ಏಕರೂಪ ನಾಗರೀಕ ಸಂಹಿತೆಯ ಮೇಲೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯ ವಿವರಗಳು
ಏಕರೂಪ ನಾಗರಿಕ ಸಂಹಿತೆಯ ಚರ್ಚೆಯು ಸಂವಿಧಾನ ರಚನಾ ಪ್ರಕ್ರಿಯೆಯ ಸಮೀತಿಗಳ ಹಂತದಲ್ಲಿಯೇ ಕಾಣಿಸಿಕೊಂಡಿತ್ತು. ಭಾರತ ಸಂವಿಧಾನದಲ್ಲಿ ಅಳವಡಿಸಲಾಗುವ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಅಂತಿಮಗೊಳಿಸುವ ಜವಾಬ್ದಾರಿ ಹೊತ್ತಿದ್ದ ಮೂಲಭೂತ ಹಕ್ಕುಗಳ ಉಪ ಸಮೀತಿಯಲ್ಲಿ ಇದನ್ನು ಕುರಿತಂತೆ ಮೊದಲು ಪ್ರಸ್ತಾಪಿಸಲಾಗಿತ್ತು. ಏಕರೂಪ ನಾಗರಿಕ ಸಂಹಿತೆಯನ್ನು ಕೆ. ಎಂ. ಮುನ್ಶಿ ಮತ್ತು ಮಿನೂ ಮಸಾನಿ ಪ್ರತಿಪಾದಿಸಿದಾಗ ಸಮೀತಿಯ ಸದಸ್ಯರು ಸಮ್ಮತಿಸದೇ ನ್ಯಾಯಾಂಗ ರಕ್ಷಣೆಯುಳ್ಳ ಮತ್ತು ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕುಗಳೆಂದು ಮೂಲಭೂತ ಹಕ್ಕುಗಳನ್ನು ವಿಂಗಡಿಸಲು ಮುಂದಾದರು. ಒಂದೆರಡು ಸಭೆಗಳಲ್ಲಿ ಚರ್ಚಿಸಿದ ಬಳಿಕ ಉಪ ಸಮೀತಿಯು ಸರ್ದಾರ್ ಪಟೇಲ್ ನೇತೃತ್ವದ ಮೂಲಭೂತ ಹಕ್ಕುಗಳ ಸಮೀತಿಗೆ ತನ್ನ ವರದಿಯನ್ನು ನೀಡಿತು. ಆ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕುಗಳ ಗುಂಪಿಗೆ ಸೇರಿಸಿತ್ತು. ಈ ನಿರ್ಧಾರವನ್ನು ಉಪ ಸಮೀತಿಯ ಸರ್ವ ಸದಸ್ಯರೂ ಒಪ್ಪಿರಲಿಲ್ಲ. ಎಂ. ಆರ್. ಮಸಾನಿ, ಹಂಸಾ ಮೆಹತಾ ಮತ್ತು ಅಮೃತ್ ಕೌರ್ ಎಂಬ ಮೂವರು ಸದಸ್ಯರು ಧಾರ್ಮಿಕ ತಳಹದಿಯ ವೈಯಕ್ತಿಕ ಕಾನೂನುಗಳು ದೇಶದ ರಾಷ್ಟ್ರೀಯತೆಯ ಭಾವನೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಅಧಿಕವಾಗಿರುವುದರಿಂದ ಐದು ಅಥವಾ ಹತ್ತು ವರ್ಷಗಳ ನಂತರವಾದರೂ ಏಕರೂಪ ನಾಗರಿಕ ಸಂಹಿತೆ ಭಾರತಕ್ಕೆ ಅತ್ಯಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕ್ರಮೇಣ ಏಕರೂಪ ನಾಗ...