ಪ್ರವಾಸಿ ಮಾರ್ಗದರ್ಶಕರು - Tourist Guides.

ಪ್ರವಾಸಿ ಮಾರ್ಗದರ್ಶನ

ಪೀಠಿಕೆ: ಪ್ರವಾಸೋದ್ಯಮವು ಜಗತ್ತಿನಾದ್ಯಂತ ಬೃಹತ್ ಉದ್ಯಮಗಳಲ್ಲಿ  ಒಂದಾಗಿ ಹಾಗೂ ಪ್ರಮುಖ ಆರ್ಥಿಕ ಚಾಲಕ ಶಕ್ತಿಯಾಗಿ  ಹೊರಹೊಮ್ಮಿದೆ. ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಪರಿಷತ್ತು (ಡಬ್ಲ್ಯೂಟಿಟಿಸಿ) ತನ್ನ ವಾರ್ಷಿಕ ಸಂಶೋಧನೆಯಲ್ಲಿ 2018ರಲ್ಲಿ  ಜಗತ್ತಿನಾದ್ಯಂತ ಪ್ರಯಾಣ ಮತ್ತು ಪ್ರವಾಸೋದ್ಯಮವು ಜಾಗತಿಕ  ಜಿಡಿಪಿಯ 10.4% ರಷ್ಟನ್ನು ಮತ್ತು 319 ಮಿಲಿಯನ್ ಉದ್ಯೋಗಗಳನ್ನು  ಎಂದರೆ ಒಟ್ಟು ಉದ್ಯೋಗದ 10% ರಷ್ಟನ್ನು ಸೃಜಿಸಿದೆಯೆಂದು  ದಾಖಲಿಸಿದೆ. ಹೀಗೆ ಪ್ರವಾಸೋದ್ಯಮವು ಸೃಷ್ಠಿಸುವ ುದ್ಯೋಗಗಳಲ್ಲಿ ಪ್ರವಾಸಿ ಮಾರ್ಗದರ್ಶಕರ ಕೆಲಸಗಳೂ ಸೇರಿವೆ. ಅಂದರೆ ವಿವಿಧ ದೇಶ, ನಾಡು, ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆಂದು ಹೋಗುವ ಪ್ರವಾಸಿಗರಿಗೆ ಅಲ್ಲಿನ ಸ್ಥಳಗಳನ್ನು ತೋರಿಸುವುದರ ಜೊತೆಗೆ ಅವುಗಳ ಬಗ್ಗೆ ಮಾಹಿತಿ ನೀಡುವ ಕೆಲಸವು ಪ್ರವಾಸಿ ಮಾರ್ಗದರ್ಶನ ಎನಿಸಿಕೊಂಡಿದ್ದು, ಈ ರೀತಿಯ ಮಾರ್ಗದರ್ಶನ ಮಾಡುವಲ್ಲಿ ಪ್ರವಾಸಿ ಮಾರ್ಗದರ್ಶಕರು ಪ್ರಮುಖ ಪಾತ್ರವಹಿಸುತ್ತಾರೆ. ಇಂದು ಜಾಗತಿಕ ಮಟ್ಟದಿಂದ ಸ್ಥಳೀಯ ಮಟ್ಟದವರೆಗೂ ಪ್ರವಾಸಿ ಮಾರ್ಗದರ್ಶನ ವ್ಯವಸ್ಥೆ ಜಾರಿಯಲ್ಲಿದ್ದು, ಈ ವ್ಯವಸ್ಥೆಯಿಂದಾಗಿ ಅರ್ಹ ನಿರುದ್ಯೋಗಿ ಯುವಕ-ಯುವತಿಯರು ಇಂದು ಉದ್ಯೋಗಿಗಳಾಗಿದ್ದಾರೆ. ಆದ್ದರಿಂದ ಪ್ರವಾಸೋದ್ಯಮದ ಅವಿಭಾಜ್ಯ ಅಂಗವೆನಿಸಿರುವ ಮಾರ್ಗದರ್ಶನ ಮತು ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಪ್ರವಾಸೋದ್ಯಮ ಕೌಶಲ್ಯಾಭಿವೃದ್ಧಿಯ ಒಂದು ಭಾಗವಾಗಿದೆ.


   ಪ್ರವಾಸಿ ಮಾರ್ಗದರ್ಶಕರು ಒಂದು ದೇಶದ ರಾಯಭಾರಿಗಳಂತೆ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಪ್ರವಾಸಿಗರನ್ನು ಸ್ವಾಗತಿಸುವ ಮತ್ತು ಅವರು ಹೊರಡುವ ಸಮಯದಲ್ಲಿ ಬೀಳ್ಕೊಡುವವರು ಸಹಾ ಮಾರ್ಗದರ್ಶಕರೇ. ವಿವಿಧ ಅಂತರಾಷ್ಟ್ರೀಯ ಸಂಘಟನೆಗಳು ಅಂದರೆ ವಿಶ್ವ ಪ್ರವಾಸಿ ಮಾರ್ಗದರ್ಶಕರ ಸಂಘಗಳ ಮಹಾಒಕ್ಕೂಟವು ಪ್ರವಾಸಿ ಮಾರ್ಗದರ್ಶಕರನ್ನು ಕೆಳಕಂಡಂತೆ ವ್ಯಾಖ್ಯಾನಿಸಿದೆ:

 

 ಒಂದು ಕ್ಷೇತ್ರ ಅಥವಾ ಪ್ರದೇಶದ ಬಗ್ಗೆ ವಿಶೇಷ ಜ್ಞಾನ ಮತ್ತು ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಯು ಪ್ರವಾಸಿಗರ ಭಾಷೆಯಲ್ಲಿಯೇ ಒಂದು ಪ್ರದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಸ್ವಾಭಾವಿಕ ರಚನೆಗಳ ವಿವರವನ್ನು ನೀಡುವ ವ್ಯಕ್ತಿ ಇಂತಹ ನಿರ್ದಿಷ್ಟಗೊಳಿಸಿದ ಜ್ಞಾನ ಮತ್ತು ವಿದ್ಯಾರ್ಹತೆಗಳು ಸೂಕ್ತವಾದ ಸಂಘ/ಸಂಸ್ಥೆಗಳಿಂದ ನಿಗದಿಗೊಳಿಸಲ್ಪಟ್ಟಿರುತ್ತವೆ.  ಪ್ರವಾಸಿ ಮಾರ್ಗದರ್ಶಕನು ಪ್ರವಾಸಿಗರನ್ನು ಅವರ ಪ್ರವಾಸದ ವೇಳೆಯಲ್ಲಿ ಮಾರ್ಗದರ್ಶಿಸುತ್ತಾನೆ. ಸಾಮಾನ್ಯವಾಗಿ ಮಾರ್ಗದರ್ಶಕರು ಒಂದು ನಿರ್ದಿಷ್ಟ ಪ್ರದೇಶ ಅಥವಾ ನಗರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ, ಕೆಲವು ವೇಳೆ ಮಾರ್ಗದರ್ಶಕರು ದೇಶದ ವಿವಿಧ ಪ್ರವಾಸೀ ತಾಣಗಳಲ್ಲೂ ಸಹಾ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಬಹುದು.

 

ಪ್ರವಾಸೀ ಮಾರ್ಗದರ್ಶಕ ಎಂದರೇನು?

ಪ್ರವಾಸಿ ಮಾರ್ಗದರ್ಶಕರು ಒಂದು ಪ್ರದೇಶದಲ್ಲಿ ಆದರಾತಿಥ್ಯ ನೀಡುವವರಾಗಿದ್ದು, ಅವರು ಪ್ರವಾಸೋದ್ಯಮದ ಒಂದು ಭಾಗವಾಗಿರುತ್ತಾರೆ ಮತ್ತು ಪ್ರವಾಸಿಗರಿಗೆ ಆಸಕ್ತಿದಾಯಕವಾದ ಸ್ಥಳಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ. ಮಾರ್ಗದರ್ಶಕರು ಪ್ರವಾಸಿಗರ ಗುಂಪು ಅಥವಾ ವ್ಯಕ್ತಿಗಳಿಗೆ ಐತಿಹಾಸಿಕ ಸ್ಥಳಗಳು, ವಸ್ತು ಸಂಗ್ರಹಾಲಯಗಳು, ಭೌಗೋಳಿಕ ಪ್ರದೇಶಗಳು ಮತ್ತು ಹೊರಾಂಗಣ ಪ್ರವಾಸೀ ತಾಣಗಳಲ್ಲಿ ಮಾರ್ಗದರ್ಶಿಸುತ್ತಾರೆ.  ಅದಕ್ಕಾಗಿ ಮಾರ್ಗದರ್ಶಕರು ತಾವು ಹೊಂದಿರುವ ಆಯಾ ಪ್ರದೇಶಗಳ ಐಥೀಃಆಸಿಕ, ಸಾಂಸ್ಕೃತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ದರಿಂದ ಪ್ರವಾಸೋದ್ಯಮ ಕಂಪೆನಿಗಳು ಮತ್ತು ಸಂಸ್ಥೆಗಳು ತಮ್ಮ ಪ್ರವಾಸಿಗರಿಗೆ ವಿಶೇಷ ತಿಳುವಳಿಕೆ ಸಲುವಾಗಿ ಮಾರ್ಗದರ್ಶಕರನ್ನು ನೇಮಕ ಮಾಡಿಕೊಳ್ಳುತ್ತಾರೆ. ಅಲ್ಲದೇ ಮಾರ್ಗದರ್ಶಕರು ಪ್ರವಾಸಿಗರು ನೋಡಬಯಸುವ ಸ್ಥಳಗಳ ಸಾಂಸ್ಕೃತಿಕ ಮತ್ತು ಮನರಂಜನಾತ್ಮಕ ವಿಷಯಗಳ ವಿಶೇಷ ಮಾಹಿತಿಗಳನ್ನು ಹೊಂದಿರಬೇಕಾಗುತ್ತದೆ.

 

ಪ್ರವಾಸಿ ಮಾರ್ಗದರ್ಶಕರ ಪ್ರಾಮುಖ್ಯತೆ -  Importance of Tourist Guides

ಪ್ರವಾಸೀ ಮಾರ್ಗದರ್ಶನವು ಪ್ರವಾಸೋದ್ಯಮದ ಬಹುಮುಖ್ಯ ಅಂಗವಾಗಿದೆ. ಏಕೆಂದರೆ ಮಾರ್ಗದರ್ಶಕರು ತಾವು ನೀಡುವ ಸೇವೆಯ ಮೂಲಕ ಪ್ರವಾಸಿಗರು ಸ್ಥಳಕ್ಕೆ ಅಥವಾ ದೇಶಕ್ಕೆ ಪುನಃ ಭೇಟಿ ನೀಡುವಂತೆ ಪ್ರವಾಸಿಗರ ಮನ ಗೆಲ್ಲುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ.

 

ಪ್ರವಾಸೀ ಮಾರ್ಗದರ್ಶಕರ ಗುಣಲಕ್ಷಣಗಳು - Characteristics of Tourist Guides

ಮಾರ್ಗದರ್ಶಕರು ಒಂದು ಪ್ರವಾಸದ ಅಥವಾ ಭೇಟಿಯನ್ನು ಆಯೋಜಿಸುವ, ಮಾಹಿತಿ ನೀಡುವ ಮತ್ತು ಮನರಂಜಿಸುವ ಪಾತ್ರವನ್ನು ನಿರ್ವಹಿಸುತ್ತಾರೆ. ಮಾರ್ಗದರ್ಶಕರು ಮುಕ್ತವಾಗಿ ಕರ್ತವ್ಯ ನಿರ್ವಹಿಸುವ ಸ್ವಯಂ ಉದ್ಯೋಗಿಗಳಾಗಿರುತ್ತಾರೆ. ಮಾರ್ಗದರ್ಶಕರ ಕಾರ್ಯವು ನಿರ್ದಿಷ್ಟ ಕಾಲದಲ್ಲಿ ನಡೆಯುವಂತಹುದು ಮತ್ತು ಸಮಯದ ಮಿತಿಯಿಲ್ಲದೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮಾರ್ಗದರ್ಶನದ ಕೆಲಸವು ಕೆಲವೊಮ್ಮೆ ನೇರವಾಗಿ ಪ್ರವಾಸೋದ್ಯಮ ಸಂಸ್ಥೆಗಳ ಮುಖಾಂತರ ಸಿಗುವಂತಹುದು ಮತ್ತು ಕೆಲವೊಮ್ಮೆ ಪ್ರವಾಸಿಗರ ನೇರ ಸಂಪರ್ಕದಿಂದಲೂ ಮಾರ್ಗದರ್ಶನದ ಅವಕಾಶಗಳು ಲಭಿಸುತ್ತವೆ. ಆದ್ದರಿಂದ ಮಾರ್ಗದರ್ಶಕರು ತಮ್ಮ ಕ್ಷಮತೆಯನ್ನು ಸಾಬೀತುಪಡಿಸಿವ ಮೂಲಕ ಉತ್ತಮ ಮಾರ್ಗದರ್ಶಕರಾಗಬೇಕಾಗುತ್ತದೆ.

ಮಾರ್ಗದರ್ಶಕರು ಹೇಗೆ ಪ್ರವಾಸಿಗರೊಂದಿಗೆ ವರ್ತಿಸುತ್ತಾರೆ ಮತ್ತು ಅವರಿಗೆ ನೀಡುವ ಆತಿಥ್ಯದ ಸ್ವರೂಪವು ನಮ್ಮ ದೇಶದ ಬಗ್ಗೆ ಪ್ರವಾಸಿಗರಲ್ಲಿ ಉತ್ತಮವಾದ ಮತ್ತು ನೆನಪಿನಲ್ಲುಳಿಯಬಹುದಾದ ಭಾವನೆಯನ್ನು ಮೂಡಿಸುತ್ತದೆ. ಮಾರ್ಗದರ್ಶಕರು ತಾವು ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಒಪ್ಪಿಕೊಂಡ ಷರತ್ತುಗಳಲ್ಲಿ ಹೇಗೆ ಕರ್ತವ್ಯ ನಿರ್ವಹಿಸಬೇಕು ಮತ್ತು ಪ್ರವಾಸಿಗರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಲಾಗಿರುತ್ತದೆ. ನೋಂದಾಯಿತ ಮಾರ್ಗದರ್ಶಕರು ತಮ್ಮ ದುರ್ನಡತೆ ಮತ್ತು ವೃತ್ತಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರು ಶಿಸ್ತಿನ ಕ್ರಮಕ್ಕೆ ಒಳಪಡುವ ಮತ್ತು ಶಿಕ್ಷೆಗೆ ಗುರಿಯಾಗುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಮಾರ್ಗದರ್ಶಕರು ಪ್ರತಿನಿತ್ಯವೂ ಹೊಸ ಪ್ರವಾಸಿಗರನ್ನು ಭೇಟಿ ಮಾಡುವ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪ್ರಯಾಣ ಮಾಡುವ ಮತ್ತು ಹೊಸ-ಹೊಸ ಸಂಗತಿಗಳನ್ನು ಕಲಿಯುವ ಅವಕಾಶವನ್ನು ಹೊಂದಿರುತ್ತಾರೆ. ಮಾರ್ಗದರ್ಶಕರಾಗುವುದು ಪ್ರೋತ್ಸಾಹದಾಯಕವಾದ ಮತ್ತು ಶೈಕ್ಷಣಿಕ ಅನುಭವವೂ ಆಗಿರುತ್ತದೆ. ವೃತ್ತಿಯಲ್ಲಿ ಅನೇಕ ರೀತಿಯ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುವ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ಅವಕಾಶಗಳಿವೆ.

 

ಮಾರ್ಗದರ್ಶಕರ ವಿಧಗಳು  Types of tour guides

ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಬಗೆಯ ಮಾರ್ಗದರ್ಶಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಸಾಮಾನ್ಯವಾಗಿರುವ ಕೆಲವು ಮಾರ್ಗದರ್ಶಕರ ಬಗೆಗಳನ್ನು ಇಲ್ಲಿ ನೀಡಲಾಗಿದೆ.

. ಐತಿಹಾಸಿಕ ಮಾರ್ಗದರ್ಶಕರು: ಐತಿಹಾಸಿಕ ಅವಶೇಷಗಳು, ಕೋಟೆಗಳು, ದೇವಾಲಯಗಳು, ಯುದ್ಧಭೂಮಿಗಳು ಮೊದಲಾದೆಡೆ ಮಾರ್ಗದರ್ಶಿಸುವ ಮಾರ್ಗದರ್ಶಕರು ಆಯಾ ಸ್ಥಳಗಳ ಐತಿಹಾಸಿಕ ಮಾಹಿತಿ ಹೊಂದಿರುತ್ತಾರೆ ಮತ್ತು ಪ್ರವಾಸಿಗರಿಗೆ ಆಕರ್ಷಕವಾಗಿ ಅವುಗಳ ಬಗ್ಗೆ ವಿವರಣೆ ನೀಡುತ್ತಾರೆ.

. ಸಾಹಸ ಮಾರ್ಗದರ್ಶಕರು: ಪ್ರವಾಸಿಗರಿಗೆ ಅಗತ್ಯವಾದ ಸುರಕ್ಷತಾ ವಿವರಗಳನ್ನು ನೀಡುವುದರ ಜೊತೆಗೆ, ಸುರಕ್ಷತಾ ಸಾದನ ಸಲಕರಣೆಗಳನ್ನು ಬಳಸುವ ಮತ್ತು ಅವುಗಳ ಪ್ರಾಯೋಗಿಕ ತಿಳುವಳಿಕೆಯನ್ನು ಹೊಂದಿ ಪ್ರವಾಸಿಗರಿಗೆ ಅಗತ್ಯವಾದ ಮಾರ್ಗದರ್ಶನ ಮಾಡುತ್ತಾರೆ. ಕೆಳಗೆ ಅಂತಹ ಕೆಲವು ಸಾಹಸ ಮಾರ್ಗದರ್ಶಕರ  ವಿವರಗಳನ್ನು ನೀಡಲಾಗಿದೆ.:

A. ನದಿ ಮಾರ್ಗದರ್ಶಕರು: ನದಿ ನೀರಿನಲ್ಲಿ ಪುಟ್ಟ ದೋಣಿಗಳಲ್ಲಿ ಪ್ರವಾಹದೊಂದಿಗೆ ಸಂಚರಿಸುವ ಕ್ರೀಡೆಯಲ್ಲಿ ಮಾರ್ಗದರ್ಶಕರು ಪ್ರವಾಸಿಗರಿಗೆ ಅಗತ್ಯ ಸೇವೆ ಒದಗಿಸುವ ಜೊತೆಗೆ ಉಳಿದುಕೊಳ್ಳಲು ವ್ಯವಸ್ಥೆ ಮತ್ತು ಆಹಾರದ ಅನುಕೂಲಗಳನ್ನೂ ಕಲ್ಪಿಸಬೇಕಾಗುತ್ತದೆ. ಏಕೆಂದರೆ ಪ್ರವಾಸವು ಒಂದು ದಿನ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತೆಗೆದುಕೊಳ್ಳಬಹುದು. ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳುವುದು ಮಾರ್ಗದರ್ಶಕರ ಜವಾಬ್ದಾರಿಯಾಗಿರುತ್ತದೆ. ಕ್ಷೇತ್ರದಲ್ಲಿ ಮಾರ್ಗದರ್ಶಕರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುತ್ತದೆ.

B. ಚಾರಣ ಮಾರ್ಗದರ್ಶಕರು: ಕಡಿದಾದ ಬೆಟ್ಟ-ಗುಡ್ಡಗಳನ್ನು ವಿವಿಧ ಸುರಕ್ಷತಾ ಸಲಕರಣೆಗಳ ಸಹಾಯದಿಂದ ಹತ್ತುವುದೇ ಚಾರಣ. ಸ್ಥಳಗಳಲ್ಲಿ ಮಾರ್ಗದರ್ಶನ ಮಾಡುವವರು ಪ್ರವಾಸಿಗರಿಗೆ ವಿವಿಧ ಕೌಶಲ್ಯಗಳನ್ನು ಕಲಿಸಬೇಕಾಗುವುದರಿಂದ ಅಲ್ಲಿ ಬಳಸುವ ಸುರಕ್ಷತಾ ಸಾಧನ-ಸಲಕರಣೆಗಳ ಬಗ್ಗೆ ವಿಶೇಷ ತರಬೇತಿ ಹೊಂದಿರಬೇಕಾಗುತ್ತದೆ.

C. ಶೋದನಾ ಮಾರ್ಗದರ್ಶಕರು: ಬಗೆಯ ಮಾರ್ಗದರ್ಶನದಲ್ಲಿ ಪ್ರವಾಸಿಗರಿಗೆ ವಿವಿಧ ಪ್ರದೇಶಗಳ ಮೂಲಕ ಹಾದು ತಮ್ಮ ಗುರಿ ತಲುಪುವ ಬಗ್ಗೆ ಮಾರ್ಗದರ್ಶನ ಮಾಡಬೇಕಾಗುವುದರಿಂದ ಮಾರ್ಗದರ್ಶಕರಿಗೆ ಭೌಗೋಳಿಕ ಸನ್ನಿವೇಶದ ಬಗ್ಗೆ ವಿಶೇಷ ತಿಳುವಳಿಕೆ ಇರಬೇಕಾಗುತ್ತದೆ.

D.    ಹಿಮವಲಯದ ಮಾರ್ಗದರ್ಶಕರು: ಹಿಮಾಚ್ಛಾದಿತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ವಿವಿಧ ಸುರಕ್ಷತಾ ಸಲಕರಣೆಗಳ ಮೂಲಕ ಅಲ್ಲಿನ ಸ್ಥಳಗಳಲ್ಲಿ ಮಾರ್ಗದರ್ಶನ ಮಾಡುವುದು. ಇದರಲ್ಲೂ ಸಹಾ ಬಳಸುವ ಉಪಕರಣಗಳ ಬಗ್ಗೆ ಮಾರ್ಗದರ್ಶಕರಿಗೆ ಮಾಹಿತಿ ಇರಬೇಕಾಗುತ್ತದೆ.

E.     ಅಶ್ವ ಸವಾರಿಯ ಮಾರ್ಗದರ್ಶಕರು: ಕುದುರೆಗಳ ಮೇಲೆ ಸವಾರಿ ಮಾಡುತ್ತಾ ವನ್ಯಜೀವಿಗಳು, ಭೌಗೋಳಿಕ ವಿವರಗಳು ಮತ್ತು ಸಸ್ಯವರ್ಗದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇಂತಹ ಮಾರ್ಗದರ್ಶಕರು ಕುದುರೆಗಳ ನಿರ್ವಹಣೆಯ ಬಗ್ಗೆಯೂ ತರಬೇತಿ ಪಡೆದಿರಬೇಕಾಗುತ್ತದೆ.

F. ಮೀನುಗಾರಿಕಾ ಮಾರ್ಗದರ್ಶಕರು: ಸಮುದ್ರ, ನದಿ, ಸರೋವರ ಮೊದಲಾದ ಜಲಕೇಂದ್ರಗಳಲ್ಲಿ ಮೀನು ಹಿಡಿಯುವ ಬಗ್ಗೆ ಮಾರ್ಗದರ್ಶನ ಮಾಡುವುದು ಇಲ್ಲಿನ ಮಾರ್ಗದರ್ಶಕರ ಕೆಲಸವಾಗಿರುತ್ತದೆ. ಆಳ ನೀರು ಅಥವಾ ಸಮುದ್ರದಲ್ಲಿ ಮಾರ್ಗದರ್ಶನ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆಯ ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮಾರ್ಗದರ್ಶಕರ ಜವಾಬ್ದಾರಿಯಾಗಿರುತ್ತದೆ.

G. ಭೌಗೋಳಿಕ ಮಾರ್ಗದರ್ಶಕರು: ಚತುರ್ಚಕ್ರ ವಾಹನಗಳಲ್ಲಿ ಪ್ರವಾಸಿಗರನ್ನು ವಿಶಾಲವಾದ ಭೌಗೋಳಿಕ ಪ್ರದೇಶವೊಂದರಲ್ಲಿ ಸಂಚರಿಸುವಾಗ ಮಾರ್ಗದರ್ಶನ ಮಾಡುವುದು ಇಲ್ಲಿನ ಕೆಲಸವಾಗಿರುತ್ತದೆ. ಮಾರ್ಗದರ್ಶಕರು ವಾಹನ ಚಾಲನೆಯ ಜೊತೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಹೊಂದಿರಬೇಕಾಗುತ್ತದೆ. ಎಲ್ಲಾ ಸಾಹಸ ಮಾರ್ಗದರ್ಶನ ಕಾರ್ಯಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಮನರಂಜನೆಗಳು ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ಅಂಶಗಳಾಗಿರುತ್ತವೆ.

. ವಸ್ತುಸಂಗ್ರಹಾಲಯದ ಮಾರ್ಗದರ್ಶಕರು: ವಿಶಾಲವಾದ ವಸ್ತುಸಂಗ್ರಹಾಲಯಗಳಲ್ಲಿ ಅಲ್ಲಿನ ವ್ಯವಸ್ಥಾಪಕರು ಮಾರ್ಗದರ್ಶಕರನ್ನು ನೇಮಿಸಿರುತ್ತಾರೆ. ವಸ್ತುಸಂಗ್ರಹಾಲಯದ ಪ್ರವೇಶದಿಂದ ಮೊದಲ್ಗೊಂಡು ಎಲ್ಲಾ ವಿಭಾಗಗಳಲ್ಲಿನ ವಿವಿಧ ವಸ್ತುಗಳ ವಿವರವಾದ ಮಾಹಿತಿ ನೀಡುವುದು ಇಲ್ಲಿನ ಮಾರ್ಗದರ್ಶಕರ ಕರ್ತವ್ಯವಾಗಿರುತ್ತದೆ.

. ಪ್ರಕೃತಿ ಮಾರ್ಗದರ್ಶಕರು: ಸಾಹಸ ಮಾರ್ಗದರ್ಶಕರಂತಲ್ಲದೇ ಇಲ್ಲಿ ನಡಿಗೆ, ವಾಹನ ಸವಾರಿ ಮೊದಲಾದ ಮಾಧ್ಯಮಗಳ ಮೂಲಕ ವಿಶಾಲವಾದ ಪ್ರದೇಶ ಅಥವಾ ಮರಳುಗಾಡಿನಂತಹ ಸ್ಥಳಗಳಲ್ಲಿ ಪ್ರವಾಸಿಗರಿಗೆ ಭೂಮೇಲ್ಮೈ ವಿವರಗಳು, ಪ್ರಕೃತಿ ಮತ್ತು ಪ್ರಾಣಿ-ಪಕ್ಷಿಗಳ ಪ್ರಭೇದಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.

. ನಗರ ಮಾರ್ಗದರ್ಶಕ: ದೊಡ್ಡ ನಗರಗಳಲ್ಲಿ ದ್ವಿಚಕ್ರ, ಚತುರ್ಚಕ್ರ ಅಥವಾ ಬಸ್ಸಿನಂತಹ ವಾಹನಗಳಲ್ಲಿ ಆಯಾ ನಗರಗಳಲ್ಲಿನ ಐತಿಹಾಸಿಕ ಸ್ಥಳಗಳು, ಉದ್ಯಾನವನಗಳು, ಆಕರ್ಷಕವಾದ ಕಟ್ಟಡಗಳು, ಹೋಟೇಲುಗಳು, ದೇವಾಲಯಗಳು, ಮಾರುಕಟ್ಟೆ ಪ್ರದೇಶಗಳ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಮಾರ್ಗದರ್ಶಕನದ್ದಾಗಿರುತ್ತದೆ. ಆದ್ದರಿಂದ ನಗರದ ವಿವಿಧ ಪ್ರವಾಸಿ ತಾಣಗಳ ಮಾಹಿತಿ ಹೊಂದಿರುವುದು ಅವಶ್ಯಕವಾಗಿರುತ್ತದೆ.

. ಉದ್ಯಾನವನಗಳ ಮಾರ್ಗದರ್ಶಕರು: ವಿಶೇಷ, ಪ್ರಾಣಿ, ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದ ಉದ್ಯಾನವನಗಳಲ್ಲಿ ಅಲ್ಲಿನ ಪ್ರಾಣಿ-ಪಕ್ಷಿ ಸಂಕುಲದ ಬಗ್ಗೆ ವಿಶೇಷವಾದ ವಿವರಗಳನ್ನು ನೀಡುವುದು ಇಲ್ಲಿನ ಮಾರ್ಗದರ್ಶಕರ ಕೆಲಸವಾಗಿರುತ್ತದೆ.

 

ಮಾರ್ಗದರ್ಶಕರಿಗೆ ಇರಬೇಕಾದ ಅಗತ್ಯ ಕೌಶಲ್ಯಗಳು - Skills

   ತಾವು ಮಾರ್ಗದರ್ಶಿಸುವ ಪ್ರಕಾರಕ್ಕೆ ತಕ್ಕಂತೆ ಅಗತ್ಯವಾದ ಕೌಶಲ್ಯಗಳು ಭಿನ್ನವಾಗಿರುತ್ತವೆ. ಆದರೆ ಎಲ್ಲಾ ಮಾರ್ಗದರ್ಶಕರೂ ಹೊಂದಿರಲೇಬೇಕಾದ ಕೆಲವು ಕೌಶಲ್ಯಗಳು ಕೆಳಗಿನಂತಿವೆ:-

ಸಂವಹನ ಕೌಶಲ್ಯ - Communication

ಗ್ರಾಹಕರಿಗೆ ಸೇವೆ ನೀಡುವುದು - Customer service

ಮಹತ್ವದ ಮತ್ತು ನಿಖರವಾದ ಪರಿಣತಿ - Significant, factual expertise

ಆಕರ್ಷಕ ವ್ಯಕ್ತಿತ್ವ - Charisma

ಹೊಂದಾಣಿಕೆಯ ಗುಣ - Adaptability

ಸಮಯಪಾಲನೆ - Punctuality

ನಾಯಕತ್ವದ ಗುಣ - Leadership

 

ಮಾರ್ಗದರ್ಶಕರ ಕೆಲಸದ ವೈಖರಿ- Work Style

ಮಾರ್ಗದರ್ಶಕರು ದಿನವಿಡೀ ಸಂಚರಿಸುವ, ಮಾತನಾಡುವ, ಪ್ರವಾಸಿಗರೊಂದಿಗೆ ಸಂವಹಿಸುವ ಮತ್ತು ಹೊಸ-ಹೊಸ ವಿಷಯಗಳನ್ನು ತಿಳಿದುಕೊಳ್ಳವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಆದ್ದರಿಂದ ಮಾರ್ಗದರ್ಶಕರಿಗೆ ಉತ್ತಮವಾದ ಆರೋಗ್ಯ ಮತ್ತು ದೈಹಿಕ ಕ್ಷಮತೆ ಇರಬೇಕಾಗುತ್ತದೆ. ಇದರಿಂದಾಗಿಯೇ ಬಹುತೇಕ ಮಾರ್ಗದರ್ಶಕರು ಕೆಲಸವನ್ನು ಒಂದು ವಿಶೇಷ ಆಸಕ್ತಿದಾಯಕ ಕೆಲಸವಾಗಿ ಸ್ವೀಕರಿಸಿರುತ್ತಾರೆ.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ