೇಲೆ ಇಟ್ಟಿದ್ದೆ ಅನ್ಸುತ್ತೆ; ನೀವೆನಾದ್ರೂ ಪೆಟ್ಟಿಗೆಯೊಳಗೆ ಹಾಕಿದ್ರಾ ನೋಡಿ ” ಎಂದರು
ಅಂಗಡಿಯವನಿಗೆ. ಅವನು “ಇಲ್ರಿ, ಪೆಟ್ಟಿಗೆಯೊಳಗೆ ಯಾವ್ದೂ
ಐನೂರರ ನೋಟಿಲ್ರಿ” ಎಂದನು ತನ್ನ ಗಲ್ಲಾಪೆಟ್ಟಿಗೆಯನ್ನು ಪರಿಶೀಲಿಸಿ. ನಾವು ಫೋನ್ ಪೆ ಮಾಡಿದ್ದರೆ ಪರಿಶೀಲಿಸುವ ಅವಕಾಶವಿತ್ತು.
ಅಂಗಡಿಯಲ್ಲಿ ತುಸು ಗದ್ದಲ ಹೆಚ್ಚಾಗಿದ್ದರಿಂದ ನಾವು ಅದನ್ನು ಹುಡುಕುವ ಗೋಜಿಗೆ ಹೋಗದೇ ಫೋನ್ ಪೆ
ಮಾಡಿ ಖರೀದಿಸಿದ್ದ ವಸ್ತುಗಳನ್ನು ಕೈಲಿಡಿದು ಹೊರನಡೆದೆವು. ಆದರೆ ಅಂದು ನನ್ನ ಹಠ ಗೆದ್ದಿತ್ತೋ? ಹಿತೇಶ್
ಚಟ ಗೆದ್ದಿತ್ತೋ ನೆನಪಿಲ್ಲ. ನೋಟು ಅದ್ಹೇಗೆ ಮಾಯವಾಯಿತೋ ಎಂಬ ಮಾಯೆ ಅರ್ಥವಾಗದೇ ಬೈಕನ್ನೇರಿದೆವು.
ಅದಾಗಲೇ ಊಟದ ಸಮಯವಾದ್ದರಿಂದ ನಮ್ಮ ಗಾಡಿ ಬನಶಂಕರಿಯ ದಾರಿ ಹಿಡಿದಿತ್ತು. ಬಾದಾಮಿಯ ಬನಶಂಕರಿಯಲ್ಲ;
ರೋಣ ರಸ್ತೆಯಲ್ಲಿದ್ದ ಹೋಟೆಲ್ ಬನಶಂಕರಿಯತ್ತ.
ಇದಾಗಿ ಒಂದೆರಡು ತಿಂಗಳುಗಳೇ ಕಳೆದಿರಬೇಕು. ನಾನು ಪುನಃ
ನನ್ನ ವಿದ್ಯಾರ್ಥಿಯೊಬ್ಬನ ಜೊತೆಗೆ ಅದೇ ಕಿಷ್ಕಿಂಧೆಯಂತಹ ದೀಪಕ್ ಸ್ಟೋರಿಗೆ ಏನನ್ನೋ ಖರೀದಿಸಲು ಹೋದೆ.
ನಮ್ಮ ಖರೀದಿ ಎಲ್ಲ ಮುಗಿದ ನಂತರ ಸುಮಾರು 350 ರೂಪಾಯಿಗಳಷ್ಟು ಹಣವನ್ನು ನಾನು ಪಾವತಿಸಬೇಕಾಗಿತ್ತು.
ಅದಕ್ಕಾಗಿ ನಾನು ಫೋನೋ ಅಥವಾ ನೋಟೋ ಇನ್ನು ಹೊರತೆಗೆದಿರಲಿಲ್ಲ. ಅಂಗಡಿಯ ಕೌಂಟರಿನಲ್ಲಿದ್ದ ಹುಡುಗನ
ಮಾತು ಹೊರಬಿದ್ದಿತ್ತು; “ಸರ್, ನಾನೇ ನಿಮ್ಗೆ ಚಿಲ್ರೆ ಕೊಡ್ತಿನ್ರಿ; ನಿಮ್ಮ ರೊಕ್ಕಾನೆ ನಮ್ಹತ್ರ
ೈತ್ರಿ” ಎಂದ. ಕ್ಷಣಕಾಲ ಅವಾಕ್ಕಾದ ನಾನು “ಯಾವ ದುಡ್ಡು ಮಾರಾಯಾ? ನಾನ್ಯಾವಾಗ ಕೊಟ್ಟಿದ್ದೆ ನಿಂಗೆ?”
ಎಂದು ಗೊಂದಲದಲ್ಲಿಯೇ ಅವನತ್ತ ಪ್ರಶ್ನೆಯನ್ನೆಸೆದೆ. ನನ್ನ ಪ್ರಶ್ನೆಯ ಬಾಣ ಅವನೆದೆಯನ್ನು ತಾಕುವ ಮೊದಲೆ
ಅದನ್ನವನು ಅರ್ಧದಲ್ಲಿಯೇ ತುಂಡರಿಸಿ, “ಅವತ್ತು ನೀವು ಐನೂರು ರೂಪಾಯಿ ಕಳಕೊಂಡಿದ್ರಲ್ರಿ ಅದು ಇಲ್ಲೇ
ಟೇಬಲ್ಲಿನ ಬಾಜೂಕೆ ಬಿದ್ದಿತ್ರಿ. ನೀವ್ಹೋದ್ಮೇಲೆ
ಕಸ್ಟಮರ್ ಯಾರೋ ಅದನ್ನು ಎತ್ಕೊಟ್ರು. ನಾ ನಿಮ್ಮ ಹಿಂದೇನೆ ಬಂದು ರಸ್ತೆಲೆಲ್ಲಾ ನಿಮ್ಗಾಗಿ
ಹುಡುಕಿದ್ರಿ. ಆದ್ರ ನೀವು ಎಲ್ಲೂ ಕಾಣ್ಲಿಲ್ರಿ” ಎಂದು ನನಗೆ ಉಳಿದ ಚಿಲ್ಲರೆ ಕೈಗಿತ್ತು “ಥ್ಯಾಂಕ್ಸ್
ರಿ, ಮತ್ಬರ್ರಿ” ಎಂದು ಮುಖದಲ್ಲೊಂದು ಸಂತೃಪ್ತಿಯ ನಗು ಬೀರಿದ್ದ. ಆಶ್ಚರ್ಯ-ಸಂತೋಷಗಳ ಸಮ್ಮಿಶ್ರ ಭಾವದಲ್ಲಿ
ನಾನವನ ಹೆಸರನ್ನು ಕೇಳಿ ಅವನಿಗೊಂದು ಮರು ಥ್ಯಾಂಕ್ಸ್
ಹೇಳಿ ಅಂಗಡಿಯಿಂದ ಹೊರಬಿದ್ದೆವು. ಅವನ ಮುಖ ಹೇಗಿದೆಯೋ? ಗೊತ್ತಿಲ್ಲ; ಜೊತೆಗೆ ಅವನೆಸರು ನೆನಪಿಲ್ಲ. ಆದರೂ ಅವನ ಪ್ರಾಮಾಣಿಕತೆ ಮಾತ್ರ ಸ್ಮೃತಿಪಟಲದಲ್ಲಿ
ಅಚ್ಚಳಿಯದೇ ಮೂಡಿದೆ.
ದಿನಾಂಕ: ಶನಿವಾರ,
8 ಸೆಪ್ಟೆಂಬರ್, 2024.
*****
Comments
Post a Comment