ಉತ್ತರ ಕನ್ನಡ ಜಿಲ್ಲೆಯ ಕರನಿರಾಕರಣ ಚಳವಳಿ, ಸಂಗ್ರಹಿತ ಮಾಹಿತಿ
ಬಾರ್ದೋಲಿಯ ಕರನಿರಾಕರಣ ಚಳವಳಿಯಲ್ಲದೆ ಎಲ್ಲರ ಗಮನ ಸೆಳೆಯುವ ಇನ್ನೊಂದು ಉದಾಹರಣೆಯೆಂದರೆ ಕರ್ನಾಟಕದ ಶಿರಸಿ, ಸಿದ್ದಾಪುರ, ಅಂಕೋಲೆ ಮತ್ತು ಹಿರೇಕೆರೂರು ತಾಲ್ಲೂಕುಗಳದು. ಈ ನಾಲ್ಕೂ ತಾಲ್ಲೂಕುಗಳ ಜನ ಗಾಂಧೀಜಿಯವರ ನಿರ್ಮಲ ಕಲ್ಪನೆ ಮತ್ತು ಪವಿತ್ರಭಾವನೆಗೆ ಲೇಶವೂ ಊನ ಬಾರದಂತೆ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಹುಲ್ಲುಬನ್ನಿ ಕರನಿರಾಕರಣ ಮುಂತಾದವುಗಳನ್ನು ನಡೆಸಿದರು. ಅಂಕೋಲೆಯದು ಒಂದು ಧ್ಯೇಯಕ್ಕಾಗಿ ನಡೆದ (1930 ಏಪ್ರಿಲ್) ಸತ್ಯಾಗ್ರಹವೆನ್ನ ಬಹುದಾದರೂ ಉಳಿದ ತಾಲ್ಲೂಕುಗಳಲ್ಲಿ ನಡೆದದ್ದು ಒಂದು ಅನಿವಾರ್ಯ ಸನ್ನಿವೇಶದಿಂದಲೂ ಪ್ರಭಾವಿತವಾದದ್ದು ಎಂಬುದನ್ನು ಮರೆಯುವಂತಿಲ್ಲ. 1931ರಲ್ಲಿ ಶಿರಸಿ-ಸಿದ್ದಾಪುರ, ಹಿರೇಕೆರೂರು ಈ ಮೂರು ತಾಲ್ಲೂಕುಗಳಲ್ಲೂ ಕ್ಷಾಮ ಆವರಿಸಿತು. ದವಸ ಧಾನ್ಯಗಳ ಧಾರಣೆಗಳು ಬಿದ್ದುವು. ಶಿರಸಿ, ಸಿದ್ದಾಪುರಗಳ ಸುವರ್ಣಾದಾಯದ ಬೆಳೆಯೆಂದರೆ ಅಡಿಕೆ. ಏನೋ ಕಾರಣದಿಂದ ಆ ಬೆಳೆ ಹಾಳಾಯಿತು. ರೂಪಾಯಿಗೆ ನಾಲ್ಕಾಣೆ (ಕಾಲುಭಾಗ) ಬೆಳೆ ಕೂಡ ರೈತರ ಕೈ ಹತ್ತಲಿಲ್ಲ. ಆ ವರ್ಷ ಕಂದಾಯ ವಸೂಲು ಮಾಡಬಾರದೆಂದು ರೈತರು ಸರ್ಕಾರದಲ್ಲಿ ಮೊರೆ ಇಟ್ಟರು. ಅದು ಬರಿಯ ಅರಣ್ಯರೋದನವಾಯಿತು. ಸರ್ಕಾರ ಆ ಮೊರೆಗೆ ಕಿವಿಗೊಡಲಿಲ್ಲ. ಕ್ಷಾಮ ಸಂಭವಿಸಿಲ್ಲವೆಂದೂ ಬೆಳೆಯಾಗಿಲ್ಲವೆಂಬ ಮಾತು ಸುಳ್ಳೆಂದೂ ಇದು ಕರನಿರಾಕರಣ ಚಳವಳಿಯೆಂದೂ ಸರ್ಕಾರ ವಾದಿಸಿತು. ಆದರೆ ಕ್ಷಾಮ ಉಂಟಾಗಿದ್ದುದು ನಿಜ. ರೈತರೂ ಕಂಗಾಲಾಗಿದ್ದುದೂ ನಿಜ. ಚಳವಳಿಯ ನಾಯಕತ್