ನರಭಕ್ಷಕರ ಫಿಜಿ ದ್ವೀಪ.

     ಫಿಜಿಯನ್ನರು ಮೂಲತಃ ವಿರಾಮಜೀವಿಗಳು. ದುಡ್ಡು ಸಂಪಾದನೆ ಮಾಡಲು ಕೆಲಸ ಮಾಡುವುದರ ಕಲ್ಪನೆಯೇ ಅವರಿಗಿಲ್ಲ. ಅನ್ನಾಹಾರಗಳು ಅನಾಯಾಸವಾಗಿ ದೊರೆಯುವ ದ್ವೀಪದಲ್ಲಿ ಮನಬಂದಂತೆ ಕಾಲಕಳೆಯುತ್ತಾ ಇದ್ದವರು, ಬ್ರಿಟಿಷರು ಬಂದು ಆ ದ್ವೀಪವನ್ನು ಅಭಿವೃದ್ಧಿಪಡಿಸಲು ಯತ್ನಿಸಿ ಅಲ್ಲೆಲ್ಲಾ ಕಬ್ಬಿನ ತೋಟಗಳನ್ನು ಪ್ರಾರಂಭಿಸಿ, ಸಂಬಳಕ್ಕೆ ಕೆಲಸಕ್ಕೆ ಬರಬೇಕೆಂದು ಹೇಳಿದ ಕೂಡಲೇ ಅವರಿಗೆ ಆಶ್ಚರ್ಯವಾಯ್ತು. ಸಂಬಳವೂ ಬೇಡ ಕೆಲಸವೂ ಬೇಡ ಎಂದು ಅವರಪಾಡಿಗೆ ಅವರು ಆರಾಮಾಗಿ ಇದ್ದರು. ಬ್ರಿಟಿಷ್ ಕಂಪನಿಗಳ ಯಾವ ಪ್ರಲೋಭನೆಯಿಂದಲೂ ಅವರನ್ನು ಕೆಲಸ ಮಾಡುವಂತೆ ಪ್ರೇರಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಬ್ರಿಟಿಷರು ಅನಿವಾರ್ಯವಾಗಿ ವಿದೇಶಗಳಿಂದ ಕೆಲಸಗಾರರನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯ್ತು.

     ಆಗ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ೧೮೭೪ರಲ್ಲಿ ಲಾರ್ಡ್ ಸ್ಯಾಲಿಸ್‌ಬರಿ ಫಿಜಿಯ ಕಬ್ಬಿನ ತೋಟಗಳಲ್ಲಿ ಕೆಲಸ ಮಾಡಲು ಮುಂದೆ ಬರುವ ಭಾರತೀಯರಿಗೆ ಅವರು ಅಲ್ಲಿರುವವರೆಗೂ ತಾತ್ಕಾಲಿಕ ಪೌರತ್ವ ಕೊಡುವುದಾಗಿ ಆಶ್ವಾಸನೆ ಕೊಟ್ಟು ಕೆಲಸಕ್ಕೆ ಬರುವವರೆಲ್ಲ ಬರಬಹುದೆಂದು ಆಹ್ವಾನಿಸಿದ. ಸಾವಿರಾರು ಜನ ಭಾರತೀಯರು ಅಲ್ಲಿಗೆ ಜೀವನೋಪಾಯಕ್ಕೆ ಹೋಗಲು ಮುಂದೆ ಬಂದರು. ಅವರಲ್ಲಿ ಪಂಜಾಬಿನ ಸಿಬ್ಬರು, ದಕ್ಷಿಣದ ಮದ್ರಾಸಿಗಳು, ಮುಸ್ಲಿಮರು, ಅಸ್ಪಷ್ಯರು ಎಲ್ಲರೂ ಇದ್ದರು. ಅವರು ಫಿಜಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸಿದರು. ತಮ್ಮ ಕೆಲಸ ಮುಗಿದಮೇಲೆ ಮತ್ತೆ ಸ್ವದೇಶಕ್ಕೆ ಹಿಂದಿರುಗಲು ಅವರು ಒಪ್ಪಲಿಲ್ಲ. ಅವರೆಲ್ಲಾ ಶಾಶ್ವತವಾಗಿ ಫಿಜಿ ನಿವಾಸಿಗಳಾಗೇ ಉಳಿದರು.

     ಫಿಜಿಯ ಭಾರತೀಯರನ್ನು ಕಂಡರೆ ಯಾರಿಗೂ ಆಗುವುದಿಲ್ಲ. ಇಲ್ಲಿಗೆ ಬರುವ ಅನೇಕರಿಗೆ ಮಹಾತ್ಮಾ ಗಾಂಧಿಯವರಿಂದಾಗಿ ಭಾರತೀಯರ ಬಗ್ಗೆ ಗೌರವವಿರುತ್ತದೆ. ಆದರೆ ಫಿಜಿಯಲ್ಲಿನ ಭಾರತೀಯರ ಮನೋಭಾವವನ್ನು ನೋಡಿ ಎಲ್ಲರೂ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆ. ಬ್ರಿಟಿಷರು ಭಾರತವನ್ನು ಶೋಷಿಸಿದರೆಂದು ಫಿಜಿ ಭಾರತೀಯರು ಯಾವಾಗಲು ಪಾಶ್ಚಿಮಾತ್ಯರನ್ನು ತಿರಸ್ಕಾರದಿಂದ ನೋಡುತ್ತಾರೆ. ಆದರೆ ಅವಕಾಶ ಸಿಕ್ಕಿದ ಕೂಡಲೇ ಅದಕ್ಕಿಂತ ಕ್ರೂರವಾಗಿ ಅಲ್ಲಿನ ಮೂಲವಾಸಿಗಳನ್ನು ಇವರು ಶೋಷಿಸುತ್ತಾರೆ. ಇದಕ್ಕೊಂದು ಚಿಕ್ಕ ಉದಾಹರಣೆಯೆಂದರೆ ಅಲ್ಲಿನ ಬ್ರಿಟಿಷ್ ಸರ್ಕಾರ ಹೊಸ ಮೂರು ಪೆನ್ನಿಯ ನಾಣ್ಯಗಳನ್ನು ಬಿಡುಗಡೆ ಮಾಡಿತು. ಅದು ಬಿಡುಗಡೆಯಾಗುತ್ತಿದ್ದಂತೆಯೇ ಅಳತೆ ಮೀರಿದ ಪ್ರಮಾಣದಲ್ಲಿ ಅದು ಖರ್ಚಾಗತೊಡಗಿತು. ಏನು ಕಾರಣ ಎಂದು ಸರ್ಕಾರ ತನಿಖೆ ಮಾಡಿದಾಗ ಅದು ಅಲ್ಲಿನ ಭಾರತೀಯರ ಕುಯುಕ್ತಿಯಿಂದಲೇ ಆಗಿದ್ದು ಎಂದು ದೃಢಪಟ್ಟಿತು. ಆ ನಾಣ್ಯಗಳನ್ನು ಅವರು ದೂರದೂರದ ದ್ವೀಪಗಳಿಗೆ ಒಯ್ದು, ಅರಿಯದ ಅಲ್ಲಿನ ಮೂಲ ನಿವಾಸಿಗಳಿಗೆ ಸವರನ್‌ಗಳೆಂದು ಮೋಸ ಮಾಡಿ ಮಾರಿದ್ದರು. ಈ ಮೋಸದ ಪ್ರಕರಣಗಳಲ್ಲಿ ಭಾರತೀಯರ ಮೇಲೆ ಏಳುಸಾವಿರ ಕೇಸುಗಳನ್ನು ಹಾಕಲಾಯಿತು.

     ಇದೇರೀತಿ ಅಲ್ಲಿನ ಮೂಲ ನಿವಾಸಿಗಳನ್ನು ಎರಡನೆ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುವುದೂ ನಡೆದಿದೆ. ಭಾರತೀಯ ನರ್ಸ್‌ಗಳು ಆಸ್ಪತ್ರೆಗಳಲ್ಲಿ ರೋಗಿಗಳಾಗಿ ಬಂದ ಮೂಲನಿವಾಸಿಗಳನ್ನು ತಿರಸ್ಕಾರದಿಂದ ನೋಡುವುದೂ, ಭಾರತೀಯರ ಶಾಲೆಗಳಿಗೆ ಫಿಜಿಯನ್ನರ ಮಕ್ಕಳನ್ನು ಸೇರಿಸದಿರುವುದು ಮೊದಲಾದ ಅಮಾನವೀಯ ನಡವಳಿಕೆಗಳಿಂದ ಫಿಜಿಯನ್ನರು ಭಾರತೀಯರನ್ನು ದ್ವೇಷಿಸುವಂತಾಗಿದೆ. ಅಲ್ಲದೆ ಒಬ್ಬೊಬ್ಬ ಭಾರತೀಯನಿಗೂ ದಿಗಿಲು ಬೀಳಿಸುವಷ್ಟು ದೊಡ್ಡದೊಡ್ಡ ಕುಟುಂಬಗಳಿವೆ. ಹತ್ತು ಹನ್ನೆರಡು ಮಕ್ಕಳಿರುವ ಕುಟುಂಬಗಳನ್ನು ಸರಾಸರಿ ಎಂಬಂತೆ ನೋಡಬಹುದು. ಇದರಿಂದಾಗಿ ಇಲ್ಲಿಗೆ ಕೆಲಸಕ್ಕಾಗಿ ವಲಸೆ ಬಂದ ಭಾರತೀಯರು ಇಂದು ಇಲ್ಲಿ ಶತಮಾನಗಳಿಂದ ವಾಸವಾಗಿದ್ದ ಫಿಜಿಯನ್ನರಿಗಿಂತಲೂ ಹೆಚ್ಚಾಗಿದ್ದಾರೆ. ಇವರ ಅಸಾಮಾಜಿಕ ನಡವಳಿಕೆಗಳೂ, ಇವರ ಜನದಟ್ಟಣೆಯೂ ಫಿಜಿಯ ಭಾರತೀಯರು ಎಂದರೆ ಎಲ್ಲರೂ ಅಸಹ್ಯಪಡುವ ಮಟ್ಟಕ್ಕೆ ಹೋಗಿದೆ.

     ಇಷ್ಟೆಲ್ಲ ಇದ್ದರೂ ಪಕ್ಷಪಾತವಿಲ್ಲದೆ ಯೋಚಿಸಿದರೆ ಇಂದಿನ ಫಿಜಿಯನ್ನು ರೂಪಿಸಿದವರು ಭಾರತೀಯರೇ ಎಂದು ಹೇಳಬೇಕು. ಕಟ್ಟಡಗಳನ್ನು ಕಟ್ಟುವುದರಿಂದ ಹಿಡಿದು ಕಬ್ಬಿನ ಗದ್ದೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವುದರವರೆಗೆ ಭಾರತೀಯರಿಲ್ಲದಿದ್ದರೆ ಯಾವುದೂ ಸಾಗುತ್ತಿರಲಿಲ್ಲ. ಇಲ್ಲಿನ ಎಲ್ಲ ಕಛೇರಿಗಳೂ ಅಂಗಡಿಗಳೂ ನಡೆಯುತ್ತಿರುವುದೇ ಭಾರತೀಯ ಕೆಲಸಗಾರರಿಂದ. ಆದರೂ ಅವರು ಫಿಜಿಯನ್ ಸಂಸ್ಕೃತಿಯೊಂದಿಗೆ ಬೆರೆಯದೆ ತಮ್ಮ ಪ್ರತ್ಯೇಕತೆಯನ್ನು ನಾನಾವಿಧದಿಂದ ಸಾಧಿಸುತ್ತಾ ಬಂದಿದ್ದೇ ಈಗಿನ ಬಿಕ್ಕಟ್ಟಿಗೆ ಕಾರಣ. ಈಗ ಪರಿಹಾರವಿಲ್ಲದ ಸಮಸ್ಯೆಯನ್ನು ಸರ್ಕಾರ ಎದುರಿಸಬೇಕಾಗಿದೆ. ಕೊಕಬೂ ಜೊತೆ ಬ್ರಿಟಿಷ್ ಸರ್ಕಾರ ಮಾಡಿಕೊಂಡ ಕರಾರಿನಂತೆ ಅಲ್ಲಿನ ಮೂಲ ನಿವಾಸಿಗಳು ಹೊರತೂ ಯಾರಿಗೂ ಭೂ ಒಡೆತನ ಇಲ್ಲ. ಹಾಗಿದ್ದರೆ ಅಲ್ಲಿನ ಭಾರತೀಯರನ್ನು ಏನು ಮಾಡುವುದು. ಫಿಜಿಯಲ್ಲೇ ಅನೇಕ ತಲೆಮಾರುಗಳನ್ನು ಕಳೆದಿರುವ ಅವರು ಹಿಂದಿರುಗಲಸಾಧ್ಯವಾದಷ್ಟು ಮುಂದೆ ಬಂದಿಲ್ಲವೆ? ಅಲ್ಲದೆ ಅವರನ್ನು ಬಿಟ್ಟರೆ ಬ್ರಿಟಿಷರು ನಿರ್ಮಿಸಿರುವ ಸರ್ಕಾರೀ ಯಂತ್ರವೇ ಕುಸಿದು ಬೀಳುವುದು ಸುಳ್ಳಲ್ಲ. ವಸಾಹತುಷಾಹಿ ಎಲ್ಲದೇಶಗಳಲ್ಲೂ ಹುಟ್ಟು ಹಾಕಿದ ಸಮಸ್ಯೆಯನ್ನೇ ಫಿಜಿ ದ್ವೀಪದಲ್ಲೂ ಹುಟ್ಟುಹಾಕಿದೆ.

******************************

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಭಾರತದ ಭೌಗೋಳಿಕ ಲಕ್ಷಣಗಳು.

ಸಾಹಿತ್ಯಾಧಾರಗಳು - Literary Sources