ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧ (1878–1880)

1. ಪೀಠಿಕೆ: 19ನೇ ಶತಮಾನದಲ್ಲಿ ಏಷ್ಯಾ ಖಂಡದಲ್ಲಿ ಪ್ರಭಾವ ಮತ್ತು ಅಧಿಕಾರವನ್ನು ವಿಸ್ತರಿಸಲು ಯುರೋಪಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿತ್ತು. ವಿಶೇಷವಾಗಿ ಮಧ್ಯ ಏಷ್ಯಾದಲ್ಲಿ ರಷ್ಯಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರೆ, ಬ್ರಿಟನ್ ಭಾರತದಲ್ಲಿನ ತನ್ನ ವಸಾಹತುಶಾಹಿ ಆಡಳಿತವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಈ ಎರಡು ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ರಾಜಕೀಯ ಮತ್ತು ರಾಜತಾಂತ್ರಿಕ ಪೈಪೋಟಿಯನ್ನು ಮಹಾ ಆಟ (The Great Game)  ಎಂದು ಕರೆಯಲಾಗುತ್ತದೆ.  ಭಾರತದ ವಾಯವ್ಯ ಗಡಿಯಲ್ಲಿ ನೆಲೆಗೊಂಡಿದ್ದ ಆಫ್ಘಾನಿಸ್ತಾನವು ಬ್ರಿಟಿಷ್ ಭಾರತ ಮತ್ತು ರಷ್ಯಾದ ಪ್ರಭಾವ ವಲಯಗಳ ನಡುವಿನ ಪ್ರಮುಖ ಭೌಗೋಳಿಕ ಪ್ರದೇಶವಾಗಿತ್ತು. ಆದ್ದರಿಂದ ಆಫ್ಘಾನಿಸ್ತಾನದ ಮೇಲೆ ತನ್ನ ಪ್ರಭಾವವನ್ನು ಸ್ಥಾಪಿಸುವುದು ಬ್ರಿಟಿಷರಿಗೆ ಅತ್ಯಂತ ಮುಖ್ಯವಾಗಿತ್ತು. ಮತ್ತೊಂದೆಡೆ, ರಷ್ಯಾದ ಮಧ್ಯ ಏಷ್ಯಾದ ವಿಸ್ತರಣೆಯನ್ನು ತಡೆಯುವುದು ಬ್ರಿಟಿಷರ ಪ್ರಮುಖ ಉದ್ದೇಶವಾಗಿತ್ತು.  ಈ ಹಿನ್ನೆಲೆಯಲ್ಲಿ ಬ್ರಿಟಿಷರು 1878ರಲ್ಲಿ ಆಫ್ಘಾನಿಸ್ತಾನದ ಮೇಲೆ ಎರಡನೇ ಬಾರಿಗೆ ಯುದ್ಧ ಸಾರಿದರು. ಈ ಯುದ್ಧವು 1878ರಲ್ಲಿ ಆರಂಭವಾಗಿ 1880ರವರೆಗೆ ಪ್ರಮುಖ ಸೈನಿಕ ಕಾರ್ಯಾಚರಣೆಗಳ ರೂಪದಲ್ಲಿ ಮುಂದುವರಿಯಿತು. ಕೆಲವು ಬ್ರಿಟಿಷ್ ಸೇನೆಗಳು 1881ರ ಏಪ್ರಿಲ್‌ವರೆಗೆ ಆಫ್ಘಾನಿಸ್ತಾನದಲ್ಲೇ ಉಳಿದಿದ್ದವು.  ಈ ಯುದ್ಧವು ಆಫ್ಘಾನಿಸ್ತಾನದ ರಾಜಕೀಯ ಸ್ವಾತಂತ್ರ್ಯ, ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿ ಮತ್ತು ರಷ್ಯಾ-ಬ್ರಿಟನ್ ನಡುವಿನ ಮಧ್ಯ ಏಷ್ಯಾದ ಪೈಪೋಟಿಯ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ.

2. ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧದ ಹಿನ್ನೆಲೆ

2.1 ಆಫ್ಘಾನಿಸ್ತಾನದ ಭೌಗೋಳಿಕ ಮತ್ತು ರಾಜಕೀಯ ಮಹತ್ವ

ಆಫ್ಘಾನಿಸ್ತಾನವು ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾಗಳನ್ನು ಸಂಪರ್ಕಿಸುವ ಪ್ರಮುಖ ಭೌಗೋಳಿಕ ಪ್ರದೇಶವಾಗಿದೆ. ಇದರ ಪೂರ್ವದಲ್ಲಿ ಬ್ರಿಟಿಷ್ ಭಾರತ, ಉತ್ತರದಲ್ಲಿ ರಷ್ಯಾದ ಪ್ರಭಾವಕ್ಕೆ ಒಳಗಾಗುತ್ತಿದ್ದ ಮಧ್ಯ ಏಷ್ಯಾದ ಪ್ರದೇಶಗಳು, ಪಶ್ಚಿಮದಲ್ಲಿ ಪರ್ಷಿಯಾ ಮತ್ತು ದಕ್ಷಿಣದಲ್ಲಿ ಬಲೂಚಿಸ್ತಾನ ಪ್ರದೇಶಗಳಿದ್ದವು.

ಬ್ರಿಟಿಷರಿಗೆ ಆಫ್ಘಾನಿಸ್ತಾನವು ಭಾರತವನ್ನು ರಷ್ಯಾದ ಸಂಭವನೀಯ ಆಕ್ರಮಣದಿಂದ ರಕ್ಷಿಸುವ ತಡೆರಾಜ್ಯವಾಗಿತ್ತು. ರಷ್ಯನ್ನರು ಆಫ್ಘಾನಿಸ್ತಾನದ ಮೇಲೆ ಪ್ರಭಾವ ಸಾಧಿಸಿದರೆ ಭಾರತದ ವಾಯವ್ಯ ಗಡಿಗೆ ಅಪಾಯ ಉಂಟಾಗಬಹುದೆಂದು ಬ್ರಿಟಿಷರು ಭಾವಿಸಿದ್ದರು.

2.2 ಮಹಾ ಆಟ (The Great Game)

19ನೇ ಶತಮಾನದ ಮಧ್ಯಭಾಗದಿಂದ ರಷ್ಯಾ ಮಧ್ಯ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸತೊಡಗಿತು. ಬುಖಾರಾ, ಖೀವಾ ಮತ್ತು ಕೊಕಾಂಡ್ ಮುಂತಾದ ಮಧ್ಯ ಏಷ್ಯಾದ ಪ್ರದೇಶಗಳು ರಷ್ಯಾದ ಪ್ರಭಾವ ಅಥವಾ ನಿಯಂತ್ರಣಕ್ಕೆ ಒಳಪಟ್ಟವು.  ಇದರಿಂದ ಬ್ರಿಟಿಷರು ಆತಂಕಗೊಂಡರು. ರಷ್ಯಾದ ಸೇನೆಗಳು ಆಫ್ಘಾನಿಸ್ತಾನದ ಮೂಲಕ ಭಾರತದ ಗಡಿಯನ್ನು ತಲುಪಬಹುದು ಎಂಬ ಭಯ ಬ್ರಿಟಿಷ್ ಆಡಳಿತಗಾರರಲ್ಲಿತ್ತು.  ಈ ಪೈಪೋಟಿಯಲ್ಲಿ ಎರಡು ಪ್ರಮುಖ ಉದ್ದೇಶಗಳಿದ್ದವು. ಅವುಗಳೆಂದರೆ:

1. ಬ್ರಿಟನ್: ಭಾರತದಲ್ಲಿನ ತನ್ನ ವಸಾಹತುಶಾಹಿ ಆಡಳಿತವನ್ನು ರಕ್ಷಿಸುವುದು ಮತ್ತು ಆಫ್ಘಾನಿಸ್ತಾನವನ್ನು ತನ್ನ ಪ್ರಭಾವದ ಅಡಿಯಲ್ಲಿ ಇಟ್ಟುಕೊಳ್ಳುವುದು.

2. ರಷ್ಯಾ: ಮಧ್ಯ ಏಷ್ಯಾದಲ್ಲಿ ತನ್ನ ರಾಜಕೀಯ ಮತ್ತು ಸೈನಿಕ ಪ್ರಭಾವವನ್ನು ವಿಸ್ತರಿಸುವುದು.

ಹೀಗೆ ಆಫ್ಘಾನಿಸ್ತಾನವು ಬ್ರಿಟನ್ ಮತ್ತು ರಷ್ಯಾಗಳ ನಡುವಿನ ರಾಜತಾಂತ್ರಿಕ ಪೈಪೋಟಿಯ ಕೇಂದ್ರಬಿಂದುವಾಯಿತು.

2.3 ಮೊದಲನೆಯ ಆಂಗ್ಲೊ-ಆಫ್ಘನ್ ಯುದ್ಧದ ಪರಿಣಾಮ

1839ರಿಂದ 1842ರವರೆಗೆ ನಡೆದ ಮೊದಲನೆಯ ಆಂಗ್ಲೊ-ಆಫ್ಘನ್ ಯುದ್ಧದಲ್ಲಿ ಬ್ರಿಟಿಷರು ತೀವ್ರ ಹಿನ್ನಡೆ ಅನುಭವಿಸಿದ್ದರು. ಆಗ ಆಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಉಂಟಾಗುವ ಅಪಾಯವನ್ನು ಬ್ರಿಟಿಷರು ಅನುಭವಿಸಿದ್ದರು.  ಆದರೆ 1870ರ ದಶಕದಲ್ಲಿ ರಷ್ಯಾದ ಪ್ರಭಾವ ಹೆಚ್ಚಾದಂತೆ ಬ್ರಿಟಿಷರು ಮತ್ತೆ ಆಫ್ಘಾನಿಸ್ತಾನದ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಮುಂದಾದರು.

3. ಯುದ್ಧದ ಕಾಲದ ಪ್ರಮುಖ ಆಡಳಿತಗಾರರು

ಅ. ಶೇರ್ ಅಲಿ ಖಾನ್ (Sher Ali Khan): ಇವನು ಆಫ್ಘಾನಿಸ್ತಾನದ ಅಮೀರ್ (1863-1866 ಮತ್ತು 1868-1879) ಆಗಿದ್ದನು. ರಷ್ಯಾ ಮತ್ತು ಬ್ರಿಟನ್ ನಡುವಿನ ಪೈಪೋಟಿಯಲ್ಲಿ ಆಫ್ಘಾನಿಸ್ತಾನದ ಸ್ವತಂತ್ರ ಸ್ಥಾನಮಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು.

ಆ. ಲಾರ್ಡ್ ಲಿಟ್ಟನ್ (Lord Lytton): ಇವನು 1876ರಿಂದ 1880ರವರೆಗೆ ಭಾರತದ ವೈಸರಾಯ್ ಆಗಿದ್ದನು. ಆಫ್ಘಾನಿಸ್ತಾನದ ಮೇಲೆ ಬ್ರಿಟಿಷರ ಪ್ರಭಾವವನ್ನು ಸ್ಥಾಪಿಸಲು ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಅನುಸರಿಸಿದನು.

ಇ. ಜನರಲ್ ಫ್ರೆಡರಿಕ್ ರಾಬರ್ಟ್ಸ್ (Frederick Roberts): ಇವನು ಬ್ರಿಟಿಷ್ ಸೇನೆಯ ಪ್ರಮುಖ ಸೇನಾಧಿಕಾರಿ. ಕಾಬೂಲ್ ಮತ್ತು ಕಂದಹಾರ್‌ನ ಸೈನಿಕ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.

ಈ. ಯಾಕೂಬ್ ಖಾನ್ (Yakub Khan): ಇವನು ಶೇರ್ ಅಲಿ ಖಾನ್‌ನ ಮಗ. ತಂದೆಯ ಮರಣದ ನಂತರ ಆಫ್ಘಾನಿಸ್ತಾನದ ಅಮೀರ್ ಆಗಿ ಅಧಿಕಾರ ವಹಿಸಿಕೊಂಡು 1879ರಲ್ಲಿ ಗಂಡಮಕ್ ಒಪ್ಪಂದಕ್ಕೆ ಸಹಿ ಹಾಕಿದನು.

ಉ. ಅಬ್ದುರ್ ರಹಮಾನ್ ಖಾನ್ (Abdur Rahman Khan) ಇವನು 1880ರಲ್ಲಿ ಆಫ್ಘಾನಿಸ್ತಾನದ ಅಮೀರ್ ಆಗಿ ಅಧಿಕಾರಕ್ಕೆ ಬಂದನು. ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ದೇಶದ ಆಂತರಿಕ ಆಡಳಿತವನ್ನು ಬಲಪಡಿಸಿದನು.

4. ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧಕ್ಕೆ ಕಾರಣಗಳು

4.1 ಮಧ್ಯ ಏಷ್ಯಾದಲ್ಲಿ ರಷ್ಯಾದ ವಿಸ್ತರಣೆ

ರಷ್ಯಾ ಮಧ್ಯ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದದ್ದು ಬ್ರಿಟಿಷರ ಆತಂಕಕ್ಕೆ ಪ್ರಮುಖ ಕಾರಣವಾಗಿತ್ತು. ರಷ್ಯಾದ ಪ್ರಭಾವವು ಆಫ್ಘಾನಿಸ್ತಾನಕ್ಕೆ ವಿಸ್ತರಿಸಿದರೆ ಅದು ಭಾರತದ ಭದ್ರತೆಗೆ ಅಪಾಯಕಾರಿಯಾಗಬಹುದು ಎಂದು ಬ್ರಿಟಿಷರು ಭಾವಿಸಿದರು.

4.2 ರಷ್ಯಾದ ರಾಜತಾಂತ್ರಿಕ ನಿಯೋಗದ ಕಾಬೂಲ್ ಪ್ರವೇಶ

1878ರ ಜುಲೈ 22ರಂದು ಜನರಲ್ ಸ್ಟೊಲೆಟೋವ್ (General Stolyetov) ನೇತೃತ್ವದ ರಷ್ಯಾದ ರಾಜತಾಂತ್ರಿಕ ನಿಯೋಗವು ಕಾಬೂಲ್‌ಗೆ ಆಗಮಿಸಿತು. ಆಫ್ಘಾನಿಸ್ತಾನದ ಅಮೀರ್ ಶೇರ್ ಅಲಿ ಖಾನ್ ಇದಕ್ಕೆ ಅವಕಾಶ ನೀಡಿದ್ದನು.  ರಷ್ಯಾದ ನಿಯೋಗದ ಆಗಮನದಿಂದ ಬ್ರಿಟಿಷರು ಆತಂಕಗೊಂಡರು. ರಷ್ಯಾ ಆಫ್ಘಾನಿಸ್ತಾನದಲ್ಲಿ ರಾಜಕೀಯ ಪ್ರಭಾವ ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಭಾವಿಸಿದರು.

4.3 ಬ್ರಿಟಿಷ್ ರಾಜತಾಂತ್ರಿಕ ನಿಯೋಗಕ್ಕೆ ನಿರಾಕರಣೆ

ಅಫ್ಘನ್ನರು ರಷ್ಯಾದ ನಿಯೋಗಕ್ಕೆ ಸ್ವಾಗತ ನೀಡಿದ ನಂತರ ಬ್ರಿಟಿಷರು ಕೂಡ ತಮ್ಮ ರಾಜತಾಂತ್ರಿಕ ನಿಯೋಗವನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದರು.  ಲಾರ್ಡ್ ಲಿಟ್ಟನ್ ಬ್ರಿಟಿಷ್ ನಿಯೋಗವನ್ನು ಕಾಬೂಲ್‌ಗೆ ಕಳುಹಿಸಲು ಪ್ರಯತ್ನಿಸಿದನು. ಆದರೆ 1878ರ ಸೆಪ್ಟೆಂಬರ್ 21ರಂದು ಅಲಿ ಮಸೀದ್ (Ali Masjid) ಎಂಬ ಖೈಬರ್ ಕಣಿವೆಯ ಪ್ರವೇಶದ್ವಾರದಲ್ಲಿ ಆಫ್ಘನ್ ಅಧಿಕಾರಿಗಳು ಬ್ರಿಟಿಷ್ ನಿಯೋಗವನ್ನು ತಡೆದರು.  ಇದನ್ನು ಬ್ರಿಟಿಷರು ತಮ್ಮ ಅವಮಾನವೆಂದು ಪರಿಗಣಿಸಿದರು. ಶೇರ್ ಅಲಿ ಖಾನ್ ಕ್ಷಮೆಯಾಚಿಸಬೇಕು ಮತ್ತು ಬ್ರಿಟಿಷ್ ನಿಯೋಗಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

4.4 ಲಾರ್ಡ್ ಲಿಟ್ಟನ್‌ನ ಆಕ್ರಮಣಕಾರಿ ನೀತಿ

ಲಾರ್ಡ್ ಲಿಟ್ಟನ್ ಆಫ್ಘಾನಿಸ್ತಾನದ ಮೇಲೆ ಬ್ರಿಟಿಷರ ಪ್ರಭಾವವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದನು. ಶೇರ್ ಅಲಿ ಖಾನ್ ಬ್ರಿಟಿಷರ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದಾಗ ಅವನ ವಿರುದ್ಧ ಸೈನಿಕ ಕ್ರಮ ಕೈಗೊಳ್ಳಲು ನಿರ್ಧರಿಸಿದನು.

4.5 ಭಾರತದ ವಾಯವ್ಯ ಗಡಿಯ ಭದ್ರತೆ

ಭಾರತವು ಬ್ರಿಟಿಷರ ಸಾಮ್ರಾಜ್ಯದ ಅತ್ಯಂತ ಪ್ರಮುಖ ವಸಾಹತಾಗಿತ್ತು. ಭಾರತದ ವಾಯವ್ಯ ಗಡಿಯಲ್ಲಿ ರಷ್ಯಾದ ಪ್ರಭಾವ ಹೆಚ್ಚಾಗುವುದನ್ನು ತಡೆಯಲು ಆಫ್ಘಾನಿಸ್ತಾನವನ್ನು ತಮ್ಮ ಪ್ರಭಾವದ ಅಡಿಯಲ್ಲಿ ಇಟ್ಟುಕೊಳ್ಳಬೇಕೆಂದು ಬ್ರಿಟಿಷರು ಬಯಸಿದರು.  ಹೀಗಾಗಿ ರಾಜತಾಂತ್ರಿಕ ಭಿನ್ನಾಭಿಪ್ರಾಯವು ಕ್ರಮೇಣ ಸೈನಿಕ ಸಂಘರ್ಷವಾಗಿ ಪರಿವರ್ತನೆಯಾಯಿತು.

5. ಯುದ್ಧದ ಆರಂಭ ಮತ್ತು ಪ್ರಮುಖ ಘಟನೆಗಳು (1878-1879)

5.1 ಬ್ರಿಟಿಷರ ಆಫ್ಘಾನಿಸ್ತಾನದ ಮೇಲಿನ ಆಕ್ರಮಣ

1878ರ ನವೆಂಬರ್ 21ರಂದು ಬ್ರಿಟಿಷರು ಆಫ್ಘಾನಿಸ್ತಾನದ ವಿರುದ್ಧ ಯುದ್ಧ ಘೋಷಿಸಿದರು. ಸುಮಾರು 40,000 ಸೈನಿಕರನ್ನು ಒಳಗೊಂಡ ಬ್ರಿಟಿಷ್-ಭಾರತೀಯ ಸೇನೆಯು ಮೂರು ಪ್ರಮುಖ ವಿಭಾಗಗಳಾಗಿ ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿತು.  ಅವುಗಳೆಂದರೆ:

1. ಖೈಬರ್ ಕಣಿವೆಯ ಮಾರ್ಗವಾಗಿ ಮುನ್ನಡೆದ ಸೇನೆ.

2. ಕುರ್ರಂ ಕಣಿವೆಯ ಮಾರ್ಗವಾಗಿ ಮುನ್ನಡೆದ ಸೇನೆ.

3. ಬೋಲನ್ ಕಣಿವೆಯ ಮಾರ್ಗವಾಗಿ ಕಂದಹಾರ್ ಕಡೆಗೆ ಮುನ್ನಡೆದ ಸೇನೆ.

ಹೀಗೆ ಮುಂದುವರಿದ ಬ್ರಿಟಿಷ್ ಪಡೆಗಳು ಆಫ್ಘಾನಿಸ್ತಾನದ ಪ್ರಮುಖ ಗಡಿ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು.

5.2 ಅಲಿ ಮಸೀದ್ ಕದನ (Battle of Ali Masjid)

1878ರ ನವೆಂಬರ್‌ನಲ್ಲಿ ಬ್ರಿಟಿಷ್ ಸೇನೆಯು ಖೈಬರ್ ಕಣಿವೆಯಲ್ಲಿರುವ ಅಲಿ ಮಸೀದ್ ಕೋಟೆಯ ಮೇಲೆ ದಾಳಿ ನಡೆಸಿತು. ಈ ಕೋಟೆಯು ಭಾರತದ ವಾಯವ್ಯ ಗಡಿಯ ರಕ್ಷಣೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿತ್ತು.  ಬ್ರಿಟಿಷ್ ಸೇನೆಯ ಈ ದಾಳಿಯನ್ನು ಎದುರಿಸಲು ಆಫ್ಘನ್ ಸೇನೆಯು ಪ್ರಯತ್ನಿಸಿತು. ಆದರೆ ಬ್ರಿಟಿಷರ ಉತ್ತಮ ಶಸ್ತ್ರಾಸ್ತ್ರ ಮತ್ತು ಸೈನಿಕ ಸಂಘಟನೆಯ ಎದುರು ಆಫ್ಘನ್ ಸೇನೆ ಹಿಮ್ಮೆಟ್ಟಿತು. ಇದರಿಂದ ಬ್ರಿಟಿಷರಿಗೆ ಖೈಬರ್ ಕಣಿವೆಯ ಮೂಲಕ ಆಫ್ಘಾನಿಸ್ತಾನದ ಒಳಭಾಗಕ್ಕೆ ಪ್ರವೇಶಿಸಲು ಅನುಕೂಲವಾಯಿತು.

5.3 ಪೇವಾರ್ ಕೋಟಲ್ ಕದನ (Battle of Peiwar Kotal)

1878ರ ಡಿಸೆಂಬರ್‌ನಲ್ಲಿ ಕುರ್ರಂ ಕಣಿವೆಯ ಪ್ರದೇಶದಲ್ಲಿ ಪೇವಾರ್ ಕೋಟಲ್ ಎಂಬ ಸ್ಥಳದಲ್ಲಿ ಬ್ರಿಟಿಷ್ ಮತ್ತು ಆಫ್ಘನ್ ಸೇನೆಗಳ ನಡುವೆ ಪ್ರಮುಖ ಕದನ ನಡೆಯಿತು.  ಬ್ರಿಟಿಷ್ ಸೇನಾಧಿಕಾರಿ ಜನರಲ್ ಫ್ರೆಡರಿಕ್ ರಾಬರ್ಟ್ಸ್ ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದನು. ಆಫ್ಘನ್ ಸೇನೆಯು ಪರ್ವತ ಪ್ರದೇಶದ ಅನುಕೂಲವನ್ನು ಬಳಸಿಕೊಂಡು ಪ್ರತಿರೋಧ ತೋರಿಸಿತು. ಆದರೆ ರಾಬರ್ಟ್ಸ್ ರಾತ್ರಿ ವೇಳೆ ಪಾರ್ಶ್ವ ದಾಳಿಯ ತಂತ್ರವನ್ನು ಅನುಸರಿಸಿ ಆಫ್ಘನ್ ಸೇನೆಯನ್ನು ಸೋಲಿಸಿದನು.  ಈ ವಿಜಯದಿಂದ ಬ್ರಿಟಿಷರು ಆಫ್ಘಾನಿಸ್ತಾನದ ಒಳಭಾಗಕ್ಕೆ ಮುನ್ನಡೆಯಲು ಸಾಧ್ಯವಾಯಿತು.

5.4 ಶೇರ್ ಅಲಿ ಖಾನ್‌ನ ಮರಣ

ಬ್ರಿಟಿಷರ ಸೈನಿಕ ಆಕ್ರಮಣದಿಂದ ಶೇರ್ ಅಲಿ ಖಾನ್ ತೀವ್ರ ಸಂಕಷ್ಟಕ್ಕೆ ಸಿಲುಕಿದನು. ರಷ್ಯಾದಿಂದ ಸಹಾಯ ಪಡೆಯುವ ನಿರೀಕ್ಷೆಯೊಂದಿಗೆ ಕಾಬೂಲ್ ತೊರೆದು ಉತ್ತರ ಆಫ್ಘಾನಿಸ್ತಾನದ ಕಡೆಗೆ ಪ್ರಯಾಣಿಸಿದನು.  ಆದರೆ ರಷ್ಯಾದಿಂದ ನಿರೀಕ್ಷಿತ ನೆರವು ದೊರೆಯಲಿಲ್ಲ. 1879ರ ಫೆಬ್ರವರಿ 21ರಂದು ಮಜಾರ್-ಇ-ಶರೀಫ್ ಸಮೀಪ ಶೇರ್ ಅಲಿ ಖಾನ್ ಮರಣ ಹೊಂದಿದನು.  ಅವನ ಮರಣದ ನಂತರ ಅವನ ಮಗ ಯಾಕೂಬ್ ಖಾನ್ ಆಫ್ಘಾನಿಸ್ತಾನದ ಅಮೀರ್ ಆಗಿ ಅಧಿಕಾರ ವಹಿಸಿಕೊಂಡನು.

6. ಗಂಡಮಕ್ ಒಪ್ಪಂದ (Treaty of Gandamak - 1879)

ಬ್ರಿಟಿಷರ ಸೈನಿಕ ಒತ್ತಡ ಮತ್ತು ಆಫ್ಘಾನಿಸ್ತಾನದ ದುರ್ಬಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಸ ಆಡಳಿತಗಾರ ಯಾಕೂಬ್ ಖಾನ್ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿದನು.  1879ರ ಮೇ 26ರಂದು ಬ್ರಿಟಿಷ್ ಪ್ರತಿನಿಧಿ ಮೇಜರ್ ಲೂಯಿಸ್ ಕವಗ್ನರಿ (Major Louis Cavagnari) ಮತ್ತು ಯಾಕೂಬ್ ಖಾನ್ ನಡುವೆ ಗಂಡಮಕ್ ಎಂಬ ಸ್ಥಳದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.  ಈ ಒಪ್ಪಂದವು ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧದ ಮೊದಲ ಹಂತದ ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಾಗಿತ್ತು.

6.1 ಒಪ್ಪಂದದ ಪ್ರಮುಖ ಷರತ್ತುಗಳು

A. ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಮೇಲಿನ ನಿಯಂತ್ರಣವನ್ನು ಬ್ರಿಟಿಷರಿಗೆ ಬಿಟ್ಟುಕೊಡಲಾಯಿತು.

B. ಕಾಬೂಲ್‌ನಲ್ಲಿ ಬ್ರಿಟಿಷ್ ರಾಜತಾಂತ್ರಿಕ ಪ್ರತಿನಿಧಿಯನ್ನು ಶಾಶ್ವತವಾಗಿ ಇರಿಸಲು ಯಾಕೂಬ್ ಖಾನ್ ಒಪ್ಪಿಕೊಂಡನು.

C. ಖೈಬರ್ ಮತ್ತು ಮಿಚ್ನಿ ಕಣಿವೆಗಳ ಮೇಲಿನ ನಿಯಂತ್ರಣ ಬ್ರಿಟಿಷರಿಗೆ ವರ್ಗಾವಣೆಯಾಯಿತು.

D. ಕುರ್ರಂ ಮತ್ತು ಪಿಷಿನ್ ಕಣಿವೆಗಳು ಹಾಗೂ ಸಿಬಿ ಪ್ರದೇಶಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಬ್ರಿಟಿಷರಿಗೆ ನೀಡಲಾಯಿತು.

E. ಆಫ್ಘಾನಿಸ್ತಾನಕ್ಕೆ ಬ್ರಿಟಿಷರು ವಾರ್ಷಿಕ 6 ಲಕ್ಷ ರೂಪಾಯಿ ಸಹಾಯಧನ ನೀಡಲು ಒಪ್ಪಿಕೊಂಡರು.

F. ಆಫ್ಘಾನಿಸ್ತಾನದ ಮೇಲೆ ಬಾಹ್ಯ ಆಕ್ರಮಣ ಸಂಭವಿಸಿದರೆ ನೆರವು ನೀಡುವುದಾಗಿ ಬ್ರಿಟಿಷರು ಯಾಕೂದ್‌ ಖಾನನಿಗೆ ಭರವಸೆ ನೀಡಿದರು.

G. ಆಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತದ ನಡುವೆ ದೂರಸಂಪರ್ಕ ಹಾಗೂ ವ್ಯಾಪಾರ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಲಾಯಿತು.

6.2 ಒಪ್ಪಂದದ ಮಹತ್ವ

ಗಂಡಮಕ್ ಒಪ್ಪಂದದಿಂದ ಆಫ್ಘಾನಿಸ್ತಾನದ ವಿದೇಶಾಂಗ ನೀತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಯಿತು. ದೇಶದ ಪ್ರಮುಖ ಗಡಿ ಪ್ರದೇಶಗಳ ಮೇಲೆ ಬ್ರಿಟಿಷರ ನಿಯಂತ್ರಣ ಹೆಚ್ಚಾಯಿತು.  ಈ ಒಪ್ಪಂದವು ಬ್ರಿಟಿಷರಿಗೆ ಆಫ್ಘಾನಿಸ್ತಾನದ ರಾಜಕೀಯ ವ್ಯವಹಾರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲು ಅವಕಾಶ ಕಲ್ಪಿಸಿತು. ಆದರೆ ಆಫ್ಘಾನಿಸ್ತಾನದ ಜನರು ಮತ್ತು ಸೇನೆಯಲ್ಲಿ ಈ ಒಪ್ಪಂದದ ವಿರುದ್ಧ ಅಸಮಾಧಾನ ಬೆಳೆಯಿತು. ವಿದೇಶಿ ಪ್ರತಿನಿಧಿಯೊಬ್ಬನು ಕಾಬೂಲ್‌ನಲ್ಲಿ ನೆಲೆಸುವುದನ್ನು ಅನೇಕರು ತಮ್ಮ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಪರಿಗಣಿಸಿದರು.

7. ಬ್ರಿಟಿಷ್ ಪ್ರತಿನಿಧಿ ಕವಗ್ನರಿಯ ಹತ್ಯೆ ಮತ್ತು ಯುದ್ಧದ ಎರಡನೇ ಹಂತ

7.1 ಕಾಬೂಲ್‌ನಲ್ಲಿ ಬ್ರಿಟಿಷ್ ನಿಯೋಗದ ಸ್ಥಾಪನೆ

ಗಂಡಮಕ್ ಒಪ್ಪಂದದ ಪ್ರಕಾರ ಬ್ರಿಟಿಷ್ ಪ್ರತಿನಿಧಿ ಮೇಜರ್ ಲೂಯಿಸ್ ಕವಗ್ನರಿ ತನ್ನ ಸಿಬ್ಬಂದಿಯೊಂದಿಗೆ 1879ರ ಜುಲೈ 24ರಂದು ಕಾಬೂಲ್‌ಗೆ ಆಗಮಿಸಿದನು.  ಆದರೆ ಬ್ರಿಟಿಷ್ ಪ್ರತಿನಿಧಿಯ ಉಪಸ್ಥಿತಿಯನ್ನು ಆಫ್ಘನ್ ಸೇನೆಯ ಅನೇಕ ಅಧಿಕಾರಿಗಳು ಮತ್ತು ಜನರು ವಿರೋಧಿಸಿದರು. ವಿದೇಶಿ ಶಕ್ತಿಯ ನೇರ ಹಸ್ತಕ್ಷೇಪದಿಂದ ತಮ್ಮ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಭಾವನೆ ಅವರಲ್ಲಿ ಬಲವಾಗಿತ್ತು.

7.2 ಕವಗ್ನರಿಯ ಹತ್ಯೆ (3 ಸೆಪ್ಟೆಂಬರ್ 1879)

1879ರ ಸೆಪ್ಟೆಂಬರ್ 3ರಂದು ಹೆರಾತ್‌ನಿಂದ ಬಂದ ಆಫ್ಘನ್ ಸೇನಾ ತುಕಡಿಯ ಕೆಲವು ದಂಗೆಕೋರ ಸೈನಿಕರು ಕಾಬೂಲ್‌ನಲ್ಲಿದ್ದ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಬ್ರಿಟಿಷ್ ಪ್ರತಿನಿಧಿ ಕವಗ್ನರಿ ಮತ್ತು ಅವನ ಸಿಬ್ಬಂದಿ ಹತ್ಯೆಗೀಡಾದರು. ಈ ಘಟನೆ ಬ್ರಿಟಿಷರಿಗೆ ಗಂಡಮಕ್ ಒಪ್ಪಂದದ ಉಲ್ಲಂಘನೆಯಾಗಿ ಕಂಡಿತು. ಇದನ್ನು ನೆಪವಾಗಿಟ್ಟುಕೊಂಡು ಬ್ರಿಟಿಷರು ಮತ್ತೆ ಆಫ್ಘಾನಿಸ್ತಾನದ ಮೇಲೆ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸಿದರು.

7.3 ಜನರಲ್ ರಾಬರ್ಟ್ಸ್‌ನ ಕಾಬೂಲ್ ಆಕ್ರಮಣ

ಕವಗ್ನರಿಯ ಹತ್ಯೆಯ ಸುದ್ದಿ ಭಾರತದ ವೈಸರಾಯ್ ಲಾರ್ಡ್ ಲಿಟ್ಟನ್‌ಗೆ ತಲುಪಿದ ನಂತರ ಬ್ರಿಟಿಷ್ ಸೇನೆಯನ್ನು ಮತ್ತೆ ಆಫ್ಘಾನಿಸ್ತಾನಕ್ಕೆ ಕಳುಹಿಸಲಾಯಿತು. ಜನರಲ್ ಫ್ರೆಡರಿಕ್ ರಾಬರ್ಟ್ಸ್ ಈ ಸೈನಿಕ ಕಾರ್ಯಾಚರಣೆಯ ನೇತೃತ್ವ ವಹಿಸಿದನು. 1879ರ ಅಕ್ಟೋಬರ್‌ನಲ್ಲಿ ಚರಾಸಿಯಾಬ್ ಕದನದಲ್ಲಿ ಆಫ್ಘನ್ ಸೇನೆಯನ್ನು ಸೋಲಿಸಿ ಕಾಬೂಲ್ ನಗರವನ್ನು ವಶಪಡಿಸಿಕೊಂಡನು. ಬ್ರಿಟಿಷರು ಯಾಕೂಬ್ ಖಾನ್‌ನನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು. ನಂತರ ಅವನು ಭಾರತಕ್ಕೆ ಗಡಿಪಾರು ಮಾಡಲ್ಪಟ್ಟನು.  ಆದರೆ ಬ್ರಿಟಿಷರ ಆಕ್ರಮಣದ ವಿರುದ್ಧ ಆಫ್ಘನ್ ಜನರು ಮತ್ತು ಬುಡಕಟ್ಟು ಜನಾಂಗಗಳ ಪ್ರತಿರೋಧ ಮುಂದುವರಿಯಿತು.

7.4 ಶೇರ್ಪುರ್ ಕದನ (Battle of Sherpur)

1879ರ ಡಿಸೆಂಬರ್‌ನಲ್ಲಿ ಆಫ್ಘನ್ ಬುಡಕಟ್ಟು ಸೈನಿಕರು ಕಾಬೂಲ್ ಸಮೀಪದ ಶೇರ್ಪುರ್ ಸೈನಿಕ ನೆಲೆಯ ಮೇಲೆ ದಾಳಿ ನಡೆಸಿದರು. ಆದರೆ  ಬ್ರಿಟಿಷ್ ಸೇನೆಯು ಶೇರ್ಪುರ್ ನೆಲೆಯ ರಕ್ಷಣೆಗೆ ಸಜ್ಜುಗೊಂಡಿತ್ತು. ಆಫ್ಘನ್ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ನಡೆಸಿದರೂ ಬ್ರಿಟಿಷರ ಸಂಘಟಿತ ಸೈನಿಕ ಪ್ರತಿರೋಧದಿಂದ ಸೋಲನುಭವಿಸಿದರು.  ಈ ಕದನದ ನಂತರ ಕಾಬೂಲ್‌ನ ಮೇಲೆ ಬ್ರಿಟಿಷರ ನಿಯಂತ್ರಣ ಮತ್ತಷ್ಟು ಬಲಗೊಂಡಿತು. ಆದರೂ ಆಫ್ಘಾನಿಸ್ತಾನದ ಇತರ ಭಾಗಗಳಲ್ಲಿ ಪ್ರತಿರೋಧ ಮುಂದುವರಿಯಿತು.

8. ಮೈವಾಂಡ್ ಕದನ ಮತ್ತು ಕಂದಹಾರ್ ಕಾರ್ಯಾಚರಣೆ (1880)

8.1 ಮೈವಾಂಡ್ ಕದನ (Battle of Maiwand)

1880ರಲ್ಲಿ ಆಫ್ಘಾನಿಸ್ತಾನದ ಹೆರಾತ್ ಪ್ರದೇಶದಲ್ಲಿ ಆಯೂಬ್ ಖಾನ್ (Ayub Khan) ಬ್ರಿಟಿಷರ ವಿರುದ್ಧ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸಿದನು. ಅವನು ಶೇರ್ ಅಲಿ ಖಾನ್‌ನ ಮತ್ತೊಬ್ಬ ಮಗನಾಗಿದ್ದನು. 1880ರ ಜುಲೈ 27ರಂದು ಮೈವಾಂಡ್ ಎಂಬ ಸ್ಥಳದಲ್ಲಿ ಆಯೂಬ್ ಖಾನ್ ನೇತೃತ್ವದ ಆಫ್ಘನ್ ಸೇನೆ ಮತ್ತು ಬ್ರಿಟಿಷ್-ಭಾರತೀಯ ಸೇನೆಯ ನಡುವೆ ನಿರ್ಣಾಯಕ ಯುದ್ಧ ನಡೆಯಿತು.  ಈ ಯುದ್ಧದಲ್ಲಿ ಆಫ್ಘನ್ ಸೇನೆಯು ಬ್ರಿಟಿಷ್ ಸೇನೆಯನ್ನು ಸೋಲಿಸಿತು. ಬ್ರಿಟಿಷರ ಅನೇಕ ಸೈನಿಕರು ಸಾವನ್ನಪ್ಪಿದರು. ಈ ಸೋಲು ಬ್ರಿಟಿಷರಿಗೆ ದೊಡ್ಡ ಆಘಾತವನ್ನುಂಟುಮಾಡಿತು.  ಮೈವಾಂಡ್ ಕದನವು ಆಫ್ಘನ್ ಜನರ ಪ್ರತಿರೋಧ ಮತ್ತು ಸೈನಿಕ ಸಾಮರ್ಥ್ಯಕ್ಕೆ ಪ್ರಮುಖ ಉದಾಹರಣೆಯಾಗಿದೆ.

8.2 ಕಂದಹಾರ್ ಮುತ್ತಿಗೆ

ಮೈವಾಂಡ್ ಕದನದಲ್ಲಿ ವಿಜಯ ಗಳಿಸಿದ ಆಯೂಬ್ ಖಾನ್ ತನ್ನ ಸೇನೆಯೊಂದಿಗೆ ಕಂದಹಾರ್ ನಗರಕ್ಕೆ ತೆರಳಿ ಅದನ್ನು ಮುತ್ತಿಗೆ ಹಾಕಿದನು. ಕಂದಹಾರ್‌ನಲ್ಲಿದ್ದ ಬ್ರಿಟಿಷ್ ಸೇನೆ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಇದರಿಂದ ಬ್ರಿಟಿಷ್ ಆಡಳಿತವು ಕಂದಹಾರ್‌ನ ರಕ್ಷಣೆಗೆ ವಿಶೇಷ ಸೈನಿಕ ಕಾರ್ಯಾಚರಣೆಯನ್ನು ಕೈಗೊಂಡಿತು.

8.3 ಜನರಲ್ ರಾಬರ್ಟ್ಸ್‌ನ ಪ್ರಸಿದ್ಧ ಸೈನಿಕ ನಡಿಗೆ

ಆಗ ಕಾಬೂಲ್‌ನಿಂದ ಕಂದಹಾರ್‌ಗೆ ಸೈನಿಕ ನೆರವು ಕಳುಹಿಸುವ ಜವಾಬ್ದಾರಿಯನ್ನು ಜನರಲ್ ರಾಬರ್ಟ್ಸ್ ವಹಿಸಿಕೊಂಡನು.  ಅವನು ಸುಮಾರು 500 ಕಿಲೋಮೀಟರ್‌ಗಿಂತ ಹೆಚ್ಚು ದೂರವನ್ನು ಕೇವಲ 20 ದಿನಗಳಲ್ಲಿ ಕ್ರಮಿಸಿದನು. ಕಠಿಣ ಪರ್ವತ ಪ್ರದೇಶಗಳು ಮತ್ತು ಬಿಸಿಲಿನ ವಾತಾವರಣದ ನಡುವೆಯೂ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದನು.  1880ರ ಸೆಪ್ಟೆಂಬರ್ 1ರಂದು ಕಂದಹಾರ್ ಸಮೀಪ ನಡೆದ ಕದನದಲ್ಲಿ ರಾಬರ್ಟ್ಸ್ ಆಯೂಬ್ ಖಾನ್‌ನ ಸೇನೆಯನ್ನು ಸೋಲಿಸಿದನು. ಇದರಿಂದ ಕಂದಹಾರ್ ಮೇಲಿನ ಮುತ್ತಿಗೆ ಅಂತ್ಯಗೊಂಡಿತು.  ಈ ವಿಜಯವು ಯುದ್ಧದ ಅಂತಿಮ ಹಂತದಲ್ಲಿ ಬ್ರಿಟಿಷರಿಗೆ ಪ್ರಮುಖ ಸೈನಿಕ ಯಶಸ್ಸನ್ನು ತಂದುಕೊಟ್ಟಿತು.

9. ಅಬ್ದುರ್ ರಹಮಾನ್ ಖಾನ್‌ನ ಅಧಿಕಾರ ಸ್ಥಾಪನೆ

ಯುದ್ಧದ ಕೊನೆಯ ಹಂತದಲ್ಲಿ ಬ್ರಿಟಿಷರು ಆಫ್ಘಾನಿಸ್ತಾನದಲ್ಲಿ ತಮಗೆ ಅನುಕೂಲಕರವಾದ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಿದರು. ಯಾಕೂಬ್ ಖಾನ್ ಅಧಿಕಾರ ತ್ಯಜಿಸಿದ ನಂತರ ಆಫ್ಘಾನಿಸ್ತಾನದಲ್ಲಿ ರಾಜಕೀಯ ಅನಿಶ್ಚಿತತೆ ಉಂಟಾಗಿತ್ತು.  ಈ ಸಂದರ್ಭದಲ್ಲಿ ಶೇರ್ ಅಲಿ ಖಾನ್‌ನ ಸೋದರಳಿಯ ಅಬ್ದುರ್ ರಹಮಾನ್ ಖಾನ್ ಬ್ರಿಟಿಷರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದನು.  1880ರ ಜುಲೈನಲ್ಲಿ ಅಬ್ದುರ್ ರಹಮಾನ್ ಖಾನ್‌ನನ್ನು ಆಫ್ಘಾನಿಸ್ತಾನದ ಅಮೀರ್ ಎಂದು ಒಪ್ಪಿಕೊಳ್ಳಲಾಯಿತು.

ಅಬ್ದುರ್ ರಹಮಾನ್ ಖಾನ್ ಮತ್ತು ಬ್ರಿಟಿಷರ ನಡುವಿನ ಒಪ್ಪಂದ

1. ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಮೇಲೆ ಬ್ರಿಟಿಷರು ಪ್ರಭಾವ ಹೊಂದುವ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಯಿತು.

2. ಬ್ರಿಟಿಷರು ಆಫ್ಘಾನಿಸ್ತಾನಕ್ಕೆ ವಾರ್ಷಿಕ ಆರ್ಥಿಕ ಸಹಾಯಧನ ನೀಡಲು ಒಪ್ಪಿಕೊಂಡರು.

3. ಆಫ್ಘಾನಿಸ್ತಾನದ ಆಂತರಿಕ ಆಡಳಿತದಲ್ಲಿ ಅಮೀರ್‌ಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಯಿತು.

4. ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ಬ್ರಿಟಿಷರ ಸಹಾಯ ಪಡೆಯುವ ವ್ಯವಸ್ಥೆ ಮಾಡಲಾಯಿತು.

5. ಆಫ್ಘಾನಿಸ್ತಾನದ ಪ್ರಮುಖ ಗಡಿ ಪ್ರದೇಶಗಳ ಮೇಲೆ ಬ್ರಿಟಿಷರ ಪ್ರಭಾವ ಮುಂದುವರಿಯಿತು.

ಅಬ್ದುರ್ ರಹಮಾನ್ ಖಾನ್ ಬ್ರಿಟಿಷರೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಉಳಿಸಿಕೊಂಡು ಆಫ್ಘಾನಿಸ್ತಾನದ ಆಂತರಿಕ ಆಡಳಿತವನ್ನು ಬಲಪಡಿಸಲು ಪ್ರಯತ್ನಿಸಿದನು.

10. ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧದ ಪರಿಣಾಮಗಳು: 1878ರಿಂದ 1880ರವರೆಗೆ ನಡೆದ ಈ ಯುದ್ಧವು ಆಫ್ಘಾನಿಸ್ತಾನದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿತು.

10.1 ಆಫ್ಘಾನಿಸ್ತಾನದ ವಿದೇಶಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ

ಗಂಡಮಕ್ ಒಪ್ಪಂದದ ಮೂಲಕ ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಮೇಲೆ ಬ್ರಿಟಿಷರ ನಿಯಂತ್ರಣ ಸ್ಥಾಪನೆಯಾಯಿತು. ಇದರಿಂದ ಆಫ್ಘಾನಿಸ್ತಾನವು ಸ್ವತಂತ್ರವಾಗಿ ಇತರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವ ಅವಕಾಶ ಕಳೆದುಕೊಂಡಿತು.

10.2 ಬ್ರಿಟಿಷರ ಸಾಮ್ರಾಜ್ಯಶಾಹಿ ಪ್ರಭಾವದ ವಿಸ್ತರಣೆ

ಬ್ರಿಟಿಷರು ಆಫ್ಘಾನಿಸ್ತಾನದ ಪ್ರಮುಖ ಗಡಿ ಪ್ರದೇಶಗಳು ಮತ್ತು ಆಯಕಟ್ಟಿನ ಮಾರ್ಗಗಳ ಮೇಲೆ ತಮ್ಮ ಪ್ರಭಾವವನ್ನು ಸ್ಥಾಪಿಸಿದರು. ಖೈಬರ್, ಕುರ್ರಂ ಮತ್ತು ಪಿಷಿನ್ ಮುಂತಾದ ಪ್ರದೇಶಗಳ ಮೇಲಿನ ನಿಯಂತ್ರಣವು ಭಾರತದ ವಾಯವ್ಯ ಗಡಿಯ ಭದ್ರತೆಗೆ ಸಹಕಾರಿಯಾಯಿತು.

10.3 ಆಫ್ಘಾನಿಸ್ತಾನವು ಒಂದು ತಡೆರಾಜ್ಯವಾಯಿತು

ಆಫ್ಘಾನಿಸ್ತಾನವು ಬ್ರಿಟಿಷ್ ಭಾರತ ಮತ್ತು ರಷ್ಯಾದ ಪ್ರಭಾವ ವಲಯಗಳ ನಡುವಿನ ತಡೆರಾಜ್ಯವಾಗಿ ಮುಂದುವರಿಯಿತು. ಬ್ರಿಟಿಷರು ರಷ್ಯಾದ ಪ್ರಭಾವವನ್ನು ಭಾರತದ ಗಡಿಯಿಂದ ದೂರವಿಡುವಲ್ಲಿ ಭಾಗಶಃ ಯಶಸ್ವಿಯಾದರು.

10.4 ಬ್ರಿಟಿಷರ ಸೇನಾ ಹಿಂತೆಗೆತ

ಆಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸ್ಥಾಪಿಸುವುದು ಬ್ರಿಟಿಷರಿಗೆ ಕಷ್ಟಕರವಾಗಿತ್ತು. ನಿರಂತರ ಯುದ್ಧ, ಸ್ಥಳೀಯ ಜನರ ಪ್ರತಿರೋಧ ಮತ್ತು ಆರ್ಥಿಕ ವೆಚ್ಚಗಳಿಂದಾಗಿ ಬ್ರಿಟಿಷರು ತಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರು.

1881ರ ಏಪ್ರಿಲ್ ವೇಳೆಗೆ ಕೊನೆಯ ಬ್ರಿಟಿಷ್-ಭಾರತೀಯ ಸೈನಿಕರು ಆಫ್ಘಾನಿಸ್ತಾನದಿಂದ ಹಿಂತಿರುಗಿದರು.

10.5 ಆಫ್ಘನ್ ರಾಷ್ಟ್ರೀಯತೆಯ ಬೆಳವಣಿಗೆ

ಬ್ರಿಟಿಷರ ಆಕ್ರಮಣದ ವಿರುದ್ಧ ಆಫ್ಘನ್ ಜನರು ತೋರಿದ ಪ್ರತಿರೋಧವು ಅವರ ರಾಷ್ಟ್ರೀಯ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಭಾವನೆಯನ್ನು ಬಲಪಡಿಸಿತು. ಮೈವಾಂಡ್ ಕದನವು ಆಫ್ಘನ್ ರಾಷ್ಟ್ರೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ.

10.6 ಬ್ರಿಟನ್-ರಷ್ಯಾ ಪೈಪೋಟಿಯ ಮುಂದುವರಿಕೆ

ಈ ಯುದ್ಧದ ನಂತರವೂ ಬ್ರಿಟನ್ ಮತ್ತು ರಷ್ಯಾಗಳ ನಡುವಿನ ಮಧ್ಯ ಏಷ್ಯಾದ ರಾಜಕೀಯ ಪೈಪೋಟಿ ಸಂಪೂರ್ಣವಾಗಿ ಕೊನೆಗೊಳ್ಳಲಿಲ್ಲ. ಎರಡೂ ರಾಷ್ಟ್ರಗಳು ಆಫ್ಘಾನಿಸ್ತಾನದ ಮೇಲೆ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವು.

10.7 ಭಾರತದ ವಾಯವ್ಯ ಗಡಿಯ ಭದ್ರತೆ

ಆಫ್ಘಾನಿಸ್ತಾನದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಸಾಧಿಸುವ ಮೂಲಕ ಬ್ರಿಟಿಷರು ಭಾರತದ ವಾಯವ್ಯ ಗಡಿಯಲ್ಲಿ ರಷ್ಯಾದ ನೇರ ರಾಜಕೀಯ ಹಸ್ತಕ್ಷೇಪವನ್ನು ತಡೆಯಲು ಪ್ರಯತ್ನಿಸಿದರು.

11. ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧದ ಐತಿಹಾಸಿಕ ಮಹತ್ವ

ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧವು 19ನೇ ಶತಮಾನದ ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ಯುದ್ಧವು ಬ್ರಿಟನ್ ಮತ್ತು ರಷ್ಯಾ ನಡುವಿನ ಮಹಾ ಆಟದ (Great Game) ಪ್ರಮುಖ ಭಾಗವಾಗಿತ್ತು. ಆಫ್ಘಾನಿಸ್ತಾನದ ಭೌಗೋಳಿಕ ಸ್ಥಾನವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಯುದ್ಧ ತೋರಿಸಿಕೊಟ್ಟಿತು. ಬ್ರಿಟಿಷರು ಸೈನಿಕ ವಿಜಯ ಸಾಧಿಸಿದರೂ ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತಮ್ಮ ವಸಾಹತುವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಗಂಡಮಕ್ ಒಪ್ಪಂದವು ಆಫ್ಘಾನಿಸ್ತಾನದ ವಿದೇಶಾಂಗ ನೀತಿಯ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿತು. ಅಬ್ದುರ್ ರಹಮಾನ್ ಖಾನ್‌ನ ಆಡಳಿತದಲ್ಲಿ ಆಫ್ಘಾನಿಸ್ತಾನವು ತನ್ನ ಆಂತರಿಕ ಆಡಳಿತವನ್ನು ಬಲಪಡಿಸಿಕೊಂಡಿತು. ಈ ಯುದ್ಧವು ಬ್ರಿಟಿಷರ ವಾಯವ್ಯ ಗಡಿ ನೀತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು.

12. ಉಪಸಂಹಾರ

ದ್ವಿತೀಯ ಆಂಗ್ಲೊ-ಆಫ್ಘನ್ ಯುದ್ಧವು 19ನೇ ಶತಮಾನದ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿಸ್ತರಣೆಯ ಪ್ರಮುಖ ಘಟನೆಯಾಗಿದೆ. ಈ ಯುದ್ಧದ ಮೂಲ ಉದ್ದೇಶ ಆಫ್ಘಾನಿಸ್ತಾನದ ಮೇಲೆ ನೇರ ವಸಾಹತುಶಾಹಿ ಆಡಳಿತ ಸ್ಥಾಪಿಸುವುದಕ್ಕಿಂತಲೂ ಭಾರತದ ಭದ್ರತೆಯನ್ನು ಕಾಪಾಡುವುದು ಮತ್ತು ಮಧ್ಯ ಏಷ್ಯಾದಲ್ಲಿ ರಷ್ಯಾದ ಪ್ರಭಾವವನ್ನು ನಿಯಂತ್ರಿಸುವುದಾಗಿತ್ತು.  ಲಾರ್ಡ್ ಲಿಟ್ಟನ್‌ನ ಆಕ್ರಮಣಕಾರಿ ನೀತಿ, ರಷ್ಯಾದ ರಾಜತಾಂತ್ರಿಕ ನಿಯೋಗದ ಕಾಬೂಲ್ ಪ್ರವೇಶ ಮತ್ತು ಬ್ರಿಟಿಷ್ ನಿಯೋಗಕ್ಕೆ ಆಫ್ಘಾನಿಸ್ತಾನ ಪ್ರವೇಶ ನಿರಾಕರಿಸಿದ್ದು ಯುದ್ಧಕ್ಕೆ ತಕ್ಷಣದ ಕಾರಣಗಳಾದವು. ಬ್ರಿಟಿಷರು ಸೈನಿಕವಾಗಿ ಹಲವು ವಿಜಯಗಳನ್ನು ಸಾಧಿಸಿದರೂ ಆಫ್ಘನ್ ಜನರ ಪ್ರತಿರೋಧವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಗಂಡಮಕ್ ಒಪ್ಪಂದದ ಮೂಲಕ ಆಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಮೇಲೆ ಬ್ರಿಟಿಷರ ಪ್ರಭಾವ ಸ್ಥಾಪನೆಯಾಯಿತು. ಆದರೆ ಅಬ್ದುರ್ ರಹಮಾನ್ ಖಾನ್‌ನ ಆಡಳಿತದಲ್ಲಿ ಆಫ್ಘಾನಿಸ್ತಾನವು ತನ್ನ ಆಂತರಿಕ ಸ್ವಾಯತ್ತತೆಯನ್ನು ಉಳಿಸಿಕೊಂಡಿತು. ಹೀಗಾಗಿ ಈ ಯುದ್ಧವು ಬ್ರಿಟಿಷರ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳು, ರಷ್ಯಾದ ವಿಸ್ತರಣಾವಾದ ಮತ್ತು ಆಫ್ಘನ್ ಜನರ ರಾಷ್ಟ್ರೀಯ ಸ್ವಾತಂತ್ರ್ಯದ ಹೋರಾಟಗಳ ನಡುವಿನ ಸಂಘರ್ಷದ ಪ್ರಮುಖ ಉದಾಹರಣೆಯಾಗಿದೆ.

*************************

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಭಾರತದ ಭೌಗೋಳಿಕ ಲಕ್ಷಣಗಳು.

ಸಾಹಿತ್ಯಾಧಾರಗಳು - Literary Sources