ಉತ್ತರ ವೈದಿಕ ಕಾಲ

ಪೀಠಿಕೆ : ವೈದಿಕ ಸಂಸ್ಕೃತಿಯ ಕಾಲವನ್ನು ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸ್ಥಿತಿಗಳಲ್ಲಿ ಉಂಟಾದ ಬದಲಾವಣೆಗಳನ್ನು ಆಧರಿಸಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೂರ್ವ ಮತ್ತು ಉತ್ತರ ವೈದಿಕ ಕಾಲ. ಉತ್ತರ ವೈದಿಕ ಕಾಲವು ಸಾ. ಶ.ಪೂ 1600 ರಿಂದ ಸಾ.ಶ. ಪೂ 600 ರವರೆಗೆ ಅಂದರೆ ಹೊಸ ಮತಗಳ ಉದಯದವರೆಗೆ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಈ ಕಾಲವನ್ನು ಹಲವಾರು ಬದಲಾವಣೆಗಳಿಗೆ ಒಳಗಾದ ಕಾಲವೆಂದು ಗುರುತಿಸಲಾಗಿದೆ. ಅಂತಹ ಬದಲಾವಣೆಗಳೆಂದರೆ ಭೌಗೋಳಿಕ ಚಲನೆ, ಕಬ್ಬಿಣದ ಅಧಿಕ ಬಳಕೆ, ಕೃಷಿಯ ವಿಸ್ತರಣೆ ಮತ್ತು ನಗರಗಳ ಬೆಳವಣಿಗೆ ರಾಜ್ಯದ ಕಲ್ಪನೆಯ ಉದಯ, ಆಶ್ರಮ ವ್ಯವಸ್ಥೆ ಮತ್ತು ಸಂಸ್ಕಾರಗಳ ಏಳಿಗೆ, ವೃತ್ತಿ ಆಧಾರಿತ ಜಾತಿ ಪದ್ಧತಿಗಳ ಉದಯ ಮತ್ತು ಸಾಮಾಜಿಕವಾಗಿ ಉಂಟಾದವುಗಳೇ ಆಗಿವೆ.

1. ಭೌಗೋಳಿಕ ಚಲನೆ : ಪೂರ್ವ ವೈದಿಕ ಕಾಲದಲ್ಲಿ ಆ ಕಾಲದ ಜನರು ಸಿಂಧೂ ಮತ್ತು ಅದರ ಉಪನದಿಗಳ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿದ್ದರು. ಇದನ್ನು ಸಪ್ತಸಿಂಧೂ ಪ್ರದೇಶ ಎಂದು ಕರೆಯಲಾಗಿದೆ. ಆದರೆ ಉತ್ತರ ವೈದಿಕ ಕಾಲದ ವೇಳೆಗೆ ಅಧಿಕ ಸಂಖ್ಯೆಯ ಜನರು ಪೂರ್ವದಲ್ಲಿ ಗಂಗಾ, ಯಮುನಾ ನದಿಗಳ ಬಯಲಿಗೆ ವಲಸೆ ಹೋದರು. ಇದನ್ನು ಪೂರ್ವದ ಕಡೆಗಿನ ಚಲನೆ ಅಥವಾ ಭೌಗೋಳಿಕ ಸ್ಥಿತ್ಯಂತರ ಎಂತಲೂ ಕರೆಯಲಾಗಿದೆ. ಈ ರೀತಿಯ ಭೌಗೋಳಿಕ ಸ್ಥಿತ್ಯಂತರಕ್ಕೆ ಕಾರಣವೆಂದರೆ ಹೆಚ್ಚಾದ ಜನಸಂಖ್ಯೆ, ಕೃಷಿಯ ಮೇಲಿನ ಅಧಿಕ ಅವಲಂಬನೆ ಮತ್ತು ಕಬ್ಬಿಣದ ಅನ್ವೇಷಣೆ ಎಂದು ತಿಳಿದುಬರುತ್ತದೆ.

2. ಕಬ್ಬಿಣದ ಅಧಿಕ ಬಳಕೆ:  ಈ ಕಾಲದ ಜನರು ಅದಾಗಲೇ ಬಳಕೆಯಲ್ಲಿದ್ದ ಲೋಹಗಳ ಜೊತೆಗೆ ಕಬ್ಬಿಣವನ್ನು ಅಧಿಕವಾಗಿ ಬಳಸ ತೊಡಗಿದರು. ಏಕೆಂದರೆ ಕಬ್ಬಿಣದ ಸಂಶೋಧನೆಯಿಂದ ವಿವಿಧ ರೀತಿಯ ಕೃಷಿ ಉಪಕರಣಗಳು ಮತ್ತು ಆಯುಧಗಳನ್ನು ತಯಾರಿಸ ತೊಡಗಿದರು. ಅವುಗಳ ಮೂಲಕ ಕೃಷಿ ಯೋಗ್ಯವಾದ ಭೂಮಿಯ ಹೆಚ್ಚಳಕ್ಕಾಗಿ ಗಂಗಾ ಯಮುನಾ ನದಿಗಳ ಬಯಲಿನಲ್ಲಿದ್ದ ಕಾಡನ್ನು ಕಡಿದು ಕೃಷಿ ಭೂಮಿಯ ವಿಸ್ತರಣೆಯತ್ತ ತೊಡಗಿದರು.

3. ಕೃಷಿ ವಿಸ್ತರಣೆ ಮತ್ತು ಬೆಳವಣಿಗೆ: ಮೊದಲೇ ತಿಳಿಸಿದಂತೆ ಹೆಚ್ಚಾಗುತ್ತಿದ್ದ ಜನಸಂಖ್ಯೆಗೆ ಬೇಕಾಗುವಷ್ಟು ಆಹಾರ ಪದಾರ್ಥಗಳ ಉತ್ಪಾದನೆಗೆ ತೊಡಗಿದ್ದರಿಂದ ಈ ಕಾಲದಲ್ಲಿ ಕೃಷಿಯ ಅಧಿಕ ಅವಲಂಬನೆ ಹೆಚ್ಚಾಯಿತು. ಇದರಿಂದ ಪೂರ್ವ ವೈದಿಕ ಕಾಲದಲ್ಲಿ ಇದ್ದ ಪಶುಪಾಲನೆ ಮತ್ತು ಅಲೆಮಾರಿ ಜೀವನದ ಸ್ವರೂಪ ಬದಲಾಗಿ ಒಂದೆಡೆ ಸ್ಥಿರ ಜೀವನ ನಡೆಸುವ ಪದ್ಧತಿ ಆರಂಭವಾಯಿತು. ಪರಿಣಾಮವಾಗಿ ಕ್ರಮೇಣ ವ್ಯವಸಾಯ ಚಟುವಟಿಕೆಗಳ ಜೊತೆಗೆ ವ್ಯಾಪಾರ ವಹಿವಾಟುಗಳು ಬೆಳೆಯತೊಡಗಿ ನಗರಗಳ ಸ್ಥಾಪನೆ ಆರಂಭವಾಯಿತು. ಬೆಲೆಬಾಳುವ ಲೋಹಗಳಿಂದ ತಯಾರಿಸಲ್ಪಟ್ಟ ವಿನಿಮಯ ರೂಪದ ನಾಣ್ಯ ಚಲಾವಣೆಯು ವಾಣಿಜ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ನಗರಗಳ ಏಳಿಗೆಗೆ ಕಾರಣವಾಯಿತು.

4. ರಾಜ್ಯಗಳ ಕಲ್ಪನೆಯ ಉದಯ:  ಉತ್ತರ ವೈದಿಕ ಕಾಲದಲ್ಲಿ ಬದಲಾದ ಮತ್ತೊಂದು ಪ್ರಮುಖ ಅಂಶವೆಂದರೆ ರಾಜತ್ವದ ಉದಯ. ಅಂದರೆ ಪೂರ್ವ ವೈದಿಕ ಕಾಲದಲ್ಲಿದ್ದ ಸಭಾ ಮತ್ತು ಸಮಿತಿಗಳ ಪ್ರಾಬಲ್ಯ ಕುಂಠಿತವಾಗಿ ರಾಜರ ಪ್ರಾಬಲ್ಯ ಅಧಿಕವಾಯಿತು. ಇದರಿಂದ ಕ್ಷತ್ರಿಯ ಪ್ರಾಬಲ್ಯ ವಿಜ್ರಂಭಿಸಿ ವಂಶ ಪಾರಂಪರ್ಯದ ರಾಜ ಪ್ರಭುತ್ವದ ಆಳ್ವಿಕೆ ಆರಂಭವಾಯಿತು.

5. ಆಶ್ರಮ ವ್ಯವಸ್ಥೆ: ಈ ಕಾಲದ ಧಾರ್ಮಿಕ ಸ್ಥಿತಿಗಳಲ್ಲಿ ಉಂಟಾದ ಪ್ರಮುಖ ಬದಲಾವಣೆ ಎಂದರೆ ಆಶ್ರಮ ಪದ್ಧತಿಯ ಬೆಳವಣಿಗೆ ಮತ್ತು ಸಂಸ್ಕಾರಗಳ ಬೆಳವಣಿಗೆ. ಆಶ್ರಮವೆಂದರೆ ಇರುವುದು ಅಥವಾ ನೆಲೆಸುವುದು ಎಂಬರ್ಥವಿದ್ದರೂ ಈ ಕಾಲದ ಆಶ್ರಮ ವ್ಯವಸ್ಥೆಗೆ ಇದನ್ನು ಅನ್ವಯಿಸುವಾಗ ಮನುಷ್ಯ ಜೀವನದ ಜೀವಿತಾವಧಿಯನ್ನು 100 ವರ್ಷಗಳೆಂದು ಪರಿಗಣಿಸಿ ಪ್ರತಿ 25 ವರ್ಷಗಳಿಗೆ ಒಂದು ವ್ಯವಸ್ಥೆಯನ್ನು ನಿಗದಿ ಮಾಡಲಾಗಿದೆ. ಅಂತಹ ವ್ಯವಸ್ಥೆಗಳೆಂದರೆ ಬ್ರಹ್ಮಚರ್ಯ(0-25) ಗೃಹಸ್ಥ (25-50) ವಾನಪ್ರಸ್ಥ (50-75) ಮತ್ತು ಸನ್ಯಾಸ (75-100) ಎಂದು ಆಶ್ರಮಗಳನ್ನು ಅರ್ಥೈಸಲಾಗಿದೆ. ಈ ಪ್ರತಿಯೊಂದು ವ್ಯವಸ್ಥೆಯಲ್ಲೂ ನಿರ್ದಿಷ್ಟ ಜವಾಬ್ದಾರಿಗಳನ್ನು ಮಾನವ ಜೀವನಕ್ಕೆ ನಿಗದಿ ಮಾಡಲಾಗಿದೆ. ಅವುಗಳೆಂದರೆ,

  ಮೊದಲ ಹಂತ:ಇದು ವಿದ್ಯಾರ್ಥಿಜೀವನವಾಗಿದೆ. ಇಲ್ಲಿ ಅವನು ತನ್ನ ತಂದೆ-ತಾಯಿಗಳಿರುವ ಮನೆಯನ್ನು ಬಿಟ್ಟು, ತಾನು ಆರಿಸಿಕೊಂಡ ಗುರುವಿನ ಬಳಿಯಲ್ಲಿಯೇ ವಾಸವಾಗಿರುತ್ತಾನೆ. ಈ ಬ್ರಹ್ಮಚಾರಿಗಳಲ್ಲೂ ಎರಡು ಬಗೆಮೊದಲು ವಿದ್ಯಾರ್ಥಿಯಾಗಿದ್ದು ಕೆಲವು ಕಾಲದ ನಂತರ ಮದುವೆಯಾಗಿ ಗೃಹಸ್ಥನಾದರೆ ಅವನನ್ನು 'ಉಪಕುರ್ವಾಣ' ನೆನ್ನುತ್ತಾರೆ. ಬ್ರಹ್ಮಚಾರಿಯಾಗಿಯೇ ಆಜನ್ಮಪರಿಯಂತ ಉಳಿದು ಜೀವನದುದ್ದಕ್ಕೂ ಜ್ಞಾನಸಂಪಾದನೆಯಲ್ಲಿಯೇ ತೊಡಗಿರುವವನನ್ನು 'ನೈಷ್ಠಿಕ' ನೆನ್ನುತ್ತಾರೆ.

ಎರಡನೆಯ ಹಂತ:ಇಲ್ಲಿ ಗೃಹಸ್ಥನ ಕರ್ತವ್ಯಗಳನ್ನು ಅಂದರೆ ಮುಖ್ಯವಾಗಿ ಯಜ್ಞ ಅಧ್ಯಯನ ಮತ್ತು ದಾನಗಳೆಂದು ಗುರುತಿಸಿರುವ ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಮನೆ-ಸಂಸಾರ ಇತ್ಯಾದಿ ಕಟ್ಟಿಕೊಂಡು ಗೃಹಸ್ಥ ಲೌಕಿಕ ಜೀವನದಲ್ಲಿ ಮೂರು ರೀತಿಯ ಋಣವನ್ನು ತೀರಿಸಬೇಕಾಗುತ್ತದೆ. ಅವೇ ದೇವಋಣ, ಪಿತೃಋಣ ಮತ್ತು ಋಷಿಋಣಗಳು. ದೇವಋಣವನ್ನು ಯಜ್ಞದಲ್ಲಿ ದೇವತೆಗಳನ್ನು ಆರಾಧಿಸುವುದರ ಮೂಲಕ ತೀರಿಸುತ್ತಾನೆ. ಕುಟುಂಬ-ಮಕ್ಕಳ ಪಾಲನೆಪೋಷಣೆಯ ಮೂಲಕ ಪಿತೃಋಣವನ್ನು ತೀರಿಸುತ್ತಾನೆ. ಜ್ಞಾನ ಪ್ರಪಂಚಕ್ಕೆ ತನ್ನ ಕೊಡುಗೆಯನ್ನು ನೀಡುವುದರ ಮೂಲಕ ಮತ್ತು ಹಬ್ಬದ ದಿನಗಳಲ್ಲಿ ಇಂದ್ರಿಯ ನಿಗ್ರಹವನ್ನು ಮಾಡುವುದುಮುಂತಾಗಿ ಧಾರ್ಮಿಕ ಜೀವನವನ್ನು ನಡೆಸುವುದರ ಮೂಲಕ ಋಷಿಗಳ ಋಣವನ್ನು ತೀರಿಸುತ್ತಾನೆ.

ಮೂರನೆಯ ಹಂತ:ಇದು ಭಿಕ್ಷುವಿನ ಜೀವನ. ಇದರಲ್ಲಿ ಅವನು ಇಂದ್ರಿಯ ನಿಗ್ರಹದ ಮತ್ತು ತ್ಯಾಗದ ಜೀವನವನ್ನು ನಡೆಸುತ್ತಾನೆ. ಅವನ ಲಕ್ಷಣಗಳನ್ನು ಈ ರೀತಿ ಗುರುತಿಸಲಾಗಿದೆ.

1. ಇಲ್ಲಿ ಅವನು ಏನನ್ನೂ ಕೂಡಿಡುವುದಿಲ್ಲ. 2. ಬ್ರಹ್ಮಚಾರಿಯಾಗಿರುತ್ತಾನೆ. 3. ಮಳೆಗಾಲದಲ್ಲಿ ಎಲ್ಲೂ ತಿರುಗಾಡುವುದಿಲ್ಲ. 4. ಕೇವಲ ಭಿಕ್ಷೆಗಾಗಿ ಹಳ್ಳಿಗಳಿಗೆ ಹೋಗುತ್ತಾನೆ. ಜನರ ಊಟ ಮುಗಿದ ಮೇಲೆ, ದಾನಪ್ರೇರಣೆಯಿಂದ ಯಾವುದೇ ಹಾರೈಕೆಯ ಆಸೆ ಇಲ್ಲದೆ ಅವರು ಕೊಟ್ಟಿದ್ದನ್ನು ಗೊಣಗದೇ ಪಡೆಯಬೇಕು. ಆ ಸಂದರ್ಭದಲ್ಲಿ ತನ್ನ ಮಾತು, ಕಣ್ಣು ಮತ್ತು ಕ್ರಿಯೆಗಳನ್ನು ನಿಯಂತ್ರಿಸಿಕೊಂಡಿರಬೇಕು. 5. ಬತ್ತಲೆದೇಹವನ್ನು ತೊಳೆದ, ತುಂಡು ಪಂಚೆ ಅಥವಾ ಹಳೆ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. 6. ಸಸ್ಯಜೀವನಕ್ಕೆ ಹಾನಿಯಾಗುವಂತ ಎಲೆ, ಹಣ್ಣುಗಳನ್ನು ಕೊಯ್ಯಬಾರದು. 7. ಮಳೆಗಾಲದ ನಂತರ ಒಂದೇ ಗ್ರಾಮದಲ್ಲಿ ಒಂದು ರಾತ್ರಿಗಿಂತ ಹೆಚ್ಚು ಕಾಲ ತಂಗಬಾರದು. 8. ಆಹಾರಕ್ಕಾಗಿ ಯಾವುದೇ ಕಾಳುಗಳನ್ನು ನಾಶಮಾಡಬಾರದು. ಆದರೆ ಬೇಯಿಸಿದ ಆಹಾರವನ್ನು ಭಿಕ್ಷೆಯಲ್ಲಿ ಸ್ವೀಕರಿಸಬಹುದು.

ನಾಲ್ಕನೆಯ ಹಂತ: ಇದು ಹೆಚ್ಚು ಕಠಿಣತರವಾದ ತ್ಯಾಗದ ಜೀವನ. ಈ ಆಶ್ರಮಕ್ಕೆ ಸೇರಿದವರನ್ನು ಪರಿವ್ರಾಜಕ, ಸಂನ್ಯಾಸಿ ಎಂಬ ಶಬ್ದಗಳಿಂದ ಗುರುತಿಸುತ್ತಾರೆ. ಅವರು ಅರಣ್ಯದಲ್ಲಿಯೇ ವಾಸವಾಗಿದ್ದು ಅಲ್ಲಿ ಬೆಳೆಯುವ ಕಂದ ಮೂಲ ಫಲಗಳನ್ನು ಆಹಾರವಾಗಿ ಸೇವಿಸುತ್ತಾರೆ. ಉತ್ತಿದ ನೆಲದ ಮೇಲೆ ಅವರು ಮಲಗಬಾರದು, ಹಳ್ಳಿಯನ್ನು ಪ್ರವೇಶಿಸಕೂಡದು ಅಥವಾ ವರ್ಷಕ್ಕೆ ಬೇಕಾಗುವಷ್ಟು ಆಹಾರ ಸಂಗ್ರಹಣೆಯನ್ನು ಮಾಡಬಾರದು. ತಲೆಕೂದಲು ಬೆಳೆಸಬೇಕು ಮತ್ತು ಕೇವಲ ಕೃಷ್ಣಾಜಿನವನ್ನು ಧರಿಸಬೇಕು. ಈ ಆಶ್ರಮದ ಸಂನ್ಯಾಸಿ ಅಥವಾ ಪರಿವ್ರಾಜಕರು ಸತ್ಯ-ಅಸತ್ಯ, ಸುಖದುಃಖ, ವೇದ, ಇಹ-ಪರಗಳನ್ನು ಕಡೆಗಣಿಸಿ ಅಥವಾ ತೊರೆದು ಕೇವಲ ಆತ್ಮನನ್ನು ಅರಸುವವರಾಗಿರುತ್ತಾರೆ ಎಂದು ವರ್ಣಿಸಲಾಗಿದೆ. ನೈಷ್ಟಿಕರು, ವಿಧುರರು, ಅಪುತ್ರಕರು, ಎಪ್ಪತ್ತು ವರ್ಷಕ್ಕಿಂತ ಹೆಚ್ಚಾಗಿದ್ದು, ಕುಟುಂಬದ ಜವಾಬ್ದಾರಿಯನ್ನು ಮಕ್ಕಳು ಹೊತ್ತಿದ್ದರೆ ಅಂಥವರು ಈ ಆಶ್ರಮವನ್ನು ಅನುಸರಿಸುತ್ತಾರೆ.

6. ಸಂಸ್ಕಾರಗಳ ಏಳಿಗೆ : ಈ ಕಾಲಘಟ್ಟದಲ್ಲಿ ಮನುಷ್ಯನ ಜನನದಿಂದ ಮರಣದವರೆಗಿನ ಅವಧಿಯಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಅವನ ಜೀವನದ ಉನ್ನತಿಗಾಗಿ ಕೆಲವು ಧಾರ್ಮಿಕ ಆಚರಣೆಗಳ ಅನುಸರಣೆ ಆರಂಭವಾಯಿತು. ಈ ಆಚರಣೆಗಳನ್ನೆ ಸಂಸ್ಕಾರಗಳೆಂದು ಕರೆಯಲಾಗಿದೆ. ಸಂಎಂದರೆ ಉತ್ತಮ ಒಳ್ಳೆಯ ಎಂಬ ಅರ್ಥವಿದ್ದು ಇವುಗಳನ್ನು ಶ್ರೇಷ್ಠ ಆಚರಣೆಗಳೆಂತಲೂ ತಿಳಿಯಬಹುದು. ವೇದ ಸಾಹಿತ್ಯದಲ್ಲಿ ಸುಮಾರು 40 ಸಂಸ್ಕಾರಗಳ ಉಲ್ಲೇಖವಿದ್ದು ಸಾಮಾನ್ಯವಾಗಿ ಶೋಡಷ ಸಂಸ್ಕಾರಗಳನ್ನು ಆಚರಿಸಲಾಗುತ್ತಿತ್ತು. ಗರ್ಭಧಾನದಿಂದ ಅಂತ್ಯೇಷ್ಠಿಯವರೆಗಿನ ಆಚರಣೆಗಳನ್ನು ಶೋಡಷ ಸಂಸ್ಕಾರಗಳೆಂದು ಕರೆಯಲಾಗಿದೆ.

A. ಶೋಡಷ ಸಂಸ್ಕಾರಗಳು:

  • ಗರ್ಭದಾನ: ವಿವಾಹದ ನಂತರ ವಧು-ವರರ ಪ್ರಥಮ ಮಿಲನಕ್ಕೆ ಮುನ್ನ ಆರೋಗ್ಯವಂತ ಸಂತಾನ ಕರುಣಿಸುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು.
  • ಪುಂಸವನ: ಗಂಡು ಸಂತಾನಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು.
  • ಸೀಮಂತೋನಯನ: ಗರ್ಭಿಣಿಗೆ ಏಳು ತಿಂಗಳು ತುಂಬಿದಾಗ ನಡೆಸುವ ಶುಭ ಸಮಾರಂಭ.
  • ಜಾತಕರ್ಮ: ಹೆರಿಗೆ ಆದ ಕೂಡಲೇ ಕರುಳು ಬಳ್ಳಿ ಕತ್ತರಿಸುವುದು ಮತ್ತು ಮಗುವನ್ನು ಶುಚಿಗೊಳಿಸಿ ತಾಯಿಯ ರಕ್ಷಣೆಗೆ ನೀಡುವುದು.
  • ನಾಮಕರಣ: ಮಗುವಿಗೆ ನಿಗದಿತ ಸಮಯದಲ್ಲಿ ಸೂಕ್ತ ನಾಮಕರಣ ಮಾಡುವುದು. ನಾಮಕರಣಕ್ಕೆ ಮೂರು ಉದ್ದೇಶಗಳಿವೆ; ವ್ಯಾವರ್ತನ ಅಂದರೆ ವಸ್ತುವೊಂದು ಇನ್ನೊಂದಕ್ಕೆ ಭಿನ್ನವಾಗಿದೆ ಎಂಬುದನ್ನು ಗುರ್ತಿಸುವುದು. ನಿರ್ದೇಶನ ಯಾವುದು ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು. ಆದರ್ಶನ ಅಂದರೆ ಹೆಸರಿನ ಮೂಲಕ ಮಗುವಿನ ಜೀವನಕ್ಕೆ ಒಂದು ಗುರಿಯನ್ನು ನೀಡುವುದು. ಹೆಸರಿನ ಅರ್ಥ ತಂದೆ-ತಾಯಿಗಳಿಗೆ ಮತ್ತು ಮಗುವಿಗೂ ತಿಳಿದಿರಬೇಕು ಮತ್ತು ಅದರಂತಹ ವ್ಯಕ್ತಿತ್ವ ಮಗುವಿನಲ್ಲಿ ರೂಪುಗೊಳ್ಳಬೇಕು.
  • ನಿಷ್ಕ್ರಮಣ: ಹುಟ್ಟಿದ ಮಗುವನ್ನು ಮೊದಲ ಸಲ ಹೊರಪ್ರಪಂಚಕ್ಕೆ ಪರಿಚಯಿಸುವುದು ಅಂದರೆ ಹಿತವಾದ ವಾತಾವರಣವಿರುವಾಗ ಮಗುವನ್ನು ಮನೆಯಿಂದ ಹೊರಗೆ ಕರೆತರುವುದು.
  • ಅನ್ನಪ್ರಾಶನ: ಮಗುವಿಗೆ ತಾಯಿಯ ಹಾಲಿನ ಬದಲು ಇತರೆ ಆಹಾರ ನೀಡುವುದನ್ನು ಆರಂಭಿಸುವಾಗ ನಡೆಸುವ ಆಚರಣೆ. ಅನ್ನಪತೇರನ್ನಸ್ಯನೊ  ದೇ ಶನಮೀವಸ್ಯ ಸುಶ್ಮಿಣಹ ಪ್ರಪ್ರದಾತಾರಿಂ ತಾರಿಶ ಊಜ್ಯನ್ನೊಧೇಹಿ ದ್ವಿಪಾದೇ ಚತುಷ್ಪಾದೆ ಎಂಬುದು ಮಗುವಿಗೆ ಅನ್ನಪ್ರಾಶನ ಸಂಸ್ಕಾರ ನೆರವೇರಿಸುವಾಗ ಉದ್ಗರಿಸುವ ವೇದಮಂತ್ರ. ಅಂದರೆ ಅನ್‌ ಪ್ರಾಣನೆ ಅಂದರೆ ಯಾವುದು ನಿಮಗೆ ಶಕ್ತಿಯನ್ನು ನೀಡುತ್ತದೋ ಅದೆಲ್ಲವೂ ಅನ್ನ. ಅನ್ನವು ಅನಮೀವಾ ಆಗಿರಬೇಕು ಅಂದರೆ ರೋಗವನ್ನುಂಟು ಮಾಡದಂತಿರಬೇಕು. ಅಮೀವಾ = ರೋಗ. ಅನ್ನವನ್ನು ನೀಡುವ ಭಗವಂತನಿಗಲ್ಲದೇ ಅದನ್ನು ಬೆಳೆದು ನೀಡುವ ರೈತನಿಗೂ ನಮಸ್ಕಾರ. ಪ್ರದಾತಾರಿಂ ಶುದ್ಧವಾಗಿರುವುದು. ತಾರೀಶ ಅಂದರೆ ರೈತರನ್ನೂ ರಕ್ಷಿಸು ಎಂದರ್ಥ. ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೆ ಮೇಲು, ಮೇಟಿಯಿಂ ರಾಟೆ ನಡೆವುದಲ್ಲದೇ ಲೋಕದಾಟವೇ ಕೆಡುಗು ಸರ್ವಜ್ಞ. ರೈತನು ಶುದ್ಧವಾದ ಆಹಾರ ನೀಡಬೇಕೆ ಹೊರತು ರಾಸಾಯನಿಕಗಳಿಂದ ಕೂಡಿದ ಆಹಾರವನ್ನಲ್ಲ; ಸಾವಯವ ಕೃಷಿಯಲ್ಲಿ ಬೆಳೆದ ರಾಸಾಯನಿಕಮುಕ್ತ ಆಹಾರವನ್ನು ನೀಡಬೇಕು. ಇಲ್ಲಿ ಮಹರ್ಷಿ ದಯಾನಂದ ಸರಸ್ವತಿಯವರ ವೇದಗಳಿಗೆ ಹಿಂತಿರುಗಿ ಎಂಬ ಮಾತು ನೆನಪಾಗುತ್ತದೆ. ವೇದಗಳ ಕಾಲದಲ್ಲಿ ಆಹಾರವು ರಾಸಾಯನಿಕಮುಕ್ತವಾಗಿ ಶುದ್ಧವಾಗಿತ್ತು. ಕಾರಣ ವೇದಮಂತ್ರದಲ್ಲಿ ರೈತನನ್ನೂ ರಕ್ಷಿಸು ಎಂದು ಹೇಳಿದೆ. ಇತ್ತೀಚಿಗೆ ಜನಪ್ರಿಯವಾಗುತ್ತಿರುವ ಸಾವಯವ ಕೃಷಿಯು ನಾವು ಶುದ್ಧವಾದ ಆಹಾರವನ್ನು ಬೆಳೆಯಬೇಕು ಎಂಬ ಭಾವನೆಯಿಂದಲೇ ಮೂಡಿಬಂದಿದೆ. ಅಂದರೆ ನಾವು ಪುನಃ ವೇದಗಳ ಕಾಲಕ್ಕೆ ಹಿಂತಿರುಗುತ್ತಿದ್ದೇವೆಯೇ ಎಂಬ ಪ್ರಶ್ನೆ ಇಲ್ಲಿ ಕಾಡದಿರದು.
  • ಚೂಡಾಕರ್ಮ (ಚೌಲ): ಜನ್ಮಸಹಿತವಾದ ಕೂದಲು ತೆಗೆಸುವ ಕ್ರಿಯೆ.
  • ಕರ್ಣವೇದನ: ಕಿವಿಗಳಿಗೆ ಆಭರಣ ತೊಡಿಸಲು ಕಿವಿ ಚುಚ್ಚಿಸುವ ಕ್ರಿಯೆ.
  • ಅಕ್ಷರಾರಂಭ: ಶುಭಘಳಿಗೆಯಲ್ಲಿ ಮಗುವಿಗೆ ಅಕ್ಷರ ಕಲಿಕೆ ಆರಂಭಿಸುವುದು.
  • ಉಪನಯನ: ಮಗುವನ್ನು ಶಿಕ್ಷಣಕ್ಕಾಗಿ ಗುರುಕುಲಕ್ಕೆ ಕಳುಹಿಸುವ ಮುನ್ನ ನಡೆಸುವ ಸಂಸ್ಕಾರ.
  • ವೇದಾರಂಭ: ವೇದಗಳು ಮತ್ತು ಉಪನಿಷತ್ತುಗಳ ಕಲಿಕೆ ಆರಂಭಿಸುವುದು.
  • ಕೇಶಾಂತ ಮತ್ತು ರುತುಶುದ್ಧಿ: ಕೇಶಾಂತವು ಹುಡುಗರಿಗೆ ಮೊದಲ ಮುಖಕ್ಷೌರ ಮಾಡಿಸುವಾಗ ನಡೆಸುವ ಆಚರಣೆ. ಋತುಶುದ್ಧಿಯು ಹುಡುಗಿಯರಿಗೆ ಮೊದಲ ಋತುಸ್ರಾವ ಉಂಟಾದಾಗ ನಡೆಸುವ ಸಮಾರಂಭ.
  • ಸಮಾವರ್ತನ: ಗುರುಕುಲದ ಶಿಕ್ಷಣ ಮುಗಿದ ನಂತರ ಶಿಷ್ಯರನ್ನು ಮನೆಗೆ ಕಳುಹಿಸುವಾಗ ನಡೆಸುವ ಆಚರಣೆ.
  • ವಿವಾಹ: ಬ್ರಹ್ಮಚರ್ಯದ ಅವಧಿ ಮುಗಿದ ನಂತರ ಸೂಕ್ತ ಸಂಗಾತಿಯೊಂದಿಗೆ ಮದುವೆ ಮಾಡಿಸುವುದು.
  • ಅಂತ್ಯೇಷ್ಠಿ: ವ್ಯಕ್ತಿ ಮರಣ ಹೊಂದಿದಾಗ ನಡೆಸುವ ಅಂತಿಮ ಕ್ರಿಯೆಗಳು.

B. ವೈವಾಹಿಕ ಆಚರಣೆಗಳು:

  • ವಧು-ವರ ಗಣಪರೀಕ್ಷಾ: ಮಗ ಅಥವಾ ಮಗಳಿಗೆ ಸೂಕ್ತ ವದು ಅಥವಾ ವರನನ್ನು ಹುಡುಕುವುದು.
  • ವರಪ್ರಯಾಣ: ವಧುವಿನ ಮನೆಗೆ ಹೆಣ್ಣು ಕೇಳಲು ಹೋಗುವುದು.
  • ವಾಗ್ದಾನ ಅಥವಾ ವಾನ್ನಿಶ್ಚಯ: ಪರಸ್ಪರ ಒಪ್ಪಿಗೆಯ ನಂತರ ಮದುವೆಯನ್ನು ನಿಶ್ಚಯಿಸುವುದು.
  • ನಾನದಿ ಶ್ರದ್ಧಾ : ಮದುವೆಯ ಶುಭಕಾರ್ಯಗಳ ಆರಂಭಕ್ಕೆ ಮುನ್ನ ಪಿತೃಗಳನ್ನು ಪೂಜಿಸುವುದು ಅಂದರೆ ದೇವತಾಕಾರ್ಯದಿಂದ ಮದುವೆಯ ಕೆಲಸ-ಕಾರ್ಯಗಳ ಆರಂಭ ಮಾಡುವುದು.
  • ಮಂಟಪಕರಣ : ಮದುವೆಯ ಕಾರ್ಯಗಳು ನಡೆಯಲು ಮಂಟಪ ಅಥವಾ ಚಪ್ಪರದ ಸಿದ್ಧತೆ ಮಾಡುವುದು.
  • ಗೌರಿಹರ ಪೂಜಾ : ವಧುವಿನಿಂದ ಶಿವ-ಪಾರ್ವತಿಯರ ಪೂಜೆ ಮಾಡಿಸುವುದು. (ಇಂದು ಮನೆದೇವರುಗಳ ಪೂಜೆ ಮಾಡಿಸಲಾಗುತ್ತದೆ)
  • ತೈಲಹರಿದ್ರಾರೋಪಣ : ವಧು-ವರರಿಗೆ ಅರಿಶಿಣಮಿಶ್ರಿತ ಎಣ್ಣೆಯ ಲೇಪನ ಮಾಡುವುದು.
  • ಸ್ನಾಪನಾ-ಪರಿಧಾಪನ ಮತ್ತು ಸಮ್ನಾಹನ: ವಧು-ವರರಿಗೆ ಸ್ನಾನ ಮಾಡಿಸುವುದು, ನವವಸ್ತ್ರಗಳನ್ನು ತೊಡಿಸುವುದು ಮತ್ತು ಕಂಕಣಧಾರಣೆ ಮಾಡಿಸುವುದು.
  • ಮಧುಪಾಕ: ವಧುವಿನ ಮನೆಯಲ್ಲಿ ವರನ ಕಡೆಯವರಿಗೆ ನಡೆಯುವ ಊಟೋಪಚಾರ. (ಪ್ರಾಚೀನ ಕಾಲದಲ್ಲಿ ಜೇನು, ಹಾಲು, ಮೊಸರುಗಳನ್ನು ಬಳಸುತ್ತಿದ್ದ ಕಾರಣದಿಂದ ಮಧುಪಾಕವೆಂಬ ಹೆಸರು)
  • ಪ್ರತಿಸರಬಂದ : ವಧು-ವರರಿಗೆ ಶುಭಕಂಕಣ ಧಾರಣೆ ಮಾಡಿಸುವುದು.
  • ಪರಸ್ಪರ ಸಮೀಕ್ಷಣ: ಮಾಂಗಲ್ಯಧಾರಣೆಗೆ ಮುನ್ನ ಅಂತರಪಟ (ಪರದೆ) ತೆಗೆದು ವಧು-ವರರ ಪರಸ್ಪರ ಮುಖದರ್ಶನ ಮಾಡಿಸುವುದು.
  • ಕನ್ಯಾದಾನ: ವಧುವಿನ ತಂದೆ-ತಾಯಿಗಳು ಮಗಳನ್ನು ವರನ ಮನೆಯವರಿಗೆ ಗುರು-ಹಿರಿಯರ ಸಮ್ಮುಖದಲ್ಲಿ ಧಾರೆ ಎರೆದು ಕೊಡುವುದು.
  • ಮಂಗಳಸೂತ್ರ ಬಂಧನ: ಶುಭಮುಹೂರ್ತದಲ್ಲಿ ವಧುವಿಗೆ ಮಾಂಗಲ್ಯಧಾರಣೆ ಮಾಡಿಸುವುದು.
  • ಅಗ್ನಿಸ್ಥಾಪನ ಮತ್ತು ಹೋಮ: ಅಗ್ನಿಯ ಸ್ಥಾಪನೆ ಮತ್ತು ಅದರ ಮೂಲಕ ಪವಿತ್ರ ವಸ್ತುಗಳನ್ನು ದೇವರಿಗೆ ಅರ್ಪಿಸುವುದು.
  • ಪಾಣಿಗ್ರಹಣ: ವಧುವಿನ ಕೈಯನ್ನು ವರನ ಕೈಗೆ ನೀಡುವುದು.
  • ಲಾಜಹೋಮ: ಹೋಮದಲ್ಲಿ ವಧುವು ಧಾನ್ಯಗಳನ್ನು ದೇವರಿಗೆ ಅರ್ಪಿಸುವುದು.
  • ಸಪ್ತಪದಿ: ವಧು-ವರರು ಅಗ್ನಿಯ ಸುತ್ತಲೂ ಏಳು ಹೆಜ್ಜೆ ನಡೆಯುವುದು.
  • ಮುರ್ಧಾಭಿಷೇಕ: ವಧು-ವರರಿಗೆ ಪವಿತ್ರ ಜಲವನ್ನು ಸಿಂಪಡಿಸುವುದು ಅಥವಾ ಗುರು-ಹಿರಿಯರು ಅಕ್ಷತೆ ಹಾಕುವುದು.

ನಿಷೇಕಪ್ರಸ್ತವು (ಪ್ರಥಮ ರಾತ್ರಿ) ಮದುವೆಯ ಒಂದು ಭಾಗವೆಂಬುದನ್ನು ಇಲ್ಲಿ ಗಮನಿಸಬೇಕು.

7. ವಿವಾಹ ಪದ್ಧತಿಗಳು: ಈ ಕಾಲದಲ್ಲಿ ಪೂರ್ವ ವೈದಿಕ ಕಾಲದಲ್ಲಿದ್ದ ವಿವಾಹ ಪದ್ಧತಿಗಳಿಗೆ ಬದಲಾಗಿ ಎಂಟು ರೀತಿಯ ವಿವಾಹ ಪದ್ಧತಿಗಳು ಆರಂಬವಾದವು. ಅವುಗಳೆಂದರೆ,

A. ಬ್ರಹ್ಮ ವಿವಾಹ:ತಂದೆ ಸೂಕ್ತ ವರನಿಗೆ ಮಗಳನ್ನು ಕೊಡುವುದು.

B. ದೈವ ವಿವಾಹ:ತಂದೆ ಪುರೋಹಿತನಿಗೆ ಮಗಳನ್ನು ಧಾರೆ ಎರೆದುಕೊಡುವುದು.

C. ಪ್ರಜಾಪತ್ಯ ವಿವಾಹ:ವರದಕ್ಷಿಣೆ ಇಲ್ಲದೇ ವರನು ಧರ್ಮಪಾಲನೆಗಾಗಿ ವಧುವಿನ ಕೈ ಹಿಡಿಯುವುದು.

D. ಆರ್ಷ್ಯ ವಿವಾಹ:ತಂದೆ ಹಸುವನ್ನು ಕಾಣಿಕೆಯಾಗಿ ಪಡೆದು ಮಗಳನ್ನು ಧಾರೆ ಎರೆದುಕೊಡುವುದು.

E. ಗಂಧರ್ವ ವಿವಾಹ:ವಧು-ವರರು ಪರಸ್ಪರ ಮೆಚ್ಚಿ ಮದುವೆಯಾಗುವುದು.

F. ರಾಕ್ಷಸ ವಿವಾಹ:ವಧುವನ್ನು ಮದುವೆ ಮಂಟಪದಿಂದ ಅಪಹರಿಸಿ ವಿವಾಹವಾಗುವುದು.

G. ಅಸುರ ವಿವಾಹ:ಕನ್ಯೆಯು ವರನಿಗೆ ಶುಲ್ಕ ಕೊಟ್ಟು ವಿವಾಹವಾಗುವುದು.

H. ಪೈಶಾಚ ವಿವಾಹ: ಕನ್ಯೆ ನಿದ್ರೆಯಲ್ಲಿದ್ದಾಗ ಅಪಹರಿಸಿ ವಿವಾಹವಾಗುವುದು.

ಈ ಮೇಲಿನವುಗಳಲ್ಲಿ ಮೊದಲ ಮೂರು, ನಾಲ್ಕು ಅಥವಾ ಆರು ವಿವಾಹಗಳನ್ನು ಬೇರೆ ಬೇರೆ ಪ್ರಮಾಣಗ್ರಂಥಗಳು ಒಪ್ಪಿಕೊಂಡಿವೆ. ಕೊನೆಯ ರೀತಿಯ ವಿವಾಹವನ್ನು ಸಾರ್ವತ್ರಿಕವಾಗಿ ಖಂಡಿಸಲಾಗಿದೆ. ಏಳನೆಯದನ್ನು ಕ್ಷತ್ರಿಯ ಸಂದರ್ಭದಲ್ಲಿ ಮಾತ್ರ ಒಪ್ಪಲಾಗಿದೆ. ಕೊನೆಯ ನಾಲ್ಕು ಪ್ರಕಾರಗಳ ವಿವಾಹವನ್ನು ಖಂಡಿಸುವುದು, ಹುಡುಗಿಯ ತಂದೆ ಅಥವಾ ಪಾಲಕರು ತಮಗೆಷ್ಟು ಸಂಪತ್ತು ದೊರೆಯಬಹುದೆಂಬ ವಿಚಾರದಿಂದ ಪ್ರಭಾವಿತರಾಗದೇ ಗುಣ, ಅರ್ಹತೆಗಳುಳ್ಳ ವರನಿಗೆ ಹೆಣ್ಣನ್ನು ಸರಿಯಾಗಿ ಮದುವೆ ಮಾಡಿಕೊಡುವ ಮೂಲ ವಿಚಾರವನ್ನು ತಿಳಿಸುತ್ತದೆ. ಒಂದನೆಯ ಮತ್ತು ನಾಲ್ಕನೆಯ ರೀತಿಯ ಮದುವೆಗಳಲ್ಲಿ ವ್ಯತ್ಯಾಸವೇನೆಂಬುದು ಸ್ಪಷ್ಟವಿಲ್ಲ. ಒಟ್ಟಾರೆ, ವಿವಾಹ ಕೇವಲ ಗಂಡು-ಹೆಣ್ಣಿನ ನಡುವಿನ ವ್ಯಾವಹಾರಿಕ ಒಪ್ಪಂದವಾಗಿರದೇ, ಧಾರ್ಮಿಕ ಸಂಸ್ಕಾರವೆಂದು ಭಾವಿಸಲ್ಪಟ್ಟಿದೆ.

ಆಸುರ ವಿವಾಹಕ್ಕೆ ಅಂದರೆ ಕೊಡುಗೆ ಮತ್ತು ಸಂಪತ್ತಿನಿಂದ ವಧುವನ್ನು ಕೊಂಡುತಂದುದಕ್ಕೆ ಶಲ್ಯನ ಸೋದರಿ ಮಾದ್ರಿಯನ್ನು ಪಾಂಡುವಿಗೆ ತಂದುದು, ದಶರಥ ಕೈಕೇಯಿಯನ್ನು ಕೊಂಡುತಂದುದು, ಉದಾಹರಣೆಯಾಗುತ್ತವೆ. ರಾಕ್ಷಸ ವಿವಾಹಕ್ಕೆ ಅರ್ಜುನ ಸುಭದ್ರೆಯನ್ನು ಮದುವೆಯಾದ ರೀತಿ, ಮತ್ತು ವಿಚಿತ್ರವೀರನ ಸಲುವಾಗಿ ಭೀಷ್ಮ ಕಾಶೀರಾಜನ ಪುತ್ರಿಯರಾದ ಅಂಬಾಲಿಕೆ ಮತ್ತು ಅಂಬಿಕೆಯರನ್ನು ಬಲಾತ್ಕಾರದಿಂದ ಒಯ್ಯುವುದು ಉದಾಹರಣೆಯಾಗುತ್ತವೆ. ರಾವಣ ಸೀತೆಯನ್ನು ಅಪಹರಿಸಿ ಕೊಂಡೊಯ್ದುದನ್ನು ಕೂಡ ರಾಕ್ಷಸ ಪಂಗಡದಲ್ಲಿ ಪ್ರಚಲಿತವಿದ್ದ ಇದೇ ರೀತಿಯ ವಿವಾಹ ಪದ್ಧತಿಯ ಮೂಲಕವೇ ವಿವರಿಸಲು ಸಾಧ್ಯವೆಂದು ತೋರುತ್ತದೆ.

ಸ್ವಯಂವರ ಪದ್ಧತಿಯು ಸಹಾ ಆ ಕಾಲದಲ್ಲಿದ್ದ ಒಂದು ವಿವಾಹ ಪದ್ಧತಿಯಾಗಿತ್ತು. ಅಂದರೆ ವಿವಾಹಕ್ಕೆ ಯೋಗ್ಯಳಾದ ಮಗಳನ್ನು ವರಿಸಲು ಕ್ಷತ್ರಿಯ ರಾಜನೊಬ್ಬನು ರಾಜಕುಮಾರರು ಮತ್ತು ರಾಜರನ್ನು ಆಹ್ವಾನಿಸಿ, ಅವರ ಶೌರ್ಯ ಪರೀಕ್ಷೆಯ ನಂತರ ಪರಾಕ್ರಮಿಯಾದವನಿಗೆ ಮಗಳನ್ನು ಧಾರೆ ಎರೆದುಕೊಡುತ್ತಿದ್ದನು. ಇದು ವೈದಿಕ ಕಾಲದಲ್ಲಿದ್ದ ವಧುವಿಗೆ ವರನ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಮೂಲದಲ್ಲಿ ಕ್ಷತ್ರಿಯ ವರ್ಗಕ್ಕೆ ಸೀಮಿತವಾಗಿದ್ದು,  ರಾಜಕುಮಾರಿಯು ತನ್ನನ್ನು ಮದುವೆಯಾಗುವ ಆಸೆಯಿಂದ ಕ್ಷತ್ರಿಯ ವೀರರಲ್ಲಿ ತನಗಿಷ್ಟವಾದವನನ್ನು ಮುಕ್ತವಾಗಿ ಆರಿಸಿಕೊಳ್ಳುವುದು ಅಥವಾ ಶಸ್ತ್ರಗಳ ಬಳಕೆಯ ಸ್ಪರ್ಧೆಯಲ್ಲಿ ಗೆದ್ದವನನ್ನು ವರಿಸುವುದನ್ನು ಒಳಗೊಂಡಿದೆ. ಮೊದಲು ಇದು, ಗಾಂಧರ್ವವಿವಾಹ ಪದ್ಧತಿಯಲ್ಲಿಯೇ ಸಮಾವೇಶವಾಗಿದ್ದಿರಬೇಕು. ಬ್ರೌಪದಿ ಮತ್ತು ಸೀತೆಯರು ಇದೇ ರೀತಿ ವಿವಾಹವಾದುದನ್ನು ಉದಾಹರಿಸಬಹುದು.

ಅಲ್ಲದೇ ಕೆಳಕಂಡ ವಿವಾಹದ ವಿಧಗಳೂ ಆ ಕಾಲದಲ್ಲಿ ಕಂಡು ಬರುತ್ತವೆ.

I. ಅನುಲೋಮ ವಿವಾಹ:ಉಚ್ಚಜಾತಿಯ ಗಂಡು ಕೆಳಜಾತಿಯ ಹೆಣ್ಣನ್ನು ವಿವಾಹವಾಗುವುದು. ಧರ್ಮಸೂತ್ರಗಳಂತೆ ಸ್ಮೃತಿಗಳೂ ಕೂಡ ಈ ವಿವಾಹವನ್ನು ಒಪ್ಪುತ್ತವೆ.

II. ಪ್ರತಿಲೋಮ ವಿವಾಹ:ಕೆಳಜಾತಿಯ ಗಂಡು ಉಚ್ಚ ಜಾತಿಯ ಹೆಣ್ಣನ್ನು ಮದುವೆಯಾಗುವುದು. ಆದರೆ ಧರ್ಮಸೂತ್ರಗಳು ಮತ್ತು ಸ್ಮೃತಿಗಳು ಅನುಲೋಮಕ್ಕೆ ತದ್ವಿರುದ್ಧದ ಈ ವಿವಾಹವನ್ನು ಒಪ್ಪುವುದಿಲ್ಲ.

III. ವಿಲೋಮ ವಿವಾಹ:ಮೇಲ್ಜಾತಿಯ ಪುರುಷ ಚಂಡಾಲ ಜಾತಿಯ ಕನ್ಯೆಯನ್ನು ವಿವಾಹವಾಗುವುದು.

೭. ವೃತ್ತಿ ಆಧಾರಿತ ಜಾತಿ ಪದ್ಧತಿಯ ಉದಯ: ಉತ್ತರ ವೈದಿಕ ಕಾಲದಲ್ಲಿ ಋಗ್ವೇದದಲ್ಲಿದ್ದಂತೆ ವರ್ಣ ವ್ಯವಸ್ಥೆ ಮುಂದುವರಿಯಲಿಲ್ಲ. ಪೂರ್ವ ವೈದಿಕ ಕಾಲದ ಅಂತ್ಯದ ವೇಳೆಗೆ ವೃತ್ತಿ ಆಧರಿಸಿದ ಜಾತಿ ಪದ್ಧತಿ ರೂಪುಗೊಳ್ಳತೊಡಗಿತು. ಏಕೆಂದರೆ, ಈ ಕಾಲದಲ್ಲಿ ಹಿಂದೆ ಇದ್ದಂತೆ ವೃತ್ತಿ ಆಯ್ಕೆಯ ಸ್ವಾತಂತ್ರ್ಯ ಇರಲಿಲ್ಲ. ಅಂದರೆ ವ್ಯಕ್ತಿಯ ಜಾತಿಯನ್ನು ಅವನು ಜನಿಸುವ ವೃತ್ತಿ ಅನುಸರಿಸುತ್ತಿದ್ದ ಕುಟುಂಬದಿಂದಲೇ ಗುರುತಿಸುವ ಪರಿಪಾಠವು ಬೆಳೆಯಿತು. ಇದರಿಂದಾಗಿ ವೃತ್ತಿ ಆಧಾರಿತ ಜಾತಿ ಪದ್ಧತಿ ಆರಂಭವಾಯಿತು.

೮. ಬ್ರಾಹ್ಮಣ-ಕ್ಷತ್ರಿಯ ಪೈಪೋಟಿ: ಉತ್ತರ ವೈದಿಕ ಕಾಲದ ವೇಳೆಗೆ ರಾಜತ್ವವು ವಂಶಪಾರಂಪರ್ಯವಾದುದಲ್ಲದೇ ರಾಜನು ತನ್ನ ಶಕ್ತಿಯ ಸೂಚಕವಾಗಿ ಸಾಮ್ರಾಟ, ಏಕರಾಟ ಮತ್ತು ವಿರಾಟ ಎಂಬ ಸಾರ್ವಭೌಮ ಸೂಚಕ ಬಿರುದುಗಳನ್ನು ಧರಿಸತೊಡಗಿದನು. ಅಲ್ಲದೇ ರಾಜನ ಇಂತಹ ವರ್ತನೆಯಿಂದ ಸಭಾ-ಸಮಿತಿಗಳ ಪ್ರಭಾವವು ಕುಂಠಿತಗೊಂಡಿತು. ಆದರೆ ಪುರೋಹಿತರು ರಾಜನ ಆಸ್ಥಾನದಲ್ಲಿ ಅವನ ಒಳಿತಿಗಾಗಿ ಮತ್ತು ಪ್ರಜಾ ಕ್ಷೇಮಕ್ಕಾಗಿ ಯಜ್ಞ-ಯಾಗಾದಿಗಳನ್ನು ಮಾಡುವ ಸ್ಥಾನದಲ್ಲಿಯೇ ಮುಂದುವರಿದರು. ಇದರಿಂದಾಗಿ ಸಾರ್ವಭೌಮನಂತೆ ವರ್ತಿಸುತ್ತಿದ್ದ ರಾಜನು ತಾನು ಶ್ರೇಷ್ಠನೆಂದುಕೊಂಡರೆ ಅವನ ಶ್ರೇಷ್ಠತೆಗೆ ಮತ್ತು ಪ್ರಜಾಕ್ಷೇಮಕ್ಕೆ ತಾವು ಮಾಡುವ ಯಜ್ಞ-ಯಾಗಾದಿಗಳೇ ಕಾರಣವೆಂದು ಬ್ರಾಹ್ಮಣರು ಭಾವಿಸತೊಡಗಿ ತಮ್ಮ-ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸತೊಡಗಿದರು. ಇದರಿಂದಾಗಿ ಅವರಿಬ್ಬರ ನಡುವೆ ಸಂಘರ್ಷವು ಆರಂಭವಾಯಿತು.

೯. ಸಾಮಾಜಿಕ ಸ್ಥಿತಿ-ಗತಿಗಳು: ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಈ ಕಾಲದಲ್ಲಿ ಮುಂದುವರಿಯಿತು. ಅಲ್ಲದೇ ಜನರ ಆರ್ಥಿಕ ಜೀವನ, ವ್ಯಾಪಾರ ವಾಣಿಜ್ಯಗಳು ಪೂರ್ವ ವೈದಿಕ ಕಾಲದಲ್ಲಿದ್ದಂತೆಯೇ ಮುಂದುವರಿದವು.

  ನ್ಯಾಯಾಡಳಿತ ಮತ್ತು ಸೇನಾಡಳಿತ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಬದಲಾವಣೆಗಳೇನು ಕಂಡುಬರಲಿಲ್ಲ. ಅಂತೆಯೇ ಶಿಕ್ಷಣ, ಮನರಂಜನೆಯಂತಹ ವ್ಯವಸ್ಥೆಗಳೂ ಸಹ ಪೂರ್ವದಲ್ಲಿ ಇದ್ದಂತೆಯೇ ಮುಂದುವರಿದವು.

10. ಮಹಿಳೆಯರ ಸ್ಥಾನ-ಮಾನಗಳು: ಈ ಕಾಲದಲ್ಲಿ ಮಹಿಳೆಯರ ಸ್ಥಾನ-ಮಾನಗಳು ಇಳಿಮುಖವಾಗಿರುವುದನ್ನು ಗುರುತಿಸಲಾಗಿದೆ. ಅಂದರೆ ಅವರು ಶಿಕ್ಷಣದಿಂದ ದೂರ ಉಳಿಯಬೇಕಾಯಿತು. ಆದರೆ ಉನ್ನತ ವರ್ಗದ ಸ್ತ್ರೀಯರು ಶಿಕ್ಷಣ ಪಡೆಯಬಹುದಾಗಿತ್ತು. ಈ ಕಾಲಕ್ಕೆ ಮಹಿಳೆಯರು ವಿಧಾತ್‌ಗಳಂತಹ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವುದು ಕಡಿಮೆಯಾಯಿತು. ಬಹುಪತ್ನಿತ್ವ, ಬಾಲ್ಯವಿವಾಹ ಮತ್ತು ಸತಿ ಪದ್ಧತಿಗಳು ಕಾಣಿಸಿಕೊಳ್ಳತೊಡಗಿದವು.

11. ವೇದಸಾಹಿತ್ಯ: ವೈದಿಕ ಕಾಲದಲ್ಲಿ ವೇದಸಾಹಿತ್ಯವು ಪ್ರಮುಖ ಪಾತ್ರವಹಿಸಿದ್ದು, ಪೂರ್ವ ಮತ್ತು ಉತ್ತರ ವೈದಿಕ ಕಾಲಗಳೇರಡರಲ್ಲೂ ಈ ಸಾಹಿತ್ಯವೂ ರಚನೆಗೊಂಡಿರುವುದನ್ನು ಗಮನಿಸಬಹುದು. ವೈದಿಕ ಸಾಹಿತ್ಯವನ್ನು ಮುಖ್ಯವಾಗಿ  ಸ್ಮೃತಿ ಮತ್ತು ಶೃತಿ  ಸಾಹಿತ್ಯವೆಂದು ವಿಂಗಡಿಸಲಾಗಿದೆ. ಶೃತಿ ವಿಭಾಗದಲ್ಲಿ ವೇದಗಳು ಒಳಗೊಂಡಿದ್ದು, ಅವುಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳೆಂದು ವಿಂಗಡಿಸಲಾಗಿದೆ. ವೇದಗಳು ಸಾಮಾನ್ಯವಾಗಿ ಮಂತ್ರಗಳಿಂದ ಕೂಡಿರುವ ಸಂಹಿತೆಗಳನ್ನು ಒಳಗೊಂಡಿದೆ. ಈ ಸಂಹಿತೆಗಳು ಶ್ಲೋಕ ರೂಪದಲ್ಲಿರುವುದನ್ನು ಕಾಣಬಹುದು. ಇವುಗಳನ್ನು ಅಪೌರುಷಯಗಳೆಂದು ಕರೆಯುವರು. ಅಂದರೆ ಮಾನವರಿಂದ ರಚಿಸಲ್ಪಡದೆ ಅವರು ಧ್ಯಾನದಲ್ಲಿ ಮುಳುಗಿದ್ದಾಗ ದೇವತೆಗಳಿಂದ ಮಾನವರಿಗೆ ವಾಣಿಯ ರೂಪದಲ್ಲಿ ಕಿವಿಯಮೇಲೆ ಬಿದ್ದಂತಹ ದೇವರ ವಾಕ್ಯಗಳೆಂದು ನಂಬಲಾಗಿದೆ. ಆದ್ದರಿಂದಲೇ ಇವುಗಳನ್ನು” ಶೃತಿಗಳೆಂದು” ಕರೆಯುವರು. ನಂತರದ ಕಾಲದಲ್ಲಿ ವೇದಗಳನ್ನು ಆಧರಿಸಿ ಅರಣ್ಯಕಗಳು, ಬ್ರಾಹ್ಮಣಕಗಳು ಮತ್ತು ಉಪನಿಷತ್ತುಗಳು ರಚನೆಗೊಂಡವು. ಇವುಗಳನ್ನುವೇದಗಳ ಮೇಲಿನ ವ್ಯಾಖ್ಯಾನ/ಸರಳ ರೂಪದ ವಿವರಣೆಗಳೇಂದು ಅರ್ಥೈಸಲಾಗಿದೆ. ಉಪನಿಷತ್ತುಗಳನ್ನು ವೇದಾಂತಗಳೇಂದು ಕರೆಯಲಾಗಿದ್ದು, ವೈದಿಕ ಕಾಲದ ಅಂತ್ಯದಲ್ಲಿ ರಚನೆಗೊಂಡಿರುವ ಕಾರಣ ಅಥವಾ ವೇದಗಳ ಸಾರಾಂಶವನ್ನು ಒಳಗೋಂಡಿರುವ ಅಂತಿಮ ಸಾಹಿತ್ಯವೆಂತಲೂ ಅರ್ಥೈಸಲಾಗಿದೆ. ಮುಂದೆ ರಚನೆಗೊಂಡ ಸ್ಮೃತಿಗಳು ಸಹ ವೇದ ಸಾಹಿತ್ಯದ ಭಾಗವೇ ಆಗಿದ್ದು ಇವುಗಳು ಮಾನವರಿಂದ ಅಂದರೆ ವೇದ ಸಾಹಿತ್ಯದ ಆಳವಾದ ಜ್ಞಾನವನ್ನು ಹೊಂದಿದ ಋಷಿಮುನಿಗಳು ಮತ್ತು ಕೆಲವು ಗೃಹಸ್ಥರಿಂದಲೂ ರಚನೆಗೊಂಡಿವೆ. ಇವುಗಳನ್ನು ರಚಿಸುವಾಗ ವೈದಿಕ ಮಂತ್ರಗಳನ್ನು ಸ್ಮರಣೆಗೆ ತಂದುಕೊಂಡು ಅಂದರೆ ಸ್ಮೃತಿ ಪಠಲದಲ್ಲಿ ವೇದ ಮಂತ್ರಗಳನ್ನು ನೆನಪಿಸಿಕೊಂಡು ಅವುಗಳ ಆಧಾರದ ಮೇಲೆ ರಚಿಸಿರುವ ಕಾರಣ “ ಸ್ಮೃತಿಗಳು “ ಎಂದು ಕರೆಯಲಾಗಿದೆ.

******************************

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಭಾರತದ ಭೌಗೋಳಿಕ ಲಕ್ಷಣಗಳು.

ಸಾಹಿತ್ಯಾಧಾರಗಳು - Literary Sources