ಖಾಸಗೀಕರಣದ ಅರ್ಥವಿವರಣೆ ಮತ್ತು ವ್ಯಾಪ್ತಿ
(Meaning and Scope of Privatisation) ಪೀಠಿಕೆ: ನಮ್ಮ ದೇಶದ ಸರಕಾರವು ಸಾರ್ವಜನಿಕ ವಲಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ಖಾಸಗಿ ವಲಯಕ್ಕೆ ದ್ವಿತೀಯ ಪ್ರಾಶಸ್ತ್ಯವನ್ನು ನೀಡಿ ಕೈಗಾರಿಕಾ ಅಭಿವೃದ್ಧಿಯನ್ನು ಮತ್ತು ತನ್ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸಿತು. ಆದರೆ ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ತಾನು ಮಾಡಿದ ತಪ್ಪಿನ ಅರಿವು ಉಂಟಾಗಿದ್ದರಿಂದ ಅದು ಈಗ ಖಾಸಗಿ ವಲಯಕ್ಕೆ ಹಿಂದೆ ಎಂದೂ ಇಲ್ಲದಂಥ ಉತ್ತೇಜನವನ್ನು ನೀಡಲು ಪ್ರಾರಂಭಿಸಿದೆ. ಆರನೇ ಪಂಚವಾರ್ಷಿಕ ಯೋಜನೆಯಿಂದಲೇ ಇದು ಪ್ರಾರಂಭವಾಯಿತು. ಅದೇ ವೇಳೆಗೆ ಸಾರ್ವಜನಿಕ ವಲಯವು ರೋಗಗ್ರಸ್ತವಾಗುತ್ತಿರುವ ಬಗೆಗೆ ಹಾಗೂ ಅದು ಬಿಳಿ ಆನೆಯಾಗಿ ಬೆಳೆಯುತ್ತಿರುವ ಬಗೆಗೆ ಸರಕಾರಕ್ಕೆ ಮನವರಿಕೆಯಾಯಿತು. ಹೀಗಾಗಿ ಅದು ಸಾರ್ವಜನಿಕ ವಲಯದ ಶೇರುಗಳನ್ನು ಖಾಸಗಿಯವರಿಗೂ ಹಾಗೂ ಹಣಕಾಸಿನ ಸಂಸ್ಥೆಗಳಿಗೂ ವರ್ಗಾಯಿಸಲು ಕ್ರಮಕೈಕೊಂಡಿದೆ ಮತ್ತು ಖಾಸಗಿ ವಲಯದ ಮೇಲಿನ ಅನೇಕ ನಿರ್ಬಂಧಗಳನ್ನು ತೆಗೆದುಹಾಕಲು ಹಾಗೂ ಅದು ಮುಕ್ತವಾಗಿ ಸ್ವತಂತ್ರವಾಗಿ ಬೆಳೆಯಲು ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸುತ್ತಿದೆ. ‘ಖಾಸಗೀಕರಣ’ ಎಂಬ ಪದಕ್ಕೆ ಹಲವಾರು ಅರ್ಥ ವಿವರಣೆಗಳನ್ನು ನೀಡಲಾಗಿದೆ. ಸಂಕುಚಿತ ಅರ್ಥದಲ್ಲಿ ‘ಖಾಸಗೀಕರಣ’ವೆಂದರೆ ಸಾರ್ವಜನಿಕ (ಅಥವಾ ಸರಕಾರಿ) ಒಡೆತನದ ಸಂಸ್ಥೆಗಳನ್ನು ಖಾಸಗಿ ಒಡೆತನಕ್ಕೆ ಸೇರಿಸುವುದು ಅಂದರೆ ಸರಕಾರಿ ಒಡೆತನಕ್ಕೆ ಬದಲು ಖಾಸಗಿ ಒಡೆತನವನ...