ಘಟಕ 1. ಮೂಲಾಧಾರಗಳು ಮತ್ತು ಇತಿಹಾಸಪೂರ್ವ ಕಾಲ - ಹಳೆಶಿಲಾಯುಗ ಸಂಸ್ಕೃತಿ.

ವಿಸ್ತರಣೆ; ಶಿಲಾ ಉದ್ಯಮಗಳು ಮತ್ತು ಇತರೆ ತಾಂತ್ರಿಕ ಬೆಳವಣಿಗೆಗಳು;  ಮಧ್ಯಶಿಲಾಯುಗ ಸಂಸ್ಕೃತಿ – ಕಾಲಾನುಗತ ಮತ್ತು ಪ್ರಾದೇಶಿಕ ವಿಸ್ತರಣೆ; ತಾಂತ್ರಿಕ, ಆರ್ಥಿಕ ಮತ್ತು ಶಿಲಾ ಚಿತ್ರಕಲೆಗಳಲ್ಲಿ ಹೊಸ ಬೆಳವಣಿಗೆಗಳು.

Paleolithic Culture- Sequence and Distribution; Stone Industries and other Technological Developments, Mesolithic Cultures- Regional and Chronological Distribution; new Developments in Technology and Economy; Rock Art.

------------------------------

ಪೀಠಿಕೆ: ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಲ್ಲಿ ಎರಡು ಬಗೆಗಳಿವೆ. ಲಿಖಿತ ಮತ್ತು ಅಲಿಖಿತ. ಇತಿಹಾಸ ಪುನರ್‌ ರಚನೆಗೆ ಲಿಖಿತ ಆಧಾರಗಳು ಲಭ್ಯವಾಗುವ ನಂತರದ ಕಾಲವನ್ನು “ಐತಿಹಾಸಿಕ ಕಾಲ” ೆನ್ನುವರು. ಆದರೆ, ಇತಿಹಾಸದ ಪುನರ್‌ ರಚನೆಗೆ ಕೇವಲ ಅಲಿಖಿತ ಆಧಾರಗಳು ಲಭ್ಯವಾಗುವ ಕಾಲವನ್ನು “ಇತಿಹಾಸಪೂರ್ವ ಕಾಲ, ಪ್ರಾಗೈತಿಹಾಸಿಕ ಕಾಲ ಅಥವಾ ಪ್ರಾಗ್ಚಾರಿತ್ರಿಕ ಕಾಲ” ಎನ್ನುವರು. ಸಾಮಾನ್ಯ ಶಕ ಪೂರ್ವ 3000 ವರ್ಷಗಳ ಹಿಂದಿನ ಕಾಲವನ್ನು ಇತಿಹಾಸಪೂರ್ವ ಕಾಲ ಎಂದು ಕರೆಯುವರು. ಈ ಕಾಲದ ಆರಂಭ, ವಿಕಾಸ & ಅಂತ್ಯಗಳು ಯಾವಾಗ ಆದವು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇತಿಹಾಸಪೂರ್ವ ಕಾಲದ ಜೀವನ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವಾಗಿದ್ದಿತು. ಆ ಕಾಲದ ಮಾನವರು ಗುಹೆ, ಮರದ ಪೊಟರೆಗಳಲ್ಲಿ ವಾಸ ಮಾಡುತ್ತಿದ್ದು, ಕಲ್ಲಿನ ಆಯುಧಗಳು, ಮರ ಇಲ್ಲವೇ ಪ್ರಾಣಿ ಅಥವಾ ಮನುಷ್ಯರ ಮೂಳೆಗಳಿಂದ ತಯಾರಿಸಿದ ಆಯುಧಗಳನ್ನು ಭೇಟೆಯಾಡಲು ಇಲ್ಲವೇ ಆಹಾರ ರೂಪದ ಗೆಡ್ಡೆ-ಗೆಣಸುಗಳನ್ನು ಅಗೆಯಲು ಬಳಕೆ ಮಾಡುತ್ತಿದ್ದರು. ಕಾಲಕ್ರಮೇಣ ಈ ಜನತೆಯು ಅಭಿವೃದ್ಧಿಯತ್ತ ಸಾಗತೊಡಗಿ, ಕೃಷಿಯ ಕಡೆಗೆ ತಿರುಗಿ ಒಂದೆಡೆ ನೆಲೆಸಿ ಸ್ಥಿರ ಜೀವನವನ್ನು ನಡೆಸತೊಡಗಿದರು. ಆ ಕಾಲಘಟ್ಟವನ್ನು “ಶಿಲಾಯುಗ ಸಂಸ್ಕೃತಿಯ ಕಾಲ” ಎಂತಲೂ ಕರೆಯುವರು.

            ಮಾನವ ಮೊದಮೊದಲು ಇತರ ಪ್ರಾಣಿಗಳಲ್ಲೊಬ್ಬನಾಗಿ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಆಹಾರ ಪದಾರ್ಥಗಳನ್ನು ಅವುಗಳಂತೆಯೇ ಸಂಗ್ರಹಿಸಿ ಜೀವನ ನಡೆಸುತ್ತಿದ್ದ. ಆದರೆ ಮಾನವನನ್ನು ಇತರ ಪ್ರಾಣಿಗಳಿಂದ ಬೇರ್ಪಡಿಸಿದ ಲಕ್ಷಣವೆಂದರೆ ಅವು ತಮ್ಮ ರಕ್ಷಣೆ ಮತ್ತು ಆಹಾರ ಸಂಪಾದನೆಗೆ ದೇಹದಲ್ಲಿಯೇ ಸಲಕರಣೆಗಳನ್ನು ಹೊಂದಿದ್ದರೆ, ಮಾನವ ತನ್ನ ಶರೀರಕ್ಕೆ ಸೇರದ ಬಾಹ್ಯ ಆಯುಧ ಉಪಕರಣಗಳಿಂದ ತನ್ನ ಕಾರ್ಯಗಳನ್ನು ಸಾಧಿಸಬೇಕಾಗಿತ್ತು. ಕಾರಣದಿಂದಲೇ ಮಾನವ ಅವಶ್ಯವಾಗಿ ಆಯುಧೋಪಕರಣಗಳ ತಯಾರಿಕೆಯಲ್ಲಿ ತೊಡಗಿ ಕ್ರಮೇಣ ಗಳಿಸಿದ ವಿವಿಧ ಅನುಭವಗಳಿಂದ ತನ್ನ ಬುದ್ಧಿಶಕ್ತಿಯನ್ನು ಬೆಳೆಸಿಕೊಂಡು ಪ್ರಗತಿಯನ್ನು ಸಾಧಿಸಿದ. ಪ್ರಗತಿಯ ಅಧ್ಯಯನವೇ ಮಾನವನ ಪ್ರಾಗೈತಿಹಾಸ ಕಾಲ; ಅದರಲ್ಲಿ ಸಸ್ಯಮೂಲ ಆಹಾರದ ಸಂಗ್ರಹಣೆಗೆ, ಪ್ರಾಣಿ ಜನ್ಯ ಆಹಾರದ ಬೇಟೆಗಳಿಗೆ ಒರಟಾದ ಕಲ್ಲಿನ ಆಯುಧಗಳನ್ನು ಮಾನವ ಉಪಯೋಗಿಸುತ್ತಿದ್ದ ಹಂತವನ್ನು ಪುರಾತನ ಶಿಲಾಯುಗವೆಂದು ಕರೆಯಲಾಗಿದೆ. ಮಾನವ ಮೊತ್ತಮೊದಲಿಗೆ ಭೂಮಿಯ ಮೇಲೆ ಕಾಣಿಸಿಕೊಂಡಂದಿನಿಂದ ಅವನು ಆಹಾರ ಸಂಗ್ರಹಣೆಯಿಂದ ಹೊಟ್ಟೆ ಹೊರೆಯುತ್ತಿದ್ದಷ್ಟು ಕಾಲ ಕಾಲಘಟ್ಟಕ್ಕೆ ಸೇರುತ್ತದೆ. ಇದರ ವ್ಯಾಪ್ತಿ ಹತ್ತು ಲಕ್ಷ ವರ್ಷಗಳೆಂದು ಪುರಾತತ್ವಜ್ಞರು ಇತ್ತೀಚಿನವರೆಗೂ ಭಾವಿಸಿದ್ದರು; ಆದರೆ, ಅದು ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳಷ್ಟು ಕಾಲ ವಿಸ್ತರಿಸಿತ್ತೆಂಬುದು ಆಧುನಿಕ ವೈಜ್ಞಾನಿಕ ವಿಧಾನಗಳಿಂದ ಈಗ ತಿಳಿದುಬಂದಿದೆ. ಮಾನವ ಇತಿಹಾಸದ ಈ ಕಾಲಘಟ್ಟವು ವಿವಿಧ ದೇಶಗಳಲ್ಲಿ ಬೇರೆ-ಬೇರೆ ಕಾಲಘಟ್ಟದಲ್ಲಿ ಕಂಡುಬರುತ್ತದೆ.

            ಭೂವೈಜ್ಞಾನಿಕರು ಭೂಮಿಯ ಇತಿಹಾಸವನ್ನು ಆರ್ಕೆಯನ್‌  ಮತ್ತು ಫೆನೆರೊಜ಼ೋಯಿಕ್‌ ಯುಗವೆಂದು  ಮುಖ್ಯವಾಗಿ ಎರಡು ವಿಭಾಗಗಳಾಗಿ ಗುರ್ತಿಸಿದ್ದಾರೆ. ಫೆನೆರೊಜ಼ೋಯಿಕ್‌ ಯುಗವನ್ನು ಪುನಃ ಪ್ರಿಕ್ಯಾಂಬ್ರಿಯನ್‌, ಪ್ಯಾಲಿಯೊಜ಼ೋಯಿಕ್, ಮೆಸೊಜ಼ೋಯಿಕ್‌ ಮತ್ತು ಸೆನೊಜ಼ೋಯಿಕ್‌ ಎಂಬ ನಾಲ್ಕು ಪರ್ವಗಳಾಗಿ ವಿಂಗಡಿಸಿದ್ದಾರೆ. ಪ್ಯಾಲಿಯೊಜ಼ೋಯಿಕ್‌ ಯುಗದಲ್ಲಿ ಅಕಶೇರುಕಗಳು ಕಂಡುಬಂದವು. ಮೆಸೋಜ಼ೋಯಿಕ್‌ ಯುಗದಲ್ಲಿ ಬೃಹತ್‌ ಜೀವಿಗಳಾದ ಡೈನೋಸಾರ್‌ಗಳು ಉಗಮಿಸಿ ನಾಶವಾದವು. ಇವುಗಳಲ್ಲಿ ಕೊನೆಯದಾದ ಸೆನೊಜ಼ೋಯಿಕ್‌ ಪರ್ವವನ್ನು ಪ್ಲಿಯೋಸೀನ್ ಮತ್ತು ಪ್ಲೀಸ್ಟೊಸೀನ್ ಎಂಬ ಎರಡು ಯುಗಗಳಾಗಿ ವಿಂಗಡಿಸಲಾಗಿದೆ. ಮಾನವನ ಮೊದಮೊದಲ ಚಟುವಟಿಕೆಗಳು ಪ್ಲೀಸ್ಟೊಸೀನ್ ಯುಗದಲ್ಲಿ ಕಂಡುಬರುತ್ತವೆ. ಪುರಾತನ ಶಿಲಾಯುಗದ ಕಾಲವಾದ ಪ್ಲೀಸ್ಟೊಸೀನ್ ಯುಗವನ್ನು ಅಧ್ಯಯನದ ಅನುಕೂಲಕ್ಕಾಗಿ ಆದಿ, ಮಧ್ಯ ಮತ್ತು ಅಂತ್ಯ ಪ್ಲೀಸ್ಟೊಸೀನ್ ಎಂಬುದಾಗಿ ಪುನಃ ವಿಂಗಡಿಸಲಾಗಿದೆ. ಪ್ರಸ್ತುತ ಭೂಮಿಯು ಪ್ಲೀಸ್ಟೊಸೀನ್ ಕಾಲಘಟ್ಟದ ಕೊನೆಯ ಭಾಗವಾಗಿರುವ ಹಾಲೊಸೀನ್‌ ಯುಗದಲ್ಲಿದೆ.

          ಮಾನವ ಪೀಳಿಗೆಯಲ್ಲಿ ಮಾತ್ರ ಸಂಸ್ಕೃತಿ ಬೆಳೆಯಲು ಮುಖ್ಯ ಕಾರಣವೆಂದರೆ ಇತರ ಪ್ರಾಣಿಸಂತತಿಗಳಲ್ಲಿ ಇಲ್ಲದ ಕೆಲವು ಗುಣಗಳು ಮಾನವನಲ್ಲಿದ್ದುದು. ಅಂದರೆ ಚುರುಕಾದ ದೃಷ್ಟಿ, ದೊಡ್ಡ ಮಿದುಳು ಮತ್ತು ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳುವ ಶಕ್ತಿ-ಇವುಗಳ ಜೊತೆಗೆ ಮಾನವ ಹಂತದತ್ತ ಸಾಗುತ್ತಿದ್ದ ಜೀವಿಗಳಲ್ಲಿ ನೆಟ್ಟಗೆ ನಿಲ್ಲುವ ಮತ್ತು ಕಾರಣದಿಂದ ನಡಿಗೆಯಿಂದ ವಿಮುಕ್ತವಾದ ಕೈಗಳನ್ನು ಆಯುಧಗಳ ತಯಾರಿಕೆ, ಭೇಟೆ ಮುಂತಾದ ಚಟುವಟಿಕೆಗಳಿಗೆ ಬಳಸಲು ಸಾಧ್ಯವಾಯಿತು. ಕ್ರಮೇಣ ಚಟುವಟಿಕೆಗಳ ಮುಖಾಂತರ ಅವಕ್ಕೆ ಅವಶ್ಯಕವಾದ ದೈಹಿಕ ಮಾರ್ಪಾಡುಗಳು ಸಂಭವಿಸಿದವು. ಸಸ್ಯಜನ್ಯ ಆಹಾರಗಳನ್ನು ಸೇವಿಸುತ್ತ ಮರಗಳ ಮೇಲೆ ಜೀವಿಸುತ್ತಿದ್ದ ಕೆಲವು ಪ್ರಾಣಿಗಳು ಭೂಮಿಗಿಳಿದು ಬಂದು ದ್ವಿಪಾದಿಗಳಾದ ಅನಂತರ ಬದಲಾವಣೆಗಳಾಗತೊಡಗಿದವು. ಹಂತದಲ್ಲಿ ಸಣ್ಣ ಪ್ರಾಣಿಗಳ ಬೇಟೆಯಿಂದ ಆಹಾರ ಸಂಪಾದನೆ ಮಾಡತೊಡಗಿದ ಮಾನವ ಪ್ರಾಣಿಗಳು ಮಾಂಸಾಹಾರಿಗಳಾದರು. ಸಸ್ಯಜನ್ಯ ಆಹಾರದಿಂದ ಮಾಂಸಹಾರಕ್ಕೆ ಮಾನವ ಮಾರ್ಪಟ್ಟಾಗಲೇ ಸಂಸ್ಕೃತಿಯ ಏರುಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟನೆನ್ನಲಾಗಿದೆ. ಏಕೆಂದರೆ ಸಸ್ಯಜನ್ಯವಾದ ಕಂದಮೂಲ ಫಲಗಳನ್ನು ಒಂಟಿಯಾಗಿ ಸಂಗ್ರಹಿಸಲು ಸಾಧ್ಯ; ಆದರೆ ಬೇಟೆಗೆ ಸಾಮೂಹಿಕ ಯತ್ನ ಅವಶ್ಯ.

            ಕಲ್ಲಿನ ಆಯುಧಗಳ ತಯಾರಿಕೆಯ ದೃಷ್ಟಿಯಿಂದ ಕಾಲದಲ್ಲಿ ವಿವಿಧೋದ್ದೇಶಗಳಿಗೆ ಉಪಯುಕ್ತವಾದ ಸಾಮಾನ್ಯ ಆಯುಧಗಳು ಹೆಚ್ಚು ಬಳಕೆಯಲ್ಲಿದ್ದವು. ಆದರೆ ಕೆಲವು ವಿಧವಾದ ಕೈಗೊಡಲಿ ಮತ್ತು ಸೀಳು ಕೊಡಲಿಗಳನ್ನು ಸಾಮಾನ್ಯವಾಗಿ ಎಲ್ಲೆಡೆಗಳಲ್ಲು ತಯಾರಿಸಲಾಗುತ್ತಿತ್ತು. ಕಲ್ಲಿನ ಆಯುಧಗಳನ್ನು ಬೇಕಾದಾಗ ತಯಾರಿಸಿ ತತ್ಕಾಲದ ಉಪಯೋಗದ ಅನಂತರ ಅಲ್ಲೆ ಎಸೆದುಬಿಡುತ್ತಿದ್ದುದರಿಂದ ಮತ್ತು ಅವು ದೀರ್ಘ ಕಾಲ ಉಳಿಯುತ್ತಿದ್ದುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಸಿಕ್ಕುತ್ತವೆ. ಆದರೆ, ಮೂಳೆ ಮತ್ತು ಮರದ ಆಯುಧಗಳು ಬೇಗ ನಾಶವಾಗುತ್ತಿದ್ದುದರಿಂದ ಅವು ಬಹಳ ವಿರಳವಾಗಿವೆ.

            ಅಧ್ಯಯನದ ದೃಷ್ಟಿಯಿಂದ ಈ ಕಾಲಘಟ್ಟವನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ಮಾಡಿಕೊಳ್ಳಲಾಗಿದೆ:

1.     ಶಿಲಾಯುಗದ ಕಾಲ: ಸಾ.ಶ.ಪೂ. 50,000 ದಿಂದ 4000 ವರ್ಷಗಳ ವರೆಗೆ. ಇದರಲ್ಲಿ ಪುನಃ ಮೂರು ಉಪವಿಭಾಗ ಮಾಡಲಾಗಿದೆ: A.ಹಳೆಶಿಲಾಯುಗ  B. ಮಧ್ಯಶಿಲಾಯುಗ C. ನವಶಿಲಾಯುಗ. ಹಳೆಶಿಲಾಯುಗವನ್ನು ಪುನಃ ಕೆಳಗಿನ ಅಂದರೆ ಅತ್ಯಂತ ಪ್ರಾಚೀನ, ಮಧ್ಯ ಮತ್ತು ಇತ್ತೀಚಿನ ಹಳೆಶಿಲಾಯುಗವೆಂತಲೂ ವರ್ಗೀಕರಣ ಮಾಡಿಕೊಳ್ಳಲಾಗಿದೆ.

2.     ಲೋಹಯುಗ: ಸಾ. ಶ. ಪೂ. 4000 ವರ್ಷಗಳ ಈಚಿನ ಕಾಲ. ಇದನ್ನು ಮತ್ತೆ ಮೂರು ಉಪವಿಭಾಗಗಳಾಗಿ ವಿಭಜಿಸಲಾಗಿದೆ: A. ತಾಮ್ರಯುಗ B. ಕಂಚಿನ ಯುಗ C. ಕಬ್ಬಿಣದ ಯುಗ.

            ಭಾರತದಲ್ಲಿ ಪ್ರಾಗೈತಿಹಾಸಿಕ ಕಾಲದ ಆಧಾರಗಳು ಮತ್ತು ನೆಲೆಗಳ ಸಂಶೋಧನೆ ನಡೆಸಿದ ಕೆಲವು ಪ್ರಮುಖ ಸಂಶೋಧಕರುಗಳೆಂದರೆ        ರಾಬರ್ಟ್‌ ಬ್ರೂಸ್‌ ಫೂಟ್‌, ಭಾರತದ ಪ್ರಾಗೈತಿಹಾಸಿಕ ಪಿತಾಮಹಾ, ಮೆಡೋಸ್‌ ಟೇಲರ್‌, ಜಾನ್‌ ಮಾರ್ಷಲ್‌, ಡಾ. ದಯಾರಾಂ ಸಹಾನಿ, R.D ಬ್ಯಾನರ್ಜಿ, S.R ರಾವ್‌, ಕನ್ನಿಂಗ್‌ ಹ್ಯಾಂ, ಮಾರ್ಟಿಮರ್‌ ವ್ಹೀಲರ್‌, ಡಾ. ಆಲ್ಚಿನ್‌, ಡಾ. ಅನ್ಸಾರಿ, B.K ಥಾಪರ್‌, ಡಾ. H.D ಸಂಕಾಲಿಯ, ಮತ್ತು (ಕರ್ನಾಟಕದಲ್ಲಿ) R.S ಪಂಚಮುಖಿ, M.H ಕೃಷ್ಣ, R.V ಜೋಶಿ, ಡಾ. M. ಶೇಷಾದ್ರಿ, ಡಾ. S. ನಾಗರಾಜ್‌ ಮತ್ತು ಕೃಷ್ಣಸ್ವಾಮಿ ಅಯ್ಯಂಗಾರ್‌ ಪ್ರಮುಖರು.

ಭಾರತದಲ್ಲಿ ಶಿಲಾಯುಗದ ಕಾಲ ವಿಭಜನೆ:-

I. ಹಳೆಶಿಲಾಯುಗ - Paleolithic age(:- ಸಾ.ಶ.ಪೂ. 2.5 ದಶಲಕ್ಷ ವರ್ಷಗಳಿಂದ ಸಾ.ಶ.ಪೂ. 8,000 ವರ್ಷಗಳವರೆಗೆ

II. ಮಧ್ಯಶಿಲಾಯುಗ – Mesolithic age:- ಸಾ.ಶ.ಪೂ. 9,000 ವರ್ಷಗಳಿಂದ ಸಾ.ಶ.ಪೂ. 4000 ವರ್ಷಗಳವರೆಗೆ.

III. ನವಶಿಲಾಯುಗ - Neolithic age:-ಸಾ.ಶ.ಪೂ. 7000 ವರ್ಷಗಳಿಂದ ಸಾ.ಶ.ಪೂ. 1000 ವರ್ಷಗಳವರೆಗೆ.

ಹಳೆಶಿಲಾಯುಗದ ಮಾನವನ ಜೀವನ ಪದ್ಧತಿ (Life of Paleolithic age)

ಈ ಕಾಲಘಟ್ಟವು ಸಾ.ಶ.ಪೂ. 2.5 ದಶಲಕ್ಷ ವರ್ಷಗಳಿಂದ ಸಾ.ಶ.ಪೂ. 8,000 ವರ್ಷಗಳವರೆಗೆ ವ್ಯಾಪಿಸಿತ್ತು ಎಂದು ವಿದ್ವಾಂಸರು ನಿರ್ಧರಿಸಿದ್ದಾರೆ.  ಗ್ರೀಕ್‌ ಪದ Paleolithic ಎಂಬ ಪದಕ್ಕೆ ಹಳೆಯ ಶಿಲಾಯುಗ ಎಂಬ ಪದವನ್ನು ಸಮನಾರ್ಥಕವಾಗಿ ಬಳಸಲಾಗುತ್ತದೆ. Paleoಎಂದರೆ ಹಳೆಯ ಮತ್ತು lithic     ಎಂದರೆ ಶಿಲೆಗೆ ಸಂಬಂಧಿಸಿದುದು ಎಂದರ್ಥ. Palio = ಹಳೆಯ + Litho = ಶಿಲೆ.

            ಆ ಕಾಲದ ಮಾನವನು ಅಲೆಮಾರಿಯಾಗಿದ್ದನು.  ಆಹಾರಕ್ಕಾಗಿ ಗೆಡ್ಡೆ-ಗೆಣಸುಗಳನ್ನು ಅವಲಂಬಿಸಿದ್ದನು. ಮಾಂಸಾಹಾರಕ್ಕಾಗಿ ಬೇಟೆ ಆಡುತ್ತಿದ್ದನು. ಅವನಿಗೆ ಬೆಂಕಿಯ ಉಪಯೋಗ ತಿಳಿದಿರಲಿಲ್ಲ. ಸಾಮೂಹಿಕ ಅಥವಾ ಸಂಘಜೀವನ ಗೊತ್ತಿರಲಿಲ್ಲ. ಗುಹೆ, ಮರದ ಪೊಟರೆಗಳು, ಕಲ್ಲಿನ ಆಸರೆಗಳಲ್ಲಿ ಜೀವಿಸುತ್ತಿದ್ದನು. ನದಿಗಳ ಬಳಿಯಲ್ಲಿ ವಾಸಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಅವನಿಗೆ ಆಹಾರ ಸಂಗ್ರಹಣೆ ತಿಳಿದಿರಲಿಲ್ಲ. ದೇಹವನ್ನು ಮುಚ್ಚಿಡುವುದೂ ಸಹ ಗೊತ್ತಿರಲಿಲ್ಲ. ಗೆಡ್ಡೆ-ಗೆಣಸುಗಳನ್ನು ಅಗೆದು ಹೊರ ತೆಗೆಯಲು ಮತ್ತು ಪ್ರಾಣಿಗಳ ಭೇಟೆಗೆ ಒರಟಾದ ಕೈಕೊಡಲಿ, ಬಾಚಿ, ಭರ್ಚಿ, ಗುಂಡುಗಳಂತಹ ಶಿಲಾಯುಧಗಳನ್ನು ಬಳಸುತ್ತಿದ್ದನು. ತಾನು ವಾಸಿಸುವ ಗುಹೆಗಳ ಛಾವಣಿಗಳು ಮತ್ತು ಗೋಡೆಗಳ ಮೇಲೆ ಒರಟಾದ ರೇಖಾಚಿತ್ರಗಳನ್ನು ಅಂದಿನ ಕಾಲದ ಮಾನವನು ರಚಿಸಿದ್ದಾನೆ. ಹಳೆಶಿಲಾಯುಗವನ್ನು ವಿದ್ವಾಂಸರು ಪುನಃ ಕೆಳಗಿನ ಹಳೆಶಿಲಾಯುಗ (Lower paliolithic), ಮಧ್ಯದ ಹಳೆಶಿಲಾಯುಗ (Middle Paliolithic) ಮತ್ತು ಮೇಲಿನ ಹಳೆಶಿಲಾಯುಗ (Upper Paliolithic) ಎಂದು ವಿಭಾಗಿಸಿದ್ದಾರೆ. ಇವುಗಳಲ್ಲಿ ಮೊದಲನೆಯದು ಅತ್ಯಂತ ಪುರಾತನವಾಗಿದ್ದು, ನಂತರದ ಕಾಲಗಳು ಇತ್ತೀಚಿನವಾಗಿವೆ.

ಭಾರತದಲ್ಲಿನ ಹಳೆಶಿಲಾಯುಗದ ಪ್ರಮುಖ ನೆಲೆಗಳು:

ಬಿಲಾನ್‌ ಕಣಿವೆ (ಉತ್ತರ ಪ್ರದೇಶ),  ಸೋಹನ್‌ ಕಣಿವೆ (ಪ್ರಸ್ತುತ ಪಾಕಿಸ್ತಾನದಲ್ಲಿದೆ), ಪಂಅಬ್‌ ಪಂಜಾಬ್‌, ಕಾಶ್ಮೀರ, ರಾಜಸ್ಥಾನ (Thar desert), ನರ್ಮದಾ ಕಣಿವೆ, ತುಂಗಭದ್ರಾ ಕಣಿವೆ, ಭಿಂಬೆಟ್ಕಾ (ಮಧ್ಯಪ್ರದೇಶ), ಗುಜರಾತಿನ ಮೇಲ್ಭಾಗ, ಬಿಹಾರದ ದಕ್ಷಿಣ ಭಾಗ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಇತ್ಯಾದಿ.

**********

 

ಮಧ್ಯಶಿಲಾಯುಗದ ಮಾನವನ ಜೀವನ ಪದ್ಧತಿ (Mesolithic age)

ಸಾ.ಶ.ಪೂ. 9,000 ವರ್ಷಗಳಿಂದ ಸಾ.ಶ.ಪೂ. 4000 ವರ್ಷಗಳವರೆಗೆ.):-

 ಮೆಸೊಲಿಥಿಕ್‌ ಇದು ಗ್ರೀಕ್‌ ಮೂಲದ ಪದ. ಮೆಸೊ = ಮಧ್ಯ ಮತ್ತು ಲಿಥಿಕ್‌ = ಕಲ್ಲಿಗೆ ಸಂಬಂಧಿಸಿದುದು ಎಂದರ್ಥ.

ಈ ಕಾಲದ ಮಾನವನು ಹಳೆಶಿಲಾಯುಗದ ಮಾನವನಿಗಿಂತ ಮುಂದುವರಿದವನಾಗಿದ್ದನು. ಈ ಯುಗದಲ್ಲಿ ಮಾನವನು ಹಿಂದಿನ ಯುಗದಂತಲ್ಲದೇ ಸೂಕ್ಷ್ಮವಾದ ಅಂದರೆ ಗಾತ್ರದಲ್ಲಿ ಕಿರಿದಾದ ಮತ್ತು ಹರಿತಗೊಳಿಸಿದ ಶಿಲಾಯುಧಗಳನ್ನು ಬಳಸಲು ಕಲಿತನು. ಶಿಲಾಯುಧಗಳನ್ನು ಹರಿತಗೊಳಿಸಲು ಅವುಗಳನ್ನು ಬಂಡೆಗಳ ಮೇಲೆ ಉಜ್ಜುವುದು ಅವನಿಗೆ ಈ ಕಾಲಕ್ಕೆ ತಿಳಿದಿತ್ತು. ಆದ್ದರಿಂದ ಈ ಕಾಲವನ್ನು ಸೂಕ್ಷ್ಮ ಶಿಲಾಯುಗ ಎಂತಲೂ ಕರೆಯುವರು.

ಜೀವನ ಪದ್ಧತಿ:-

ಈ ಕಾಲದಲ್ಲಿ ಮಾನವನು ಅಲೆಮಾರಿ ಜೀವನದ ಬದಲು ಒಂದೆಡೆ ನೆಲೆನಿಂತು ಜೀವಿಸುವುದನ್ನು ಕಲಿತನು. ಅವನು ಬಿಲ್ಲು-ಬಾಣಗಳ ಬಳಕೆ ಕಲಿತನು. ಜೊತೆಗೆ ಶಿಲಾಯುಧಗಳಿಗೆ ರಂಧ್ರ ಕೊರೆದು ಮರ ಇಲ್ಲವೇ ಮೂಳೆಗಳ ಹಿಡಿಕೆಗಳನ್ನು ಅಳವಡಿಸಲು ಕಲಿತನು. ಅಲ್ಲದೇ ಪಶುಪಾಲನೆ ಕಲಿಯತೊಡಗಿದನು. ಕ್ರಮೇಣ ಇತರರೊಂದಿಗೆ ಸೇರಿ ಸಂಘಜೀವನ ನಡೆಸುವುದನ್ನು ಕಲಿತನು. ಆದ್ದರಿಂದ ಗುಹೆಗಳಲ್ಲಿ ಸಾಮೂಹಿಕ ಜೀವನದ ಪದ್ಧತಿ ಆರಂಭವಾಯಿತು. ಸೂಕ್ಷ್ಮವಾದ ಶಿಲಾಗಾಳಗಳಿಂದ ಮೀನುಗಾರಿಕೆಯನ್ನು ಕಲಿತನು. ಬೆಂಕಿಯ ಉಪಯೋಗ ಕಲಿತನು. ಒರಟಾದ ಮಡಕೆಗಳನ್ನು ಕೈಗಳಿಂದ ತಯಾರಿಸುವ ಕಲೆಯು ಸಹಾ ಅವನಿಗೆ ತಿಳಿದಿತ್ತು. ಸತ್ತವರನ್ನು ಹೂಳುವ ಿಲ್ಲವೇ ಸುಡುವಂತಹ ಶವಸಂಸ್ಕಾರ ಪದ್ಧತಿಗಳನ್ನೂ ಇವನು ಕಲಿತನು. ದೇಹದ ರಕ್ಷಣೆಗೆ ಮರದ ತೊಗಟೆ, ಪ್ರಾಣಿಗಳ ಚರ್ಮವನ್ನು ಬಳಸಲು ಕಲಿತನು. ವಾಸಕ್ಕಾಗಿ ಗುಡಿಸಲಿನಂತಹ ರಚನೆಗಳನ್ನು ಸಹಾ ಇವನು ಮಾಡುವುದನ್ನು ಕಲಿತನು. ಪ್ರಾಣಿಗಳ ಮಾಂಸವನ್ನು ಸುಟ್ಟು ತಿನ್ನಲು ಕಲಿತನು. ಒಟ್ಟಿನಲ್ಲಿ ಈ ಕಾಲಘಟ್ಟವು ಹಳೆ ಮತ್ತು ನವಶಿಲಾಯುಗಗಳ ನಡುವಿನ ಸ್ಥಿತ್ಯಂತರದ ಕಾಲವೆಂದು ಗುರುತಿಸಲಾಗಿದೆ.

ಭಾರತದಲ್ಲಿನ ಪ್ರಮುಖ ನೆಲೆಗಳು:-

ಬಿಲಾನ್‌ ಕಣಿವೆ, ಉತ್ತರ ಪ್ರದೇಶ.

ಭಿಂಬೆಟ್ಕಾ, ಮಧ್ಯಪ್ರದೇಶ. (ಇಲ್ಲಿನ 500ಕ್ಕೂ ಹೆಚ್ಚು  ಗುಹೆಗಳು ಶಿಲಾ ಚಿತ್ರಗಳಿಂದ ಕೂಡಿವೆ)

ಬ್ರಹ್ಮಗಿರಿ, ಕರ್ನಾಟಕ.

ನರ್ಮದಾ ಕಣಿವೆ.

ವಿಂಧ್ಯ ಪರ್ವತ ಶ್ರೇಣಿಯ ತಪ್ಪಲು ಪ್ರದೇಶ.

ಬಾಗೋರ್‌, ರಾಜಸ್ಥಾನ. (ಇಲ್ಲಿ ಸೂಕ್ಷ್ಮ ಶಿಲಾ ಉದ್ಯಮದ ನೆಲೆ ಕಂಡುಬಂದಿದೆ)

ಆದಂಗಡ, ಮಧ್ಯಪ್ರದೇಶ. ( ಇಲ್ಲಿ ಮೊದ-ಮೊದಲ ಪ್ರಾಣಿ ಸಾಕಾಣಿಕೆಯ ಕುರುಹುಗಳು ಕಂಡುಬಂದಿವೆ.)

ಲಾಂಘನಾಜ್‌, ಗುಜರಾತ್. ( ಮೊದ-ಮೊದಲ ಶವಸಂಸ್ಕಾರದ ಕುರುಹುಗಳು ಕಂಡುಬಂದಿವೆ.)

ಮೊಹ್ರಾನಾ ಪಹಾರ, ಉತ್ತರ ಪ್ರದೇಶ.  (ಸಮಾಧಿಗಳ ಪತ್ತೆ.)

**********

 

ನವಶಿಲಾಯುಗದ ಮಾನವನ ಜೀವನ ಪದ್ಧತಿ (Neolithic age)

          ಸಾ.ಶ.ಪೂ. 7000 ವರ್ಷಗಳಿಂದ ಸಾ.ಶ.ಪೂ. 1000 ವರ್ಷಗಳವರೆಗೆ.):-

          ನಿಯೊಲಿಥಿಕ್‌ ಇದು ಗ್ರೀಕ್‌ ಪದ. Neo ಅಂದರೆ ಹೊಸ (New) ಮತ್ತು Litho ಎಂದರೆ ಶಿಲೆ ಅಥವಾ ಕಲ್ಲು ಎಂದರ್ಥ. ಈ ಕಾಲಘಟ್ಟದ ಮಾನವನು ಮಧ್ಯ ಶಿಲಾಯುಗದ ಮಾನವನಿಗಿಂತ  ಮತ್ತಷ್ಟು ಅಭಿವೃದ್ಧಿ ಹೊಂದಿದನು. ವ್ಯವಸ್ಥಿತವಾದ ಬೇಸಾಯ ಪದ್ಧತಿಯನ್ನು ಕಲಿತನು. ಪರಿಣಾಮವಾಗಿ ಹೆಚ್ಚು ಸಾಂಘಿಕ ಜೀವನ ಆರಂಭವಾಯಿತು. ಪಶುಪಾಲನೆಯನ್ನು ಉಪಕಸುಬಾಗಿಸಿಕೊಂಡನು. ಪ್ರಾಣಿಗಳನ್ನು ಪಳಗಿಸಿ ಕೃಷಿಗೆ ಬಳಸತೊಡಗಿದನು. ಭೂಮಿಯನ್ನು ಉಳುಮೆ ಮಾಡುವ, ಬಿತ್ತನೆ ಮಾಡುವ ಕಲೆಯನ್ನು ಕಲಿತನು. ಇದರಿಂದ ವಿವಿಧ ಧಾನ್ಯಗಳ ಮತ್ತು ತರಕಾರಿಗಳ ಬಳಕೆ ರೂಢಿಗೆ ಬಂದಿತು. ಚಕ್ರದ ಉಪಯೋಗ ಕಲಿತನು. ಇದರಿಂದ ಸಾಗಾಣಿಕೆಗೆ ಗಾಡಿಗಳ ಬಳಕೆ ಮತ್ತು ನಯವಾದ ಮಡಕೆಗಳನ್ನು ತಯಾರಿಸುವ ಕಲೆ ಕಲಿತನು. ಮಡಕೆಗಳನ್ನು ಸುಡುವ ಮತ್ತು ಅವುಗಳ ಮೇಲೆ ರೇಖಾಚಿತ್ರಗಳನ್ನೂ ಬರೆಯಲು ಕಲಿತನು. ಸಾಮೂಹಿಕವಾಗಿ ಒಂದೆಡೆ ಜೀವಿಸುವುದನ್ನು ಕಲಿತ ಕಾರಣ ಗ್ರಾಮಜೀವನ ಆರಂಭವಾಯಿತು. ಶಿಲಾಯುಧಗಳ ಜೊತೆಯಲ್ಲಿ ಲೋಹಗಳ ಬಳಕೆ ಸಹ ಕಲಿತನು. ಸತ್ತವರ ಶವಗಳನ್ನು ಹೂಳುವ ವ್ಯವಸ್ಥಿತ ಪದ್ಧತಿ ಕಲಿತನು. ಅಂದರೆ ಮಕ್ಕಳ ಶವಗಳನ್ನು ದೊಡ್ಡ ಮಡಕೆಗಳಲ್ಲಿಟ್ಟು ಹೂಳುವುದು, ಶವಗಳನ್ನು ಸುಟ್ಟ ನಂತರ ಉಳಿದ ಅವಶೇಷಗಳನ್ನು ಮಡಕೆಗಳಲ್ಲಿಟ್ಟು ಮನೆಯ ಮುಂಭಾಗದಲ್ಲಿ ಇಲ್ಲವೇ ಒಳಗಡೆ ಹೂಳುವುದನ್ನು ಈ ಕಾಲದ ಅವಶೇಷಗಳಿಂದ ಪತ್ತೆಹಚ್ಚಲಾಗಿದೆ. ಅಲ್ಲದೇ  ಶವಗಳನ್ನು ಬೃಹತ್‌ ಶಿಲಾಸಮಾಧಿಗಳಲ್ಲಿ ಸಂಸ್ಕಾರ ಮಾಡುವುದನ್ನು ಕಲಿತನು. ಆದ್ದರಿಂದ ಈ ಕಾಲವನ್ನು ಬೃಹತ್‌ ಶಿಲಾಯುಗ ಕಾಲವೆಂತಲೂ ಕರೆಯುವರು. ಅಂತಹ ಸಮಾಧಿಗಳಲ್ಲಿ ಸತ್ತವರು ಬಳಸುತ್ತಿದ್ದ ವಸ್ತುಗಳು, ಆಹಾರ ಪದಾರ್ಥಗಳು ಮತ್ತು ನಾಯಿಗಳ ಮೂಳೆಗಳು ಕಂಡುಬಂದಿವೆ. ಇದರಿಂದ ಅವನಿಗೆ ಸಾವಿನ ನಂತರದ ಜೀವನದಲ್ಲಿ ನಂಬಿಕೆ ಇರುವುದು ಕಂಡುಬರುತ್ತದೆ. ಧಾರ್ಮಿಕ ಆಚರಣೆಗಳ ಕುರುಹುಗಳು ಈ ಕಾಲದಲ್ಲಿ ಕಂಡುಬರುತ್ತವೆ. ಅಂತಹ ಶಿಲಾಸಮಾಧಿಗಳನ್ನು “ಡಾಲ್ಮೈನ್ಸ್‌”ಗಳೆಂದು ಕರೆಯುವರು. ಬಟ್ಟೆ ತಯಾರಿಸುವ ಕಲೆ ಕಲಿತನು. ಲೋಹಗಳ ಬಳಕೆ ತಿಳಿದಿದ್ದರಿಂದ ಭೂಮಿಯನ್ನು ಉಳುಮೆ ಮಾಡಲು ನೇಗಿಲುಗಳ ಬಳಕೆ ಕಲಿತನು. ಗುಹೆಗಳಲ್ಲಿ ಬೇಟೆ, ನೃತ್ಯ ಮೊದಲಾದ ಚಿತ್ರಗಳನ್ನು ಸ್ವಾಭಾವಿಕ ಬಣ್ಣಗಳಿಂದ ಮೂಡಿಸಲು ಕಲಿತನು.

ಭಾರತದಲ್ಲಿನ ನವಶಿಲಾಯುಗದ ಪ್ರಮುಖ ನೆಲೆಗಳು:-

ಬರ್ಜಹಾಮ್‌, ಕಾಶ್ಮೀರ. ಸಾಕುನಾಯಿಗಳ ಅಸ್ಥಿಪಂಜರಗಳು ಮಾನವನ ಶವದೊಂದಿಗೆ ದೊರೆತಿವೆ.

ಗಫ್ಕ್ರಲ್, ಕಾಶ್ಮೀರ

ಚಿರಾಂಡ್‌, ಪಾಟ್ನಾದ ಬಳಿ, ಬಿಹಾರ.

ಗೋದಾವರಿ ನದಿಯ ದಕ್ಷಿಣ ತೀರ.

ಅಸ್ಸಾಂ ಬೆಟ್ಟ ಪ್ರದೇಶಗಳು.

ಗಾರೊ ಬೆಟ್ಟಗಳು, ಮೇಘಾಲಯ.

ಮಿರ್ಜಾಪುರ ಮತ್ತು ಅಲಹಾಬಾದ್‌, ಉತ್ತರ ಪ್ರದೇಶ.

ಹಳ್ಳೂರು,, ಮಸ್ಕಿ, ಬ್ರಹ್ಮಗಿರಿ, ತೆಕ್ಕಲಕೋಟೆ. ಕರ್ನಾಟಕ.

ಪಯಂಪಳ್ಳಿ, ತಮಿಳುನಾಡು.

ಪಿಕ್ಲಿಹಾಳ, ಆಂಧ್ರಪ್ರದೇಶ

**********

 

ಲೋಹಯುಗ

ನವಶಿಲಾಯುಗದ ಜೊತೆ-ಜೊತೆಯಲ್ಲಿಯೇ ಅಸ್ಥಿತ್ವದಲ್ಲಿದ್ದ ಲೋಹಯುಗವನ್ನು ಪ್ರಮುಖವಾಗಿ ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ,

I. ತಾಮ್ರಶಿಲಾಯುಗ – Chalcolithic period:- ಸಾ.ಶ.ಪೂ. 2100 ವರ್ಷಗಳಿಂದ ಸಾ.ಶ.ಪೂ. 700 ವರ್ಷಗಳವರೆಗೆ.

II. ಕಂಚಿನ ಯುಗ:- ಸಾ.ಶ.ಪೂ. 3300-2600):

III. ಕಬ್ಬಿಣದ ಯುಗ ಸಾ.ಶ.ಪೂ. 1000 – ಸಾ.ಶ.ವ. 100.

ತಾಮ್ರಶಿಲಾಯುಗ ಸಂಸ್ಕೃತಿಯ ನೆಲೆಗಳು

ಅಹರ ಸಂಸ್ಕೃತಿ: ಇದು ರಾಜಸ್ಥಾನದ ಉದಯಪುರ ಜಿಲ್ಲೆಯ ಅಹರ ಗ್ರಾಮದಲ್ಲಿ ಕಂಡುಬಂದಿದೆ.  ಅಂದರೆ ರಾಜಾಸ್ಥಾನದ ಆಗ್ನೇಯ ಭಾಗದ ಮೇವಾರ  ಪ್ರದೇಶದಲ್ಲಿದೆ. ಹೆಚ್.‌ ಡಿ. ಸಂಕಾಲಿಯ 1961-62 ರಲ್ಲಿ ಸಂಶೋಧನೆ ನಡೆಸಿದರು. ಒಟ್ಟು 91 ಕ್ಕೂ ಅಧಿಕ ನೆಲೆಗಳ ಪತ್ತೆ ಮಾಡಲಾಗಿದೆ. ಇಲ್ಲಿ ಎರಡು ಹಂತಗಳನ್ನು ಗುರ್ತಿಸಲಾಗಿದೆ. 1. ತಾಮ್ರಶಿಲಾಯುಗ ಮತ್ತು 2. ಇತಿಹಾಸ ಆರಂಭ ಕಾಲ. ಇದರ ಕಾಲವನ್ನು ಸಾ.ಶ.ಪೂ. ೨೦೨೫ ರಿಂದ ೧೨೭೦ ವರೆಗೆ ಎಂದು ನಿಗದಿ ಮಾಡಲಾಗಿದೆ. ಬನಾಸ್‌ ಮತ್ತು ಅದರ ಉಪನದಿಗಳ ತೀರಗಳಲ್ಲಿ ಈ ನೆಲೆಗಳು ಕಂಡುಬಂದಿವೆ. ಅವುಗಳಲ್ಲಿ ಉದಯಪುರ ಜಿಲ್ಲೆಯ ಅಹರ್‌ ಮತ್ತು ಬಾಲಾಥಲ್‌, ರಾಜಸಮನದ ಜಿಲ್ಲೆಯ ಜಿಲಂದ್ ಮತ್ತು ಭಿಲ್ವಾನಾ ಜಿಲ್ಲೆಯ ಒಜಿಯಾನಾ ಪ್ರಮುಖ ಕೇಂದ್ರಗಳು. ಗಾಢವಾದ ಮತ್ತು ತೆಳು ಕೆಂಪು ಬಣ್ಣದ, ಕಪ್ಪು ಮತ್ತು ಕೆಂಪು ಹಾಗೂ ಬೂದು ಬಣ್ಣದ ವಿವಿಧ ಆಕಾರದ ಗೃಹೋಪಯೋಗಿ ಮಡಿಕೆಗಳು ಕಂಡುಬಂದಿವೆ.

ಬಾಲಾಥಲ್‌ ಈ ಸಂಸ್ಕೃತಿಯ ಮತ್ತೊಂದು ಪ್ರಮುಖ ನೆಲೆಯಾಗಿದೆ. ಇದರ ಕಾಲವನ್ನು ಸಾ.ಶ.ಪೂ. ೩ ಶತಮಾನದಿಂದ ಸಾ.ಶ.ಪೂ. ೧೫೦೦ ವರೆಗೆ ನಿಗದಿ ಮಾಡಲಾಗಿದೆ. ಮಣ್ಣಿನ ಮನೆಗಳು, ಮೃದುಕಲ್ಲಿನ, ಬೆಲೆ ಬಾಳುವ ಕಲ್ಲುಗಳು, ದಂತಗಳು, ಚಿಪ್ಪುಗಳು  ಮತ್ತು ಸುಟ್ಟ ಮಣ್ಣಿನ ಮಣಿಗಳು ಕಂಡುಬಂದಿವೆ, ತಾಮ್ರದ ಗಣಿಗಳ ಪತ್ತೆಯಾಗಿದೆ; ಇಲ್ಲಿನ ತಾಮ್ರವು ಬಹುಶಃ ಹರಪ್ಪಾ ನಾಗರೀಕತೆಗೆ ಪೂರೈಕೆ ಆಗಿರಬಹುದು. ಅಕ್ಕಿ, ಗೋದಿ, ಜೋಳ, ಬಾರ್ಲಿ, ಆಡು, ಕುರಿ, ದನ, ಎಮ್ಮೆ, ಹಂದಿ, ನಾಇ ಸಾಕಾಣಿಕೆ ಮಾಡಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಸಾಮಾಜಿಕವಾಗಿ ಕುಶಲಕರ್ಮಿಗಳು ಇದ್ದರು. ಆಡಳಿತ ಪದ್ಧತಿ ಬಗ್ಗೆ ನಿಖರ ಮಾಹಿತಿ ಅಲಭ್ಯ. ಆದರೆ ಕೆಲವು ಕಡೆ ಕೋಟೆಗಳಂತಹ ಅವಶೇಷಗಳಿವೆ.

ಕಾಯತ್ತ ಸಂಸ್ಕೃತಿ: ಇದು ಮಾಳವ ಸಂಸ್ಕೃತಿಯ ಒಂದು ಭಾಗವಾಗಿದೆ. ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇದೆ. ಕಪಿತ್ತಕ ಎಂಬ ಸ್ಥಳದ ಕಾರಣ ಆ ಹೆಸರು ಬಂದಿದೆ. ನಾಗ್ಡಾ, ಎರಾನ್‌ ಇಲ್ಲಿನ ಇನ್ನಿತರ ಪ್ರಮುಖ ನೆಲೆಗಳಾಗಿವೆ. ಈ ಸಂಸ್ಕೃತಿಯು ಸಾ.ಶ.ಪೂ. 1700ರ ವೇಳೆಗೆ ಮಹಾರಾಷ್ಟ್ರಕ್ಕೂ     ವ್ಯಾಪಿಸಿತು. ಭೀಮಾ ತೀರದ ಇನಾಂಗಾವ್‌, ಗೋದಾವರಿ ತೀರದ  ಧೀಮಾಬಾದ್‌ ಮತ್ತು ತಪತಿ ತೀರದ ಪ್ರಕಾಶ್‌ ಎಂಬುವವು ಮಹಾರಾಷ್ಟ್ರದ ಪ್ರಮುಖ ನೆಲೆಗಳಾಗಿವೆ. ಸಾ.ಶ.ಪೂ. ೨೪೦೦ ರಿಂದ ಸಾ.ಶ.ಪೂ. ೬೦೦ ವರೆಗೆ ಐದು ಹಂತಗಳ ಸಂಸ್ಕೃತಿಗಳ ಸಂಶೋಧನೆ ಮಾಡಲಾಗಿದೆ. ೪೦ಕ್ಕೂ ಹೆಚ್ಚು ನೆಲೆಗಳು ಪತ್ತೆಯಾಗಿವೆ.

ಇಲ್ಲಿ ತಾಮ್ರ ಮತ್ತು ಶಿಲಾ ಉಪಕರಣಗಳೆರಡೂ ಕಂಡುಬಂದಿವೆ. ನೆಲವನ್ನು ನುಣುಪುಗೊಳಿಸಿದ ಸಣ್ಣ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದ ಕುರುಹುಗಳು ಲಭಿಸಿವೆ. ಮಿಶ್ರ ಆರ್ಥಿಕ ವ್ಯವಸ್ಥೆ ಇಲ್ಲಿ ಕಂಡುಬಂದಿದೆ. ಅಂದರೆ, ಕೃಷಿ, ಮೀನು ಹಿಡಿಯುವುದು, ಬೇಟೆ ಮತ್ತು ಪಶುಪಾಲನೆಗಳೆರಡೂ ರೂಢಿಯಲ್ಲಿದ್ದವು. ಬಾರ್ಲಿ, ಗೋಧಿಗಳನ್ನು ಬೆಳೆಯಲಾಗುತ್ತಿತ್ತು. ಇಲ್ಲಿ ಕುದುರೆಯ ಅವಶೇಷಗಳೂ ಕಂಡುಬಂದಿವೆ. ಎರಕ ಹೊಯ್ದ  ಕೊಡಲಿ, ಚೂಪಾದ ಅಲಗುಗಳ ತಯಾರಿಕೆ ಕಂಡುಬಂದಿದೆ. ದೊಡ್ಡ ಪ್ರಮಾಣದಲ್ಲಿ ತಾಮ್ರದ ಸಂಗ್ರಹ ಕಂಡುಬಂದಿದೆ. ಕಪ್ಪು-ಕೆಂಪು ಮಿಶ್ರಿತ ವಿವಿಧ ಗಾತ್ರದ ಗೃಹೋಪಯೋಗಿ ಮಡಕೆಗಳ ತಯಾರಿಕೆ ಮಾಡಲಾಗಿದೆ. ಬೆಲೆಬಾಳುವ ಕಲ್ಲುಗಳಿಂದ ತಯಾರಿಸಿದ ಅಲಂಕಾರಿಕ ಕೊರಳ ಸರಗಳೂ ದೊರೆತಿವೆ. ಭೂಕಂಪನದ ಕಾರಣ ಇಲ್ಲಿನ ನೆಲೆಗಳು ನಾಶವಾಗಿರಬಹುದು.

ಜೊರ್ವಿ ಸಂಸ್ಕೃತಿ: ಈ ಸಂಸ್ಕೃತಿಯು  ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಅರಬ್ಬಿ ತೀರದಿಂದ ವಿದರ್ಭದವರೆಗೆ ಇದರ ವ್ಯಾಪ್ತಿ ಹರಡಿದೆ. 1950 ರಲ್ಲಿ ಉತ್ಖನನ ನಡೆಸಲಾಯಿತು.  ಜೋರ್ವಿ ಸಂಸ್ಕೃತಿಯ ಬಹಳಷ್ಟು ನೆಲೆಗಳನ್ನು ಗ್ರಾಮಗಳೆಂದು ವರ್ಗೀಕರಿಸಬಹುದು.

ಆರ್ಥಿಕತೆ: ಈ ಸಂಸ್ಕೃತಿಯು ಒಣಬೇಸಾಯದ ಜೊತೆಗೆ ಪಶುಪಾಲನೆ, ಬೇಟೆ ಮತ್ತು ಮೀನುಗಾರಿಕೆಯನ್ನು ತನ್ನ ಉಪಕಸುಬನ್ನಾಗಿಸಿಕೊಂಡಿತ್ತು.  ಅನೇಕ ವಿಧದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು.  ಇಲ್ಲಿನ ರೈತರು ಬೆಳೆ ಬದಲಾವಣೆಯನ್ನೂ ಸಹಾ ಅರಿತಿದ್ದರು.  ಬಹುಮುಖ್ಯ ಬೆಳೆಗಳೆಂದರೆ, ಬಾರ್ಲಿ, ಗೋಧಿ, ಜೋಳ, ಭತ್ತ, ರಾಗಿ, ಬಟಾಣಿ, ಹುರಳಿಕಾಯಿ (beans), ಬೇಳೆ, ಹೆಸರು ಮತ್ತು ಉದ್ದು

ಮಡಕೆಗಳ ತಯಾರಿಕೆ: ಕುಂಬಾರಿಕೆಯಲ್ಲಿ ಗಮನಾರ್ಹವಾದ ತಂತ್ರಗಾರಿಕೆ ಇತ್ತು.  ಬಣ್ಣದ ಮಡಕೆಗಳನ್ನು ಚಕ್ರಗಳ ಸಹಾಯದಿಂದ ಮಾಡಲಾಗುತ್ತಿತ್ತು ಮತ್ತು ಉತ್ತಮವಾಗಿ ಸುಡಲಾಗುತ್ತಿತ್ತು.  ಇದುವರೆಗಿನ ಉತ್ಖನನದಲ್ಲಿ ೪ ಸುಟ್ಟ ಒಲೆಗಳು ದೊರೆತಿವೆ.  ಈ ಸಂಸ್ಕೃತಿಯ ಮಡಕೆಗಳಲ್ಲಿ ಕಪ್ಪು-ಕೆಂಪು ಬಣ್ಣದ ಚೂಪಾದ ಬಾಯಿಯ ಮಡಕೆ ಮತ್ತು ಅಲಂಕಾರಿಕ ಬಟ್ಟಲುಗಳಂತಹ ಮಡಕೆಗಳು ಪ್ರಮುಖವಾಗಿವೆ.  ಇನ್ನಿತರ ಮಡಕೆಗಳೆಂದರೆ ಸಂಗ್ರಾಹಕ, ಬೇಸಿನ್ನು, ಲೋಟಗಳುand ಮತ್ತು ಹಿಡಿಕೆಯುಳ್ಳ ಬಟ್ಟಲು ಅಥವಾ ಸೌಟು..

ಶವ ಸಂಸ್ಕಾರ: ಗಮನಾರ್ಹವಾದ ಲಕ್ಷಣವೆಂದರೆ ಶವಗಳ ಸಂಸ್ಕಾರ ವಿಧಾನ.  ಇನಾಂಗಾವ್‌ ಮತ್ತು ಧೀಮಾಬಾದ್‌ಗಳಲ್ಲಿ ಗಣನೀಯ ಸಂಖ್ಯೆಯ ಸಮಾಧಿಗಳು ಪತ್ತೆಯಾಗಿವೆ.  ಸಾಕಷ್ಟು ಮಕ್ಕಳ ಶವಗಳು ಮಡಕೆಗಳಲ್ಲಿ ಕಂಡುಬಂದಿವೆ.  ವಯಸ್ಕರ ಶವಗಳಲ್ಲಿ ಪಾದದ ಭಾಗವು ಕತ್ತರಿಸಲ್ಪಟ್ಟಿರುವುದು ಕಂಡುಬಂದಿದೆ.  ಇನಾಂಗಾವ್‌ನಲ್ಲಿನ ಬಹುಮುಖ್ಯವಾದ ಸಂಶೋಧನೆಯಲ್ಲಿ ೪ ಕಾಲುಗಳುಳ್ಳ ಮಣ್ಣಿನ ಸಮಾಧಿ ಪೆಟ್ಟಿಗೆಯಲ್ಲಿ ದೊರೆತಿರುವ ವಯಸ್ಕ ಶವ.  ಟೆರ್ರಾಕೋಟಾ ವಿಗ್ರಹಗಳಿಂದ ಅವರ ಧಾರ್ಮಿಕ ನಂಬಿಕೆಗಳು ತಿಳಿದುಬಂದಿವೆ.

ಭಾರತದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ನೆಲೆಗಳ ರಾಜ್ಯವಾರು ವಿವರ:-

ಹರ್ಯಾಣ – 5

ರಾಜಸ್ಥಾನ – 6

ಉತ್ತರ ಪ್ರದೇಶ – 33

ಬಿಹಾರ – 19

ಪಶ್ಚಿಮ ಬಂಗಾಳ – 6

ಒರಿಸ್ಸಾ – 7

ಮಧ್ಯ ಪ್ರದೇಶ – 8

ಕರ್ನಾಟಕ – 1

**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಭಾರತದ ಭೌಗೋಳಿಕ ಲಕ್ಷಣಗಳು.