ಅಧ್ಯಾಯ 12. ಭಾರತದ ಆರ್ಥಿಕತೆಯ ಮೇಲೆ ಬ್ರಿಟಿಷರ ಆಡಳಿತದ ಪರಿಣಾಮಗಳು. (British Impact on Indian Economy)

ಕೃಷಿ ಮತ್ತು ರೈತರ ಮೇಲಿನ ಪರಿಣಾಮಗಳು

ಹತ್ತಿ ನೂಲು ತೆಗೆಯುವ ಮತ್ತು ನೇಕಾರಿಕೆಯ ಉದ್ಯಮಗಳು ಹೆಚ್ಚು ಸಂಕಷ್ಟಕ್ಕೆ ಗುರಿಯಾದವು. ರೇಷ್ಮೆ ಮತ್ತು ಉಣ್ಣೆ ಉದ್ಯಮದ ಸ್ಥಿತಿಯೂ ಬೇರೆಯಾಗಲಿಲ್ಲ. ಇಂತಹುದೇ ಪರಿಸ್ಥಿತಿಯು ಕಮ್ಮಾರಿಕೆ, ಕುಂಬಾರಿಕೆ, ಗಾಜು, ಕಾಗದ, ಲೋಹಗಳು, ಬಂದೂಕು, ಹಡಗು, ಗಾಣಿಗ, ಚರ್ಮ ಹದಮಾಡುವ ಮತ್ತು ಬಣ್ಣದ ಉದ್ಯಮಗಳಲ್ಲೂ, ಕಾಣಿಸಿಕೊಂಡಿತು.

ಭಾರತೀಯ ರೈಲ್ವೆಯ ನಿರ್ಮಾಣದೊಂದಿಗೆ, ಭಾರತೀಯ ಕೈಗಾರಿಕೆಗಳು, ವಿಶೇಷವಾಗಿ ಗ್ರಾಮೀಣ ಕರಕುಶಲ ಕೈಗಾರಿಕೆಯು ಮೊದಲಿಗಿಂತ ವೇಗವಾಗಿ ನಾಶವಾಯಿತು. ಬ್ರಿಟಿಷರು, ದೇಶದ ಯಾವುದೇ ಭಾಗದ ಹಳ್ಳಿಗಾದರೂ ಹೋಗಿ ಸಾಂಪ್ರದಾಯಿಕ ಮಾರುಕಟ್ಟೆಯ ಮೇಲೆ ದಾಳಿ ಮಾಡುವ ಅವಕಾಶವನ್ನು ರೈಲ್ವೆ ಒದಗಿಸಿತು. ಅಮೇರಿಕಾದ ಲೇಖಕ ಡಬ್ಲ್ಯು. ಬುಖನನ್ ಹೇಳಿರುವಂತೆ, “ಪ್ರತ್ಯೇಕಗೊಂಡ ಸ್ವಾವಲಂಬಿತ ಗ್ರಾಮಗಳ ಲೋಹಕವಚವನ್ನು ಉಕ್ಕಿನ ರೈಲು ಚುಚ್ಚಿ, ಚೂರು ಮಾಡಿತು ಮತ್ತು ಅದರ ಬದುಕು ರಕ್ತಸಿಕ್ತವಾಯಿತು.”

ಸಾಂಪ್ರದಾಯಿಕ ಕೈಗಾರಿಕೆಗಳ ನಾಶದ ಜೊತೆಜೊತೆಗೆ ಆಧುನಿಕ ಯಂತ್ರೋದ್ಯಮಗಳು, ಬ್ರಿಟನ್ ಮತ್ತು ಪಶ್ಚಿಮ ಯೂರೋಪಿನಲ್ಲಿ ಬೆಳೆದಂತೆ ಭಾರತದಲ್ಲಿ ಬೆಳೆಯಲಿಲ್ಲ. ಆ ಕಾರಣದಿಂದ, ಕೆಲಸ ಕಳೆದುಕೊಂಡ ಕರಕುಶಲ ಕೆಲಸಗಾರರು, ಪರ್ಯಾಯ ಉದ್ಯೋಗವನ್ನು ಪಡೆದುಕೊಳ್ಳಲು ವಿಫಲರಾದರು. ಅವರಿಗೆ ಉಳಿದಿದ್ದ ಒಂದೇ ಒಂದು ಆಯ್ಕೆ ಎಂದರೆ, ಗುಂಪಿನಲ್ಲಿ ಕೃಷಿಗೆ ತೊಡಗುವುದು. ಜೊತೆಗೆ ಬ್ರಿಟಿಷ್ ಆಡಳಿತವು ಹಳ್ಳಿಗಳ ಆರ್ಥಿಕ ಬದುಕಿನ ಸಮತೋಲನವನ್ನು ತಪ್ಪಿಸಿತ್ತು. ಗ್ರಾಮೀಣ ಕರಕುಶಲ ಕಲೆಯ ವಿನಾಶವು ಕೃಷಿ ಮತ್ತು ಗೃಹ ಕೈಗಾರಿಕೆಗಳ ನಡುವಿನ ಸಾಮರಸ್ಯವನ್ನು ಒಡೆದು, ಗ್ರಾಮೀಣ ಸ್ವಾವಲಂಬೀ ಆರ್ಥಿಕತೆಯ ವಿನಾಶಕ್ಕೆ ದಾರಿಮಾಡಿತು. ಒಂದೆಡೆ, ಮೊದಲಿಗೆ ತಮ್ಮ ಆದಾಯವನ್ನು ನೂಲುವ ಮತ್ತು ನೇಯುವ ಅರೆಕಾಲಿಕ ಕೆಲಸಗಳಿಂದ ತುಂಬಿಕೊಳ್ಳುತ್ತಿದ್ದ ಲಕ್ಷಾಂತರ ಕೃಷಿಕರು, ಈಗ ಅಸಾಧ್ಯವೆನಿಸಿದರೂ, ಕೃಷಿಯನ್ನೇ ಆಧರಿಸಬೇಕಾಗಿತ್ತು. ಇನ್ನೊಂದೆಡೆ, ಲಕ್ಷಾಂತರ ಗ್ರಾಮೀಣ ಕಲೆಗಾರರು ತಮ್ಮ ಸಾಂಪ್ರದಾಯಿಕ ಕೆಲಸವನ್ನು ಕಳೆದುಕೊಂಡು, ಕೃಷಿ ಕಾರ್ಮಿಕರಾಗಿ ಅಥವಾ ಬಹಳ ಕಡಿಮೆ ಜಮೀನನ್ನು ಹೊಂದಿ, ಸಣ್ಣ ಪ್ರಮಾಣದ ಕೃಷಿಕರಾದರು. ಅವರೂ ಭೂಮಿಯ ಮೇಲೇ ಒತ್ತಡ ಹೇರಿದರು.

ಹೀಗೆ ಬ್ರಿಟಿಷರ ಗೆಲುವು ದೇಶದ ಕೈಗಾರಿಕೆಗಳನ್ನು ನಾಶಮಾಡಿ, ಜನರು ಕೃಷಿಯನ್ನೇ ಅವಲಂಬಿಸಲು ದಾರಿ ಮಾಡಿಕೊಟ್ಟವು. ಮೊದಲಿನ ಅವಧಿಯ ಮಾಹಿತಿಗಳು ಲಭ್ಯವಿಲ್ಲವಾದರೂ, ೧೯೦೧ರಿಂದ ೧೯೪೧ರ ನಡುವಿನ ಅವಧಿಯ ಜನಗಣತಿ ವರದಿಗಳ ಪ್ರಕಾರ, ದೇಶದಲ್ಲಿ ಕೃಷಿಯನ್ನು ಅವಲಂಬಿಸಿದ್ದವರ ಜನಸಂಖ್ಯೆಯು ಶೇ.೬೩.೭ರಿಂದ ೭೦ಕ್ಕೆ ಏರಿತು. ಹೀಗೆ ಕೃಷಿಯ ಮೇಲೆ ಹೆಚ್ಚಿದ ಒತ್ತಡವು ಬ್ರಿಟಿಷರ ಆಳ್ವಿಕೆಯು ಭಾರತದಲ್ಲಿ ಅತ್ಯಂತ ಬಡತನಕ್ಕೆ ಬಹು ಮುಖ್ಯ ಕಾರಣವಾಯಿತು.

ವಾಸ್ತವವಾಗಿ, ಆಗ ಭಾರತವು, ಬ್ರಿಟನ್ನಿನ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುವ ಕೃಷಿ ಕಾಲೋನಿ ಆಯಿತು. ಈ ಬದಲಾವಣೆಯು ಹತ್ತಿ ಬಟ್ಟೆಯ ಕೈಗಾರಿಕೆಯಲ್ಲಿ ಪ್ರಖರವಾಗಿ ವ್ಯಕ್ತವಾಯಿತು. ಮೊದಲಿಗೆ ಅನೇಕ ಶತಮಾನಗಳ ಕಾಲ ಭಾರತವು ಪ್ರಪಂಚಕ್ಕೆ ಹತ್ತಿ ಬಟ್ಟೆಗಳ ವಿಚಾರಗಳಲ್ಲಿ ಹೆಚ್ಚು ರಫ್ತು ಮಾಡುತ್ತಿದ್ದ ದೇಶವಾಗಿದ್ದುದು, ಬ್ರಿಟಿಷ್ ಹತ್ತಿ ಉತ್ಪಾದನೆಗಳನ್ನು ಆಮದು ಮಾಡಿಕೊಂಡು, ಕಚ್ಚಾ ಹತ್ತಿಯನ್ನು ರಫ್ತು ಮಾಡುವ ಸ್ಥಿತಿಗೆ ಬದಲಾಯಿತು.

ಬಡತನದ ಹೆಚ್ಚಳಕ್ಕೆ ಮತ್ತು ಹತ್ತೊಂಭತ್ತನೆಯ ಶತಮಾನದಲ್ಲಿ ಕೃಷಿಯ ವಿನಾಶಕ್ಕೆ, ಭೂಮಿಯ ಮೇಲೆ ನಿಗದಿಪಡಿಸುತ್ತಿದ್ದ ಕಂದಾಯದ ಅಧಿಕ ಹೊರೆಯು ಒಂದು ಬಹು ಮುಖ್ಯ ಕಾರಣವಾಗಿತ್ತು. ಅನೇಕ ಸಮಕಾಲೀನ ಲೇಖಕರು ಮತ್ತು ಅಧಿಕಾರಿಗಳು ಈ ವಾಸ್ತವವನ್ನು ಗಮನಿಸಿದ್ದಾರೆ. ಉದಾಹರಣೆಗೆ, ೧೮೨೬ರಲ್ಲಿ ಬಿಷಪ್‌ ಹೆಬರ್ ಹೀಗೆ ಬರೆದಿದ್ದಾನೆ :

“ಹಾಲಿ ಇರುವ ಕಂದಾಯದ ದರದಲ್ಲಿ ಕೃಷಿಕನು ದೇಶೀಯನಾಗಲೀ ಅಥವಾ ಯೂರೋಪಿನವನಾಗಲೀ ಬದುಕಲು ಸಾಧ್ಯವೇ ಇಲ್ಲ ಎಂದು ನನಗನಿಸುತ್ತದೆ. ಭೂಮಿಯ ನಿವ್ವಳ ಉತ್ಪನ್ನದ ಅರ್ಧದಷ್ಟನ್ನು ಸರ್ಕಾರವೇ ಕೇಳುತ್ತದೆ... ಹಿಂದೂಸ್ಥಾನದಲ್ಲಿ [ಉತ್ತರ ಭಾರತ] ದೊರೆಗಳ ಅಧಿಕಾರಿಗಳಲ್ಲಿ ನಾನೊಂದು ಸಾಮಾನ್ಯ ಭಾವನೆಯನ್ನು ಗಮನಿಸಿದೆ... ಕಂಪೆನಿಯ ಪ್ರದೇಶಗಳಲ್ಲಿನ ಕೃಷಿಕರು, ದೇಶೀಯ ಸಂಸ್ಥಾನಗಳ ಕೃಷಿಕರಿಗಿಂತ ಬಹಳ ಬಡವರೂ ನಿರುತ್ಸಾಹಿಗಳೂ ಆಗಿದ್ದರು; ಮದ್ರಾಸ್‌ನಲ್ಲಿ ಸಾಮಾನ್ಯವಾಗಿ ಭೂಮಿಯೂ ಬಡವಾಗಿದ್ದು, ವ್ಯತ್ಯಾಸವು ಗುರುತಿಸುವ ಮಟ್ಟಿಗೆ ಇರುತ್ತದೆ. ವಾಸ್ತವವಾಗಿ ಯಾವ ದೇಶೀ ರಾಜನೂ ನಾವು ಕೇಳಿದಷ್ಟು ಗೇಣಿಯನ್ನು ಕೇಳುವುದಿಲ್ಲ.”

ಅಧಿಕ ಕಂದಾಯ ಬೇಡಿಕೆಯ ದೋಷವು ಕೃಷಿಕನ ಬದುಕನ್ನು ಮತ್ತಷ್ಟು ದುಸ್ಥಿತಿಗಿಳಿಸಿತು: ಅವನಿಗೆ ಹಣದ ರೂಪದಲ್ಲಿ ಅವನ ಶ್ರಮದ ಬೆಲೆಯೂ ಲಭಿಸುತ್ತಿರಲಿಲ್ಲ. ಸರ್ಕಾರವು ಕೃಷಿಯ ಅಭಿವೃದ್ಧಿಗೆ ಬಹಳ ಕಡಿಮೆ ಹಣವನ್ನು ಖರ್ಚು ಮಾಡುತ್ತಿತ್ತು. ಅದು ತನ್ನ ಸಂಪೂರ್ಣ ಆದಾಯದ ಬಹುಭಾಗವನ್ನು, ಬ್ರಿಟಿಷ್ - ಇಂಡಿಯಾದ ಅವಶ್ಯಕತೆಗಳಿಗಾಗಿ, ಇಂಗ್ಲೆಂಡಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾಣಿಕೆಗಳ ಪಾವತಿಗಾಗಿ ಮತ್ತು ಬ್ರಿಟಿಷ್ ವ್ಯಾಪಾರ ಮತ್ತು ಕೈಗಾರಿಕೆಗಳ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ವಿನಿಯೋಗಿಸುತ್ತಿತ್ತು. ಕಾನೂನು ಮತ್ತು ವ್ಯವಸ್ಥೆಯ ಪಾಲನೆಯೂ ಸಹ ಕೃಷಿಕರ ಬದಲಿಗೆ ವ್ಯಾಪಾರಿಗಳು ಮತ್ತು ಸಾಲ ನೀಡುವವರಿಗೇ ಅನುಕೂಲಕರವಾಗಿತ್ತು.

ಅಧಿಕ ಭೂಕಂದಾಯ ಬೇಡಿಕೆಯ ಕೆಟ್ಟ ಪರಿಣಾಮಕ್ಕಿಂತ ಅದರ ವಸೂಲಿಯ ಕಠಿಣ ವಿಧಾನದಿಂದ ತೊಂದರೆಗಳ ಪ್ರಮಾಣ ಮತ್ತಷ್ಟು ಹೆಚ್ಚಿತು. ಸುಗ್ಗಿಯಲ್ಲಿ ಫಸಲು ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಬರಲಿ ಅಥವಾ ಸಂಪೂರ್ಣವಾಗಿ ಬರದೆ ಇರಲಿ ಭೂಕಂದಾಯವನ್ನು ಮಾತ್ರ ತಪ್ಪದೆ, ಅವಧಿಗೆ ಸರಿಯಾಗಿ ಪಾವತಿಸಬೇಕಾಗಿತ್ತು. ಒಳ್ಳೆಯ ಫಸಲು ಬಂದ ವರ್ಷಗಳಲ್ಲಿ ರೈತನಿಗೆ ಭೂಕಂದಾಯವನ್ನು ಪಾವತಿಸುವುದು ಕಷ್ಟ ಎನಿಸುತ್ತಿರಲಿಲ್ಲ. ಆದರೆ, ಫಸಲು ಬರದ ಕೆಟ್ಟ ವರ್ಷಗಳಲ್ಲಿ ಭೂಕಂದಾಯ ಕಟ್ಟುವುದು ರೈತನಿಗೆ ಕಷ್ಟವಾಗುತ್ತಿತ್ತು.

ರೈತನು ಭೂಕಂದಾಯವನ್ನು ಕಟ್ಟಲು ವಿಫಲನಾದಾಗ, ಕಂದಾಯವನ್ನು ವಸೂಲಿ ಮಾಡುವ ಸಲುವಾಗಿ, ಸರ್ಕಾರವು ಅವನ ಭೂಮಿಯನ್ನು ಹರಾಜು ಹಾಕುತ್ತಿತ್ತು. ಆದರೆ, ಬಹಳ ಸಂದರ್ಭಗಳಲ್ಲಿ ರೈತನೇ ಅವನ ಪಾಲಿನ ಭೂಮಿಯ ಸ್ವಲ್ಪ ಭಾಗವನ್ನು ಮಾರಿ, ಸರ್ಕಾರದ ಬಾಕಿ ತೀರಿಸುತ್ತಿದ್ದ. ಎರಡೂ ಸಂದರ್ಭಗಳಲ್ಲಿ ಅವನು ಭೂಮಿ ಕಳೆದುಕೊಳ್ಳುತ್ತಿದ್ದ.

ಬಹುತೇಕ ಸಂದರ್ಭಗಳಲ್ಲಿ, ಕಂದಾಯವನ್ನು ಪಾವತಿ ಮಾಡುವ ಶಕ್ತಿ ಇಲ್ಲದಿದ್ದಾಗ, ರೈತನು, ಲೇವಾದೇವಿಗಾರರಿಂದ, ಹೆಚ್ಚು ಬಡ್ಡಿಗೆ ಸಾಲ ಪಡೆಯುತ್ತಿದ್ದ. ಭೂಮಿಯ ಮೇಲಿನ ಸಂಪೂರ್ಣ ಒಡೆತನವನ್ನು ಒಟ್ಟಿಗೇ ಕಳೆದುಕೊಳ್ಳಲು ಬಯಸದ ರೈತನು, ಸರ್ಕಾರದ ಕಿರುಕುಳದಿಂದ ಪಾರಾಗಲು, ಭೂಮಿಯನ್ನು ಲೇವಾದೇವಿಗಾರರಲ್ಲಿ ಒತ್ತೆ ಇಟ್ಟು, ಸಾಲಮಾಡಿ ಕಂದಾಯ ಪಾವತಿಸುವುದೇ ಒಳ್ಳೆಯದು ಎಂದು ಭಾವಿಸಿದ್ದ. ತನ್ನ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗದ ಎಲ್ಲ ಸಂದರ್ಭಗಳಲ್ಲೂ, ರೈತನು ಲೇವಾದೇವಿಗಾರನ ಬಳಿ ಹೋಗುತ್ತಿದ್ದ.

ಲೇವಾದೇವಿಗಾರನು ಹೆಚ್ಚು ಬಡ್ಡಿ ದರವನ್ನು ವಿಧಿಸುತ್ತಿದ್ದುದಲ್ಲದೆ, ತಪ್ಪು ಲೆಕ್ಕ ಇಡುವುದು,  ರೈತರಿಂದ ಸುಳ್ಳು ದಾಖಲೆ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳುವುದು ಮತ್ತು ಅವನು ಸಾಲ ಪಡೆದದ್ದಕ್ಕಿಂತ ಹೆಚ್ಚು ಮೊತ್ತದ ಹಣಕ್ಕೆ ಸಹಿ ಮಾಡಿಸಿಕೊಂಡು, ಹಿಂದಿರುಗಿಸಲಾಗದ ಸಾಲದ ಬದಲಿಗೆ, ರೈತನ ಭೂಮಿಯನ್ನೇ ವಶಪಡಿಸಿಕೊಳ್ಳುವುದು ಇತ್ಯಾದಿ ಕುಟಿಲೋಪಾಯಗಳ ಮೂಲಕ, ರೈತನನ್ನು ಶೋಷಿಸುತ್ತಿದ್ದ.

ಹೊಸ ಕಾನೂನು ವ್ಯವಸ್ಥೆ ಮತ್ತು ಕಂದಾಯ ನೀತಿಯು ಲೇವಾದೇವಿಗಾರನಿಗೆ ಹೆಚ್ಚಿನ ಸಹಾಯ ಮಾಡಿದವು. ಬ್ರಿಟಿಷರ ಕಾಲಕ್ಕೆ ಮೊದಲು, ಲೇವಾದೇವಿಗಾರನು ಗ್ರಾಮ ಸಮುದಾಯದ ಅಧೀನನಾಗಿರುತ್ತಿದ್ದ. ಗ್ರಾಮಸ್ಥರಿಗೆ ಇಷ್ಟವಾಗದ ರೀತಿಯಲ್ಲಿ ಇವನು ಏನನ್ನೂ ಮಾಡುವಂತಿರಲಿಲ್ಲ. ಉದಾಹರಣೆಗೆ, ಅವನು ದುಬಾರಿ ಬಡ್ಡಿಯನ್ನು ಹಾಕುವಂತಿರಲಿಲ್ಲ. ವಾಸ್ತವವಾಗಿ ಬಡ್ಡಿ ದರವನ್ನು ಬಳಕೆ ಮತ್ತು ಸಾರ್ವಜನಿಕ ಅಭಿಪ್ರಾಯದ ಮೇಲೆ ನಿರ್ಧರಿಸಲಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವನು ಸಾಲಗಾರನ ಭೂಮಿಯನ್ನು ವಶಪಡಿಸಿಕೊಳ್ಳುವಂತಿರಲಿಲ್ಲ. ಹೆಚ್ಚೆಂದರೆ, ಅವನು ಸಾಲಗಾರನ ವೈಯಕ್ತಿಕ ಎನಿಸಿಕೊಂಡ, ಆಭರಣಗಳು ಅಥವಾ ಬೆಳೆದು ನಿಂತಿರುವ ಬೆಳೆಯ ಒಂದಷ್ಟು ಭಾಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದಾಗಿತ್ತು. ಬ್ರಿಟಿಷ್ ಕಂದಾಯ ವ್ಯವಸ್ಥೆಯು ಭೂಮಿಯ ವರ್ಗಾವಣೆ ಮಾಡುವುದನ್ನು ಜಾರಿಗೆ ತಂದ ಮೇಲೆ, ಲೇವಾದೇವಿಗಾರ ಅಥವಾ ಶ್ರೀಮಂತನು ರೈನತ, ಭೂಮಿಯನ್ನು ವಶಪಡಿಸಿಕೊಳ್ಳಬಹುದಾಗಿತ್ತು. ಬ್ರಿಟಿಷರು ಸ್ಥಾಪಿಸಿದ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯ ಮೂಲಕವೂ ಶಾಂತಿ ಮತ್ತು ಸುರಕ್ಷೆಯ ಸೌಲಭ್ಯಗಳನ್ನು, ಕಾನೂನು ತಮಗೆ ನೀಡಿದ್ದ ಅಪಾರಬಲದ ಮೂಲಕ ಲೇವಾದೇವಿಗಾರರೇ ಉಪಯೋಗಿಸಿಕೊಂಡರು. ಲೇವಾದೇವಿಗಾರರು ಮತ್ತು ಶ್ರೀಮಂತರು ಹಣದ ಬಲದಿಂದ ದುಬಾರಿಯಾಗಿದ್ದ ನ್ಯಾಯಾಂಗ ವ್ಯವಸ್ಥೆಯನ್ನು ತನ್ನ ಪರವಾಗಿಯೇ ಬಳಸಿಕೊಂಡು, ಪೊಲೀಸರು ತಮ್ಮ ಉದ್ದೇಶಕ್ಕೆ ಅನುಕೂಲಕರವಾಗಿರುವಂತೆ ಉಪಯೋಗಿಸಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ, ರೈತನ ಅಜ್ಞಾನ ಮತ್ತು ಅನಕ್ಷರತೆಯ ದೌರ್ಬಲ್ಯವನ್ನು ಅಕ್ಷರಸ್ಥ ಮತ್ತು ವ್ಯವಹಾರ ನಿಪುಣರಾದ ಸಾಲನೀಡಿಕೆದಾರರು ಬಳಸಿಕೊಂಡು, ಕಾನೂನಿನ ವಿಧಾನಗಳನ್ನು ಕಗ್ಗಂಟು ಮಾಡಿ, ನ್ಯಾಯವು ತಮಗೆ ಅನುಕೂಲಕರವಾಗಿಯೇ ಇರುವಂತೆ ಮಾಡಿಕೊಂಡರು.

ರೈತವಾರಿ ಮತ್ತು ಮಹಲ್‌ವಾರಿ ಪ್ರದೇಶಗಳ ಬೆಳೆಗಾರರು ಸಹಾ ಸಾಲದ ಸುಳಿಗೆ ಬಿದ್ದು, ಅವರ ಭೂಮಿಯು ಲೇವಾದೇವಿಗಾರರು, ವ್ಯಾಪಾರಿಗಳು, ಶ್ರೀಮಂತ ರೈತರು ಮತ್ತು ಇತರ ಶ್ರೀಮಂತರ ಕೈಗಳಿಗೆ ಹೋದವು. ಕೊರತೆ ಮತ್ತು ಕ್ಷಾಮದ ಸಂದರ್ಭಗಳಲ್ಲಿ ಬೆಳೆಗಾರರಿಂದ ಭೂಮಿಯ ವರ್ಗಾವಣೆಯು ಹೆಚ್ಚಾಗುತ್ತಿತ್ತು. ಸಂಕಷ್ಟದ ಸಂದರ್ಭಗಳಿಗೆಂದು ಭಾರತೀಯ ಕೃಷಿಕನು ಯಾವುದೇ ರೀತಿಯ ಉಳಿತಾಯ ಮಾಡಿಕೊಂಡಿರುತ್ತಿರಲಿಲ್ಲ; ಏಕೆಂದರೆ ಬ್ರಿಟಿಷರಿಗಿಂತ ಹಿಂದೆ ಇದ್ದ ದೇಶೀಯ ಆಡಳಿತಗಾರರು ಸಂಕಷ್ಟಗಳ ಸಮಯದಲ್ಲಿ ರೈತರ ಕಂದಾಯ ಮನ್ನಾ ಮಾಡುತ್ತಿದ್ದರು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಆದರೆ ಬ್ರಿಟಿಷರ ಆಡಳಿತಾವಧಿಯಲ್ಲಿ ಬೆಳೆಗಳು ವಿಫಲವಾದಾಗ, ಕಂದಾಯ ಕಟ್ಟುವುದರ ಜೊತೆಗೆ ತನ್ನ ಮತ್ತು ತನ್ನ ಕುಟುಂಬದ ಜೀವನಕ್ಕಾಗಿಯೂ ಅವನು ಲೇವಾದೇವಿಗಾರರ ಬೆನ್ನುಹತ್ತಬೇಕಾಗಿತ್ತು.

ಹತ್ತೊಂಭತ್ತನೆಯ ಶತಮಾನದ ಕೊನೆಗೆ ಲೇವಾದೇವಿಗಾರನು ಗ್ರಾಮಾಂತರ ಪ್ರದೇಶದಲ್ಲಿ ಒಂದು ಶಾಪದಂತಾಗಿದ್ದನು ಮತ್ತು ಗ್ರಾಮೀಣ ಜನರ ಬಡತನದ ಹೆಚ್ಚಳದಲ್ಲಿ ಪ್ರಮುಖ ಕಾರಣವಾಗಿದ್ದನು. ೧೯೧೧ರಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಸಾಲವು ರೂ. ೩೦೦ ಕೋಟಿ ಎಂದು ಅಂದಾಜು ಮಾಡಲಾಗಿತ್ತು. ೧೯೩೭ರ ಹೊತ್ತಿಗೆ ಅದು ರೂ. ೧೮೦೦ ಕೋಟಿಯನ್ನು ಮುಟ್ಟಿತ್ತು. ತೆರಿಗೆಯ ಒತ್ತಡ ಮತ್ತು ಹೆಚ್ಚುತ್ತಿದ್ದ ಬಡತನವು ಕೃಷಿಕರನ್ನು ಸಾಲಕ್ಕೆ ದೂಡಿತು ಮತ್ತು ಆ ಕಾರಣದಿಂದ ಅವರ ಬಡತನ ಮತ್ತಷ್ಟು ಹೆಚ್ಚಿತು.

ವಾಸ್ತವವಾಗಿ, ಸಾರ್ವಭೌಮ ಶೋಷಣೆಯ ಆಟದಲ್ಲಿ ಲೇವಾದೇವಿಗಾರನು ಅನಿವಾರ್ಯ ದಾಳ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೆಳೆಗಾರರು ವಿಫಲರಾಗಿದ್ದರು, ಕೋಪಿಸಿಕೊಳ್ಳುತ್ತಿದ್ದರು. ಉದಾಹರಣೆಗೆ, ೧೮೫೭ರ ಬಂಡಾಯದಲ್ಲಿ ರೈತರು ಪ್ರತಿಭಟನೆ ಮಾಡಿದ ಸ್ಥಳಗಳಲ್ಲೆಲ್ಲಾ, ಅವರ ಆಕ್ರಮಣದ ಮೊದಲ ಗುರಿಯು ಲೇವಾದೇವಿಗಾರ ಮತ್ತು ಅವನ ಲೆಕ್ಕದ ಪುಸ್ತಕಗಳೇ ಆಗಿದ್ದವು. ಅಂತಹ ರೈತ ಚಟುವಟಿಕೆಗಳು ನಂತರ ಸಾಮಾನ್ಯ ಘಟನೆಗಳಾದವು.

ವ್ಯವಸಾಯದ ವಾಣಿಜ್ಯೀಕರಣವೂ ಸಹ ಲೇವಾದೇವಿಗಾರ/ವ್ಯಾಪಾರಿಗೆ ಬೆಳೆಗಾರರನ್ನು ಶೋಷಿಸಲು ಸಹಾಯ ಮಾಡಿತು. ಬಡ ರೈತನು ಸುಗ್ಗಿ ಆದ ತಕ್ಷಣ, ಸಮಯಕ್ಕೆ ಸರಿಯಾಗಿ ಸರ್ಕಾರದ, ಭೂಮಾಲೀಕನ ಮತ್ತು ಲೇವಾದೇವಿಗಾರನ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ, ದೊರೆತಷ್ಟು ಬೆಲೆಗೆ ತನ್ನ ಉತ್ಪನ್ನವನ್ನು ಮಾರುವ ಒತ್ತಡದಲ್ಲಿರುತ್ತಿದ್ದ. ಈ ಕಾರಣದಿಂದ ಅವನು ನಿಬಂಧನೆಗಳನ್ನು ಮಾತಿನಲ್ಲೇ ಹೇಳುತ್ತಿದ್ದ ಮತ್ತು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ತನ್ನ ಉತ್ಪನ್ನಗಳನ್ನು ಕೊಳ್ಳುತ್ತಿದ್ದ, ಧಾನ್ಯ ವ್ಯಾಪಾರಿಗಳ ಕೃಪಾಶ್ರಯದಲ್ಲಿ ಇರಬೇಕಾಯಿತು. ಹೀಗೆ, ವ್ಯವಸಾಯ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಬೆಳೆಯ ವ್ಯಾಪಾರದ ಅನುಕೂಲಗಳ ಬಹುಪಾಲನ್ನು ಬಹುತೇಕ ಹಳ್ಳಿಗಳಲ್ಲಿ ಸಾಲನೀಡಿಕೆದಾರರಾಗಿರುತ್ತಿದ್ದ ವ್ಯಾಪಾರಿಗಳೇ ಸಂಗ್ರಹಿಸಿಕೊಳ್ಳುತ್ತಿದ್ದರು.

ಭೂಮಿಯ ನಷ್ಟ ಮತ್ತು ಹೆಚ್ಚಿದ ಕೃಷಿಭೂಮಿಯ ಮೇಲಿನ ಒತ್ತಡವು ಕೈಗಾರಿಕೀಕರಣಗೊಳ್ಳದಿರುವ ಹಾಗೂ ಆಧುನಿಕ ಕೈಗಾರಿಕೆಗಳ ಕೊರತೆಯ ಒಟ್ಟು ಕಾರಣದಿಂದ ಭೂರಹಿತ ರೈತರು ಮತ್ತು ವಿನಾಶಹೊಂದಿದ ಕುಶಲಕರ್ಮಿಗಳು ಹಾಗೂ ಕರಕುಶಲಕಾರರು ಲೇವಾದೇವಿಗಾರರಲ್ಲಿ ಮತ್ತು ಜಮೀನ್ದಾರರಲ್ಲಿ ಗೇಣಿದಾರನಾಗಿ ದುಬಾರಿ ಕಂದಾಯ ಕೊಡುವ ಅಥವಾ ಬರಗೆಟ್ಟ ಕೂಲಿಗೆ ಕೃಷಿಕ ಕೂಲಿಕಾರರಾಗಿ ಇರಬೇಕಾಯಿತು. ಹೀಗೆ ಕೃಷಿಕರು ಸರ್ಕಾರ, ಜಮೀನ್ದಾರ ಅಥವಾ ಭೂಮಾಲೀಕ ಮತ್ತು ಲೇವಾದೇವಿಗಾರ ಈ ಮೂರು ಹೊರೆಗಳ ನಡುವೆ ಸಿಕ್ಕಿಬಿದ್ದು ಅಪ್ಪಚ್ಚಿಯಾದರು. ಈ ಮೂರೂ ಜನರು ತಮ್ಮ ಪಾಲನ್ನು ತೆಗೆದುಕೊಂಡ ಮೇಲೆ ಅಕಸ್ಮಾತ್ ಉಳಿದದ್ದು, ಕೃಷಿಕರು ಮತ್ತು ಅವರ ಕುಟುಂಬದ ಜೀವಿತಕ್ಕೆ ದೊರೆಯುತ್ತಿತ್ತು.

***************

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಭಾರತದ ಭೌಗೋಳಿಕ ಲಕ್ಷಣಗಳು.

ಸಾಹಿತ್ಯಾಧಾರಗಳು - Literary Sources