1857ಕ್ಕೆ ಮೊದಲು ಭಾರತದಲ್ಲಿ ನಡೆದ ಬ್ರಿಟಿಷ್ ವಿರೋಧಿ ಪ್ರತಿಭಟನೆಗಳು.
1857ಕ್ಕೆ ಮುನ್ನ
ಕರ್ನಾಟಕದಲ್ಲಿ ನಡೆದ ಬ್ರಿಟಿಷ್ ವಿರೋಧಿ
ದಂಗೆಗಳು
ಧೊಂಡಿಯ ವಾಘ
ಜನನ:
ಧೊಂಡಿಯ
ಚನ್ನಗಿರಿ
ಶಿವಮೊಗ್ಗ, (ಈಗ ದಾವಣಗೆರೆ
ಜಿಲ್ಲೆ
ಮರಣ:
೧೦ನೇ ಸೆಪ್ಟಂಬರ್ ೧೮೦೦
ಕೊತ್ನೆಕಲ್ಲು/ಕೊತ್ತನಕಲ್ಲು/ಕೊನೆಗಲ್ಲು, ಮಾನ್ವಿ ತಾಲೂಕು, ಈಗ
ರಾಯಚೂರು ಜಿಲ್ಲೆ
ರಾಷ್ಟ್ರೀಯತೆ:
ಕೆಳದಿ, ಮೈಸೂರು ಸಂಸ್ಥಾನ
ಪೀಠಿಕೆ:- ೧೮ನೆಯ ಶತಮಾನದ ಅಂತ್ಯದ
ವೇಳೆ ಆಗಿನ ಮೈಸೂರು ಪ್ರಾಂತ್ಯ
ಮತ್ತು ಸುತ್ತಮುತ್ತ ಒಬ್ಬ ಸೈನಿಕನಾಗಿ, ಅಶ್ವದಳದ
ನಾಯಕನಾಗಿ, ಕೆಲವು ಪ್ರದೇಶಗಳ ಒಡೆಯನಾಗಿ,
ಬ್ರಿಟೀಶರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ
ಹೋರಾಟ ಮಾಡಿದ ಒಬ್ಬ ಸಾಹಸಿ
ಧೊಂಡಿಯ ವಾಘ್. ಕೆಳದಿಯ ಸಂಸ್ಥಾನದಲ್ಲಿ
ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ.
ನಂತರ ಮೈಸೂರಿನ ಹೈದರಾಲಿ ಸೈನ್ಯದಲ್ಲಿ
ಸೈನಿಕನಾಗಿ ಸೇರಿದ. ಮೂರನೇ ಮೈಸೂರು
ಯುದ್ಧದ ನಂತರ ಮೈಸೂರು ಸೈನ್ಯವನ್ನು
ತೊರೆದು ಸ್ವತಂತ್ರವಾಗಿ ಸೈನ್ಯ ಕಟ್ಟಿ ಹರಿಹರ , ಸವಣೂರು ಮುಂತಾದ
ಊರುಗಳನ್ನು ಗೆದ್ದು ತನ್ನ ಪ್ರಭಾವವನ್ನು
ವಿಸ್ತರಿಸಲು ಪ್ರಯತ್ನಿಸಿದ. ಮರಾಠಾರೊಂದಿಗೆ ಸೋತ ಕಾರಣ ಮತ್ತೆ
ಟಿಪ್ಪುವನ್ನು ಆಶ್ರಯಿಸಲು ನಿಶ್ಚಯಿಸಿದ. ಮತಾಂತರ
ಹೊಂದಲು ಹೇಳಿ ಮಲಿಕ ಜಹಾನ್
ಖಾನ ಎಂದು ಹೆಸರಿಸಿದರು.
ಆದರೆ ಮತಾಂತರ ಹೊಂದದ ಕಾರಣದಿಂದ
ಟಿಪ್ಪು ಈತನನ್ನು ೫ ವರ್ಷಗಳ
ಕಾಲ ಬಂಧನದಲ್ಲಿ ಇರಿಸಿದ.
ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು
ಸೋತ ನಂತರ ಧೊಂಡಿಯ
ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಮತ್ತೆ ತನ್ನ ಪ್ರಭುತ್ವವನ್ನು
ಸ್ಥಾಪಿಸಲು ಪ್ರಯತ್ನಿಸಿ ಉಭಯಲೋಕಾಧೀಶ್ವರ ಎನ್ನಿಸಿಕೊಂಡ. ಕಡೆಯಲ್ಲಿ ಬ್ರಿಟೀಷರೊಡನೆ ಹೋರಾಡುತ್ತಾ
೧೮೦೦ರಲ್ಲಿ ಮರಣ ಹೊಂದಿದ.
ಪ್ರಾರಂಭದ
ದಿನಗಳು:- ಧೊಂಡಿಯ ಚೆನ್ನಗಿರಿಯಲ್ಲಿ ೧೮ನೇ
ಶತಮಾನದ ಉತ್ತರ ಭಾಗದಲ್ಲಿ ಹುಟ್ಟಿದ.
ಮರಾಠಿ ಪವಾರ್ ಪಂಗಡದ ಒಂದು
ಸಾಮಾನ್ಯ ಪರಿವಾರದಲ್ಲಿ ಇವರ ಜನನವಾಯಿತು. ಆ
ಕಾಲಖಂಡದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಆಡಳಿತಕ್ಕೊಳಪಟ್ಟಿತ್ತು.
ಬಾಲ್ಯದಲ್ಲಿ ಧೊಂಡಿಯ ಕೆಳದಿಯ ಚೆನ್ನಮ್ಮನ ಕಥೆಗಳನ್ನು
ಕೇಳುತ್ತಾ ಬೆಳೆದನು. ಗುರು ಸಿದ್ದಪ್ಪ
ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ
ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ
ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಂಡಿದ್ದ. ಎತ್ತರದ
ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ
ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ
ಸೇರಲು ಊರಿನ ಜನ ಹುರಿದುಂಬಿಸಿದರು.
ಧೊಂಡಿಯ
ಕೆಳದಿಯ ಸಂಸ್ಥಾನದ ಭಾಗವಾಗಿದ್ದ ಶಿಕಾರಿಪುರದಲ್ಲಿ
ಒಬ್ಬ ಕರಣಿಕರಿಗೆ ಸಹಾಯಕನಾಗಿ ವೃತ್ತಿ
ಆರಂಭಿಸಿದ. ಈ ನಡುವೆ
ಹೈದರಾಲಿ ಚಿತ್ರದುರ್ಗದ ರಾಜನಾದ ವೀರ ಮದಕರಿ
ನಾಯಕರನ್ನು ಸೋಲಿಸಿದನು. ನಂತರ ಅವನ ದೃಷ್ಟಿ
ಕೆಳದಿಯ ಮೇಲೆ ಬಿತ್ತು. ಅವನು
ಆ ಸಂಸ್ಥಾನದಲ್ಲಿ ನಡೆಯುತ್ತಿದ್ದ ಒಳ ರಾಜಕೀಯ
ಮೇಲಾಟಗಳ ಪ್ರಯೋಜನ ಪಡೆಯಲು ಹವಣಿಸುತ್ತಿದ್ದ.
ಕೆಲ ಸಮಯದ ನಂತರ
ಹೈದರಾಲಿ ಕೆಳದಿ ಸಂಸ್ಥಾನದ ರಾಜಧಾನಿಯಾದ
ಬಿದನೂರಿನ ಮೇಲೆ ದಾಳಿ ಮಾಡಿದ.
ರಾಣಿ ವೀರಮ್ಮಾಜಿ ವೀರಾವೇಶದಿಂದ ಹೋರಾಡಿದರು.
ಆದರೆ ಅಲ್ಲಿ ನಡೆದ ಒಳಸಂಚಿನ
ಕಾರಣ ಸೋತರು.
ಧೊಂಡಿಯ
ಹೈದರಾಲಿಯ ಸೈನ್ಯವನ್ನು ಸೇರಿದ. ಅಲ್ಲಿ ವಿಷ್ಣುಪಂಡಿತ
ಎಂಬ ಅಶ್ವದಳಪತಿ ಕೆಳಗೆ
ಕೆಲಸ ಪ್ರಾರಂಭಿಸಿದ. ತನ್ನ ಒಡನಾಡಿಗಳೊಡನೆ ಒಳ್ಳೆಯ
ಸಂಬಂಧ ಬೆಳೆಸಿಕೊಂಡ. ಸತತ ಪರಿಶ್ರಮದ ಕಾರಣದಿಂದ
ಕೆಲವೇ ಸಮಯದಲ್ಲಿ ಅವನು ಅಶ್ವದಳದ
ನಾಯಕ ಶಿಲ್ಲೆದಾರ್ ಪದವಿಗೆ ಏರಿದ.
ಮೂರನೆಯ
ಮೈಸೂರು ಯುದ್ಧ ಮತ್ತು ತದನಂತರ:- ಮೂರನೇ ಮೈಸೂರು ಯುದ್ಧದಲ್ಲಿ
(೧೭೯೨) ಟಿಪ್ಪು ತಲ್ಲೀನನಾಗಿದ್ದ. ಈ
ಸಮಯವನ್ನು ಉಪಯೋಗಿಸಿಕೊಂಡು ಧೊಂಡಿಯ ಟಿಪ್ಪುವಿನ ಸೈನ್ಯ
ತೊರೆದು ಹೋಗಲು ನಿಶ್ಚಯಿಸಿ, ಯೋಜನೆ
ಮಾಡಿ ಸಫಲನಾದ. ತನ್ನೊಂದಿಗೆ ಇನ್ನು
ಕೆಲವು ಸಹಚರರನ್ನು ಸೇರಿಸಿಕೊಂಡು ಈಗಿನ
ಗದಗದಲ್ಲಿರುವ ಲಕ್ಷ್ಮೇಶ್ವರ ವನ್ನು ಸೇರಿದ. ಅಲ್ಲಿನ ದೇಸಾಯಿಯನ್ನು (ಕಂದಾಯ ವಸೂಲಿ ಮಾಡುವ
ಅಧಿಕಾರಿ) ಟಿಪ್ಪುವಿಗೆ ಕಪ್ಪ ಕಾಣಿಕೆ ಕೊಡುವ
ಬದಲು ತನಗೆ ಕೊಡಬೇಕು ಎಂದು ಒತ್ತಾಯಿಸಿದ. ತಾನು ಅವನ
ಸಹಾಯಕ್ಕೆ ಇರುವುದಾಗಿ ಭರವಸೆನೀಡಿದ. ಬ್ರಿಟೀಶರೊಂದಿಗೆ
ಯುದ್ಧದಲ್ಲಿ (೧೭೯೨) ಟಿಪ್ಪುವಿಗೆ ಸೋಲಾಯಿತು.
ಆಗ ಆಂಗ್ಲರ ಬಳಿ ತನ್ನ ಇಬ್ಬರು
ಮಕ್ಕಳನ್ನು ಒತ್ತೆಯಾಗಿ ಇಡುವ ಪರಿಸ್ಥಿತಿ
ಬಂದಿತು. ಧೊಂಡಿಯ ಟಿಪ್ಪುವಿನ ಸಧ್ಯದ
ದೌರ್ಬಲ್ಯದ ಲಾಭ ಪಡೆದು ಮೈಸೂರು
ಮತ್ತು ಮರಾಠರ ಗಡಿ ಭಾಗದಲ್ಲಿ
ಒಂದೊಂದಾಗಿ ಪ್ರದೇಶಗಳನ್ನು ಗೆಲ್ಲುತ್ತಾ ಹೋದ. ಧಾರವಾಡ ಸೀಮೆಯ
ಪ್ರದೇಶದಲ್ಲಿ ಕಪ್ಪ ಕಾಣಿಕೆ ಪಡೆಯುತ್ತಾ
ಹೋದ. ೧೭೯೩ ಜನವರಿಯಲ್ಲಿ ಹಾವೇರಿ
ಮತ್ತು ಸವಣೂರನ್ನು ಗೆದ್ದು ತನ್ನ
ರಾಜ್ಯವನ್ನು ವಿಸ್ತರಿಸಿದ. ಅಲ್ಲದೇ ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಟಿಪ್ಪು
ಮರಾಠರಿಗೆ ಬಿಟ್ಟುಕೊಟ್ಟ ಊರುಗಳನ್ನು ಗೆಲ್ಲುತ್ತಾ ಹೋದ.
ಇದರ ಪ್ರಭಾವ ಶಿವಮೊಗ್ಗ,
ಬಿದನೂರು, ಶಿಕಾರಿಪುರ ಮುಂತಾದ ಪ್ರದೇಶಗಳ
ಮೇಲೂ ಆಯಿತು.
ಧೊಂಡಿಯನ
ಬೆಳೆಯುತ್ತಿರುವ ಇಂತಹ ಪ್ರಭಾವದಿಂದ ಮರಾಠರು ಚಿಂತಾಕ್ರಾಂತರಾದರು. ಅವನ
ಪ್ರಭಾವವನ್ನು ಮೊಳಕೆಯಲ್ಲಿ ಚಿವುಟಿ ಮತ್ತು ಅವನನ್ನು
ಮರಾಠರ ಸೀಮೆಯಿಂದ ಹೊರದೂಡಲು, ಮರಾಠರ
ದಂಡನಾಯಕ ಪರಶುರಾಮ ಭಾವು ೧೭೯೪ರಲ್ಲಿ,
ಮರಾಠಾ ಸೈನ್ಯವನ್ನು ದೊಂಡೋಪಂತ್ ಗೋಖಲೆ ನೇತೃತ್ವದಲ್ಲಿ
ಕಳಿಸಿದ. ದೊಂಡೋಪಂತ್ ಗೋಖಲೆ ತನ್ನ
ಸೈನ್ಯದೊಂದಿಗೆ ಸವಣೂರಿನ ಕೋಟೆಗೆ ಮುತ್ತಿಗೆ
ಹಾಕಿದ. ಧೊಂಡಿಯ ಅವನೊಡನೆ ಸ್ನೇಹ
ಬಯಸಿದ. ಆದರೆ ದೊಂಡೋಪಂತ್ ಒಪ್ಪಲಿಲ್ಲ.
ಹಲವು ದಿನಗಳ ಕದನದ ನಂತರ
ಧೊಂಡಿಯ ಅಲ್ಲಿಂದ ಕದಲಬೇಕಾಯಿತು. ಧೊಂಡಿಯ
ಆಗ ಎಂದಾದರೊಂದು ದಿನ
ದೊಂಡೋಪಂತ್ ಗೋಖಲೆಯನ್ನು ಕೊಂದು ಅವನ ರಕ್ತದಲ್ಲಿ
ತನ್ನ ಮೀಸೆಯನ್ನು ತೋಯ್ದುಕೊಳ್ಳುವೆನೆಂದು ಶಪಥ
ಮಾಡಿದ.
ಧೊಂಡಿಯ
ಅಲ್ಲಿಂದ ಟಿಪ್ಪುವಿನ ಸಹಾಯ ಕೇಳಲು
ಶ್ರೀರಂಗಪಟ್ಟಣಕ್ಕೆ ತೆರಳಿದ. ಅವನ ಸಹಾಯ
ಪಡೆಯಲು ಪ್ರಯತ್ನಿಸಿದ. ಆದರೆ ಇದು ಕೈಗೂಡದೆ
ಟಿಪ್ಪುವಿನ ಸೈನ್ಯವನ್ನು ಮತ್ತೆ ಸೇರುವ ಪ್ರಸ್ತಾಪ
ಬಂದಿತು. ಟಿಪ್ಪು ಅವನಿಗೆ ಇಸ್ಲಾಮಿಗೆ
ಮತಾಂತರ ಹೊಂದಲು ಆಮಿಷ ಒಡ್ಡಿದ.
ಆದರೆ ಈ ವಿಷಯವಾಗಿ ಟಿಪ್ಪುವಿನೊಡನೆ ವೈಮನಸ್ಯದ ಕಾರಣ ಅವನನ್ನು
ಬಂದೀಖಾನೆಗೆ ಹಾಕಲಾಯಿತು. ಅವನು ಸೆರೆಮನೆಯಲ್ಲಿಯೇ ಸುಮಾರು
೫ ವರ್ಷಗಳ ಕಾಲ,
ಬ್ರಿಟೀಶರ ವಿರುದ್ಧ ೧೭೯೯ರಲ್ಲಿ ನಾಲ್ಕನೆಯ
ಮೈಸೂರು ಯುದ್ಧ ಟಿಪ್ಪು ಸೋಲುವವರೆಗೂ,
ಶಿಕ್ಷೆ ಅನುಭವಿಸುತ್ತಿದ್ದ.
ನಾಲ್ಕನೆಯ
ಮೈಸೂರು ಯುದ್ಧದ ನಂತರ:- ನಾಲ್ಕನೆಯ ಮೈಸೂರು ಯುದ್ಧದಲ್ಲಿ
(೧೭೯೯) ಟಿಪ್ಪು ಬ್ರಿಟೀಶರ ವಿರುದ್ಧ
ಸೋಲುವುದರ ಜೊತೆಗೆ ಟಿಪ್ಪುವಿನ ಸಾವಾಯಿತು
ಜೊತೆಗೆ ಅವನ ಸೈನ್ಯ ಛಿದ್ರಛಿದ್ರವಾಯಿತು.
ಧೊಂಡಿಯ ಅಲ್ಲಿಯವರೆಗೂ ಶ್ರೀರಂಗಪಟ್ಟಣದಲ್ಲಿ ಐದು ವರ್ಷಗಳಿಂದ ಬಂಧನದಲ್ಲಿದ್ದರೂ
ತಪ್ಪಿಸಿಕೊಳ್ಳಲು ಸಮಯ ಕಾಯುತ್ತಿದ್ದ. ತನ್ನ
ಮತ್ತು ತನ್ನ ಸಹಚರರ ಮನ:ಶಕ್ತಿಯನ್ನು ಯಾವಾಗಲೂ ಮೇಲ್ಮಟ್ಟದಲ್ಲಿರುವ ಹಾಗೆ
ನೋಡಿಕೊಳ್ಳುತ್ತಿದ್ದ. ಟಿಪ್ಪುವಿನ ಸಾವಿನಿಂದ ಸಿಕ್ಕ
ಅವಕಾಶ ಉಪಯೋಗಿಸಿ ಹಲವು ಸಹಚರರೊಡನೆ
ತಪ್ಪಿಸಿಕೊಂಡು ಹೋದನು.
ಉಭಯಲೋಕಾಧೀಶ್ವರ:-
ಚೆನ್ನಗಿರಿಗೆ ಹಿಂದಿರುಗಿದ ಅವನು ಸೈನಿಕರನ್ನು ಒಟ್ಟುಗೂಡಿಸಿ ಹುರಿದುಂಬಿಸಿ ಒಂದೊಂದಾಗಿ ಕೋಟೆಗಳನ್ನು ಗೆಲ್ಲಲು
ಪ್ರಾರಂಭಿಸಿದ. ಶಿವಮೊಗ್ಗ, ಬಿದನೂರು, ಶಿಕಾರಿಪುರ,
ತರೀಕೆರೆ, ಚಿತ್ರದುರ್ಗ, ಹರಪನಹಳ್ಳಿ, ರಾಣೇಬೆನ್ನೂರು, ಸವಣೂರು ಮುಂತಾದ ಕೋಟೆಗಳೆಲ್ಲಾ
ಅವನ ವಶವಾದವು. ಬ್ರಿಟೀಶರು
ಇವನನ್ನು ಮಟ್ಟ ಹಾಕಲು ಶಿಕಾರಿಪುರದ
ಕೋಟೆಗೆ ಮುತ್ತಿಗೆ ಹಾಕಿದರು. ಅಲ್ಲಿಂದ
ತಪ್ಪಿಸಿಕೊಂಡ ಧೊಂಡಿಯನನ್ನು ಸ್ಟೀವನ್ಸಂನ್ ಮತ್ತು ಡಾಲ್ರಿಂಪಲ್ ಹಿಂಬಾಲಿಸಿ
ಹಿಡಿಯಲು ಹೋದಾಗ ಅವನು ನದಿಗೆ
ಹಾರಿ ತಪ್ಪಿಸಿಕೊಂಡ. ನಂತರ ಶಿಕಾರಿಪುರದ ಕಾಡಿನಲ್ಲಿ
ತಪ್ಪಿಸಿಕೊಂಡ. ಅಲ್ಲಿಯ ಬಂಜಾರರು ಅವನ
ಶೂಶ್ರೂಷೆ ಮಾಡಿದರು. ತನ್ನನ್ನು ಉಳಿಸಿದ್ದು
ಶಿಕಾರಿಪುರದ ಆರಾಧ್ಯದೈವವಾದ ಹುಚ್ಚುರಾಯ ಸ್ವಾಮಿ ಎಂದು
ಅಲ್ಲಿಗೆ ಹೋಗಿ ದರ್ಶನ ಪಡೆದು
ತನ್ನ ಕತ್ತಿಯನ್ನು ಸ್ವಾಮಿಗೆ ಅರ್ಪಿಸಿದ. ಇಂದಿಗೂ
ಕೂಡ ಶಿಕಾರಿಪುರದ ವಿಜಯದಶಮಿಯ
ದಿನ ಊರಿನ ಆರಾಧ್ಯ
ದೈವ ಹುಚ್ಚುರಾಯ ಸ್ವಾಮಿಯನ್ನು
ಒಳಗೊಂಡು ಹಲವು ಉತ್ಸವ ಮೂರ್ತಿಗಳ
ಮೆರವಣಿಗೆ ನಡೆಯುತ್ತದೆ. ಆ ದಿನ
ತಾಲೂಕಿನ ತಹಸೀಲ್ದಾರರು ಹುಚ್ಚುರಾಯ ಸ್ವಾಮಿಗೆ ಧೊಂಡಿಯ
ಅರ್ಪಿಸಿದ್ದ ಕತ್ತಿಯಲ್ಲಿ ದುಷ್ಟ ಸಂಹಾರದ ಸಂಕೇತವಾಗಿ
ಬಾಳೆಯ ಕಂದನ್ನು ಕಡಿಯುತ್ತಾರೆ.
ಈ
ಮಧ್ಯೆ ಅವನು ತನ್ನನ್ನು ಉಭಯಲೋಕಾಧೀಶ್ವರನೆಂದು
ಘೋಷಿಸಿಕೊಂಡ. ಒಂದು ಸಮಯದಲ್ಲಿ ಅವನ
ಸೈನ್ಯದಲ್ಲಿ ೮೦,೦೦೦
ಕಾಲಾಳುಗಳು ಮತ್ತು ೯೦,೦೦೦
ಅಶ್ವಾರೋಹಿಗಳಿದ್ದರು. ಕೆಲವೇ ಸಮಯದಲ್ಲಿ ಅವನು
ಬೇರೆ ಬೇರೆ ಪಾಳೆಯಗಾರರನ್ನು ತನ್ನೊಂದಿಗೆ
ಸೇರಿಸಿಕೊಂಡಿದ್ದ. ಅವನಿಂದ ಸ್ಪೂರ್ತಿ ಪಡೆದ
ದಕ್ಷಿಣ ಭಾರತದ ಹಲವು ಸಣ್ಣ
ಪಾಳೆಯಗಾರರು ಅವನ ರೀತಿಯಲ್ಲೆ ಬ್ರಿಟೀಶರ
ವಿರುದ್ಧ ಹೋರಾಡಲು ಶುರು ಮಾಡಿದರು.
ವೆಲ್ಲೆಸ್ಲಿಯ
ದಂಡಯಾತ್ರೆ:- ಧೊಂಡಿಯನ ಶಕ್ತಿಯಿಂದ ಬ್ರಿಟೀಷ್
ಪ್ರಭುತ್ವ ಚಿಂತಿತವಾಯಿತು. ಹೀಗೇ ಬಿಟ್ಟರೆ ಮುಂದೆ
ಅವನ ಪ್ರಭಾವದಿಂದ ಇತರ
ಪಾಳೆಯಗಾರರು, ಸಣ್ಣ ತುಂಡರಸರು ಅವನನ್ನು
ಅನುಕರಿಸಬಹುದು ಮತ್ತು ಇದರಿಂದ ಮೈಸೂರು
ಸಂಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ
ಶಾಂತಿ ಕದಡಬಹುದು ಎಂಬ ಅಂಜಿಕೆ
ಅವರಿಗಿತ್ತು. ಈ ವಿಚಾರವನ್ನು ವಿಷದವಾಗಿ ಆಗ ತಾನೆ
ಮೈಸೂರಿನ ಬ್ರಿಟಿಷ್ ಗವರ್ನರ್ ಆಗಿ
ಅಧಿಕಾರ ಸ್ವೀಕರಿಸಿದ್ದ ಅರ್ಥರ್ ವೆಲ್ಲೆಸ್ಲಿ ತನ್ನ
ಗವರ್ನರ್ ಜೆನರಲ್ ಮಾರ್ಕಸ್ ವೆಲ್ಲೆಸ್ಲಿಗೆ
ಮೇ ೨೬, ೧೮೦೦
ರಂದು ತಿಳಿಸಿದ.
ದೊಂಡೋಪಂತ್
ಗೋಖಲೆಯ ಅಂತ್ಯ:- ಜೂನ್ ೧೮೦೦ರಲ್ಲಿ ಅರ್ಥರ್
ವೆಲ್ಲೆಸ್ಲಿ ತನ್ನ ೩ ಅಶ್ವಾರೋಹಿ
ದಳ ಮತ್ತು ೨
ಕಾಲ್ದಳಗಳ ಜೊತೆಗೆ ಚಿತ್ರದುರ್ಗದ ಸೈನಿಕರನ್ನು
ಒಟ್ಟುಗೂಡಿಸಿ ಧೊಂಡಿಯನನ್ನು ಹಿಡಿಯಲು ಹೋದ. ಇದನ್ನು
ಅರಿತ ಧೊಂಡಿಯ ತನ್ನ ಸೈನ್ಯದ
ಜೊತೆಗೆ ಮರಾಠಾ ಪ್ರದೇಶದಲ್ಲಿ ಹೋಗಿ
ರಕ್ಷಣೆ ಪಡೆದ. ವೆಲ್ಲೆಸ್ಲಿ ಪೇಶ್ವಾ
ಎರಡನೆ ಬಾಜಿರಾವ್ ಅನುಮತಿ ಪಡೆದು ಧೊಂಡಿಯನನ್ನು
ಹಿಡಿಯಲು ಹೊರಟ. ಜೂನ್ ೧6ರಂದು
ಅವನು ಹರಿಹರ ತಲುಪಿದ. ಧೊಂಡಿಯ
ಹುಬ್ಬಳ್ಳಿ ಸೀಮೆಯನ್ನು ಜೂನ್ ೧೯ಕ್ಕೆ
ತಲುಪಿದ. ವೆಲ್ಲೆಸ್ಲಿ ಈ ಅವಕಾಶವನ್ನು
ಉಪಯೋಗಿಸಿ ಅವನು ಗೆದ್ದಿದ್ದ ಕೋಟೆಗಳನ್ನು
ಒಂದೊಂದಾಗಿ ಗೆಲ್ಲಲು ಪ್ರಾರಂಭಿಸಿದ. ರಾಣಿಬೆನ್ನೂರು
ಮತ್ತು ಬಿದನೂರು ಕೋಟೆಗಳನ್ನು ಗೆದ್ದರೂ
ಧೊಂಡಿಯ ತಪ್ಪಿಸಿಕೊಂಡಿದ್ದ.
ಪೇಶ್ವೆಗೂ
ಈಗ ಧೊಂಡಿಯನನ್ನು ಸೋಲಿಸುವ
ಅವಶ್ಯಕತೆಯಿತ್ತು. ಆ ಕಾರಣಕ್ಕೆ
ಚಿಂತಾಮಣಿರಾವ್ ಪಟ್ವರ್ಧನ್ನ ನೇತೃತ್ವದಲ್ಲಿ
ಒಂದು ದೊಡ್ಡ ಸೈನ್ಯವನ್ನು ಕಳಿಸಿದ.
ಅದರಲ್ಲಿ ಹಿಂದೆ ಧೊಂಡಿಯನನ್ನು ಸೋಲಿಸಿದ್ದ
ದೊಂಡೋಪಂತ್ ಗೋಖಲೆ ಮತ್ತು ದೊಂಡೋಪಂತ್ನ ಸಹೋದರನ
ಮಕ್ಕಳು ಅಪ್ಪಾಜಿ ಗಣೇಶ ಮತ್ತು
ಬಾಪುಜಿ ಗಣೇಶ ಎಂಬಿಬ್ಬರು ಇದ್ದರು.
ಕಿತ್ತೂರಿನ ಬಳಿ ಭೀಕರ ಕದನವೇರ್ಪಟ್ಟಿತು.
ಧೊಂಡಿಯ, ದೊಂಡೋಪಂತ್ನ ಕೈಯಲ್ಲಿ
ಆದಂತಹ ತನ್ನ ಹಿಂದಿನ ಸೋಲು
ಮತ್ತು ಅಪಮಾನಗಳನ್ನು ಮರೆತಿರಲಿಲ್ಲ. ಧೊಂಡಿಯ ತನ್ನ ಸಹಚರರೊಡನೆ
ಯೋಜಿಸಿ, ಹೊಂಚುಹಾಕಿ ದೊಂಡೋಪಂತ್ ಗೋಖಲೆಯನ್ನು
ಯುದ್ಧದಲ್ಲಿ ಕೊಂದು ಅವನ ರಕ್ತದಲ್ಲಿ
ತನ್ನ ಮೀಸೆಯನ್ನು ತೋಯ್ದು ತಾನು
ವರ್ಷಗಳ ಹಿಂದೆ ಮಾಡಿದ್ದ ಶಪಥವನ್ನು
ಪೂರ್ಣಗೊಳಿಸಿದ. ಈ ಯುದ್ಧದಲ್ಲಿ
ಅಪ್ಪಾಜಿ ಗಣೇಶನ ಅಂತ್ಯವೂ ಆಯಿತು.
ಚಿಂತಾಮಣಿರಾವ್ ಪಟ್ವರ್ಧನ್, ಧೊಂಡಿಯನ ವಿರುದ್ಧ ವೀರಾವೇಶದಿಂದ
ಹೋರಾಡಿ ಬಾಪುಜಿ ಗಣೇಶನೊಂದಿಗೆ ತಪ್ಪಿಸಿಕೊಂಡು
ಹಳಿಯಾಳ ಕೋಟೆ ತಲುಪಿದ.
ಧೊಂಡಿಯನ
ಅವಸಾನ:- ಬ್ರಿಟೀಶರು ಧೊಂಡಿಯನನ್ನು ಹಿಡಿಯುವ
ಪ್ರಯತ್ನವನ್ನು ಮುಂದುವರೆಸಿದರು. ಈ ಮಧ್ಯೆ
ಧೊಂಡಿಯನ ಹೆಸರು ಇನ್ನೂ ಬೆಳೆಯುತ್ತಲಿತ್ತು.
ಹಲವು ಕಡೆಗಳಲ್ಲಿ ಧೊಂಡಿಯನ ಸೈನ್ಯಕ್ಕೆ
ಯುವಕರನ್ನು ಸೇರಿಸಲು ಕೆಲ ಯುವಕರು
ಸ್ವಯಂಪ್ರೇರಿತರಾಗಿ ಕಾರ್ಯಮಾಡುತ್ತಿದ್ದರು. ಹೀಗೆ ಪ್ರೇರೇಪಿಸುವಾಗ ಸಿಕ್ಕಿ
ಹಾಕಿಕೊಂಡ ಯುವಕನೊಬ್ಬನನ್ನು ಬ್ರಿಟೀಶರು ಗಲ್ಲಿಗೆ ಹಾಕಿದರು.
ಜುಲೈ ೧೨ ರಂದು ಸವಣೂರು ಗೆದ್ದರು. ಧೊಂಡಿಯ ಇವರಿಂದ
ತಪ್ಪಿಸಿಕೊಂಡು ಕಿತ್ತೂರು, ಕುಂದಗೋಳ, ಅಣ್ಣಿಗೇರಿ,
ಕಣವಿ, ಖಾನಾಪುರ, ಬಾದಾಮಿಗಳೆಲ್ಲಾ ಸುತ್ತಾಡಿದ.
ಅವನ ತಲೆಯ ಮೇಲೆ
೩೦,೦೦೦ ರೂ
ಬಹುಮಾನ ಘೋಷಿಸಲಾಯಿತು. ಬ್ರಿಟೀಶರು ಪಟ್ವರ್ಧನ್ನ
ಜೊತೆಗೂಡಿ ದಂಬಳ ಕೋಟೆಯನ್ನು ಗೆದ್ದರು.
ಈ ಸಮಯದಲ್ಲಿ ಧೊಂಡಿಯನನ್ನು
ಅವನ ಹಲವಾರು ಸಿಪಾಯಿಗಳು
ತ್ಯಜಿಸಿದರು. ಧೊಂಡಿಯ ಕೋಲ್ಹಾಪುರ ರಾಜನಾದ
ಮೂರನೆಯ ಶಿವಾಜಿ ಸಹಾಯ ಪಡೆಯಬಹುದು
ಎಂದು ವೆಲ್ಲೆಸ್ಲಿಗೆ ತಿಳಿಯಿತು. ಅವನು ಕೋಲ್ಹಾಪುರದ
ರಾಜನಿಗೆ ಧೊಂಡಿಯನಿಗೆ ಯಾವ ಸಹಾಯ ಮಾಡಬಾರದೆಂದು
ಮತ್ತು ಮಾಡಿದರೆ ಬ್ರಿಟೀಷ್, ಮರಾಠ
ಮತ್ತು ನಿಜಾಮನ ಸೈನ್ಯ ಅವನ
ಮೇಲೆ ತಿರುಗುವುದೆಂದು ವಕೀಲರ ಮೂಲಕ ಹೇಳಿಕಳಿಸಿದನು.
ಆಗ
ಧೊಂಡಿಯ ಮಲಪ್ರಭಾ ನದಿ ದಾಟಿ,
ನಿಜಾಮನ ರಾಜ್ಯಕ್ಕೆ ಹೋಗಲು ಯತ್ನಿಸಿದ.
ಆದರೆ ವೆಲ್ಲೆಸ್ಲಿ, ಸ್ಟೀವೆನ್ಸಂನ್, ಪಟ್ವರ್ಧನ್ ಮತ್ತು ನಿಜಾಮನ ಸೈನ್ಯಗಳು
ಎಲ್ಲಾ ಕಡೆಗಳಿಂದ ಅವನನ್ನು ಸುತ್ತುವರೆದಿದ್ದವು.
ಭೀಕರ ಕದನದಲ್ಲಿ ಧೊಂಡಿಯನ ೫,೦೦೦ದಷ್ಡು ಸಂಖ್ಯೆಯ ಅಶ್ವದಳ
ನಾಶವಾಯಿತು. ೧೦ನೇ ಸೆಪ್ಟೆಂಬರ್ ಕೊಣಗಲ್ನಲ್ಲಿ (ಈಗಿನ ರಾಯಚೂರು
ಜಿಲ್ಲೆಯಲ್ಲಿದೆ) ನಡೆದ ಈ ಕದನದಲ್ಲಿ
ವೀರೋಚಿತ ಹೋರಾಟ ನೀಡಿದ ಧೊಂಡಿಯ,
ಬ್ರಿಟೀಶರ ವಿರುದ್ಧ ಕಡೆಯವರೆಗೂ ಹೋರಾಡುತ್ತಲೆ
ಮಡಿದ.
ವೆಲ್ಲೆಸ್ಲಿ
ತನ್ನ ಕಂಪನಿಯ ಹಲವರಿಗೆ ಕಳಿಸಿದ
ಪತ್ರಗಳಲ್ಲಿ ಹಲವು ಬಾರಿ ಧೊಂಡಿಯನ
ಬಗ್ಗೆ ಪ್ರಸ್ತಾಪಿಸಿದ್ದಾನೆ. ಅಲ್ಲದೇ ಧೊಂಡಿಯನಿಗೆ ಕೆಲವರಿಂದ ಸಹಾಯ ದೊರೆತ
ಬಗ್ಗೆ ಚರ್ಚಿಸಿದ್ದಾನೆ. ಸರ್ ಥಾಮಸ್ ಮನ್ರೋರ
ಪ್ರಕಾರ ವೆಲ್ಲೆಸ್ಲಿ ಧೊಂಡಿಯನನ್ನು ಮಣಿಸದೇ ಇದ್ದಿದ್ದರೆ, ಅವನು
ಒಬ್ಬ ಸ್ವತಂತ್ರ ರಾಜನಾಗಿ, ಒಂದು
ಹೊಸ ನಿರಂಕುಶ ರಾಜವಂಶಕ್ಕೆ
ನಾಂದಿ ಹಾಡುತ್ತಿದ್ದ. ಪಟ್ವರ್ಧನ್ನ ಸಹಾಯ
ದೊರೆಯದೇ ಇದ್ದಿದ್ದರೆ ಇಷ್ಟು ಬೇಗ ಅವನನ್ನು
ಗೆಲ್ಲಲೂ ಆಗುತ್ತಿರಲಿಲ್ಲ
ಎಂದು ವೆಲ್ಲೆಸ್ಲಿ ಕೂಡ ಒಪ್ಪಿದ್ದಾನೆ.
ಯಾಪಲಪರ್ವಿ ಗ್ರಾಮದಲ್ಲಿ ಧೊಂಡಿಯನ
ಸಮಾಧಿಯಿದೆ.
******************************
ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು
ರಾಣಿ ಚೆನ್ನಮ್ಮ ಕಿತ್ತೂರಿನ
ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ.
ತನ್ನ ಪುಟ್ಟ ರಾಜ್ಯದ ಸ್ವಾತಂತ್ರ
ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ
ವಿರುದ್ಧ ಹೋರಾಡಿದ್ದಳು.
ಜನನ:-
೨೩ ಅಕ್ಟೋಬರ್ ೧೭೭೮,
ಕಾಕತಿ, ಬೆಳಗಾವಿ
ಮರಣ:-
2 ಫೆಬ್ರವರಿ 1829 (50ನೆ ವಯಸ್ಸಿನಲ್ಲಿ), ಬೈಲಹೊಂಗಲ, ಬೆಳಗಾವಿ
ಬಾಲ್ಯ
ಜೀವನ ಮತ್ತು ವಿವಾಹ:- ಕಿತ್ತೂರು ಚೆನ್ನಮ್ಮ ಹುಟ್ಟಿದ್ದು
23 ಅಕ್ಟೋಬರ್ ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬
ಕಿ.ಮಿ. ದೂರದಲ್ಲಿರುವ
ಕಾಕತಿ ಅವಳ ಹುಟ್ಟೂರು. ತಂದೆ
ಕಾಕತಿಯ ದೇಸಾಯಿ ಧೂಳಪ್ಪಗೌಡರು. ತಾಯಿ
ಪದ್ಮಾವತಿ. ಚನ್ನಮ್ಮ ಎಳೆ
ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು
ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಅವಳು
ದೇಸಾಯಿ ಮನೆತನದ ರಾಜಾ ಮಲ್ಲಸರ್ಜ
ಅವರನ್ನು 15 ನೇ ವಯಸ್ಸಿನಲ್ಲಿ
ವಿವಾಹವಾದಳು. ಸ್ವಂತ ಮಕ್ಕಳಿಲ್ಲದ ರಾಣಿ
ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ಸಂಗೊಳ್ಳಿ ರಾಯಣ್ಣ, ನರಸಿಂಗರಾವ,
ಗುರುಪುತ್ರ ಮತ್ತು ಇತರ ಬೆಂಬಲಿಗರ
ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ
ಪಟ್ಟ ಕಟ್ಟಿದಳು.
ಕಿತ್ತೂರಿನ
ಇತಿಹಾಸ:- ಕಿತ್ತೂರಿನ
ಇತಿಹಾಸವು ಕ್ರಿ.ಶ. ೧೫೮೬ರಿಂದಲೇ
ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಬೇಡ
ಮನೆತನದಿಂದ ಬಂದ ಮಲ್ಲ ಹೆಸರಿನ
ಸೋದರರಿಬ್ಬರು ಬಿಜಾಪುರದ ಆದಿಲಶಾಹಿ ಸೈನ್ಯದಲ್ಲಿ
ಸೇರಿಕೊಂಡಿದ್ದರು. ಈ ಸೋದರರಲ್ಲಿ
ಹಿರಿಯ ಮಲ್ಲನಿಗೆ “ ಶಮಶೇರ್ ಜಂಗ್ಬಹಾದ್ದೂರ್” ಎನ್ನುವ
ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ
ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ
ಪತನದ ನಂತರ ಕಿತ್ತೂರು ದೇಸಾಯಿಗಳು
ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸ
ಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ
ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ
ಬಹಳ ವಿಲಕ್ಷಣವಾಗಿತ್ತು. ಉತ್ತರ
ಹಿಂದುಸ್ಥಾನದಲ್ಲಿ ಮೊಗಲ್ ಬಾದಶಾಹಿ ದುರ್ಬಲವಾಗಿತ್ತು.
ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ
ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ
ಹಾಗು ಮೈಸೂರಿನ ಹೈದರ್ ಅಲಿ
ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ
ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು.
ಇಂತಹ ರಾಜಕೀಯ ಪರಿಸ್ಥಿತಿಯು ಧೂರ್ತ,
ಕ್ರೂರ ಧೋರಣೆಯ ಬ್ರಿಟಿಷ್ ಈಸ್ಟ್
ಇಂಡಿಯಾ ಕಂಪೆನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ
ಸಮಯದಲ್ಲಿ ಮಲ್ಲಸರ್ಜ ದೊರೆಯನ್ನು ಟಿಪ್ಪು
ಸುಲ್ತಾನನು ಸೆರೆ ಹಿಡಿದು ಕಬ್ಬಾಳದುರ್ಗದಲ್ಲಿ
ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ
೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು
ಭದ್ರ ಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ
ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು
ನೀಡಿ ಅವರಿಂದ ಸನ್ನದು ಪಡೆದಿದ್ದನು.
ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ
ಹಿಡಿದು ೩ ವರ್ಷ
ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ
ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ
ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ
ರುದ್ರಸರ್ಜನು ಮರಾಠರ ಕಿರಿಕಿರಿ ತಪ್ಪಿಸಿಕೊಳ್ಳಲು
ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ
ಅದೆಂತಹ ಸ್ನೇಹವೆಂದರೆ! ಪ್ರತಿ ವರ್ಷ ರೂ.
೧,೭೦,೦೦೦
ಕಾಣಿಕೆ ಕೊಡುವ ಕರಾರಿನ ಮೇಲೆ
ಬ್ರಿಟಿಷರು ಈ ದೊರೆಗೆ
ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು
೧೧ ಸೆಪ್ಟೆಂಬರ್ ೧೮೨೪
ರಂದು ವಾರಸುದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ
ದೊರೆಯ ಹೆಂಡತಿ ವೀರಮ್ಮನಿಗೆ ಆಗ
೧೧ ವರ್ಷ ವಯಸ್ಸು!ಆದರೆ ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ
ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು
ದತ್ತಕ ತೆಗೆದುಕೊಂಡಿದ್ದನು. ಈ ದತ್ತಕವನ್ನು
ಧಾರವಾಡದ ಕಲೆಕ್ಟರ್ ಥ್ಯಾಕರೆ ತಿರಸ್ಕರಿಸುತ್ತಾನೆ.
೧೩ ಸೆಪ್ಟೆಂಬರ್ ೧೮೨೪
ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ
ಬಂದು ಕಂಪನಿ ಸರ್ಕಾರದಿಂದ ಮುಂದಿನ
ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ
ಹಾಗು ಹಾವೇರಿ ವೆಂಕಟರಾವ್ ಇವರನ್ನು
ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ
ಮಾಡಿ, ಕಿತ್ತೂರಿನ
ಭಂಡಾರಕ್ಕೆ ಬೀಗಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ
ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ
ಚೆನ್ನಮ್ಮ!
ಕಿತ್ತೂರಿನ
ಮೇಲೆ ಬ್ರಿಟಿಷರ ಆಕ್ರಮಣ ಮತ್ತು ಇತರ ರಾಜಕೀಯ ಬೆಳವಣಿಗೆ:- ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ
ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ,
ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ
ಸಂಧಾನಕ್ಕಾಗಿ ಪತ್ರ ಬರೆಯುತ್ತಾಳೆ. ಮುಂದಾಲೋಚನೆಯಿಂದ
ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ
ಸಹಾಯ ಕೋರಿ ಪತ್ರವ್ಯವಹಾರ ಮಾಡುತ್ತಾಳೆ.
೨೧ ಅಕ್ಟೋಬರ್ ೧೮೨೪ರಂದು
ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ
ಅಂದರೆ ಅಕ್ಟೋಬರ್ ೨೩ರಂದು ಕೋಟೆಯ
ಮೇಲೆ ತೋಪು ಹಾರಿಸಲು ತನ್ನ
ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ
ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು
ಜನ ಕಿತ್ತೂರು ವೀರರು
ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ
ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ
ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ
ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು.
ಈ ವಿಜಯೋತ್ಸವವನ್ನು ಕರ್ನಾಟಕ
ಸರ್ಕಾರ ಕಿತ್ತೂರು ಉತ್ಸವ ಎನ್ನುವ ಹೆಸರಿನಲ್ಲಿ
ಪ್ರತಿ ವರ್ಷವೂ ಆಚರಣೆ ಮಾಡುತ್ತದೆ.
ಸಂಘರ್ಷದಲ್ಲಿ
ದೇಶದ್ರೋಹಿಗಳಾದ ಕನ್ನೂರು
ವೀರಪ್ಪ, ಸರದಾರ ಮಲ್ಲಪ್ಪ ಅವರೂ
ಬಲಿಯಾದರು. ತದನಂತರ ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ
ಪತ್ರವ್ಯವಹಾರ ನಡೆಯುತ್ತದೆ. ಪರಿಣಾಮವಾಗಿ ೧೮೨೪ ಡಿಸೆಂಬರ್ ೨ ರಂದು
ಸ್ಟೀವನ್ಸನ್ ಹಾಗು ಈಲಿಯಟ್ ಇವರ
ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ
ಬ್ರಿಟಿಷರು ಡಿಸೆಂಬರ್ ೩ ರಂದು
ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು
ಒಡೆಯಲು ಪ್ರಾರಂಭಿಸುತ್ತಾರೆ. ಡಿಸೆಂಬರ್ ೪ ರಂದು
ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ ೫ ರಂದು
ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ
ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್೧೨
ರಂದು ಚೆನ್ನಮ್ಮ ಹಾಗು ವೀರಮ್ಮರನ್ನು
ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ
ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೯
ಫೆಬ್ರುವರಿ ೨ ರಂದು
ನಿಧನಹೊಂದುತ್ತಾಳೆ. ಮುಂದೆ ಮೇ ೨೦ರಂದು
ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ
ಹೋರಾಟ ನಿಂತಿರುವುದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು
ಆ ಮೇಲೆ ಬಿಡುಗಡೆಯಾದ
ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ
ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು
ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು
ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ
ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ.
ಮೇ ೧೮೩೦
ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦
ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ
೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ
ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ
ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ
ಕೊಂದರೆಂದೂ ಪ್ರತೀತಿ.
******************************
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಪೀಠಿಕೆ:
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟ
ತಿರುವಿದಾಗ ಕಿತ್ತೂರಿನ ಹೆಸರು ಪ್ರಸ್ತಾಪವಾದ
ಕೂಡಲೇ ನೆನಪಾಗುವವರು ರಾಣಿ ಚನ್ನಮ್ಮ ಹಾಗೂ
ಸಂಗೊಳ್ಳಿ ರಾಯಣ್ಣ. ರಾಣಿ ಚನ್ನಮ್ಮನ
ಬಲಗೈ ಬಂಟನಂತಿದ್ದ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಬಂಧಿಸಿ,
ನಂದಗಡದಲ್ಲಿ ಗಲ್ಲಿಗೇರಿಸಿ ಇಂದಿಗೆ 191 ವರ್ಷಗಳಾದವು.
ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ
ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡಿ
ಗಲ್ಲಿಗೇರಿದವರ ಸಾಲು-ಸಾಲು ಚರಿತ್ರೆಯೇ
ಇದೆ. ಅಂಥವರಲ್ಲಿ ಕಿತ್ತೂರು ಸಂಸ್ಥಾನದ
ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು,
ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ
ಸಿಂಹಸ್ವಪ್ನವಾಗಿ ಕಾಡಿದ್ದ ರಾಯಣ್ಣ ಗಲ್ಲಿಗೇರಿದ
ಅವಿಸ್ಮರಣೀಯ ದಿನ ಜನವರಿ 26. ವಿಶೇಷವೆಂದರೆ
ರಾಯಣ್ಣನ ಜನ್ಮದಿನಾಂಕದಂದೇ ನಮ್ಮ ದೇಶದ ಸ್ವಾತಂತ್ರ್ಯ
ದಿನಾಚರಣೆ ಆಚರಿಸಲ್ಪಡುತ್ತಿದೆ. ಅದೇ ರೀತಿ, ರಾಯಣ್ಣನನ್ನು
ಬ್ರಿಟಿಷರು ಗಲ್ಲಿಗೇರಿಸಿದ ದಿನವೇ ನಮ್ಮ ದೇಶದಲ್ಲಿ
ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.
ಹಿನ್ನೆಲೆ: ಮಲಪ್ರಭೆಯ
ಮಡಿಲಲ್ಲಿರುವ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ
ಎಂಬುದು ರಾಯಣ್ಣನ ಹುಟ್ಟೂರು. ಸಂಗೊಳ್ಳಿ
ಕಿತ್ತೂರಿನಿಂದ 14 ಕಿ.ಮೀ.
ದೂರವಿದೆ. ಮೂಲ ಹೆಸರು ರಾಯಪ್ಪ.
ಪೂರ್ಣ ಹೆಸರು ರಾಯಣ್ಣ ಭರಮಣ್ಣ
ರೋಗಣ್ಣವರ. ಇವರ ತಾತ ರೋಗಪ್ಪ
ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ
ಶೌರ್ಯಕ್ಕಾಗಿ ಮಲ್ಲಸರ್ಜ ದೇಸಾಯಿಯಿಂದ ‘‘ಸಾವಿರ
ಒಂಟೆ ಸರದಾರ’’ ಎಂಬ ಬಿರುದು ಪಡೆದಿದ್ದ.
ತಂದೆ ಬರಮಪ್ಪ ಮತ್ತು ತಾಯಿ
ಕೆಂಚವ್ವ ದಂಪತಿಗಳ ಮಗನಾಗಿ ರಾಯಣ್ಣ
ಹುಟ್ಟಿದ್ದು ಆಗಸ್ಟ್ 15, 1798 ರಂದು. ಈ ದಂಪತಿಗೆ
ಮೂವರು ಗಂಡು ಮಕ್ಕಳು. ಕೊನೆಯ
ಮಗನೇ ರಾಯಣ್ಣ. ಇವರದ್ದು ಕೃಷಿ
ನಿರತ ಹಾಲುಮತಕ್ಕೆ ಸೇರಿದ ಕುಟುಂಬ. ತಂದೆ
ಬರಮಪ್ಪ ಊರು ಮಂದಿಗೆ ಕಾಡುತ್ತಿದ್ದ
ಹುಲಿಯೊಂದನ್ನು ಕತ್ತಿಯಿಂದ ಇರಿದು ಕಿತ್ತೂರಿನ
ರಾಜ ಮಲ್ಲಸರ್ಜನ ಪ್ರೀತಿಗೆ
ಪಾತ್ರರಾಗಿದ್ದರು. ಮಲ್ಲಸರ್ಜನು ಅದಕ್ಕಾಗಿ ಭರಮಪ್ಪನಿಗೆ ಭೂಮಿಯನ್ನು
ಮಾನ್ಯ ಮಾಡಿಕೊಟ್ಟಿದ್ದನು. ಇದರಿಂದ
ರಾಯಣ್ಣನ ಮನೆತನ ಕಿತ್ತೂರು ಸಂಸ್ಥಾನದಲ್ಲಿ
ಹೆಸರುವಾಸಿಯಾಗಿತ್ತು. ಹುಟ್ಟೂರಲ್ಲೇ ಬೆಳೆದ ರಾಯಣ್ಣ ಗೆರಿಲ್ಲಾ
ಯುದ್ಧ ಪರಿಣತಿ ಹೊಂದಿದ್ದ.
ಏಕೆಂದರೆ, ಸಂಗೊಳ್ಳಿ ಗರಡಿಮನೆ ಸುತ್ತಮುತ್ತಲಿನ
ಹಳ್ಳಿಗಳಲ್ಲಿ ತುಂಬಾ ಹೆಸರು ಪಡೆದಿತ್ತು.
ನೆರೆಯ ಎಲ್ಲ ಹಳ್ಳಿಗಳ ಯುವಕರು
ಸಂಗೊಳ್ಳಿಯ ಗರಡಿಮನೆಯಲ್ಲಿ ಬಂದು ಕತ್ತಿವರಸೆ, ಗುರಿಹೊಡೆತ,
ಕವಣೆ ಎಸೆತ ಮತ್ತು ದೊಣ್ಣೆ
ವರಸೆಗಳನ್ನು ಕಲಿಯುತ್ತಿದ್ದರು. ಚಿಕ್ಕಂದಿನಿಂದಲೂ ರಾಯಣ್ಣ ಇದೇ ಗರಡಿಯಲ್ಲಿ
ತನ್ನ ಹೊತ್ತು ಕಳೆದು ಪಳಗಿದ್ದ.
ಎಲ್ಲ ಕಲೆಗಳನ್ನು ಚೆನ್ನಾಗಿ ರೂಡಿಸಿಕೊಂಡಿದ್ದ
ರಾಯಣ್ಣ, ವೇಗವಾಗಿ ಓಡುವುದರಲ್ಲಂತೂ ಎತ್ತಿದಕೈ.
ಅದು ಸಾ.ಶ.ವ. 1820ರ ಆಸುಪಾಸಿನ
ಅವಧಿ. ರಾಯಣ್ಣನಿಗೆ 22-23 ವರ್ಷ ವಯಸ್ಸು. ಬಾಳಪ್ಪ
ಸಾಧುನವರ, ಬಿಚ್ಚುಗತ್ತಿ ಚನ್ನಬಸಪ್ಪ ಈ ರಾಯಣ್ಣನ
ಗೆಳೆಯರು. ಎಲ್ಲರೂ ಸಾಹಸಿಗರು. ರಾಯಣ್ಣನಂತೂ
ಗುರಿ ಹೊಡೆಯುವುದರಲ್ಲಿ ನಿಪುಣ ಅಷ್ಟೇ ಅಲ್ಲ
ಧೈರ್ಯಶಾಲಿಯೂ ಆಗಿದ್ದ. ಅದೊಂದು ದಿನ
ಕಿತ್ತೂರು ಅರಮನೆಯಿಂದ ಈ ಮೂವರಿಗೆ
ಸಂದೇಶವೊಂದು ಬಂದಿತು. ಅರಮನೆಯ ಅಂಗರಕ್ಷಕರಾಗಲು
ಬನ್ನಿ ಎಂಬುದು ಅದರ ಒಕ್ಕಣೆ.
ಹಾಗೆ ಅರಮನೆಗೆ ಕಾಲಿಟ್ಟ ರಾಯಣ್ಣ
ಬಲುಬೇಗ ರಾಣಿ ಚನ್ನಮ್ಮರ ಬಲಗೈ
ಬಂಟನಾದ. ಬಲಿಷ್ಠವಾದೊಂದು ಸೈನ್ಯವನ್ನೂ ಕಟ್ಟಿದ.
ಸಾ.ಶ.ವ.
1824ರಲ್ಲಿ ನಡೆದ ಮೊದಲ ಯುದ್ಧದಲ್ಲಿ
ಬ್ರಿಟಿಷರಿಗೆ ಸೋಲುಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ. ಈ
ಸಂಗ್ರಾಮದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆ
ಕೊಲ್ಲಲ್ಪಟ್ಟ. ಈ ಯುದ್ಧದ
ಗೆಲುವಿನಿಂದ ಆರಂಭದಲ್ಲಿ ಕಿತ್ತೂರಿನಲ್ಲಿ ಸಂಭ್ರಮ
ನೆಲೆಸಿತ್ತಾದರೂ, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಕ್ಕೆ ಸಂಬಂಧಿಸಿದ ಹಲವು
ಮುನ್ಸೂಚನೆಗಳು ಸಿಕ್ಕಿದ್ದವು. ಈ ಸೋಲಿನಿಂದ
ಮುಖಭಂಗಕ್ಕೊಳಗಾದ ಬ್ರಿಟಿಷರಲ್ಲಿ ಕಿತ್ತೂರಿನ ಬಗೆಗೆ ಅಸಮಾಧಾನ,
ಆಕ್ರೋಶ ಹೆಚ್ಚಾಯಿತು. ಕಿತ್ತೂರಿನ ಸೇನೆಯನ್ನು ನೇರ
ಯುದ್ಧದಲ್ಲಿ ಸುಲಭವಾಗಿ ಸೋಲಿಸಲಾಗದು ಎಂಬುದನ್ನು
ಮನಗಂಡ ಬ್ರಿಟಿಷರು, ಹತ್ತಾರು ಆಸೆ-ಆಮಿಷಗಳನ್ನು
ತೋರಿಸಿ, ಕಿತ್ತೂರಿನ ಅರಮನೆಯ ಪ್ರಮುಖರನ್ನು
ಬುಟ್ಟಿಗೆ ಬೀಳಿಸಿಕೊಂಡರು. ಗೆಲುವು ಬ್ರಿಟಿಷರದಾಯಿತು. ಸೆರೆಸಿಕ್ಕ
ರಾಜಮನೆತನದವರನ್ನು ಸೆರೆವಾಸಕ್ಕೆ ಕಳುಹಿಸಿದರು.
ಆದರೆ ರಾಯಣ್ಣ ಬ್ರಿಟಿಷರ ವಿರುದ್ಧದ
ಹೋರಾಟವನ್ನು ಮುಂದುವರಿಸಿದ. ಅವನು ಚನ್ನಮ್ಮನ ದತ್ತುಪುತ್ರ
ಶಿವಲಿಂಗ ಸರ್ಜನ ಬೆಂಬಲಕ್ಕೆ ನಿಂತು,
ಅವನನ್ನು ಕಿತ್ತೂರಿನಲ್ಲಿ ಅಧಿಕಾರಕ್ಕೆ ತರಲು ಯತ್ನಿಸಿದನು. ಅದಕ್ಕಾಗಿ
ನಂಬಿಕಸ್ಥ ಸ್ನೇಹಿತರ ಗೆರಿಲ್ಲಾ ಪಡೆಯೊಂದನ್ನು
ಕಟ್ಟಿದನು. ಗೆರಿಲ್ಲಾ ಯುದ್ಧ ತಂತ್ರದ
ಮೂಲಕ ಬ್ರಿಟಿಷರ ವಿರುದ್ಧ ಸಮರ
ಸಾರಿದ. ಸಾಮ್ರಾಜ್ಯಷಾಹಿ ಬ್ರಿಟಿಷರು ಬಡವರಿಂದ ದೋಚಿದ್ದ
ಅಪಾರ ಸಂಪತ್ತನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಸರ್ಕಾರಕ್ಕೆ ಸೇರಿದ್ದ ಹತ್ತು ಹಲವು
ಕಡತಗಳು, ಮಹತ್ವದ ದಾಖಲೆಗಳನ್ನು ಸುಟ್ಟು
ಕರಕಲು ಮಾಡಿದ. ಬಡಜನರನ್ನು ಲೂಟಿ
ಮಾಡುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಅಪಾರ
ಹಾನಿ ಮಾಡುವ ಜತೆಗೆ, ಸಿಂಹಸ್ವಪ್ನವಾಗಿ
ಕಾಡಿದ್ದ. ಅಕ್ಷರಶಃ ಕ್ರಾಂತಿಕಾರಿ ಎನಿಸಿಕೊಂಡಿದ್ದ.
ಹೀಗೆ ಸಂಗ್ರಾಮದ ನೊಗ ಹೊತ್ತ
ಚನ್ನಮ್ಮನ ಬಲಗೈ ಬಂಟನನ್ನು ಬಲೆಗೆ
ಬೀಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಅವಶ್ಯವಿರುವ
ಎಲ್ಲ ತಂತ್ರಗಳನ್ನು ರೂಪಿಸಿತ್ತು. ಆದರೆ, ಆರಂಭಿಕ ಹಂತದ
ಯಾವ ಪ್ರಯತ್ನವೂ ಫಲಪ್ರದವಾಗಲಿಲ್ಲ.
ಹೇಗಾದರೂ ರಾಯಣ್ಣನನ್ನು ಬಂಧಿಸಬೇಕು ಎನ್ನುವ ಬ್ರಿಟಿಷ್
ಅಮಲ್ದಾರ್ ಕೃಷ್ಣರಾವ್ ನೆರವಿಗೆ ಸಂಗೊಳ್ಳಿಯ ಕರಣಿಕ
ಮತ್ತು ಜಮೀನ್ದಾರ ಬಾಳಪ್ಪ ರಂಗನಗೌಡ
ನಿಂತನು. ಇವರಿಬ್ಬರ ನೆರವಿಗೆ ಬಂದದ್ದು
ರಾಯಣ್ಣನ ಮಾವ ಲಕ್ಷ್ಮಣ. ಸ್ವತಃ
ಮಾವನಿಂದಲೇ ಮೋಸಕ್ಕೊಳಗಾದ ರಾಯಣ್ಣ ಬ್ರಿಟಿಷರ ಬಲೆಗೆ
ಬಿದ್ದ. ಬ್ರಿಟಿಷರ ಕೈಗೆ ಸಿಗದೇ
ಭೂಗತನಾಗಿದ್ದ ರಾಯಣ್ಣ ಒಮ್ಮೆ ಬೆಣಚಿ
ಬಳಿಯ ದೋರಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ
ಮೇಲೆ ಆಂಗ್ಲ ಸೈನಿಕರು ಆಕ್ರಮಣ
ಮಾಡಿದರು. ಆಗ ರಾಯಣ್ಣನ
ಖಡ್ಗ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ
ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ
ಕೊಡದೆ ಮೋಸ ಮಾಡಿದ್ದ. ವಿಧಿಯಿಲ್ಲದೆ
ರಾಯಣ್ಣ ಆಂಗ್ಲರ ಕೈವಶವಾಗಬೇಕಾಯಿತು.
ಸೆರೆಸಿಕ್ಕ
ರಾಯಣ್ಣ ಮತ್ತು ಅವನ ಸಹಚರರ
ಸೈನಿಕ ವಿಚಾರಣೆ 1830ರ ಡಿಸೆಂಬರ್
16ರಂದು ನಡೆದು, ವಿಚಾರಣಾಧಿಕಾರಿ ಜಿ.
ವಿ. ಅಂಡರ್ಸನ್
ರಾಯಣ್ಣ ಮತ್ತವನ 13 ಸಹಚರರಿಗೆ ಮರಣದಂಡನೆ
ಶಿಕ್ಷೆ ವಿಧಿಸಿದ. ಇದಾದ ಎರಡು
ವಾರಗಳ ನಂತರ ಮುಂಬೈ ಗವರ್ನರ್
ಸಮ್ಮುಖದಲ್ಲಿ ಮರುವಿಚಾರಣೆ ನಡೆದು, ಮರಣದಂಡನೆಯನ್ನು ರಾಯಣ್ಣ
ಮತ್ತವನ ಏಳು ಜನ ಮಿತ್ರರಿಗೆ
ಸೀಮಿತಗೊಳಿಸಲಾಯಿತು. ಉಳಿದವರನ್ನು ದೇಶದಾಚೆಗೆ ಗಡಿಪಾರು ಮಾಡಲಾಯಿತು.
ಕೊನೆಗೆ 1831ರ ಜನವರಿ
26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ
ತಾಲೂಕಿನ ನಂದಗಡ ಗ್ರಾಮದ ಊರ
ಹೊರಗಿನ ಆಲದ ಮರಕ್ಕೆ ಮೊದಲು
ರಾಯಣ್ಣನನ್ನು ನಂತರ ಉಳಿದವರನ್ನು ನೇಣಿಗೇರಿಸಿದರು.
ರಾಯಣ್ಣನ ಮನೆತನದ ಆಸ್ತಿಯನ್ನು ಸರ್ಕಾರ
ಮುಟ್ಟುಗೋಲು ಹಾಕಿಕೊಂಡಿತು. ರಾಯಣ್ಣನೊಂದಿಗೆ ಗಲ್ಲಿಗೇರಿದವರು ಬಾಲಾನಾಯಕ, ಬಸ್ತವಾಡ; ಬಸವಲಿಂಗಪ್ಪ,
ಹಣಬರಟ್ಟಿ; ಕಲಬಸಪ್ಪ, ಬೆಳವಾಡಿ; ಭೀಮಾ,
ಹೋಗರ್ತಿ; ಕೆಂಚಪ್ಪ, ಸಂಗತಿಕೊಪ್ಪ ಮತ್ತು
ಅಪ್ಪಾಜಿ, ಸುತ್ತುಗಟ್ಟಿ. ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ
ಕಳಿಸಲ್ಪಟ್ಟವರು: ರುದ್ರನಾಯಕ (೫೦),
ಬೆಳವಡಿ; ಎಲ್ಲಾನಾಯಕ (೪೦),
ಬೆಳವಡಿ; ಅಪ್ಪೂಣಿ (೪೦),
ತಿಗೋಡಹಳ್ಳಿ; ರಾಣೋಜಿ (೩೦) ಮಚ್ಚಿಗಡ;
ಕೊನೇರಿ (೪೦), ತೋಪಿನಕಟ್ಟೆ ಮತ್ತು ನೇಮಣ್ಣ (೪೦),
ಕೊಡಚವಾಡಿ.
ಗಲ್ಲಿಗೇರಿಸುವ ಮುನ್ನ ಆಂಗ್ಲ ಅಧಿಕಾರಿಗಳು
ನಿನ್ನ ಕಡೆಯ ಆಸೆ ಏನೆಂದು
ಕೇಳಿದಾಗ, “ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ
ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು
ಭಾರತದಿಂದ ಒದ್ದು ಓಡಿಸಬೇಕು” ಎಂದು ಸಿಂಹದಂತೆ ಗರ್ಜಿಸಿದ್ದ
ಆ ವೀರ!
ಮರಣದ
ನಂತರ: ಸಂಗೊಳ್ಳಿ
ಗ್ರಾಮದ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ
ಪಾಲ್ಗೊಂಡು ಇವನ ಸಮಾಧಿಯ ಮೇಲೆ
ಆಲದ ಸಸಿ ನೆಡುವ
ಮೂಲಕ ತನ್ನ ಗೆಳೆಯರಿಗೆ ಅಂತಿಮ
ನಮನ ಸಲ್ಲಿಸಿದನು. ಅಂದು ನೆಟ್ಟ ಆಲದ
ಸಸಿ ಇಂದು ಹೆಮ್ಮರವಾಗಿ
ಬೆಳೆದು ನಿಂತಿದೆ ನಮ್ಮ ರಾಷ್ಟ್ರೀಯ
ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ
ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ
ಭಾವನೆಗಳಿಗೆ ಇಂಬು ನೀಡುವ ಪುಣ್ಯ
ಸ್ಥಳವಾಗಿದೆ.
ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು
ತುಂಬುತ್ತದೆ. ಇದ್ದರೆ
ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ
ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ
ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು
ತಿಳಿಯುವುದು. ಯಾವುದೇ
ಸ್ವಾರ್ಥವಿಲ್ಲದೇ ದೇಶಕ್ಕಾಗಿ ಹೋರಾಟ ಮಾಡಿದ
ಅಪ್ರತಿಮ ದೇಶಭಕ್ತ ರಾಯಣ್ಣ. ಬಡತನದಲ್ಲಿದ್ದರೂ
ದೂರದೃಷ್ಟಿ, ಸಂಘಟನಾ ಚಾತುರ್ಯ, ನಾಡನಿಷ್ಠೆಯ
ಮೂಲಕ ಬ್ರಿಟಿಷರ ಹುಟ್ಟಡಗಿಸಿದ್ದು ಮಹಾನ್
ಸಾಧನೆಯೇ ಸರಿ. ಅವರ ಇತಿಹಾಸವನ್ನು
ಇಂದಿನ ಯುವಪೀಳಿಗೆ ಅಧ್ಯಯನ ಮಾಡುವುದು
ಅವಶ್ಯ ಮತ್ತು ಅನಿವಾರ್ಯವಾಗಿದೆ. ರಾಯಣ್ಣನ
ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು
ಹೆಸರಿಡಲಾಗಿದೆ.
******************************
ಸಿಂದಗಿ ಬಂಡಾಯ (೧೮೨೪)
ದೇಶ ವಿಮೋಚನೆ
ಆಗುವಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೊಡುಗೆ ಅಪಾರ. ೧೮೫೭ರ ಸಿಪಾಯಿ ದಂಗೆಗೂ ಮೊದಲೇ ಈ ನೆಲದಲ್ಲಿ ಪ್ರತಿಭಟನೆ ನಡೆದಿತ್ತು. ಅಂದರೆ, ೧೮೨೪ರಲ್ಲಿಯೇ ಬ್ರಿಟಿಷರಿಗೆ ತೆರಿಗೆಯನ್ನು ನೀಡುವುದಿಲ್ಲ ಎಂದು ಸಿಂದಗಿ ಸಂಸ್ಥಾನದ
ಕೆಲವು ನಾಗರಿಕರು ಹಟ ಹಿಡಿದರು. ಬ್ರಿಟಿಷರ
ತೆರಿಗೆ ನೀತಿ ಇಲ್ಲಿನ ಜನರನ್ನು
ರೊಚ್ಚಿಗೇಳುವಂತೆ ಮಾಡಿತ್ತು. ಆ ಕಾರಣಕ್ಕಾಗಿ ನಡೆದುದು
ಸಿಂದಗಿ ಬಂಡಾಯ. ೧೮೨೦ರಲ್ಲಿ ಹೊಸ ತೆರಿಗೆ ನೀತಿ
ಜಾರಿಗೆ ತಂದ ಬ್ರಿಟಿಷರ ಕ್ರಮದ
ವಿರುದ್ಧ ಇಲ್ಲಿನ ಪ್ರಜೆಗಳು ಬಂಡೇಳುವಂತೆ ಮಾಡಿತು. ಇದು ವಿಜಾಪುರ ಜಿಲ್ಲೆಯಲ್ಲಿ
ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ಚರಿತ್ರೆಯಲ್ಲಿ ದಾಖಲಾಗಿದೆ.
೧೮೨೪ರ
ಡಿಸೆಂಬರ್ ತಿಂಗಳಲ್ಲಿ ಚಿದಂಬರ ದೀಕ್ಷಿತ ಅವರು ಬ್ರಿಟಿಷ್ ತೆರಿಗೆ
ನೀತಿಯನ್ನು ಖಂಡಿಸಿ ನಾವು ತೆರಿಗೆಯನ್ನು ಕಟ್ಟುವುದಿಲ್ಲ
ಎಂದು ಘೋಷಣೆ ಮೊಳಗಿಸಿದರು. ಸಮಾನಮನಸ್ಕರ ಗುಂಪೊಂದನ್ನು ಕಟ್ಟಿಕೊಂಡು ಬಂಡಾಯದ ಬಾವುಟ ಹಾರಿಸಿದರು. “ಇನ್ನು ಮುಂದೆ ಈಸ್ಟ್ ಇಂಡಿಯಾ ಕಂಪನಿ ಇರುವುದಿಲ್ಲ; ನಾವುಗಳು ಆ ಕಂಪನಿಯ ಆದೇಶಕ್ಕೆ
ಬೆಲೆ ಕೊಡುವುದಿಲ್ಲ, ಯಾರೂ ತೆರಿಗೆಯನ್ನು ಕಟ್ಟಬಾರದು,
ನಾವೆಲ್ಲ ಸ್ವತಂತ್ರರು” ಎಂದು ಭಾಷಣ ಮಾಡಿದರು.
ಚಿದಂಬರ ದೀಕ್ಷಿತ ಅವರ ಮಗ ದಿವಾಕರ
ದೀಕ್ಷಿತ, ರಾವಜಿ ರಾಸ್ತಿಯಾ, ಬಾಳಪ್ಪ ದೇಶಪಾಂಡೆ, ಅಲೂಪ ಪಿಂಡಾರಿ, ಶೆಟ್ಟಿಯಪ್ಪ
ಮತ್ತು ಶೀನಪ್ಪ ಮೊದಲಾದವರು ಈ ಹೋರಾಟದಲ್ಲಿ ಪ್ರಮುಖ
ಪಾತ್ರವಹಿಸಿದರು. ಕಂಪೆನಿಯ ವಿರುದ್ಧ ಬಂಡಾಯವೆದ್ದುದರ ಭಾಗವಾಗಿ ಕಂಪನಿಯ ಸ್ವತ್ತನ್ನು ವಶಪಡಿಸಿಕೊಂಡು ಅಲ್ಲಿ ಬಂಡಾಯದ ಬಾವುಟ ಹಾರಿಸಿದರು. ಇದು ಐತಿಹಾಸಿಕ ಕ್ಷಣವಾಯಿತು.
ಬಂಡಾಯಗಾರರು ಸಿಂದಗಿ ಹಾಗೂ ಸುತ್ತಲಿನ ಹಳ್ಳಿಗಳ
ಕರವನ್ನು ತಾವೇ ಸಂಗ್ರಹಿಸತೊಡಗಿದರು. ಈ ಬಂಡಾಯದ ಮಾಹಿತಿಯು ಧಾರವಾಡಕ್ಕೆ ತಲುಪಿತು.
ಸಿಂದಗಿ ಬಂಡಾಯ ವಿಜಾಪುರದಲ್ಲಿ ಬ್ರಿಟಿಷರ ಮೊದಲ ಸೋಲು ಆಯಿತು.
ಅಲ್ಲಿನ ಬಂಡಾಯದ ಘಟನೆಯು ಬ್ರಿಟಿಷರಿಗೆ ಆಕ್ರೋಶ ತರಿಸಿತು. ಆದರೆ ಇಲ್ಲಿನ ವಿದ್ರೋಹಿಗಳು
ಬ್ರಿಟಿಷರೊಂದಿಗೆ ಕೈಜೋಡಿಸಿದ ಕಾರಣ ಬಂಡಾಯದ ಹೋರಾಟದ ಫಲ ಬಹಳ ದಿನ
ಉಳಿಯಲಿಲ್ಲ. ಕೆಲವರು ಸರಕಾರಕ್ಕೆ ಬಂಡಾಯಗಾರರ ವಿರುದ್ಧ ಮಾಹಿತಿ ನೀಡಿದರು.
ಅಣ್ಣಪ್ಪ
ಫಡಕೆ ಎಂಬುವವನು ಧಾರವಾಡದ ಕಂಪನಿ ಮೇಲಾಧಿಕಾರಿಗಳಿಗೆ ಸಿಂದಗಿ ಸಂಚಿನ ಎಲ್ಲ ಮಾಹಿತಿಯನ್ನು ನೀಡಿದನು.
ಏಕೆಂದರೆ, ಧಾರವಾಡದ ಕಲೆಕ್ಟರ್ ಸ್ಟೀವನ್ಸನ್ ಆದೇಶವೊಂದನ್ನು ಹೊರಡಿಸಿ
ಬಂಡಾಯಗಾರರ ಸುಳಿವು ನೀಡಿದವರಿಗೆ ೧೦೦ ರೂ. ಬಹುಮಾನ
ಘೋಷಣೆ ಮಾಡಿದನು. ಬಹುಮಾನದ ಆಸೆಗಾಗಿ ಅಣ್ಣಪ್ಪ ಫಡಕೆ ಎಂಬಾತನು ಬಂಡಾಯಗಾರರ
ಸುಳಿವು ನೀಡಿದನು. ಬ್ರಿಟಿಷ್ ಸೇನೆಯು ಸಿಂದಗಿಗೆ ಬಂದು ದೊಡ್ಡಮಟ್ಟದಲ್ಲಿ ದಾಳಿ
ಮಾಡಿತು. ಈ ಸಂದರ್ಭದಲ್ಲಿ ಬಂಡಾಯಗಾರರಿಗೆ
ಆಂಗ್ಲರ ಸೈನ್ಯವನ್ನು ಎದುರಿಸಲು ಆಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ. ಸ್ಥಳೀಯರ ಬೆಂಬಲವೂ ಸಿಗದ ಕಾರಣ ಕಡಿಮೆ
ಸಂಖ್ಯೆಯಲ್ಲಿದ್ದ ಬಂಡಾಯಗಾರರು ಸೋಲನ್ನೊಪ್ಪಿಕೊಳ್ಳಬೇಕಾಯಿತು. ಸಿಂದಗಿ ಆಡಳಿತ ಮತ್ತೆ ಬ್ರಿಟಿಷರ ಕೈವಶವಾಯಿತು. ಸಿಂದಗಿ ಕೋಟೆಯನ್ನು ತನ್ನ ಹಿಡಿತಕ್ಕೆ ಕಂಪನಿ
ಸರಕಾರ ಪಡೆದುಕೊಂಡು ಸಿಂದಗಿ ಬಂಡಾಯದ ಪ್ರಮುಖರಾದ ಚಿದಂಬರ ದೀಕ್ಷಿತ, ದಿವಾಕರ ದೀಕ್ಷಿತ, ರಾವಜಿ ರಾಸ್ತಿಯಾ, ಬಾಳಪ್ಪ ದೇಶಪಾಂಡೆ, ಆಲೂಪ ಪಿಂಡಾರಿ, ಶೆಟ್ಟಿಯಪ್ಪ
ಮತ್ತು ಶೀನಪ್ಪ ಮೊದಲಾದ ಎಲ್ಲ ಸಂಚುಗಾರರನ್ನು ಬಂಧಿಸಿ
ಶಿಕ್ಷೆಗೊಳಪಡಿಸಿತು.
ಬ್ರಿಟಿಷರಿಗೆ
ಬಂಡಾಯದ ಸುಳಿವು ನೀಡಿದ ಅಣ್ಣಪ್ಪ ಫಡಕೆಯನ್ನು ಬಂಡಾಯಗಾರರು ಕೊಂದುಹಾಕಿದರು. ಬಂಡಾಯಗಾರರ ಆಕ್ರೋಶಕ್ಕೆ ಬಲಿಯಾದ ಅಣ್ಣಪ್ಪನ ಕುಟುಂಬಕ್ಕೆ ಸಿಂದಗಿಯಲ್ಲಿ ಉಂಬಳಿಯಾಗಿ ಕಂಪನಿ ಸರಕಾರವು ಜಮೀನು ನೀಡಿತು. ಈ ಬಂಡಾಯ ವಿಫಲವಾದರೂ
ಜಿಲ್ಲೆಯಲ್ಲಿ ಸಣ್ಣದಾಗಿ ಬ್ರಿಟಿಷರ ವಿರುದ್ಧ ಅಸಮಾಧಾನದ ಹೊಗೆ ಎಬ್ಬಿಸಿದ್ದಂತೂ ಸತ್ಯ.
******************************
1857ರ ಮುಂಚಿನ ಬ್ರಿಟಿಷ್ ವಿರೋಧಿ ಪ್ರತಿಭಟನೆಗಳು, ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಸ್ವರಾಜ್ಯ
ಸ್ಥಾಪನೆಗಾಗಿ, ಪರಕೀಯರ ದಬ್ಬಾಳಿಕೆ ಮತ್ತು ಆಡಳಿತದ ವಿರುದ್ಧ ಸ್ವಾತಂತ್ರ್ಯಪ್ರಿಯ ಭಾರತೀಯರು ನಡೆಸಿದ ಹೋರಾಟ. ಇದರ ಪ್ರಥಮ ಘಟ್ಟದಲ್ಲಿ
ದೇಶೀಯ ರಾಜರೂ ದೇಶಪ್ರೇಮ ಸರದಾರರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಎರಡನೆಯ ಘಟ್ಟ ಕಾಂಗ್ರೆಸ್ ಸ್ಥಾಪನೆಯಿಂದ
ಸ್ವಾತಂತ್ರ್ಯ ಗಳಿಕೆಯವರೆಗೆ ನಡೆದುದಾಗಿದೆ. 17ನೆಯ ಶತಮಾನದಲ್ಲಿ ವ್ಯಾಪಾರಕ್ಕಾಗಿ
ಭಾರತಕ್ಕೆ ಬಂದ ಬ್ರಿಟಿಷರು ತಮ್ಮ
ವ್ಯಾಪಾರ ಮಳಿಗೆಗಳ ಭದ್ರತೆಗಾಗಿ ಕೋಟೆಕೊತ್ತಲ ಕಟ್ಟಿಕೊಂಡು ರಕ್ಷಣೆಗಾಗಿ ಸೇನೆ ಇಟ್ಟುಕೊಂಡರು. ಹಾಗೇ
ತಮ್ಮ ಉಚ್ಚಮಟ್ಟದ ಯುದ್ಧತಂತ್ರದಿಂದ ಇಲ್ಲಿಯ ರಾಜರ ಬೃಹತ್ಗಾತ್ರದ
ಸೈನ್ಯಗಳನ್ನು ತಾವು ಗೆಲ್ಲಬಲ್ಲೆವೆಂದು ಮನಗಂಡರು.
ಆರ್ಕಾಟಿನ ಉತ್ತರಾಧಿಕಾರಕ್ಕೆ ನಡೆದ 1751-54ರ ಕರ್ನಾಟಕ ಯುದ್ಧಗಳಲ್ಲಿ
ಮೇಲುಗೈ ಪಡೆದು ತಮಿಳುನಾಡಿನಲ್ಲಿ ನೆಲೆಪಡೆದರು. ಪ್ಲಾಸಿಕದನ (1757) ಗೆದ್ದು ಬಂಗಾಳ, ಬಿಹಾರ, ಒರಿಸ್ಸಾ ಸ್ವಾಧೀನ ಮಾಡಿಕೊಂಡರು. ಸಹಾಯಕ ಸೈನ್ಯಪದ್ಧತಿಯ ಜಾಲದಿಂದ ವೆಲ್ಲೆಸ್ಲಿ ನಿಜಾಮನಂಥ ರಾಜರನ್ನು ಬ್ರಿಟಿಷರ ಆಶ್ರಿತರನ್ನಾಗಿ ಮಾಡಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಟಿಪ್ಪುವನ್ನು ಕೊಂದು (1799) ದಕ್ಷಿಣ ಭಾರತದ ಅಧಿಕ ಭಾಗದ ಮೇಲೆ
ಸ್ವಾಮ್ಯ ಪಡೆದರು. 1801ರಲ್ಲಿ ಆರ್ಕಾಟು ನವಾಬರಿಗೆ ಪಿಂಚಣಿ ನೀಡಿ ರಾಜ್ಯವನ್ನು ತಮ್ಮ
ಅಧೀನಕ್ಕೆ ತೆಗೆದುಕೊಂಡರು. ಮುಂದಿನ ಎರಡು ಮರಾಠ ಯುದ್ಧಗಳಲ್ಲಿ
(1803-04 ಮತ್ತು 1818) ಮರಾಠರನ್ನು ಜಯಿಸಿದರು. ಪಂಜಾಬ್ ಕೂಡ ಸಿಖ್ಖರ ಸೋಲಿನಿಂದ
(1949) ಅವರ ವಶವಾಯಿತು. ಈ ಬಗೆಯಲ್ಲಿ ಬ್ರಿಟಿಷರು
ಭಾರತದಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳುತ್ತ
ಹೋದಂತೆ ಅದಕ್ಕೆ ಭಾರತೀಯರು ಪ್ರತಿಭಟನೆ ತೋರಿ ಹೋರಾಟ ನಡೆಸುತ್ತಲೇ
ಇದ್ದರು.
18ನೆಯ
ಶತಮಾನದ ಕೊನೆಗೆ ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಸಂನ್ಯಾಸಿಗಳು ಬಂಡಾಯವೆದ್ದರು. 1780-81ರಲ್ಲಿ ಕಾಶಿಯ ಜೈತ್ಸಿಂಗನ ಸೈನಿಕರು
ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದರು. 1781-82ರಲ್ಲಿ ಸಂತಾಲ್ ಪರಗಣದ ರಾಣಿ ಸರ್ವೇಶ್ವರಿ ಸುತ್ತಲ
ಗುಡ್ಡಗಾಡು ಜನರ ನೆರವಿನಿಂದ ಬಂಡೆದ್ದಳು.
ಅವದಾದ (ಅಯೋಧ್ಯೆ) ವಜೀರ್ ಆಲಿ ಗಯಾ ಜಿಲ್ಲೆಯ
ಟಿಕಾರಿ ಎಂಬ ಊರಿನ ಮಿತ್ರಜಿತಸಿಂಗನ
ನೆರವಿನಿಂದ ದಂಗೆ ಹೂಡಿದ್ದ. ತರಾಯಿ
ಪ್ರದೇಶದಲ್ಲಿ (ಖಾರಾಪುರ್ ಭಾಗಲಪುರ ಇತ್ಯಾದಿ) ಘಟ್ಟವಾಲದ ಜಗನ್ನಾಥದೇವ ಎಂಬವನ ನೇತೃತ್ವದಲ್ಲಿ 1773ರಿಂದ ಮೂರು ಸಾರಿ
ಬಂಡಾಯ ನಡೆದಿತ್ತು. ಈ ಬಂಡಾಯ 1803ರ
ತನಕ ಸಾಗಿತ್ತು. ಬಂಗಾಳದ ಚೌರರೆಂಬ ಜನ ಛೋಟಾನಾಗಪುರ ಮತ್ತು
ಮಾನಪುರ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ 1767ರಲ್ಲೇ ಆರಂಭಿಸಿದ ಪ್ರತಿಭಟನೆ 1799ರಲ್ಲಿ ಉಗ್ರವಾಯಿತು.
ದಕ್ಷಿಣ
ಭಾರತದ ಬಂಡಾಯವೆಂದು (1799-1801) ಹೆಸರಾದ ಈ ಬಂಡಾಯ ಕರ್ನಾಟಕ,
ತಮಿಳುನಾಡು ಮತ್ತು ಕೇರಳಗಳನ್ನು ವ್ಯಾಪಿಸಿತ್ತು. ರಾಜ ವಂಶೀಯರು, ಜಮೀನ್ದಾರರು
ಹಾಗೂ ಜನಸಾಮಾನ್ಯರು ಇದರಲ್ಲಿ ಪಾಲುಗೊಂಡಿದ್ದರು. ರಾಮನಾಡು ಜಿಲ್ಲೆಯ ಶಿವಗಂಗೆಯೆಂಬ ಸಂಸ್ಥಾನದ ಮಂತ್ರಿಯಾಗಿದ್ದ ಮರುದುಪಾಂಡ್ಯನ್ ತಮಿಳುನಾಡಿನ ಬಂಡಾಯಗಳನ್ನು ಸಂಘಟಿಸಿದ. ರಾಮನಾಡು, ತಿನ್ನವೆಲ್ಲಿ, ದಿಂಡಿಗಲ್ ಮತ್ತು ಕೊಯಮತ್ತೂರು ಈ ನಾಲ್ಕು ಗುಂಪುಗಳಲ್ಲಿ
ಬಂಡಾಯದ ಸಂಘಟನೆಯಾಗಿತ್ತು. ರಾಮನಾಡು ರಾಜ್ಯದ ಸೇತುಪತಿಯ ಮಂತ್ರಿ ಮರುದುಪಾಡ್ಯನ್ 1799 ಮಾರ್ಚ್ನಲ್ಲಿ ಈ ಬಂಡಾಯ ಆರಂಭಿಸಿದ.
ಆದರೆ ಇದನ್ನು ಹತ್ತಿಕ್ಕಲಾಯಿತು. 'ಕೇವಲ ಸಂಪತ್ತನ್ನು ಸುಲಿಯುವುದಕ್ಕಿಂತ
ಹೆಚ್ಚಿನದೇನೋ ಈ ಚಳವಳಿಯ ಹಿನ್ನೆಲೆಯಲ್ಲಿದೆ
ಎಂದು ಅಂದಿನ ಜಿಲ್ಲಾಧಿಕಾರಿ ಹೇಳಿದ್ದ. ತಿನ್ನವೆಲ್ಲಿ ಜಿಲ್ಲೆಯ ವೀರಪಾಂಡ್ಯ ಕಟ್ಟಬೊಮ್ಮನ್ 1799 ಜೂನ್ನಲ್ಲಿ ಅನೇಕ
ನೆರೆಯ ಪಾಳಯಗಾರರ ನೆರವಿನಿಂದ ಬಂಡೆದ್ದ. ಮೈಸೂರು ಯುದ್ಧ ಮುಗಿದು ಬ್ರಿಟಿಷ್ ಸೈನ್ಯ ಮರಳಿದಾಗ ಸೆಪ್ಟೆಂಬರ್ನಲ್ಲಿ ಕಟ್ಟಬೊಮ್ಮನ್ ಬಂಧಿತನಾಗಿ ಅಕ್ಟೋಬರ್ 17ಕ್ಕೆ ಪಾಶಿಗೇರಿಸಲ್ಪಟ್ಟ. ದಿಂಡಿಗಲ್
ಸಮೀಪದ ವಿರೂಪಾಕ್ಷಿಯ ಪಾಳೆಯಗಾರ ಗೋಪಾಲನಾಯಕನೂ ಇದೇ ಕಾಲಕ್ಕೆ ಬಂಡೆದ್ದು
ಟಿಪ್ಪುವನ್ನು ಸಂಪರ್ಕಿಸಿದ್ದ. ಮೈಸೂರು ಯುದ್ಧ ನಡೆದಾಗ ಕಂಪನಿಗೆ ಸೇರಿದ ಅನೇಕ ಪ್ರದೇಶಗಳನ್ನು ಗೆದ್ದುಕೊಂಡ.
ಆದರೆ ಬ್ರಿಟಿಷರ ಸೇನೆ ಇವನನ್ನು ಸೋಲಿಸಿತು.
1799ರಲ್ಲಿ ಈ ಉತ್ಥಾನಗಳೆಲ್ಲ ತಣ್ಣಗಾದರೂ
ಕರ್ನಾಟಕದಲ್ಲಿ 1800ರಲ್ಲಿ ದೋಂಡ್ಜಿವಾಘ ಮತ್ತು ಬಲಂನ ಕೃಷ್ಣಪ್ಪನಾಯಕ ಬಂಡೆದ್ದಾಗ
ಮರುದುಪಾಂಡ್ಯನ್ ಮತ್ತೆ ತಲೆಯೆತ್ತಿದ. ಫ್ರಾನ್ಸಿನ ಕ್ರಾಂತಿಕಾರಿಗಳು ಆಗ ಮೇಲ್ಗೈ ಪಡೆದು
ಇವರಿಗೆ ಪ್ರೋತ್ಸಾಹಕರ ಸಂದೇಶ ಕಳುಹಿಸುತ್ತಿದ್ದರು. ಈರೋಡ ಭಾಗದ ಚಿನ್ನಂಗೌಡ
ಧೋಂಡ್ಜಿ ವಾಘನ ಜೊತೆ
ಕರ್ನಾಟಕಕ್ಕೆ ಬಂದು ಮಾತುಕತೆ ನಡೆಸಿದ.
ವಾಘ ಮತ್ತು ಬಲಂನ (ಹಾಸನ ಜಿಲ್ಲೆ, ಮಂಜರಾಬಾದ್)
ನಾಯಕ ಇವರಿಬ್ಬರೂ ವಿರೂಪಾಕ್ಷಿಯ ಗೋಪಾಲನಾಯಕನ ಮೂಲಕ ದಿಂಡಿಗಲ್ ಗುಂಪಿನವರೊಡನೆ
ಸಂಪರ್ಕ ಸಾಧಿಸಿದ್ದರು. ಇದೇ ರೀತಿ ವಾಢ್
ಕೇರಳದ ಪಲಸ್ಸಿಯ ಅರಸು ಕೇರಳವರ್ಮನೊಡನೆ ಸಂಬಂಧವಿರಿಸಿಕೊಂಡಿದ್ದ.
ಕೇರಳವರ್ಮ ಕೊಯಮತ್ತೂರು ಗುಂಪಿನವರ ಜೊತೆ ಸಂಪರ್ಕವಿರಿಸಿಕೊಂಡಿದ್ದ. ಪಾಳಯಗಾರರಷ್ಟೇ ರೈತರೂ
ಗುಡ್ಡಗಾಡು ಜನರೂ ಇವರ ಜೊತೆ
ಸೇರಿಕೊಂಡರು. 1799ರ ಕೊನೆಯಿಂದ 1801ರ
ತನಕ ಈ ಬಂಡಾಯ ಸಾಗಿತ್ತು.
ರಾಮನಾಡು, ತೂತುಕುಡಿ, ತಂಜಾವೂರು, ಕೊಯಮತ್ತೂರು, ಈರೋಡು, ಕೇರಳದ ವೈನಾಡು, ಕರ್ನಾಟಕದ ಸಕಲೇಶಪುರ, ಜಮಾಲಾಬಾದ್, ಬಂಟ್ವಾಳ, ಸೋಂದಾ, ಶಿಕಾರಿಪುರ, ಗದಗು, ಡಂಬಳ, ಆನೆಗೊಂದಿ ಹಾಗೂ ರಾಯಚೂರು ಪ್ರದೇಶಗಳಲ್ಲಿ
ಈ ಬಂಡಾಯದ ಉತ್ಥಾನಗಳು ಕಾಣಿಸಿದವು. 1801 ನವೆಂಬರ್ ಹೊತ್ತಿಗೆ ಈ ಹೋರಾಟ ತಣ್ಣಗಾಯಿತು.
1800 ಏಪ್ರಿಲ್ನಿಂದ ಸೆಪ್ಟೆಂಬರ್ ತನಕ
ವಾಘನ ಹೊರಾಟ ಸಾಗಿತಾದರೂ ಸೆಪ್ಟೆಂಬರ್ 10ಕ್ಕೆ ಆತ ರಾಯಚೂರು
ಜಿಲ್ಲಾ ಕೋಣಗಲ್ನಲ್ಲಿ ಹೋರಾಡುತ್ತ ಮೃತನಾದ. ಬಲಂ ನಾಯಕನ ವಶವಿದ್ದ
ಅರಕೆರೆ ಕೋಟೆ 1802 ಜನವರಿಯಲ್ಲಿ ಬ್ರಿಟಿಷರ ವಶವಾಗಿ ಫೆಬ್ರವರಿಯಲ್ಲಿ ಕೃಷ್ಣಪ್ಪನಾಯಕ ಸೆರೆಸಿಕ್ಕು ಕೊಲ್ಲಲ್ಪಟ್ಟ. ಕೇರಳದಲ್ಲಿ ಕೇರಳವರ್ಮನ ಬಂಡಾಯ ಮತ್ತೂ ಮುಂದುವರಿಯಿತು. 1804 ನವೆಂಬರ್ನಲ್ಲಿ ಪುಲ್ಪಲ್ಲಿಯಲ್ಲಿ ಆತ ಹೋರಾಡುತ್ತ ಮಡಿದ.
ವೆಲ್ಲೂರು ಕೋಟೆಯಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಗ ಫತೆಹೈದರ್ನ
ಹೆಸರಿನಲ್ಲಿ 1806ರಲ್ಲಿ ವೆಲ್ಲೂರು ಕೋಟೆಯಲ್ಲಿದ್ದ ಸಿಪಾಯಿಗಳು ಜುಲೈ 10ರಂದು ಬಂಡೆದ್ದರು. 113 ಐರೋಪ್ಯರೂ
350 ಸಿಪಾಯಿಗಳೂ ಹತರಾಗಿ 500 ಸಿಪಾಯಿಗಳ ಬಂಧನದ ಅನಂತರ ಜುಲೈ 13ಕ್ಕೆ ಬಂಡಾಯ ಹತ್ತಿಕ್ಕಲ್ಪಟ್ಟಿತು.
ತಿರುವಾಂಕೂರಿನ ದಿವಾನ ವೇಲಿತಂಬಿದಳವಾ 1809ರಲ್ಲಿ ಬಂಡೆದ್ದ. ಆ ಬಂಡಾಯವನ್ನೂ ಹತ್ತಿಕ್ಕಲಾಯಿತು.
1818ರಲ್ಲಿ
ಪೇಶ್ವೆಯ ರಾಜ್ಯ ಕೊನೆಗೊಂಡ ವರ್ಷವೇ ಪೇಶ್ವೆಬಾಜಿರಾಯನ ಬಲಗೈ ಬಂಟ ತ್ರಿಂಬಕಜಿ
ಡೇಂಗಲೇ ಖಾನ್ ದೇಶದ ಭಿಲ್ಲರನ್ನು
ಪ್ರಚೋದಿಸಿ ಬಂಡುಹೊಡಿದ (1817-18). ಇದಕ್ಕೂ ಮೊದಲು, ಬಾಜೀರಾಯನ ಪ್ರೇರಣೆಯಿಂದ ಕಾಠೆವಾಡದ ರಾವ್ ಭಾರ್ಮಲ್
1816ರಲ್ಲಿ ಬಂಡುಹೂಡಿದ್ದನಾದರೂ ಮುಂದೆ ಬ್ರಿಟೀಷರ ಜೊತೆ ಒಪ್ಪಂದ ಮಾಡಿಕೊಂಡ.
1816ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಬಂಡಾಯವೂ ಪ್ರಸಿದ್ಧವಾಗಿದೆ.
1819ರಲ್ಲಿ ಕಾಠೆವಾಡದ ಭಾರ್ಮಲ್ ಭುಜ್
ಊರನ್ನು ಕೇಂದ್ರವಾಗಿಟ್ಟುಕೊಂಡು ಬಂಡಾಯ ಹೂಡಿದ. ಆಗಲೇ ಅದೇ ಪ್ರದೇಶದ
ವಾಘ ಮತ್ತು ಜಜೇರಾ ಪಂಗಡದ ಜನ ಬಂಡಾಯ ನಡೆಸಿದರು.
ಕರ್ನಾಟಕದ ಕೊಪ್ಪಳ ಪರಿಸರದ ವೀರಪ್ಪನೆಂಬ ಜಮೀನ್ದಾರ ಕಂದಾಯದ ಹೆಚ್ಚಳದ ವಿರುದ್ಧ ಬಂಡೆದ್ದಾಗ ಮೇ 17ಕ್ಕೆ ಮೇಜರ್
ಡ್ರಿಸ್ಲರ್ ಕೊಪ್ಪಳ ಕೋಟೆಯನ್ನು ಗೆದ್ದು ಬಂಡಾಯ ಹತ್ತಿಕ್ಕಿದ. 1820-21ರಲ್ಲಿ ಮೆರ್ವಾರಾದಲ್ಲಿ ಮೆರ್
ಪಂಗಡದ ಜನರೂ ಬಿದರ್ ಜಿಲ್ಲೆಯ
ದೇಶ್ಮುಖರೂ ಬಂಡಾಯ ನಡೆಸಿದರು.
1824ರಲ್ಲಿ
ಉತ್ತರ ಭಾರತದಲ್ಲಿ ಎಲ್ಲೆಡೆ ಬಂಡಾಯಗಳ ಸರಣಿಯೇ ನಡೆದಿದ್ದು ಯಾವೊಂದು ಜಿಲ್ಲೆಯಲ್ಲೂ ಒಂದಲ್ಲ ಒಂದು ರೀತಿಯ ಅಸಮಾಧಾನದ
ಪ್ರಕರಣ ನಡದೇ ಇತ್ತು. ಮೊದಲು
ಆಂಗ್ಲೋ ಬರ್ಮ ಯುದ್ಧದಲ್ಲಿ ಬ್ರಟಿಷರಿಗೂ
ಸೋಲಾಗಿದೆ ಎಂಬ ವದಂತಿ ಹರಡಿದ್ದೇ
ಈ ಬಂಡಾಯಗಳಿಗೆ ಕಾರಣ. ಷಹರಾನ್ಪುರದ ಗುರ್ಜರರ ನಾಯಕ
ರಾಮದಯಾಳ್ 1813ರಲ್ಲಿ ತೀರಿಕೊಂಡಾಗ ಅವನ ರಾಜ್ಯವನ್ನು ಬ್ರಿಟಿಷರು
ವಶಪಡಿಸಿಕೊಂಡರು. ಆಗ ನಡೆದ ಬಂಡಾಯವನ್ನು
ಬ್ರಟಿಷರು ಹತ್ತಿಕ್ಕಿದ್ದರಾದರೂ ರಾಮದಯಾಳನ ಸಂಬಂಧಿ ರೂರ್ಕಿ ಬಳಿಯ ಕುಂಜಾದ ತಾಲೂಕುದಾರ
ಬಿಜಯ್ಸಿಂಗ್ 1824ರಲ್ಲಿ ಬಂಡೆದ್ದ. ಗೂರ್ಖಾದಳ ಕಳುಹಿಸಿ 200 ಬಂಡಾಯಗಾರರನ್ನು ಕೊಂದಾಗಲೇ ಈ ಉತ್ಥಾನ ಕೊನೆಗೊಂಡದ್ದು.
2ನೆಯ ಆಂಗ್ಲೋ ಮರಾಠಯುದ್ಧದ ನಂತರ ಭರತಪುರದ ಜಾಟರು
1805ರಲ್ಲಿ ನಡೆಸಿದ ಬಂಡಾಯ ವಿಫಲವಾಯಿತು. 1824ರಲ್ಲಿ ಇದೇ ಜಾಟರು ಮೇವಾತಿ
ಮತ್ತು ಭಟ್ಟಿ ಜನರ ನೆರವಿನಿಂದ ಬಂಡೆದ್ದರು.
ಸೂರಜಾಮಲ್ ಜಾಟಬೆಹಟ್ ಕೋಟೆ ಗೆದ್ದುಕೊಂಡ. ರೇವಾರಿಯಲ್ಲೂ
ಇದೇ ರೀತಿ ಉತ್ಥಾನವಾಯಿತು. ದೆಹಲಿ
ರೋರತ್ ಸಂಪರ್ಕ ತಪ್ಪಿಹೋಯಿತು. ಬ್ರಿಟಿಷರು ಈ ಎಲ್ಲ ಬಂಡಾಯಗಳನ್ನು
ಗೂರ್ಖಾ ತುಕಡಿ ಕಳುಹಿಸಿ ಹತ್ತಿಕ್ಕಿದರು. ಬುಂಡೇಲ ಖಂಡದ ಜಾಲಿನ್ನಿನ ಜಾಗಿರ್ದಾರ
ನಾನಾಪಂಡಿತ್ ಇದೇ ವರ್ಷ ಬ್ರಿಟಿಷರ
ವಶವಿದ್ದ ಕಾಲ್ಪಿಯನ್ನು ವಶಪಡಿಸಿಕೊಂಡ. ಇವನನ್ನು ಹತ್ತಿಕ್ಕುವಷ್ಟರಲ್ಲಿ ತಾಪಿ ಕಣಿವೆಯಲ್ಲಿ ದಲ್ಲಿ
ಎಂಬ ಪಿಂಡಾರಿ ನಾಯಕ ಬಂಡೇಳಲು ಬಾಜೀರಾಯನ
ತಮ್ಮ ಚಿಮಾಜಿ ಅಪ್ಪ ತಾನೆಂದು ಹೇಳಿಕೊಳ್ಳುವವನೊಬ್ಬ
ಅವನನ್ನು ಸೇರಿಕೊಂಡ. ಭಿಲ್ಲರೂ ಅವರನ್ನು ಸೇರಿಕೊಂಡರು. ಕಚ್ಛ್ನಲ್ಲಿ ರಾವ್ ಭಾರ್ಮಲ್ನ ಪರ ಬಂಡೆದ್ದು
ಅಂಜರ್ ಬಳಿಯ ಬಲಾರಿ ಕೋಟೆ
ಗೆದ್ದರು. ಸಿಂಧನ ಅಮಿರನೂ ಅವರಿಗೆ ನೆರವಾದ. ಕರ್ನಲ್ ನೇಪಿಯರ್, 1825ರಲ್ಲಿ ಈ ಬಂಡಾಯ ಕೊನೆಗೊಳಿಸಿದ.
ಖಾನ್ ದೇಶದ ಬಲ್ಗಾನಾದಲ್ಲಿ ಮತ್ತೆ
1825ರಲ್ಲಿ ಭಿಲ್ಲರು ಬಂಡೆದ್ದರು. ಬರೋಡಾ ಸಂಸ್ಥಾನದ ನೆರೆಯ ದುಡಮ ಮತ್ತು ಕೈರಾಗಳಲ್ಲಿ
ಇದೇ ಕಾಲದಲ್ಲಿ ಜನ ಬಂಡೆದ್ದರು. ಬ್ರಿಟಿಷರು
ಇವರನ್ನು ಬೆನ್ನಟ್ಟಲು ಕಚ್ನ ರಣಕ್ಕೆ
ಓಡಿಹೋಗಿ 1825ರಲ್ಲಿ ಮರಳಿಬಂದರು. ಅವರನ್ನು ಹತ್ತಿಕ್ಕಿದರೂ 1828ರಲ್ಲಿ ಮತ್ತೆ ತಲೆಯೆತ್ತಿದರು. 1825ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ದಿವಾಕರ ದಿ ಕ್ಷಿತನೆಂಬಾತ ಬಂಡೆದ್ದು
ತಾನೇ ಕಂದಾಯ ಸಂಗ್ರಹಿಸಲು ಹೊರಟಾಗ ಸೊಲ್ಲಾಪುರದಿಂದ ಬಂದ ಬ್ರಿಟಿಷ್ ಸೇನೆ
ಅನೇಕ ಸೇನಾನಿಗಳನ್ನು ಕಳೆದುಕೊಂಡೇ ಈತನನ್ನು ಸೋಲಿಸಿತು. ಕಿತ್ತೂರ ರಾಣಿ ಚನ್ನಮ್ಮ 1824 ಅಕ್ಟೋಬರಿನಲ್ಲಿ
ಹೂಡಿದ ಬಂಡಾಯ ಸರ್ವವಿದಿತ. ಇದರ ಹಿಂದೆಯೇ 1829ರಲ್ಲಿ
ಸಂಗೊಳ್ಳಿರಾಯಣ್ಣ ಕಿತ್ತೂರಲ್ಲಿ ಬಂಡು ಹೂಡಿದ್ದ. ಮುಂದೆ
1833, 1836 ಹಾಗೂ
1837-38ರಲ್ಲಿ ಕೂಡ ಕಿತ್ತೂರಲ್ಲಿ ಬಂಡಾಯಗಳಾದುವು.
1830ರಲ್ಲಿ ಆದ ಶಿವಮೊಗ್ಗ ಜಿಲ್ಲೆಯ
ನಗರ ಬಂಡಾಯ, 1831ರಲ್ಲಿ ಕರಾವಳಿ ಕನ್ನಡ ಜಿಲ್ಲೆಗಳ ರೈತ ಬಂಡಾಯ, 1836-37ರಲ್ಲಾದ
ಕೊಡಗಿನ ಬಂಡಾಯ, 1841ರಲ್ಲಿ ನರಸಪ್ಪ ಪೇಟ್ಕರ್ ನಡೆಸಿದ
ಛತ್ರಪತಿ ಪರವಾದ ಬಾದಾಮಿಯ ಬಂಡಾಯ. 1830-33ರ ನಡುವೆ ಆಂಧ್ರದಲ್ಲಿ
ನಡೆದ ವೀರಭದ್ರ ರಾಜುವಿನ ದಂಗೆ. 1846-47ರ ಕರ್ನೂಲು ನರಸಿಂಹರೆಡ್ಡಿಯ
ದಂಗೆ. ಹೀಗೆ ಬ್ರಿಟಿಷರ ವಿರುದ್ಧ
ನಡೆದ ಹೋರಾಟಗಳ ಪಟ್ಟಿಗೆ ಕೊನೆಯಿಲ್ಲ. ವಿದೇಶೀಯ ಆಡಳಿತ ವಿರುದ್ಧ ಅಸಮಾಧಾನ ಸ್ಫೋಟವಾಗುತ್ತಲೇ ಇತ್ತು.
19ನೆಯ
ಶತಮಾನದ ಆರಂಭದಲ್ಲಿ ಇಸ್ಲಾಮಿನ ಒಂದು ಶಾಖೆಯಲ್ಲಿ ವಹಾಬಿ
ಪಂಥ ಇಸ್ಲಾಂನಲ್ಲಿ ಸೇರಿಕೊಂಡು ದುವ್ರ್ಯವಹಾರಗಳನ್ನು ಕಿತ್ತೆಸೆಯಲೆಂದು ಭಾರತವನ್ನು ಪ್ರವೇಶಿಸಿತಾದರೂ ಬಲುಬೇಗ ಅದು ಒಂದು ರಾಜಕೀಯ
ಚಳವಳಿಯಾಗಿ ರೂಪು ತಳಿಯಿತು. ಬ್ರಿಟಿಷರನ್ನು
ಬಂಗಾಳದಿಂದ ಹಾಗೂ ಸಿಖ್ಖರನ್ನು ಪಂಜಾಬಿನಿಂದ
ಅಧಿಕಾರಚ್ಯುತರನ್ನಾಗಿ ಮಾಡಿ ದೇಶದಲ್ಲಿ ಮುಸ್ಲಿಮ್
ಅಧಿಕಾರ ಸ್ಥಾಪನೆ ಇದರ ಗುರಿಯಾಯಿತು. 1820 ರಿಂದ
1870ರ ತನಕ ಈ ಪಂಥ
ಕಾರ್ಯನಿರತವಾಗಿತ್ತು. ಪಿಂಡಾರಿ ಅಮೀರಾಖಾನನ ಸೇವೆಯಲ್ಲಿದ್ದ ಸಯ್ಯದ್ ಅಹ್ಮದ್ ಇದರ ನಾಯಕ. ದೇಶದಲ್ಲೆಲ್ಲ
ಸಂಚರಿಸಿ ಸಶಸ್ತ್ರ ಹೋರಾಟಕ್ಕೆ ಮುಸಲ್ಮಾನರನ್ನು ಈತ ಸಜ್ಜುಗೊಳಿಸಿದ. ಸಿಖ್ಖರ
ವಿರುದ್ಧ ನಡೆದ ಒಂದು ಹೋರಾಟದಲ್ಲಿ
ಬಲಾಕೋಟ್ನಲ್ಲಿ ಈತ ತೀರಿಕೊಂಡ (1831). ಇವನ
ಶಿಷ್ಯ ಷಾ ಮಹಮದ್ ಬಂಗಾಲ,
ಬಿಹಾರಗಳಲ್ಲಿ ಸಂಘಟನೆಯ ಕೆಲಸ ಮಾಡಿದ. ಹೈದರಾಬಾದ್
ನಿಜಾಮನ ಸೋದರ ಮುಬಾರಿಜಾ-ಉದ್-ದೌಲ ಚಳವಳಿಗೆ ಸೇರಿದ್ದು
ಬಂಧಿತವಾಗಿ 1854ರಲ್ಲಿ ತೀರಿಕೊಂಡ. ಮೀರತ್,
ದೆಹಲಿ, ಬರೇಲಿ, ಪಟ್ನಾಗಳು ವಹಾಬಿಗಳ ಕೇಂದ್ರಗಳು. ಬಂಗಾಳದಲ್ಲೂ ಅವರು ಚುರುಕಾಗಿ ಕೆಲಸ
ಮಾಡುತ್ತಿದ್ದರು. ರಾವಲ್ಪಿಂಡಿಯ ಸೈನ್ಯದಲ್ಲಿ ಬ್ರಿಟಿಷ್ ವಿರೋಧೀ ಪ್ರಚಾರ ನಡೆಸಿದ ಹಲವಾರು ಸೈನಿಕರನ್ನು 1853ರಲ್ಲಿ ಬಂಧಿಸಿ ಶಿಕ್ಷಿಸಿದರು. ವಹಾಬಿಗಳು
ಪಟ್ನಾ, ಆಗ್ರಾ, ಹೈದರಾಬಾದ್ಗಳಲ್ಲಿ ಒಂದಿಷ್ಟು ಗಲಾಟೆ ಮಾಡಿದರು. ಮತ್ತೇನನ್ನೂ ಅವರು ಸಾಧಿಸಲಿಲ್ಲ. 1857ರ
ದೆಹಲಿಯ ಉತ್ಥಾನದ ನಾಯಕರಲ್ಲಿ ಒಬ್ಬನಾಗಿದ್ದ ಬಖ್ತ್ಖಾನ್ ವಹಾಬಿಯೆಂದು ತಿಳಿದುಬಂದಿದೆ.
ವಾಯವ್ಯ ಭಾರತದ ಆಚೆಗಿನ ಸಿತ್ತಾನ ಅವರ ಕೇಂದ್ರ. ಅಲ್ಲಿಗೆ
ಬ್ರಿಟಿಷರು 1850ರಿಂದ 1857ರ ನಡುವೆ 16 ಬಾರಿ
ದಂಡು ಕಳುಹಿಸಿದ್ದರು. ಕಡೆಗೆ ಅಂಬಾಲಾ, ಪಟ್ನಾ, ಮಾಲ್ಡಾ, ರಾಜಮಹಲ್ ಮುಂತಾದ ಕಡೆ ಇವರುಗಳನ್ನು ಬಂಧಿಸಿ
1870ರಲ್ಲಿ ವಿಚಾರಣೆಗೆ ಒಳಪಡಿಸಿದರು. ನೂರಾರು ಜನಕ್ಕೆ ಶಿಕ್ಷೆಯಾಗಿ ಚಳವಳಿ ನಿಂತಿತು.
******************************
1857ಕ್ಕೆ ಮೊದಲು ಭಾರತದಲ್ಲಿ ನಡೆದ ಬ್ರಿಟಿಷ್ ವಿರೋಧಿ ಪ್ರತಿಭಟನೆಗಳು
1. ಪೀಠಿಕೆ:
ಭಾರತದಲ್ಲಿ ಬ್ರಿಟಿಷ್
ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ಪ್ರಾಬಲ್ಯವು 18ನೇ ಶತಮಾನದ ಮಧ್ಯಭಾಗದಿಂದ
ಕ್ರಮೇಣ ವಿಸ್ತರಿಸಿತು. ಪ್ಲಾಸಿ ಕದನ (1757) ಮತ್ತು ಬಕ್ಸರ್ ಕದನ (1764) ನಂತರ ಕಂಪನಿಯು ಭಾರತದ
ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯಿತು. ಮುಂದೆ ವಿವಿಧ ಒಪ್ಪಂದಗಳು, ಯುದ್ಧಗಳು, ಭೂ ಕಂದಾಯ ನೀತಿಗಳು
ಮತ್ತು ಆಡಳಿತಾತ್ಮಕ ಕ್ರಮಗಳ ಮೂಲಕ ತನ್ನ ಆಳ್ವಿಕೆಯನ್ನು
ವಿಸ್ತರಿಸಿತು.
ಬ್ರಿಟಿಷರ
ವಸಾಹತುಶಾಹಿ ನೀತಿಗಳಿಂದ ಭಾರತೀಯ ರಾಜರು, ಜಮೀನ್ದಾರರು, ರೈತರು, ಬುಡಕಟ್ಟು ಜನರು, ಸೈನಿಕರು ಮತ್ತು ವಿವಿಧ ಸ್ಥಳೀಯ ಸಮುದಾಯಗಳ ಹಿತಾಸಕ್ತಿಗಳಿಗೆ ಧಕ್ಕೆಯಾಯಿತು. ಇದರ ಪರಿಣಾಮವಾಗಿ 1857ರ
ಮಹಾ ಬಂಡಾಯಕ್ಕೆ ಮುನ್ನವೇ ಭಾರತದ ವಿವಿಧ ಭಾಗಗಳಲ್ಲಿ ಅನೇಕ ಸ್ಥಳೀಯ ದಂಗೆಗಳು
ಮತ್ತು ಬ್ರಿಟಿಷ್ ವಿರೋಧಿ ಪ್ರತಿಭಟನೆಗಳು ನಡೆದವು.
ಈ
ಪ್ರತಿಭಟನೆಗಳು ಒಂದೇ ರೀತಿಯ ಸ್ವರೂಪವನ್ನು
ಹೊಂದಿರಲಿಲ್ಲ. ಕೆಲವು ರಾಜಕೀಯ ಕಾರಣಗಳಿಂದ, ಕೆಲವು ಭೂ ಕಂದಾಯದ ಹೆಚ್ಚಳದಿಂದ,
ಕೆಲವು ಆರ್ಥಿಕ ಶೋಷಣೆಯಿಂದ ಮತ್ತು ಕೆಲವು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಪ್ರದಾಯಿಕ ಹಕ್ಕುಗಳ
ರಕ್ಷಣೆಯ ಉದ್ದೇಶದಿಂದ ನಡೆದವು.
2. ಬ್ರಿಟಿಷ್
ವಿರೋಧಿ ಪ್ರತಿಭಟನೆಗಳ ಪ್ರಮುಖ ಕಾರಣಗಳು
. ರಾಜಕೀಯ
ವಿಸ್ತರಣೆಯ ನೀತಿ: ಈಸ್ಟ್ ಇಂಡಿಯಾ
ಕಂಪನಿಯು ಭಾರತೀಯ ಸಂಸ್ಥಾನಗಳನ್ನು ತನ್ನ ಅಧೀನಕ್ಕೆ ತರುವ
ಪ್ರಯತ್ನ ಮಾಡಿತು. ಯುದ್ಧಗಳು, ಒಪ್ಪಂದಗಳು ಮತ್ತು ನಂತರದ ದತ್ತು ಮಕ್ಕಳನ್ನು ಉತ್ತರಾಧಿಕಾರಿಗಳೆಂದು ಒಪ್ಪದ ನೀತಿ (ವ್ಯಪಗತ ಸಿದ್ಧಾಂತ) ಮುಂತಾದ ಕ್ರಮಗಳಿಂದ ಅನೇಕ ಸಂಸ್ಥಾನಗಳ ಸ್ವಾಯತ್ತತೆ
ಕುಂಠಿತವಾಯಿತು.
ಆ.
ಭೂ ಕಂದಾಯದ ಭಾರ: ಬ್ರಿಟಿಷರು ವಿವಿಧ ಪ್ರದೇಶಗಳಲ್ಲಿ ಹೊಸ ಭೂಕಂದಾಯ ವ್ಯವಸ್ಥೆಗಳನ್ನು
ಜಾರಿಗೆ ತಂದರು. ಹೆಚ್ಚಿನ ಕಂದಾಯದ ಬೇಡಿಕೆ ಮತ್ತು ಕಠಿಣ ವಸೂಲಿ ಕ್ರಮಗಳಿಂದ
ರೈತರು ಸಾಲದ ಸುಳಿಗೆ ಸಿಲುಕಿದರು.
ಬೆಳೆ ವಿಫಲವಾದ ಸಂದರ್ಭದಲ್ಲಿಯೂ ಕಂದಾಯ ಪಾವತಿಸಬೇಕಾಗಿದ್ದರಿಂದ ರೈತರಲ್ಲಿ ಅಸಮಾಧಾನ ಹೆಚ್ಚಾಯಿತು.
ಇ.
ಆರ್ಥಿಕ ಶೋಷಣೆ: ಬ್ರಿಟಿಷರ ವಾಣಿಜ್ಯ ನೀತಿಗಳು ಸಾಂಪ್ರದಾಯಿಕ ಭಾರತೀಯ ಕೈಗಾರಿಕೆಗಳು ಮತ್ತು ಕರಕುಶಲ ವೃತ್ತಿಗಳಿಗೆ ಹಾನಿ ಉಂಟುಮಾಡಿದವು. ಸ್ಥಳೀಯ
ಉತ್ಪಾದಕರಿಗೆ ಮಾರುಕಟ್ಟೆ ಸಮಸ್ಯೆಗಳು ಎದುರಾದವು. ಇದರಿಂದ ನೇಕಾರರು, ಕರಕುಶಲಗಾರರು ಮತ್ತು ಸಣ್ಣ ಉತ್ಪಾದಕರು ಆರ್ಥಿಕ
ಸಂಕಷ್ಟಕ್ಕೆ ಒಳಗಾದರು.
ಈ.
ಬುಡಕಟ್ಟು ಪ್ರದೇಶಗಳಲ್ಲಿ ಹಸ್ತಕ್ಷೇಪ: ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಭೂಹಕ್ಕುಗಳು ಮತ್ತು ಅರಣ್ಯ ಸಂಪನ್ಮೂಲಗಳ ಬಳಕೆಯಲ್ಲಿ ಬ್ರಿಟಿಷ್ ಆಡಳಿತ ಮತ್ತು ಅದರೊಂದಿಗೆ ಬಂದ ಜಮೀನ್ದಾರರು, ಸಾಹುಕಾರರು
ಹಾಗೂ ಗುತ್ತಿಗೆದಾರರ ಹಸ್ತಕ್ಷೇಪ ಹೆಚ್ಚಾಯಿತು. ಇದರ ವಿರುದ್ಧ ಅನೇಕ
ಬುಡಕಟ್ಟು ದಂಗೆಗಳು ನಡೆದವು.
ಉ.
ಸೈನಿಕರ ಅಸಮಾಧಾನ: ಭಾರತೀಯ ಸೈನಿಕರಿಗೆ ವೇತನ, ಸೇವಾ ನಿಯಮಗಳು, ಬಡ್ತಿ
ಮತ್ತು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಕೆಲವು ಅಸಮಾಧಾನಗಳಿದ್ದವು. 1806ರ ವೆಲ್ಲೂರು ಸಿಪಾಯಿ
ದಂಗೆಯು ಸೈನಿಕ ಅಸಮಾಧಾನದ ಪ್ರಮುಖ ಉದಾಹರಣೆಯಾಗಿದೆ.
3. 1857ಕ್ಕೆ ಮೊದಲು ನಡೆದ ಪ್ರಮುಖ ಬ್ರಿಟಿಷ್ ವಿರೋಧಿ ಪ್ರತಿಭಟನೆಗಳು
ಅ.
ಸನ್ಯಾಸಿ–ಫಕೀರ್
ಚಳವಳಿ
ಕಾಲ:
ಸುಮಾರು 1760ರ ದಶಕದಿಂದ 1800ರ
ಆರಂಭದವರೆಗೆ
ಪ್ರದೇಶ:
ಬಂಗಾಳ ಮತ್ತು ಉತ್ತರ ಬಂಗಾಳ
ಬಂಗಾಳದಲ್ಲಿ
ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಬಲಗೊಂಡ ನಂತರ ರೈತರು, ಸನ್ಯಾಸಿಗಳು
ಮತ್ತು ಫಕೀರರ ಚಟುವಟಿಕೆಗಳ ಮೇಲೆ ವಿವಿಧ ನಿರ್ಬಂಧಗಳು
ಹೇರಲ್ಪಟ್ಟವು. ಬರಗಾಲ, ಕಂದಾಯದ ಒತ್ತಡ ಮತ್ತು ಕಂಪನಿಯ ಆರ್ಥಿಕ ನೀತಿಗಳಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಯಿತು.
ಸನ್ಯಾಸಿಗಳು
ಮತ್ತು ಫಕೀರರ ಗುಂಪುಗಳು ಕಂಪನಿಯ ಅಧಿಕಾರ ಮತ್ತು ಅದರ ತೆರಿಗೆ ವ್ಯವಸ್ಥೆಗೆ
ಪ್ರತಿರೋಧ ವ್ಯಕ್ತಪಡಿಸಿದವು. ಕೆಲವು ಸ್ಥಳಗಳಲ್ಲಿ ಅವರು ಕಂಪನಿಯ ಕಚೇರಿಗಳು
ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿದರು.
ಈ
ಚಳವಳಿಯು ಒಂದೇ ಸಂಘಟನೆಯಿಂದ ನಡೆಸಲ್ಪಟ್ಟ
ಆಧುನಿಕ ಅರ್ಥದ ರಾಷ್ಟ್ರೀಯ ಚಳವಳಿಯಾಗಿರಲಿಲ್ಲ. ಆದಾಗ್ಯೂ, ಕಂಪನಿಯ ಆರಂಭಿಕ ವಸಾಹತುಶಾಹಿ ಆಳ್ವಿಕೆಗೆ ಸ್ಥಳೀಯ ಮಟ್ಟದಲ್ಲಿ ವ್ಯಕ್ತವಾದ ಪ್ರಮುಖ ಪ್ರತಿರೋಧವಾಗಿತ್ತು.
ಆ.
ಪಾಳೆಗಾರರ ದಂಗೆಗಳು
ಕಾಲ:
18ನೇ ಶತಮಾನದ ಅಂತ್ಯ ಮತ್ತು 19ನೇ ಶತಮಾನದ ಆರಂಭ
ಪ್ರದೇಶ:
ದಕ್ಷಿಣ ಭಾರತ, ವಿಶೇಷವಾಗಿ ತಮಿಳುನಾಡು
ದಕ್ಷಿಣ
ಭಾರತದ ಪಾಳೆಗಾರರು ಸ್ಥಳೀಯ ಕೋಟೆಗಳು, ಪ್ರದೇಶಗಳು ಮತ್ತು ಸೈನಿಕ ವ್ಯವಸ್ಥೆಗಳ ಮೇಲೆ ಪ್ರಭಾವ ಹೊಂದಿದ್ದರು.
ಇವರು ವಿಜಯನಗರ ಪತನಾನಂತರ ದಕ್ಷಿಣ ಭಾರತದಲ್ಲಿ
ತಮ್ಮ ಅಧಿಕಾರ ಸ್ಥಾಪಿಸಿಕೊಂಡಿದ್ದರು. ಈಸ್ಟ್ ಇಂಡಿಯಾ
ಕಂಪನಿಯು ಅವರ ಅಧಿಕಾರವನ್ನು ಕಡಿಮೆ
ಮಾಡಿ ಕಂದಾಯವನ್ನು ನೇರವಾಗಿ ನಿಯಂತ್ರಿಸಲು ಪ್ರಯತ್ನಿಸಿದಾಗ ಸಂಘರ್ಷ ಉಂಟಾಯಿತು.
ವೀರಪಾಂಡಿಯ
ಕಟ್ಟಬೊಮ್ಮನ್ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಪಾಳೆಗಾರರ ನಾಯಕರಲ್ಲಿ ಒಬ್ಬನು. 1799ರಲ್ಲಿ ಬ್ರಿಟಿಷರೊಂದಿಗೆ ಸಂಘರ್ಷದ ನಂತರ ಅವನನ್ನು ಬಂಧಿಸಿ
ಗಲ್ಲಿಗೇರಿಸಲಾಯಿತು.
ನಂತರವೂ
ದಕ್ಷಿಣ ಭಾರತದಲ್ಲಿ ಪಾಳೆಗಾರರ ಪ್ರತಿರೋಧ ಮುಂದುವರಿಯಿತು. ಈ ದಂಗೆಗಳು ಬ್ರಿಟಿಷರ
ಕಂದಾಯ ಮತ್ತು ರಾಜಕೀಯ ಹಸ್ತಕ್ಷೇಪದ ವಿರುದ್ಧದ ಪ್ರಾದೇಶಿಕ ಪ್ರತಿರೋಧವಾಗಿದ್ದವು.
ಇ.
ಪೈಕಾ ದಂಗೆ
ವರ್ಷ:
1817
ಪ್ರದೇಶ:
ಖುರ್ದಾ, ಒಡಿಶಾ
ಒಡಿಶಾದ
ಪೈಕರು ಸಾಂಪ್ರದಾಯಿಕವಾಗಿ ಸೈನಿಕ ಮತ್ತು ಭೂಸೇವಾ ವರ್ಗಕ್ಕೆ ಸೇರಿದವರಾಗಿದ್ದರು. ಬ್ರಿಟಿಷರ ಭೂ ಕಂದಾಯ ವ್ಯವಸ್ಥೆ,
ಆಡಳಿತಾತ್ಮಕ ಬದಲಾವಣೆಗಳು ಮತ್ತು ಅವರ ಸಾಂಪ್ರದಾಯಿಕ ಹಕ್ಕುಗಳ
ಕುಸಿತದಿಂದ ಅಸಮಾಧಾನ ಉಂಟಾಯಿತು.
ಬಕ್ಷಿ
ಜಗಬಂಧು ಅವರ ನೇತೃತ್ವದಲ್ಲಿ 1817ರಲ್ಲಿ
ಪೈಕರು ಬ್ರಿಟಿಷರ ವಿರುದ್ಧ ಬಂಡಾಯ ನಡೆಸಿದರು. ಬ್ರಿಟಿಷರ ಕಚೇರಿಗಳು ಮತ್ತು ಆಡಳಿತ ವ್ಯವಸ್ಥೆಯ ಮೇಲೆ ದಾಳಿಗಳು ನಡೆದವು.
ಈ ದಂಗೆ ಒಡಿಶಾದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತಕ್ಕೆ ನೀಡಿದ ಪ್ರಮುಖ ಸಶಸ್ತ್ರ ಪ್ರತಿರೋಧವಾಗಿತ್ತು.
ಈ.
ಕಿತ್ತೂರು ದಂಗೆ
ಕಾಲ:
1824
ಪ್ರದೇಶ:
ಕಿತ್ತೂರು, ಕರ್ನಾಟಕ
ಕರ್ನಾಟಕದ
ಇತಿಹಾಸದಲ್ಲಿ ಕಿತ್ತೂರು ದಂಗೆಗೆ ವಿಶೇಷ ಸ್ಥಾನವಿದೆ. ಕಿಟ್ಟೂರಿನ ಅರಸ ಮಲ್ಲಸರ್ಜನವರ ನಿಧನದ
ನಂತರ ಅವರ ದತ್ತು ಪುತ್ರ
ಶಿವಲಿಂಗಪ್ಪನನ್ನು ಉತ್ತರಾಧಿಕಾರಿಯನ್ನಾಗಿ ಪರಿಗಣಿಸುವ ಪ್ರಶ್ನೆಯಲ್ಲಿ ಬ್ರಿಟಿಷರೊಂದಿಗೆ ಸಂಘರ್ಷ ಉಂಟಾಯಿತು. ರಾಣಿ ಚೆನ್ನಮ್ಮ
ಬ್ರಿಟಿಷರ ವಿರುದ್ಧ ಸಶಸ್ತ್ರ ಪ್ರತಿರೋಧ ನಡೆಸಿದರು. ಬ್ರಿಟಿಷ್ ಪಡೆಗಳು ಕಿಟ್ಟೂರಿನ ಮೇಲೆ ದಾಳಿ ನಡೆಸಿದವು.
ಕಿಟ್ಟೂರಿನ ಸೈನಿಕರು ಪ್ರಬಲ ಪ್ರತಿರೋಧ ನೀಡಿದರು. ಬ್ರಿಟಿಷ್ ಅಧಿಕಾರಿ ಥಾಕರೇ ಯುದ್ಧದಲ್ಲಿ ಸಾವನ್ನಪ್ಪಿದನು. ನಂತರ ಬ್ರಿಟಿಷರು
ಹೆಚ್ಚಿನ ಸೇನೆಯನ್ನು ಕಳುಹಿಸಿ ಕಿಟ್ಟೂರನ್ನು ವಶಪಡಿಸಿಕೊಂಡರು. ರಾಣಿ ಚೆನ್ನಮ್ಮರನ್ನು ಬಂಧಿಸಿ
ಬೈಲಹೊಂಗಲದಲ್ಲಿ ಇರಿಸಲಾಯಿತು. ಅವರ ಹೋರಾಟ ಕರ್ನಾಟಕದಲ್ಲಿ
ಬ್ರಿಟಿಷ್ ವಿರೋಧಿ ಪ್ರತಿರೋಧದ ಪ್ರಮುಖ ಅಧ್ಯಾಯವಾಗಿದೆ.
ಉ.
ವಹಾಬಿ ಚಳವಳಿ
ಕಾಲ:
19ನೇ ಶತಮಾನದ ಮೊದಲಾರ್ಧ
ಪ್ರದೇಶ:
ಉತ್ತರ ಭಾರತ ಮತ್ತು ಭಾರತದ
ಇತರ ಕೆಲವು ಪ್ರದೇಶಗಳು
ವಹಾಬಿ
ಚಳವಳಿಯು ಮೂಲತಃ ಧಾರ್ಮಿಕ ಸುಧಾರಣಾ ಚಳವಳಿಯಾಗಿದ್ದರೂ, ಅದರ ಕೆಲವು ಗುಂಪುಗಳು
ಬ್ರಿಟಿಷರ ರಾಜಕೀಯ ಪ್ರಭುತ್ವಕ್ಕೆ ವಿರೋಧ ವ್ಯಕ್ತಪಡಿಸಿದವು. ಸಯ್ಯಿದ್ ಅಹ್ಮದ್
ಬರೇಲ್ವಿ ಈ ಚಳವಳಿಯ ಪ್ರಮುಖ
ನಾಯಕರಾಗಿದ್ದರು. ಬ್ರಿಟಿಷರ ಪ್ರಭಾವ ಮತ್ತು ಅವರೊಂದಿಗೆ ಸಂಬಂಧ ಹೊಂದಿದ್ದ ಕೆಲವು ಶಕ್ತಿಗಳ ವಿರುದ್ಧ ಪ್ರತಿರೋಧದ ಮನೋಭಾವ ಬೆಳೆಸುವಲ್ಲಿ ಈ ಚಳವಳಿಯ ಕೆಲವು
ಗುಂಪುಗಳು ಪಾತ್ರವಹಿಸಿದವು.
ಊ.
ಕೋಲರ ದಂಗೆ
ವರ್ಷ:
1831–32
ಪ್ರದೇಶ:
ಛೋಟಾನಾಗಪುರ
ಛೋಟಾನಾಗಪುರ
ಪ್ರದೇಶದ ಕೋಲ ಬುಡಕಟ್ಟು ಜನರು ತಮ್ಮ
ಸಾಂಪ್ರದಾಯಿಕ ಭೂ ಮತ್ತು ಸಾಮಾಜಿಕ
ವ್ಯವಸ್ಥೆಯಲ್ಲಿ ನಡೆದ ಬದಲಾವಣೆಗಳಿಗೆ ವಿರೋಧ
ವ್ಯಕ್ತಪಡಿಸಿದರು. ಹೊಸ ಭೂಮಾಲೀಕರು,
ಸಾಹುಕಾರರು ಮತ್ತು ಆಡಳಿತ ವ್ಯವಸ್ಥೆಯ ಹಸ್ತಕ್ಷೇಪದಿಂದ ಬುಡಕಟ್ಟು ಜನರ ಜೀವನದ ಮೇಲೆ
ಒತ್ತಡ ಹೆಚ್ಚಾಯಿತು. ಇದರ ಪರಿಣಾಮವಾಗಿ 1831–32ರಲ್ಲಿ ಕೋಲರ
ದಂಗೆ ಸಂಭವಿಸಿತು. ಬ್ರಿಟಿಷರು ಸೈನಿಕ ಶಕ್ತಿಯನ್ನು
ಬಳಸಿ ದಂಗೆಯನ್ನು ನಿಯಂತ್ರಿಸಿದರು.
ಋ.
ಸಂಥಾಲರ ದಂಗೆ
ಕಾಲ:
1855–56
ಪ್ರದೇಶ:
ರಾಜಮಹಲ್ ಬೆಟ್ಟಗಳ ಸುತ್ತಮುತ್ತಲಿನ ಪ್ರದೇಶ
1857ರ ಬಂಡಾಯಕ್ಕೆ
ಸ್ವಲ್ಪ ಮುಂಚೆ ನಡೆದ ಪ್ರಮುಖ ಬುಡಕಟ್ಟು
ದಂಗೆಗಳಲ್ಲಿ ಸಂಥಾಲರ ದಂಗೆಯು ಪ್ರಮುಖವಾಗಿದೆ. ಸಿಧು ಮತ್ತು
ಕಾನ್ಹು ಮುರ್ಮು ಅವರ ನೇತೃತ್ವದಲ್ಲಿ ಸಂಥಾಲರು
ಬ್ರಿಟಿಷ್ ಆಡಳಿತದೊಂದಿಗೆ ಸಂಬಂಧ ಹೊಂದಿದ್ದ ಜಮೀನ್ದಾರರು, ಸಾಹುಕಾರರು ಮತ್ತು ಇತರ ಶೋಷಕ ವ್ಯವಸ್ಥೆಗಳ
ವಿರುದ್ಧ ಬಂಡಾಯ ನಡೆಸಿದರು. ಅತಿಯಾದ ಸಾಲ,
ಭೂಮಿ ಕಳೆದುಕೊಳ್ಳುವಿಕೆ, ಕಂದಾಯ ಮತ್ತು ಆಡಳಿತಾತ್ಮಕ ಹಸ್ತಕ್ಷೇಪಗಳು ಅಸಮಾಧಾನದ ಪ್ರಮುಖ ಕಾರಣಗಳಾಗಿದ್ದವು. ಬ್ರಿಟಿಷರು ಸೈನಿಕ ಬಲದಿಂದ ದಂಗೆಯನ್ನು ದಮನಿಸಿದರು.
ಎ.
ಫರಾಝಿ ಚಳವಳಿ
ಕಾಲ:
19ನೇ ಶತಮಾನದ ಮೊದಲಾರ್ಧ
ಪ್ರದೇಶ:
ಪೂರ್ವ ಬಂಗಾಳ
ಹಾಜಿ
ಶರಿಯತುಲ್ಲಾ ಆರಂಭಿಸಿದ ಫರಾಝಿ ಚಳವಳಿಯು ಧಾರ್ಮಿಕ ಸುಧಾರಣೆಯ ಜೊತೆಗೆ ರೈತರ ಸಾಮಾಜಿಕ-ಆರ್ಥಿಕ
ಸಮಸ್ಯೆಗಳನ್ನೂ ಒಳಗೊಂಡಿತ್ತು. ನಂತರ ದುದು ಮಿಯಾನ್
ಅವರ ನೇತೃತ್ವದಲ್ಲಿ ಚಳವಳಿ ವಿಸ್ತರಿಸಿತು. ಜಮೀನ್ದಾರರು ಮತ್ತು ಬ್ರಿಟಿಷ್
ಆಡಳಿತದೊಂದಿಗೆ ಸಂಬಂಧ ಹೊಂದಿದ್ದ ಶೋಷಣಾತ್ಮಕ ವ್ಯವಸ್ಥೆಗಳ ವಿರುದ್ಧ ರೈತರ ಅಸಮಾಧಾನವನ್ನು ಇದು
ವ್ಯಕ್ತಪಡಿಸಿತು.
ಏ.
ಮೋಪ್ಲಾ ದಂಗೆಗಳು
ಪ್ರದೇಶ:
ಮಲಬಾರ್, ಕೇರಳ
ಕಾಲ:
19ನೇ ಶತಮಾನದ ಮೊದಲಾರ್ಧದಲ್ಲಿ ವಿವಿಧ ಸಂದರ್ಭಗಳಲ್ಲಿ
ಮಲಬಾರ್
ಪ್ರದೇಶದಲ್ಲಿ ಮೋಪ್ಲಾ ರೈತರು ಮತ್ತು ಸ್ಥಳೀಯ ಭೂಮಾಲೀಕರ ನಡುವಿನ ಸಂಘರ್ಷಗಳು ಹಲವು ಬಾರಿ ಸಂಭವಿಸಿದವು.
ಭೂಸಂಬಂಧಗಳು, ಕಂದಾಯ ಮತ್ತು ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಈ ಸಂಘರ್ಷಗಳಿಗೆ ಕಾರಣವಾಗಿದ್ದವು.
ಬ್ರಿಟಿಷ್ ಆಡಳಿತವು
ಸ್ಥಳೀಯ ಭೂ-ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಿದ ಪರಿಣಾಮ ಸಮಸ್ಯೆಗಳು ಮತ್ತಷ್ಟು ಸಂಕೀರ್ಣಗೊಂಡವು. 19ನೇ ಶತಮಾನದಾದ್ಯಂತ ಮಲಬಾರ್ನಲ್ಲಿ ಹಲವು ಮೋಪ್ಲಾ ಪ್ರತಿಭಟನೆಗಳು
ನಡೆದವು.
ಐ.
1806ರ ವೆಲ್ಲೂರು ಸಿಪಾಯಿ ದಂಗೆ
ವರ್ಷ:
1806
ಸ್ಥಳ:
ವೆಲ್ಲೂರು, ತಮಿಳುನಾಡು
ವೆಲ್ಲೂರು
ಸಿಪಾಯಿ ದಂಗೆಯು 1857ರ ಮೊದಲು ನಡೆದ
ಪ್ರಮುಖ ಸೈನಿಕ ದಂಗೆಗಳಲ್ಲಿ ಒಂದಾಗಿದೆ. ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರ ಉಡುಪು, ಧಾರ್ಮಿಕ ಆಚರಣೆ ಮತ್ತು ಸೇವಾ ನಿಯಮಗಳಿಗೆ ಸಂಬಂಧಿಸಿದ
ಹೊಸ ಆದೇಶಗಳು ಅಸಮಾಧಾನಕ್ಕೆ ಕಾರಣವಾದವು. 1806ರ
ಜುಲೈನಲ್ಲಿ ಭಾರತೀಯ ಸೈನಿಕರು ವೆಲ್ಲೂರು ಕೋಟೆಯಲ್ಲಿ ಬಂಡಾಯ ಎದ್ದರು. ಕೆಲವು ಬ್ರಿಟಿಷ್ ಅಧಿಕಾರಿಗಳು ಮತ್ತು ಸೈನಿಕರು ಕೊಲ್ಲಲ್ಪಟ್ಟರು. ನಂತರ ಬ್ರಿಟಿಷ್ ಪಡೆಗಳು
ದಂಗೆಯನ್ನು ತೀವ್ರವಾಗಿ ದಮನ ಮಾಡಿದವು. ವೆಲ್ಲೂರು ದಂಗೆಯು
ಭಾರತೀಯ ಸೈನಿಕರ ಅಸಮಾಧಾನವು ಸಂಘಟಿತ ಸಶಸ್ತ್ರ ಪ್ರತಿರೋಧಕ್ಕೆ ಹೇಗೆ ತಿರುಗಬಹುದು ಎಂಬುದನ್ನು
ತೋರಿಸಿತು.
5. ಪ್ರತಿಭಟನೆಗಳ
ಸ್ವರೂಪ: 1857ಕ್ಕೆ ಮೊದಲು ನಡೆದ
ಬ್ರಿಟಿಷ್ ವಿರೋಧಿ ಪ್ರತಿಭಟನೆಗಳನ್ನು ವಿಶ್ಲೇಷಿಸಿದಾಗ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಅವುಗಳೆಂದರೆ,
ಅ.
ಪ್ರಾದೇಶಿಕ ಸ್ವರೂಪ: ಹೆಚ್ಚಿನ ದಂಗೆಗಳು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿದ್ದವು.
ಆ.
ಸ್ಥಳೀಯ ನಾಯಕತ್ವ: ರಾಜರು, ರಾಣಿಯರು, ಜಮೀನ್ದಾರರು, ಸೈನಿಕರು ಅಥವಾ ಬುಡಕಟ್ಟು ನಾಯಕರು
ಪ್ರಮುಖ ಪಾತ್ರ ವಹಿಸಿದರು.
ಇ.
ಆರ್ಥಿಕ ಕಾರಣಗಳು: ಭೂಕಂದಾಯ, ಸಾಲ, ಭೂ ಕಳೆದುಕೊಳ್ಳುವಿಕೆ
ಮತ್ತು ವ್ಯಾಪಾರ ನೀತಿಗಳು ಪ್ರಮುಖ ಕಾರಣಗಳಾಗಿದ್ದವು.
ಈ.
ರಾಜಕೀಯ ಕಾರಣಗಳು: ಸ್ಥಳೀಯ ಸಂಸ್ಥಾನಗಳ ಅಧಿಕಾರವನ್ನು ಕಡಿಮೆ ಮಾಡುವ ಬ್ರಿಟಿಷರ ನೀತಿಗಳು ಪ್ರತಿರೋಧಕ್ಕೆ ಕಾರಣವಾದವು.
ಉ.
ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳು: ಕೆಲವು ಸಂದರ್ಭಗಳಲ್ಲಿ ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಿಟಿಷರ ಹಸ್ತಕ್ಷೇಪದ ಭಾವನೆ ಅಸಮಾಧಾನಕ್ಕೆ ಕಾರಣವಾಯಿತು.
ಊ.
ರಾಷ್ಟ್ರೀಯ ಏಕತೆಯ ಕೊರತೆ: ಈ ದಂಗೆಗಳು ಪರಸ್ಪರ
ಸಂಪರ್ಕ ಹೊಂದಿರಲಿಲ್ಲ. ಆದ್ದರಿಂದ ಅವುಗಳನ್ನು ಆಧುನಿಕ ಅರ್ಥದಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ
ಚಳವಳಿಗಳೆಂದು ಪರಿಗಣಿಸುವುದು ಸೂಕ್ತವಲ್ಲ.
ಋ.
ಸಶಸ್ತ್ರ ಪ್ರತಿರೋಧ: ಬಹುತೇಕ ದಂಗೆಗಳು ಸಶಸ್ತ್ರ ಸ್ವರೂಪ ಪಡೆದಿದ್ದವು ಮತ್ತು ಬ್ರಿಟಿಷರು ಸೈನಿಕ ಬಲದಿಂದ ಅವುಗಳನ್ನು ನಿಯಂತ್ರಿಸಿದರು.
6. 1857ರ ಬಂಡಾಯಕ್ಕೆ
ಈ ದಂಗೆಗಳ ಕೊಡುಗೆ
1857ರ ಮಹಾ
ಬಂಡಾಯವು ಏಕಾಏಕಿ ಸಂಭವಿಸಿದ ಘಟನೆ ಅಲ್ಲ. ಅದಕ್ಕೂ
ಮುನ್ನ ಹಲವು ದಶಕಗಳ ಕಾಲ
ವಿವಿಧ ಪ್ರದೇಶಗಳಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿತ್ತು. ವೆಲ್ಲೂರು ದಂಗೆಯು
ಸೈನಿಕರ ಅಸಮಾಧಾನವನ್ನು ತೋರಿಸಿತು. ಪೈಕಾ ಮತ್ತು ಕಿತ್ತೂರು
ದಂಗೆಗಳು ರಾಜಕೀಯ ಹಾಗೂ ಕಂದಾಯ ನೀತಿಗಳ
ವಿರುದ್ಧದ ಪ್ರತಿರೋಧವನ್ನು ಪ್ರತಿಬಿಂಬಿಸಿದವು. ಕೋಲರು ಮತ್ತು ಸಂಥಾಲರ ದಂಗೆಗಳು ಬುಡಕಟ್ಟು ಸಮಾಜದ ಮೇಲೆ ವಸಾಹತುಶಾಹಿ ಭೂ
ಮತ್ತು ಆಡಳಿತ ವ್ಯವಸ್ಥೆಯ ಪರಿಣಾಮವನ್ನು ತೋರಿಸಿದವು.
ಈ
ಎಲ್ಲಾ ದಂಗೆಗಳು 1857ರ ಬಂಡಾಯಕ್ಕೆ ನೇರವಾಗಿ
ಕಾರಣವಾದವು ಎಂದು ಹೇಳುವುದಕ್ಕಿಂತ, ಬ್ರಿಟಿಷ್
ಆಡಳಿತದ ವಿರುದ್ಧ ವಿವಿಧ ಸಾಮಾಜಿಕ ಗುಂಪುಗಳಲ್ಲಿ ಅಸಮಾಧಾನ ಮತ್ತು ಪ್ರತಿರೋಧದ ದೀರ್ಘ ಪರಂಪರೆ ಇತ್ತು ಎಂಬುದನ್ನು ತೋರಿಸುತ್ತವೆ.
7. ಉಪಸಂಹಾರ:
1857ಕ್ಕೆ ಮೊದಲು ಭಾರತದಲ್ಲಿ ನಡೆದ ಬ್ರಿಟಿಷ್ ವಿರೋಧಿ
ಪ್ರತಿಭಟನೆಗಳು ಭಾರತದ ವಸಾಹತುಶಾಹಿ ಇತಿಹಾಸದ ಪ್ರಮುಖ ಭಾಗವಾಗಿವೆ. ಸನ್ಯಾಸಿ–ಫಕೀರ್ ಚಳವಳಿಯಿಂದ ಹಿಡಿದು ವೆಲ್ಲೂರು ಸಿಪಾಯಿ ದಂಗೆ, ಪೈಕಾ ದಂಗೆ, ಕಿತ್ತೂರು
ದಂಗೆ, ಕೋಲರ ದಂಗೆ ಮತ್ತು
ಸಂಥಾಲರ ದಂಗೆಯವರೆಗೆ ವಿವಿಧ ಸಮುದಾಯಗಳು ಬ್ರಿಟಿಷರ ಆಡಳಿತದಿಂದ ಉಂಟಾದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಭೂಸಂಬಂಧಿತ ಬದಲಾವಣೆಗಳಿಗೆ ಪ್ರತಿಕ್ರಿಯಿಸಿದವು. ಈ ದಂಗೆಗಳು
ಬಹುತೇಕ ಸ್ಥಳೀಯ ಮತ್ತು ಪ್ರಾದೇಶಿಕವಾಗಿದ್ದರೂ, ಅವು ಬ್ರಿಟಿಷರ ವಸಾಹತುಶಾಹಿ
ಆಡಳಿತವು ಎಲ್ಲೆಡೆ ಸಮಾನವಾಗಿ ಸ್ವೀಕರಿಸಲ್ಪಟ್ಟಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸ್ಥಳೀಯ ರಾಜರು, ರೈತರು, ಸೈನಿಕರು, ಬುಡಕಟ್ಟು ಜನರು ಮತ್ತು ಇತರ
ಸಮುದಾಯಗಳು ತಮ್ಮ ಹಕ್ಕುಗಳು, ಭೂಮಿ,
ಅಧಿಕಾರ ಮತ್ತು ಜೀವನಕ್ರಮವನ್ನು ರಕ್ಷಿಸಲು ವಿವಿಧ ರೀತಿಯಲ್ಲಿ ಪ್ರತಿರೋಧಿಸಿದರು. ಆದ್ದರಿಂದ, 1857ರ ಬಂಡಾಯವನ್ನು
ಅರ್ಥಮಾಡಿಕೊಳ್ಳಲು ಅದರ ಪೂರ್ವಭಾವಿಯಾಗಿ ನಡೆದ
ಈ ಸ್ಥಳೀಯ ಮತ್ತು ಪ್ರಾದೇಶಿಕ ಪ್ರತಿಭಟನೆಗಳ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ಇವುಗಳು ಭಾರತೀಯ ಸಮಾಜದಲ್ಲಿ ಬೆಳೆಯುತ್ತಿದ್ದ ಬ್ರಿಟಿಷ್ ವಿರೋಧಿ ಅಸಮಾಧಾನದ ವಿವಿಧ ಮುಖಗಳನ್ನು ಪರಿಚಯಿಸುತ್ತವೆ.
8. ಪರಾಮರ್ಶನ
ಗ್ರಂಥಗಳು
1. Bipan Chandra, India’s
Struggle for Independence. New Delhi: Penguin.
2. R. C. Majumdar, History of the
Freedom Movement in India, Vol. I. Calcutta: Firma K. L. Mukhopadhyay.
3. Sekhar Bandyopadhyay, From
Plassey to Partition and After: A History of Modern India. New Delhi: Orient
BlackSwan.
4. Sumit Sarkar, Modern India,
1885–1947. New Delhi: Macmillan.
5. S. N. Sen, Eighteen
Fifty-Seven. New Delhi: Publications Division, Government of India.
6. P. E. Roberts, History of
British India. Oxford University Press.
7. B. L. Grover and Alka Mehta, A
New Look at Modern Indian History. New Delhi: S. Chand.
8. K. V. P. Rao, History of
Modern India. ವಿವಿಧ ಆವೃತ್ತಿಗಳು.
******************************
Comments
Post a Comment