ಅಧ್ಯಾಯ 3. ಸಾಮ್ರಾಜ್ಯಶಾಹಿ ಸಿದ್ಧಾಂತಗಳು ಮತ್ತು ಪೌರ್ವಾತ್ಯರು; ಭಾರತದ ಸಂಘಟನೆ ಮತ್ತು ಉಪಯುಕ್ತತಾವಾದಿಗಳು.
ಪೀಠಿಕೆ:- ಮಧ್ಯಯುಗದಲ್ಲಿ ಭೌಗೋಳಿಕ ಅನ್ವೇಷಣೆಗಳ ನಂತರ ಜಗತ್ತಿನಾದ್ಯಂತ ವಿಸ್ತರಿಸಿದ ಬ್ರಿಟಿಷರು ಜಗತ್ತಿನಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಳ್ಳತೊಡಗಿದರು. ಇಂತಹ ವಸಾಹತು ವಿಸ್ತರಣೆಯ ಕಾಲದಲ್ಲಿ ಆಂಗ್ಲರು ತಮ್ಮನ್ನು ತಾವು ನಾಗರೀಕರೆಂದು ಭಾವಿಸಿಕೊಂಡದ್ದಲ್ಲದೇ, ತಮ್ಮ ವಸಾಹತುಗಳಲ್ಲಿನ ಜನರನ್ನು ಅನಾಗರೀಕರೆಂದು ಭಾವಿಸಿ ಅವರ ಸುಧಾರಣೆಗಾಗಿಯೇ ದೇವರು ನಮಗೆ ಈ ದೇಶಗಳನ್ನು ದಯಪಾಲಿಸಿದ್ದಾನೆ ಎಂದು ಭಾವಿಸತೊಡಗಿದರು. ಅದಕ್ಕಾಗಿ ಅವರು ವಸಾಹತು ವಿಸ್ತರಣೆಯನ್ನು ಎಲ್ಲೆಡೆ ವಿಸ್ತರಿಸಿದರು. ಅವರ ಇಂತಹ ವಿಸ್ತರಣೆಯ ಕಾಲಘಟ್ಟವನ್ನು ಎರಡು ಹಂತಗಳಲ್ಲಿ ವಿಭಜಿಸಬಹುದು. ಮೊದಲನೆಯದಾಗಿ ಪಶ್ಚಿಮದಲ್ಲಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳವರೆಗಿನ ವಿಸ್ತರಣೆ ಮತ್ತು ಪೂರ್ವದಲ್ಲಿ ಏಷ್ಯಾದ ರಾಷ್ಟ್ರಗಳವರೆಗಿನ ವಿಸ್ತರಣೆ. ಹೀಗೆ 18ನೆ ಶತಮಾನದ ಅಂತ್ಯ ಮತ್ತು 19ನೆ ಶತಮಾನದ ಆರಂಭದ ವೇಳೆಗೆ ವಸಾಹತು ವಿಸ್ತರಣೆಯ ಪ್ರಕ್ರಿಯೆಯಲ್ಲಿ ಭಾರತದಲ್ಲಿ ಅಷ್ಟೇ ಅಲ್ಲದೇ ಜಗತ್ತಿನ ಇತರ ಭಾಗಗಳಲ್ಲಿಯೂ ಸಾಕಷ್ಟು ಭೂಪ್ರದೇಶಗಳ ಮೇಲಿನ ಒಡೆತನವನ್ನು ಗಳಿಸಿದರು. ಅವರ ಇಂತಹ ವಸಾಹತು ವಿಸ್ತರಣೆಯೇ ಮುಂದೆ ಸಾಮ್ರಾಜ್ಯಶಾಹಿ ನೀತಿಯ ಬೆಳವಣಿಗೆಗೆ ಕಾರಣವಾಯಿತು. ಸಾಮ್ರಾಜ್ಯಶಾಹಿ ಸಿದ್ಧಾಂತಗಳ ಬೆಳವಣಿಗೆಯ ಕಾರಣಗಳು :- ಆಂಗ್ಲರ ಸಾಮ್ರಾಜ್ಯಶಾಹಿ ವಾದವು ಇಂಗ್ಲೆಂಡಿನಲ್ಲಿ ಉಂಟಾದ ಬೌದ್ಧಿಕ ಮತ್ತು ರಾಜಕೀಯ ಸಿದ್ಧಾಂತಗಳ ಬೆಳವಣಿಗೆಯ ಫಲವಾಗಿದೆ