ಸುಯೆಜ್ ಕಾಲುವೆಯ ನಿರ್ಮಾಣ - ಈಜಿಪ್ಟ್‌ನಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿತ್ವ ಮತ್ತು ಆಂಗ್ಲೊ-ಈಜಿಪ್ಟ್ ಯುದ್ಧ (1882)

1. ಪೀಠಿಕೆ: 19ನೇ ಶತಮಾನವು ಯುರೋಪಿನ ರಾಷ್ಟ್ರಗಳ ಸಾಮ್ರಾಜ್ಯಶಾಹಿ ವಿಸ್ತರಣೆಯ ಪ್ರಮುಖ ಕಾಲವಾಗಿತ್ತು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ಯುರೋಪಿನ ರಾಷ್ಟ್ರಗಳಿಗೆ ಕಚ್ಚಾ ವಸ್ತುಗಳು, ಹೊಸ ಮಾರುಕಟ್ಟೆಗಳು, ವ್ಯಾಪಾರ ಮಾರ್ಗಗಳು ಮತ್ತು ವಸಾಹತು ಪ್ರದೇಶಗಳ ಅಗತ್ಯ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಯುರೋಪಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಗಮನ ಸೆಳೆದವು.  ಆಫ್ರಿಕಾ ಖಂಡದ ಈಜಿಪ್ಟ್ ದೇಶವು ಯುರೋಪ್ ಮತ್ತು ಏಷ್ಯಾ ಖಂಡಗಳನ್ನು ಸಂಪರ್ಕಿಸುವ ಪ್ರಮುಖ ಭೌಗೋಳಿಕ ಸ್ಥಾನವನ್ನು ಹೊಂದಿತ್ತು. ಅದರಲ್ಲಿಯೂ ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಸಂಪರ್ಕಿಸುವ ಸುಯೆಜ್ ಕಾಲುವೆ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ನೌಕಾಯಾನದಲ್ಲಿ ಮಹತ್ವದ ಸ್ಥಾನ ಪಡೆದಿತ್ತು. ಭಾರತ ಸೇರಿದಂತೆ ಏಷ್ಯಾದಲ್ಲಿದ್ದ ಬ್ರಿಟಿಷರ ವಸಾಹತುಗಳೊಂದಿಗೆ ಸಂಪರ್ಕ ಸಾಧಿಸಲು ಈ ಕಾಲುವೆ ಅತ್ಯಂತ ಅನುಕೂಲಕರವಾಗಿತ್ತು.  ಸುಯೆಜ್ ಕಾಲುವೆಯ ನಿರ್ಮಾಣ, ಈಜಿಪ್ಟ್‌ನ ಆರ್ಥಿಕ ಬಿಕ್ಕಟ್ಟು, ಬ್ರಿಟಿಷರ ರಾಜಕೀಯ ಹಸ್ತಕ್ಷೇಪ ಮತ್ತು 1882ರ ಆಂಗ್ಲೊ–ಈಜಿಪ್ಟ್ ಯುದ್ಧಗಳು ಈಜಿಪ್ಟ್‌ನಲ್ಲಿ ಬ್ರಿಟಿಷರ ಪ್ರಾಬಲ್ಯ ಸ್ಥಾಪನೆಗೆ ಪ್ರಮುಖ ಕಾರಣಗಳಾದವು. ಈ ಘಟನೆಗಳು ಆಫ್ರಿಕಾದಲ್ಲಿ ಯುರೋಪಿನ ಸಾಮ್ರಾಜ್ಯಶಾಹಿ ವಿಸ್ತರಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

2. ಸುಯೆಜ್ ಕಾಲುವೆ (Suez Canal) ಯ ನಿರ್ಮಾಣ

2.1 ಕಾಲುವೆಯ ನಿರ್ಮಾಣದ ಹಿನ್ನೆಲೆ

ಯುರೋಪ್ ಮತ್ತು ಏಷ್ಯಾ ನಡುವಿನ ಸಮುದ್ರಯಾನಕ್ಕೆ ಹಿಂದಿನ ಕಾಲದಲ್ಲಿ ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಕೇಪ್ ಆಫ್ ಗುಡ್ ಹೋಪ್ ಮಾರ್ಗವಾಗಿ ಸಂಚರಿಸಬೇಕಾಗಿತ್ತು. ಈ ಮಾರ್ಗವು ಬಹಳ ದೂರವಾಗಿದ್ದು, ಪ್ರಯಾಣಕ್ಕೆ ಹೆಚ್ಚಿನ ಸಮಯ ಮತ್ತು ವೆಚ್ಚ ತಗಲುತ್ತಿತ್ತು. ಆದ್ದರಿಂದ  ಯುರೋಪ್ ಮತ್ತು ಏಷ್ಯಾ ನಡುವಿನ ವ್ಯಾಪಾರ ಸಂಬಂಧಗಳನ್ನು ಸುಲಭಗೊಳಿಸಲು ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರದೊಂದಿಗೆ ನೇರವಾಗಿ ಸಂಪರ್ಕಿಸುವ ಕಾಲುವೆಯ ನಿರ್ಮಾಣದ ಆಲೋಚನೆ ಬಹಳ ಹಿಂದಿನಿಂದಲೂ ಇತ್ತು. ಈಜಿಪ್ಟ್‌ನ ಭೌಗೋಳಿಕ ಸ್ಥಾನವು ಇಂತಹ ಕಾಲುವೆ ನಿರ್ಮಾಣಕ್ಕೆ ಅನುಕೂಲಕರವಾಗಿತ್ತು.  ಫ್ರೆಂಚ್ ಇಂಜಿನಿಯರ್ ಮತ್ತು ರಾಜತಾಂತ್ರಿಕ ಫರ್ಡಿನಾಂಡ್ ಡಿ ಲೆಸೆಪ್ಸ್ (Ferdinand de Lesseps) ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಈಜಿಪ್ಟ್‌ನ ಆಡಳಿತಗಾರ ಸಯೀದ್ ಪಾಷಾ (Said Pasha) ಅವನ ಅನುಮತಿ ಮತ್ತು ಸಹಕಾರದೊಂದಿಗೆ ಕಾಲುವೆ ನಿರ್ಮಾಣ ಕಾರ್ಯ ಆರಂಭವಾಯಿತು.

2.2 ನಿರ್ಮಾಣ ಕಾರ್ಯ

• 1854ರಲ್ಲಿ ಫರ್ಡಿನಾಂಡ್ ಡಿ ಲೆಸೆಪ್ಸ್‌ಗೆ ಕಾಲುವೆ ನಿರ್ಮಾಣದ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಅನುಮತಿ ದೊರೆಯಿತು.

• 1858ರಲ್ಲಿ ಸುಯೆಜ್ ಕಾಲುವೆ ಕಂಪನಿಯನ್ನು ಸ್ಥಾಪಿಸಲಾಯಿತು.

• 1859ರ ಏಪ್ರಿಲ್ 25ರಂದು ನಿರ್ಮಾಣ ಕಾರ್ಯ ಆರಂಭವಾಯಿತು.

• ಈ ಯೋಜನೆಯಲ್ಲಿ ಈಜಿಪ್ಟ್‌ನ ಸ್ಥಳೀಯ ಕಾರ್ಮಿಕರು ಸೇರಿದಂತೆ ಅನೇಕ ಕಾರ್ಮಿಕರು ದುಡಿದರು.

•

ಕಾಲುವೆಯ ನಿರ್ಮಾಣಕ್ಕೆ ಸುಮಾರು ಹತ್ತು ವರ್ಷಗಳ ಕಾಲ ಹಿಡಿಯಿತು.

• 1869ರ ನವೆಂಬರ್ 17ರಂದು ಕಾಲುವೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಫರ್ಡಿನಾಂಡ್ ಡಿ ಲೆಸೆಪ್ಸ್

ಈತನು  ಸುಯೆಜ್ ಕಾಲುವೆಯ ನಿರ್ಮಾಣದ ಪ್ರಮುಖ ರೂವಾರಿ ಎಂದು ಪ್ರಸಿದ್ಧನಾಗಿದ್ದಾನೆ. ಈ ಕಾಲುವೆಯ ನಿರ್ಮಾಣವು ಜಾಗತಿಕ ಸಮುದ್ರ ವ್ಯಾಪಾರದಲ್ಲಿ ಮಹತ್ವದ ಬದಲಾವಣೆಯನ್ನು ಉಂಟುಮಾಡಿತು.

2.3 ಕಾಲುವೆಯ ಮಹತ್ವ

1. ಯುರೋಪ್ ಮತ್ತು ಏಷ್ಯಾ ನಡುವಿನ ಸಮುದ್ರಯಾನದ ದೂರವನ್ನು ಗಣನೀಯವಾಗಿ ಕಡಿಮೆ ಮಾಡಿತು.

2. ಭಾರತಕ್ಕೆ ಬ್ರಿಟಿಷರ ಸಮುದ್ರ ಮಾರ್ಗದ ಸಂಪರ್ಕ ಸುಲಭವಾಯಿತು.

3. ಯುರೋಪಿನ ರಾಷ್ಟ್ರಗಳ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಯಿತು.

4. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳ ನಡುವೆ ನೇರ ನೌಕಾಯಾನ ಸಾಧ್ಯವಾಯಿತು.

5. ಈಜಿಪ್ಟ್‌ನ ಅಂತರರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಮಹತ್ವ ಹೆಚ್ಚಾಯಿತು.

6. ಭಾರತದಲ್ಲಿನ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಬಲಪಡಿಸಲು ಕಾಲುವೆ ಪ್ರಮುಖ ಸಾಧನವಾಯಿತು.

ಆದ್ದರಿಂದ ಸುಯೆಜ್ ಕಾಲುವೆಯು ಕೇವಲ ಒಂದು ಜಲಮಾರ್ಗವಾಗಿರದೆ, ಯುರೋಪಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ಕೇಂದ್ರಬಿಂದುವಾಯಿತು.

3. ಈಜಿಪ್ಟ್‌ನಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ಪ್ರವೇಶ

3.1 ಈಜಿಪ್ಟ್‌ನ ಆರ್ಥಿಕ ಬಿಕ್ಕಟ್ಟು

ಸುಯೆಜ್ ಕಾಲುವೆಯ ನಿರ್ಮಾಣದಿಂದ ಈಜಿಪ್ಟ್‌ನ ಅಂತರರಾಷ್ಟ್ರೀಯ ಮಹತ್ವ ಹೆಚ್ಚಾದರೂ, ದೇಶದ ಆರ್ಥಿಕ ಪರಿಸ್ಥಿತಿ ಹದಗೆಡತೊಡಗಿತು. ಈಜಿಪ್ಟ್‌ನ ಆಡಳಿತಗಾರ ಇಸ್ಮಾಯಿಲ್ ಪಾಷಾ (1863–1879) ದೇಶವನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ರೈಲ್ವೆ, ಕಾಲುವೆಗಳು, ರಸ್ತೆ, ಸೇತುವೆ, ಶಾಲೆ ಮತ್ತು ಸಾರ್ವಜನಿಕ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಹಣ ಖರ್ಚು ಮಾಡಿದನು.  ಆದರೆ ಈ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಹಣವನ್ನು ಯುರೋಪಿನ ಬ್ಯಾಂಕುಗಳಿಂದ ಸಾಲವಾಗಿ ಪಡೆಯಲಾಯಿತು. ಪರಿಣಾಮವಾಗಿ ಈಜಿಪ್ಟ್ ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿತು.

ಈ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳು:

1. ಸುಯೆಜ್ ಕಾಲುವೆಯ ನಿರ್ಮಾಣ ಮತ್ತು ಸಂಬಂಧಿತ ವೆಚ್ಚಗಳು.

2. ಆಡಳಿತಗಾರ ಇಸ್ಮಾಯಿಲ್ ಪಾಷಾನ ದುಬಾರಿ ಅಭಿವೃದ್ಧಿ ಯೋಜನೆಗಳು.

3. ಯುರೋಪಿನ ಬ್ಯಾಂಕುಗಳಿಂದ ಅಧಿಕ ಬಡ್ಡಿದರದಲ್ಲಿ ಪಡೆದ ಸಾಲಗಳು.

4. ಅರಮನೆಯ ವೈಭವ ಮತ್ತು ಆಡಳಿತದ ದುಂದುವೆಚ್ಚ.

5. ವಿದೇಶಿ ಸಾಲಗಳ ಬಡ್ಡಿ ಮತ್ತು ಕಂತುಗಳನ್ನು ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ.

ಈ ಪರಿಸ್ಥಿತಿಯನ್ನು ಬಳಸಿಕೊಂಡು ಬ್ರಿಟನ್ ಮತ್ತು ಫ್ರಾನ್ಸ್ ಈಜಿಪ್ಟ್‌ನ ಆರ್ಥಿಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಆರಂಭಿಸಿದವು.

3.2 ಬ್ರಿಟನ್ ಸುಯೆಜ್ ಕಾಲುವೆಯ ಷೇರುಗಳನ್ನು ಖರೀದಿಸಿದ್ದು (1875)

1875ರಲ್ಲಿ ಈಜಿಪ್ಟ್‌ನ ಆಡಳಿತಗಾರ ಇಸ್ಮಾಯಿಲ್ ಪಾಷಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನು. ಸಾಲದ ಬಡ್ಡಿ ಪಾವತಿಸಲು ಹಣದ ಅಗತ್ಯವಿದ್ದ ಕಾರಣ ಸುಯೆಜ್ ಕಾಲುವೆ ಕಂಪನಿಯಲ್ಲಿದ್ದ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದನು.  ಆ ಸಮಯದಲ್ಲಿ ಬ್ರಿಟನ್‌ನ ಪ್ರಧಾನಿಯಾಗಿದ್ದ  ಬೆಂಜಮಿನ್ ಡಿಸ್ರೇಲಿ  ಈ ಅವಕಾಶವನ್ನು ಬಳಸಿಕೊಂಡನು. 1875ರ ನವೆಂಬರ್‌ನಲ್ಲಿ ಬ್ರಿಟಿಷ್ ಸರ್ಕಾರವು ಇಸ್ಮಾಯಿಲ್ ಪಾಷಾ ಹೊಂದಿದ್ದ 1,76,602 ಷೇರುಗಳನ್ನು ಸುಮಾರು 39.76 ಲಕ್ಷ ಪೌಂಡ್‌ಗಳಿಗೆ ಖರೀದಿಸಿತು. ಇವು ಕಂಪನಿಯ ಒಟ್ಟು ಷೇರುಗಳ ಸುಮಾರು ಶೇ. 44ರಷ್ಟಿದ್ದವು.

ಈ ಖರೀದಿಯಿಂದ ಬ್ರಿಟನ್ ಸುಯೆಜ್ ಕಾಲುವೆ ಕಂಪನಿಯ ಪ್ರಮುಖ ಷೇರುದಾರನಾಯಿತು. ಫ್ರಾನ್ಸ್ ಉಳಿದ ಪ್ರಮುಖ ಪಾಲನ್ನು ಹೊಂದಿತ್ತು. ಈ ಬೆಳವಣಿಗೆಯು ಬ್ರಿಟನ್‌ಗೆ ಈಜಿಪ್ಟ್‌ನ ವ್ಯವಹಾರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲು ಹೆಚ್ಚಿನ ಅವಕಾಶ ಕಲ್ಪಿಸಿತು.

ಬ್ರಿಟನ್ ಷೇರುಗಳನ್ನು ಖರೀದಿಸಿದ ಉದ್ದೇಶಗಳು:

• ಭಾರತಕ್ಕೆ ಹೋಗುವ ಸಮುದ್ರ ಮಾರ್ಗದ ಮೇಲೆ ಪ್ರಭಾವ ಸ್ಥಾಪಿಸುವುದು.

• ಸುಯೆಜ್ ಕಾಲುವೆಯ ಮೂಲಕ ನಡೆಯುವ ವ್ಯಾಪಾರದ ಮೇಲೆ ಹಿಡಿತ ಸಾಧಿಸುವುದು.

• ಫ್ರಾನ್ಸ್‌ನ ಪ್ರಭಾವವನ್ನು ನಿಯಂತ್ರಿಸುವುದು.

• ಏಷ್ಯಾ ಮತ್ತು ಆಫ್ರಿಕಾದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವುದು.

3.3 ಈಜಿಪ್ಟ್‌ನಲ್ಲಿ ಆಂಗ್ಲೋ–ಫ್ರೆಂಚ್ ಆರ್ಥಿಕ ನಿಯಂತ್ರಣ

1876ರಲ್ಲಿ ಈಜಿಪ್ಟ್ ತನ್ನ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಯುರೋಪಿನ ಸಾಲದಾತರ ಒತ್ತಡಕ್ಕೆ ಒಳಗಾಯಿತು. ಇದರ ಪರಿಣಾಮವಾಗಿ ಬ್ರಿಟನ್ ಮತ್ತು ಫ್ರಾನ್ಸ್ ಈಜಿಪ್ಟ್‌ನ ಹಣಕಾಸು ವ್ಯವಸ್ಥೆಯ ಮೇಲೆ ಜಂಟಿ ನಿಯಂತ್ರಣವನ್ನು ಸ್ಥಾಪಿಸಿದವು.  ಈ ವ್ಯವಸ್ಥೆಯನ್ನು ಸಾಮಾನ್ಯವಾಗಿ  Dual Control  (ದ್ವಂದ್ವ ನಿಯಂತ್ರಣ) ಎಂದು ಕರೆಯಲಾಗುತ್ತದೆ.  ಈ ವ್ಯವಸ್ಥೆಯಡಿ ಬ್ರಿಟಿಷ್ ಮತ್ತು ಫ್ರೆಂಚ್ ಅಧಿಕಾರಿಗಳು ಈಜಿಪ್ಟ್‌ನ ಆದಾಯ, ವೆಚ್ಚ, ತೆರಿಗೆ ಮತ್ತು ಸಾಲ ಮರುಪಾವತಿ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡತೊಡಗಿದರು.  ಇದರಿಂದ ಈಜಿಪ್ಟ್‌ನ ಆಡಳಿತಗಾರನ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಕಡಿಮೆಯಾಯಿತು. ವಿದೇಶಿ ಸಾಲದಾತರ ಹಿತಾಸಕ್ತಿಗಳಿಗೆ ಅನುಗುಣವಾಗಿ ದೇಶದ ಆರ್ಥಿಕ ನೀತಿಗಳು ರೂಪುಗೊಳ್ಳತೊಡಗಿದವು.  1879ರಲ್ಲಿ ಇಸ್ಮಾಯಿಲ್ ಪಾಷಾನನ್ನು ಅಧಿಕಾರದಿಂದ ಕೆಳಗಿಳಿಸಿ ಅವನ ಮಗ ತೌಫಿಕ್ ಪಾಷಾನನ್ನು ಆಡಳಿತಗಾರನನ್ನಾಗಿ ಮಾಡಲಾಯಿತು. ಇದರಿಂದ ಈಜಿಪ್ಟ್‌ನಲ್ಲಿ ವಿದೇಶಿ ಹಸ್ತಕ್ಷೇಪ ಮತ್ತಷ್ಟು ಹೆಚ್ಚಾಯಿತು.

4. ಈಜಿಪ್ಟ್‌ನಲ್ಲಿ ಅರಾಬಿ ಪಾಷಾ ಚಳವಳಿ (Urabi Movement)

4.1 ಚಳವಳಿಯ ಹಿನ್ನೆಲೆ

ಈಜಿಪ್ಟ್‌ನ ಆರ್ಥಿಕ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಬ್ರಿಟನ್ ಮತ್ತು ಫ್ರಾನ್ಸ್‌ನ ಹಸ್ತಕ್ಷೇಪ ಹೆಚ್ಚಾದಂತೆ ಸ್ಥಳೀಯ ಜನರು ಮತ್ತು ಸೇನಾ ಅಧಿಕಾರಿಗಳಲ್ಲಿ ಅಸಮಾಧಾನ ಬೆಳೆಯಿತು. ವಿದೇಶಿಯರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿತ್ತು. ಈಜಿಪ್ಟ್‌ನ ಸ್ಥಳೀಯ ಅಧಿಕಾರಿಗಳು ಮತ್ತು ಸೈನಿಕರು ಆಡಳಿತದಲ್ಲಿ ಸೂಕ್ತ ಸ್ಥಾನಮಾನ ಪಡೆಯುತ್ತಿರಲಿಲ್ಲ.  ಈ ಸಂದರ್ಭದಲ್ಲಿ ಈಜಿಪ್ಟ್‌ನ ಸೇನಾಧಿಕಾರಿ  ಅಹಮದ್ ಅರಾಬಿ ಪಾಷಾ (Ahmed Urabi Pasha)  ವಿದೇಶಿ ಹಸ್ತಕ್ಷೇಪದ ವಿರುದ್ಧ ಜನರನ್ನು ಸಂಘಟಿಸಿದನು.

ಅರಾಬಿ ಪಾಷಾ ಈಜಿಪ್ಟ್‌ನ ರಾಷ್ಟ್ರೀಯ ಸ್ವಾಭಿಮಾನ ಮತ್ತು ಸ್ವಯಂ ಆಡಳಿತದ ಪರವಾಗಿ ಹೋರಾಡಿದನು. ಅವನ ಚಳವಳಿಯ ಪ್ರಮುಖ ಘೋಷಣೆಯು:  “ಈಜಿಪ್ಟ್ ಈಜಿಪ್ಟಿನವರಿಗಾಗಿ” (Egypt for the Egyptians) ಎಂಬುದಾಗಿತ್ತು.

4.2 ಅರಾಬಿ ಚಳವಳಿಯ ಉದ್ದೇಶಗಳು

1. ಈಜಿಪ್ಟ್‌ನ ಆಡಳಿತದಲ್ಲಿ ವಿದೇಶಿಯರ ಹಸ್ತಕ್ಷೇಪವನ್ನು ಕೊನೆಗೊಳಿಸುವುದು.

2. ಈಜಿಪ್ಟ್‌ನ ಸ್ಥಳೀಯರಿಗೆ ಆಡಳಿತದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು.

3. ಸೇನೆಯಲ್ಲಿ ತುರ್ಕಿ ಮತ್ತು ಸರ್ಕಾಸಿಯನ್ ಅಧಿಕಾರಿಗಳ ಏಕಸ್ವಾಮ್ಯವನ್ನು ಕಡಿಮೆ ಮಾಡುವುದು.

4. ವಿದೇಶಿ ಸಾಲದಾತರ ಆರ್ಥಿಕ ನಿಯಂತ್ರಣವನ್ನು ವಿರೋಧಿಸುವುದು.

5. ಸಂವಿಧಾನಾತ್ಮಕ ಆಡಳಿತ ಮತ್ತು ಜನಪ್ರತಿನಿಧಿಗಳ ಅಧಿಕಾರವನ್ನು ಬಲಪಡಿಸುವುದು.

6.

ಈಜಿಪ್ಟ್‌ನ ರಾಷ್ಟ್ರೀಯ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದು.

4.3 ಚಳವಳಿಯ ಬೆಳವಣಿಗೆ

1881ರ ಸೆಪ್ಟೆಂಬರ್ 9ರಂದು ಅರಾಬಿ ಪಾಷಾ ತನ್ನ ಬೆಂಬಲಿಗ ಸೈನಿಕರೊಂದಿಗೆ ಕೈರೋದಲ್ಲಿನ ಅಬ್ದೀನ್ ಅರಮನೆಯ ಮುಂದೆ ಪ್ರತಿಭಟನೆ ನಡೆಸಿದನು. ಇದರಿಂದ ಖೆದೀವ್ ತೌಫಿಕ್ ಪಾಷಾ ಸರ್ಕಾರದ ಮೇಲೆ ಒತ್ತಡ ಉಂಟಾಯಿತು. ಅರಾಬಿ ಪಾಷಾ ಮತ್ತು ಅವನ ಬೆಂಬಲಿಗರ ಪ್ರಭಾವ ಹೆಚ್ಚಾಯಿತು.

1882ರಲ್ಲಿ ಅರಾಬಿ ಪಾಷಾ ಯುದ್ಧಮಂತ್ರಿಯಾಗಿ ಅಧಿಕಾರಕ್ಕೆ ಬಂದನು. ಈ ಬೆಳವಣಿಗೆಯಿಂದ ಬ್ರಿಟನ್ ಮತ್ತು ಫ್ರಾನ್ಸ್ ಆತಂಕಗೊಂಡವು. ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗಬಹುದು ಎಂಬ ಭಯ ಅವುಗಳಿಗಿತ್ತು.

ಅರಾಬಿ ಚಳವಳಿಯು ಕೇವಲ ಸೇನಾ ದಂಗೆ ಆಗಿರದೆ, ಈಜಿಪ್ಟ್‌ನ ವಿವಿಧ ಸಾಮಾಜಿಕ ವರ್ಗಗಳ ಬೆಂಬಲವನ್ನು ಪಡೆದ ರಾಷ್ಟ್ರೀಯ ಮತ್ತು ರಾಜಕೀಯ ಚಳವಳಿಯಾಗಿತ್ತು ಎಂದು ಇತಿಹಾಸಕಾರ ಡೊನಾಲ್ಡ್ ರೀಡ್ ವಿಶ್ಲೇಷಿಸಿದ್ದಾನೆ.

5. ಆಂಗ್ಲೊ–ಈಜಿಪ್ಟ್ ಯುದ್ಧ (1882)

5.1 ಯುದ್ಧಕ್ಕೆ ಕಾರಣಗಳು

1882ರ ಆಂಗ್ಲೊ–ಈಜಿಪ್ಟ್ ಯುದ್ಧವು ಬ್ರಿಟನ್ ಮತ್ತು ಈಜಿಪ್ಟ್ ನಡುವಿನ ಪ್ರಮುಖ ಸಂಘರ್ಷವಾಗಿತ್ತು. ಈ ಯುದ್ಧಕ್ಕೆ ರಾಜಕೀಯ, ಆರ್ಥಿಕ ಮತ್ತು ಸಾಮ್ರಾಜ್ಯಶಾಹಿ ಹಿತಾಸಕ್ತಿಗಳು ಕಾರಣವಾಗಿದ್ದವು.

1. ಸುಯೆಜ್ ಕಾಲುವೆಯ ಮೇಲಿನ ನಿಯಂತ್ರಣದ ಆಸೆ:

ಸುಯೆಜ್ ಕಾಲುವೆಯು ಭಾರತ ಮತ್ತು ಬ್ರಿಟನ್ ನಡುವಿನ ಪ್ರಮುಖ ಸಮುದ್ರ ಮಾರ್ಗವಾಗಿತ್ತು. ಕಾಲುವೆಯ ಭದ್ರತೆ ಮತ್ತು ಸಂಚಾರದ ಮೇಲೆ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದು ಬ್ರಿಟನ್‌ಗೆ ಅತ್ಯಂತ ಮುಖ್ಯವಾಗಿತ್ತು.

2. ಈಜಿಪ್ಟ್‌ನ ಆರ್ಥಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ:

ಬ್ರಿಟನ್ ಮತ್ತು ಫ್ರಾನ್ಸ್ ಈಜಿಪ್ಟ್‌ನ ಆರ್ಥಿಕ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿದ್ದವು. ಅರಾಬಿ ಪಾಷಾ ಈ ವಿದೇಶಿ ಹಸ್ತಕ್ಷೇಪವನ್ನು ವಿರೋಧಿಸಿದನು. ಇದರಿಂದ ಬ್ರಿಟಿಷರ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಯಿತು.

3. ಅರಾಬಿ ಪಾಷಾನ ರಾಷ್ಟ್ರೀಯ ಚಳವಳಿ:

ಈಜಿಪ್ಟ್‌ನ ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತಕ್ಕಾಗಿ ಅರಾಬಿ ಪಾಷಾ ನಡೆಸಿದ ಚಳವಳಿ ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿಗೆ ಸವಾಲಾಯಿತು.

4. ಅಲೆಕ್ಸಾಂಡ್ರಿಯಾದ ಗಲಭೆಗಳು:

1882ರ ಜೂನ್‌ನಲ್ಲಿ ಅಲೆಕ್ಸಾಂಡ್ರಿಯಾ ನಗರದಲ್ಲಿ ಸ್ಥಳೀಯರು ಮತ್ತು ಯುರೋಪಿಯನ್ನರ ನಡುವೆ ಗಲಭೆಗಳು ಸಂಭವಿಸಿದವು. ಈ ಗಲಭೆಗಳನ್ನು ಬ್ರಿಟನ್ ತನ್ನ ಸೈನಿಕ ಹಸ್ತಕ್ಷೇಪಕ್ಕೆ ಸಮರ್ಥನೆಯಾಗಿ ಬಳಸಿಕೊಂಡಿತು.

5. ಬ್ರಿಟಿಷರ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳು:

ಭಾರತದ ಮೇಲಿನ ತನ್ನ ಹಿಡಿತವನ್ನು ಭದ್ರಪಡಿಸಿಕೊಳ್ಳಲು ಈಜಿಪ್ಟ್ ಮತ್ತು ಸುಯೆಜ್ ಕಾಲುವೆಯ ಮೇಲೆ ಪ್ರಭಾವ ಹೊಂದುವುದು ಬ್ರಿಟನ್‌ಗೆ ಅಗತ್ಯವಾಗಿತ್ತು.

5.2 ಅಲೆಕ್ಸಾಂಡ್ರಿಯಾ ನಗರದ ಮೇಲೆ ಬ್ರಿಟಿಷರ ದಾಳಿ

1882ರ ಜುಲೈ 11ರಂದು ಬ್ರಿಟಿಷ್ ನೌಕಾಪಡೆಯು ಅಲೆಕ್ಸಾಂಡ್ರಿಯಾ ನಗರದ ಮೇಲೆ ಗುಂಡಿನ ದಾಳಿ ನಡೆಸಿತು. ಈ ದಾಳಿಯಿಂದ ನಗರದ ಅನೇಕ ಕಟ್ಟಡಗಳು ಹಾನಿಗೊಳಗಾದವು ಮತ್ತು ಜನಜೀವನ ಅಸ್ತವ್ಯಸ್ತವಾಯಿತು.  ಬ್ರಿಟಿಷರು ತಮ್ಮ ನೌಕಾಪಡೆಯ ಸಹಾಯದಿಂದ ನಗರವನ್ನು ವಶಪಡಿಸಿಕೊಂಡರು. ಈ ಘಟನೆಯು ಯುದ್ಧದ ಪ್ರಮುಖ ಘಟ್ಟವಾಗಿತ್ತು.

5.3 ಬ್ರಿಟಿಷ್ ಸೇನೆಯ ಈಜಿಪ್ಟ್ ಪ್ರವೇಶ

ಅಲೆಕ್ಸಾಂಡ್ರಿಯಾವನ್ನು ವಶಪಡಿಸಿಕೊಂಡ ನಂತರ ಬ್ರಿಟನ್ ಈಜಿಪ್ಟ್‌ನಲ್ಲಿ ತನ್ನ ಸೈನಿಕ ಕಾರ್ಯಾಚರಣೆಯನ್ನು ವಿಸ್ತರಿಸಿತು. ಬ್ರಿಟಿಷ್ ಸೇನಾಧಿಕಾರಿ ಜನರಲ್ ಗಾರ್ನೆಟ್ ವೋಲ್ಸ್ಲಿ (Sir Garnet Wolseley) ಸೇನೆಯ ನೇತೃತ್ವ ವಹಿಸಿದ್ದನು.  ಬ್ರಿಟಿಷ್ ಸೇನೆಯು ಸುಯೆಜ್ ಕಾಲುವೆಯ ಮಾರ್ಗವನ್ನು ಬಳಸಿಕೊಂಡು ಇಸ್ಮಾಯಿಲಿಯಾ ಪ್ರದೇಶಕ್ಕೆ ಪ್ರವೇಶಿಸಿತು. ಇದರಿಂದ ಕಾಲುವೆಯ ಆಯಕಟ್ಟಿನ ಸ್ಥಳಗಳ ಮೇಲೆ ಬ್ರಿಟಿಷರ ಸೈನಿಕ ನಿಯಂತ್ರಣ ಬಲಗೊಂಡಿತು.

5.4 ಟೆಲ್-ಎಲ್-ಕೆಬೀರ್ ಕದನ (Battle of Tel-el-Kebir)

1882ರ ಸೆಪ್ಟೆಂಬರ್ 13ರಂದು ಬ್ರಿಟಿಷ್ ಸೇನೆ ಮತ್ತು ಅರಾಬಿ ಪಾಷಾ ನೇತೃತ್ವದ ಈಜಿಪ್ಟ್ ಸೇನೆಯ ನಡುವೆ ಟೆಲ್-ಎಲ್-ಕೆಬೀರ್‌ನಲ್ಲಿ ನಿರ್ಣಾಯಕ ಕದನ ನಡೆಯಿತು.  ಬ್ರಿಟಿಷ್ ಜನರಲ್ ವೋಲ್ಸ್ಲಿ ತನ್ನ ಸೇನೆಯನ್ನು ರಾತ್ರಿಯ ವೇಳೆ ಮುನ್ನಡೆಸಿ ಈಜಿಪ್ಟ್ ಸೇನೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದನು. ಬ್ರಿಟಿಷರ ಉತ್ತಮ ಸೈನಿಕ ಸಿದ್ಧತೆ ಮತ್ತು ಶಸ್ತ್ರಾಸ್ತ್ರಗಳ ಬಲದಿಂದ ಈಜಿಪ್ಟ್ ಸೇನೆ ಸೋಲನುಭವಿಸಿತು.

ಈ ಕದನದ ಪ್ರಮುಖ ಪರಿಣಾಮಗಳು:

• ಅರಾಬಿ ಪಾಷಾನ ಸೇನೆ ಸೋಲನುಭವಿಸಿತು.

• ಬ್ರಿಟಿಷ್ ಸೇನೆ ಕೈರೋ ಕಡೆಗೆ ಮುನ್ನಡೆಯಿತು.

•

ಅರಾಬಿ ಪಾಷಾ ಶರಣಾದನು.

• ಈಜಿಪ್ಟ್‌ನ ಆಡಳಿತದ ಮೇಲೆ ಬ್ರಿಟಿಷರ ನೇರ ಪ್ರಭಾವ ಸ್ಥಾಪನೆಯಾಯಿತು.

1882ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷರು ಕೈರೋವನ್ನು ವಶಪಡಿಸಿಕೊಂಡರು. ಅರಾಬಿ ಪಾಷಾನ ಚಳವಳಿ ಸೋಲಿನೊಂದಿಗೆ ಕೊನೆಗೊಂಡಿತು.

6. ಯುದ್ಧದ ಪರಿಣಾಮಗಳು

1882ರ ಆಂಗ್ಲೊ–ಈಜಿಪ್ಟ್ ಯುದ್ಧವು ಈಜಿಪ್ಟ್‌ನ ಇತಿಹಾಸದಲ್ಲಿ ಮಹತ್ವದ ತಿರುವನ್ನು ಉಂಟುಮಾಡಿತು. ಈ ಯುದ್ಧದಲ್ಲಿ ಬ್ರಿಟನ್ ಜಯಗಳಿಸಿದ ಪರಿಣಾಮ ಈಜಿಪ್ಟ್‌ನ ರಾಜಕೀಯ, ಆರ್ಥಿಕ ಮತ್ತು ಸೈನಿಕ ವ್ಯವಸ್ಥೆಗಳ ಮೇಲೆ ಬ್ರಿಟಿಷರ ಪ್ರಭಾವ ಹೆಚ್ಚಾಯಿತು.

6.1 ಈಜಿಪ್ಟ್‌ನಲ್ಲಿ ಬ್ರಿಟಿಷರ ಆಕ್ರಮಣ

1882ರಲ್ಲಿ ಈಜಿಪ್ಟ್ ಬ್ರಿಟಿಷರ ಸೈನಿಕ ಆಕ್ರಮಣಕ್ಕೆ ಒಳಗಾಯಿತು. ಈಜಿಪ್ಟ್ ಅಧಿಕೃತವಾಗಿ ಒಟ್ಟೊಮನ್ ಸಾಮ್ರಾಜ್ಯದ ಅಧೀನದಲ್ಲಿಯೇ ಉಳಿದಿದ್ದರೂ, ವಾಸ್ತವಿಕ ಆಡಳಿತದ ಮೇಲೆ ಬ್ರಿಟನ್ ಹಿಡಿತ ಸ್ಥಾಪಿಸಿತು.  ಬ್ರಿಟಿಷರು ಈಜಿಪ್ಟ್‌ನಿಂದ ಶೀಘ್ರದಲ್ಲಿಯೇ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದರೂ, ಆಕ್ರಮಣವು ದೀರ್ಘಕಾಲ ಮುಂದುವರಿಯಿತು.

6.2 ಅರಾಬಿ ಪಾಷಾನಿಗೆ ಶಿಕ್ಷೆ

ಬ್ರಿಟಿಷರ ವಿರುದ್ಧ ಹೋರಾಡಿದ ಅರಾಬಿ ಪಾಷಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಅವನಿಗೆ ಮರಣದಂಡನೆ ವಿಧಿಸಲಾಯಿತು. ನಂತರ ಅದನ್ನು ಗಡಿಪಾರು ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಅವನನ್ನು ಸಿಲೋನ್ (ಇಂದಿನ ಶ್ರೀಲಂಕಾ)ಗೆ ಗಡಿಪಾರು ಮಾಡಲಾಯಿತು.

6.3 ಬ್ರಿಟಿಷರ ರಾಜಕೀಯ ನಿಯಂತ್ರಣ

ಈಜಿಪ್ಟ್‌ನ ಖೆದೀವ್ ತೌಫಿಕ್ ಪಾಷಾ ನಾಮಮಾತ್ರದ ಆಡಳಿತಗಾರನಾಗಿ ಮುಂದುವರಿದನು. ಆದರೆ ಬ್ರಿಟಿಷ್ ಅಧಿಕಾರಿಗಳ ಸಲಹೆ ಮತ್ತು ನಿರ್ದೇಶನಗಳ ಆಧಾರದ ಮೇಲೆ ಆಡಳಿತ ನಡೆಯತೊಡಗಿತು.  1883ರಿಂದ ಬ್ರಿಟಿಷ್ ಪ್ರತಿನಿಧಿ ಎವೆಲಿನ್ ಬ್ಯಾರಿಂಗ್ (Lord Cromer) ಈಜಿಪ್ಟ್‌ನ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಾವಶಾಲಿಯಾದನು.

6.4 ಆರ್ಥಿಕ ನಿಯಂತ್ರಣ

ಬ್ರಿಟಿಷರು ಈಜಿಪ್ಟ್‌ನ ಹಣಕಾಸು ವ್ಯವಸ್ಥೆ, ತೆರಿಗೆ ಸಂಗ್ರಹಣೆ, ಕೃಷಿ ಮತ್ತು ಸಾರ್ವಜನಿಕ ಆಡಳಿತದ ಮೇಲೆ ಪ್ರಭಾವ ಬೀರಿದರು. ವಿದೇಶಿ ಸಾಲದ ಮರುಪಾವತಿ ಮತ್ತು ಬ್ರಿಟಿಷರ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಯಿತು.

6.5 ಸುಯೆಜ್ ಕಾಲುವೆಯ ಮೇಲಿನ ಪ್ರಭಾವ

ಸುಯೆಜ್ ಕಾಲುವೆಯು ಬ್ರಿಟಿಷರ ಸಾಮ್ರಾಜ್ಯದ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿ ಮುಂದುವರಿಯಿತು. ಭಾರತ ಮತ್ತು ಇತರ ಏಷ್ಯಾದ ವಸಾಹತುಗಳೊಂದಿಗೆ ಸಂಪರ್ಕ ಸಾಧಿಸಲು ಬ್ರಿಟನ್ ಈ ಕಾಲುವೆಯನ್ನು ಬಳಸಿಕೊಂಡಿತು.

6.6 ಈಜಿಪ್ಟ್ ರಾಷ್ಟ್ರೀಯತೆಯ ಬೆಳವಣಿಗೆ

ಅರಾಬಿ ಪಾಷಾನ ಚಳವಳಿ ಸೋತರೂ ಈಜಿಪ್ಟ್‌ನಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಯಲು ಅದು ಪ್ರೇರಣೆ ನೀಡಿತು. ವಿದೇಶಿ ಆಡಳಿತದ ವಿರುದ್ಧ ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತಕ್ಕಾಗಿ ಮುಂದಿನ ದಿನಗಳಲ್ಲಿ ಹಲವು ಚಳವಳಿಗಳು ರೂಪುಗೊಂಡವು.

6.7 ಬ್ರಿಟಿಷರ ರಕ್ಷಣಾತ್ಮಕ ಆಡಳಿತದ ಸ್ಥಾಪನೆ

1882ರಿಂದ ಈಜಿಪ್ಟ್‌ನಲ್ಲಿ ಬ್ರಿಟಿಷರ ವಾಸ್ತವಿಕ ಆಕ್ರಮಣ ಆರಂಭವಾಯಿತು. 1914ರಲ್ಲಿ ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಈಜಿಪ್ಟ್ ಅನ್ನು ಅಧಿಕೃತವಾಗಿ ತನ್ನ ರಕ್ಷಣಾತ್ಮಕ ಆಡಳಿತ ಪ್ರದೇಶ (Protectorate) ಎಂದು ಘೋಷಿಸಿತು. ಹೀಗೆ 1882ರ ಆಕ್ರಮಣವು ನಂತರದ ಬ್ರಿಟಿಷ್ ರಕ್ಷಣಾತ್ಮಕ ಆಡಳಿತಕ್ಕೆ ಅಡಿಪಾಯ ಹಾಕಿತು.

7. ಸುಯೆಜ್ ಕಾಲುವೆ ಮತ್ತು ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿಯ ವಿಶ್ಲೇಷಣೆ

ಸುಯೆಜ್ ಕಾಲುವೆಯ ನಿರ್ಮಾಣವು 19ನೇ ಶತಮಾನದ ಜಾಗತಿಕ ವ್ಯಾಪಾರ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ಉಂಟುಮಾಡಿತು. ಈ ಕಾಲುವೆಯ ನಿರ್ಮಾಣದಿಂದ ಈಜಿಪ್ಟ್‌ಗೆ ಭೌಗೋಳಿಕವಾಗಿ ಮತ್ತು ವಾಣಿಜ್ಯವಾಗಿ ಮಹತ್ವ ದೊರೆತರೂ, ಅದರ ಆರ್ಥಿಕ ದೌರ್ಬಲ್ಯವನ್ನು ಯುರೋಪಿನ ರಾಷ್ಟ್ರಗಳು ತಮ್ಮ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳಿಗೆ ಬಳಸಿಕೊಂಡವು.  ಬ್ರಿಟನ್ ಈಜಿಪ್ಟ್‌ನಲ್ಲಿ ಪ್ರಭಾವ ಸ್ಥಾಪಿಸಲು ಅನುಸರಿಸಿದ ಕ್ರಮಗಳನ್ನು ಕೆಳಗಿನಂತೆ ಗುರುತಿಸಬಹುದು:

1. ಆರ್ಥಿಕ ಹಸ್ತಕ್ಷೇಪ:

 ಈಜಿಪ್ಟ್‌ನ ಸಾಲದ ಸಮಸ್ಯೆಯನ್ನು ಬಳಸಿಕೊಂಡು ಹಣಕಾಸು ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿತು.

2. ಷೇರುಗಳ ಖರೀದಿ:

 1875ರಲ್ಲಿ ಸುಯೆಜ್ ಕಾಲುವೆ ಕಂಪನಿಯ ಶೇ. 44ರಷ್ಟು ಷೇರುಗಳನ್ನು ಖರೀದಿಸಿ ತನ್ನ ಪ್ರಭಾವವನ್ನು ವಿಸ್ತರಿಸಿತು.

3. ರಾಜಕೀಯ ಹಸ್ತಕ್ಷೇಪ:

 ಈಜಿಪ್ಟ್‌ನ ಆಡಳಿತಗಾರರ ಅಧಿಕಾರವನ್ನು ದುರ್ಬಲಗೊಳಿಸಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿತು.

4. ಸೈನಿಕ ಆಕ್ರಮಣ:

 1882ರಲ್ಲಿ ಅರಾಬಿ ಪಾಷಾ ಚಳವಳಿಯನ್ನು ಸೋಲಿಸಿ ಈಜಿಪ್ಟ್‌ನಲ್ಲಿ ಸೇನೆಯನ್ನು ನಿಯೋಜಿಸಿತು.

5. ಸಾಮ್ರಾಜ್ಯಶಾಹಿ ವಿಸ್ತರಣೆ:

 ಈಜಿಪ್ಟ್‌ನ ಭೌಗೋಳಿಕ ಸ್ಥಾನವನ್ನು ಬಳಸಿಕೊಂಡು ಭಾರತ ಮತ್ತು ಏಷ್ಯಾದಲ್ಲಿನ ಬ್ರಿಟಿಷರ ವಸಾಹತುಶಾಹಿ ಹಿತಾಸಕ್ತಿಗಳನ್ನು ಭದ್ರಪಡಿಸಿತು.

ಹೀಗಾಗಿ ಸುಯೆಜ್ ಕಾಲುವೆಯ ಇತಿಹಾಸವು ಕೇವಲ ಒಂದು ತಾಂತ್ರಿಕ ನಿರ್ಮಾಣದ ಇತಿಹಾಸವಲ್ಲ. ಅದು ಆರ್ಥಿಕ ಸಾಲ, ರಾಜಕೀಯ ಹಸ್ತಕ್ಷೇಪ, ವ್ಯಾಪಾರ ಮಾರ್ಗಗಳ ನಿಯಂತ್ರಣ ಮತ್ತು ಸೈನಿಕ ಆಕ್ರಮಣಗಳ ಮೂಲಕ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೇಗೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದವು ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ.

8. ಕಾಲಾನುಕ್ರಮಣಿಕೆ

ವರ್ಷ / ದಿನಾಂಕ - ಪ್ರಮುಖ ಘಟನೆ

1854 - ಸಯೀದ್ ಪಾಷಾ ಫರ್ಡಿನಾಂಡ್ ಡಿ ಲೆಸೆಪ್ಸ್‌ಗೆ ಕಾಲುವೆ ನಿರ್ಮಾಣದ ಅನುಮತಿ ನೀಡಿದನು.

1858 - ಸುಯೆಜ್ ಕಾಲುವೆ ಕಂಪನಿ ಸ್ಥಾಪನೆ

25 ಏಪ್ರಿಲ್ 1859 - ಕಾಲುವೆ ನಿರ್ಮಾಣ ಕಾರ್ಯ ಆರಂಭ

1863 - ಇಸ್ಮಾಯಿಲ್ ಪಾಷಾ ಈಜಿಪ್ಟ್‌ನ ಆಡಳಿತಗಾರನಾದನು.

17 ನವೆಂಬರ್ 1869 - ಸುಯೆಜ್ ಕಾಲುವೆ ಉದ್ಘಾಟನೆ

1875 - ಬ್ರಿಟನ್ ಕಾಲುವೆ ಕಂಪನಿಯ ಶೇ. 44ರಷ್ಟು ಷೇರುಗಳನ್ನು ಖರೀದಿಸಿತು.

1876 - ಈಜಿಪ್ಟ್‌ನಲ್ಲಿ ಆಂಗ್ಲೋ–ಫ್ರೆಂಚ್ ದ್ವಂದ್ವ ಆರ್ಥಿಕ ನಿಯಂತ್ರಣ ಆರಂಭ

1879 - ಇಸ್ಮಾಯಿಲ್ ಪಾಷಾ ಅಧಿಕಾರದಿಂದ ಕೆಳಗಿಳಿದನು.

1881 - ಅರಾಬಿ ಪಾಷಾ ಚಳವಳಿ ತೀವ್ರಗೊಂಡಿತು.

1882 ಜುಲೈ 11 - ಬ್ರಿಟಿಷರು ಅಲೆಕ್ಸಾಂಡ್ರಿಯಾ ಮೇಲೆ ನೌಕಾಪಡೆಯ ದಾಳಿ ನಡೆಸಿದರು.

1882 ಸೆಪ್ಟೆಂಬರ್ 13 - ಟೆಲ್-ಎಲ್-ಕೆಬೀರ್ ಕದನದಲ್ಲಿ ಅರಾಬಿ ಪಾಷಾ ಸೋಲು

1882 - ಬ್ರಿಟಿಷರು ಈಜಿಪ್ಟ್ ಅನ್ನು ಆಕ್ರಮಿಸಿಕೊಂಡರು.

1883 - ಲಾರ್ಡ್ ಕ್ರೋಮರ್ ಈಜಿಪ್ಟ್‌ನಲ್ಲಿ ಬ್ರಿಟಿಷ್ ಆಡಳಿತದ ಪ್ರಮುಖ ಪ್ರತಿನಿಧಿಯಾದನು.

1914 - ಬ್ರಿಟನ್ ಈಜಿಪ್ಟ್ ಅನ್ನು ತನ್ನ ರಕ್ಷಣಾತ್ಮಕ ಆಡಳಿತ ಪ್ರದೇಶವೆಂದು ಘೋಷಿಸಿತು.

9. ಉಪಸಂಹಾರ

ಸುಯೆಜ್ ಕಾಲುವೆಯ ನಿರ್ಮಾಣವು ಆಧುನಿಕ ಜಗತ್ತಿನ ವ್ಯಾಪಾರ ಮತ್ತು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಯಿತು. ಯುರೋಪ್ ಮತ್ತು ಏಷ್ಯಾ ನಡುವಿನ ಸಮುದ್ರಯಾನದ ದೂರವನ್ನು ಕಡಿಮೆ ಮಾಡುವ ಮೂಲಕ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಿತು. ಆದರೆ ಇದೇ ಕಾಲುವೆಯು ಈಜಿಪ್ಟ್‌ನಲ್ಲಿ ಯುರೋಪಿನ ಸಾಮ್ರಾಜ್ಯಶಾಹಿ ಹಸ್ತಕ್ಷೇಪಕ್ಕೂ ಕಾರಣವಾಯಿತು.  ಈಜಿಪ್ಟ್‌ನ ಆರ್ಥಿಕ ಸಂಕಷ್ಟವನ್ನು ಬಳಸಿಕೊಂಡು ಬ್ರಿಟನ್ 1875ರಲ್ಲಿ ಕಾಲುವೆಯ ಪ್ರಮುಖ ಷೇರುಗಳನ್ನು ಖರೀದಿಸಿತು. ನಂತರ ಅಲ್ಲಿನ ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿತು. ಅರಾಬಿ ಪಾಷಾ ನೇತೃತ್ವದ ರಾಷ್ಟ್ರೀಯ ಚಳವಳಿಯನ್ನು 1882ರಲ್ಲಿ ಸೋಲಿಸಿ ಈಜಿಪ್ಟ್‌ನಲ್ಲಿ ತನ್ನ ಸೈನಿಕ ಆಕ್ರಮಣವನ್ನು ಸ್ಥಾಪಿಸಿತು.  ಆದ್ದರಿಂದ ಸುಯೆಜ್ ಕಾಲುವೆಯ ನಿರ್ಮಾಣದಿಂದ ಆರಂಭವಾದ ಘಟನೆಗಳು 1882ರ ಆಂಗ್ಲೊ–ಈಜಿಪ್ಟ್ ಯುದ್ಧದ ಮೂಲಕ ಬ್ರಿಟಿಷರ ಸಾಮ್ರಾಜ್ಯಶಾಹಿ ಪ್ರಾಬಲ್ಯಕ್ಕೆ ದಾರಿ ಮಾಡಿಕೊಟ್ಟವು. ಈ ಘಟನೆಯು 19ನೇ ಶತಮಾನದ ಯುರೋಪಿನ ಸಾಮ್ರಾಜ್ಯಶಾಹಿ ವಿಸ್ತರಣೆಯನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಐತಿಹಾಸಿಕ ಉದಾಹರಣೆಯಾಗಿದೆ.

******************************

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಭಾರತದ ಭೌಗೋಳಿಕ ಲಕ್ಷಣಗಳು.

ಸಾಹಿತ್ಯಾಧಾರಗಳು - Literary Sources