ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ
"ಶಕ್ತಿ ವಿಶಿಷ್ಟಾದ್ವೈತ"ವು ಲಿಂಗಾಯತ ಧರ್ಮದ ಸಿದ್ಧಾಂತ. ಅದರ ಸಾರವನ್ನು ಹೀಗೆ ಹೇಳಬಹುದು:- "ಜಗತ್ತಿನ ಅತ್ಯಂತಿಕ ತತ್ವವೆಂದರೆ ಪರಮಾತ್ಮನು! ಅವನು ಒಬ್ಬನು. ಇವನು ಒಂದು ವಿಶೇಷ ಶಕ್ತಿಯಿಂದ ವಿಶೇಷಿತನಾಗಿದ್ದಾನೆ. ಅದುವೆ ಚಿಚ್ಛಕ್ತಿ; ಈ ಶಕ್ತಿ-ಶಿವ ಎರಡು ಬೇರೆ ಬೇರೆ ವ್ಯಕ್ತಿಗಳಲ್ಲ, ತತ್ವಗಳು. ಶಕ್ತಿಯು ಆಗಂತುಕವಾಗಿ ಬಂದು ಸೇರಿದುದಲ್ಲ, ಅಂತರ್ಗತವಾಗಿ ಇರುವಂಥಾದ್ದು. ಶಿವ-ಶಕ್ತಿಯರ ಸಂಬಂಧ ಬಿಚ್ಚಿ ಬೇರಾಗದ ಬೆರಸಿ ಒಂದಾಗದ ಅವಿನಾಭಾವ ಸಂಬಂಧ. ತನ್ನ ಅಂತರ್ಗತ ಶಕ್ತಿಯ ಸಹಾಯದಿಂದಲೇ ದೇವನು ಈ ಜಗತ್ತಿನ ತಂದೆ ಮತ್ತು ತಾಯಿ ಎರಡೂ ಆಗಿದ್ದಾನೆ. ಜಗತ್ತಿನ ತಂದೆ-ತಾಯಿ ಯಾರು? ಪಂಚಭೂತಗಳ ಪ್ರಸರಣವೇ ಸೃಷ್ಟಿ. ಪೃಥ್ವಿ, ಆಪ್ ಅಥವಾ ಜಲ, ತೇಜ ಅಥವಾ ಅಗ್ನಿ, ವಾಯು ಆಕಾಶ ಎಂಬ ಐದು ಭೂತಗಳು ಪರಸ್ಪರ ಬೆರೆತಾಗ, ವಿವಿಧ ಪ್ರಮಾಣದಲ್ಲಿ ಒಡೆದು ಒಂದು ಗೂಡಿದಾಗ ಈ ಪ್ರಕೃತಿಯ ರಚನೆ. ಮನುಷ್ಯನ ದೇಹವು ಈ ಐದು ತತ್ವಗಳಿಂದ ಆಗಿದೆ ಎನ್ನಲಾಗಿದೆ; ಎಂತಲೇ ಮರಣದ ನಂತರ ಶರೀರವು ಪಂಚಬೂತಗಳಲ್ಲಿ ಲೀನವಾಯಿತು ಎನ್ನಲಾಗುತ್ತದೆ. ಅಂದರೆ, ಮಾನವ ದೇಹ ನಮ್ಮ ಅಧ್ಯಯನದ ಅಳವಿಗೆ ಸಿಕ್ಕುವಂತಹುದು. ಪೃಥ್ವಿ ತತ್ವದ ಪರಿಣಾಮವೇ ಚರ್ಮ, ಮಾಂಸ, ಮೂಳೆ ಮುಂತಾದವು. ಜಲ ತತ್ವದ ಅಸ್ತಿತ್ವವನ್ನು ಸಾರುವವು ಅವುಗಳ ಪರಿಣಾಮಗಳಾದ ರಕ್ತ, ಕಣ್ಣೀರು, ಮೂತ್ರ ಮುಂತಾದವು. ತೇಜಸ್ ತತ್ವದ ಪರಿಣಾಮವೇ ಮೈಯ ಉಷ್ಣತೆ, ನಾಡಿಯಲ್ಲಿ ಅಗ್ನಿ, ಜಠರಾಗ್ನಿ, ...