ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರತೀಯ ಸಂಸ್ಕೃತಿ.
I. ಪೀಠಿಕೆ : ಭಾರತವು ಬಹುಸಂಸ್ಕೃತಿಗಳ ಬೀಡು. ಅದು ತನ್ನ ಸಾಂಸ್ಕೃತಿಕ ಪರಂಪರೆಯನ್ನು ನೆರೆ-ಹೊರೆಯ ರಾಷ್ಟ್ರಗಳಿಗೂ ಹರಡಿದೆ. ಭಾರತವು ಭೌಗೋಳಿಕವಾಗಿ ಹಿಮಾವೃತ ಪರ್ವತಗಳು ಮತ್ತು ಜಲಗಡಿಗಳಿಂದ ಸುತ್ತುವರಿದು ಪ್ರಪಂಚದ ಇತರ ದೇಶಗಳೊಂದಿಗೆ ಸಂಪರ್ಕಕ್ಕೆ ಬಾರದೇ ಬಹುಕಾಲದವರೆಗೂ ಏಕಾಂಗಿಯಾಗಿತ್ತು ಎಂಬುದು ಕೆಲ ವಿದ್ವಾಂಸರ ಅಭಿಪ್ರಾಯವಾಗಿತ್ತು. ಇಲ್ಲಿಗೆ ಕೇವಲ ಹೊರಗಿನಿಂದ ವಿದೇಶಿಯರು ಬಂದರಷ್ಟೇ; ಭಾರತೀಯರು ಹೊರಪ್ರಪಂಚಕ್ಕೆ ಕಾಲಿಡಲಿಲ್ಲ ಎಂದು 20ನೆ ಶತಮಾನದ ಆದಿಯವರೆಗೂ ನಂಬಲಾಗಿತ್ತು. ಆದರೆ 1921-22 ರಲ್ಲಿ ವಾಯುವ್ಯ ಭಾರತದ ಸಿಂಧೂ ಕಣಿವೆಯಲ್ಲಿ ಹರಪ್ಪಾ ನಾಗರೀಕತೆಯ ಉತ್ಖನನಗಳು ನಡೆದ ನಂತರ ಅಲ್ಲಿನ ಟೆರ್ರಾಕೋಟಾ ಮುದ್ರೆಗಳನ್ನು ಹೋಲುವ ಮುದ್ರೆಗಳು ಮೆಸಪಟೋಮಿಯಾ ಭಾಗದಲ್ಲಿ ದೊರೆತಾಗ ಮೇಲಿನ ನಂಬಿಕೆ ಹುಸಿಯಾಯಿತು. ಮಧ್ಯ ಏಷ್ಯಾದಲ್ಲಿ ಹರಪ್ಪಾ ನಾಗರೀಕತೆಗೆ ಸಂಬಂಧಿಸಿದ ಮುದ್ರೆಗಳು, ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿಯ ಅಂಶಗಳು ಕಂಡುಬಂದಿರುವುದು ಭಾರತೀಯರಿಗೆ ನೌಕಾಯಾನ ತಿಳಿದಿರಲಿಲ್ಲ ಎಂಬ ನಂಬಿಕೆಯನ್ನು ಸುಳ್ಳಾಗಿಸಿದೆ. ಹರಪ್ಪಾ ಕಾಲದಿಂದ 15ನೆ ಶತಮಾನದವರೆಗೆ ಭಾರತದ ಸಾಂಸ್ಕೃತಿಕ ನೆಲೆಗಳು ಮತ್ತು ರಾಜಕೀಯ ವಸಾಹತುಗಳು ಭಾರತದ ಹೊರಗೆ ಅಸ್ತಿತ್ವದಲ್ಲಿದ್ದವು. ಇಸ್ಲಾಂ ಆಗಮನದ ನಂತರ ಮಧ್ಯ ಏಷ್ಯಾ ಮತ್ತು ಆಗ್ನೇಯ ಏಷ್ಯಾಗಳಲ್ಲಿನ ವಸಾಹತುಗಳು ಮತ್ತು ರಾಜಮನೆತನಗಳು ಕಣ್ಮರೆಯಾದರೂ ಅಲ್ಲಿನ ದೇವಾಲಯಗಳು, ವಿಹಾರಗ...