ಕರ್ನಾಟಕದಲ್ಲಿ ಇತಿಹಾಸ ಪೂರ್ವ ಕಾಲ: ಹಳೆ, ಮಧ್ಯ ಮತ್ತು ನವಶಿಲಾಯುಗಗಳು.
ಸೂಚನೆ:- ಇಲ್ಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ. ಗತಕಾಲದ ಘಟನೆಗಳಲ್ಲಿ ಇತಿಹಾಸದ ಕಾಲ ಆರಂಭವಾಗುವ ಮುಂಚಿನ ಅಂದರೆ ಇತಿಹಾಸಪೂರ್ವ ಕಾಲದ ಘಟನೆಗಳು ಮಾನವನ ಬೆಳವಣಿಗೆಯ ವಿವಿಧ ಹಂತಗಳನ್ನು ಅರಿತುಕೊಳ್ಳಲು ಸಹಾಯಕವಾಗಿವೆ. ಇತಿಹಾಸಪೂರ್ವ ಕಾಲವು ಬರಹ ರೂಪವು ಆರಂಭವಾಗುವುದಕ್ಕಿಂತ ಪೂರ್ವಕಾಲದ ಅವಧಿಯಾಗಿದೆ. ಆ ಕಾಲದ ಇತಿಹಾಸದ ಅಧ್ಯಯನಕ್ಕೆ ನೆರವಾಗುವ ಆಕರಗಳು ಪಳೆಯುಳಿಕೆ ಸ್ವರೂಪದವು ಅಂದರೆ ಪುರಾತತ್ವ ಆಧಾರಗಳಾಗಿವೆ. ಇತಿಹಾಸಪೂರ್ವ ಕಾಲದಲ್ಲಿ ಕಾಣಬರುವ ಹಳೇ, ಮಧ್ಯ ಮತ್ತು ನವ ಶಿಲಾಯುಗಗಳ ಕಾಲಘಟ್ಟಗಳಲ್ಲಿ ಕಾಣಸಿಗುವ ಪುರಾತತ್ವ ಆಕರಗಳು ಮತ್ತು ಆಯುಧಗಳ ವಿನ್ಯಾಸಗಳಲ್ಲಿ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಭೌಗೋಳಿಕವಾಗಿ ಕರ್ನಾಟಕವು ಪ್ರಾಚೀನ ಭಾರತದ ಒಂದು ಭಾಗವಾಗಿದ್ದು, ದಖನ್ ಭಾಗದಲ್ಲಿದೆ. ಈ ಪ್ರದೇಶದ ಜನರ ಜೀವನದ ನಡತೆಯು ಪ್ರಾದೇಶಿಕ ಭೌಗೋಳಿಕ ಲಕ್ಷಣಗಳನ್ನು ಆಧರಿಸಿದೆ. ಇತಿಹಾಸಪೂರ್ವ ಕಾಲದ ಜೀವನ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವಾಗಿದ್ದಿತು. ಅವರು ಗುಹೆಗಳಲ್ಲಿ ವಾಸ ಮಾಡುತ್ತಿದ್ದು, ಕಲ್ಲಿನ ಆಯುಧಗಳು ಮತ್ತು ಮೂಲ ಸಾಧನಗಳನ್ನು ಬಳಕೆ ಮಾಡುತ್ತಿದ್ದರು. ಆದ್ದರಿಂದ ಕರ್ನಾಟಕ ( ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ ) ಇತಿಹಾಸ ಪೂರ್ವ ಸಂಸ್ಕೃತಿಯನ್ನು ' ಕೈ -...