ಸಂಗಂ ಸಾಹಿತ್ಯದ ಪ್ರಮುಖ ಕೃತಿಗಳು
ತಮಿಳು ಸಾಹಿತ್ಯ ಬಹಳ ಪ್ರಾಚೀನವಾದುದು. ಇದು ಮೂರು ಸಂಘಗಳ ಆಶ್ರಯದಲ್ಲಿ ಬೆಳೆಯಿತೆಂಬ ಐತಿಹ್ಯವಿದೆ. ಈ ಸಾಹಿತ್ಯವನ್ನು ಅನುಕೂಲಕ್ಕಾಗಿ ಸಂಗಂ ಸಾಹಿತ್ಯ ಎಂದು ಕರೆಯಲಾಗುತ್ತದೆ. ಇದನ್ನು ಸಹಜ ಸಾಹಿತ್ಯದ ಕಾಲವೆಂದು ವಿದ್ವಾಂಸರು ಗುರುತಿಸಿದ್ದಾರೆ. ತಮಿಳು ನೆಲದ ಇತಿಹಾಸಾರಂಭ ಕಾಲದಲ್ಲಿ ಸಂಗಂ ಸಾಹಿತ್ಯದ ಉಗಮವಾಯಿತು ಎಂದು ನಂಬಲಾಗಿದೆ. ಇದನ್ನು ಪೋಷಿಸಿದವರು ಆದಿ ಚೇರ, ಚೋಳ ಮತ್ತು ಪಾಂಡ್ಯರು. ಆ ಕಾಲದ ಕವಿಗಳು ಅಕಂ ( ಪ್ರಣಯ ) ಮತ್ತು ಪುರಂ ( ವೀರ ) ಎಂಬ ಎರಡು ಪ್ರಭೇಧಗಳಲ್ಲಿ ಕಾವ್ಯ ರಚನೆ ಮಾಡಿದರೆಂದು ಭಾವಿಸಲಾಗಿದೆ. ಅಹಂ ಸಾಹಿತ್ಯವು ಮಾನವನ ಪ್ರೀತಿ, ಪ್ರಣಯ, ಭಯ, ಹತಾಶೆಗಳಂತಹ ಆಂತರಿಕ ಭಾವನೆಗಳ ಸಾಹಿತ್ಯವಾದರೆ. ಪುರಂ ಸಮಾಜ, ಸಂಸ್ಕೃತಿ, ರಾಜಕೀಯ ಸ್ಥಿತಿಗತಿಗಳನ್ನು ಕುರಿತದ್ದಾಗಿದೆ. ಅಗತ್ತಿಯಂ ಮತ್ತು ತೊಲ್ ಕಾಪ್ಪಿಯಂ ವ್ಯಾಕರಣ ಗ್ರಂಥಗಳು . ಪದಿನೇಣ್ ಮೇಲ್‍ಕಣಕ್ಕು (ಹದಿನೆಂಟು ಮೇಲ್‍ಗಣಗಳು): ಇದರಲ್ಲಿ ಎಟ್ಟುತ್ತೊಕ್ಕೈ (8 ಕವನ ಸಂಗ್ರಹಗಳು) ಮತ್ತು ಪತ್ತುಪ್ಪಾಟ್ಟು(ಹಾಡುಗಳುಳ್ಳ 10 ಸಂಗ್ರಹಗಳು) ಎಂಬೆರಡು ಭಾಗಗಳಿವೆ. ಅವುಗಳೆಂದರೆ, 1. ಎಟ್ಟುತ್ತೊಕೈ (ಎಂಟು ಕವನ ಸಂಗ್ರಹಗಳು): (೧) ನಟ್ಟಿಣೈಗಳ ಕವನ ಸಂಗ್ರಹ, (೨) ಕುರುಂತೊಗೈ- ಕಿರು ಕವನಗಳ ಸಂಗ್ರಹ, (೩) ಐನ್‍ಕುರುನೂರು-ಐನೂರು ಕಿರು ಪದ್ಯಗಳು, (೪) ಪದಿರುಪ್ಪತ್ತು-ಹತ್ತರ ಹತ್ತು ಹಾಡುಗಳು, (೫) ಪರಿಪಾಡಲ್- ಛಂದ...