ದೆಹಲಿ ಸುಲ್ತಾನರ ಕಾಲದ ರಾಜಪ್ರಭುತ್ವದ ಸಿದ್ಧಾಂತ; ಉಲೇಮಾಗಳು, ನೊಬಲ್ಲರು ಮತ್ತು ಸೂಫಿಗಳ ಪ್ರಭಾವ.
ಪೀಠಿಕೆ: ದೆಹಲಿ ಸುಲ್ತಾನರ ಆಡಳಿತಾವಧಿಯಲ್ಲಿನ ರಾಜಪ್ರಭುತ್ವದ
ಸಿದ್ಧಾಂತವು ಇಸ್ಲಾಂ ಜಗತ್ತಿನಿಂದ ಬಂದುದಾಗಿದೆ. ಅವನಿಗೆ ಆ ಅಧಿಕಾರ ಮತ್ತು ಸ್ಥಾನವು ದೇವರಿಂದಲೇ
ಕೊಡಲ್ಪಟ್ಟಿರುತ್ತದೆ ಎಂಬ ನಂಬಿಕೆ ಇಸ್ಲಾಂನಲ್ಲಿ ಇದೆ. ಆದ್ದರಿಂದ ಇಸ್ಲಾಂನಲ್ಲಿನ ರಾಜಪ್ರಭುತ್ವವನ್ನು
ದೈವೀಪ್ರಭುತ್ವ ಅಥವಾ Theocracy ಎಂದು ಕರೆಯಲಾಗುತ್ತದೆ.ಪಟಕ:
ಖಲೀಫರ ಸ್ಥಾನ-ಮಾನ: ಇಸ್ಲಾಂ
ಸ್ಥಾಪಕರಾದ ಮಹಮದ್ ಪೈಗಂಬರರು ಗತಿಸಿದ ನಂತರ ಅವರ ಅನುಯಾಯಿಗಳು ಖಲೀಫ ಎಂಬ ಹೆಸರಿನಲ್ಲಿ ರಾಜ್ಯವಾಳತೊಡಗಿದರು.
ಅಲ್ಲದೇ ಅವರು ಪೈಗಂಬರರ ಪ್ರತಿನಿಧಿಗಳೆಂದು ಸಹಾ ನಂಬಲಾಗಿದೆ. ಹಾಗಾಗಿ ಖಲೀಫನು ಇಡೀ ಇಸ್ಲಾಂ ಜಗತ್ತಿಗೇ
ಮುಖ್ಯಸ್ಥನಾಗಿದ್ದನು. ಬಹುತೇಕ ಸುಲ್ತಾನರು ಖಲೀಫನನ್ನು ಕಾನೂನಾತ್ಮಕ ಮುಖ್ಯಸ್ಥನೆಂದು, ತಮ್ಮನ್ನು
ತಾವು ಅವನ ಪ್ರತಿನಿಧಿಗಳೆಂದು ಭಾವಿಸುತ್ತಿದ್ದರು. ಅವರಲ್ಲಿ ಬಹುತೇಕರು ಖಲೀಫನ ಹೆಸರನ್ನು ಖುತ್ಬಾ
ಮತ್ತು ನಾಣ್ಯಗಳಲ್ಲಿ ಸೇರಿಸಿದ್ದರು ಹಾಗೂ ಅವನಿಗೆ ಅಧೀನರಾಗಿರುವುದನ್ನು ಸೂಚಿಸುವಂತಹ ಬಿರುದುಗಳನ್ನು
ಹೊಂದಿದ್ದರು. ಆದರೆ ಟರ್ಕರು ಭಾರತಕ್ಕೆ ಬರುವ ಎಷ್ಟೋ ಮೊದಲೇ ಖಲೀಫನ ಅಧಿಕಾರವು ಕ್ಷೀಣಿಸಿತ್ತು ಮತ್ತು
ವಂಶಪಾರಂಪರ್ಯದ ರಾಜತ್ವ ಮಾತ್ರವೇ ಉಳಿದಿತ್ತು. ಆದರೆ
ಸ್ವತಂತ್ರ ಮನೋಭಾವದ ಸುಲ್ತಾನರುಗಳ ರಾಜಕೀಯ ಅವಶ್ಯಕತೆ ಮತ್ತು ಶರ್ಯಾತ್ ಕಾನೂನುಗಳ ಬಗೆಗಿನ ಅವರ
ನಿರ್ಲಕ್ಷ್ಯವು ರಾಜ್ಯದ ಮುಖ್ಯಸ್ಥ ಅಂದರೆ ಸುಲ್ತಾನರ ಕರ್ತವ್ಯಗಳಲ್ಲಿ ಬದಲಾವಣೆಯನ್ನು ತಂದಿತು. ಅಂದರೆ ಧಾರ್ಮಿಕ ವಿಚಾರಗಳು ಉಲೇಮಾಗಳಿಂದ ನಿರ್ವಹಿಸಲ್ಪಟ್ಟರೆ,
ಆಡಳಿತಾತ್ಮಕ ಕರ್ತವ್ಯಗಳು ಸುಲ್ತಾನನಿಂದ ನಿರ್ವಹಿಸಲ್ಪಡುತ್ತಿದ್ದವು. ಧಾರ್ಮಿಕ ಮುಖಂಡರ ಪ್ರಭಾವ
ಹೆಚ್ಚಾಗಿರುತ್ತಿದ್ದ ಸುಲ್ತಾನರ ಆಡಳಿತದಲ್ಲಿ ರಾಜ್ಯದ
ನಿರ್ವಹಣೆಗಾಗಿ ನಿಯಮಗಳನ್ನು ರೂಪಿಸುವಾಗ ಸುಲ್ತಾನನ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು; ಅಂದರೆ
ಉಲೇಮಾಗಳ ಪ್ರಭಾವವು ಇಲ್ಲಿ ಹೆಚ್ಚಾಗಿತ್ತು. ಆದರೆ ಅಲ್ಲಾ ಉದ್ ದೀನ್ ಖಿಲ್ಜಿ ಮತ್ತು ಮಹಮದ್ ತುಘಲಕರು
ಉಲೇಮಾಗಳನ್ನು ಕಡೆಗಣಿಸಿ ಸ್ವತಂತ್ರವಾಗಿ ಆಡಳಿತ ನಡೆಸಿದರು. ಅಂತಹ ಸುಲ್ತಾನರ ಆಡಳಿತದ ಅವಧಿಯಲ್ಲಿ
ುಲೇಮಾಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರಲಿಲ್ಲ. ಆದರೂ ಬಹುತೇಕ ಸಂದರ್ಭಗಳಲ್ಲಿ ಸುಲ್ತಾನನ ಪದವಿಯು ಅತ್ಯುನ್ನತವಾದದ್ದಾಗಿತ್ತು ಮತ್ತು
ರಾಜಕೀಯ, ಕಾನೂನು ಮತ್ತು ಮಿಲಿಟರಿಗೆ ಸಂಬಂಧಿಸಿದ ವಿಷಯಗಳಲ್ಲಿ ಸುಲ್ತಾನನ ತೀರ್ಮಾನವೇ ಅಂತಿಮವಾಗಿತ್ತು. ನ್ಯಾಯದಾನ ನೀಡುವುದು ಸಹಾ ಅವನ ಕರ್ತವ್ಯಗಳಲ್ಲಿ ಒಂದಾಗಿತ್ತು
ಮತ್ತು ಅವನ ಆಸ್ಥಾನವೇ ಅಂತಿಮ ನ್ಯಾಯಾಲಯವಾಗಿತ್ತು. ಹಾಗಾಗಿ ಬಲ್ಬನ್ನನು ನಿಸ್ಪಕ್ಷಪಾತ ನ್ಯಾಯದಾನಕ್ಕೆ
ಹೆಸರಾಗಿದ್ದು, ಅವನು ತನ್ನ ಆಸ್ಥಾನಿಕರನ್ನೂ ಸಹ ಶಿಕ್ಷಿಸದೇ ಬಿಡಲಿಲ್ಲ. ಅಲ್ಲದೇ ಮಹಮದ್ ತುಘಲಕ್ಕನೂ
ಸಹ ಆ ಮೊದಲು ಶಿಕ್ಷೆಯಿಂದ ವಿನಾಯಿತಿ ಪಡೆದಿದ್ದ ಉಲೇಮಾಗಳನ್ನೂ ಶಿಕ್ಷೆಗೆ ಒಳಪಡಿಸಿದನು.
ನೊಬಲ್ಲರ ಪ್ರಭಾವ: ಇಲ್ತಮಶನು ಟರ್ಕಿ ಗಣ್ಯರನ್ನು ತನ್ನ ಸಮಾನರಂತೆ
ಭಾವಿಸಿದ್ದನು ಮತ್ತು ಅವರಿಗೆ ಉನ್ನತ ಹುದ್ದೆಗಳನ್ನು ನೀಡಿದ್ದರಿಂದ ಪ್ರಭಾವಶಾಲಿಗಳಾಗಿದ್ದರು. ಅವರನ್ನು
“ಟರ್ಕನ್ ಐ ಚಹಲಗಾನಿ ಅಥವಾ “ಚಾಲೀಸಾ” (ನಲವತ್ತರ ಕೂಟ) ಎಂದು ಕರೆಯಲಾಗುತ್ತಿತ್ತು. ಅವರು ಇಲ್ತಮಶನಿಗೆ
ನಿಷ್ಠರಾಗಿ ಸೇವೆ ಸಲ್ಲಿಸಿದರು. ಜಲಾಲುದ್ದೀನ್ ಖಿಲ್ಜಿಯು ಸಹನೆಯ ಮೂಲಕ ಉನ್ನತ ವರ್ಗದವರ ಬೆಂಬಲವನ್ನು
ಗಳಿಸಿಕೊಳ್ಳಲು ಪ್ರಯತ್ನಿಸಿದನು. ಅವನು ತಾನು ಅಧಿಕಾರಕ್ಕೆ ಬರುವ ಮುನ್ನ ಇದ್ದ ಎಲ್ಲಾ ಗಣ್ಯರನ್ನೂ
ಅವರ ಸ್ಥಾನಗಳಲ್ಲಿಯೇ ಉಳಿಸಿಕೊಂಡನು. ಆದರೆ ಅವನ ಸಹನೆಯ ನೀತಿಯೂ ಅವನ ನಂತರ ಅಧಿಕಾರಕ್ಕೆ ಬಂದ ಅಲ್ಲಾ
ಉದ್ ದೀನ್ ಖಿಲ್ಜಿಯಿಂದ ತ್ಯಜಿಸಲ್ಪಟ್ಟಿತು. ಅಲ್ಲಾನು ತನಗೆ ಎದುರಾಡಿದವರನ್ನೆಲ್ಲಾ ಉಗ್ರ ಶಿಕ್ಷೆಗೆ
ಒಳಪಡಿಸಿದನು. ಅವನು ಬಲ್ಬನ್ನನ ರಕ್ತ ಮತ್ತು ಕಬ್ಬಿಣದ ಅಧಿಕಾರ ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಿದನು.
ಲೋದಿ ಸಂತತಿಯ ಸ್ಥಾಪಕನಾಗಿದ್ದ ಬಹಲೂಲ್ ಲೋದಿಯು ಸಮರ್ಥನಾಗಿದ್ದರೂ ಸುಲ್ತಾನ ಪದವಿಯ ಮೇಲೆ
ಹಿಡಿತ ಸಾಧಿಸಬೇಕಾದರೆ ಅಫ್ಘನ್ ಮುಖ್ಯಸ್ಥರ ಬೆಂಬಲ ಬೇಕೆಂಬುದನ್ನು ಅರಿತಿದ್ದ. ಆದ್ದರಿಂದಲೇ ಅವನು
ತಾನು ಅದಿಕಾರಕ್ಕೆ ಬಂದ ಕೂಡಲೇ ಉನ್ನತ ಹುದ್ದೆಗಳಿಗೆ ಅಫ್ಘನ್ ಪಠಾಣರನ್ನು ನೇಮಿಸಿದನು. ಅಲ್ಲದೇ
ಅಫ್ಘನ್ ಮುಖ್ಯಸ್ಥರು ಸುಲ್ತಾನನು ತಮ್ಮನ್ನು ಅವನ ಸರಿ-ಸಮಾನರೆಂದು ಭಾವಿಸಬೇಕು ಎಂದು ಬಯಸುತ್ತಿದ್ದರು.
ಇದನ್ನರಿತ ಬಹಲೂಲ್ ಲೋದಿಯು ಸುಲ್ತಾನನಾದರೂ ತಾನೂ ಸಹ ಅವರಲ್ಲಿ ಒಬ್ಬನೆಂದು, ನಾವೆಲ್ಲರೂ ಸಮಾನರೆಂದು
ಸಾರ್ವಜನಿಕವಾಗಿಯೇ ಘೋಷಿಸಿದ್ದನು. ಹಾಗಾಗಿ ಅವನು ಸಿಂಹಾಸನದ ಮೇಲೆ ಕುಳಿತುಕೊಳ್ಳಲಿಲ್ಲ ಮತ್ತು ನೊಬಲ್ಲರನ್ನು
(ಅಫ್ಘನ್ ಮುಖ್ಯಸ್ಥರು) ಆಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿಸುತ್ತಿರಲಿಲ್ಲ. ಅವನ ಈ ನೀತಿಯು ಉತ್ತಮವಾಗಿಯೇ
ಫಲ ನೀಡಿತು ಮತ್ತು ಅವನು ತಾನು ಅಧಿಕಾರದಲ್ಲಿದ್ದ 38 ವರ್ಷಗಳ ಸುಧೀರ್ಘ ಅವಧಿಯಲ್ಲಿ ಅವರಿಂದ ಯಾವ
ಸಮಸ್ಯೆಯನ್ನೂ ಎದುರಿಸಲಿಲ್ಲ. ಆದರೆ
ಬಹಲೂಲ್ ಲೋದಿಯ ಮಗನಾದ ಸಿಕಂದರ್ ಲೋದಿಯು ಸುಲ್ತಾನನು ನೊಬಲ್ಲರಿಗಿಂತ ಶ್ರೇಷ್ಠನಾದವನು ಎಂಬ ಸಿದ್ಧಾಂತದಲ್ಲಿ
ನಂಬಿಕೆ ಇಟ್ಟಿದ್ದ. ಆದ್ದರಿಂದ ಅವನು ನೊಬಲ್ಲರು ತನಗೆ ಆಸ್ಥಾನದಲ್ಲಿ ಮತ್ತು ಹೊರಗೆ ಗೌರವ ಕೊಡಬೇಕು
ಎಂದು ಆದೇಶಿಸಿದನಲ್ಲದೇ ಅವರೊಂದಿಗೆ ಕಠಿಣವಾಗಿಯೇ ವರ್ತಿಸುತ್ತಿದ್ದನು.
ಉತ್ತರಾಧಿಕಾರದ ತತ್ವ: ಸುಲ್ತಾನರ ಕಾಲದಲ್ಲಿ ಉತ್ತರಾದಿಕಾರಕ್ಕೆ ಸಂಬಂಧಿಸಿದಂತೆ
ಯಾವುದೇ ಸ್ಪಷ್ಟವಾದ ನಿಯಮಗಳಿರಲಿಲ್ಲ. ಸುಲ್ತಾನನ ಎಲ್ಲಾ ಮಕ್ಕಳೂ ಸಿಂಹಾಸನಕ್ಕೆ ಹಕ್ಕುಳ್ಳವರಾಗಿರುತ್ತಿದ್ದರು.
ಆದ್ದರಿಂದ ಇಲ್ತಮಶನು ಮಗಳು ರಜಿಯಾಳನ್ನು ಉತ್ತರಾಧಿಕಾರಿಯೆಂದು ಘೋಷಿಸಿದ್ದನು. ರಜಿಯಾ ಮಧ್ಯಯುಗದಲ್ಲಿ
ದೆಹಲಿ ಸಿಂಹಾಸನವೇರಿದ ಪ್ರಥಮ ಮತ್ತು ಏಕೈಕ ಮಹಿಳೆ ಎನಿಸಿದಳು. ಕೆಲವೊಮ್ಮೆ ಸುಲ್ತಾನನ ಮಕ್ಕಳು ಅಸಮರ್ಥರೆನಿಸಿದಾಗ
ಅವನ ದಾಯಾದಿಗಳು ಇಲ್ಲವೇ ಅಳಿಯ ಅಥವಾ ಮಾವ – ಹೀಗೆ ಸಮರ್ಥರಾದವರು ಸಿಂಹಾಸನಕ್ಕೆ ಬರುತ್ತಿದ್ದರು.
ಅಲ್ಲಾ ಉದ್ ದೀನನು ಜಲಾಲುದ್ದೀನ್ ಖಿಲ್ಜಿಯ ಸೋದರನ ಮಗ ಮತ್ತು ಅಳಿಯ ಸಹಾ ಆಗಿದ್ದನು. ಬಲ್ಬನ್
ನಾಸಿರುದ್ದೀನ್ ಮಹಮದ್ದನ ಮಾವನಾಗಿದ್ದನು. ದೆಹಲಿ ಸುಲ್ತಾನರ ಒಟ್ಟು ಆಳ್ವಿಕೆಯು 320 ವರ್ಷಗಳ ಕಾಲವಿದ್ದರೂ
ಅದನ್ನು ಒಂದೇ ಮನೆತನ ಆಳಲಿಲ್ಲ. ಒಟ್ಟು ಐದು ಮನೆತನಗಳು ಅಥವಾ ಸಂತತಿಗಳು ಆಳಿದವು. ಒಂದು ಮನೆತನದ
ಕೊನೆಯ ಸುಲ್ತಾನರು ದುರ್ಬಲರಾದಾಗ ಸುಲ್ತಾನನ ಆಡಳಿತದಲ್ಲಿಯೇ ಇದ್ದ ಗಣ್ಯರೊಬ್ಬರು ಅಶಕ್ತ ಸುಲ್ತಾನ
ಇಲ್ಲವೇ ಅವನ ಮಕ್ಕಳನ್ನು ಕೊಂದು ಹೊಸದೊಂದು ಮನೆತನದ ಸ್ಥಾಪನೆ ಮಾಡುತ್ತಿದ್ದರು. ಇಲ್ಲಿ ಉತ್ತರಾಧಿಕಾರವು
ಖಡ್ಗ ಮತ್ತು ರಕ್ತದ ನೀತಿಯನ್ನು ಅವಲಂಬಿಸಿತ್ತೇ ಹೊರತು ವಂಶಪಾರಂಪರ್ಯವನ್ನಲ್ಲ. ಅಲ್ಲದೇ ಸೋದರರೂ
ಸಹ ಅಧಿಕಾರಕ್ಕಾಗಿ ತಮ್ಮಲ್ಲಿಯೇ ಸ್ಪರ್ಧೆ ಏರ್ಪಟ್ಟಾಗ ಒಬ್ಬರನ್ನೊಬ್ಬರು ಕೊಲ್ಲುವ ಉದಾಹರಣೆಗಳೂ ದಾಖಲಾಗಿವೆ.
ಉಪಸಂಹಾರ: ಒಟ್ಟಿನಲ್ಲಿ ದೆಹಲಿ ಸುಲ್ತಾನರ ರಾಜಪ್ರಭುತ್ವದಸಿದ್ಧಾಂತವು ಇಸ್ಲಾಂ ಮೂಲಭೂತ ಕಾನೂನುಗಳು (ಶರ್ಯಾತ್ ಇಲ್ಲವೇ ಖುರಾನ್),
ಸುಲ್ತಾನನ ಸಾಮರ್ಥ್ಯ, ದುರ್ಬಲ ಸುಲ್ತಾನರಿದ್ದಾಗ ನೊಬಲ್ಲರು, ಉಲೇಮಾಗಳು ಮತ್ತು ಸೂಫಿಗಳ ಪ್ರಭಾವಕ್ಕೆ
ಒಳಗಾಗಿತ್ತು. ಅಲ್ಲಾ ಉದ್ ದೀನ್ ಖಿಲ್ಜಿ ಹೇಳುವಂತೆ “ನಾನು ಧರ್ಮಶಾಸ್ತ್ರವನ್ನಾಗಲಿ, ನ್ಯಾಯಶಾಸ್ತ್ರವನ್ನಾಗಲಿ
ಅರಿತಿಲ್ಲ; ರಾಜ್ಯಕ್ಕೆ ಹಿತವಾದ ಶಾಸನವು ನ್ಯಾಯಬದ್ಧವಾಗಿರಲಿ ಅಥವಾ ಇಲ್ಲದಿರಲಿ, ಅದನ್ನು ಜಾರಿಗೆ
ತಂದೇತರುತ್ತೇನೆ. ನಾನು ಸತ್ತ ನಂತರ ದೇವರು ನನಗೆ ಯಾವ ಶಿಕ್ಷೆ ಕೊಟ್ಟರೂ ನನಗೆ ಚಿಂತೆಯಿಲ್ಲ.” ಎಂಬ
ಮಾತುಗಳಲ್ಲಿ ಸುಲ್ತಾನನ ಪರಮಾಧಿಕಾರವನ್ನು ಕಾಣಬಹುದಾದರೂ ಅದು ಸುಲ್ತಾನನ ಸಾಮರ್ಥ್ಯವನ್ನು ಅವಲಂಬಿಸಿತ್ತು
ಎಂಬುದು ಮಾತ್ರ ಸತ್ಯ.
***************
Comments
Post a Comment